ಗುರುವಾರ , ಸೆಪ್ಟೆಂಬರ್ 23, 2021
27 °C

ಚಿತ್ರಕಲೆ: ರೇಖಾಲಾವಣ್ಯದ ಗಣಪ

ಕಾವೆಂಶ್ರೀ Updated:

ಅಕ್ಷರ ಗಾತ್ರ : | |

ಪ್ರತಿಯೊಬ್ಬ ಕಲಾವಿದನಿಗೂ ಗಣಪ ಆರಾಧ್ಯ ದೈವ, ಆತ ಎಲ್ಲರಿಗೂ ಪ್ರಿಯಕರ. ಕಲೆಯು ಆರಂಭಗೊಳ್ಳುವುದೇ ಆತನ ಸ್ತುತಿಯಿಂದ, ಚಿತ್ರರಚನೆಯಿಂದ. ರೇಖಾ ಲಾಲಿತ್ಯಕ್ಕೆ ಮೂಲ ಕಥಾವಸ್ತುವನ್ನಾಗಿ ಗಣಪನನ್ನು ಆಯ್ಕೆ ಮಾಡಿಕೊಂಡು ಕಲ್ಪನೆಯ ಕಥಾಹಂದರಕ್ಕೆ ರೇಖೆಯ ಮೂಲಕ ಜೀವಂತಿಕೆಯನ್ನು ತುಂಬಿದ ಕಲಾವಿದ ಬಾಗಲಕೋಟೆಯ ಸತೀಶ್ ಬಿ. ಹಿರೇಮಠ.

ದಶಕಗಳ ಹಿಂದೆಯೇ ರೇಖೆಯಲ್ಲಿ ಚಿತ್ರಿಸಲು ಮನಸ್ಸು ಮಾಡಿದ ಅವರು ರೇಖಾವಿನ್ಯಾಸದಲ್ಲಿ ಪ್ರಬುದ್ಧತೆ ಪಡೆದುಕೊಂಡರು. ಅವರ ಕೈಚಳಕದ ಮೂಲಕ ರೇಖೆಗಳಿಂದ ಅರಳುವ ಸಾಂಪ್ರದಾಯಿಕ ಶೈಲಿಯಲ್ಲಿ ಕಲಾಕೃತಿಗಳು ಬೆರಗು ಮೂಡಿಸುತ್ತವೆ. ಗದುಗಿನ ವಿಜಯ ಕಲಾ ಮಂದಿರದಲ್ಲಿ ಬಿ.ಎಫ್.ಎ ಚಿತ್ರಕಲೆ ಪದವಿ ಪಡೆದು, ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಚಿತ್ರಕಲೆಯಲ್ಲಿ ಪ್ರಥಮ ಶ್ರೇಣಿಯೊಂದಿಗೆ ಸ್ನಾತಕೋತ್ತರ ಪದವಿ ಗಳಿಸಿದ ಹಿರೇಮಠರು ವಿಶಿಷ್ಟ ಸೊಗಡಿನ ಕಲಾವಿದ.

ಪೌರಾಣಿಕ ಕಥಾವಸ್ತುವಿದ್ದರೆ ಪ್ರತಿಯೊಂದು ರೇಖಾಚಿತ್ರಕ್ಕೂ ಹೂ, ಗಿಡ, ಬಳ್ಳಿ, ಪಕ್ಷಿ, ಪ್ರಾಣಿಗಳನ್ನು ಸಂಯೋಜಿಸಿ ಚಿತ್ರ ಸೃಷ್ಟಿಸುವ ಕ್ರಮವೊಂದಿದೆ. ಇಂತಹ ಶೈಲಿಯನ್ನು ಬಂಗಾಳ ಕಲಾವಿದರಾದ ಜಾಮಿನಿರಾಯ್, ನಂದಲಾಲ್ ಬೋಸ್, ಮಂಜಿತ್‍ಬಾಬಾರಂತಹ ಕಲಾವಿದರ ಚಿತ್ರಗಳನ್ನು ನೋಡುತ್ತಾ ತಮ್ಮದೇ ಆದ ಶೈಲಿಯನ್ನು ಹಿರೇಮಠ ರೂಢಿಸಿಕೊಂಡರು.

ಒಂದು ಬಿಂದುವಿನಿಂದ ಆರಂಭಗೊಂಡ ಚಲನೆಯ ರೇಖೆ, ಅಂತಿಮ ಬಿಂದುವನ್ನು ತಲುಪುವ ವೇಳೆಗೆ ಸೃಷ್ಟಿಸುವ ಕಲಾಕೃತಿ ಅನನ್ಯ. ರೇಖೆಗಳಲ್ಲಿ ರೂಪ-ಭಾವಗಳು ಅರ್ಥಪೂರ್ಣವಾಗಿ ಸಂಯೋಜನೆಗೊಳ್ಳುವ ಬಗೆಯಂತೂ ಅದ್ಭುತ. ಚಿತ್ರರಚನೆಯಲ್ಲಿ ತನ್ನದೇ ಆದ ಹಿಡಿತವನ್ನು ಸಾಧಿಸಿದರೆ ರೇಖೆಗಳು ವೇಗ ಗತಿಯನ್ನು ಪಡೆದು ಗಾಢ ಪರಿಣಾಮವನ್ನು ಬೀರುತ್ತವೆ. ಪ್ರತಿಯೊಂದು ಚಿತ್ರವೂ ನೈಜತೆಯಲ್ಲಿಯೇ ಅನಾವರಣಗೊಂಡಿದೆ. ಹಾಗಾಗಿಯೇ ಪ್ರತಿಯೊಂದು ರೇಖೆ ಮಹತ್ವಪೂರ್ಣ ಎನಿಸಿದೆ.

ರೇಖೆಗಳಲ್ಲರಳಿದ ನಾಟ್ಯ ಗಣಪ, ವಾದ್ಯಗಣಪ, ನಾದ ಗಣಪ, ಮೂಷಕವಾಹನ ಗಣಪ, ಗೋಕುಲ ಗಣಪ, ಶೇಷಶಯನ ಗಣಪ ಮುಂತಾದ ಚಿತ್ರಗಳೆಲ್ಲಾ ಮೂರು ಬಾರಿ ಮುಂಬೈನ ನೆಹರೂ ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶನ ಮತ್ತು ರಾಷ್ಟ್ರೀಯ-ಅಂತರರಾಷ್ಟ್ರೀಯ ಕಲಾ ಪ್ರದರ್ಶನಗಳಲ್ಲಿ ಪ್ರದರ್ಶನಗೊಂಡಿವೆ. ನವದೆಹಲಿ, ಚಂಡೀಗಡ, ಮುಂಬೈ, ಬೆಂಗಳೂರು ನಗರಗಳಲ್ಲಿ ಇವರ ರೇಖಾಚಿತ್ರ ಕಲಾಕೃತಿಗಳು ರಾರಾಜಿಸುತ್ತಿವೆ. ದೆಹಲಿ ಕಲಾ ಅಕಾಡೆಮಿ, ಲಲಿತ ಕಲಾ ಅಕಾಡೆಮಿ ಪ್ರಶಸ್ತಿಗೆ ಅವರು ಭಾಜನರಾಗಿದ್ದಾರೆ.


ಸತೀಶ್ ಬಿ. ಹಿರೇಮಠ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು