ಹ ಸಿರಿನಿಂದ ಕಂಗೊಳಿಸುವ ಗುಡ್ಡಗಳ ನಡುವಿರುವ ಊರದು. ಅಲ್ಲೊಂದು ಶ್ರದ್ಧಾ ಕೇಂದ್ರ. ಅದು ದೇವಾಲಯವೂ ಹೌದು; ಚರ್ಚ್, ಆಶ್ರಮವೂ ಹೌದು. ಅಷ್ಟೇ ಅಲ್ಲ, ಮಠ ಹಾಗೂ ಭಾವೈಕ್ಯದ ಕೇಂದ್ರವೂ ಕೂಡ. ಅಲ್ಲಿ ಹಿಂದೂ ಧರ್ಮೀಯರು ಪೂಜಿಸುವ ಶಿವಲಿಂಗವಿದೆ. ಕ್ರೈಸ್ತರು ಆರಾಧಿಸುವ ಯೇಸು ಕ್ರಿಸ್ತ ಹಾಗೂ ಮೇರಿಯ ಮೂರ್ತಿಗಳೂ ಇವೆ. ಒಂದೇ ಸೂರಿನಡಿ ಇರುವ ಎರಡು ಧರ್ಮಗಳ ದೇವರುಗಳಿಗೆ ನಿತ್ಯವೂ ಆರಾಧನೆ ಸಲ್ಲುತ್ತದೆ. ಇಲ್ಲಿ ನಿತ್ಯವೂ ಭಾವೈಕ್ಯದ ಹಾಗೂ ಸೌಹಾರ್ದದ ಸಂದೇಶ ಸಾರುವ ತೇರಿನ ಮೆರವಣಿಗೆ.

ಇದು ಬೆಳಗಾವಿ ಜಿಲ್ಲಾ ಕೇಂದ್ರದಿಂದ 26 ಕಿ.ಮೀ. ದೂರದಲ್ಲಿರುವ ಬೈಲಹೊಂಗಲ ತಾಲ್ಲೂಕಿನ ದೇಶನೂರು ಗ್ರಾಮದ ವಿಶೇಷ.

ಐದು ಸಾವಿರ ಜನಸಂಖ್ಯೆ ಇರುವ ಈ ಗ್ರಾಮದಲ್ಲಿ ಹಿಂದೂಗಳೇ ಹೆಚ್ಚಾಗಿ ನಡೆದುಕೊಳ್ಳುವ ದೇವಾಲಯವೇ ಆಗಿದೆ ಈ ‘ಚರ್ಚಾಲಯ’. ಇದರ ಹೆಸರು ‘ಸ್ನಾನಿಕ ಅರುಳಪ್ಪನವರ ವಿರಕ್ತಮಠ’.

ಎಲ್ಲದಕ್ಕೂ ಜನರ ನಮನ
ಕಟ್ಟಡವನ್ನು ಹಿಂದೂ ಪರಂಪರೆಯ ದೇಗುಲದ ರೀತಿಯಲ್ಲಿಯೇ ನಿರ್ಮಿಸಲಾಗಿದೆ. ಗೋಡೆಗಳ ಅಲ್ಲಲ್ಲಿ ಹಾಗೂ ಒಳಗೆ ಶಿಲುಬೆಯ ಚಿತ್ರಗಳಿವೆ ಹಾಗೂ ಆಕೃತಿಗಳಿವೆ. ಗರ್ಭಗುಡಿಯಲ್ಲಿ ಶಿವಲಿಂಗ ಇದ್ದರೆ, ಎಡ ತುದಿಯಲ್ಲಿ ಯೇಸು ಹಾಗೂ ಬಲತುದಿಯಲ್ಲಿ ಮೇರಿಯ ಮೂರ್ತಿಗಳಿವೆ. ಇವೆಲ್ಲವಕ್ಕೂ ಜನರು ನಮಿಸುತ್ತಾರೆ.

ಕಟ್ಟಡದ ಹೊರಗೆ ಹಾಗೂ ಒಳಗಿನ ಗೋಡೆಗಳಲ್ಲಿ ಅಲ್ಲಲ್ಲಿ ಸಂತರು, ಶರಣರು, ದಾಸರು, ದಾರ್ಶನಿಕರು ಹಾಗೂ ಅನುಭಾವಿಗಳು ಹೇಳಿರುವ ಮಾನವೀಯ ಮೌಲ್ಯ ಮತ್ತು ಸೌಹಾರ್ದದ ಮಹತ್ವ ಸಾರುವ ಸಂದೇಶಗಳನ್ನು ಬರೆಸಲಾಗಿದೆ. ಇದು ಒಂದು ರೀತಿ ‘ಮಂದಿರಗಳ ಸಮಾಗಮದ ಅನುಭಾವ ಕೇಂದ್ರ’ದಂತೆ ಭಾಸವಾಗುತ್ತದೆ !

ಎಲ್ಲ ದೇವರ ತತ್ವ
ಇಲ್ಲಿ ಪೂಜೆಯ ಸಮಯದಲ್ಲಿ ‘ದೇವರೊಬ್ಬನೇ ನಾಮ ಹಲವು ಹಾಗೂ ಎಲ್ಲ ದೇವರುಗಳೂ ಹೇಳಿರುವುದು ಒಂದನ್ನೇ’ ಎಂಬ ತತ್ವವನ್ನು ಬೋಧಿಸಲಾಗುತ್ತದೆ. ಹೀಗಾಗಿ, ಇದಕ್ಕೆ ಚರ್ಚ್ ಎನ್ನುವುದಕ್ಕಿಂತ ‘ಗುಡಿ’ ಎಂದೇ ಜನಪ್ರಿಯವಾಗಿದೆ. ಭಾವೈಕ್ಯ ಸಾರುವ ಈ ಕೇಂದ್ರಕ್ಕೆ ಮುಸ್ಲಿಮರೂ ಬರುತ್ತಾರೆ. ರಾಜ್ಯದ ವಿವಿಧೆಡೆಯಿಂದ ಹಾಗೂ ಗೋವಾ. ಮಹಾರಾಷ್ಟ್ರದಿಂದಲೂ ಇದನ್ನು ವೀಕ್ಷಿಸಲು ಆಸಕ್ತರು ಬರುವುದು ಸಾಮಾನ್ಯವಾಗಿದೆ.

ಇಲ್ಲಿ ಸ್ವಾಮೀಜಿ ಹಾಗೂ ಫಾದರ್ ಆಗಿರುವ ಸ್ವಾಮಿ ಮೆನಿನೊ, ಭಾನುವಾರ ಹಾಗೂ ಬುಧವಾರ ವಿವಿಧ ರೋಗಗಳಿಗೆ (ಗಂಭೀರ ಕಾಯಿಲೆಗಳನ್ನು ಬಿಟ್ಟು) ಗಿಡಮೂಲಿಕೆಗಳಿಂದ ಸಿದ್ಧಪಡಿಸಿದ ಔಷಧ ಕೊಡುತ್ತಾರೆ. ಈ ಉಚಿತ ಆರೋಗ್ಯ ಸೇವೆ ಪಡೆಯಲು ಸ್ಥಳೀಯರ ಜತೆಗೆ ಸುತ್ತಮುತ್ತಲಿನ ಗ್ರಾಮಗಳ ಜನರೂ ಬರುತ್ತಾರೆ. ‘ಇಲ್ಲಿ ಔಷಧಿ ಪಡೆದರೆ ರೋಗ ಗುಣಮುಖವಾಗುತ್ತದೆ’ ಎಂಬ ನಂಬಿಕೆ ಆ ಜನರಲ್ಲಿದೆ. ಹೀಗಾಗಿ, ಕೇಂದ್ರಕ್ಕೆ ಶ್ರದ್ಧೆಯಿಂದ ನಡೆದು ಕೊಳ್ಳುತ್ತಾರೆ. ದವಸ–ಧಾನ್ಯ ಮೊದಲಾದವುಗಳನ್ನು ನೀಡಿ ‘ಭಕ್ತಿ’ ಮೆರೆಯುತ್ತಾರೆ. ಇಲ್ಲಿನ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ.

72 ವರ್ಷಗಳ ಹಿಂದೆ
1947ರಲ್ಲಿ ಸ್ಥಾಪನೆಯಯಾದ ಈ ಆಲಯದ ಎದುರು 1954 ರಿಂದ ಶಾಲೆ ನಡೆಯುತ್ತಿದೆ. ಆರಂಭದಲ್ಲಿ ಅದು ಹೆಣ್ಣು ಮಕ್ಕಳ ಆಶ್ರಮ ಶಾಲೆಯಾಗಿತ್ತು. ಕ್ರಮೇಣ ಸಹ ಶಿಕ್ಷಣ ಆರಂಭವಾಯಿತು. ಇಲ್ಲಿ 1ರಿಂದ 7ನೇ ತರಗತಿವರೆಗೆ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ.

ಖಾವಿಧಾರಿ ಫಾದರ್ ಕೊರಳಲ್ಲಿ ರುದ್ರಾಕ್ಷಿಮಾಲೆ, ಹಣೆಗೆ ವಿಭೂತಿ ಧರಿಸಿ, ನಿತ್ಯ ಗಂಟೆ ಬಾರಿಸಿ, ಆರತಿ ಎತ್ತಿ ಹಿಂದೂ ಸಂಪ್ರದಾಯದಂತೆ ಶಿವಲಿಂಗ ಹಾಗೂ ಯೇಸುಕ್ರಿಸ್ತನಿಗೆ ಪೂಜೆ ಸಲ್ಲಿಸುತ್ತಾರೆ. ಮಂದಿರಕ್ಕೆ ಎಲ್ಲ ಜಾತಿ, ಧರ್ಮೀಯರೂ ಬರುತ್ತಾರೆ.

ಇಲ್ಲಿಗೆ ಬಂದ ಸ್ವಾಮಿಗಳು– ಫಾದರ್ಗಳು ಹಿಂದೂ-ಕ್ರಿಶ್ಚಿಯನ್ ಸಂಪ್ರದಾಯ ಮುಂದುವರಿಸಿಕೊಂಡು ಬಂದಿದ್ದಾರೆ. ಭಾರತೀಯ ಸಂಸ್ಕೃತಿಯ ಪ್ರಚಾರ ಕಾರ್ಯ ನಡೆಯುವುದು ಇಲ್ಲಿನ ವಿಶೇಷ. ಹೀಗಾಗಿ ಈ ಮಂದಿರದ ಬಗ್ಗೆ ಸ್ಥಳೀಯರಿಗೆ, ಸುತ್ತಮುತ್ತಲ ಊರುಗಳ ಜನರಿಗೆ ಅಭಿಮಾನ ಹಾಗೂ ಗೌರವವಿದೆ.

ಗಿಡ–ಮರಗಳ ಹಸಿರಿನ ವಾತಾವರಣದಿಂದ ಕಂಗೊಳಿ ಸುವ ಮಂದಿರದ ಆವರಣದಲ್ಲಿ ಮ್ಯೂಸಿಯಂ ಹಾಗೂ ಗ್ರಂಥಾಲಯವಿದೆ. ‘ದೇವರನ್ನು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸಬೇಕು’ ಎಂಬಿತ್ಯಾದಿ ಸಾಲುಗಳು ಗಮನಸೆಳೆಯುತ್ತವೆ.

ಸ್ಥಳೀಯರೊಂದಿಗೆ ಸ್ಥಳೀಯರಾಗಿ
‘ಸ್ವಾಮಿಗಳಾದ ಅನಿಮಾನಂದ, ಅರುಳಾನಂದ, ಅಮಲಾನಂದ, ಶಾಂತಾನಂದ ಹಾಗೂ ಸ್ವಾಮಿ ಪ್ರಭುದರ ಇಲ್ಲಿನ ಜನರ ಜೀವನ ಶೈಲಿಗೆ ತಕ್ಕಂತೆ ಜೀವನ ಮಾಡಿದರು. ಜನರಿಗೆ ಮೂಲಸೌಲಭ್ಯ ಕಲ್ಪಿಸುವುದರಿಂದ ಹಿಡಿದು ಶಿಕ್ಷಣದವರೆಗೆ ಸಹಾಯ ಮಾಡಿದ್ದಾರೆ. ನಮ್ಮಲ್ಲಿ ಜಾತಿ, ಧರ್ಮ, ಭಾಷೆ ಇಲ್ಲ. ನಾವು ‘ಜೆಜ್ವಿಟ್’ ಸಭೆಯ ಫಾದರ್ಗಳು. ಹೀಗಾಗಿ, ಸ್ಥಳೀಯರೊಂದಿಗೆ ಸ್ಥಳೀಯರಾಗುತ್ತೇವೆ’ ಎಂದು ಸ್ವಾಮಿ ಮೆನಿನೊ ಹೇಳುತ್ತಾರೆ.

‘ಎಲ್ಲಿಗೇ ಹೋದರೂ ಅಲ್ಲಿನ ಸಂಪ್ರದಾಯ, ಆಹಾರ ಪದ್ಧತಿ ಅನುಸರಿಸುತ್ತೇವೆ. ಅದನ್ನು ದೇಶನೂರಿನಲ್ಲೂ 72 ವರ್ಷಗಳಿಂದ ಕಾಣಬಹುದು’ ಎನ್ನುತ್ತಾರೆ ಮೆನಿನೊ.

ಇಲ್ಲಿನ ಅನಾಥಾಶ್ರಮದಲ್ಲಿ 30 ಮಕ್ಕಳಿದ್ದಾರೆ. ನೇಸರಗಿ, ಮೊಹರೆ ಹಾಗೂ ದೇಶನೂರಿನಲ್ಲಿ ಶಾಲೆಗಳಿವೆ. ಅಲ್ಲಿ ಕೆಲಸ ಮಾಡುವವರಲ್ಲಿ ಇಬ್ಬರನ್ನು ಬಿಟ್ಟರೆ ಉಳಿದವರು ಹಿಂದೂ ಹಾಗೂ ಮುಸ್ಲಿಮರೇ.

‘ಬಡವರಿಗೆ ಸಹಾಯ ಮಾಡುತ್ತಿದ್ದೇವೆ. ಇಲ್ಲಿ ಕಲಿತ ಹಲವು ಮಂದಿ ಸೈನ್ಯ ಸೇರಿದ್ದಾರೆ. ಕೆಲವರು ನರ್ಸ್ಗಳಾಗಿದ್ದಾರೆ’ ಎನ್ನುತ್ತಾರೆ ಅವರು.

ಲಿಂಗದೊಳಗೆ ನೈವೇದ್ಯ!
ಪೂಜೆಯಾದ ನಂತರ ಲಿಂಗದೊಳಗೆ ನೈವೇದ್ಯ ಅರ್ಪಿಸುವುದು ಇಲ್ಲಿನ ವಿಶೇಷ. ಲಿಂಗವನ್ನು ಓಪನ್ ಮಾಡುವುದಕ್ಕೆ ವ್ಯವಸ್ಥೆ ಇದೆ. ದೇವರು ನಮ್ಮೊಡನೆ ಇದ್ದಾರೆ ಎನ್ನುವ ಸಂದೇಶ ಸಾರುವುದು ಇದರ ಉದ್ದೇಶವಂತೆ.

‘ವಿರಕ್ತಮಠದ ಸಂಪ್ರದಾಯವನ್ನು ನಾವು ಪಾಲಿಸುತ್ತೇನೆ. ನಾವು ಭಾರತೀಯ ಕ್ರೈಸ್ತರು. ಇಲ್ಲಿನ ಸಂಸ್ಕೃತಿಯನ್ನೇ ಅನುಸರಿಸು ತ್ತಿದ್ದೇವೆ. ಆ ಸಂಸ್ಕೃತಿಗೆ ತಕ್ಕಂತೆ ಜೀವನ ನಡೆಸುತ್ತೇವೆ. ರಂಜಾನ್ ಆಚರಣೆಯಲ್ಲೂ ಭಾಗವಹಿಸುತ್ತೇವೆ. ಬುಧವಾರ ಹಾಗೂ ಭಾನುವಾರ ಬೆಳಿಗ್ಗೆ ಯಿಂದಲೇ ಜನರಿಗಾಗಿ ವಿಶೇಷ ಕಾರ್ಯಕ್ರಮ ನಡೆಯುತ್ತದೆ. ನೂರಾರು ಮಂದಿ ಪ್ರಾರ್ಥನೆ ಸಲ್ಲಿಸುತ್ತಾರೆ. ಪ್ರತಿ ವರ್ಷ ಸರ್ವಧರ್ಮ ಸಮ್ಮೇಳನ ನಡೆಸಲಾಗುತ್ತದೆ’ ಎನ್ನುತ್ತಾರೆ 12 ವರ್ಷಗಳಿಂದ ಇಲ್ಲಿರುವ ಸ್ವಾಮಿ ಮೆನಿನೊ.

‘ಎಲ್ಲರೂ ದೇವರ ಮಕ್ಕಳು. ಜಾತಿ, ಧರ್ಮ ನೋಡಬೇಡಿ’ ಎಂದು ಮದರ್ ತೆರೇಸಾ ಮಾಡಿದ್ದ ಆಶೀರ್ವಾದದ ಸಂದೇಶವೇ ನಮಗೆ ದಾರಿದೀಪವಾಗಿದೆ’ ಎನ್ನುವುದು ಅವರ ವಿನಮ್ರ ನುಡಿ. ಸಂಪರ್ಕಕ್ಕೆ: 94482 10781

ಕ್ರಿಸ್ಮಸ್ಗೆ ವಿಶೇಷ ಕಾರ್ಯಕ್ರಮ
ಕ್ರಿಸ್ಮಸ್ ಆಚರಣೆಯ ಮುನ್ನಾದಿನವಾದ ಡಿ. 24ರಂದು ಸಂಜೆ ಆವರಣದ ಆಶ್ರಮ ಶಾಲೆಯ ಮಕ್ಕಳನ್ನು ಊರಿನ ಪ್ರಮುಖ ಬೀದಿಗಳಲ್ಲಿ ಕರೆದುಕೊಂಡು ಹೋಗಿ ಮೆರವಣಿಗೆ ನಡೆಸಲಾಗುತ್ತದೆ. ಕ್ಯಾರಲ್ ಸಿಂಗಿಂಗ್ ಮೂಲಕ ಜನರಿಗೆ ಕ್ರಿಸ್ಮಸ್ ಶುಭಾಶಯವನ್ನು ಮಕ್ಕಳು ಕೋರುತ್ತಾರೆ. ರಾತ್ರಿ ಮಂದಿರದಲ್ಲಿ ವಿಶೇಷ ಪ್ರಾರ್ಥನೆ ನೆರವೇರುತ್ತದೆ. ಭಾಗವಹಿಸುವವರಲ್ಲಿ ಬಹುತೇಕರು ಹಿಂದೂಗಳೇ!

ಪ್ರತಿ ವರ್ಷ ಜನವರಿ 14ರಂದು ವಾರ್ಷಿಕೋತ್ಸವ ಆಚರಿಸಲಾಗುತ್ತದೆ.

ಒಂದೇ ಕಡೆಯಲ್ಲಿ ಶಿವ– ಯೇಸುವನ್ನು ಪೂಜಿಸುವುದು ಅಪರೂಪ. ನಾವು ಚಿಕ್ಕವರಿದ್ದಾಗಿನಿಂದಲೂ ಆಗಾಗ ಬರುತ್ತಿದ್ದೇವೆ. ಇಲ್ಲಿನ ಆಚರಣೆ ಹಾಗೂ ಸಂಪ್ರದಾಯದ ಬಗ್ಗೆ ಎಲ್ಲ ಸಮುದಾಯದವರಿಗೂ ಗೌರವವಿದೆ. ಸ್ವಾಮಿಗಳು ಸಮಾಜಸೇವೆಯನ್ನೂ ಮಾಡುತ್ತಿದ್ದಾರೆ. ಇದು ಒಳ್ಳೆಯ ಶ್ರದ್ಧಾ ಕೇಂದ್ರವಾಗಿದೆ.
-ಎಚ್. ಬಸವರಾಜ ಗ್ರಾಮಸ್ಥ, ದೇಶನೂರು

ಯಾರಾದರೂ ಇದನ್ನು ‘ಚರ್ಚ್’ ಎಂದರೆ ಹಿಂದಿನ ಸ್ವಾಮಿಗಳು ಬುದ್ಧಿವಾದ ಹೇಳುತ್ತಿದ್ದರು. ಇದನ್ನು ‘ಗುಡಿ’ ಎನ್ನಬೇಕು ಎಂದು ತಿಳಿಸುತ್ತಿದ್ದರು. ಅಷ್ಟರ ಮಟ್ಟಿಗೆ ಇಲ್ಲಿಗೆ ಹೊಂದಿಕೊಂಡಿದ್ದರು. ಆ ಪರಂಪರೆ ಮುಂದುವರಿದಿದೆ. ಎಲ್ಲ ಧರ್ಮದವರ ಶ್ರದ್ಧಾ ಕೇಂದ್ರವಾಗಿದೆ. ವಿಶೇಷವಾಗಿ, ಇಲ್ಲಿ ದೊರೆಯುವ ಉಚಿತ ಆರೋಗ್ಯ ಸೇವೆಯಿಂದ ರೋಗಿ ಗಳು ಗುಣಮುಖರಾಗುತ್ತಿದ್ದಾರೆ. ನಮ್ಮ ಕುಟುಂಬದಲ್ಲೂ ಹಲವರಿಗೆ ಅನುಕೂಲವಾಗಿದೆ. ಕ್ರಿಸ್ಮಸ್ ಹಬ್ಬವನ್ನು ಎಲ್ಲರೊಂದಿಗೆ ಸೇರಿ ಆಚರಿಸುತ್ತಾರೆ.
-ಪೀಟರ್, ಮೊಹರೆ ಗ್ರಾಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.