ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪನ ನೆನಪು | ‘ನಡೆದು, ನಡೆ ಕಲಿಸಿದ ಅಪ್ಪ ಓಕೆ’

Last Updated 20 ಜೂನ್ 2020, 19:45 IST
ಅಕ್ಷರ ಗಾತ್ರ

ನನ್ನ ತಂದೆ, ಅಶೋಕವರ್ಧನ. ಮಂಗಳೂರಲ್ಲಿ ಅತ್ರಿ ಬುಕ್ ಸೆಂಟರ್ ಹೆಸರಿನ ಪುಸ್ತಕದ ಅಂಗಡಿಯನ್ನು ಮೂವತ್ತೈದು ವರ್ಷಕಾಲ ಯಶಸ್ವಿಯಾಗಿ ನಡೆಸಿದರು, ವ್ಯಾಪಾರವನ್ನು ಸಾಹಿತ್ಯ ಸೇವೆ ಎಂದೇ ನಡೆಸಿ, ನಿವೃತ್ತರಾಗಿದ್ದಾರೆ. ನಾನು ಸಣ್ಣವನಾಗಿದ್ದಾಗ, ನನಗೆ ಮನೆಯಲ್ಲಿ ರಾತ್ರಿಯ ಒಂದು ಪ್ರಮುಖ ಆಕರ್ಷಣೆ, ಅಪ್ಪನಿಂದ ಕಥೆ ಹೇಳಿಸಿಕೊಳ್ಳುವುದು.

ತಂದೆಗೆ ಪುಸ್ತಕದ ಅಂಗಡಿ ಇದ್ದ ಕಾರಣ ತಂದೆಗೆ ಪ್ರಿಯವಾದ ಟಿನ್ ಟಿನ್ ರೀತಿಯ ಕಾಮಿಕ್ ಪುಸ್ತಕದಿಂದ ಕಥೆ ಹೇಳಿಸಿಕೊಂಡದ್ದು ನನ್ನ ಮೊದಲ ನೆನಪು. ಪ್ರತಿ ರಾತ್ರಿಯೂ, ಟಿನ್ ಟಿನ್ ಸಾಹಸದಿಂದ ಕೆಲವು ಸಾಲುಗಳನ್ನು ತಂದೆ ಓದಿ ಹೇಳುತ್ತಿದ್ದರು. ಹಾಗೆ ಯಾವುದೋ ದೇಶದ ಸಾಹಸೀ ಪತ್ರಕರ್ತನೊಬ್ಬನ ಸಾಹಸವನ್ನು ಕೇಳುತ್ತಾ ಮೊದಲು ನನ್ನ ವಿಶ್ವದರ್ಶನ ಆರಂಭವಾಗಿದ್ದು. ಮುಂದೆ ಆಸ್ಟ್ರಿಕ್ಸ್, ಫ್ಯಾಂಟಮ್, ಮಾಂಡ್ರೇಕ್ ಹೀಗೆ ಸಾಹಸೀ ಜೀವನ, ಮಾಯಾಲೋಕಕ್ಕೆ ನಾನು ತೆರೆದುಕೊಳ್ಳುತ್ತಾ ಹೋದೆ.

ಕಾಂಗರೂವಿನ ಮರಿಯಂತೆ, ಒಂದು ಬೆನ್ನು ಚೀಲದೊಳಗೆ ಕುಳಿತು ತಂದೆಯ ಬೆನ್ನಿನಲ್ಲಿ ಜೋತುಬಿದ್ದು ಮೊದಲು ನನ್ನ ಕಾಡು ಸುತ್ತಾಟ ಆರಂಭವಾಗಿದ್ದು.ನನಗೆ ಎಂಟೋ ಹತ್ತೋ ವರ್ಷವಾದಾಗಲೇ ಮಂಗಳೂರಿನ ನ್ಯೂಚಿತ್ರಾ ಸಿನೆಮಾ ಮಂದಿರದಲ್ಲಿ ಜೇಮ್ಸ್ ಬಾಂಡ್ ಇತ್ಯಾದಿ ಸಿನೆಮಾಗಳನ್ನು ನೋಡಲು ಕರೆದುಕೊಂಡು ಹೋಗುತ್ತಿದ್ದರು. ಸಿನೆಮಾಕ್ಕೆ ಹೋಗುವುದು ಒಂದು ವಿಶಿಷ್ಟ ಅನುಭವ. ತಂದೆ ರಾತ್ರಿ ಎಂಟಕ್ಕೆ ಅಂಗಡಿ ಮುಚ್ಚಿ ಮನೆಗೆ ಬರುತ್ತಿದ್ದರು. ತುರ್ತಾಗಿ ಅಪ್ಪ-ಅಮ್ಮ ನಾನು ಊಟ ಮುಗಿಸಿ, ತಂದೆ-ತಾಯಿ ಮನೆಗೆಲಸವನ್ನು ಧಾವಂತದಲ್ಲೇ ಮುಗಿಸಿ ಚಿತ್ರಮಂದಿರದ ಕೊನೆಯ ಪ್ರದರ್ಶನಕ್ಕೆ ಹೋಗುತ್ತಿದ್ದೆವು. ನನಗೆ ಅದೊಂದು ಅದ್ಭುತ ಅನುಭವ.

ತಂದೆಯ ಪುಸ್ತಕದ ಅಂಗಡಿಯಲ್ಲಿ ನಿತ್ಯವೂ ಬರುತ್ತಿದ್ದ ಸಾಹಿತಿ, ಕಲಾವಿದರ ಒಡನಾಟ ನನಗೂ ಸಿಗುತ್ತಿತ್ತು. ನನ್ನ ಶಾಲೆಯಲ್ಲೂ (ಸಂತ ಅಲೋಷಿಯಸ್) ತಂದೆಯವರ ಪರಿಚಯ ಇತ್ತು. ಹೀಗಾಗಿ ನನ್ನ ಮೇಲೆ ಸದಾ ಒಂದು ಪ್ರೀತಿಯ ಕಣ್ಣು ಇದ್ದೇ ಇತ್ತು.

ಅಪ್ಪನಿಗೆ ಸಿಟ್ಟು ಬರುತ್ತಿತ್ತು! ಅಥವಾ ಹಾಗೆ ನನಗೆ ಭಯ ಇತ್ತು. ಒಂದಷ್ಟು ಸಲ ಹೊಡೆತ ತಿಂದದ್ದೂ ನೆನಪಿದೆ. ಆದರೆ, ಇಂದು ಹಿಂತಿರುಗಿ ನೋಡಿದರೆ, ಅಪ್ಪನಿಗೆ ಸಿಟ್ಟು ಬರುತ್ತಿದ್ದಕ್ಕಿಂತ, ನನಗೆ ಅದರ ಬಗ್ಗೆ ಇದ್ದ ಭಯವೇ ದೊಡ್ಡದು ಎಂದು ಅನಿಸುತ್ತದೆ.

ಪಿ.ಯು.ಸಿ. ಮೊದಲ ವರ್ಷ ಅನುತ್ತೀರ್ಣನಾದೆ. ಒಂದು ವರ್ಷ ಮನೆಯಲ್ಲೇ ಕೂತು ಟ್ಯೂಷನ್ನಿಗೆ ಹೋಗಿ ಉತ್ತೀರ್ಣನಾಗಬೇಕಾದ ಸಂದರ್ಭ. ನಾನು ಅಂಗಡಿಗೆ ಬಂದು ಸಹಾಯಕನಾಗಿ ಕೆಲಸ ಮಾಡಬೇಕೆಂದು ಅಪ್ಪನ ಅಪ್ಪಣೆ. ಅಂಗಡಿಯಲ್ಲಿ ಪುಸ್ತಕ ಓದುವುದು ನಡೆಯುತ್ತಿತ್ತಾದರೂ, ಬೆಳಗ್ಗೆ ಕಸಗುಡಿಸುವುದರಿಂದ ತೊಡಗಿ, ಪಾರ್ಸೆಲ್ ತರುವುದು, ಗ್ರಾಹಕರಿಗೆ ಕಟ್ಟು ಕಟ್ಟಿಕೊಡುವುದು ಎಲ್ಲವನ್ನೂ ಮಾಡಬೇಕಿತ್ತು. ಅದನ್ನು ಅಪ್ಪನೂ ಶ್ರದ್ಧೆಯಿಂದ ಮಾಡುತ್ತಿದ್ದರು. ಯಾವುದೇ ಕೆಲಸವೂ ಕೀಳಲ್ಲ, ಮೇಲಲ್ಲ ಎನ್ನುವುದು ಆಗ ಗೊತ್ತಾಯಿತು. ಅನುತ್ತೀರ್ಣನಾದಾಗ ಸುತ್ತಲಿನ ಅನೇಕರು, ಅನೇಕ ಕಾರಣಗಳನ್ನು ಹುಡುಕಿದರು. ಆದರೆ ಅಪ್ಪ- ಅಮ್ಮ ಕಿವಿಗೊಡದೆ ಗಟ್ಟಿಯಾಗಿ ನನ್ನನ್ನು ನಂಬಿ ನಿಂತರು. ಕುಸಿದಿದ್ದ ಆತ್ಮಸ್ಥೈರ್ಯವನ್ನು ಮತ್ತೆ ಕಟ್ಟಿಕೊಳ್ಳಲು ನನಗೆ ಸಹಾಯವಾಗಿದ್ದು ಸುಳ್ಳಲ್ಲ.

ನಾನು ಸಿನೆಮಾ ಮಾಧ್ಯಮ ಕಲಿಯಬೇಕು ಎಂದು ಆಶಿಸಿದಾಗ, ಪೂನಾದ ಎಫ್.ಟಿ.ಐ.ಐ.ಗೆ ಕಳುಹಿಸಿದರು. ನಾನು ಆವರೆಗೆ ಕರ್ನಾಟಕದಿಂದ ಹೊರಗೆ ಹೋದವನಲ್ಲ. ಹಿಂದಿ ಬರುತ್ತಿರಲಿಲ್ಲ. ಪೂನಾಕ್ಕೆ ಕೈ-ಖರ್ಚಿಗೆ ಎಂದು ಮನೆಯಿಂದ ದುಡ್ಡು ಸಿಗುತ್ತಿತ್ತು. ಅದರ ಲೆಕ್ಕ ಬರೆದು ಪ್ರತಿ ವಾರ ಕಳಿಸುವಂತೆ ಅಪ್ಪ ಹೇಳುತ್ತಿದ್ದರು. ಆ ಲೆಕ್ಕವನ್ನು ಅಪ್ಪ ಎಷ್ಟು ನೋಡುತ್ತಿದ್ದರೋ ಗೊತ್ತಿಲ್ಲ. ಆದರೆ, ಖರ್ಚು ಮಾಡುವುದರ ಕುರಿತು ನನಗೆ ಸ್ಪಷ್ಟ ಶಿಸ್ತನ್ನಂತೂ ರೂಢಿಸಿತು.

ನನ್ನ ಬದುಕಿನ ವಾಸ್ತವಗಳು ಭಿನ್ನ ಎನ್ನುವುದು ಅಪ್ಪನ ಅರಿವಿಗೆ ಬಂದಿತ್ತು ಎಂದನಿಸುತ್ತದೆ. ಮೊದಲ ಬಾರಿಗೆ ನಾನು ಪಂಚತಾರಾ ಹೊಟೇಲಿನಲ್ಲಿ ಕೋಣೆಯಲ್ಲಿದ್ದಾಗ ಅಲ್ಲಿಗೆ ಬಂದಿದ್ದ ಅಪ್ಪ, ಒಬ್ಬ ಮನುಷ್ಯನಿಗೆ ಇರಲು ಇಷ್ಟು ದೊಡ್ಡ ಕೋಣೆಯ ಅಗತ್ಯ ಏನು ಎಂದು ಅಚ್ಚರಿಪಟ್ಟಿದ್ದರು. ಅಲ್ಲಿನ ಭವ್ಯತೆಗೆ ಒಂದಿಷ್ಟೂ ಬೆರಗಾಗಿರಲಿಲ್ಲ. ಹಾಗೇ ಹೆಗ್ಗೋಡಿನ ನೀನಾಸಮ್ ಗೆ ಕರೆದುಕೊಂಡು ಹೋಗಿ ನಾಟಕ ತೋರಿಸಿದ್ದರು, ಜಾಗತಿಕ ಸಿನೆಮಾಕ್ಕೆ ನನಗಿಂತ ಎಷ್ಟೋ ಮೊದಲೇ ಎಷ್ಟೋ ಹೆಚ್ಚು ತೆರೆದುಕೊಂಡಿದ್ದರು.

ನನ್ನ ಅಜ್ಜ ಜಿ.ಟಿ ನಾರಾಯಣರಾಯರ ಪ್ರಖರ ಬೆಳಕಲ್ಲಿ ನನ್ನ ತಂದೆ ಎಂದೂ ಬಾಡಿದವರಲ್ಲ. ಹಾಗೇ ನನ್ನ ಅಪ್ಪನದ್ದೇ ಪ್ರಭೆಯಲ್ಲಿ ನಾನು ತಿಣುಕಾಡದಂತೆ ಕಾಪಾಡಿದರು. ಮನೆಯಲ್ಲಿ ರಾಜಕೀಯವಾಗಿ, ಧಾರ್ಮಿಕವಾಗಿ ಮುಕ್ತ ವಾತಾವರಣವಿತ್ತು. ಪರಿಚಯದ ವಲಯದಲ್ಲಿ, ಎಡ- ನಡು- ಬಲ ಪಂಥೀಯರಿದ್ದರು. ಒಳಿತು ಕೆಡುಕುಗಳ ಚರ್ಚೆ ನಡೆಯುತ್ತಿತ್ತು. ನಿರ್ಧಾರ ನನಗೇ ಮುಕ್ತವಾಗಿಟ್ಟಿದ್ದರು.ತಂದೆ ನಿವೃತ್ತಿಯ ನಂತರ ಕಾಡು ಸುತ್ತುವುದು, ವನ್ಯಸಂರಕ್ಷಣೆಯ ವಿಷಯಕ್ಕೆ ಕೈಲಾದ ಕೆಲಸ ಮಾಡುವುದು, ಸಾಹಿತ್ಯ, ನಾಟಕ, ಯಕ್ಷಗಾನ, ತಾಳಮದ್ದಲೆ, ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗೆ ತನ್ನ ನಡೆಯಲ್ಲೇ ನನ್ನ ನಡೆ ಕಲಿಸಿದವರು ನನ್ನ ತಂದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT