ಸೋಮವಾರ, ಜೂನ್ 21, 2021
30 °C
ಶಾರ್ವರಿ ಸಂವತ್ಸರದ ರಾಶಿ ಫಲ

ಯುಗಾದಿ ವರ್ಷ ಭವಿಷ್ಯ

ಭಾರತಿ ರವೀಂದ್ರ Updated:

ಅಕ್ಷರ ಗಾತ್ರ : | |

ಶಾರ್ವರಿ. ಇದು ನೂತನ ಸಂವತ್ಸರದ ಹೆಸರು: ವಸಂತ ಋತು, ಚೈತ್ರ ಮಾಸ, ಶುಕ್ಲ ಪಾಡ್ಯಮಿಯಂದು ಎಂದರೆ, ಮಾರ್ಚ್‌ 25 ಬುಧವಾರ ಬೆಳಗಿನ ಜಾವ 5.33ಕ್ಕೆ ಪ್ರಾರಂಭವಾಗುತ್ತದೆ. ಈ ದಿನವನ್ನೇ ನಾವು ಯುಗಾದಿ ಎಂದು ಆಚರಿಸುವುದು. ಶಾರ್ವರಿ ಸಂವತ್ಸರದ ರಾಜ ಬುಧ; ಮಂತ್ರಿ ಚಂದ್ರ.

ಈ ಸಂವತ್ಸರದ ಸೇನಾಧಿಪ ಚಂದ್ರನಾಗಿರುವುದರಿಂದ ಪ್ರಕೃತಿಯ ಮೂಲಕ ಹಲವು ಸಮಸ್ಯೆಗಳು ಎದುರಾಗಬಲ್ಲವು. ವಾಯುತತ್ವ ರಾಶಿಯಲ್ಲಿ, ಅಂದರೆ ಮಿಥುನ ರಾಶಿಯಲ್ಲಿ ರಾಹು ಸ್ಥಿತನಾಗಿರುವನು. ಇದರಿಂದ ವೈರಸ್ ಎಲ್ಲೆಡೆ ಹರಡುವುದು. ಮೇ 2ಕ್ಕೆ ರಾಹು ಮೃಗಶಿರ ನಕ್ಷತ್ರದಲ್ಲಿ ಸಂಚರಿಸುವುದರಿಂದ ಸಮಸ್ಯೆಯ ತೀವ್ರತೆ ಕಡಿಮೆಯಾಗುವುದು.​

ಹನ್ನೆರಡು ರಾಶಿಗಳಿಗೆ ಯುಗಾದಿ ಸಂವತ್ಸರದ ಫಲ ಹೀಗಿರರುತ್ತದೆ:

ಮೇಷ: ವರ್ಷದ ಆದಿಯಲ್ಲಿ ಶುಭಫಲ. ತೃತೀಯಸ್ಥ ರಾಹುವು ನಿಮಗೆ ಸಕಲ ಕಾರ್ಯಗಳಿಗೆ ಬೇಕಾದ ಪರಾಕ್ರಮವನ್ನು ನೀಡುವನು. ಆಕಸ್ಮಿಕ ಧನಲಾಭದ ಯೋಗವಿದೆ. ಕುಟುಂಬದಲ್ಲಿ ಸಂತಸ, ವಿವಾಹಯೋಗವೂ ಇದೆ. ಕೈ ಹಾಕಿದ ಕೆಲಸದಲ್ಲಿ ಯಶಸ್ಸು. ಆದರೆ ಕೆಲಸದಲ್ಲಿ ಒತ್ತಡ. ಹೊಸ ಯೋಜನೆಗಳಿಗೆ ಕೈ ಹಾಕುವಾಗ ಎಚ್ಚರವಿರಲಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ. ಅಪಘಾತಕ್ಕೆ ಎಡೆಗೊಡದಂತೆ ನಿಮ್ಮ ನಡೆಯಿರಲಿ.

ವೃಷಭ: ಈ ವರ್ಷ ಶುಭಾಶುಭಗಳ ಮಿಶ್ರಫಲ ನಿಮ್ಮದು. ಅಷ್ಟಮ ಗುರುವಿನಿಂದ ಅನಾರೋಗ್ಯ, ಧನಹಾನಿ. ಉದ್ಯೋಗದಲ್ಲಿ ಸ್ಥಳಾಂತರ. ಮಾತಿನಲ್ಲಿ ಎಚ್ಚರವಿರಲಿ. ಭೂಮಿ ಹಾಗೂ ಲೋಹ ವ್ಯಾಪಾರಿಗಳಿಗೆ ಮಿಶ್ರಫಲ. ಹೊಸ ವ್ಯಾಪಾರ ಅಥವಾ ಕೆಲಸಗಳಿಗೆ ಕೈ ಹಾಕುವುದು ಬೇಡ. ನವಮದ ಶನಿಯಿಂದ ಕಾರ್ಯ ವಿಳಂಬ. ಗುರು ಮಕರದಲ್ಲಿ ಸಂಚರಿಸುವಾಗ ನೀಚನಾದರೂ ಶುಭಫಲ ನೀಡುವನು. ಮನಸ್ಸಿನ ಆಸೆ ಕೈಗೂಡಿ ಕುಟುಂಬದಲ್ಲಿ ಸಂತಸ.

ಮಿಥುನ: ವರ್ಷದ ಆರಂಭದಲ್ಲಿ ಉತ್ತಮ ಆರೋಗ್ಯ. ಕೆಲಸದಲ್ಲಿ ಜಯ. ವಿವಾಹಯೋಗ. ಸಂತಾನಯೋಗ. ವ್ಯಾಪಾರದಲ್ಲಿ ಪ್ರಗತಿ. ಜನ್ಮ ರಾಶಿಸ್ಥಿತ ರಾಹುವಿನಿಂದ ಮಾನಸಿಕ ಚಿಂತೆ. ಆದರೆ ಗುರುಸ್ಥಾನ ಪಲ್ಲಟವಾದಾಗ ವೃಥಾ ತಿರುಗಾಟ. ಶನಿಯ ಕಾರಣ ಕಾರ್ಯದಲ್ಲಿ ವಿಳಂಬ. ಆದರೆ ಜೂನ್‌ನಿಂದ ಶುಭಫಲಗಳು ನಿಮ್ಮದಾಗುವುವು.

ಕಟಕ: ಶನೈಶ್ಚರನ ದೃಷ್ಟಿ ನಿಮ್ಮ ರಾಶಿಗೆ ನೇರವಾಗಿರುವುದರಿಂದ ಯತ್ನಿಸಿದ ಕಾರ್ಯದಲ್ಲಿ ವಿಳಂಬ, ಅನವಶ್ಯಕ ಸಂಚಾರ, ಅನಾರೋಗ್ಯ, ಕುಟುಂಬದಲ್ಲಿ ಮನಸ್ತಾಪ. ವ್ಯಯಭಾವದ ರಾಹುವಿನಿಂದಲೂ ಅಧಿಕ ಖರ್ಚು. ಆದರೆ ಗುರುವಿನ ಸ್ಥಾನ ಬದಲಾವಣೆಯಿಂದ ಶುಭಫಲ; ಆರ್ಥಿಕ ಸುಧಾರಣೆ; ಉತ್ತಮ ಆರೋಗ್ಯ; ವಿವಾಹಯೋಗ; ವ್ಯಾಪಾರ-ವ್ಯವಹಾರದಲ್ಲಿ ಅಭಿವೃದ್ಧಿ.

ಸಿಂಹ: ವರ್ಷದ ಆದಿಯಲ್ಲಿ ಪಂಚಮ ಗುರುವಿನಿಂದ ಕಾರ್ಯಗಳಲ್ಲಿ ಯಶಸ್ಸು; ಕೀರ್ತಿ; ವ್ಯಾಪಾರದಲ್ಲಿ ಅಧಿಕ ಧನಲಾಭ; ಕಂಕಣಭಾಗ್ಯವೂ ಒದಗಲಿದೆ. ಆದರೆ ಮಕರಸ್ಥ ಗುರುವಿನಿಂದ ಕುಟುಂಬದಲ್ಲಿ ಅಶಾಂತಿ, ಅನಾರೋಗ್ಯ, ಹಣದ ತೊಂದರೆ. ಜೂನ್ ನಂತರ ಮತ್ತೆ ಸುದಿನಗಳು. ಶನಿಯ ಕಾರಣ ಅನವಶ್ಯಕ ಸಂಚಾರ, ವಿರಸ, ಕಿರುಕುಳ. ಕೇತುವಿನಿಂದ ಮಕ್ಕಳಿಗೆ ಕಿರಿಕಿರಿ. ಲಾಭಸ್ಥಾನದ ರಾಹುವಿನಿಂದ ಧನಲಾಭ, ವ್ಯಾಪಾರ ಪ್ರಗತಿ.

ಕನ್ಯಾ: ಗುರುವು ಶುಭದಾಯಕನಾಗಿಯೂ, ಶನಿಯು ಅಶುಭದಾಯಕನಾಗಿದ್ದು ಮಿಶ್ರಫಲ. ಅಂತರಂಗಭಾವದಲ್ಲಿ ಗುರು, ಕೇತುಗ್ರಸ್ತನಾದ ಕಾರಣ ಮಾನಸಿಕ, ದೈಹಿಕ ಆರೋಗ್ಯದ ಬಗ್ಗೆ ಎಚ್ಚರದಿಂದಿರಿ. ಆದರೆ ಮಕರಸ್ಥ ಗುರುವಿನಿಂದ ಸಂಪೂರ್ಣ ದೈವಬಲ ಲಭಿಸಿ, ಉನ್ನತ ಶಿಕ್ಷಣ, ಯಶಸ್ಸು, ಸಂತೋಷ ದೊರೆಯಲಿದೆ. ವ್ಯಾಪಾರದಲ್ಲಿ ಲಾಭ, ಮಕ್ಕಳಿಂದ ಸಂತೋಷ. ಅವಿವಾಹಿತರಿಗೆ ಸಿಹಿಸುದ್ದಿ. ದಶಮಭಾವದ ರಾಹುವಿನಿಂದ ಉದ್ಯೋಗದಲ್ಲಿ ಕಿರಿಕಿರಿ.

ತುಲಾ: ಕಷ್ಟ–ಸುಖಗಳೆರಡರ ಮಿಶ್ರಫಲ. ಸಹೋದರರ ನಡುವೆ ಸವಾಲ್–ಜವಾಬ್‌, ಮನಸ್ಸಿಗೆ ಕಿರಿಕಿರಿ. ಆದರೆ ಮಕರಸ್ಥ ಗುರುವಿನಿಂದ ಮತ್ತೆ ರಾಮ–ಲಕ್ಷ್ಮಣರಾಗುತ್ತೀರಿ. ಎಲ್ಲ ಕೆಲಸವನ್ನೂ ಎಚ್ಚರಿಕೆಯಿಂದ ಮಾಡಿ. ವಿದ್ಯಾರ್ಥಿಗಳ ಶ್ರಮಕ್ಕೆ ತಕ್ಕ ಯಶಸ್ಸು. ಗುರು ವಕ್ರತ್ಯಾಗ ಮಾಡಿದಾಗ ಶುಭಫಲಗಳು. ಉದ್ಯೋಗದಲ್ಲಿ ಪ್ರಗತಿ, ಸ್ಥಾನಮಾನ ಲಭ್ಯ. ಸೆಪ್ಟೆಂಬರ್ ನಂತರ ಸಂತಸವೋ ಸಂತಸ.

ವೃಶ್ಚಿಕ: ವರ್ಷದ ಆರಂಭವೇ ಶುಭಫಲಗಳಿಗೆ ಸಾಕ್ಷಿಯಾಗಲಿದೆ. ಧನಕಾರಕ ಗುರುವಿನಿಂದ ಆರ್ಥಿಕ ಪರಿಸ್ಥಿತಿ ಉತ್ತಮ. ವ್ಯಾಪಾರದಲ್ಲಿ ವೃದ್ಧಿ.  ವಿವಾಹಯೋಗ. ತೃತೀಯ ಭಾವಕ್ಕೆ ಗುರುವಿನ ಆಗಮನವಾದಾಗ ಕೆಲಸಗಳಲ್ಲಿ ವಿಳಂಬ, ಮಿತ್ರವಿರೋಧ; ಆದರೆ ವ್ಯಾಪಾರ–ವ್ಯವಹಾರಗಳಲ್ಲಿ ಅಲ್ಪ ಪ್ರಗತಿ. ಶನಿ ಶುಭಫಲ ನೀಡುವನು. ರಾಹು ನಿಮ್ಮ ಕಾಲಿಗೆ ಚಕ್ರ ಕಟ್ಟುತ್ತಾನೆ.

ಧನಸ್ಸು: ಗುರು ಮನಸ್ಸನ್ನು ಹಿಂಸಿಸುತ್ತಾನೆ. ಶನಿ ಜೇಬನ್ನು ಖಾಲಿ ಮಾಡುತ್ತಾನೆ, ಎಚ್ಚರಿಕೆಯಿಂದ ಖರ್ಚು ಮಾಡಿ. ಆರೋಗ್ಯದಲ್ಲಿ ಆರಂಭದಲ್ಲಿ ತೊಂದರೆಯಾದರೂ ಸುಧಾರಣೆ. ಮಕರಸ್ಥ ಗುರುವಿನಿಂದ ಮನಸ್ಸಿಗೆ ನೆಮ್ಮದಿ, ವ್ಯಾಪಾರದಲ್ಲಿ ವೃದ್ಧಿ. ಮನೆಗೆ ತಳಿರುತೋರಣಗಳ ಭಾಗ್ಯ.  ಧರ್ಮಕರ್ಮಾಸಕ್ತಿ. ಸಪ್ತಮದ ರಾಹು ವ್ಯಾಪಾರದಲ್ಲಿ ಎಚ್ಚರಿಕೆಯನ್ನು ಸೂಚಿಸುವನು.

ಮಕರ: ಶನಿ ನಿಮ್ಮನ್ನು ಸೋಮಾರಿಗಳನ್ನಾಗಿಸಲು ಹೊಂಚು ಹಾಕುತ್ತಿರುತ್ತಾನೆ; ಕೆಲಸ–ಕಾರ್ಯಗಳಲ್ಲಿ ವಿಳಂಬ. ಕಾಸನ್ನು ಬಿಚ್ಚುವ ಮೊದಲು ಹತ್ತು ಸಲ ಯೋಚಿಸಿ. ಆರೋಗ್ಯದ ಬಗ್ಗೆ ಕಾಳಜಿ ಅವಶ್ಯ. ಹೊಸ ಒಪ್ಪಂದಗಳಲ್ಲಿ ಎಚ್ಚರವಿರಲಿ. ಶುಭಸ್ಥಾನಸ್ಥಿತ ರಾಹು ನಿಮ್ಮ ಶತ್ರುಗಳನ್ನು ಮಣಿಸುತ್ತಾನೆ; ವ್ಯಾಪಾರದಲ್ಲಿ ಪ್ರಗತಿ. ಜೂನ್ ನಂತರ ಬೇವು–ಬೆಲ್ಲಗಳ ಸವಿ.

ಕುಂಭ: ವರ್ಷದ ಆರಂಭವೇ ಸಿಹಿಸುದ್ದಿ. ಲಾಭಸ್ಥಾನದ ಗುರುವಿನಿಂದ ಧನಯೋಗ, ಆಸ್ತಿ, ವಾಹನಯೋಗ. ಬೆವರಿಗೆ ತಕ್ಕ ಬೆಲೆ. ಗುರು ನಿಮ್ಮ ದುಡ್ಡಿನ ಮೇಲೆ ಕಣ್ಣಿಟ್ಟಿದ್ದಾನೆ, ಎಚ್ಚರ. ಇರುವ ಊರನ್ನು ಖಾಲಿ ಮಾಡಬೇಕಾಗಬಹುದು, ಸಿದ್ಧವಿರಿ. ಕಾರ್ಯದಲ್ಲಿ ವಿಳಂಬ. ಕೋಶ ಓದು, ದೇಶ ನೋಡು ಎಂಬುದು ನಿಮ್ಮ ಪಾಲಿಗೆ ನಿಜವಾಗಲಿದೆ. ವ್ಯಾಪಾರದಲ್ಲಿ ಅಲ್ಪ ಪ್ರಗತಿ. ಅಕ್ಕಪಕ್ಕದವರೊಡನೆ ವ್ಯವಹಾರ ಮಾಡುವಾಗ ಜೋಕೆ. ಮಕ್ಕಳ ಬಗ್ಗೆ ಗಮನವಿರಲಿ.

ಮೀನ: ಶುಭದಾಯಕ ವರ್ಷ ನಿಮ್ಮದು. ಆರೋಗ್ಯದಲ್ಲಿ ಸುಧಾರಣೆ. ಕುಟುಂಬದಲ್ಲಿ ಸೌಖ್ಯ. ಆರ್ಥಿಕ ಪರಿಸ್ಥಿತಿಯಲ್ಲಿ ಪ್ರಗತಿ. ಯತ್ನಿಸಿದ ಕಾರ್ಯದಲ್ಲಿ ಪ್ರಗತಿ. ಲಕ್ಷ್ಮಿ ಪದೇ ಪದೇ ನಿಮ್ಮ ಮನೆಬಾಗಿಲನ್ನು ತಟ್ಟುತ್ತಲೇ ಇರುತ್ತಾಳೆ. ವ್ಯಾಪಾರದಲ್ಲಿ ಲಾಭ. ಅವಿವಾಹಿತರಿಗೆ ಸಿಹಿಸುದ್ದಿ. ವಿದೇಶಪ್ರಯಾಣಕ್ಕೆ ಸಿದ್ಧವಾಗಿರಿ. ಶನಿಯೂ ಶುಭದಾಯಕ; ಕೀರ್ತಿ, ಪ್ರತಿಷ್ಠೆ, ಅಧಿಕಾರ ಪ್ರಾಪ್ತಿ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ. ರಾಹುವಿನಿಂದ ಮಾನಸಿಕ ಅಶಾಂತಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು