ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವೈಕಲ್ಯ ಮೆಟ್ಟಿ ನಿಂತ ಕ್ರೀಡಾ ಸಾಧಕಿ

Last Updated 12 ಫೆಬ್ರುವರಿ 2021, 19:31 IST
ಅಕ್ಷರ ಗಾತ್ರ

ಅಂಗವಿಕಲರು ಈಗ ಎಲ್ಲರಂತೆ ಬದುಕು ಸಾಗಿಸುವುದಷ್ಟೇ ಅಲ್ಲ, ಸಾಮಾನ್ಯರಿಗಿಂತ ಉನ್ನತ ಸಾಧನೆಯನ್ನು ಮಾಡಿ ದೇಶ-ವಿದೇಶಗಳಲ್ಲಿ ನಮ್ಮ ರಾಜ್ಯ, ರಾಷ್ಟ್ರದ ಗೌರವವನ್ನು ಹೆಚ್ಚಿಸಿದ್ದಾರೆ. ಆದರೂ ಅವರ ಸಾಧನೆ ಎಂದಿಗೂ ಸಾಮಾನ್ಯರಿಗಿಂತ ಹೆಚ್ಚು ಪ್ರಶಂಸಾರ್ಹ.

ಹಾಸನದ ರಾಷ್ಟ್ರೀಯ ಹೆದ್ದಾರಿ ಇಲಾಖೆಯಲ್ಲಿ ಸಿಬ್ಬಂದಿಯಾಗಿರುವ ಹಾಸನ ತಾಲ್ಲೂಕು ಶಾಂತಿಗ್ರಾಮದವರಾದ ಕಮಲಾಕ್ಷಿ ಎಸ್.ಡಿ. ಅವರನ್ನು ಭೇಟಿಯಾದಾಗ ಎನಿಸಿದ್ದು ಹೀಗೆ. ಅವರು ಹಾಸನ ಜಿಲ್ಲೆಯನ್ನು ಪ್ರತಿನಿಧಿಸಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಅಂಗವಿಕಲರು ಪ್ರತಿನಿಧಿಸಬಹುದಾದ ಬಹುತೇಕ ಆಟಗಳನ್ನು ಕಲಿತು, ಆಡಿ ಬಹುಮಾನಗಳನ್ನು ಪಡೆದಿದ್ದಾರೆ. ಇವರ ಅದಮ್ಯ ಆಸಕ್ತಿ, ಬತ್ತದ ಚೇತನ ಎಲ್ಲರಿಗೂ ಸ್ಫೂರ್ತಿದಾಯಕ.

ಕಮಲಾಕ್ಷಿ ತಮ್ಮ ಎಂಟನೇ ವಯಸ್ಸಿನಲ್ಲಿ ಪೋಲಿಯೊಗೆ ತುತ್ತಾದಾಗ ಅವರ ಕಾಲು ಬಲ ಕಳೆದುಕೊಂಡಿತು. ಅವರು ಹೈಸ್ಕೂಲ್‌ಗೆ ಬರುವ ಹೊತ್ತಿಗೆ ಶಾಲೆಯಲ್ಲಿದ್ದ ದೈಹಿಕ ಶಿಕ್ಷಕ ವಿಜಿ ಸರ್ ಅವರು ಕಮಲಾಕ್ಷಿಯವರನ್ನು ಆಟಗಳಿಗೆ ಹುರಿದುಂಬಿಸಿದರು. ಆಗ ಕಮಲಾಕ್ಷಿ ಹೆಚ್ಚು ಆಸಕ್ತಿ ತೋರಿಸಲಿಲ್ಲ. ಎಸ್ಸೆಸ್ಸೆಲ್ಸಿ ಮುಗಿದ ನಂತರ ಮನೆಯಲ್ಲಿದ್ದ ಆಕೆ ಕೆಲಸಕ್ಕೆ ಸೇರಿದ್ದು ಆಕಸ್ಮಿಕವೇ. ಅವರ ತಾಯಿ ನಡೆಸುತ್ತಿದ್ದ ಪ್ರಿಯದರ್ಶಿನಿ ಮಹಿಳಾ ಸಮಾಜದ ನಿರೀಕ್ಷಣೆಗಾಗಿ ಬರುತ್ತಿದ್ದ ಏಸುಪುತ್ರಿಯವರ ಸಹಾಯದಿಂದ ಕಣಿವೆ ಆಲದಹಳ್ಳಿಯ ಅಂಗನವಾಡಿಯಲ್ಲಿ ಕೆಲಸ ದೊರೆಯಿತು.

ಅವರು ಕ್ರೀಡಾ ಕ್ಷೇತ್ರಕ್ಕೆ ಬಂದಿರುವುದು 2018ರಲ್ಲಿ. ಮೊದಲು ಪತಿಯ ಕೆಲಸದಿಂದಾಗಿ ತಮಿಳುನಾಡು, ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ಅವರ ಬದುಕು ಮನೆವಾರ್ತೆಗೆ ಮಾತ್ರ ಸೀಮಿತವಾಗಿತ್ತು. ಬೆಂಗಳೂರಿನಲ್ಲಿದ್ದಾಗ ತಮ್ಮ ತಾಯಿಯ ಕೆಲಸದ ನಿಮಿತ್ತ ಅವರ ಜೊತೆ ಒಮ್ಮೆ ಕಚೇರಿಯೊಂದಕ್ಕೆ ಹೋಗಬೇಕಾಗಿ ಬಂತು. ಅಲ್ಲಿ ಅಧಿಕಾರಿಯಾಗಿದ್ದ ಜ್ವಾಲನೇಂದ್ರ ಅವರು ಕಮಲಾಕ್ಷಿಗೆ ಹುಟ್ಟೂರಿನಲ್ಲಿಯೇ ರಾಷ್ಟ್ರೀಯ ಹೆದ್ದಾರಿ ಇಲಾಖೆಯಲ್ಲಿ ಈಗಿನ ಕೆಲಸ ಕೊಡಿಸಿದರು.

2018ರಲ್ಲಿ ಮೊದಲ ಬಾರಿ ಅವರು ಹಾಸನ ಜಿಲ್ಲಾ ಮಟ್ಟದಲ್ಲಿ ಪಂಜು ಕುಸ್ತಿಯನ್ನು ಆಡಿದರು. ಆಗ ಆಕೆಗೆ ಎರಡನೇ ಸ್ಥಾನ ದೊರೆಯಿತು. ನಂತರ ರಾಜ್ಯ ಮಟ್ಟದಲ್ಲಿ ಆಡಿದರು. 2019ರಲ್ಲಿ ಮೈಸೂರು ದಸರಾ ಉತ್ಸವದಲ್ಲಿ ಈ ಕ್ರೀಡೆಯಲ್ಲಿ ಮೊದಲ ಸ್ಥಾನ ಪಡೆದರು. ಪಂದ್ಯದಲ್ಲಿ ಇಬ್ಬರು ಸ್ಪರ್ಧಿಗಳು ಪರಸ್ಪರರ ಅಂಗೈಗಳನ್ನು ಬಿಗಿಯಾಗಿ ಮುಷ್ಟಿ ಮಾಡಿ ಬಲ ಪ್ರದರ್ಶನದಿಂದ ಎದುರಾಳಿಯ ಕೈಯನ್ನು ಪೂರ್ಣ ಕೆಳಕ್ಕೆ ಬಗ್ಗಿಸಬೇಕು. ಅವರ ಮನೆಯ ಬಳಿ ಇದ್ದ ಜಿಮ್ ತರಬೇತುದಾರ ಮೊಟ್ಟ ಮೊದಲು ಈ ಪಂಜು ಕುಸ್ತಿಯ ಬಗ್ಗೆ ತಿಳಿಸಿದರು. ಕಮಲಾಕ್ಷಿ ಅದನ್ನು ಕಲಿತು ಆ ಸ್ಪರ್ಧೆಯಲ್ಲಿ ಭಾಗವಹಿಸಿದರು.

ಟೆನಿಸ್‌, ಸಿಟ್ಟಿಂಗ್‌ ವಾಲಿಬಾಲ್‌
ಲಾನ್‌ ಟೆನಿಸ್, ಸಿಟ್ಟಿಂಗ್ ವಾಲಿಬಾಲ್‌ ಕೂಡ ಕಲಿತಿದ್ದಾರೆ. ಇದರಲ್ಲಿ ಹಾಸನದ ಕ್ರೀಡಾ ತರಬೇತುದಾರ ಅಂತೋನಿಯವರ ಪರಿಶ್ರಮವೂ ಇದೆ. ಹಾಸನದಲ್ಲಿ ನಡೆದ ಪಂದ್ಯಾಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ನಾಲ್ಕನೇ ಸ್ಥಾನ ಪಡೆದರು.

ಕಮಲಾಕ್ಷಿ ಹೈದರಾಬಾದ್‌ನಲ್ಲಿ ವ್ಹೀಲ್ ಚೇರ್ ಲಾನ್‌ ಟೆನಿಸ್ ಕೂಡ ಆಡಿದ್ದಾರೆ. ಒಂದು ಕೈಯಲ್ಲಿ ಬ್ಯಾಟ್ ಹಿಡಿದು ಇನ್ನೊಂದು ಕೈಯಲ್ಲಿ ಕುರ್ಚಿ ಗಾಲಿಯನ್ನು ತಳ್ಳುತ್ತಾ ಆಡುವ ಆಟವಿದು. ವ್ಹೀಲ್ ಚೇರ್ ಬ್ಯಾಡ್ಮಿಂಟನ್ ಸಹ ಆಡುತ್ತಾರೆ.

ಕಮಲಾಕ್ಷಿ ಅವರಿಗೆ ತಮ್ಮದೇ ಆದ ಒಂದು ಸಿಟ್ಟಿಂಗ್ ವಾಲಿಬಾಲ್ ತಂಡ ಮಾಡಬೇಕೆಂಬ ಮಹದಾಸೆಯಿದೆ. ವ್ಹೀಲ್ ಚೇರ್ ಬಾಸ್ಕೆಟ್ ಬಾಲ್ ಆಟವನ್ನೂ ಇವರು ಆಡುತ್ತಾರೆ. ಕಳೆದ ವರ್ಷ ಹಾಸನದ ಜಿಲ್ಲಾಧಿಕಾರಿಗಳು ಇವರಿಗೆ ವ್ಹೀಲ್ ಚೇರ್ ಹಾಗೂ ಲಾಂಗ್ ಟೆನಿಸ್ ಬ್ಯಾಡ್ಮಿಂಟನ್ ಬ್ಯಾಟ್‌ ಅನ್ನೂ ಕೊಡಿಸಿದರು. 2020ರ ಫೆಬ್ರವರಿಯಲ್ಲಿ ಮೈಸೂರಿನಲ್ಲಿ ನಡೆದ ಕ್ರೀಡಾಕೂಟದಲ್ಲಿ ಇವರಿಗೆ ಜಾವಲಿನ್ ಎಸೆತದಲ್ಲಿ ಮೊದಲ ಸ್ಥಾನ ಬಂತು. ಅಂಗವಿಕಲರಿಗೆ ಇರುವ ಬಹುತೇಕ ಎಲ್ಲ ಆಟಗಳನ್ನೂ ಆಡಿ ಬಹುಮಾನ ಗಳಿಸಿರುವ ಕಮಲಾಕ್ಷಿಯವರ ಆತ್ಮಸ್ಥೈರ್ಯ ಎಲ್ಲರಿಗೂ ಅನುಕರಣೀಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT