ಶನಿವಾರ, ಜೂನ್ 6, 2020
27 °C

ಮಳೆಯಲ್ಲಿ ಹಕ್ಕಿಗಳು ಹಾರಬಲ್ಲವೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಳೆಗಾಲ ಶುರುವಾಗಲು ಇನ್ನೊಂದು ವಾರ ಮಾತ್ರ ಬಾಕಿ ಇದೆ. ಮಳೆ ಮತ್ತು ಹಕ್ಕಿಗಳನ್ನು ಇಷ್ಟಪಡದ ಮಕ್ಕಳು ಇರಲಿಕ್ಕಿಲ್ಲ. ಮಕ್ಕಳಿಗೆ ಹಕ್ಕಿ ಹಾರುವುದನ್ನು ನೋಡುವುದು ಇಷ್ಟ. ದೊಡ್ಡವರು ಎಷ್ಟೇ ಬೈದರೂ, ಮಳೆಯಲ್ಲಿ ಮೈ ನೆನೆಸಿಕೊಳ್ಳುವುದು ಚಿಣ್ಣರಿಗೆ ಇಷ್ಟ. ಆದರೆ, ಒಂದು ವಿಷಯದ ಬಗ್ಗೆ ಆಲೋಚಿಸಿದ್ದೀರಾ? ಮಳೆ ಹುಯ್ಯುವಾಗ ಹಕ್ಕಿಗಳು ಎಂದಿನಂತೆ ಆರಾಮವಾಗಿ ಹಾರಬಲ್ಲವೇ? ಪಟಪಟನೆ ಬೀಳುವ ನೀರಹನಿಗಳು ಅವುಗಳಿಗೆ ರೆಕ್ಕೆ ಬಡಿಯಲು ಅಡ್ಡಿ ಮಾಡುವುದಿಲ್ಲವೇ?!

ಮಳೆ ಬೀಳುವಾಗ ಕೂಡ ಹಕ್ಕಿಗಳು ಹಾರಬಲ್ಲವು. ಆದರೆ, ಅವು ಸಲೀಸಾಗಿ ಹಾರಾಟ ನಡೆಸಲಾರವು. ಹಾಗಾಗಿ, ಮಳೆ ಸುರಿಯುವ ಹೊತ್ತಿನಲ್ಲಿ ಹಕ್ಕಿಗಳು ತಾವಿದ್ದಲ್ಲೇ ಇರಲು ಬಯಸುತ್ತವೆ. ಕೆಲವು ಹಕ್ಕಿಗಳು ಏನಾದರೂ ಆಹಾರ ಹುಡುಕಲು ಹತ್ತಿರದ ಸ್ಥಳಗಳಿಗೆ ಹಾರಿಹೋಗಬಹುದು, ಅಷ್ಟೇ. ಆದರೆ, ಹೀಗೆ ಸಲೀಸಾಗಿ ಹಾರಲು ಆಗದಿರುವುದಕ್ಕೆ ನೇರ ಕಾರಣ ಮಳೆಹನಿಗಳು ಅಲ್ಲ ಎನ್ನುತ್ತಾರೆ ವಿಜ್ಞಾನಿಗಳು.

ಅಂದಹಾಗೆ, ಹಕ್ಕಿಗಳಿಗೆ ನಿಜವಾದ ಸಮಸ್ಯೆಯನ್ನು ತಂದೊಡ್ಡುವುದು ನೀರಿನ ಹನಿಗಳಲ್ಲವಂತೆ. ಅವುಗಳ ಬದಲು, ಗಾಳಿಯ ಒತ್ತಡದಲ್ಲಿನ ಕುಸಿತದ ಪರಿಣಾಮವಾಗಿ ಹಕ್ಕಿಗಳಿಗೆ ಮಳೆ ಸುರಿಯುವಾಗ ಹಾರಾಟ ನಡೆಸುವುದು ಕಷ್ಟವಾಗುತ್ತದೆ. ಗಾಳಿಯ ಒತ್ತಡ ಕಡಿಮೆಯಾದಾಗ, ಗಾಳಿಯ ಸಾಂದ್ರತೆ ಕೂಡ ಕಡಿಮೆ ಇರುತ್ತದೆ. ಇದರಿಂದಾಗಿ ಹಕ್ಕಿಗಳಿಗೆ ಹಾರಾಟ ನಡೆಸಲು ಹೆಚ್ಚಿನ ಶಕ್ತಿ ಬೇಕಾಗುತ್ತದೆ. ಹೀಗಾಗಿ, ಮಳೆ ಧೋ ಎಂದು ಸುರಿಯುವ ಹೊತ್ತಿನಲ್ಲಿ ಹಕ್ಕಿಗಳು ಸಾಮಾನ್ಯವಾಗಿ ಮಳೆಯಿಂದ ಆಶ್ರಯ ಪಡೆದುಕೊಳ್ಳುತ್ತವೆ.

ಮಳೆ ಸುರಿಯುವಾಗ ವಿದ್ಯುತ್ ತಂತಿಗಳ ಮೇಲೆ ಹಕ್ಕಿಗಳು ಕುಳಿತು ವಿಶ್ರಾಂತಿ ಪಡೆದುಕೊಳ್ಳುವುದು ಕೂಡ ಸಾಮಾನ್ಯ. ಹಕ್ಕಿಗಳ ಮೈಮೇಲೆ ಇರುವ ಗರಿಯು ಅವುಗಳನ್ನು ನೀರಿನಿಂದ ರಕ್ಷಿಸುತ್ತವೆ. ಅಲ್ಲದೆ, ಹಕ್ಕಿಗಳು ಸ್ರವಿಸುವ ಒಂದು ಬಗೆಯ ತೈಲವು ಹಕ್ಕಿಗಳ ಮೈ ನೀರಿನಿಂದ ತೋಯ್ದುಹೋಗದಂತೆ ನೋಡಿಕೊಳ್ಳುತ್ತದೆ.

ಮಳೆ ನೀರಿನಿಂದ ಹೆಚ್ಚು ತೊಂದರೆಗೆ ಒಳಗಾಗದಂತೆ ಪ್ರಕೃತಿಯೇ ರಕ್ಷಣೆ ಒದಗಿಸಿದ್ದರೂ, ಬಹುತೇಕ ಹಕ್ಕಿಗಳಿಗೆ ಮಳೆ ಆಗಿಬರುವುದಿಲ್ಲ ಎನ್ನುತ್ತಾರೆ ವಿಜ್ಞಾನಿಗಳು. ಮಳೆ ಸುರಿಯುವ ಹೊತ್ತಿನಲ್ಲಿ ಹಕ್ಕಿಗಳು ಒತ್ತಡಕ್ಕೆ ಒಳಗಾಗುವುದಿದೆ ಎಂಬುದನ್ನು 2010ರಲ್ಲಿ ನಡೆದ ಅಧ್ಯಯನವೊಂದು ಕಂಡುಕೊಂಡಿದೆಯಂತೆ.

ಇದು ಕೊಸ್ಟಾ ರಿಕಾದ ಮಳೆಕಾಡುಗಳಲ್ಲಿ ವಾಸ ಮಾಡುವ ಹಕ್ಕಿಗಳ ಮೇಲೆ ನಡೆದ ಸಂಶೋಧನೆ. ಮಳೆಗಾಲದ ಹೊತ್ತಿನಲ್ಲಿ ಹಕ್ಕಿಗಳ ರಕ್ತದಲ್ಲಿ ಒತ್ತಡಕ್ಕೆ ಸಂಬಂಧಿಸಿದ ಹಾರ್ಮೋನುಗಳ ಪ್ರಮಾಣ ಹೆಚ್ಚು ಇತ್ತು ಎಂಬುದನ್ನು ಈ ಸಂಶೋಧನೆಯು ಕಂಡುಕೊಂಡಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು