ಶನಿವಾರ, ಅಕ್ಟೋಬರ್ 16, 2021
22 °C

ಸೊಂಡಿಲಾಡಿಸಿ ಬಂತು ಸಿಂಗರಿಸಿದಾನೆ

ಡಾ.ವಿ. ರಂಗನಾಥ್ Updated:

ಅಕ್ಷರ ಗಾತ್ರ : | |

Prajavani

ಮೈಸೂರು ದಸರಾವನ್ನು ಜಗತ್ತು ಬೆರಗುಗಣ್ಣಿನಿಂದ ನೋಡಿದಂತೆಯೇ ನಮ್ಮ ಕವಿಗಣವೂ ವಿಸ್ಮಯದಿಂದ ಈ ಉತ್ಸವವನ್ನು ತನ್ನ ಕಾವ್ಯದಲ್ಲಿ ಕಂಡರಿಸಿದೆ. ಆದರೆ ದಸರಾ ಕುಸ್ತಿಗೆ ರಕ್ತದ ಕಲೆಯೂ ಅಂಟಿದೆಯಲ್ಲ?!

**

ನವರಾತ್ರಿ ಹಬ್ಬಕ್ಕೆ ದೊಡ್ಡ ಇತಿಹಾಸವಿದೆ. ನಮ್ಮ ಅನೇಕ ಪುರಾಣ, ಕಾವ್ಯಗಳಲ್ಲಿ ನವರಾತ್ರಿಯ ವರ್ಣನೆ ಬರುತ್ತದೆ. ಇದು ಕೇವಲ ಹಬ್ಬವಲ್ಲ. ಹಬ್ಬಗಳ ಸಮೂಹ. ಸಂಭ್ರಮದ ದ್ಯೋತಕ. ದಸರಾ ಉತ್ಸವವೆಂದರೆ ಅದು ಜನಸಾಮಾನ್ಯರ ಉತ್ಸವ. ಜನಪದ ಗೀತೆಗಳಲ್ಲಿ ನವರಾತ್ರಿಯ ಬಗ್ಗೆ ದೊಡ್ಡ ಹರವು ಇದೆ. ಅದೇ ರೀತಿ ಹಿಂದಿನ ರಾಜರ ಆಸ್ಥಾನದ ಕವಿಗಳು, ಸ್ವಾತಂತ್ರ್ಯಾನಂತರದ ಭಾರತದ ಕವಿಗಳು, ಈಗಿನ ಆಧುನಿಕ ಕವಿಗಳು ಎಲ್ಲರೂ ತಾವು ಕಂಡಂತೆ, ತಮ್ಮ ಭಾವನೆಗಳಿಗೆ ಹೊಂದುವಂತೆ ಕವಿತೆಗಳನ್ನು ರಚಿಸಿದ್ದಾರೆ. ಅಂದರೆ ದಸರಾ ಉತ್ಸವ ಎಲ್ಲರ ಮನಗಳನ್ನೂ ಗೆದ್ದ ಹಬ್ಬ.

ದಸರಾ, ನವರಾತ್ರಿ, ಮಹಾನವಮಿ, ಮಾನವಮಿ ಎಂದೆಲ್ಲಾ ಜನಪದರು ಕರೆದಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಜನಪದರಲ್ಲಿ ಕೆಲವು ಪದ್ಯಗಳು ಜನಜನಿತವಾಗಿವೆ. ಅದರಲ್ಲಿ

ಅಶ್ವಯುಜ ಶುದ್ಧ ಮಾನವಮಿ ಬರಲೆಂದು/ ಐಶ್ವರ್ಯ ಸಕಲ ಸಂಪದ ಹೆಚ್ಚಲೆಂದು/ ಈಶ್ವರನ ಕೃಪೆ ನಿಮಗೆ ಸುಖಿಯಾಗಲೆಂದು/ ಶಾಶ್ವತದಿ ಹರಸಿದೆವು ಬಾಲಕರು ಬಂದು||

ಎಂದು ಒಂದು ಹರಕೆ ಪದ ಹೇಳುತ್ತದೆ.

ನವರಾತ್ರಿ ಆಚರಣೆಯ ಸಮಯದಲ್ಲಿ ಪ್ರಕೃತಿ ತಣ್ಣಗಿರುತ್ತದೆ. ಬೆಳೆ ಬಂದು ರೈತ ಹರ್ಷಿತನಾಗಿರುತ್ತಾನೆ. ಮಳೆ ಬಂದು ಭೂಮಿ ತಣಿದಿರುತ್ತದೆ. ಇಂತಹ ಸಮಯದಲ್ಲಿ ಭೂಮಿತಾಯಿಯ ಪೂಜೆಯನ್ನು ರೈತರು ವಿಶೇಷವಾಗಿ ಮಾಡುತ್ತಾರೆ. ಅದರಲ್ಲೂ ನವರಾತ್ರಿಯ ಬನ್ನಿ ಪೂಜೆ ವಿಶೇಷ ಮಹತ್ವದ್ದು. ಅದರ ಕುರಿತಾದ ಹಾಡು ಈ ರೀತಿ ಇದೆ.

ಊರ ಸೀಮೆಯ ದಾಟಿ ಕಾಡಗಡಿಯನು ಸೇರಿ/ ಕಾಡ ಸಂಪತ್ತು ತರಬನ್ನಿ/ ಬೆಳೆದ ಬೆಳಸಿಗೆ ಬನ್ನಿ ಭೂಮಿತಾಯಿಗೆ ಬನ್ನಿ/ ನಾಡಸಂಪತ್ತು ಬೆರಿಬನ್ನಿ ಎನ್ನುತ್ತಾರೆ ಜನಪದರು. ಇಲ್ಲಿ ‘ಬನ್ನಿ’ ಪದವನ್ನು ವಿಶೇಷವಾಗಿ ಬಳಸಲಾಗಿದೆ. ಬನ್ನಿ ಪೂಜೆ ಮಾಡುವುದನ್ನು ಅನೂಚಾನವಾಗಿ ನಡೆಸಿಕೊಂಡು ಬರುತ್ತಿರುವಂತೆ, ಅದೇ ಪದದಿಂದ ಜೀವಮಾನಸಕ್ಕೆ ಸಂದೇಶ ನೀಡುವ ಕ್ರಿಯೆಯನ್ನು ಇಲ್ಲಿ ಕಾಣಬಹುದಾಗಿದೆ.

ಬನ್ನಿಪೂಜೆಯನ್ನು ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಆಚರಿಸಲಾಗುತ್ತದೆ. ಅದನ್ನು ದಿಗ್ವಿಜಯ ಯಾತ್ರೆ ಎಂದೂ ಹೇಳಲಾಗುತ್ತದೆ. ಪಾಂಡವರು ಅಜ್ಞಾತವಾಸ ಆರಂಭಿಸಿದ ದಿನವೂ ಬನ್ನಿಯ ದಿನ. ಹಾಗೂ ಅಜ್ಞಾತವಾಸ ಮುಗಿಸಿ ಪ್ರತ್ಯಕ್ಷರಾದದ್ದೂ ಬನ್ನಿಯ ದಿನವೇ ಎಂಬ ಪ್ರತೀತಿ ಇದೆ.

ಪಾಂಡವರ ಕುರಿತಾದ ಅನೇಕ ಕಥೆಗಳು ಈ ನಾಡಿನಾದ್ಯಂತ ಬಳಕೆಯಲ್ಲಿವೆ. ವನವಾಸ ಕಾಲದಲ್ಲಿ ಅವರು ತಂಗಿದ್ದ ತಾಣಗಳು, ಅಡುಗೆ ಮಾಡಿ ಊಟ ಮಾಡಿದ ಸ್ಥಳ ಇತ್ಯಾದಿ ವಿಷಯಗಳು ಜನಪದರಲ್ಲಿ ಬಹಳ ಬಳಕೆಯಲ್ಲಿವೆ. ಅವರು ಬನ್ನಿಯ ಎಲೆಯಲ್ಲಿ ಎಡೆ ಮಾಡಿ ಊಟ ಮಾಡಿದರು ಎಂಬ ವರ್ಣನೆ ಒಂದು ಕಡೆ ಇದೆ. ಒಂದು ವರ್ಣನೆಯಲ್ಲಿ ಪಾಂಡವರು ವನವಾಸಕ್ಕೆ ತೆರಳಿದ್ದನ್ನು ಬಹಳ ದುಃಖದಿಂದ ಈ ಕೆಳಕಂಡಂತೆ ಹಾಡಲಾಗಿದೆ.

ಕಲ್ಲು ಕಡುಬ ಮಾಡಿ, ಮುಳ್ಳ ಸ್ಯಾಂವಿಗೆ ಮಾಡಿ/ ಬನ್ನಿ ಎಲೆಯಾಗ ಎಡೆಮಾಡಿ | ಪಾಂಡವರು/ ಉಂಡು ಹೋಗ್ಯಾರೋ ವನವಾಸ ||

ಅವರ ವನವಾಸವನ್ನು ಜನರು ದುಃಖದಿಂದ ನೆನೆಸಿಕೊಳ್ಳುತ್ತಾರೆ. ಅವರು ಕಡುಬು ಮಾಡಿ ಉಂಡಿದ್ದು ಕಲ್ಲು, ಸೇವಿಗೆ ಮಾಡಿ ಬಸಿದದ್ದು ಮುಳ್ಳು ಎಂದು ಪಾಂಡವರಿಗೆ ಬಂದ ವನವಾಸವನ್ನು ಜ್ಞಾಪಿಸಿಕೊಳ್ಳುತ್ತಾರೆ.

ಹೀಗೆ ಪೌರಾಣಿಕ, ಐತಿಹಾಸಿಕ ಹಾಗೂ ಧಾರ್ಮಿಕ ಹಿನ್ನೆಲೆಯನ್ನು ಹೊಂದಿರುವ ಬನ್ನಿಹಬ್ಬ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಈ ಹಬ್ಬವನ್ನು ಅನೇಕ ರೀತಿಯಲ್ಲಿ ಆಚರಿಸಲಾಗುತ್ತದೆ. ಬೆಳದಿಂಗಳಲ್ಲಿ ಬನ್ನಿಯನ್ನು ಮುಡಿದು ಜನರು ಹಾಡಿ, ಕುಣಿದು ಉತ್ಸಾಹ ಮೆರೆಯುತ್ತಾರೆ. ಅಂತಹ ಒಂದು ಸಂದರ್ಭದಲ್ಲಿ ಅವರು ಹಾಡುವ ಹಾಡು ಹೀಗಿದೆ:

ಬನ್ನಿ ಮುಡಿಯೋಣ ಬಾರ ಕೋಲು ಕೋಲ‌/ ಬನ್ನಿ ತರುವೋಣ ಬಾರ ಕೋಲು ಕೋಲ/ ಹೀಗೆ ಬನ್ನಿಗಿಡದ ಬಗ್ಗೆ ಅಪಾರ ಗೌರವ ಹೊಂದಿರುವ ಜನಪದರು ಹಾಡುಗಳನ್ನು ಕಟ್ಟಿ ಹಾಡಿ ಸಂಭ್ರಮಿಸಿದ್ದಾರೆ. 

ಪಾಂಡವರು ವನವಾಸ ಸಂದರ್ಭದಲ್ಲಿ ಹಂಪಿಗೆ ತಾಗಿಕೊಂಡಿರುವ ‘ಧರ್ಮದ ಗುಡ್ಡ’ದಲ್ಲಿ ಕೆಲವು ದಿನ ಉಳಿದುಕೊಂಡಿದ್ದರಂತೆ. ಮುಂದೆ ಅಜ್ಞಾತವಾಸ ಸಮಯದಲ್ಲಿಯೂ ಪಾಂಡವರು ಈ ಧರ್ಮರ ಗುಡ್ಡದಲ್ಲಿರುವ ಬನ್ನಿಮರದಲ್ಲಿಯೇ ಆಯುಧ ಇಟ್ಟಿದ್ದರೆಂದು ಜನರು ಹೇಳುತ್ತಾರೆ. ಆ ಸಮಯದಲ್ಲಿ ಪಾಂಡವರು ಹೀಗೆ ಪ್ರಾರ್ಥಿಸಿದರು ಎಂದು ಜನ ಹೇಳುತ್ತಾರೆ.

‘ಬನ್ನಿಯ ಗಿಡದಾಗ ಬಾಣವಿಟ್ಟವಿ ತಾಯಿ/ ಯಾರು ಬಂದರೂ ಕೊಡಬೇಡ ಬನ್ನಿತಾಯಿ/ ಅರ್ಜುನ ಬಂದರೆ ಕೊಡಬೇಕು’ ಎಂದು ಪ್ರಾರ್ಥಿಸಿ ಬನ್ನಿಗಿಡಕ್ಕೆ ಪೂಜೆ ಮಾಡಿ, ಅಜ್ಞಾತವಾಸದ ನಂತರ ಮತ್ತೆ ಬನ್ನಿಗಿಡಕ್ಕೆ ಪೂಜೆ ಮಾಡಿ, ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ಕೌರವರನ್ನು ಸೋಲಿಸಿದರು ಎಂದು ಜನ ಹೇಳುತ್ತಾರೆ.

ಇವು ಜನಪದರ ಬಾಯಿಯಲ್ಲಿ ದಸರಾ ಹಾಗೂ ಬನ್ನಿ ಪೂಜೆಗೆ ಸಂಬಂಧಿಸಿದ ವರ್ಣನೆಯಾದರೆ, ದಸರಾ ಉತ್ಸವ ನಮ್ಮ ಹಿಂದಿನ ಕವಿಗಳನ್ನೂ ಕಾಡಿದೆ. ಜನ್ನನ ಯಶೋಧರ ಚರಿತೆಯಲ್ಲಿ ಅಂದು ನಡೆಯುತ್ತಿದ್ದ ಪ್ರಾಣಿಬಲಿಯ ಬಗ್ಗೆ ಮಾಹಿತಿ ದೊರಕುತ್ತದೆ.
ಕವಿ ರತ್ನಾಕರ ವರ್ಣಿ ರಚಿಸಿರುವ ‘ಭರತೇಶ ವೈಭವ’ದಲ್ಲಿ ನವರಾತ್ರಿ ಹಬ್ಬದ ವರ್ಣನೆ ಇದೆ. ಒಂದು ಸಂಧಿಗೆ ನವರಾತ್ರಿ ಸಂಧಿ ಎಂದು, ಮತ್ತೊಂದು ಸಂಧಿಯಲ್ಲಿ ಪಟ್ಟಣ ಪಯಣದ ಸಂಧಿ ಎಂದೂ, ಮತ್ತೊಂದಕ್ಕೆ ದಶಮಿ ಸಂಧಿ ಎಂದು ಕರೆದಿದ್ದು ನವರಾತ್ರಿಯ ವರ್ಣನೆ ಕಾಣಬಹುದಾಗಿದೆ.

ಯದುಕುಲದ ಅರಸ ಶ್ರೀಕಂಠೀರವ ನರಸರಾಜ ಒಡೆಯರ್ ಕಾಲದಲ್ಲಿ ಅವರ ಆಸ್ಥಾನದಲ್ಲಿದ್ದ ಕವಿ ಗೋವಿಂದ ವೈದ್ಯ. ಆತನು ‘ಕಂಠೀರವ ನರಸರಾಜ ವಿಜಯ’ ಎಂಬ ಮಹಾಕಾವ್ಯ ರಚಿಸಿದ್ದಾನೆ. ಕಾವ್ಯ ರಚನೆಯ ಸಮಯ ಸುಮಾರು 1648 ಎಂದು ಕಂಡುಬರುತ್ತದೆ. ಈ ಮಹಾಕಾವ್ಯದಲ್ಲಿ ಒಟ್ಟು 26 ಸಂಧಿಗಳಿದ್ದು ಅದರಲ್ಲಿ ದಸರೆಯ ಸಂಭ್ರಮದ ವರ್ಣನೆ ಕಾಣಸಿಗುತ್ತದೆ. ಪುರ ಶೃಂಗಾರ ಸಂಧಿ, ಮಹಾನವಮಿ ಒಡ್ಡೋಲಗ, ವಿಜಯದಶಮಿ ಜಂಬೂಸವಾರಿ ಇವುಗಳ ಸವಿವರಣಾತ್ಮಕ ವಿವರಗಳಿದೆ.

ಇದರಿಂದ ಆ ಕಾಲದ ದಸರಾ ಉತ್ಸವದ ಸಾಕಷ್ಟು ಮಾಹಿತಿಗಳು ನಮಗೆ ಲಭ್ಯವಾಗುತ್ತದೆ. ವಿಜಯ ದಶಮಿ ಜಂಬೂಸವಾರಿ ಹೇಗಿರುತ್ತಿತ್ತು ಎಂಬುದಕ್ಕೆ ಒಂದು ಪದ್ಯವನ್ನು ಗಮನಿಸಬಹುದು.

ಧಾರಿಣೀಶ್ವರನರಮನೆ ಬಾಗಿಲಿಂ ಜಂಬಿ/ ಸಾರಿ ಮಂಟಪ ಪರಿಯಂತ/ ಮೇರೆಯಿಲ್ಲದ ರತ್ನತೋರಣ ಕುರುಜುಗಳ್/ ಸೇರಿ ಕಟ್ಟಿದುವರ್ತಿಯಲಿ.

ಮೈಸೂರು ದೊರೆ ಕೃಷ್ಣರಾಜೇಂದ್ರರವರ ಆಸ್ಥಾನದಲ್ಲಿದ್ದ ಕವಿ ನೂರೊಂದಯ್ಯ. ಆತ ‘ಸೌಂದರ ಕಾವ್ಯ’ ರಚಿಸಿದ್ದಾನೆ. ಇದು 1740ರ ಸುಮಾರಿನಲ್ಲಿ ರಚಿತವಾದಂತಹುದು. ಇದರಲ್ಲಿ ಆಗಿನ ನವರಾತ್ರಿ ಉತ್ಸವ ಬಹಳ ವಿವರಣೆಗಳು ಲಭ್ಯವಾಗುತ್ತದೆ. ಅದರಲ್ಲಿನ ಒಂದು ಪದ್ಯ ನವರಾತ್ರಿಗೆ ಸಂಬಂಧಿಸಿದ್ದು ಈ ಕೆಳಕಂಡಂತಿದೆ.

ಆ ಕಾಲದೊಳಗೆ ಮಹರ್ನೌಮಿ ಹಬ್ಬವು ಲೋಕವಾಳುವರರ್ತಿ ನೋಡ ಬೇಕೆಂಬ ತೆರದಿ ಲಕ್ಷ್ಮೀಕರದೊಳು ಶುಭ ಸಾಕಾರಗೂಡಿ ಸಂಭ್ರಮದಿ ನವಯೌವನದೊಳು ನವರಾತ್ರಿ ಹಬ್ಬವು ನವಕುಶಲರ ನೋಡುವರೆ ನವಚಿತ್ರದರ್ತಿ ಭೂಪಾಲ ಭುಜಕೀರ್ತಿ ನವರಸ ತೋರಿ ಪೇಳುವೆನು ದೊರೆ ಚಿಕ್ಕದೇವರಾಜ ಒಡೆಯರ್ ಕಾಲದಲ್ಲಿದ್ದ ಕವಿ ತಿರುಮಲಾರ್ಯ ‘ಚಿಕ್ಕದೇವರಾಜ ವಿಜಯ’ ಎಂಬ ಕೃತಿ ರಚಿಸಿದ್ದಾನೆ. ಇದರಲ್ಲಿ ಆಗಿನ ಆಡಳಿತದ ವಿವರ ಲಭಿಸುತ್ತದೆ.

ಕನ್ನಡ ಸಾಹಿತ್ಯ ಲೋಕದಲ್ಲಿ ಬಿ.ಎಂ. ಶ್ರೀಕಂಠಯ್ಯನವರದು ಅಗ್ರಗಣ್ಯ ಹೆಸರು. ಅವರ ಇಂಗ್ಲಿಷ್ ಗೀತೆಗಳು ಕಾವ್ಯ ಸಂಕಲನ ಹೊಸ ಸಾಹಿತ್ಯ ಪ್ರಾಕಾರವನ್ನೇ ಸೃಷ್ಟಿ ಮಾಡಿತು. ಅವರ ‘ಇಂಗ್ಲಿಷ್ ಗೀತೆಗಳು’ ಕವನ ಸಂಕಲನದಲ್ಲಿ ಮೈಸೂರಿನ ಬಗ್ಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಬಗ್ಗೆ ‘ಮೈಸೂರು ಮಕ್ಕಳು’ ಎಂಬ ಶೀರ್ಷಿಕೆಯಲ್ಲಿ ಉತ್ತಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ.


-ಅರಮನೆ ಆವರಣದಲ್ಲಿ ಗಜಮಜ್ಜನ -ಚಿತ್ರ: ಬಿ.ಆರ್.ಸವಿತಾ

ನಿಮ್ಮ ನಾಡಾವುದು? ಮೈಸೂರು, ನಿಮ್ಮೂರಾವುದು? ಮೈಸೂರು, ಕನ್ನಡದ ಕಣ್ಣದು, ಮೈಸೂರು, ನಾಲುಮಡಿ ಕೃಷ್ಣನ ಮೈಸೂರು.

ಕವಿ ಕೆ.ಎಸ್.ನರಸಿಂಹಸ್ವಾಮಿಯವರು ದಸರೆ ಕುರಿತಾಗಿ ಹೀಗೆ ಹೇಳುತ್ತಾರೆ. ಇದು ಸಂಭಾಷಣೆ ರೂಪದಲ್ಲಿರುವುದು ವಿಶೇಷ. ಇದು ಮೊಮ್ಮಗಳೊಡನೆ ನಡೆಸುವ ಸಂವಾದ:

‘ಹಸಿರು ದೀಪದ, ಒಂಟೆ ಕಾಣಿಸಿತು ಮೊದಲು/ ಬೀದಿಯುದ್ದಕು ದೀಪಮಾಲೆಗಳು ಹೊಳೆದು/ ನೌಪತ್ತು ಕೇಳಿಸಿತು. ನಡುಗಿತು ನಗಾರಿ/ ಕಿಕ್ಕಿರಿದ ಇಕ್ಕೆಲದ ಚಪ್ಪಾಳೆಗಳಲಿ/ ಬಳಿಕ ಆನೆಯ ಬಂಡಿ, ಕುದುರೆ, ಕಾಲಾಳು/ ಹಾಡುತ್ತ ಮುನ್ನಡೆದ ಗಾಯಕರ ಸಾಲು/ ಬಂತು ಓಲಗದೊಡನೆ ಬಳುಕುತ್ತ ಮೇನ/ ತಂಗಾಳಿಯಲಿ ತೇಲಿಬಂತು ತಿಲ್ಲಾನ’

‘ಮುಂದೇನು ಬಂತೆಂ’ದು ಕೇಳಿದಳು ಚೆಲುವೆ/ ಒಂದೆರಡು ಮಳೆಯ ಹನಿ ಬಿತ್ತೆಂ’ದು ನುಡಿದೆ/ ಸೊಂಡಿಲಾಡಿಸಿ ಬಂತು ಸಿಂಗರಿಸಿದಾನೆ/ ಮಹಡಿಯಂಚಿಗೆ ಸರಿದು ನೋಡಿದೆನು ವಾಸಿ / ಚಿನ್ನದಂಬಾರಿಯಲಿ ದೊರೆ ಬಂದ, ಬಂದ/ ಉಕ್ಕಿದುದು ಎಲ್ಲರೆದೆಯೊಳಗೆ ಆನಂದ’

ಉಳಿದಂತೆ ಹಲವು ಕವಿಗಳು ದಸರೆಯ ಬಗ್ಗೆ ಈ ಕೆಳಕಂಡಂತೆ ವರ್ಣಿಸಿದ್ದಾರೆ.

ದೇವಲೋಕ ಭರತಖಂಡ ಎರಡು ನನ್ನದಾದಲ್ಲಿ/ ದೇವಲೋಕವ ಬಿಟ್ಟು ಕೊಡುವೆ ದೇವತೆಗಳಿಗೆ/ ನಾ ಬಾಳುವೆ ಭರತ ಖಂಡದಲ್ಲಿ/ ಅಮರಾವತಿ ಮೈಸೂರು ಎರಡು ನನ್ನದಾದಲ್ಲಿ/ ಅಮರಾವತಿಯ ದಾನವನೀಯುವೆ ದೇವೇಂದ್ರನಿಗೆ/ ಬಾಳುವೆ ಮುದ್ದು ಮೈಸೂರಿನಲ್ಲಿ / ಎನ್ನಿಸುವಷ್ಟು ಆಗಗೊಳಿಸಯ್ಯ ಮಾವಿನ ಕೆರೆ ರಂಗಯ್ಯ - ಎಂದು ಬರೆಯುತ್ತಾರೆ ಎಸ್‍.ವಿ. ರಂಗಣ್ಣ.
ನವರಾತ್ರಿಯ ನವಧಾತ್ರಿಯ/ ಈ ಶಾಮಲ ವನಧಿಯಲಿ/ ಹಸಿರಾದುದು ಕವಿಯಾತ್ಮಂ ರಸಪಾನ ಸ್ನಾನದಲಿ – ಎನ್ನುವುದು ಕುವೆಂಪು ನುಡಿ.

ಪ್ರಜಾತಂತ್ರದಲ್ಲೀಗ ಜನತೆಯ ದಸರೆ. ಹೊಸ ತಾರ/ ತಮ್ಯ ಸೌಧಕ್ಕಿನ್ನೂ ಅಸ್ತಿಭಾರವೇ ಬಿದ್ದಿಲ್ಲ ಸಿಕ್ಕಾಪಟ್ಟೆ/ ಸಿಕ್ಕುಸಿಕ್ಕುಗಳಲ್ಲಿ ಸಿಕ್ಕಿಕೊಂಡಿರುವ ಪುರುಷಾರ್ಥ ಸಂಕಟದಲ್ಲಿ/ ಪಶುಬಲದ ನುಗ್ಗಾಟ; ಮನುಷ್ಯ ಮುಖವಾಡ/ ತೊಟ್ಟ ಮಹಿಷಾಸುರರು ಹೆಜ್ಜೆಹೆಜ್ಜೆಗೆ, ಹೆಣ್ಣುಗಳ ಕಂಡು/ ಬಾಯ್ಬಾಯ್ಬಿಡುವ ಬರೀ ದಂಡಪಿಂಡದ ದಂಡು/ ಜೊಲ್ಲು ಸುರಿಸುವ ಶುನಕ/ ಹುಡುಕುತ್ತಲೇ ಇದೆ ಬೀದಿಯುದ್ದಕ್ಕೂ ತಿಂಡಿಯ ತುಣುಕ/ ನಡೆದಾಡುತ್ತಲಿವೆ ಹುಚ್ಚೆದ್ದ ಗಲ್ಲಿಗಲ್ಲಿ ಮಣಕ; ಎಂಜಲೆಲೆಡಗಾಗಿ ಹೋರಾಡುತ್ತಲಿವೆ ಅಗೋ ಹೋರಿ, ತಿರುಕ -ಎಂದು ಹಾಡಿದ್ದಾರೆ ಗೋಪಾಲಕೃಷ್ಣ ಅಡಿಗ.

ಕನ್ನಂಬಾಡಿಯ ಬೃಂದಾ / ವನವೇ ನೋಟಕೆ ಚೆಂದಾ / ಮಿಂಚಿನ ದೀಪಗಳಿಂದಾ ಜಂಬೂಸವಾರಿಯೊಂದೇ ಸಾಕೈ/ ಸುರಪನು ನೀನೇ ಎನಲು / ಜಯಹೇ ಜಯಹೇ ಜಯಹೇ / ಜಯಜಯ ಜಯಹೇ ಜಯ ಹೇ / ಜಯಜಯ ಜಯಹೇ - ನಾಲ್ವಡಿ ಕೃಷ್ಣ ನೃಪಾಲ

ನಾಗೀಶ್ವರಿ ಶಾಸ್ತ್ರಿ ಅವರ ಸಂಗ್ರಹದಲ್ಲಿ ಈ ಪದ್ಯವನ್ನು ಕಾಣಬಹುದು.

ಅಂಬಾರಿಯೆಡೆಯಿಂದ ಕುಡಿನೋಟ ಚಿಮ್ಮಿಸುತ/ ರಾಯ ತಲೆದೂಗಿಹನು ಕಂಗಳಲೆ ನುಡಿಯಿಸುತ - ಎಂದು ಪದ್ಯ ಕಟ್ಟಿದ್ದಾರೆ ಸಿಪಿಕೆ. ಮಹಿಶೂರ ರಾಜರವರ ಮೆರವಣಿಗೆಯ ವೈಖರಿ/ ನೋಡೆ ಲಕ್ಷಗಟ್ಲೆ ಜನರು ಸಾಲುಗಟ್ಟಿ ನಿಲುವರು ಎಂದು ಎಂಬಾರ್ ಶ್ರೀನಿವಾಸಾಚಾರ್ಯ ಹೇಳಿದರೆ, ರಾಜ ಸತ್ತರೂ/ ರಾಜ ಸಿಂಹಾಸನ ಮೆರೆಸುತ್ತಿದ್ದೇವೆ/ ಅಣಕಕ್ಕೆ ಅಣಕವ ಜೋಡಿಸಿ ಅಣಕವಾಗುತ್ತಿದ್ದೇವೆ ಎಂದಿದ್ದಾರೆ ಮಳಲಿ ವಸಂತಕುಮಾರ್.

ಹೀಗೆ ದಸರಾ ಉತ್ಸವ ಜನರ ಮನದಲ್ಲಿ ವೈಭವದಿಂದ ಕಂಗೊಳಿಸಿದರೆ, ಹಿಂದಿನ ಕಾಲದ ಕವಿಗಳು ಹಾಗೂ ಈಗಿನ ಕಾಲದ ಹಲವಾರು ಕವಿಗಳು ದಸರಾವನ್ನು ತಮ್ಮದೇ ದೃಷ್ಟಿಕೋನದಲ್ಲಿ ನೋಡಿ ಕವನ ರಚಿಸಿದ್ದಾರೆ. ಇಂದಿಗೂ ದಸರಾ ಸಮಯದಲ್ಲಿ ಮೈಸೂರಿನಲ್ಲಿ ಕವಿಗೋಷ್ಠಿ ನಡೆಯುತ್ತದೆ. ದಸರಾ ಕುರಿತಾದ ಹಲವು ಕವನಗಳು ಪ್ರವಾಹದೋಪಾದಿಯಲ್ಲಿ ಹರಿದುಬರುತ್ತವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು