ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುವಾದದ ಸಂಕಷ್ಟ | ಕಷ್ಟಕ್ಕ ಕರಿಬ್ಯಾಡ್ರಿ; ಊಟಕ್ಕ ಮರಿಬ್ಯಾಡ್ರಿ!

Last Updated 21 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

‘ಕವಿಯ ಕಮಲ ಕೃತಿಯಲ್ಲಿ ಉಂಡೆ ನಾನೊಬ್ಬ ಭಾವಭೃಂಗ, ಪಕಳೆಮಾತು ಉದಿರಾಡಬಹುದು, ತುಂಬೀತು ಸ್ವಾಂತರಂಗ’ ಎಂದೆನ್ನುವ ಬೇಂದ್ರೆ ‘ಅನುವಾದದ ಪ್ರಕ್ರಿಯೆಯು ಭಾಷಾಂತರವಲ್ಲ;ಭಾವಗ್ರಹಣ’ ಎನ್ನುತ್ತಾರೆ. ಅಂತಹ ಅನುವಾದದ ಹಾಗೂ ಅನುವಾದಕರ ಸಂಕಷ್ಟದ ಮೇಲೆ ಬೆಳಕು ಚೆಲ್ಲುವ ಲೇಖನ ಇಲ್ಲಿದೆ. ಅಂದಹಾಗೆ, ಸೆಪ್ಟೆಂಬರ್‌ 29ರಂದು ವಿಶ್ವ ಅನುವಾದದ ದಿನ.

**

ಮಲಯಾಳಮ್ಮಿನಿಂದ ಕನ್ನಡಕ್ಕೆ ಸಾಕಷ್ಟು ಅನುವಾದಿಸಿದ ಕೆ.ಕೆ.ಗಂಗಾಧರನ್ `ಇನ್ನು ಅನುವಾದದ ಸಹವಾಸ ಸಾಕು’ ಎಂದು ನೊಂದು ನುಡಿದರು. ಆ ನೋವಿನ ತೀವ್ರತೆ ನಮಗ್ಯಾರಿಗೂ ತಾಕದೆ, ಆ ಮಾತು ಹಾಗೇ ಸದ್ದಿರದೆ ಮರೆಗೆ ಸರಿದುಹೋಯಿತು. ಪೆರುಮಾಳ್ ಮುರುಗನ್ ತಾವಿನ್ನು ಬರೆಯುವುದಿಲ್ಲ ಎಂದಾಗ ದೊರೆತ ಸ್ಪಂದನೆಗೆ ಈ ಸಂದರ್ಭವನ್ನು ಹೋಲಿಸಿ ನೋಡಿದರೆ ನಮಗೆ ಭಾರತೀಯ ಮನಸ್ಥಿತಿಯಲ್ಲಿ ಸೃಜನಶೀಲತೆ ಮತ್ತು ಅನುವಾದಗಳ ಕುರಿತಂತೆ ಇರುವ ತರತಮ ಭಾವವು ಹೆಚ್ಚು ಸ್ಪಷ್ಟವಾಗುವುದು.

ಅನುವಾದವೆಂದರೆ ಸ್ಥೂಲವಾಗಿ ಒಂದು ಭಾಷೆಯಲ್ಲಿನ ಭಾವವನ್ನು ಮತ್ತೊಂದು ಭಾಷೆಗೆ ತರುವುದು ಎಂದರ್ಥ. ತೆಲುಗಿನಿಂದ ಕನ್ನಡಕ್ಕೆ ಅನುವಾದ ಮಾಡಬೇಕಾದಾಗ ತೆಲುಗನ್ನು ಮೂಲ ಭಾಷೆಯೆಂದೂ, ಕನ್ನಡವನ್ನು ಉದ್ದೇಶಿತ ಭಾಷೆಯೆಂದೂ ಕರೆಯಲಾಗುತ್ತದೆ. ಕೆಲವೊಮ್ಮೆ ಬೆಂಗಾಲಿಯಿಂದ ಈಗಾಗಲೇ ತೆಲುಗಿಗೆ ಅನುವಾದವಾಗಿರುವ ಪಠ್ಯವೊಂದನ್ನು, ಮೂಲ ಭಾಷೆಯಾದ ಬೆಂಗಾಲಿ ತಿಳಿದಿಲ್ಲದಿದ್ದರೂ, ತೆಲುಗಿನ ಮೂಲಕ ಅದನ್ನು ಒಬ್ಬ ಅನುವಾದಕನು ಕನ್ನಡಕ್ಕೆ ತರುತ್ತಾನೆ. ಇಂಥ ಸಂದರ್ಭಗಳಲ್ಲಿ ನಡುವೆ ಸೇತುವೆಯಾಗಿ ಬಳಕೆಯಾಗಿರುವ ತೆಲುಗನ್ನು ವಯಾ ಭಾಷೆ ಅಥವಾ ಮಧ್ಯಮ ಭಾಷೆ ಎಂದು ಕರೆಯಲಾಗುತ್ತದೆ. ಜಪಾನಿ, ಸ್ಪ್ಯಾನಿಷ್, ರಷ್ಯನ್ ಮುಂತಾದ ಭಾಷೆಗಳಿಂದ ಕನ್ನಡಕ್ಕೆ ಬಂದಿರುವ ಬಹುಪಾಲು ಪಠ್ಯವು ಹೀಗೆ ಆ ಭಾಷೆಗಳಿಂದ ಕನ್ನಡಕ್ಕೆ ನೇರವಾಗಿ ಅನುವಾದಗೊಂಡಿರದೆ, ಇಂಗ್ಲಿಷೆಂಬ ವಯಾ ಭಾಷೆ ಅಥವಾ ಮಧ್ಯಮ ಭಾಷೆಯ ಮೂಲಕ ಉದ್ದೇಶಿತ ಭಾಷೆಗೆ ತಲುಪಿದೆ.

ಅನುವಾದ ಪ್ರಕ್ರಿಯೆಯನ್ನು `ಒಂದು ಬಾಟಲಿಯಿಂದ ಮತ್ತೊಂದು ಬಾಟಲಿಗೆ ಸುಗಂಧ ದ್ರವ್ಯವೊಂದನ್ನು ವರ್ಗಾಯಿಸುವ ಕೆಲಸ’ಕ್ಕೆ ಹೋಲಿಸಬಹುದೆನಿಸುತ್ತದೆ. ಏಕೆಂದರೆ ಎಷ್ಟೇ ಮುತುವರ್ಜಿ ವಹಿಸಿದರೂ, `ಒಂದಷ್ಟು’ ಪರಿಮಳದ ಸೋರಿಕೆಯಂತೂ ಆಗಿಯೇ ತೀರುತ್ತದೆ. ಮಧ್ಯಮ ಭಾಷೆಯ ಮೂಲಕ ಅನುವಾದವಾದಾಗ ಈ ಸೋರಿಕೆಯ ಪ್ರಮಾಣವು ಹೆಚ್ಚೇ ಆಗಿರುತ್ತದೆ. ಹಾಗಾಗಿ ಓದುಗರೊಬ್ಬರು ಮೂಲ ಕೃತಿಯನ್ನು ಮೂಲ ಭಾಷೆಯಲ್ಲೇ ಓದಿ ಪಡೆಯುವ ರಸಾನುಭೂತಿಗೂ, ನೇರ ಅನುವಾದದ ಪಠ್ಯದಿಂದ ಪಡೆಯುವ ರಸಾನುಭೂತಿಗೂ ಮತ್ತು ಮಧ್ಯಮ ಭಾಷೆಯ ನೆರವಿನಿಂದಾದ ಅನುವಾದದ ಪಠ್ಯದಿಂದ ಹೊಂದುವ ರಸಾನುಭೂತಿಗೂ ವ್ಯತ್ಯಾಸವು ಇದ್ದೇ ಇರುತ್ತದೆ.

ಅನುವಾದವನ್ನು ಸಾಹಿತ್ಯಿಕ, ಮಾನವಿಕ, ವೈಜ್ಞಾನಿಕ ಮತ್ತು ವಾಣಿಜ್ಯಿಕ ಎಂದು ಸ್ಥೂಲವಾಗಿ ವರ್ಗೀಕರಿಸಬಹುದಾಗಿದೆ. ಮತ್ತೊಂದು ವಿಧದಲ್ಲಿ ಈ ನಾಲ್ಕೂ ವರ್ಗಗಳ ಅನುವಾದಗಳನ್ನು ಒಳಗೊಳ್ಳುವಂತೆ, ಒಳಬರುವ ಮತ್ತು ಹೊರಹೋಗುವ ಅನುವಾದಗಳೆಂದು ಎರಡೇ ಭಾಗಗಳಲ್ಲಿಯೂ ವರ್ಗೀಕರಿಸಬಹುದು. ಕನ್ನಡದಲ್ಲಿ ಒಳಬರುವ ಅನುವಾದದ ಸುರಿವಿನ ಪ್ರಮಾಣ ಮತ್ತು ಹೊರಹೋಗುವ ಅನುವಾದದ ಹರಿವಿನ ಪ್ರಮಾಣದ ಅನುಪಾತದಲ್ಲಿ ವ್ಯತ್ಯಾಸವಿದ್ದು ಒಳಬರುವ ಅನುವಾದದ ಪ್ರಮಾಣವೇ ಹೆಚ್ಚಾಗಿದೆ.

ಒಂದು ಕೃತಿಯು ಅನುವಾದವಾಗುವಾಗ ಅದರ ಭಾಷೆ, ಭಾವ, ಬೆಡಗು ಮತ್ತು ಜಾಯಮಾನಗಳು ಅನುವಾದವಾಗುತ್ತಿರುತ್ತವೆ. ಆದರೆ, ಭಾಷೆ ಬದಲಾಗುತ್ತಿರುವುದು ಮಾತ್ರ ತಕ್ಷಣಕ್ಕೆ ಮೇಲ್ನೋಟಕ್ಕೆ ಎದ್ದು ಕಾಣಿಸುತ್ತಿರುತ್ತದೆ. ಪ್ರಜ್ಞಾಪೂರ್ವಕವಾಗಿಯೋ ಅಪ್ರಜ್ಞಾಪೂರ್ವಕವಾಗಿಯೋ ಒಂದು ಉತ್ತಮ ಅನುವಾದ ಕೃತಿಯು ಈ ಅಷ್ಟೂ ಅಂಶಗಳನ್ನು ಒಳಗೊಂಡಿರುತ್ತದೆ. ಇವುಗಳ ತಿಳಿವಳಿಕೆಯಿಲ್ಲದೆಯೂ ಒಂದು ಕೃತಿಯ ಅನುವಾದವು ಸಫಲವಾಗಿರಬಹುದಾದರೂ ಅಂಥ ಉದಾಹರಣೆಗಳು ಅಪರೂಪದಲ್ಲಿ ಅಪರೂಪ. ಈ ಅರಿವಿನಿಂದ ಅನುವಾದದ ಸೂಕ್ಷ್ಮತೆ ಮತ್ತಷ್ಟು ಹೆಚ್ಚುತ್ತದೆ. ಏಕೆಂದರೆ ಅನುವಾದದ ಸಾಫಲ್ಯತೆಯು ಮೂಲದ ಭಾಷೆ ಮತ್ತು ಭಾವಗಳನ್ನು ಮತ್ತೊಂದು ಭಾಷೆಗೆ ತರುವುದಕ್ಕಿಂತ ಮುಖ್ಯವಾಗಿ ಅದರ `ಬೆಡಗ’ನ್ನೂ ಯಥಾವತ್ತಾಗಿ ತರುವ ಅನುವಾದಕನ ಪ್ರತಿಭಾಶಕ್ತಿಯನ್ನು ಹೆಚ್ಚು ಅವಲಂಬಿಸಿರುತ್ತದೆ. ಇದಕ್ಕಾಗಿ ಅನುವಾದಕನಿಗೆ ಮೂಲ ಮತ್ತು ಉದ್ದೇಶಿತ ಭಾಷೆಗಳೆರಡರ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಪರಂಪರೆಗಳ ನಡುವಿನ ಸಾಮ್ಯತೆ ಮತ್ತು ಭಿನ್ನತೆಗಳ ಅರಿವಿದ್ದಷ್ಟೂ ಒಳ್ಳೆಯದು. ಸಾಹಿತ್ಯಿಕ ಅನುವಾದಕ್ಕೆ ಈ ಮಾತು ಹೆಚ್ಚು ಅನ್ವಯವಾಗುತ್ತದೆ.

ಸಾಹಿತ್ಯಿಕ ಅನುವಾದದ ವಿಷಯಕ್ಕೆ ಬಂದಾಗ ಅನುವಾದಕನಿಗೆ ಎರಡು ಭಾಷೆಗಳ ಜಾಯಮಾನ, ವೈಯಾಕರಣಿಕ ವ್ಯತ್ಯಾಸ ಮತ್ತು ಸಮಾನ ಪದಸಂಪತ್ತುಗಳ ಜ್ಞಾನ ಇರಬೇಕಾಗುತ್ತದೆ. ಎಷ್ಟೋ ಸಲ ನಿಘಂಟುವಿನ ಸಹಾಯ ಪಡೆಯುವುದನ್ನು ಕೆಲವರು ವಿರೋಧಿಸುವುದುಂಟು. ಆದರೆ ಎಷ್ಟೋ ಸಲ ಕನ್ನಡದ ಪಠ್ಯವೊಂದನ್ನು ಓದುವಾಗಲೇ ನಮಗೆ ತಿಳಿಯದ ಎಷ್ಟೋ ಪದಗಳು ಎದುರಾಗಿ, ಅದರ ಸರಿಯಾದ ರೂಪ ಮತ್ತು ಅರ್ಥಗಳಿಗಾಗಿ ನಾವು ಪದಕೋಶವನ್ನು ಎಡತಾಕುವುದುಂಟು. ಹಾಗೆ ಅನ್ಯ ಭಾಷೆಯ ಪಠ್ಯವೊಂದನ್ನು ಅನುವಾದಿಸುವಾಗ ಅಗತ್ಯ ಬಿದ್ದರೆ ನಿಘಂಟುವಿನ ಸಹಾಯ ಪಡೆದರೆ ತಪ್ಪೇನಿಲ್ಲ. ಕಡೆಗೂ ಅದು ಪದಕ್ಕೆ ಅರ್ಥ ಕೊಡಬಹುದೇ ಹೊರತು ಭಾವಕ್ಕಲ್ಲ. ಅದಕ್ಕಾಗಿಯೇ ಪದಕ್ಕೆ ಅರ್ಥ ಪದಕೋಶದಿಂದ; ಭಾವಕ್ಕೆ ಅರ್ಥ ಭಗವಂತನಿಂದ ಎಂಬ ಮಾತಿರುವುದು.

ಯಾವುದೇ ಭಾಷೆಯ ಆತ್ಯಂತಿಕ ಲಕ್ಷ್ಯ ಸಂವಹನ ಮಾಡುವುದಾಗಿರುತ್ತದೆ. ಈ ಸಂವಹನ ಸುಲಭವಾಗುವಂತೆ ಪ್ರತಿ ಭಾಷೆಗೂ ಅದರದೇ ಜಾಯಮಾನವಿರುತ್ತದೆ. ಅದನ್ನು ಪದಶಃ ಅನುವಾದಿಸಿದಾಗ ಅದು ಉದ್ದೇಶಿತ ಭಾಷೆಯ ಜಾಯಮಾನಕ್ಕೆ ಹೊಂದಿಕೆಯಾಗದಂತೆ ಉಳಿಯುವುದರಿಂದ ಸಂವಹನಕ್ಕೆ ತೊಡಕಾಗುತ್ತದೆ. ಏಕೆಂದರೆ ಈ ಭಾಷೆಯಲ್ಲಿ ಸಂವಹನ ಸುಲಭವಾಗುವಂತೆ ಇದಕ್ಕೆ ಇದರದೇ ಆದ ಜಾಯಮಾನವಿರುತ್ತದೆ. ಪದಶಃ ಅನುವಾದದಿಂದ ಆಗುವ ಗೊಂದಲಗಳಿವು. ಗೂಗಲ್ ಅನುವಾದವು ಮಾಡುವುದು ಇಂಥ ಪದಶಃ ಅನುವಾದದ ಗೊಂದಲಗಳನ್ನೇ. ಮಾಧ್ಯಮದವರಿಗೆಂದು ಉದ್ದೇಶಿಸಿ ಬರೆಯಲಾದ `ಪ್ರೆಸ್’ ಎಂಬ ಪದವು ಗೂಗಲ್ ಅನುವಾದದಲ್ಲಿ `ಒತ್ತು’ ಎಂದಾಗುತ್ತದೆ!

ಅನುವಾದಾತೀತ ಆಗಿರುವುದೇ ಒಂದು ಉತ್ತಮ ಕೃತಿಯ ಲಕ್ಷಣ ಎಂದು ಕೆಲವರು ವಾದಿಸುತ್ತಾರೆ. ಕೆಲವು ಅನುವಾದಾತೀತವಾದ ಸಂಸ್ಕೃತಿ ವಿಶಿಷ್ಟ ಮತ್ತು ಪ್ರದೇಶ ವಿಶಿಷ್ಟ ಪದಗಳ ಉದಾಹರಣೆ ಮೂಲಕ ಅಡಿ ಟಿಪ್ಪಣಿ ಹೇಗೆ ಕೆಲವು ಸಂದರ್ಭಗಳಲ್ಲಿ ಅನಿವಾರ್ಯವಾಗುತ್ತದೆ ಎಂಬುದನ್ನು ನೋಡೋಣ. ಉರ್ದುವಿನಲ್ಲಿ ರಖೀಬ್ ಎಂಬ ಒಂದು ಪದವಿದೆ. ಒಬ್ಬಳೇ ಹುಡುಗಿಯನ್ನು ಪ್ರೀತಿಸುವ ಇಬ್ಬರು ಹುಡುಗರು ಪರಸ್ಪರರ ಪಾಲಿಗೆ ರಖೀಬ್ ಎಂದೆನಿಸಿಕೊಳ್ಳುವರು. ಈ ಪರಿಕಲ್ಪನೆಯೇ ಕನ್ನಡದಲ್ಲಿಲ್ಲ. ಹಾಗೆಯೇ ತೆಲುಗಿನಲ್ಲಿ ಚಲಿಕಾಡು ಎಂಬೊಂದು ಪದವಿದೆ. ಇತ್ತ ಕೇವಲ ಗೆಳೆಯನೂ ಅಲ್ಲದ, ಅತ್ತ ನಿಖರವಾಗಿ ಪ್ರೇಮಿಯೂ ಅಲ್ಲದ, ಗೆಳೆಯನಿಗಿಂತ ತುಸು ಹೆಚ್ಚು ಆದರೆ ಪ್ರೇಮಿಗಿಂತ ತುಸು ಕಮ್ಮಿ ಎಂಬರ್ಥದ ಈ ಪದವನ್ನು ಹೇಗೆ ಕನ್ನಡಕ್ಕೆ ಅನುವಾದಿಸುವುದು? ಇಂಥಲ್ಲಿ ಅಡಿಟಿಪ್ಪಣಿ ಅನಿವಾರ್ಯವಾಗುವುದು.ಅನುವಾದಕ್ಕಾಗಿ ಒಂದು ಕೃತಿಯನ್ನು ಆಯ್ಕೆ ಮಾಡಿಕೊಳ್ಳುವಾಗ ಉದ್ದೇಶಿತ ಭಾಷೆಗೆ ಹೋಲಿಸಿದಾಗ ಆ ನಿರ್ದಿಷ್ಟ ಕೃತಿಯು ವಸ್ತು ದೃಷ್ಟಿಯಿಂದ ಅಥವಾ ಶೈಲಿ/ನಿರ್ವಹಣೆ ದೃಷ್ಟಿಯಿಂದ ಹೊಸದೇನನ್ನಾದರೂ ಹೇಳುತ್ತಿದೆಯೇ ಎಂಬುದನ್ನು ಅನುವಾದಕರು ಗಮನಿಸುವರು. ಶೈಲಿಯನ್ನು ತರುವುದೆಂದರೆ ಉದಾಹರಣೆಗೆ ಶಿವಾರೆಡ್ಡಿಯವರ ಹೇಳಿದ್ದನ್ನೇ ಮತ್ತೆ ಮತ್ತೆ ಬೇರೆ ಬೇರೆ ಪದಗಳಲ್ಲಿ ಹೇಳುವ ಪುನರಾವೃತ್ತಿಯ ಶೈಲಿ, ಸಿನಾರೆಯವರ ಸುಲಭಧಾರಣಾನುಕೂಲಿ ಶಿಲ್ಪದ ಸಾಂಗೀತಿಕ ಶೈಲಿ, ಅಜಂತಾ ಅವರ ಬೀಭತ್ಸ ಚಿತ್ರಣಗಳಿಂದ ಇಡಿಕಿರಿದಿರುವ ಸಾಂದ್ರ ಶಿಲ್ಪಗಳ ಶೈಲಿಗಳನ್ನು ಕನ್ನಡಕ್ಕೆ ತರುವುದು. ಹಾಗೆಯೇ ಕನ್ನಡದ ಪುರಂದರದಾಸರನ್ನು ಅವರ ಸಾಂಗೀತಿಕ ಗುಣದೊಂದಿಗೇ, ವಚನಗಳನ್ನು ಅವುಗಳ ನೇರ ನಿರಾಡಂಬರ ಶೈಲಿಯೊಂದಿಗೇ ಮತ್ತೊಂದು ಭಾಷೆಗೆ ಒಯ್ಯುವುದಾಗಿದೆ.

ಅನುವಾದಕ್ಕಾಗಿ ಕೃತಿಯನ್ನು ಆಯ್ಕೆ ಮಾಡಿಕೊಳ್ಳುವಾಗ ಸಾಂಸ್ಕೃತಿಕ ರಾಜಕಾರಣವೂ ಒಂದು ಲಕ್ಷ್ಯವಾಗಿ ಕೆಲಸ ಮಾಡಿರುವುದನ್ನು ಗಮನಿಸಬಹುದು. ಜಾಜಿ ದೇವೇಂದ್ರಪ್ಪ ತೆಲುಗಿನ ಕಂಚ ಐಲಯ್ಯನವರ ದೇವರ ರಾಜಕೀಯ ತತ್ವವನ್ನು, ಬಂಜಗೆರೆ ಜಯಪ್ರಕಾಶ್ ತೆಲುಗಿನ ರಂಗನಾಯಕಮ್ಮನವರ ರಾಮಾಯಣ ವಿಷವೃಕ್ಷಂ ಅನ್ನು, ಲಂಕೇಶ್ ಫ್ರೆಂಚಿನ ಬೋದಿಲೇರ್‌ನ ಪಾಪದ ಹೂಗಳನ್ನು ಕನ್ನಡಕ್ಕೆ ತಂದಿದ್ದರ ಹಿನ್ನೆಲೆಯಲ್ಲಿ ಕೆಲಸ ಮಾಡಿರುವ ಮನಃಸ್ಥಿತಿಯನ್ನು ನಾವು ಗ್ರಹಿಸಬೇಕು. ಖುಷ್ವಂತ್ ಸಿಂಗ್‍ ಅವರ ದಿಲ್ಲಿ ಕಾದಂಬರಿಯನ್ನು ಅನುವಾದಿಸಿದ ರವಿ ಬೆಳಗೆರೆಯವರೇ ದಶಕಗಳ ನಂತರ ಅದೇ ಲೇಖಕರ ಕಂಪೆನಿ ಆಫ್ ವಿಮೆನ್ ಅನ್ನು ಅನುವಾದಿಸಿದರು.

ವೀರಪ್ಪ ಮೊಯ್ಲಿಯವರ ರಾಮಾಯಣ ಮಹಾನ್ವೇಷಣಂ ಅನ್ನು ಸಿ.ಎನ್. ರಾಮಚಂದ್ರನ್ ಅವರು ಇಂಗ್ಲಿಷಿಗೆ ಅನುವಾದಿಸಿದರು. ಸುಜ್ಞಾನಮೂರ್ತಿಯವರು ತೆಲಂಗಾಣ ಹೋರಾಟವೆಂಬ ಹೆಬ್ಬೊತ್ತಿಗೆಯನ್ನು ಕನ್ನಡಕ್ಕೆ ತಂದರೆ, ಸೃಜನ್ ರಾಮಗೋಪಾಲ್ ವರ್ಮರ ನಾ ಇಷ್ಟಂ ಕೃತಿಯನ್ನು ಕನ್ನಡಕ್ಕೆ ತಂದರು. ಮಾರ್ಕಂಡಪುರಂ ಶ್ರೀನಿವಾಸ್ ಅವರು ಸಮಗ್ರವಾಗಿ ಸಿ. ನಾರಾಯಣ ರೆಡ್ಡಿಯವರ ಕೃತಿಗಳನ್ನು ಕನ್ನಡಕ್ಕೆ ತಂದರು. ರಾಜಾ ಚೆಂಡೂರ್ ಯಂಡಮೂರಿ ವೀರೇಂದ್ರನಾಥರ ಬರೆಹಗಳನ್ನು ಕನ್ನಡಕ್ಕೆ ತಂದರು. ಹೀಗೆ ಅನುವಾದಕ್ಕಾಗಿ ಕೃತಿಯ ಆಯ್ಕೆಯಲ್ಲಿ ನಿರ್ದಿಷ್ಟ ಲೇಖಕ, ಪ್ರಕಾರ, ಸಿದ್ಧಾಂತ, ಸತ್ವ ಅಥವಾ ಜನಪ್ರಿಯತೆಗಳು ಮಾನದಂಡಗಳಾಗಿ ಕೆಲಸ ಮಾಡಿರುತ್ತವೆ.

ರಸಾನುಭವಕ್ಕಾಗಿನ ಓದಿಗೂ, ಅನುವಾದಕ್ಕಾಗಿನ ಓದಿಗೂ ತುಂಬಾ ವ್ಯತ್ಯಾಸಗಳಿವೆ. ಒಂದು ಕೃತಿಯನ್ನು ರೀಡರ್ ಸಂತೋಷಕ್ಕಾಗಿ ಓದಿದರೆ, ಪ್ರೂಫ್ ರೀಡರ್ ಮುದ್ರಣದೋಷಗಳಿಗಾಗಿ ಓದುತ್ತಾನೆ. ಅದೇ ಟ್ರಾನ್ಸ್‍ಲೇಟರ್ ಅದರ ಅಷ್ಟೂ ಚೆಲುವನ್ನು ಸೂಕ್ಷ್ಮಮಟ್ಟದಲ್ಲಿ ಗ್ರಹಿಸಿ, ಮತ್ತೊಂದು ಭಾಷೆಯ ಓದುಗನಿಗೆ ಅದನ್ನು ಹಾಗೇ ತಲುಪಿಸುವ ಸಂತೋಷದ ಸವಾಲಿಗಾಗಿ ಓದುತ್ತಾನೆ. ಹೀಗೆ ಓದುತ್ತಿರುವಾಗ ಅವನೊಳಗಿನ ಭಾಷಾಶಾಸ್ತ್ರಜ್ಞ, ವಿಮರ್ಶಕ ಮತ್ತು ಸಹೃದಯಿ ಮೂವರೂ ಜಾಗೃತ ಸ್ಥಿತಿಯಲ್ಲಿರುತ್ತಾರೆ. ಒಂದರ್ಥದಲ್ಲಿ ಇದು ರೀಡಿಂಗ್ ಬಿಟ್ವೀನ್ ದ ಲೈನ್ಸ್ ಇದ್ದ ಹಾಗೆ.

ಎಷ್ಟೋ ಸಲ ಒಂದು ಕೃತಿಯ ಆಶಯ ಮತ್ತು ಧೋರಣೆಗಳು ತುಂಬಾ ಎತ್ತರದವಿದ್ದು ಅದನ್ನು ವಿವರಿಸಲು ಲೇಖಕ ಬಳಸಿದ ಭಾಷೆ ಸಂಕೀರ್ಣವಾಗಿದ್ದು ಉದ್ದೇಶಿತ ಅರ್ಥವನ್ನು ಓದುಗನಿಗೆ ದಾಟಿಸುವಲ್ಲಿ ಭಾಷೆಯೇ ಒಂದು ತೊಡಕಾಗಿರುತ್ತದೆ. ಇಂಥಲ್ಲಿ ಅನುವಾದಕನು ಮೂಲ ಕೃತಿಯ ಭಾಷೆಯ ವಿಚಾರದಲ್ಲಿ ಹದ ಮೀರದ ಸ್ವಾತಂತ್ರ್ಯವನ್ನು ವಹಿಸಿಕೊಂಡು ಬ್ಯೂಟಿಫಿಕೇಶನ್ ಮಾಡಬೇಕಾಗುತ್ತದೆ. ಅನಗತ್ಯವಾಗಿ ಲಂಬಿಸಿ ಹೇಳಿದ್ದನ್ನು ಸಾಂದ್ರಗೊಳಿಸಿ ಹೇಳಬೇಕಾಗುತ್ತದೆ. ಇಷ್ಟೆಲ್ಲ ಮಾಡಿದರೂ ಅನುವಾದಕನಿಗೆ ತಾನು ಮೂಲ ಲೇಖಕನಿಗಿಂತ ದೊಡ್ಡವನಲ್ಲ ಎಂಬ ಸೌಜನ್ಯ ಅಗತ್ಯವಾದುದು.

ಮೂಲಾನುಸಾರಿಯಾಗಿದೆಯೆಂಬ ಕಾರಣಕ್ಕೆ ಫೋರ್ಜರಿ ಸಹಿ ಮಾಡುವವರನ್ನು, ಎರಡು ಭಾಷೆಯಲ್ಲಿ ಅಸ್ಖಲಿತವಾಗಿ ಮಾತಾಡುತ್ತಾರೆಂಬ ಕಾರಣಕ್ಕಾಗಿ ಪ್ರವಾಸೀ ತಾಣಗಳಲ್ಲಿನ ಗೈಡು ಮತ್ತು ವ್ಯಾಪಾರಿಗಳನ್ನು ಅನುವಾದಕರೆನ್ನಲಾಗದು. ಅನುವಾದವೆನ್ನುವುದು ಇವೆರಡನ್ನೂ ಮೀರಿದ ಪರ ಭಾಷಾ ಗೌರವದ ಒಂದು ಶ್ರೇಷ್ಠ ಮನೋಧರ್ಮ. ಶ್ರೇಷ್ಠವೇಕೆಂದರೆ ಬೇರೊಂದು ಭಾಷೆಯಲ್ಲಿ ತಾನು ಓದಿ ಅನುಭವಿಸಿದ ಅತ್ಯುತ್ತಮವಾದ ವಿಚಾರವೊಂದು ತನ್ನ ಭಾಷಿಕರಿಗೂ ಸಿಗಲಿ ಎಂಬ ವಿಶಾಲ ಮನೋಭಾವದಲ್ಲಿ ಮೂಡಿದ ಅನುಸೃಷ್ಟಿಯ ಕೆಲಸವಿದು. ಇದರ ಲಾಭ ಎಲ್ಲರಿಗೆ ಬೇಕು. ಆದರೆ ಅದನ್ನು ಮಾಡುವ ಕಷ್ಟ ಯಾರಿಗೂ ಬೇಡ. ಒರ್ಹಾನ್ ಪಾಮುಕ್, ಜಿ.ಎ.ಕುಲಕರ್ಣಿ, ಸಿಮೋನ್ ದ ಬುವಾ, ಖಾಂಡೇಕರ್ ನಮಗೆ ಬೇಕು, ಅದೂ ನಮ್ಮ ಭಾಷೆಯಲ್ಲೇ. ಆದರೆ ಅವರನ್ನು ಉಲ್ಲೇಖಿಸುವಾಗ ಸೌಜನ್ಯಕ್ಕೂ ಓಎಲ್ಲೆನ್, ಪೋಕಳೆ, ಎಚ್‍.ಎಸ್. ಶ್ರೀಮತಿ, ಇನಾಂದಾರ್‍ರಂಥ ಅನುವಾದಕರ ಹೆಸರು ತೆಗೆದುಕೊಳ್ಳುವುದು ಬೇಡ.

ಭಾರತದ ದೊಡ್ಡ ಸಾಹಿತ್ಯಿಕ ಸಂಸ್ಥೆಯಾದ ಕೇಂದ್ರ ಸಾಹಿತ್ಯ ಅಕಾಡೆಮಿಯು ಸೃಜನಶೀಲ ಕೃತಿಗೆ ಕೊಡಮಾಡುವ ವಾರ್ಷಿಕ ಪ್ರಶಸ್ತಿಯ ಮೊತ್ತ ಒಂದು ಲಕ್ಷ ರೂಪಾಯಿಯಾದರೆ ಭಾಷಾಂತರಕ್ಕಾಗಿ ಕೊಡಮಾಡುವ ವಾರ್ಷಿಕ ಪ್ರಶಸ್ತಿಯ ಮೊತ್ತ ಐವತ್ತು ಸಾವಿರ ರೂಪಾಯಿಗಳು ಮಾತ್ರ. ಸರಿಸುಮಾರು ಎಂಬತ್ತು ಅಖಿಲ ಭಾರತ ಸಮ್ಮೇಳನಗಳಾಗಿವೆ ಒಬ್ಬೇ ಒಬ್ಬ ಗಂಭೀರ ಅನುವಾದಕನಿಗೆ ಅಧ್ಯಕ್ಷತೆಯ ಭಾಗ್ಯವಿಲ್ಲ. ಪತ್ರಕರ್ತರು, ಸಂಘಟಕರು ಕೂಡ ಆ ಸ್ಥಾನ ಅಲಂಕರಿಸಿಯಾಗಿದೆ. ಕಡೇಪಕ್ಷ ಅದಕ್ಕೆಂದೇ ಒಂದು ಪ್ರತ್ಯೇಕ ಗೋಷ್ಠಿಯಿಲ್ಲ. ನಮ್ಮ ಕನ್ನಡ ವಿಮರ್ಶೆಯು ಕೂಡ ಅನುವಾದದ ವಿಮರ್ಶೆಗಾಗಿ ಬೇಕಾದ ವಿಮರ್ಶಾ ಪರಿಕರಗಳನ್ನು ರೂಪಿಸಲೇ ಇಲ್ಲ.

ಇದೆಲ್ಲ ಕಾರಣವಾಗಿ ಯಾರಾದರೂ `ಸ್ವಂತದ್ದು ಬರೀರಿ. ಇವೆಲ್ಲ ನಿಲ್ಲಲ್ಲ’! ಎಂದಾಗ ಅನುವಾದಕರಲ್ಲಿ ಒಂದು ವಿಷಾದ ಭಾವ ಆವರಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT