7
ಚೌಕಟ್ಟು

ದೂಳಿನ ಬಣ್ಣ ನೋಡೊ ಅಣ್ಣಾ....

Published:
Updated:

ನಗರದ ಹೊರವಲಯದ ಹೊಸಕೋಟೆ ಬಳಿ ದೊಡ್ಡ ಅಮಾನಿಕೆರೆಯ ಹಿನ್ನೀರಿನ ಪ್ರದೇಶದ ಹೊಲಗಳು ವಸತಿ ಸಂಕೀರ್ಣಗಳ ಭರಾಟೆಯಿಂದ ಮಾಯವಾಗುತ್ತಾ ಸಾಗಿವೆ.

ಅಲ್ಲಲ್ಲಿ ಅಳಿದುಳಿದ ಪುಟ್ಟ ಹೊಲಗಳಲ್ಲಿ ರೈತರು ಎತ್ತುಗಳಿಗೆ ನೊಗ ಕಟ್ಟಿ ಉಳುಮೆ ಮಾಡುತ್ತಿದ್ದ ಅನ್ನದಾತನ ಅಪರೂಪದ ದರ್ಶನ ಮಾಡಿಸುತ್ತದೆ ಈ ದೃಶ್ಯ. ಕನಕಪುರ ರಸ್ತೆಯ ಸಮೀಪದ ಬಿಕಾಸಿಪುರ ವಾಸಿ ಬರಹಗಾರ್ತಿ ಹಾಗೂ ಕವಿಯತ್ರಿ ಎಂ.ಆರ್.ಭಗವತಿ, ಅವರಿಗೆ ಈ ಅಪರೂಪದ ದೃಶ್ಯ ಕೆರೆಯಂಚಿನ ಪುಟ್ಟ ಹೊಲದಲ್ಲಿ ಕಣ್ಣಿಗೆ ಬಿದ್ದಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಆಂಗ್ಲಭಾಷೆಯಲ್ಲಿ ಎಂ.ಎ. ಸ್ನಾತಕೋತ್ತರ ಪದವಿ ಪಡೆದಿರುವ ಭಗವತಿ, ಕೆಲ ಕವನ ಸಂಕಲನಗಳನ್ನೂ ಹೊರತಂದಿದ್ದಾರೆ.

ಎದುರು ಸೂರ್ಯನ ಬೆಳಕಲ್ಲಿ ದೂಳೆಬ್ಬಿಸುತ್ತಾ ಏಕಾಗ್ರತೆಯಿಂದ ಕ್ರಿಯಾಶೀಲರಾಗಿದ್ದ ರೈತ ಹಾಗೂ ಜೋಡಿ ಎತ್ತುಗಳ ಆ್ಯಕ್ಷನ್ ಭಂಗಿಯನ್ನು ಅವರು ದೂರದಿಂದ ಕ್ಯಾಮೆರಾದಲ್ಲಿ ಸೆರೆಹಿಡಿದೇ ಬಿಟ್ಟರು. 

ಹತ್ತು ವರ್ಷಗಳಿಂದಲೂ ವನ್ಯ ಪಕ್ಷಿ, ಭಾವಚಿತ್ರ, ಕ್ಯಾಂಡಿಡ್, ಮಕ್ಕಳು, ಕ್ರೀಡಾ ಛಾಯಾಗ್ರಹಣದಲ್ಲಿ ಹವ್ಯಾಸ ಬೆಳಸಿಕೊಂಡಿದ್ದಾರೆ. ಇಲ್ಲಿ ಅವರು ಬಳಸಿದ ಕ್ಯಾಮೆರಾ, ಕೆನಾನ್ 1100 ಡಿ. ಜೊತೆಗೆ 100 – 400 ಎಂ.ಎಂ. ಜೂಮ್ ಲೆನ್ಸ್. ಈ ಚಿತ್ರದ ಎಕ್ಸ್ ಪೋಷರ್‌ನ ವಿವರ ಇಂತಿವೆ:

400 ಎಂ.ಎಂ. ಫೋಕಲ್ ಲೆಂಗ್ತ್‌ನ ಜೂಂ ಲೆನ್ಸ್ ಅಳವಡಿಸಿದ್ದು, ಅಪರ್ಚರ್ ಎಫ್. 5.6, ಶಟರ್ ವೇಗ  1/1000 ಸೆಕೆಂಡ್, ಐ.ಎಸ್.ಒ 200 , ಫ್ಲಾಶ್ ಬಳಸಿಲ್ಲ. ಮನೋಪಾಡ್ (ಟ್ರೈಪಾಡ್ ಬದಲು) ಬಳಸಲಾಗಿದೆ.

ಈ ಚಿತ್ರದೊಂದಿಗೆ ತಾಂತ್ರಿಕ ಮತ್ತು ಕಲಾತ್ಮಕ ಅನುಸಂಧಾನದ ಕೆಲವು ಅಂಶಗಳೂ ಇಂತಿವೆ:

* ಇಳಿ ಸೂರ್ಯನ ಎದುರು ಬೆಳಕಿನ ಸಂದರ್ಭವಾಗಿದ್ದು, ರೈತ ಹಾಗೂ ಎತ್ತುಗಳು ಚಲನೆಯಲ್ಲಿದ್ದಿದ್ದರಿಂದ ಹಾಗೂ ದೂರದಿಂದ ಜೂಮ್ ಲೆನ್ಸ್ ಬಳಸಿರುವುದರಿಂದ, ಎಕ್ಸ್ ಪೋಷರ್ ಅಂಶಗಳೆಲ್ಲವನ್ನೂ ಸರಿಯಾಗಿ ಹೊಂದಿಸುವುದು ಒಂದು ಸವಾಲೇ ಸರಿ. ಭಗವತಿಯವರ ಅನುಭವ ಇಲ್ಲಿ ಸಹಕಾರಿಯಾಗಿದೆ.

* ಚಲನೆಯನ್ನು ಸ್ಥಿರಗೊಳಿಸಲು (ಫ್ರೀಜ್) ಬಹು ಹೆಚ್ಚಿನ ಶಟರ್ ವೇಗ, ಹಿನ್ನೆಲೆಯ ಹೊಲದ ಮತ್ತು ಕಟ್ಟಡ , ಮರ- ಗಿಡಗಳ ಭಾಗಗಳನ್ನು ಮಂದವಾಗಿಸಿ (ಔಟ್ ಆಫ್ ಫೋಕಸ್), ಮುಖ್ಯವಸ್ತುವನ್ನು (ರೈತ- ಎತ್ತಿನ ಜೋಡಿ) ಸ್ಫುಟವಾಗಿ ಕೇಂದ್ರೀಕರಿಸಿ, ಮೇಲೆದ್ದ ಹಳದಿ ಬಣ್ಣದ ದೂಳಿನ ಪ್ರಭೆಯನ್ನೂ ಇಮ್ಮಡಿಸಿ, ಚಿತ್ರದ ಪ್ರಭಾವವನ್ನು ಪರಿಣಾಮಕಾರಿಯಾಗಿ ಮೂಡಿಸುವಲ್ಲಿ, ಮಧ್ಯಮ ಅಳತೆಯ ಅಪಾರ್ಚರ್ ಮತ್ತು  ಐ.ಎಸ್.ಒ ಸೆನ್ಸಿಟಿವಿಟಿಯು ಉತ್ತಮ ಕೆಲಸಮಾಡಿವೆ.

* ದೂರದಿಂದ ಉದ್ದನೆಯ ಜೂಮ್‌ನಲ್ಲಿ ಚಲನೆಯನ್ನು ಸೆರೆಹಿಡಿಯುವಾಗ ಅಲುಗಾಟ ತಪ್ಪಿಸಲು ಇಲ್ಲಿನಂತೆ ಟ್ರೈ ಪಾಡ್ ಅಥವಾ ಮಾನೋಪಾಡ್‌ನ ಬಳಕೆ ಸಹಕಾರಿ. ರೈತನ- ಎತ್ತುಗಳ ದೈನಂದಿನ ಈ ಕಾಯಕ, ಸಾಮಾನ್ಯವಾದ ಬದುಕಿನ ಸಂದರ್ಭವಾಗಿದ್ದರೂ, ಇಡೀ ಚಿತ್ರಣವೇ ಒಂದು ಸುಂದರ ಪೇಂಟಿಂಗ್ ತರಹ ನೋಡುಗನ ಕಣ್ಣುಗಳನ್ನು ತನ್ನೆಡೆಗೆ ಸೆಳೆಯಬಲ್ಲದಾಗಿದೆ. ಎತ್ತುಗಳ ಕಾಲ್ತುಳಿತದಿಂದ ಮತ್ತು ನೊಗದಂಚಿನಿಂದ ಚಿಮ್ಮುತ್ತಿರುವ ಹಳದಿ- ಕಂದು ಬಣ್ಣದ ದೂಳೆಲ್ಲವೂ ಎದುರು ಬೆಳಕಿನ ದೆಸೆಯಿಂದ ಎರಕಹೊಯ್ದಂತಾಗಿರುವ ಮೋಹಕ ನೋಟ. ಹಿನ್ನೆಲೆಯ ದೃಶವೆಲ್ಲವೂ ಮಂದವಾದ ವರ್ಣ ಪ್ರಸರಣ (ಟೊನಲ್ ಡಿಸ್ಟ್ರಿಬ್ಯೂಷನ್) ಹೊಂದಿದ್ದು, ಮುಖ್ಯ ವಸ್ತುವನ್ನು ತೀಕ್ಷ್ಣಗೊಳಿಸಿ (ಕ್ರಿಸ್ಪ್), ಆ ಚಲನ ಶೀಲ ಕಾಯಕದ ಮಹತ್ವಕ್ಕೆ ಕಣ್ಣನ್ನು ಪರಿಣಾಮಕಾರಿಯಾಗಿ ನಾಟಿಸುವುದಾಗಿದೆ (ಚಿತ್ರ ಪ್ರವೇಶ ಬಿಂದು-ಎಂಟ್ರಿ ಪಾಯಿಂಟ್ ಅದಾಗಿದೆ).

* ಚಿತ್ರಕಲಾ ವಿಶ್ಲೇಷಣೆಯ ಮಾನದಂಡದಲ್ಲಿ, ಚಿತ್ರದ ಪ್ರವೇಶ ಬಿಂದುವು ಚೌಕಟ್ಟಿನ ಒಂದು ಮೂರಾಂಶದ ಉದ್ದ-ಅಡ್ಡ ಗೀಟುಗಳ ಯಾವುದಾದರೊಂದು ನಾಲ್ಕು ಸಂಧಿಗಳಲ್ಲಿ ಮುಖ್ಯವಾದೊಂದು ಭಾಗದಲ್ಲಿ ಇರುವುದು ಅವಶ್ಯಕ. ಇಲ್ಲಿ, ಎತ್ತುಗಳ ಕಾಲುಗಳ ಮತ್ತು ಇಲ್ಲಿಂದೇಳುವ ಹೊಳಪಿನ ದೂಳು, ರೈತನ ಕೋಲುಹಿಡಿದ ಕೈಯ್ಯಿ, ಇಡೀ ಚಿತ್ರ ಚೌಕಟ್ಟಿನ ಆಕರ್ಷಕ ಭಾಗ. ಅದು ಕೆಳ-ಬಲ ಭಾಗದ ಸಂಧಿಗನುಗುಣವಾಗಿ ಬಂದಿದೆ. ಅಂತೆಯೇ ಅದರ ಮುಂಬದಿಯಲ್ಲಿ ರಿಲೀಫ್ ಜಾಗ 
ಸಾಕಷ್ಟು ಇರುವುದು ಚಿತ್ರದ ಸೌಂದರ್ಯವನ್ನು ಹೆಚ್ಚಿಸಿದೆ.

* ಮಧ್ಯಮ ಅಳತೆಯ ಅಪರ್ಚರ್ ದೆಸೆಯಿಂದ, ಎತ್ತುಗಳ ಮುಂಬದಿಯಲ್ಲಿ ಮತ್ತು ಹಿಂಬದಿಯಲ್ಲಿ ಹಸಿರು ದೊಡ್ಡ ಗಿಡಗಳೆರಡು ಉತ್ತಮವಾಗಿ ಫೋಕಸ್ ರೇಂಜ್‌ಗೆ ಒಳಪಟ್ಟಿದ್ದು (ಡೆಪ್ತ್ ಆಫ್ ಫೀಲ್ಡ್) , ಹಿನ್ನೆಲೆಯನ್ನು ಮಂದವಾಗಿಸಿರುವುದು, ಇಡೀ ಚಿತ್ರಣಕ್ಕೇ ಮೂರು ಆಯಾಮದ (ಥ್ರೀ-ಡಿ) ಪರಿಣಾಮವನ್ನು ಚೆನ್ನಾಗಿಯೇ ಮೂಡಿಸಿದೆ. ಅಂತೆಯೇ ಸಾಕಷ್ಟು ಪೂರ್ವತಯಾರಿ ಮತ್ತು ಕೈಗೂಡಿಸಿಕೊಂಡ ಪರಿಣಿತಿಯಿಂದ, ಅಕಸ್ಮಾತ್ ದೊರಕಿದ ಕ್ಷಣಮಾತ್ರದ ಅವಕಾಶವನ್ನು ಪರಿಣಾಮಕಾರಿಯಾಗಿ ಫಲಪ್ರದಗೊಳಿಸುವಂತೆ ಛಾಯಾಗ್ರಹಣಮಾಡಿರುವ ಭಗವತಿ  ಅಭಿನಂದನಾರ್ಹರು.

*

ಎಂ.ಆರ್.ಭಗವತಿ

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !