ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಳೆಯರಿಗೆ ಸುಸ್ಥಿರ ಬದುಕಿನ ಪಾಠ

Last Updated 28 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಕರ್ನಾಟಕದ ಅನೇಕ ಗ್ರಾಮದ ಬೀದಿಗಳಲ್ಲಿ ಒಂದು ಸುತ್ತು ಹೊಡೆದರೆ ಅಲ್ಲಲ್ಲೇ ಕೆಲವು ಮನೆಗಳು ಪಾಳುಬಿದ್ದಿರುವ ದೃಶ್ಯ ಕಾಣಿಸುತ್ತದೆ. ಇದಕ್ಕೆ ಕಾರಣ ಊಹಿಸುವುದು ಕಷ್ಟವೇನಲ್ಲ. ಅಲ್ಲಿದ್ದ ಹಿರಿಯರು ಕಾಲವಾಗಿ, ಮಕ್ಕಳು ನಗರದತ್ತ ವಲಸೆ ಹೋಗಿರಬಹುದು. ಇಷ್ಟರ ಮೇಲೂ ಪಾಳುಬಿದ್ದ ಮನೆಯಲ್ಲಿ ಜನ ಇದ್ದರೆ, ಅವರು ವಯೋಮಾನ ಸಂದು, ಜೀವ ಹಿಡಿದು, ಸಾವು– ಬದುಕಿನ ನಡುವೆ ಏಗುತ್ತಿರುತ್ತಾರೆ.

ಇತ್ತ ಗ್ರಾಮೀಣ ಯುವಕರು ಶಿಕ್ಷಣವಂತರಾಗುವ ಬಯಕೆಯಲ್ಲಿ ಸಹಜವಾಗಿಯೇ ನಗರಗಳತ್ತ ನಡೆದು ಸ್ವಲ್ಪಕಾಲ ವಿದ್ಯಾಭ್ಯಾಸದ ಗುಂಗಿನಲ್ಲಿ ಕಾಲ ಸರಿಸಿ ಅದರ ಕಡೆಯ ಗಳಿಗೆ ಎದುರಾಗುತ್ತಿದ್ದಂತೆ ದಿಕ್ಕುತಪ್ಪಿದಂತವರಾಗುತ್ತಾರೆ. ನಗರಗಳಲ್ಲಿ ವಿದ್ಯೆಗೆ ತಕ್ಕ ಉದ್ಯೋಗವಿಲ್ಲ. ಗ್ರಾಮಗಳ ಕಡೆ ಮುಖ ಮಾಡುವಂತಿಲ್ಲ. ಈ ಹಿನ್ನೆಲೆಯಲ್ಲೂ ನಿರುದ್ಯೋಗ ಭತ್ಯೆ, ಸ್ವಯಂ ಉದ್ಯೋಗದ ಸರ್ಕಾರಿ ನೆರವು ಇವೆಲ್ಲಾ ಚಾಲ್ತಿಗೆ ಬರುತ್ತಲಿವೆ. ವಿದ್ಯೆ, ನಿರುದ್ಯೋಗ ಭತ್ಯೆ, ಸ್ವಯಂ ಕಾಯಕ ನೆರವು ಇದೆಲ್ಲಾ ನಗರಕೇಂದ್ರಿತವೇ ಆಗುವುದಾದರೆ, ಗ್ರಾಮಗಳು ಕ್ರಮೇಣ ಜೀವ ಕಳೆದುಕೊಳ್ಳಬೇಕಾಗುತ್ತದೆ.

ಗ್ರಾಮೀಣ ವಾತಾವರಣದಲ್ಲಿ ವ್ಯವಸಾಯ ಬದುಕೆಂಬುದು ಸೋತು ಸೊರಗಿ ಸಾಯುವಂತಾಗಿರುವಾಗ ಅದರ ಮುಂದಿನ ಸರದಿ ಯುವಕರದೂ ಆದರೆ ಆಶ್ಚರ್ಯವಿಲ್ಲ. ಇದರ ಮುನ್ಸೂಚನೆಯಂತೆ ವಿಶ್ವವಿದ್ಯಾನಿಲಯಗಳು ಅವಿಶ್ರಾಂತಿಯ ತಾಣಗಳಾಗುತ್ತಿವೆಯಲ್ಲ! ಹೀಗಾಗುವ ಮುನ್ನವೇ ಪ್ರಾಥಮಿಕ, ಪ್ರೌಢಶಾಲಾ ಸಂದರ್ಭದಲ್ಲಿ ಮಕ್ಕಳ ಶಿಕ್ಷಣ, ಆಟ–ಪಾಠಗಳಲ್ಲಿ ಅವರಿಗೆ ಗ್ರಾಮಮೂಲದ ಚಟುವಟಿಕೆಗಳನ್ನು ಪ್ರಾಯೋಗಿಕವಾಗಿಯೇ ಅಭ್ಯಾಸ ಮಾಡಿಸಿದರೆ, ಆಸಕ್ತಿ ಮೂಡಿಸಿದರೆ ಹೇಗೆಂಬ ಒಂದು ಪುಟ್ಟ ಪ್ರಾಯೋಗಿಕ ಯೋಜನೆ ಚಾಮರಾಜನಗರದ ದೀನಬಂಧು ಅನಾಥ ಮಕ್ಕಳ ಶಾಲೆಯಲ್ಲಿ ನೆರವೇರಿತು.

ಯಾವ ಕಾಯಕವೂ ಕೀಳರಿಮೆಯದಲ್ಲ ಎಂಬ ಅರಿವನ್ನು ಮಕ್ಕಳ ಮನಕ್ಕೆ ತುಂಬುವುದಾದರೆ ಬೆಳೆದ ಮಕ್ಕಳಿಗೆ ಭವಿಷ್ಯದಲ್ಲಿ ‘ನಾನು ಶಿಕ್ಷಣ ಹೊಂದಿರುವುದು ನಿಜ. ಆದರೆ, ನನ್ನ ಕಾಲ ಮೇಲೆ ನಿಂತು ಭದ್ರ ಹೆಜ್ಜೆಗಳನ್ನಿಟ್ಟು ನಡೆಯಬಲ್ಲೆ’ ಎನಿಸಬಹುದು. ಗ್ರಾಮೀಣ ಮಕ್ಕಳು ಅಥವಾ ಅರಣ್ಯವಾಸಿ ಮಕ್ಕಳು ಹೇಗೆ ಕೀಳರಿಮೆಯಿಂದ ನಗರ ಪ್ರದೇಶದ ವಾತಾವರಣವನ್ನು ಎದುರಿಸಲಾರದೆ ಸೋಲುತ್ತವೋ ಹಾಗೆಯೇ ಕೇವಲ ಮೇಲರಿಮೆಯಲ್ಲೇ ಶಿಕ್ಷಣ ಪಡೆಯುವ ನಗರವಾಸಿ ಮಕ್ಕಳು ಅಂದಂದಿನ ಸಮಯಕ್ಕೆ ಬೇಕಾದ ಪಠ್ಯವನ್ನಷ್ಟೇ ಬಾಯಿಪಾಠ ಮಾಡಿ ಮತ್ಯಾವ ಸಂಗತಿಯನ್ನು ಅರಿಯದವರಾಗಿ ಸೋಲುತ್ತಿರುವುದು ಸ್ಪಷ್ಟವಾಗಿದೆ.

ಆದಿವಾಸಿ ಸಮೂಹದ ಗಿರಿಜನ ವಸತಿಶಾಲೆ ನಿರ್ಮಾಣಕ್ಕೆ, ವಸತಿಗೆ ಎಷ್ಟೇ ಹಣ ಸುರಿದರೂ ಅಲ್ಲಿಯ ಮಕ್ಕಳಿಗೆ ಬೇಕಾದ ಶಿಕ್ಷಣ ಕ್ರಮ ಯಾವ ಬಗೆಯದು ಎಂಬುದನ್ನು ಇನ್ನೂ ರೂಪಿಸಲಾಗಿಲ್ಲ. ಆದಿವಾಸಿ ಮಕ್ಕಳು ಪ್ರಾಥಮಿಕ ಶಾಲೆ ಕಲಿಯುತ್ತಿದ್ದಂತೆ ಮುಂದಿನ ತರಗತಿಗೆ ಕಾಡಿನಿಂದ ನಾಡಿನ ಕಡೆಗೆ ತಲೆ ಹಾಕಲು ಅಳುಕುತ್ತವೆ. ಯಾಕೆಂದರೆ, ಕೇವಲ ಗ್ರಾಮೀಣ ಮಕ್ಕಳು ಆಡುವ ಕನ್ನಡ ನುಡಿಯ ಕ್ರಮವೇ ಅವರಿಗೆ ಕೀಳರಿಮೆ ತಂದುಬಿಡುತ್ತದೆ. ಗ್ರಾಮೀಣ ತುಸು ಸುಧಾರಿತ ಕನ್ನಡವೇ ಅವಕ್ಕೆ ಇಂಗ್ಲಿಷ್ ಇದ್ದಂತೆ. ಇನ್ನು ಇಂಗ್ಲಿಷ್ ಅಂದರೆ ಅದು ಎಂದೂ ಕಾಣದ, ಕೇಳದ ಭಾಷೆಯಾಗಿ ಅರಣ್ಯವಾಸಿ ಬಾಲಕರು ತಮ್ಮ ಮೂಲನೆಲೆಗೆ ವಾಪಸಾಗುವ ಪ್ರಸಂಗಗಳು ನಿರಂತರವಾಗಿ ಜರುಗುತ್ತಲೇ ಇವೆ. ಇಂತಹ ಸಂದರ್ಭದಲ್ಲಿ ಆದಿವಾಸಿಗಳಿಗಾಗಲಿ, ಗ್ರಾಮೀಣ ವಿದ್ಯಾರ್ಥಿಗಳಿಗಾಗಲಿ ತಮ್ಮ ಮೂಲನೆಲೆ ಮತ್ತು ಸ್ಥಳೀಯ ಜ್ಞಾನಶಕ್ತಿಯ ಬಗ್ಗೆ ಭರವಸೆಯನ್ನು ತುಂಬಿ ಅವರ ಕಾಯಕ ಕ್ರಮವನ್ನು ಆಧುನಿಕ ಸಂದರ್ಭಕ್ಕೆ ತಕ್ಕಂತೆ ಮೇಲಕ್ಕೆತ್ತರಿಸಿ ಅವರದೇ ದುಡಿಮೆಯ ಮಾರ್ಗದಲ್ಲಿ ತೊಡಗಿಸಿದರೆ, ಹೇಗೆಂಬ ಚಿಂತನೆಯ ಹಿನ್ನೆಲೆಯಲ್ಲಿ ಚಾಮರಾಜನಗರದ ಅನಾಥ ಮಕ್ಕಳ ದೀನಬಂಧು ಆಶ್ರಮದ ಮತ್ತು ಅಲ್ಲಿಯೇ ವಿದ್ಯಾಭ್ಯಾಸಗೈಯುತ್ತಿರುವ ಸುಮಾರು ನಾಲ್ಕು ನೂರು ಗ್ರಾಮೀಣ ಮಕ್ಕಳ ಪ್ರೌಢಶಾಲೆಯಲ್ಲಿ ಒಂದು ಕಾಯಕ ಕುಟೀರವನ್ನು ಆರಂಭ ಮಾಡಲಾಗಿದೆ.

ದೀನಬಂಧು ಶಾಲೆಯ ಕಟ್ಟಡ ಅಲ್ಲಿಯ ಬೋಧನಾ ಕೋಣೆಗಳ ರಚನಾ ಮಾದರಿಯೇ ವಿಶಿಷ್ಟವಾಗಿರುವಂತಿದೆ. ಅಂದರೆ ಇದು ಸರ್ಕಾರಿ ಶಾಲೆಯಲ್ಲ. ಖಾಸಗಿ ಸಂಸ್ಥೆಯಂತೆಯೂ ಅಲ್ಲ. ‘ಇಂಡೋಮಿಮ್’ ಸಂಸ್ಥೆಯ ನೆರವಿನಿಂದ ನಡೆಯುತ್ತಿರುವ ಕನ್ನಡ ಶಾಲೆ. ಆದರೆ ಇಂಗ್ಲಿಷನ್ನು ಕಲಿಸಲಾಗುತ್ತಿದೆ. ಮಧ್ಯಾಹ್ನದ ಊಟವನ್ನು ಶಾಲಾ ಮಂಡಳಿಯೇ ನೀಡುತ್ತದೆ. ಈ ಶಾಲೆಯ ಕೊಠಡಿಗಳು ವೃತ್ತಾಕಾರಕ್ಕಿವೆ. ಮಕ್ಕಳು ಸುತ್ತಲೂ ಕೂರಬಹುದು. ಅಧ್ಯಾಪಕರು ಮಧ್ಯೆ ನಿಂತು ಓಡಾಡುತ್ತಾ ಎಲ್ಲಾ ಮಕ್ಕಳನ್ನು ಮಾತಾಡಿಸುತ್ತಾ ಪಾಠ ಮಾಡಬಹುದು.

ಈ ಪ್ರೌಢಶಾಲೆಯೊಳಗಿರುವ ವಿಶಾಲ ವಿಜ್ಞಾನ ಪ್ರದರ್ಶನ ಕೋಣೆ ಒಮ್ಮೆ ಎಲ್ಲರೂ ನೋಡುವಂತೆ, ಕಲಿಯುವಂತೆ, ಅರಿವಿಗೆ ತಂದುಕೊಳ್ಳುವಂತಿದೆ. ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮಕ್ಕಳಿಗೆ ಅರ್ಥವಾಗುವ ಸುಲಭ ಕನ್ನಡದಲ್ಲಿ ವಿಜ್ಞಾನ ಲೇಖನಗಳನ್ನೊಳಗೊಂಡ ‘ಅನುಭವ’ ಮಾಸಿಕ ಪತ್ರಿಕೆಯನ್ನು ಶಾಲಾ ಮಂಡಳಿ ಹೊರತರುತ್ತಿದೆ. ಇದರಲ್ಲಿ ವಿಶ್ವವಿದ್ಯಾನಿಲಯದಲ್ಲಿನ ವಿಜ್ಞಾನ ಪ್ರಾಧ್ಯಾಪಕರಿಂದ ಹಿಡಿದು ಬೇರೆ ಬೇರೆ ವಲಯದ ಪರಿಸರ ಹಾಗೂ ವಿಜ್ಞಾನ ಕ್ಷೇತ್ರಗಳಲ್ಲಿನ ಸುಪ್ರಸಿದ್ಧ ಹಿರಿಯರು ಈ ಪತ್ರಿಕೆಗೆ ಪುಟ್ಟ ಪುಟ್ಟ ಲೇಖನ ಬರೆದಿರುವುದನ್ನು ಗಮನಿಸಬಹುದು. ಪ್ರತಿವರ್ಷ ಗ್ರಾಮೀಣ ಸರ್ಕಾರಿ ಶಾಲೆಯಲ್ಲಿ ಮಕ್ಕಳು ನೆರವೇರಿಸುವ ಕ್ರಿಯಾತ್ಮಕ ವಿಜ್ಞಾನ ಸಂಗತಿ ಸಂಬಂಧದಲ್ಲಿ ಭಾಗವಹಿಸಿದವರಿಗೆ ಐವತ್ತು ಸಾವಿರ, ಇಪ್ಪತ್ತೈದು ಸಾವಿರ ರೂಪಾಯಿಯ ಬಹುಮಾನವನ್ನು ದೀನಬಂಧು ಶಾಲೆ ನೀಡುತ್ತದೆ.

ಈ ಸ್ಪರ್ಧೆಯೂ ಕೂಡ ದಾನಿಗಳ ನೆರವಿನಿಂದಲೇ ನಡೆಯುವಂತದ್ದು. ಈ ನೆಪದಲ್ಲಿ ದೀನಬಂಧು ಶಾಲೆ ತನ್ನ ಸುತ್ತಲಿನ ಚಾಮರಾಜನಗರ ವಲಯದ ಸರ್ಕಾರಿ ಶಾಲೆಗಳನ್ನು ಬೇರೆ ಬೇರೆ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಯಸುತ್ತದೆ. ಶಾಲೆಯ ಹೊರಗಿರುವ ವಿಜ್ಞಾನ ಪ್ರಯೋಗಾಲಯದ ಜೊತೆಗೆ ಶಾಲೆಯ ಹೊರ ಆವರಣದಲ್ಲಿ ಸುಮಾರು ಅರ್ಧ ಎಕರೆ ಮೈದಾನದಲ್ಲಿ ಮಕ್ಕಳ ವಿಜ್ಞಾನ ಪಾರ್ಕ್ ಇದೆ. ಆಡುತ್ತಾ, ಕಲಿಯುವುದರ ನಡುವೆಯೇ ಇತ್ತೀಚೆಗೆ ಶಾಲೆಯ ಒಳ ಆವರಣದಲ್ಲೂ ಗಾಂಧೀಜಿ ಅವರ ಜನ್ಮದಿನದ 150ನೇ ವರ್ಷಾಚರಣೆಯ ಸಂದರ್ಭದಲ್ಲಿ ಕಾಯಕ ಕುಟೀರವೂ ಆರಂಭಗೊಂಡಿದೆ.

ದೀನಬಂಧು ಶಾಲೆಯ ಕಾಯಕ ಕುಟೀರದ ಆರಂಭವೆಂದರೆ, ಬಟ್ಟೆ ನೇಯುವ, ಮಡಕೆ ಮಾಡುವ, ನೂಲು ತೆಗೆಯುವ, ಸಾಮೂಹಿಕ ಪ್ರಾರ್ಥನೆಯ ಪ್ರಾತ್ಯಕ್ಷಿಕೆಗಳನ್ನು ತೋರಿಸಲಾಯಿತಷ್ಟೆ. ತೆಂಗಿನ ಮಟ್ಟಾಳೆ ಹೊದಿಸಿರುವ, ಅದರ ಕೆಳಗೆ ಅಡಕೆ ಮತ್ತು ಬಿದಿರಿನ ಪಟ್ಟಿಕೆಗಳಿರುವ, ಅದರ ಕೆಳಗೆ ಅರ್ಧಭಾಗಕ್ಕೆ ಮಣ್ಣಿನ ಗೋಡೆ ಇರುವ ಈ ಕುಟೀರದೊಳಗೆ ನಡು ಮಧ್ಯಾಹ್ನದ ಬಿಸಿಲಿನಲ್ಲಿ ಕೂತರೂ ವಿದ್ಯುತ್ ಬಲದಿಂದ ಸುತ್ತುವ ಫ್ಯಾನ್ ಬೇಕಿಲ್ಲ. ಇನ್ನು ಒಳ ಆವರಣದ ಗೋಡೆಗಳಲ್ಲಿ ಹನ್ನೆರಡನೇ ಶತಮಾನದ ವಚನಕಾರರ ಮಾತುಗಳು, ಅವರ ಕಾಲ್ಪನಿಕ ಚಿತ್ರಗಳನ್ನು ಬಿಡಿಸಲಾಗಿದೆ. ಶಿವಶರಣೆ ಸತ್ಯಕ್ಕ, ಮಾದಾರ ಚೆನ್ನಯ್ಯ, ಅಂಬಿಗರ ಚೌಡಯ್ಯರ ವಚನಗಳಿವೆ.

ಇದೀಗ ಮಕ್ಕಳಿಗೆ ಹೇಳಿಕೊಡಬೇಕಾದದ್ದೇ ಕಾಯಕದ ಮಹತ್ವವನ್ನು, ಅದರ ಹಿಂದಿರುವ ತತ್ವಗಳನ್ನು. ಈ ಕುಟೀರ ನಿರ್ಮಾಣದ ಮೂಲಕ ಅಲ್ಲಿ ನೆರವೇರಿಸಬಹುದಾದ ಸಣ್ಣ ಸಣ್ಣ ಕಾಯಕಗಳ ಮೂಲಕ ನಾವು ಮಕ್ಕಳ ನಡುವೆ ಉಂಟಾಗಬಹುದಾದ ತಾರತಮ್ಯದ ಭ್ರಮೆಗಳನ್ನು ಬಿಡಿಸಿ, ವಾಸ್ತವ ಮಾರ್ಗದಲ್ಲಿ ಹಿಡಿದ ಕಾಯಕದೊಡನೆ ಮುನ್ನಡೆಯುವ ಮಾರ್ಗವನ್ನು ತೋರಿಸಬೇಕಾಗಿದೆ. ಇದು ಮಾದಾರ ಚೆನ್ನಯ್ಯ, ಮಾದಾರ ಧೂಳಯ್ಯ, ಶರಣೆ ಸತ್ಯಕ್ಕ ಮುಂತಾದವರಿಗೆಲ್ಲಾ ಇದ್ದ ಆತ್ಮಪ್ರತ್ಯಯದ ಬಲ. ಚೋಳ ರಾಜನೊಡನೆ ತನ್ನ ಕೇರಿಗೆ ಬಂದ ಶಿವನನ್ನು ಕಂಡ ಮಾದಾರ ಚೆನ್ನಯ್ಯ ಶಿವನೇ ಈ ದೇಶವಾಳುವ ದೊರೆಯೊಡನೆ ಇಲ್ಲಿಗೇಕೆ ಬಂದೆ ಎಂದ. ಈ ಬೀದಿ ನೀನೂ, ದೊರೆಯೂ ಬರಬಹುದಾದ ಕೇರಿಯೇ ಎಂದರೆ, ಚೋಳದೊರೆ ‘ಮಾದಾರ ಚೆನ್ನ ನಿಮ್ಮ ಕೆರ್ಪಿಂಗೆ ಎನ್ನ ಶಿರ ಸರಿಯೇ’ ಎಂದು ತನ್ನ ಸಿಂಹಾಸನದ ಘನತೆಯನ್ನು ಚೆನ್ನಯ್ಯನ ಪಾದಕ್ಕೆ ತಂದು ಮುಟ್ಟಿಸಿದ.

ಇನ್ನು ಮಾದಾರ ಧೂಳಯ್ಯನು ಮೆಟ್ಟು ಹೊಲಿಯುತ್ತಿರುವಲ್ಲಿ ಅವನು ಚರ್ಮಕ್ಕೆ ಚುಚ್ಚಿದ ಸೂಜಿ ಮೊನೆಯಲ್ಲಿ ಶಿವನು ಪ್ರತ್ಯಕ್ಞವಾಗಿಬಿಟ್ಟ. ಧೂಳಯ್ಯ ಶಿವನನ್ನು ‘ಇತ್ತಲೇಕಯ್ಯ ಕಾಯದ ತಿತ್ತಿಯ ಹೊತ್ತಾಡುವವನ ಮುಂದೆ, ನಿನ್ನ ಭಕ್ತರ ಠಾವಿನಲ್ಲಿಗೆ ಹೋಗಿ ಮುಕ್ತಿಯ ಮಾಡು’ ಎಂದು ಕೇಳುವ ಧೈರ್ಯ ವಹಿಸಿದ. ದೈವಭಕ್ತಿ ಇರುವುದು ನುಡಿಯಲ್ಲಿ ಮತ್ತು ನೆರವೇರಿಸುವ ಸತ್ಯ ಶುದ್ಧ ಕಾಯಕದಲ್ಲಿ ಎಂಬುದನ್ನು ಗಾಂಧಿಯವರಿಗಿಂತ ಪೂರ್ವದಲ್ಲಿಯೇ ಶರಣರು ಜಾರಿಗೆ ತಂದರು. ಇಲ್ಲಿಯೇ ಶಿವ ಶರಣೆ ಸತ್ಯಕ್ಕ ಆಡಿದ ‘ಲಂಚವಂಚನಕ್ಕೆ ಕೈಯಾನದ ಭಾಷೆ’ ಎಂಬ ಮಾತು ಕೂಡ ಕಾಯಕ ಕುಟೀರದಲ್ಲಿ ಕಲ್ಪಿತ ಸತ್ಯಕ್ಕನ ಚಿತ್ರದೊಡನೆ ಇದೆ. ಮಕ್ಕಳಿಗೆ ಇಂದು ಅವರು ಯಾವುದೇ ವಿದ್ಯೆ ಮತ್ತು ಹುದ್ದೆಯನ್ನು ಅಲಂಕರಿಸಿರಲಿ ಶಾಲೆಯ ಶಿಕ್ಷಣ ನೀಡಬೇಕಾದುದು ಈ ಬಗೆಯ ಧ್ಯೇಯೋದ್ದೇಶಗಳ ಹಿನ್ನೆಲೆಯಲ್ಲಿ ಎನಿಸುತ್ತದೆ.

ಚಾಮರಾಜನಗರದ ಹೊರವಲಯದಲ್ಲಿ ಸರ್ಕಾರ ಇದೀಗ ದೀನಬಂಧು ಸಂಸ್ಥೆಗೆ ಕೊಡಮಾಡುತ್ತಿರುವ ಏಳು ಎಕರೆ ಭೂಮಿಯಲ್ಲಿ ಗ್ರಾಮೀಣ ಕಾಯಕದ ಮಾದರಿಗಳನ್ನು ಈ ಶಾಲಾ ಗಾಂಧೀ ಕುಟೀರದಿಂದಲೇ ವಿಸ್ತರಿಸಿ ಅಲ್ಲಿ ಮಕ್ಕಳಿಗೆ ಸುಸ್ಥಿರ ಬದುಕಿನ ಮಾರ್ಗೋಪಾಯಗಳನ್ನು ಹೇಗೆ ನೆಲೆಗೊಳಿಸಬಹುದೆಂಬುದು ದೀನಬಂಧು ಸಂಸ್ಥಾಪಕ ಜಿ.ಎಸ್.ಜಯದೇವ ಮತ್ತು ಅಲ್ಲಿಯ ಕಾರ್ಯಕರ್ತರ ಮುಂದಿನ ಯೋಜನೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT