ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ನಮನ: ಎನ್.ಎಸ್.ಎಲ್. ಎಂಬ ಶರೀಫ್ ಭಟ್ಟರು

Last Updated 6 ಮಾರ್ಚ್ 2021, 21:35 IST
ಅಕ್ಷರ ಗಾತ್ರ

ತಮ್ಮ 84ನೇ ವಯಸ್ಸಿನಲ್ಲಿ ದಿವಂಗತರಾದ ಡಾ.ಎನ್.ಎಸ್.ಲಕ್ಷ್ಮೀನಾರಾಯಣಭಟ್ಟರು ಕನ್ನಡದ ಒಬ್ಬ ಪ್ರಮುಖ ಕವಿಯಾಗಿ, ವಿಮರ್ಶಕರಾಗಿ, ಕಾವ್ಯಾನುವಾದಕರಾಗಿ ಕನ್ನಡ ಸಾರಸ್ವತಲೋಕಕ್ಕೆ ಪರಿಚಿತರು. ಅನೇಕ ಪ್ರತಿಷ್ಠಿತ ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರು. ತಮ್ಮ ಸ್ವಂತ ಕವಿತೆಗಳಿಂದ ಹಾಗೂ ಶೇಕ್ಸ್‌ಪಿಯರನ ಸಾನೆಟ್ಟುಗಳ, ಯೇಟ್ಸ್ ಮತ್ತು ಎಲಿಯಟ್ಟರ ಕವಿತೆಗಳ ತಮ್ಮ ಸೊಗಸಾದ ಅನುವಾದಗಳಿಂದ ಅವರು ಕನ್ನಡ ಕಾವ್ಯಲೋಕದಲ್ಲಿ ಎತ್ತರದ ಸ್ಥಾನ ಪಡೆದಿದ್ದಾರೆ. ಆದರೆ ಜನಸಾಮಾನ್ಯರಿಗೆ ಅವರು ಚಿರಪರಿಚಿತರೂ ಮತ್ತು ಪ್ರಿಯರೂ ಆಗಿರುವುದು ಅವರ ಸುಮಧುರ ಭಾವಗೀತೆಗಳಿಂದ ಮತ್ತು ಮಕ್ಕಳಗೀತೆಗಳಿಂದ (ಶಿಶುಸಾಹಿತ್ಯಕ್ಕಾಗಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ).

ಇಂದು ರೇಡಿಯೊ, ಟಿವಿ, ಧ್ವನಿಸಾಂದ್ರಿಕೆಗಳು ಮತ್ತು ಅಂತರ್ಜಾಲದಲ್ಲಿ ಅತ್ಯಂತ ಪ್ರಚಲಿತವಾಗಿರುವುದು ಹೆಚ್ಚಾಗಿ ಅವರ ಭಾವಗೀತೆಗಳೇ ಎಂದರೆ ತಪ್ಪಲ್ಲ. ‘ನವ್ಯ’ದ ಸಂದರ್ಭದಲ್ಲಿ ‘ಕ್ಯಾಸೆಟ್ ಕವಿ’ ಎಂಬ ಮೂದಲಿಕೆಗೆ ಕುಗ್ಗದೆ, ಅಗ್ಗದ ಚಿತ್ರಗೀತೆಗಳಿಗೆ ಪರ್ಯಾಯವಾಗಿ ಕಾವ್ಯಗುಣವುಳ್ಳ ಭಾವಗೀತೆಗಳನ್ನು ಕನ್ನಡದ ಕೇಳುಗರಿಗೆ ಒದಗಿಸಿದ ಕೆಚ್ಚೆದೆಯ ಕವಿ ಅವರು. ನಿಸಾರ್ ಅಹಮದ್ ಅವರು ತಮ್ಮ ‘ನಿತ್ಯೋತ್ಸವ’ದ ಮೂಲಕ ಭಾವಗೀತೆಗಳಿಗೆ ನೀಡಿದ ಹೊಸ ಆಯಾಮವನ್ನು ವಿಶ್ವದಾದ್ಯಂತ ವಿಸ್ತರಿಸಿದ ಕೀರ್ತಿ ಎನ್ನೆಸ್ಸೆಲ್ ಅವರದ್ದು. ಹೀಗಾಗಿ ಅವರಿಗೊಂದು ಸಾಂಸ್ಕೃತಿಕ ಮಹತ್ವ ತಾನಾಗಿ ಪ್ರಾಪ್ತವಾಗಿದೆ.

ಇನ್ನೊಂದು ಕಾರಣಕ್ಕೂ ಭಟ್ಟರು ಸ್ಮರಣೀಯರು. ಅದು, ಉತ್ತರ ಕರ್ನಾಟಕಕ್ಕಷ್ಟೇ ಪರಿಚಿತವಾಗಿದ್ದ ಸಂತ ಶಿಶುನಾಳ ಶರೀಫ್ ಸಾಹೇಬರ ಅನುಭಾವಗೀತೆಗಳನ್ನು ಸಂಗ್ರಹಿಸಿ, ಸಂಪಾದಿಸಿ, ಪರಿಷ್ಕರಿಸಿ, ಪುಸ್ತಕರೂಪದಲ್ಲಿ ಪ್ರಕಟಿಸಿ, ಅವುಗಳನ್ನು ಇಡೀ ನಾಡಿಗೆ ತಲುಪಿಸಿದ್ದು. ಹಾಗೆಯೇ, ಅನಂತಸ್ವಾಮಿ, ಅಶ್ವತ್ಥ್, ಶಿವಮೊಗ್ಗ ಸುಬ್ಬಣ್ಣ ಮುಂತಾದ ಖ್ಯಾತ ಗಾಯಕರಿಂದ ಅವುಗಳನ್ನು ಹಾಡಿಸಿ, ಕನ್ನಡಿಗರೆಲ್ಲರ ನಾಲಿಗೆಯ ಮೇಲೂ ಅವು ನಲಿಯುವಂತೆ ಮಾಡಿದ್ದು. ತಾವು ಹೋದಲ್ಲೆಲ್ಲ ಶರೀಫರ ಬಗ್ಗೆ ಮಾತಾಡಿ, ‘ಶರೀಫ್ ಭಟ್ಟ’ ಎಂಬ ಬಿರುದನ್ನು ಗಳಿಸಿದ್ದು.

ಭಟ್ಟರ ಮತ್ತೊಂದು ಅಭಿನಂದನೀಯ ಸಾಧನೆ ಹೀಗಿದೆ: ಅವರು ನಾಲ್ಕು ಬಾರಿ ಅಮೆರಿಕದ ಪ್ರವಾಸ ಮಾಡಿದ್ದಾರೆ. ಅಲ್ಲಿನ ಹಲವಾರು ಕನ್ನಡ ಸಂಘಗಳಲ್ಲಿ ಕನ್ನಡದ ಶ್ರೀಮಂತ ಸಾಹಿತ್ಯ ಪರಂಪರೆಯ ಬಗ್ಗೆ 98 ಉಪನ್ಯಾಸಗಳನ್ನು ನೀಡಿ ಜನಪ್ರಿಯರಾಗಿದ್ದಾರೆ. ಅಮೆರಿಕನ್ನಡಿಗರ ಒತ್ತಾಯದ ಮೇರೆಗೆ, ಕನ್ನಡದ ಅಭಿಜಾತ ಸಾಹಿತ್ಯ ಚರಿತ್ರೆಯ ಬಗ್ಗೆ, ಸರಳವಾಗಿ, ಸಂಕ್ಷಿಪ್ತವಾಗಿ, ಆದರೆ ಸಾರವತ್ತಾಗಿ ತಾವೇ ಮಾತಾಡಿ, ಅದನ್ನು ಧ್ವನಿಸಾಂದ್ರಿಕೆಗಳಲ್ಲಿ ಮುದ್ರಿಸಿ, ಅಂಥ ಐನೂರಕ್ಕೂ ಹೆಚ್ಚು ಪ್ರತಿಗಳನ್ನು ಅಮೆರಿಕದಾದ್ಯಂತ ಹಂಚಿದ್ದಾರೆ. ಕನ್ನಡದ ‘ಸೀಮೋಲ್ಲಂಘನ’ಕ್ಕೆ ಹೀಗೆ ತಮ್ಮ ಕೊಡುಗೆ ಸಲ್ಲಿಸಿ ಅವರು ಕೃತಕೃತ್ಯರಾಗಿದ್ದಾರೆ.

ಎನ್ನೆಸ್ಸೆಲ್ ತುಂಬ ಒಳ್ಳೆಯ ಉಪನ್ಯಾಸಕರೆಂದು ತಮ್ಮ ಸೇವಾವಧಿಯುದ್ದಕ್ಕೂ ವಿದ್ಯಾರ್ಥಿಗಳಿಗೆ ಬಹು ಪ್ರಿಯರಾಗಿದ್ದವರು. ಕಾವ್ಯವಿರಲಿ, ಶಾಸ್ತ್ರವಿರಲಿ, ಸಂಶೋಧನೆಯಿರಲಿ ಅವರ ಬೋಧನೆ ಅರೆಕ್ಷಣವೂ ಬೋರಾಗದಂತೆ, ಸತ್ವಪೂರ್ಣವಾಗಿ, ಸ್ವಾರಸ್ಯಕರವಾಗಿ ಇರುತ್ತಿತ್ತೆಂದು ಅವರ ವಿದ್ಯಾರ್ಥಿಗಳೆಲ್ಲರೂ ಜ್ಞಾಪಿಸಿಕೊಳ್ಳುತ್ತಾರೆ. ಹಾಗೆಯೇ ಎನ್ನೆಸ್ಸೆಲ್ ತುಂಬ ಜನಪ್ರಿಯ ಭಾಷಣಕಾರರೂ ಆಗಿದ್ದರು. ಯಾವುದೇ ವಿಷಯವಿರಲಿ, ಕೇಳುಗರು ತನ್ಮಯರಾಗುವಂತೆ ಮಾತಾಡಿ ಮೋಡಿ ಮಾಡಬಲ್ಲ ಕಲೆ ಅವರಿಗೆ ಸಿದ್ಧಿಸಿತ್ತು.

ವೈಯಕ್ತಿಕವಾಗಿ ಎನ್ನೆಸ್ಸೆಲ್ ಅವರು ನನಗೆ ಅತ್ಯಂತ ಆಪ್ತರಾಗಿದ್ದವರು. ಸುಮಾರು ಐವತ್ತು ವರ್ಷಗಳಷ್ಟು ನಿಡುಗಾಲದ ಒಡನಾಟ ನಮ್ಮದು. ತಮ್ಮ ಉತ್ತೇಜನ ಮತ್ತು ವಿಮರ್ಶೆಯೊಂದಿಗೆ ನನ್ನನ್ನು ಕವಿಯಾಗಿ ಅಕ್ಕರೆಯಿಂದ ಬೆಳೆಸಿದವರು ಅವರು. ಜೊತೆಗೆ ನನಗೊಬ್ಬ ಅನುರೂಪಳಾದ ಜೀವನ ಸಂಗಾತಿಯನ್ನು ಹುಡುಕಿಕೊಟ್ಟವರೂ ಅವರೇ. ಹೀಗಾಗಿ ನಾನು ಮತ್ತು ನನ್ನ ಮಡದಿ ಗಿರಿಜ, ಎನ್ನೆಸ್ಸೆಲ್ ಅವರನ್ನು ಸದಾ ಕಾಲಕೃತಜ್ಞತೆಯೊಂದಿಗೆ ನೆನೆಯುತ್ತಿರುತ್ತೇವೆ.

ಎನ್ನೆಸ್ಸೆಲ್ ಬಾಲ್ಯದಲ್ಲೇ ತಮ್ಮ ತಂದೆಯನ್ನು ಕಳೆದುಕೊಂಡು, ತಾಯಿಯ ಆರೈಕೆಯಲ್ಲಿ, ಕಡು ಬಡತನದಲ್ಲಿ ನೊಂದು ಬೆಂದು ಬೆಳೆದವರು. ಮೈಸೂರಿನಲ್ಲಿ ವಾರಾನ್ನ ಮಾಡಿಕೊಂಡು ಎಂ.ಎ. ಪದವಿ ಗಳಿಸಿದವರು. ಯಾವುದೇ ವಶೀಲಿಬಾಜಿಗಳಿಲ್ಲದೆ ಕೇವಲ ತಮ್ಮ ಪ್ರತಿಭೆ, ಸಂಕಲ್ಪ ಮತ್ತು ಪರಿಶ್ರಮದ ಮೂಲಕ ಕವಿಯಾಗಿ, ವಿಮರ್ಶಕರಾಗಿ, ಕಾವ್ಯಾನುವಾದಕರಾಗಿ ಎತ್ತರದ ಸಾಧನೆ ಮಾಡಿ ಮಾನ್ಯರಾದವರು. ಈ ಸಾಧನೆಯ ಹಾದಿಯಲ್ಲಿ ಅವರು ಅನೇಕ ಎಡರು ತೊಡರುಗಳನ್ನೂ, ಕಷ್ಟ ನಷ್ಟಗಳನ್ನೂ ಹಾದು ಬಂದಿದ್ದಾರೆ. ಆದರೆ ಅವರ ಸಹನೆ ಮತ್ತು ಧೃತಿ ಅವರನ್ನು ಗೆಲ್ಲಿಸಿ ನಿಲ್ಲಿಸಿವೆ. ಈ ಬಗ್ಗೆ, ನನಗೆ ತುಂಬ ಪ್ರಿಯವಾದ, ಅವರ ಭಾವಗೀತೆ ಹೀಗಿದೆ:

ಯಾರು ಏನೇ ಜರಿಯಲಿ
ಯಾವ ಹೆಸರೇ ಕರೆಯಲಿ
ತಾಳಿನಿಲ್ಲು, ಜೀವವೇ,
ಸಹನೆ ಗೆಲ್ಲಲಿ

ಆಡಲೆಂದೇ ಕೆಲವರು
ಕಾಡಲೆಂದೇ ಕೆಲವರು
ತಾಳಿರುವರು ಬಾಳನು
ನೋಯಲೆಂದೇ ಕೆಲವರು

ಕಿಡಿಮಾತನು ಕಾರಿ
ಹಿಡಿಧೂಳನು ತೂರಿ
ಕದ ಬಡಿದರೂ ಕಂಗೆಡದಿರು
ಜೀವದ ಧೃತಿ ತೀರಿ

ತಾಳಿದವರೇ ಗೆಲುವರು
ಆಳಗಳಿಗೆ ಇಳಿವರು
ನೋವು ಕಡೆದ ಮೆಟ್ಟಿಲೇರಿ
ಶಿಖರಗಳಲಿ ಹೊಳೆವರು

ಹೀಗೆ ಶಿಖರದಲ್ಲಿ ಹೊಳೆಯುತ್ತ, ನಮಗೆ ಮಾದರಿಯಾಗಿರುವ ‘ಹಿರಿಯಣ್ಣ’ ಎನ್ನೆಸ್ಸೆಲ್ ಅವರಿಗೆ ಕನ್ನಡ ಸಾರಸ್ವತಲೋಕದ ಪರವಾಗಿ ನನ್ನ ಪ್ರೀತಿಯ ನುಡಿನಮನಗಳು.

ಕವಿ ಲಕ್ಷ್ಮೀನಾರಾಯಣ ಭಟ್ಟ ನಿಧನ

ಬೆಂಗಳೂರು: ಕನ್ನಡದ ಜನಪ್ರಿಯ ಕವಿಗಳಲ್ಲಿ ಒಬ್ಬರಾದ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ (84) ಅವರು ಶನಿವಾರ ಮುಂಜಾನೆ ನಿಧನರಾದರು.‌ ಅವರಿಗೆ ಪತ್ನಿ, ಓರ್ವ ಪುತ್ರ ಮತ್ತು ಪುತ್ರಿ ಇದ್ದಾರೆ.

ಬನಶಂಕರಿಯಲ್ಲಿರುವ ಅವರ ನಿವಾಸದಲ್ಲಿ ಬೆಳಿಗ್ಗೆ 9 ಗಂಟೆಯಿಂದ 10 ಗಂಟೆಯವರೆಗೆ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬನಶಂಕರಿಯ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನಡೆಯಿತು.

‌ಅವರು ಕೆಲ ದಿನಗಳಿಂದ ಅವರು ವಯೋಸಹಜ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಅವರ ಮಗ ಅಮೆರಿಕದಲ್ಲಿದ್ದಾರೆ. ಕೋವಿಡ್‌ ಕಾರಣದಿಂದ ಅಂತರರಾಷ್ಟ್ರೀಯ ಪ್ರಯಾಣಕ್ಕೆ ನಿರ್ಬಂಧವಿರುವ ಕಾರಣ ಅವರಿಗೆ ಬರಲು ಆಗಲಿಲ್ಲ. ಹೀಗಾಗಿ, ಅವರ ಅಳಿಯ, ಸ್ಮಾರ್ತ ಬ್ರಾಹ್ಮಣ ಸಂಪ್ರದಾಯದಂತೆ ಧಾರ್ಮಿಕ ವಿಧಿ ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT