ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲೋಕ’ವೇ ಹೇಳಿದ ಮಾತಿದು

Last Updated 10 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ
ADVERTISEMENT
""
""
""
""
""

ರಾಮನಗರ ಸಮೀಪದಲ್ಲಿರುವ ಜಾನಪದಲೋಕ ಆರಂಭವಾಗಿ ಇದೇ ಫೆಬ್ರುವರಿಗೆ 25 ವರ್ಷಗಳು ತುಂಬುತ್ತವೆ. ಬೆಳ್ಳಿಹಬ್ಬದ ನೆನಪಿಗಾಗಿ ಇದೇ 16ರಂದು ಮತ್ತು 18ರಂದು ಬೆಳ್ಳಿಹಬ್ಬ ಮತ್ತು ‘ಲೋಕೋತ್ಸವ’ ಕಾರ್ಯಕ್ರಮ ನಡೆಯುತ್ತಿದೆ.

‘ಎಷ್ಟು ಸುತ್ತಾಡಿದರೂ ಸುತ್ತಾಡೋಣ, ಎಷ್ಟು ನೋಡಿದರೂ ನೋಡೋಣ ಎನ್ನಿಸುತ್ತದೆ. ಅಷ್ಟು ಸುಂದರವಾಗಿದೆ ಈ ‘ಲೋಕ’. ಇಲ್ಲಿಗೆ ಬಂದ ಮೇಲೆ, ಹೊರಗಿನ ಲೋಕವನ್ನೆಲ್ಲ ಮರತೆಬಿಟ್ಟಿದ್ದೇನೆ...’

ರಾಮನಗರ ಸಮೀಪದ ‘ಜಾನಪದ ಲೋಕ’ಕ್ಕೆ ತರಬೇತಿಯೊಂದಕ್ಕೆ ಬಂದಿದ್ದ ಶಿಬಿರಾರ್ಥಿಯೊಬ್ಬರು ‘ಜಾನಪದ ಲೋಕ’ದ ಪರಿಸರವನ್ನು ಹೀಗೆ ಒಂದೇ ಸಾಲಿನಲ್ಲಿ ವರ್ಣಿಸಿಬಿಟ್ಟರು.

‘ಹಳ್ಳಿಯ ಮನೆ ನೋಡಿದೆವು. ಹಳ್ಳಿಯ ಜೀವನ, ಕೃಷಿ ಚಟುವಟಿಕೆಗಳನ್ನು ಅರ್ಥಮಾಡಿಕೊಂಡೆವು. ಮಡಿಕೆ, ಕುಡಿಕೆ ಮಾಡುವ ಬಗೆಯನ್ನು ಅರಿತೆವು. ಇದು ವಿದ್ಯಾರ್ಥಿಗಳಿಗೆ ಪ್ರತಿಕೃತಿಗಳ ಮೂಲಕ ಜಾನಪದ ಪಾಠ ಹೇಳುವ ಉತ್ತಮ ಶಾಲೆ. ಎಲ್ಲರೂ ಇಲ್ಲಿಗೆ ಬರಬೇಕು…’ ಎಂದು ಬಣ್ಣಿಸಿದ್ದು ಜಾನಪದ ಲೋಕ ನೋಡಲು ಬಂದ ಬೆಂಗಳೂರಿನ ಶಾಲೆಯೊಂದರ ಮಕ್ಕಳು ಮತ್ತು ಶಿಕ್ಷಕ ವೃಂದ.

ಜಾನಪದ ಲೋಕದಲ್ಲಿ ವಾರಾಂತ್ಯದಲ್ಲಿ ನಡೆಯುವ ಜಾನಪದ ಕಾರ್ಯಕ್ರಮಗಳ ಪ್ರದರ್ಶನ

ಹೀಗೆ ಜಾನಪದ ಲೋಕವನ್ನು ವರ್ಣಿಸುವಾಗ ಅವರ ಮಾತುಗಳಲ್ಲಿ ಸಂಭ್ರಮವಿತ್ತು. ಮುಖಭಾವದಲ್ಲಿ ಲೋಕದ ಸೌಂದರ್ಯವನ್ನು ಸವಿದ ಖುಷಿಯಿತ್ತು. ಈ ಮಾತುಗಳನ್ನು ಆಲಿಸುತ್ತಿದ್ದ ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಟಿ.ತಿಮ್ಮೇಗೌಡರು, ‘ಜಾನಪದ ಲೋಕದ ರೂವಾರಿ ನಾಡೋಜ ಎಚ್‌.ಎಲ್.ನಾಗೇಗೌಡರ ಕನಸು ಕೂಡ ಇದೇ ಆಗಿತ್ತು. ಈಗ ಅದು ಸಾಕಾರಗೊಳ್ಳುತ್ತಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

ಜಾನಪದ ಲೋಕವನ್ನು ಒಂದು ಸುತ್ತು ಹಾಕಿ ಬಂದ ಮೇಲೆ ‘ಈ ಎರಡೂವರೆ ದಶಕಗಳಲ್ಲಿ ಜಾನಪದ ಲೋಕ ಎಷ್ಟೆಲ್ಲ ತನ್ನ ಸೌಂದರ್ಯವನ್ನು ವೃದ್ಧಿಸಿಕೊಂಡಿದೆ’ ಎನ್ನಿಸಿತು. 90ರ ದಶಕದ ಅಂತ್ಯದಲ್ಲಿ ಇಲ್ಲಿಗೆ ಬಂದಿದ್ದಾಗ ಕಟ್ಟಡಗಳಷ್ಟೇ ಕಾಣುತ್ತಿದ್ದವು.ಆದರೆ ಈಗ ಕಟ್ಟಡಗಳ ನಡುವೆ ಹಸಿರು ಉಕ್ಕುತ್ತಿದೆ. ಮೇಲ್ಭಾಗದಲ್ಲಿ ಕೆರೆ, ಅಲ್ಲಿ ಹೆಚ್ಚಾದ ನೀರು ಹರಿಯಲು ತೊರೆ. ತೊರೆಯ ಅಂಚಿನಲ್ಲಿ ಗಿಡ ಮರಗಳು. ತೊರೆಯ ನಡುವೆ ನಿಜವಾದ ಜಿಂಕೆಗಳೇ ಮೇಯುತ್ತಿವೆಯೇನೋ ಎಂದು ಭಾವಮೂಡಿಸುವಂತಹ ಶಿಲ್ಪಗಳಿವೆ.

ಆಟಿ ಕಳಂಜದಪ್ರತಿಕೃತಿ

ನಾಗೇಗೌಡರ ಕನಸಿನ ‘ಲೋಕ’..

ನಾಗೇಗೌಡರ ಕಠಿಣ ಪರಿಶ್ರಮ, ಸಂಘಟನಾ ಶಕ್ತಿಯ ಫಲವಾಗಿ 1994ರ ಮಾರ್ಚ್ 12 ರಂದು ಈ ಜಾನಪದ ಲೋಕ ಆರಂಭವಾಯಿತು. ಸರ್ಕಾರದಲ್ಲಿ ಉನ್ನತ ಅಧಿಕಾರಿಯಾಗಿದ್ದ ಅವರು, ನಿವೃತ್ತಿಯ ನಂತರ ರಾಜ್ಯದಾದ್ಯಂತ ಸುತ್ತಾಡಿ ಕೃಷಿ, ಜಾನಪದ ಸಂಗೀತ ವಾದ್ಯಗಳಂತಹ ವಸ್ತುಗಳನ್ನು ಸಂಗ್ರಹಿಸಿದರು. ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಜಾನಪದ ಲೋಕ ಈಗ ದೇಶದ ಅತ್ಯಂತ ಮಹತ್ವದ ಸಾಂಸ್ಕೃತಿಕ ಕೇಂದ್ರವಾಗಿ ಬೆಳವಣಿಗೆ ಕಂಡಿದೆ.

ಈ ಲೋಕದೊಳಗೆ ಲೋಕಮಾತಾ ಮಂದಿರ, ಚಿತ್ರಕುಟೀರ, ಲೋಕಮಹಲ್, ಲೋಕಸಿರಿ, ಶಿಲ್ಪಮಾಳ, ಆಯಗಾರರ ಮಾಳ ಮತ್ತು ದೀವರು–ಹಲಸರು ಮಲೆನಾಡ ಮನೆಗಳಂತಹ ಏಳು ಮ್ಯೂಸಿಯಂಗಳಿವೆ. ಈ ಮ್ಯೂಸಿಯಂಗಳಲ್ಲಿ ಜಾನಪದ ಬೆಳವಣಿಗೆಯನ್ನು ಪ್ರತಿಬಿಂಬಿಸುವ ಚಿತ್ರಪಟಗಳಿವೆ. ಪುರಾತನ ಪರಿಕರಗಳಿವೆ. ‘ಲೋಕಮಹಲ್ ವಸ್ತು ಸಂಗ್ರಹಾಲಯದಲ್ಲಿ ಐದುಸಾವಿರಕ್ಕೂ ಹೆಚ್ಚು ವಸ್ತುಗಳನ್ನು ಕಲಾತ್ಮಕವಾಗಿ ಜೋಡಿಸಲಾಗಿದೆ’ ಎನ್ನುತ್ತಾರೆ ಜಾನಪದ ಲೋಕದ ಕ್ಯುರೇಟರ್ ಕುರುವ ಬಸವರಾಜು. ಈ ಮ್ಯೂಸಿಯಂಗಳು ಸುಣ್ಣಬಣ್ಣ ಹಚ್ಚಿಸಿಕೊಂಡು ನವೀಕೃತಗೊಂಡಿವೆ. ಪರಿಕರಗಳನ್ನು ಜೋಡಿಸುವ ಕಪಾಟುಗಳು ಆಧುನೀಕರಣಗೊಂಡಿವೆ.

ಜಾನಪದ ಲೋಕದೊಳಗಿನ ಸಸ್ಯ ಸಂಕುಲ

ಲೋಕದೊಳಗೊಂದು ಸುತ್ತಾಟ...

ಜಾನಪದ ಲೋಕದ ಪ್ರವೇಶದ್ವಾರವೇ ಆಕರ್ಷಣೆ. ಬೃಹದಾಕಾರದ ಕೊಂಬು ಕಹಳೆ ಹಾಗೂ ಹರಿಗೆಗಳಿಂದ ಅಲಂಕೃತವಾದ, ಇಪ್ಪತ್ತು ಅಡಿಗಳಷ್ಟು ವಿಶಾಲವಾದ ಮಹಾದ್ವಾರ, ದ್ವಾರದ ಎರಡೂ ಬದಿಯಲ್ಲಿ ಆಕಾಶಕ್ಕೆ ಚಾಚಿನಿಂತ ಇಪ್ಪತ್ತಾರು ಅಡಿ ಎತ್ತರದ ಹಿತ್ತಾಳೆಯ ನಂದಿ ಧ್ವಜಗಳು. ಮಹಾದ್ವಾರದಿಂದ ಒಳಗಡೆ ಪ್ರವೇಶಿಸುತ್ತಿದ್ದಂತೆ ಹಸಿರು ಚಾಮರ ಬೀಸಿದಂತೆ ಗಿಡಮರಗಳು ಸ್ವಾಗತಿ ಸುತ್ತವೆ. ಡೊಳ್ಳು ಕಲಾವಿದರ ಶಿಲ್ಪಗಳು ಲೋಕಸುತ್ತುವವರಲ್ಲಿ ಉತ್ಸಾಹ ತುಂಬುತ್ತವೆ. ಸ್ವಲ್ಪ ಮುಂದಕ್ಕೆ ಹೋದರೆ ಗಿರಿಜನರ ಅಡುಗೆ ಮನೆಯ ವಿವಿಧ ವಸ್ತುಗಳ ಸಂಗ್ರಹಾಲಯವಾದ ‘ಲೋಕಮಾತಾ ಮಂದಿರ’, ನಾಗೇಗೌಡರ ಜಾನಪದ ಬೆಳವಣಿಗೆಯನ್ನು ಪ್ರತಿಬಿಂಬಿಸುವ ‘ಚಿತ್ರಕುಟೀರ’, ಜಾನಪದಕ್ಕೆ ಸಂಬಂಧಪಟ್ಟ ಎಲ್ಲಾ ಬಗೆಯ ಕಲಾತ್ಮಕ ವಸ್ತುಗಳಿರುವ ಎರಡು ಅಂತಸ್ತುಗಳ ‘ಲೋಕಮಹಲ್’ ಇದೆ.ಮುಂದೆ ಕಲ್ಲಿನಲ್ಲಿ ಕಥೆ ಹೇಳುವ ವೀರಗಲ್ಲು, ಮಾಸ್ತಿಕಲ್ಲುಗಳ ‘ಶಿಲ್ಪಮಾಳ’, ಗ್ರಾಮೀಣ ಕಸುಬುಗಳನ್ನು ಅನಾವರಣಗೊಳಿಸುವ ‘ಆಯಗಾರರ ಮಾಳ’.. ಇವು ಮತ್ತಷ್ಟು ವಿಶಿಷ್ಟ ಆಕರ್ಷಣೆ ಸ್ಥಳಗಳು.

ಸುಮಾರು ಸಾವಿರ ಮಂದಿ ಕುಳಿತುಕೊಳ್ಳಬಹುದಾದ ಗ್ರೀಕ್ ಮಾದರಿಯ ಬಯಲು ರಂಗಮಂದಿರವಿದೆ. ಪ್ರತಿ ತಿಂಗಳ ಕೊನೆಯ ಭಾನುವಾರ ಇಲ್ಲಿ ಜಾನಪದ ಕಲೆಗಳ ಪ್ರದರ್ಶನ ನಡೆಯುತ್ತದೆ. ಹಿಂಭಾಗದಲ್ಲಿ ವಿಡಿಯೊ ಸ್ಕೋಪ್ ಥಿಯೇಟರ್‍ ಇದೆ. ಇಲ್ಲಿ ಜಾನಪದ ಕಲೆಗಳು, ಸಂಸ್ಕೃತಿ, ಸಂಗೀತಕ್ಕೆ ಸಂಬಂಧಿಸಿದ ಚಲನಚಿತ್ರಗಳನ್ನು ವಿಶಾಲವಾದ ಪರದೆಯ ಮೇಲೆ ಆರಾಮವಾಗಿ ಕುಳಿತು ವೀಕ್ಷಿಸಬಹುದು.ಮ್ಯೂಸಿಯಂಗಳನ್ನು ಪರಿಚಯಿಸಲು ಗೈಡ್‌ ಇದ್ದಾರೆ. ವಸ್ತುಸಂಗ್ರಹಾಲಯವನ್ನು ವಿವರಿಸುತ್ತಲೇ, ಅವರು ಸುಶ್ರಾವ್ಯವಾಗಿ ಜನಪದ ಗೀತೆಗಳನ್ನು ಹಾಡುತ್ತಾರೆ.

‘ದೊಡ್ಡಮನೆ’ ಅಂಗಳದಲ್ಲಿ..

ಕಲಾವಿದರು ತಂಗಲೆಂದೇ ತೊಟ್ಟಿ, ಕಂಬಗಳನ್ನೊಳ ಗೊಂಡ ‘ದೊಡ್ಡಮನೆ’ ಇದೆ. ನಿಮಗೆ ನೆನಪಿರಬಹುದು. ದೂರದರ್ಶನದಲ್ಲಿ ‘ಸಿರಿಗಂಧ’ಎಂಬ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ಅದು ಚಿತ್ರೀಕರಣಗೊಂಡಿದ್ದು ಇದೇ ದೊಡ್ಡಮನೆಯಲ್ಲಿ. ಆ ಸೆಟ್ ಈಗಲೂ ಹಾಗೆ ಇದೆ. ಇಲ್ಲಿ ಜಾನಪದ ಅಭಿರುಚಿ ಶಿಬಿರ, ಜಾನಪದ ಸಂಶೋಧನಾ ಕಮ್ಮಟ, ವಿಚಾರ ಸಂಕಿರಣಗಳು ನಡೆಯುತ್ತಿರುತ್ತವೆ. ವಸತಿಗೂ ಅವಕಾಶವಿದೆ. ಡೊಳ್ಳು ಕುಣಿತ, ಕೋಲಾಟ, ಗೊರವರ ಕುಣಿತ ಇವೇ ಮೊದಲಾದ ಪ್ರದರ್ಶಕ ಕಲೆಗಳಲ್ಲಿ ತರಬೇತಿ ನಿರಂತರವಾಗಿ ನಡೆಯುತ್ತಿದೆ.

ವಾರಾಂತ್ಯ ಪ್ರದರ್ಶನ ಕಲೆಗಳು..

ಜಾನಪದ ಲೋಕದ ಒಳಭಾಗದಲ್ಲಿ ವಿಶಾಲವಾದ ಕೆರೆ ಇದೆ. ಇಲ್ಲಿ ಮಕ್ಕಳಿಗಾಗಿ ದೋಣಿ ವಿಹಾರದ ವ್ಯವಸ್ಥೆ ಕಲ್ಪಿಸಲಾಗಿದೆ. ಇದರ ಜತೆಗೆ ಆಟದ ಮಾಳದಲ್ಲಿ ಪ್ರವಾಸಿಗರಿಗಾಗಿ, ಶನಿವಾರ– ಭಾನುವಾರ ಪ್ರದರ್ಶನ ಕಲೆಗಳನ್ನು ಏರ್ಪಡಿಸುತ್ತದೆ. ಲೋಕದೊಳಗೆ ಸುತ್ತಾಡಿ ಹಸಿವಾದರೆ ಪಕ್ಕದಲ್ಲೇ ಕಾಮತ್‌ ಲೋಕರುಚಿ ಹೋಟೆಲ್ ಇದೆ. ಇಲ್ಲಿ ರಾಗಿ ಮುದ್ದೆ, ಜೋಳದ ರೊಟ್ಟಿ, ಸೊಪ್ಪಿನ ಸಾರು.. ಇಂಥ ದೇಸಿ ಆಹಾರ ಸಿಗುತ್ತದೆ.

ಶಾಲಾ ಮಕ್ಕಳಿಗೆ ಮಡಿಕೆ ತಯಾರಿಕೆ ಪ್ರಾತ್ಯಕ್ಷಿಕೆ ನೀಡುತ್ತಿರುವ ಅನುಸೂಯ ಬಾಯಿ

ಜಾನಪದ ಶಿಕ್ಷಣಕ್ಕೂ ಆದ್ಯತೆ

‘1999ರಿಂದ ಜಾನಪದ ಮಹಾವಿದ್ಯಾಲಯ ಆರಂಭವಾಗಿದೆ ‘ಜಾನಪದ ಸರ್ಟಿಫಿಕೇಟ್’ ಮತ್ತು ‘ಜಾನಪದ ಡಿಪ್ಲೊಮಾ’ ಕೋರ್ಸ್‌ಗಳನ್ನು ದಶಕಕ್ಕೂ ಹೆಚ್ಚು ಕಾಲದಿಂದ ನಡೆಸಿಕೊಂಡು ಬರಲಾಗುತ್ತಿದೆ. ತರಗತಿಗಳು ಪ್ರತಿ ಭಾನುವಾರಗಳಂದು ಮಾತ್ರ ನಡೆಯುತ್ತವೆ’ ಎನ್ನುತ್ತಾರೆ ಜಾನಪದ ಲೋಕದ ಸಿಬ್ಬಂದಿ.

ಒಟ್ಟಿನಲ್ಲಿ ಜಾನಪದ ಲೋಕ ಹಿರಿಯರಿಗೆ, ಮಕ್ಕಳಿಗೆ ವಿಹಾರ ತಾಣವಾಗಿದೆ. ವಿದ್ವಾಂಸರು, ಆಸಕ್ತರು, ಸಂಶೋಧಕರ ಪಾಲಿಗೆ ಅಮೂಲ್ಯವಾದ ಆಕರ ಜಗತ್ತು. ಪ್ರವಾಸಿಗರಿಗೆ ಗ್ರಾಮೀಣದ ಬದುಕನ್ನು ಪರಿಚಯಿಸುವ ಪ್ರವಾಸಿ ತಾಣವಾಗಿ ಸರ್ವರನ್ನೂ ಕೈಬೀಸಿ ಕರೆಯುತ್ತಿದೆ.

ಒಂದೇ ಮಾತಿನಲ್ಲಿ ಹೇಳುವುದಾದರೆ, ಜನಪದಲೋಕ ಎಂಬ ಒಂದೇ ಸೂರಿನಡಿ ಕರ್ನಾಟಕದ ಜಾನಪದ ಜಗತ್ತು ಅನಾವರಣಗೊಂಡಿದೆ.

16ಕ್ಕೆ ಬೆಳ್ಳಿಹಬ್ಬ- 18ಕ್ಕೆ ‘ಲೋಕೋತ್ಸವ’

ಜಾನಪದ ಲೋಕ ಆರಂಭವಾಗಿ 25 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಫೆಬ್ರುವರಿ 16ರಂದು ಬೆಂಗಳೂರಿನ ರವೀಂದ್ರಕಲಾ ಕ್ಷೇತ್ರದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ‘ಬೆಳ್ಳಿಹಬ್ಬ’ ಸಮಾರಂಭ ಆಯೋಜಿಸಲಾಗಿದೆ. ಆದಿಚುಂಚನಗಿರಿಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥಸ್ವಾಮೀಜಿ ಸಾನಿಧ್ಯದಲ್ಲಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಕಲಾವಿದರಿಗೆ ಸನ್ಮಾನ, ಬೆಳ್ಳಿಹಬ್ಬದ ಸಂಚಿಕೆ ಬಿಡುಗಡೆಯಂತಹ ಕಾರ್ಯಕ್ರಮಗಳಿವೆ. 18ರಂದು ರಾಮನಗರ ಬಳಿಯ ‘ಜಾನಪದ ಲೋಕ’ದಲ್ಲಿ ಬೆಳ್ಳಿಹಬ್ಬದ ನೆನಪಿಗಾಗಿ ‘ಲೋಕೋತ್ಸವ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಜಾನಪದ ಲೋಕದಲ್ಲಿನ ಪ್ರತಿಕೃತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT