ಭಾನುವಾರ, ಜನವರಿ 19, 2020
27 °C

ಮುಗ್ಧರ ದಿನದ ಈ ‘ಯುದ್ಧ’ಕ್ಕೆ ಹಿಟ್ಟು–ಮೊಟ್ಟೆಗಳೇ ಆಯುಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯುರೋಪಿನ ಸ್ಪೇನ್‌ನಲ್ಲಿ ‘ಐಬಿ’ ಎಂಬ ಪುಟ್ಟ ಪಟ್ಟಣವಿದೆ. ‘ಏನಪ್ಪ ಈ ಊರಿನ ವಿಶೇಷ’ ಅಂತೀರಾ? ಸ್ವಲ್ಪ ತಾಳಿ ಸ್ವಾಮಿ, ಈ ಪಟ್ಟಣದಲ್ಲಿ ಪ್ರತಿವರ್ಷ ಡಿಸೆಂಬರ್‌ 28ರಂದು (ಮುಗ್ಧರ ದಿನ) ಒಂದು ‘ಯುದ್ಧ’ ನಡೆಯುತ್ತದೆ. ಈ ಯುದ್ಧದಲ್ಲಿ ಪಾಲ್ಗೊಳ್ಳುವವರನ್ನು ‘ಎಲ್ಸ್‌ ಎನ್‌ಫೆರಿನೇಟ್ಸ್‌’ (ಹಿಟ್ಟಿನಲ್ಲಿ ಮುಳುಗಿದವರು) ಎಂದು ಕರೆಯಲಾಗುತ್ತದೆ. ಏಕೆಂದರೆ, ಹಿಟ್ಟು, ಮೊಟ್ಟೆಗಳೇ ಈ ಯುದ್ಧದಲ್ಲಿ ಬಳಕೆಯಾಗುವ ಆಯುಧಗಳು!

ನಮ್ಮ ಚಾಮರಾಜನಗರ ಜಿಲ್ಲೆಗೆ ಅಂಟಿಕೊಂಡಿರುವ ತಮಿಳುನಾಡಿಗೆ ಸೇರಿದ ತಾಳವಾಡಿಯಲ್ಲಿ ಸೆಗಣಿ ಎರಚುವ ಆಟ ಆಡುತ್ತಾರಲ್ಲ; ಹಾಗೆ, ಈ ಊರಿನಲ್ಲಿ ಹಿಟ್ಟು ಮತ್ತು ಮೊಟ್ಟೆ ಎರಚುವ ಆಟ ನಡೆಯುತ್ತದೆ. ಈ ಎರಚಾಟದಲ್ಲಿ ಪಟ್ಟಣದ ಮುಖ್ಯಬೀದಿಯ ತುಂಬಾ ಹಿಟ್ಟಿನ ಮೋಡ ನಿರ್ಮಾಣವಾಗಿರುತ್ತದೆ. ರಸ್ತೆಗಳೆಲ್ಲ ಬಿಳಿಯ ದಿರಿಸು ತೊಟ್ಟಿರುತ್ತದೆ.

ಅದೊಂದು ಅಣಕು ಸಮರ. ಸರ್ಕಾರದ ವಿರುದ್ಧ ದಂಗೆ ಎದ್ದವರು ಮತ್ತು ಮಿಲಿಟರಿ ಪಡೆ ನಡುವಿನ ಈ ಯುದ್ಧ ಶುರುವಾಗುವುದು ಹೀಗೆ. ಬೆಳ್ಳಂಬೆಳಿಗ್ಗೆ ವಾದ್ಯಮೇಳದೊಂದಿಗೆ ‘ಎಲ್ಸ್‌ ಎನ್‌ಫೆರಿನೇಟ್ಸ್‌’ ತಂಡ ಮುಖ್ಯಬೀದಿಗೆ ಬರುತ್ತದೆ. ಮಿಲಿಟರಿ ಉಡುಪು ಧರಿಸಿದವರ ದೊಡ್ಡ ಪಡೆಯೇ ಅಲ್ಲಿ ನೆರೆದಿರುತ್ತದೆ. ನೆರೆದವರಲ್ಲಿ ಒಬ್ಬರನ್ನು ಮೇಯರ್‌ ಎಂದು ಆಯ್ಕೆ ಮಾಡಲಾಗುತ್ತದೆ. ಆತ ನಗರವಾಸಿಗಳು ನೀಡಬೇಕಾದ ತೆರಿಗೆ ಬಗೆಗೆ ತೀರ್ಮಾನ ಪ್ರಕಟಿಸುತ್ತಾನೆ. ಅಣಕು ಮಿಲಿಟರಿ ಪಡೆ ತೆರಿಗೆ ಆಕರಣೆಗೆ ಹೊರಡುತ್ತದೆ. ದಾರಿಯಲ್ಲಿ ಸಿಗುವ ಹುಸಿ ದಂಗೆಕೋರರು ಮತ್ತು ಈ ಅಣಕು ಸೈನ್ಯದ ಮಧ್ಯೆ ಯುದ್ಧ ನಡೆಯುತ್ತದೆ. ಈ ಯುದ್ಧಕ್ಕೆ ಮೂಟೆಗಟ್ಟಲೆ ಹಿಟ್ಟು ಮತ್ತು ಮೊಟ್ಟೆಗಳ ನೂರಾರು ಟ್ರೇಗಳು ಪೂರೈಕೆ ಆಗುತ್ತವೆ. ಹಿಟ್ಟಿನ ಬಾಂಬುಗಳು ಎಗ್ಗಿಲ್ಲದೆ ಸಿಡಿಯುತ್ತವೆ. ಎದುರಿನ ಪಾಳಯದಲ್ಲಿ ಸಿಟ್ಟಿನ ಬದಲು ಸಂಭ್ರಮ ಮನೆ ಮಾಡಿರುತ್ತದೆ. ನೋಡ ನೋಡುತ್ತಿದ್ದಂತೆಯೇ ಬೀದಿಯಲ್ಲ ಹಿಟ್ಟಿನ ಮಯವಾಗುತ್ತದೆ.

ಕೊನೆಗೆ ಪಟಾಕಿ ಸಿಡಿಸಿ ಸಂಭ್ರಮಿಸುವ ಮೂಲಕ ಆಚರಣೆಗೆ ತೆರೆ ಬೀಳುತ್ತದೆ. 200 ವರ್ಷಗಳಿಂದಲೂ ಈ ಹಬ್ಬ ನಡೆಯುತ್ತಿರುವುದು ವಿಶೇಷ. ಕಳೆದ ವಾರ ನಡೆದ ಈ ಹಿಟ್ಟಿನ ಯುದ್ಧದ ಕೆಲವು ಚಿತ್ರಗಳು ಇಲ್ಲಿವೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು