ಶನಿವಾರ, ಮೇ 8, 2021
27 °C
28 ವರ್ಷಗಳಿಂದ ನಾಡಿನ ವಿವಿಧೆಡೆ ಯಕ್ಷಗಾನ ಕಾರ್ಯಕ್ರಮ: ಹವ್ಯಾಸಿಗಳದ್ದೇ ತಂಡ

PV Web Exclusive: ಉತ್ತರ ಕರ್ನಾಟಕದಲ್ಲಿ ಚಂಡೆ, ಮದ್ದಳೆ ಸದ್ದು...

ರಾಮಕೃಷ್ಣ ಸಿದ್ರಪಾಲ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ಯಕ್ಷಗಾನದ ಚಂಡೆ, ಮದ್ದಳೆಯ ಸದ್ದು ಕೇಳಿಬರುವುದು ಅಪರೂಪ. ಇಲ್ಲಿ ಸಣ್ಣಾಟ, ವೃತ್ತಿ ರಂಗಭೂಮಿ ಮೇಳಗಳು, ಪ್ರದರ್ಶನಗಳೇ ಹೆಚ್ಚು. ಯಕ್ಷಗಾನವೇನಿದ್ದರೂ ಕರಾವಳಿ ಭಾಗಕ್ಕೆ ಸೀಮಿತ. ಆದರೂ ಅಪರೂಪಕ್ಕೆ ಅಲ್ಲೊಂದು ಇಲ್ಲೊಂದು ಯಕ್ಷಗಾನ, ತಾಳಮದ್ದಲೆ ಕಾರ್ಯಕ್ರಮ ನಡೆಯುತ್ತವೆ. ಕಲಾರಸಿಕರು ವೃತ್ತಿ ಮೇಳಗಳನ್ನು ಕರೆಸಿ ಯಕ್ಷಗಾನ ಏರ್ಪಡಿಸಿ ಚಂಡೆ, ಮದ್ದಲೆಯ ಲಯಕ್ಕೆ ವೇದಿಕೆ ಒದಗಿಸಿಕೊಡುತ್ತಾರೆ. 

ಈ ಭಾಗದಲ್ಲಿ ಯಕ್ಷಗಾನ ಮೇಳದ ಕೊರತೆ ತುಂಬಿಕೊಡುವ ನಿಟ್ಟಿನಲ್ಲಿ ಧಾರವಾಡದಲ್ಲೊಂದು ಸಂಘವಿದೆ. ಯಕ್ಷಗಾನ ಮತ್ತು ಸಂಸ್ಕೃತಿ ಸಂಘ. 1993ರಲ್ಲಿಯೇ ಹುಟ್ಟಿಕೊಂಡ ಈ ಸಂಘದ ವಿಶೇಷವೆಂದರೆ ಇದರಲ್ಲಿರುವವರೆಲ್ಲ ಹವ್ಯಾಸಿಗಳು. ವಕೀಲರು, ಉಪನ್ಯಾಸಕರು, ಶಿಕ್ಷಕರು, ಅಡುಗೆ ಭಟ್ಟರು, ಕೃಷಿಕರು, ಅರ್ಚಕರು, ಶುಶ್ರೂಷಕರು...ಹೀಗೆ ವಿವಿಧ ವೃತ್ತಿ ಮಾಡುವವರೆಲ್ಲ ಸೇರಿ ಕಟ್ಟಿಕೊಂಡ ಮೇಳವೊಂದು 28 ವರ್ಷಗಳಿಂದ ನಾಡಿನ ವಿವಿಧೆಡೆ ಯಕ್ಷಗಾನ ಪ್ರದರ್ಶಿಸುತ್ತ ಬಂದಿದೆ.

ಈ ಮೇಳ ಆಯೋಜಿಸುವ ಯಕ್ಷಗಾನದಲ್ಲಿ ಪಾಲ್ಗೊಳ್ಳುವ ಕಲಾವಿದರ‍್ಯಾರೂ ಪ್ರತಿಫಲಾಪೇಕ್ಷೆ ಇಲ್ಲದೇ ಕಾರ್ಯಕ್ರಮ ನೀಡುತ್ತ ಬಂದಿರುವುದು ವಿಶೇಷ. ದಾನಿಗಳು ನೀಡುವ ಸಹಕಾರವೇ ಇವರ ಪ್ರದರ್ಶನಕ್ಕೆ ಉತ್ತೇಜನ. ಬೇರೆ ಬೇರೆ ವೃತ್ತಿಯಲ್ಲಿರುವ ಈ ಕಲಾವಿದರನ್ನೆಲ್ಲ ಆಯಾ ಪ್ರಸಂಗಕ್ಕೆ ತಕ್ಕಂತೆ ಒಗ್ಗೂಡಿಸಲಾಗುತ್ತದೆ. ಪ್ರದರ್ಶನಕ್ಕೆ ತಕ್ಕಂತೆ ಅವರಿಗೆ ಮೂರ್ನಾಲ್ಕು ದಿನಗಳ ತರಬೇತಿ ನೀಡಲಾಗುತ್ತದೆ.


ಧಾರವಾಡದ ಯಕ್ಷಗಾನ ಮತ್ತು ಸಂಸ್ಕೃತಿ ಕೇಂದ್ರದ ಕಲಾವಿದರಿಂದ ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಯಕ್ಷಗಾನ

ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ ಸೇರಿದಂತೆ ವಿವಿಧೆಡೆ ಈವರೆಗೆ 250–300 ಪೌರಾಣಿಕ ಪ್ರಸಂಗಗಳನ್ನು ರಾತ್ರಿಯಿಡೀ ಪ್ರದರ್ಶಿಸಿದ್ದಾರೆ. ಕಂಸ ವಧೆ, ಸುಧನ್ವಾರ್ಜುನ ಕಾಳಗ, ಕೃಷ್ಣ ಸಂಧಾನ, ಗದಾಯುದ್ಧ, ಲವಕುಶ, ಚಂದ್ರಹಾಸ ಚರಿತ್ರೆ, ಶ್ವೇತಕುಮಾರ ಚರಿತ್ರೆ, ಶನಿ ಮಹಾತ್ಮೆ, ದೇವಿ ಮಹಾತ್ಮೆ, ಮಾಗಧ ವಧೆ, ಜಾಂಬವತಿ ಕಲ್ಯಾಣ ಇತ್ಯಾದಿ ಪ್ರಸಂಗಗಳನ್ನು ಪ್ರಸ್ತುತ ಪಡಿಸಲಾಗಿದೆ.

ಧಾರವಾಡದ ಯಕ್ಷಗಾನ ಮತ್ತು ಸಂಸ್ಕೃತಿ ಸಂಘ ಸ್ಥಾಪಕರು ವಕೀಲ ಎಸ್‌. ಆರ್‌. ಹೆಗಡೆ ಹಾಗೂ ಭೂ ವಿಜ್ಞಾನಿ ಸುರೇಶ ಹೆಗಡೆ ಅವರು. ಸ್ಥಾಪಕರಲ್ಲಿ ಒಬ್ಬರಾದ, ಕುಮಟಾದ ಸುರೇಶ ಹೆಗಡೆ ಈಗ ವೃತ್ತಿಯಿಂದ ನಿವೃತ್ತರಾಗಿದ್ದಾರೆ. ಸರ್ಕಾರಿ ನೌಕರಿ ಮಾಡುತ್ತ ಸಮಯ ಸಿಕ್ಕಾಗ ಯಕ್ಷಗಾನದಲ್ಲಿ ಪಾತ್ರ ಮಾಡುತ್ತ ಬಂದವರು. 1993ರಿಂದ ಯಕ್ಷಗಾನ ಸಂಸ್ಕೃತಿ ಸಂಘದ ಆಜೀವ ಸದಸ್ಯರು. ಯುವ ಕಲಾವಿದರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಸಮಯ ಸಿಕ್ಕಾಗ ಈಗಲೂ ಪಾತ್ರ ಮಾಡುತ್ತಾರೆ. 

‘ಮೊದಲು ಈ ಮೇಳಕ್ಕೆ ಭಾಗವತರನ್ನು ಸೇರಿಸುವುದು ಕಷ್ಟವಾಗಿತ್ತು. 2009ರಲ್ಲಿ ಧಾರವಾಡಕ್ಕೆ ಬಂದ ಮೇಲೆ ಭಾಗವತನಾಗಿ ಈ ತಂಡವನ್ನು ಸೇರಿಕೊಂಡೆ. ಅಲ್ಲಿಂದ ಮುಂದಕ್ಕೆ ಭಾಗವತರ ಸಮಸ್ಯೆ ಆಗಿಲ್ಲ’ ಎನ್ನುತ್ತಾರೆ 12 ವರ್ಷಗಳಿಂದ ತಂಡದಲ್ಲಿ ಭಾಗವತರಾಗಿರುವ ಧಾರವಾಡದ ಎಸ್‌ಡಿಎಂ ಆಸ್ಪತ್ರೆಯ ಶುಶ್ರೂಷಕ ಮಂಜುನಾಥ್ ಹೆಗಡೆ. 

ಧಾರವಾಡದ ಭೌತಶಾಸ್ತ್ರ ಉಪನ್ಯಾಸಕ ನರಸಿಂಹ ಸ್ವಾಮಿ ಮೊದಲು ಹವ್ಯಾಸಿಯಾಗಿದ್ದರು. ಯಕ್ಷಗಾನದಲ್ಲಿ ಹಾಸ್ಯಪಾತ್ರಗಳನ್ನು ಮಾಡುತ್ತಿದ್ದವರು ಬಳಿಕ ಭಾಗವತಿಕೆ ಅಭ್ಯಾಸ ಮಾಡಿದರು. ಧಾರವಾಡದ ವಕೀಲ ವಿ.ಜಿ.ಭಟ್ ಮೊದಲು ಪ್ರೇಕ್ಷಕರಾಗಿದ್ದರು. ಹವ್ಯಾಸಕ್ಕೆ ವೇದಿಕೆ ಏರುತ್ತ ಎರಡು ವರ್ಷಗಳಿಂದ ಪಾತ್ರ ಮಾಡುತ್ತಿದ್ದಾರೆ. ಶಿರಸಿಯ ಕೃಷಿಕರಾಗಿರುವ ನಾರಾಯಣ ಕೋಮಾರ, ಮೃದಂಗ ವಾದಕ ಯಲ್ಲಾಪುರದ ಶ್ರೀಪಾದ ಭಟ್‌ ಮೇಳದ ಕಾರ್ಯಕ್ರಮದಲ್ಲಿ ಚಂಡೆ, ಮೃದಂಗ ನುಡಿಸುವರು.

ಧಾರವಾಡದಲ್ಲಿ ಸಂಸ್ಕೃತ ಅಧ್ಯಾಪಕರಾಗಿರುವ ವಿದ್ವಾನ್‌ ವಿನಾಯಕ ಭಟ್‌ ಶೇಡಿಮನೆ, 18 ನೇ ವರ್ಷಕ್ಕೆ ತಾಳಮದ್ದಲೆ ಅರ್ಥಗಾರಿಕೆ, ರಂಗಸ್ಥಳದಲ್ಲಿ ವೇಷ ಕಟ್ಟಿದರು. ಹೊಸ್ತೋಟ ಗಜಾನನ ಭಾಗವತರು ಆರಂಭಿಕ ಗುರುಗಳು. ಬಳಿಕ ಉಡುಪಿಯಲ್ಲಿ ಸಂಸ್ಕೃತ ಓದಿನೊಂದಿಗೆ ಯಕ್ಷಗಾನವನ್ನೂ ಅಭ್ಯಾಸ ಮಾಡಿದರು.  ನಾಟಕಗಳಲ್ಲಿ ಅಭಿನಯ. ವಿಶೇಷವಾಗಿ ಸಂಸ್ಕೃತ ನಾಟಕ, ಯಕ್ಷಗಾನಗಳಲ್ಲಿ ಹೆಚ್ಚು ಹೆಚ್ಚು ಪಾತ್ರ ಮಾಡುತ್ತಾರೆ. 2007ರಲ್ಲಿ ಕೌಮುದಿ ಉತ್ಸವದಲ್ಲಿ ಉತ್ತಮ ನಟ, ದೆಹಲಿಯಲ್ಲಿ ಸಂಸ್ಕೃತ ಯಕ್ಷಗಾನ ನಡೆದಾಗ ‘ಸರ್ವೋತ್ತಮ ನಟ’ ಪ್ರಶಸ್ತಿ ಪಡೆದರು.

ವಿವಿಧ ವೃತ್ತಿಯಲ್ಲಿ ಮುಂದುವರಿಯುತ್ತ ಯಕ್ಷಗಾನ ಪಾತ್ರಗಳನ್ನು ಮಾಡುತ್ತ ಹವ್ಯಾಸಿಗಳೇ ಈ ಮೇಳವನ್ನು ಮುನ್ನಡೆಸಿ ರಸದೌತಣ ನೀಡುತ್ತಿರುವುದು ಯಕ್ಷಕಲಾರಸಿಕರಿಗೆ ಮುದನೀಡುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು