ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ್ತೋಟ ಮಂಜುನಾಥ ಭಾಗವತ: ಪರಿವ್ರಾಜಕನ ಪಯಣ

Last Updated 7 ಜನವರಿ 2020, 11:06 IST
ಅಕ್ಷರ ಗಾತ್ರ

ಹೊಸ್ತೋಟ ಮಂಜುನಾಥ ಭಾಗವತರ ಕುರಿತುಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷಪ್ರೊ. ಎಂ.ಎ.ಹೆಗಡೆ ಅವರ ಬರಹ:

ಯಕ್ಷಗಾನರಂಗದಲ್ಲಿ ಪರಿವ್ರಾಜಕನೆಂದು ಗುರುತಿಸಲ್ಪಟ್ಟವರು ಹೊಸ್ತೋಟ ಮಂಜುನಾಥ ಭಾಗವತರು. ಯಾವ ಊರಿನಲ್ಲೂ ನೆಲೆಯೂರದೆ ಊರಿಂದೂರಿಗೆ ಅಲೆದಾಡುತ್ತ ಯಕ್ಷಗಾನವನ್ನು ಪ್ರತಿಫಲಾಪೇಕ್ಷೆಯಿಲ್ಲದೆ ಕಲಿಸುತ್ತ ಜೀವನವನ್ನು ಕಳೆದವರು ಅವರು.

ವಿಧಿವತ್ತಾಗಿ ಸನ್ಯಾಸ ದೀಕ್ಷೆಯನ್ನು ಪಡೆದಿಲ್ಲವಾದರೂ ಸಂತನಾಗಿ ಬದುಕಿದರು. ಹೆಗಲಮೇಲಿನ ಬಗಲಚೀಲದಲ್ಲಿ ತುಂಬಿದ ಬಟ್ಟೆ, ಪುಟ್ಟ ಕವಳದ ಪೆಟ್ಟಿಗೆ ಅವರ ಸಂಪತ್ತು. ಕರೆದವರು ಅನ್ನ ವಸತಿಯ ವ್ಯವಸ್ಥೆ ಮಾಡಿ, ಮುಂದಿನ ಪಯಣಕ್ಕೆ ದಾರಿಯ ವೆಚ್ಚವನ್ನು ನಿಭಾಯಿಸಿದರೆ ಆಯಿತು. ಮಕ್ಕಳೊಡನೆ ಮಕ್ಕಳಾಗಿ ಯಕ್ಷಗಾನವನ್ನು ಕಲಿಸುವುದು, ವಿರಾಮದಲ್ಲಿ ಕಲೆಯ ಕುರಿತಾಗಿ ಚಿಂತಿಸುವುದು, ಬರೆಯುವುದು, ಪ್ರಸಂಗ ರಚನೆ ಇತ್ಯಾದಿಗಳನ್ನು ಬಿಟ್ಟರೆ ಬೇರೆ ಹವ್ಯಾಸವಿಲ್ಲ.

ಅವರು ಹುಟ್ಟಿದೂರು ಹೊಸತೋಟ. ಆದರೆ ತೋಟ ಅವರದಲ್ಲ. ಬಾಲ್ಯದಲ್ಲಿ ತಂದೆಯ ಪೋಷಣೆ ದೊರೆಯದೆ ಬೆಳೆಯಬೇಕಾಯಿತು. ತಾಯಿಗೆ ಹೊಸ್ತೋಟದ ವೆಂಕಪ್ಪ ಹೆಗಡೆಯವರ ಆಶ್ರಯ ದೊರೆಯಿತು. ಆ ಮನೆ ಛತ್ರದಂತೆ. ಯಕ್ಷಗಾನದವರಿಗೆಲ್ಲ ಈ ಮನೆಯಲ್ಲಿ ವಸತಿಯ ವ್ಯವಸ್ಥೆ. ಆ ಕಾಲದ ಘಟಾನುಘಟಿ ಕಲಾವಿದರ ಕೈಂಕರ್ಯವನ್ನು ಮಾಡುತ್ತ ಕಲೆಯ ಬಗೆಗೆ ಆಸಕ್ತಿ ಬೆಳೆಯಿತು. ಈಗಿನಂತೆ ಪ್ರತಿದಿನ ಆಟವಿರಲಿಲ್ಲ. ಒಂದೆಡೆ ಕ್ಯಾಂಪ್ ಹಾಕಿದರೆ ಎಂಟತ್ತು ಆಟಗಳು. ಇದರ ಲಾಭ ಮಂಜುನಾಥನಿಗಾಯಿತು.

ಆ ಕಾಲದಲ್ಲಿ ಯಕ್ಷಗಾನವು ಜೀವನವೃತ್ತಿಯಾಗಿರಲಿಲ್ಲ. ಬದುಕಿಗೆ ವೃತ್ತಿಯೊಂದರ ಆವಶ್ಯಕತೆಯಿತ್ತು. ಅದಕ್ಕಾಗಿ ಮಂಜುನಾಥ ಬೇರೆ ವೃತ್ತಿಗಳನ್ನು ಅವಲಂಬಿಸುವುದು ಅನಿವಾರ್ಯವಾಗಿತ್ತು. ಗೊತ್ತಿರುವುದು ಕೃಷಿಗೆ ಸಂಬಂಧಿಸಿದ ಕೆಲಸ. ಬಿಡುವಿನ ಸಮಯದಲ್ಲಿ ತಾಳಮದ್ದಳೆ, ಆಟ ಮುಂತಾಗಿ ಯಕ್ಷಗಾನ ಚಟುವಟಿಕೆಗಳು. ನೀರ್ನಳ್ಳಿ ಮಂಜುನಾಥ ಹೆಗಡೆಯವರ ಸಹಾಯಕರಾಗಿ ದುಡಿಯುತ್ತಿರುವಾಗ ಇವರ ಹವ್ಯಾಸಗಳನ್ನು ಅವರು ಪ್ರೋತ್ಸಾಹಿಸಿದ್ದನ್ನು ಭಾಗವತರು ಈಗಲೂ ಸ್ಮರಿಸಿಕೊಳ್ಳುತ್ತಿದ್ದರು. ಮುಂದೆ ಅವರು ಗಡಿಮನೆ ಗಣಪತಿ ಹೆಗಡೆಯವರ ಮೇಳದ ಭಾಗವತರಾದರು.

ಜೀವನಕ್ಕೆ ವ್ಯವಸ್ಥೆಯನ್ನು ಕಲ್ಪಿಸಿಕೊಳ್ಳುವ ಪ್ರಯತ್ನಗಳ ವಿಫಲತೆ ಕಾಡತೊಡಗಿತು. ಎಲ್ಲರಂತೆ ಸಾಂಸಾರಿಕ ಜೀವನವನ್ನು ಕಳೆಯುವ ಆಸೆಗಳು ಬರಿದಾದವು. ನಿಲ್ಲುವುದಕ್ಕೆ ನಿಶ್ಚಿತ ನೆಲೆಯಿಲ್ಲದ ಭದ್ರವಾದ ಉದ್ಯೋಗವಿಲ್ಲದವನಿಗೆ ಸಂಸಾರವೇಕೆನಿಸಿತು. ಅಂಥ ಸಮಯದಲ್ಲಿ ಸನ್ಯಾಸ ಸ್ವೀಕರಿಸುವ ಯೋಚನೆ ಬಂದು ಕಾರವಾರದ ರಾಮಕೃಷ್ಣಾಶ್ರಮಕ್ಕೆ ಹೋದರು. ಸನ್ಯಾಸದೀಕ್ಷೆಯನ್ನು ಕೊಡುವ ಸಿದ್ಧತೆ ನಡೆಯುತ್ತಿತ್ತು. ಅಭಯ ಚೈತನ್ಯ ಎಂಬ ಹೆಸರಿನಿಂದ ಸನ್ಯಾಸ ಸ್ವೀಕರಿಸಬೇಕಾಗಿತ್ತು. ರಾತ್ರಿಯಲ್ಲಿಯೇ ಅಲ್ಲಿಂದ ಮರಳಿದರು. ಕಾವಿಯನ್ನು ಧರಿಸಿ ಸನ್ಯಾಸಿಯಾಗುವುದರ ಬದಲು ಶ್ವೇತವಸ್ತ್ರಧಾರಿಯಾದ ಸನ್ಯಾಸಿಯಾದರು. ಜೀವನದುದ್ದಕ್ಕೂ ಅದನ್ನು ಪಾಲಿಸಿದರು.

ಸಿದ್ದಾಪುರದ ಮಹಾತ್ಮಾಗಾಂಧಿ ಶತಾಬ್ದಿ ಕಾಲೇಜಿನಲ್ಲಿ ನಾನು ಪ್ರಾಧ್ಯಾಪಕನಾಗಿದ್ದಾಗ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ವಿದ್ಯಾರ್ಥಿಗಳ ಯಕ್ಷಗಾನ ಪ್ರದರ್ಶನಕ್ಕೆ ತರಬೇತಿ ನೀಡುವುದಕ್ಕಾಗಿ ಅವರನ್ನು ಕರೆದೆ. ನಾವಿಬ್ಬರೂ ಸಮಾಲೋಚಿಸಿ ‘ಪೌಂಡ್ರಕವಧ’ ಪ್ರಸಂಗವನ್ನು ಆಯ್ದುಕೊಂಡೆವು. ಪ್ರಯೋಗ ಪ್ರಶಂಸೆ ಗಳಿಸಿತು. ಆ ಅವಧಿಯಲ್ಲಿಯೇ ನನ್ನ ಒತ್ತಾಸೆಯಿಂದ ಯೌಗಂಧರಾಯಣನ ಕಥೆಯನ್ನು ಪ್ರಸಂಗರೂಪಕ್ಕಿಳಿಸಿದರು. ಫ್ಲಾಷ್‌ಬ್ಯಾಕ್ ತಂತ್ರದ ಮೂಲಕ ಮಹಾಸೇನನ ವೃತ್ತಾಂತವನ್ನು ಜೋಡಿಸಲು ಸೂಚಿಸಿದೆ. ಅದನ್ನು ಅಳವಡಿಸಿದರು. ಮುಂದೆ ಅದನ್ನು ಬಯಲಾಟದಲ್ಲಿ ಪ್ರಯೋಗಿಸಿದೆವು.

ಅಲ್ಲಿನ ಅನುಭವ ಭಾಗವತರ ಮುಂದಿನ ದಾರಿಯನ್ನು ಸ್ಪಷ್ಟಗೊಳಿಸಿತು. ಯಕ್ಷಗಾನಾಸಕ್ತರಿಗೆ ಕಲಿಸುವ ಕೆಲಸವು ಗುರಿಯಾಯಿತು. ಬಿಡುವಿಲ್ಲದೆ ದುಡಿಯತೊಡಗಿದರು. ದೊಡ್ಡ ಶಿಷ್ಯ ಪರಂಪರೆಯೇ ಸಿದ್ಧವಾಗತೊಡಗಿತು. ಅವರ ಗುರುತ್ವಕ್ಕೆ ಗುರುತ್ವ ಪ್ರಾಪ್ತವಾದುದು ಶಿವಮೊಗ್ಗದ ಅಂಧರ ಶಾಲೆಯ ಮಕ್ಕಳಿಗೆ ಯಕ್ಷಗಾನವನ್ನು ಕಲಿಸಿದಾಗ. ಆ ಮಕ್ಕಳ ಯಕ್ಷಗಾನ ಪ್ರದರ್ಶನವನ್ನು ಕಂಡವರು ಬೆರಗಾದರು. ಕಣ್ಣಿದ್ದವರಷ್ಟೇ ಚೆನ್ನಾಗಿ ಅವರು ಕುಣಿಯುವಂತೆ ಮಾಡಿದ ಭಾಗವತರ ಕೌಶಲ- ಶ್ರದ್ಧೆಗೆ ತಲೆದೂಗದವರಿಲ್ಲ. ಅವರು ಕಲಿಸುವವರಿಗೂ ಕಲಿಯುವವರಿಗೂ ಅನುಕೂಲವಾಗಲೆಂದು ಸೂತ್ರಗಳನ್ನು ರಚಿಸಿದರು. ಅವರ ಅನುಭವದ ಸಾರ ಈಚೆಗೆ ಪ್ರಕಟವಾದ 'ಯಕ್ಷಗಾನ ಶಿಕ್ಷಣ'ವೆಂಬ ಗ್ರಂಥದಲ್ಲಿ ವ್ಯಕ್ತವಾಗಿದೆ.

ಶ್ರಾವಣದಲ್ಲಿ ಒಂದು ತಿಂಗಳು ಮೌನ. ಆ ಅವಧಿಯಲ್ಲಿ ಪ್ರಸಂಗ ರಚನೆ. ಉಸಿರಾಟದಷ್ಟೇ ಸಲೀಸಾಗಿ ಪ್ರಸಂಗರಚನೆ ನಡೆಯುತ್ತದೆ. ಪದ್ಯಗಳು ಪ್ರವಹಿಸುವ ವೇಗಕ್ಕೆ ತಕ್ಕಂತೆ ಬರೆಯಲಾಗುವುದಿಲ್ಲ. ವಿವಿಧ ತಾಳ, ಮಟ್ಟುಗಳಲ್ಲಿ ರಚಿತವಾಗುವ ಆ ಪದ್ಯಗಳ ಗೇಯಗುಣ ಅನನ್ಯ, ಅಕ್ಲಿಷ್ಟ. ಅವರ ಕವಿತ್ವಶಕ್ತಿ ಸಹಜವಾದುದು. ಮಾರಿಕಾಂಬಾ ದೇವಾಲಯದವರು ಪ್ರಸಂಗ ರಚನಾ ಸ್ಪರ್ಧೆಯನ್ನು ಏರ್ಪಡಿಸಿದಾಗ ಪಾಂಡುವಿಯೋಗವನ್ನು ಕಳಿಸಿದ್ದರು. ಆದರೆ, ಅದಕ್ಕೆ ಬಹುಮಾನ ಸಿಗಲಿಲ್ಲವೆಂಬುದು ಬೇರೆ ಮಾತು. ಭಾಗವತರು ನೊಂದುಕೊಂಡರು. ಆದರೆ ಅವರೊಳಗಿನ ಕವಿ ಸುಮ್ಮನಾಗಲಿಲ್ಲ. ಅವರ ಕೃತಿಗಳ ಕುರಿತು ಮಹಾಪ್ರಬಂಧಗಳು ರಚನೆಗೊಳ್ಳಬೇಕಾಗಿದೆ.

ಹಸ್ತಪ್ರತಿಗಳ ಸಂಗ್ರಹ ಅವರಿಗೆ ಆಸಕ್ತಿಯ ವಿಷಯ. ತಾಳೆಗರಿಗಳಲ್ಲಿ ರಚಿತವಾದ ಪ್ರಸಂಗಗಳನ್ನು ಶೋಧಿಸಲಿಕ್ಕಾಗಿ ಮೈಸೂರು, ಧರ್ಮಸ್ಥಳ, ಧಾರವಾಡ ಮುಂತಾದ ಸ್ಥಳಗಳನ್ನು ಸಂಚರಿಸಿದರು. ಹೋದಲ್ಲೆಲ್ಲ ಹುಡುಕಾಡಿದರು. ಅವರ ಹುಡುಕಾಟದಲ್ಲಿ ಸಿಕ್ಕಿದ 'ಆದಿಪರ್ವ' ಪ್ರಸಂಗ ಸೊಕ್ಕಿತು. ಅದು ನನ್ನ ಗಮನಕ್ಕೆ ಬಂದಾಗ ವಿವರವಾಗಿ ಅಧ್ಯಯನ ಮಾಡಿ ಪ್ರಕಟಗೊಳ್ಳುವಂತೆ ಮಾಡಿದೆ. ಅದು ಕುಮಟಾದ ಕರಾವಳಿ ಗ್ರಂಥಮಾಲೆಯಿಂದ ಪ್ರಕಟಗೊಂಡಿತು. ಸದ್ಯಕ್ಕೆ ದೊರೆತಿರುವ ಯಕ್ಷಗಾನ ಕೃತಿಗಳಲ್ಲಿ ಅತ್ಯಂತ ಪ್ರಾಚೀನವಾದ ಪ್ರಸಂಗವೆಂದು ಹೆಚ್ಚಿನ ವಿದ್ವಾಂಸರು ಒಪ್ಪಿದ್ದಾರೆ. ಅದರ ಸಂಪಾದಕನೆಂಬ ಕೀರ್ತಿ ನನ್ನದಾದರೂ ಭಾಗವತರ ಪರಿಶ್ರಮವನ್ನು ಮರೆಯುವಂತಿಲ್ಲ. ಪ್ರಸಂಗ ಬರೆದು, ಬರೆದವರ ಮನೆಯಲ್ಲಿಯೇ ಬಿಟ್ಟು ಬರುವ ಪ್ರವೃತ್ತಿ ಅವರದು. ಅವರ ಕೃತಿಗಳು ಯಾರ್ಯಾರ ಮನೆಯಲ್ಲಿದೆಯೆಂಬುದು ಈಗಲೂ ತಿಳಿಯದು. ತನ್ನದೆಂಬ ವ್ಯಾಮೋಹವನ್ನು ತೊರೆದವರು ಹೀಗೇ ಅಲ್ಲವೆ?

ಅವರ ಕಲಾಸೇವೆಯನ್ನು ಸಮಾಜ ಗುರುತಿಸಿ ಅರ್ಪಿಸಿದ ಹಮ್ಮಿಣಿಯನ್ನು ಗುರುಗಳ ಪದತಲದಲ್ಲಿಟ್ಟು ಯಕ್ಷಗಾನಕ್ಕಾಗಿ ವಿನಿಯೋಗಿಸಲು ಕೇಳಿಕೊಂಡರು. ಆ ನಿಧಿಯನ್ನು ಮೂಲಧನವನ್ನಾಗಿಸಿಕೊಂಡು 'ಯಕ್ಷಶಾಲ್ಮಲಾ' ಸಂಸ್ಥೆಯು ಜನ್ಮ ತಳೆದು ಯಕ್ಷಗಾನರಂಗಕ್ಕೆ ತನ್ನದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದೆ.

ಭಾಗವತರು ಈಚೆಗೆ ಅನಾರೋಗ್ಯಕ್ಕೆ ತುತ್ತಾದರು. ಮೂರ್ನಾಲ್ಕು ತಿಂಗಳು ಕ್ಯಾನ್ಸರಿನಿಂದ ಬಳಲಿದರು. ಮಣಿಪಾಲದಲ್ಲಿದ್ದಾಗ ಸಮಾಧಾನದಿಂದ ಕಾಯಿಲೆಯನ್ನು ಭಗವಂತನ ಪ್ರಸಾದವೆಂದು ಸ್ವೀಕರಿಸುವ ಮಾತನ್ನಾಡಿದರು. ಅರಿವಾಗುವ ಮೊದಲೆ ಕಾಯಿಲೆ ಉಲ್ಬಣಿಸಿತ್ತು. ಉಳಿದ ದಿನಗಳನ್ನು ಆದಷ್ಟು ನೆಮ್ಮದಿಯಿಂದ ಕಳೆಯುವಂತೆ ಮಾಡಬೇಕೆಂದು ನಿರ್ಧರಿಸಿ ಅವರು ಬಯಸಿದಂತೆ ನಡೆದುಕೊಳ್ಳಲು ಪ್ರಯತ್ನಿಸಲಾಯಿತು. ಅವರಿಗೆ ಪ್ರಿಯವಾದ ಮೋತಿಗುಡ್ಡದ ಕುಟೀರ, ಮೈಸೂರು, ಪೊನ್ನಂಪೇಟೆಗಳಲ್ಲಿರುವ ರಾಮಕೃಷ್ಣಾಶ್ರಮಗಳನ್ನೆಲ್ಲ ನೋಡಿಬಂದರು.

ಸುಮಾರು ಐದು ದಶಕಗಳಿಗೂ ಮಿಕ್ಕಿದ ಸ್ನೇಹ ನಮ್ಮದು. ಮಗುವಿನಂತೆ ಮುಗ್ಧ ಮನಸ್ಸಿನ ಭಾಗವತರು ಕೆಲವೊಮ್ಮೆ ಮಗುವಿನಂತೆ ರಚ್ಚೆ ಹಿಡಿಯುತ್ತಿದ್ದರು. ಅವರನ್ನು ಸಮಾಧಾನಪಡಿಸುವುದಕ್ಕೆ ಬೇರೆಯವರಿಂದ ಆಗುತ್ತಿರಲಿಲ್ಲ. ಆದರೆ ನಾನೇನಾದರೂ ಹೇಳಿದರೆ ಪ್ರೀತಿಯಿಂದ ಒಪ್ಪುತ್ತಿದ್ದರು. ಅದು ಹೃದಯ ಸಂಬಂಧ. ತರ್ಕಾತೀತ. ಹಾಗೆಂದು ನನ್ನನ್ನು ಅವರು ಬಯ್ಯುತ್ತಿರಲಿಲ್ಲವೆಂದಲ್ಲ. ಆದರೆ ಅದೆಷ್ಟೇ ಸಿಟ್ಟಿದ್ದರೂ ನನ್ನನ್ನು ಕಂಡೊಡನೆ ಮಾಯವಾಗಿಬಿಡುತ್ತಿತ್ತು. ವಿಸ್ತಾರಭಯದಿಂದ ವಿವರಿಸಲಾರೆ. ಯಕ್ಷಗಾನದ ಅಮೂಲ್ಯವಾದ ರತ್ನವನ್ನು ಕಳೆದುಕೊಂಡ ಅನುಭವ. ಅಂಥ ರತ್ನ ಇನ್ನೆಲ್ಲಿ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT