ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡೊಳಗಿನ ಕಲೆ: ಅಮ್ಚೆ ಮದ್ಲೆ

Last Updated 12 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ
ADVERTISEMENT
""
""
""
""
""
""

‘ಮನೆಗೆ ನೆಂಟರು ಬಂದಿಹರು ಬಾರೆ ಗೆಳತಿ, ಆತಿಥ್ಯಕ್ಕೆ ಇರುವೆ ಚಟ್ನಿ ಮಾಡಬೇಕಿದೆ’ ಎಂದು ಹಾಡುತ್ತಾ ಮುಂದೆ ಹೊರಟಿದ್ದ ಮಹಿಳೆಯ ಹಾಡಿಗೆ ದನಿಗೂಡಿಸುತ್ತಲೇ ಇತರ ಮಹಿಳೆಯರು ಹಿಂಬಾಲಿಸುತ್ತಿದ್ದರು. ಸ್ವಲ್ಪ ದೂರದಿಂದ ಕೇಳಿ ಬರುತ್ತಿದ್ದ ಡೋಲಿನ ನಾದ ಅವರ ಹಾಡಿಗೆ ಮತ್ತಷ್ಟು ಮಾಧುರ್ಯವನ್ನು ತುಂಬುತ್ತಿತ್ತು.

ನಮ್ಮೂರಿನ ಹಸಿರಿನ ನಡುವೆ ನಮ್ಮ ಸಂಸ್ಕೃತಿಯ ರಾಯಭಾರಿಗಳು ನಾವು...

ಹಾಗೆಯೇ ಕಾಡು ಸುತ್ತಲು ಹೋಗಿದ್ದ ನನಗೆ ಈ ಹಾಡು ಕಿವಿಗೆ ಬೀಳುತ್ತಲೇ ಕುತೂಹಲದಿಂದ ಅವರನ್ನು, ಹುಡುಕಿ ಹಿಂಬಾಲಿಸುತ್ತಾ ಹೋದೆ. ಹಣೆಗೆ ಸೂರ್ಯ ಉದಯಿಸುತ್ತಿರುವಂತಹ ಕೆಂಪು, ಬಿಳಿಯ ಚಿತ್ತಾರ, ತಲೆಗೆ ಹಕ್ಕಿಗಳ ಪುಕ್ಕದಿಂದ ಮಾಡಿದ ಕಿರೀಟ, ಸೊಂಟಕ್ಕೆ ಮಾವಿನೆಲೆ, ನೇರಳೆ ಎಲೆಗಳನ್ನು ಕಟ್ಟಿಕೊಂಡು ಸುಂದರ ರಂಗೋಲಿ ಬಿಡಿಸಿದ ಮೊರದಲ್ಲಿ ಕೆಂಚಿರುವೆ ತುಂಬುತ್ತಿದ್ದರು ಆ ಮಹಿಳೆಯರು. ಅವರಿದ್ದ ಆ ತಾಣದ ಸುತ್ತಲೂ ದಟ್ಟಹಸಿರಿನ ರಾಜ್ಯಭಾರ ನಡೆದಿತ್ತು. ಕಾಡಿನ ನಡುವಿನ ಆ ತೊಟ್ಟಿಲಿನ ಮೌನ ಮುರಿಯುವಂತೆ ಡೋಲಿನ ನಾದ, ಹಾಡಿನ ನಿನಾದ ಅಲೆ, ಅಲೆಯಾಗಿ ತೇಲಿ ಬರುತ್ತಿತ್ತು.

ದೊಡ್ಡ ಮರದಲ್ಲಿ ನೇತಾಡುತ್ತಿದ್ದ ಕೆಂಚಿರುವೆ ಗೂಡನ್ನು ಮಹಿಳೆಯೊಬ್ಬರು ಉದ್ದನೆಯ ಕೋಲಿನಲ್ಲಿ ಬಡಿದು ಬೀಳಿಸುತ್ತಿದ್ದರು. ಇತರ ಮಹಿಳೆಯರು ಅದನ್ನು ಬಲು ಎಚ್ಚರಿಕೆಯಿಂದ ಮೊರದಲ್ಲಿ ಹಿಡಿದು ಸೋಸುತ್ತಿದ್ದರು. ಮತ್ತೊಬ್ಬ ಮಹಿಳೆ ಹಾಡು ಹೇಳಿದಾಗ ಉಳಿದವರು ಹೆಜ್ಜೆ ಹಾಕಿದರು.

ಯಲ್ಲಾಪುರ ತಾಲ್ಲೂಕಿನ ಸೋನಾರ್‌ ಜಡ್ಡಿ ಎಂಬ ಪುಟ್ಟ ಗ್ರಾಮ ಅಕ್ಷರಶಃ ಬಂಗಾರವೇ. ಈ ಊರನ್ನು ಸಿದ್ದಿ ಜನಾಂಗದ ಸಂಸ್ಕೃತಿಯ ತೊಟ್ಟಿಲು ಎಂದೂ ಹೇಳಬಹುದು. ಅಲ್ಲಿನ ಪ್ರಾಕೃತಿಕ ಸೊಬಗು, ಸಾಂಸ್ಕೃತಿಕ ಸಿರಿವಂತಿಕೆ ಎಂಥವರನ್ನೂ ಸೂಜಿಗಲ್ಲಿನಂತೆ ಸೆಳೆಯಬಲ್ಲದು. ಯಲ್ಲಾಪುರದಿಂದ ಮುಂಡಗೋಡಿಗೆ ಹೋಗುವ ರಸ್ತೆ ಮಧ್ಯೆ ಸಿಗುವ ಕುಚಗಾಂವ್‌ಗೆ ಬಂದು, ಅಲ್ಲಿಂದ ಆರು ಕಿ.ಮೀ ಕಾಡೊಳಗಿನ ಹಾದಿ ಕ್ರಮಿಸಿದರೆ ಈ ಗ್ರಾಮ ಸಿಗುತ್ತದೆ.

ಮೊಬೈಲ್‌ ಸಂಪರ್ಕದಿಂದ ಅತೀತವಾಗಿರುವ ಈ ಊರನ್ನು ಆಧುನಿಕತೆಯ ಯಾವ ಗಂಧ–ಗಾಳಿಯೂ ಸೋಕುವುದಿಲ್ಲ. ಸಂಸ್ಕೃತಿಯನ್ನು ಕಾಪಿಟ್ಟುಕೊಂಡು ಬದುಕುವ ಇಲ್ಲಿನ ಜನ, ಅದು ಕಾಡು ಪುಷ್ಪದಂತೆ ಯಾವಾಗಲೂ ಸುಗಂಧ ಸೂಸಬೇಕು ಎಂದು ಕನಸು ಕಂಡವರು. ಅಂತಹ ಕನಸುಗಾರರಲ್ಲಿ ಈ ಕಾಡಿನಲ್ಲಿಯೇ ಅರಳಿದ ಹೂವು ಲಿಲ್ಲಿ ಸಿದ್ದಿ ಸಹ ಒಬ್ಬರು. ತಾವು ಮಾತ್ರವಲ್ಲದೆ, ತಮ್ಮ ಸುತ್ತಲಿನ ಕುಸುಮಗಳಲ್ಲಿ ಅಡಗಿರುವ ಕಲೆಗಳನ್ನು ಪೋಷಿಸಿ ಅರಳಿಸುವ ಕಾರ್ಯದಲ್ಲಿ ಅವರು ತಲ್ಲೀನರು.

ಲಿಲ್ಲಿ ಸಿದ್ದಿ (ಎಡದಿಂದ ಮೊದಲನೆಯವರು) ಹಾಗೂ ಸಂಗಡಿಗರಿಂದ ಹಾಡಿನ ಸೊಬಗು...

ಸಿದ್ದಿ ಸಮುದಾಯದ ನೃತ್ಯ ಪ್ರಕಾರದ ಪರಂಪರೆಯನ್ನು ಬೆಳೆಸಿಕೊಂಡು ಹೋಗಲು ‘ಅಮ್ಚೆ ಮದ್ಲೆ ಡಮಾಮಿ ಕುಣಿತ’ ಎಂಬ ತಂಡವನ್ನೂ ಅವರು ಕಟ್ಟಿದ್ದಾರೆ. ಸಿದ್ದಿ ಸಮುದಾಯದ ಮಕ್ಕಳಿಗೂ ಈ ಕಲೆಯ ಅಭಿರುಚಿಯನ್ನು ಬೆಳೆಸಿದ್ದಾರೆ. ಲಿಲ್ಲಿ ಅವರ ಆಶಯಕ್ಕೆ ನೀರೆರೆದವರು ತಾಯಿ ಮೋನಿಕಾ ಇನ್ತ್ರೋಸ್‌ ಸಿದ್ದಿ ಹಾಗೂ ಪತಿ ಜಾಕಿ ಸಿದ್ದಿ.‌ ಸುತ್ತಲಿನ ಕುಚಗಾಂವ್‌, ತಾವರಕಟ್ಟದಲ್ಲಿಯೂ ವಾಸವಿರುವ ತಂಡದ ಸದಸ್ಯರನ್ನು ಒಂದುಗೂಡಿಸಿ ನೃತ್ಯ ಅಭ್ಯಾಸ ಮಾಡುತ್ತಾರೆ. ಲಾವಣಿ ಪದಗಳನ್ನೂಹಾಡುಗಳನ್ನೂ ಕಟ್ಟಿ ತಮ್ಮದೇ ರಾಗ ಸಂಯೋಜನೆಯಲ್ಲಿ ಎಲ್ಲರನ್ನೂ ರಂಜಿಸುತ್ತಾರೆ.

ಕಂಡಿದ್ದೆಲ್ಲಾ ಹಾಡಿಗೆ ಸಾಲು

ನಿತ್ಯ ಸೂರ್ಯ ಉದಯವಾದಾಗಿನಿಂದ ಮುಳುಗುವವರೆಗೆ, ಪ್ರಕೃತಿ, ಮಾನವ ಜೀವನದ ಪ್ರತಿಯೊಂದು ಸಂಗತಿ ಬಗ್ಗೆ ಕ್ಷಣಾರ್ಧದಲ್ಲಿ ಹಾಡು ಕಟ್ಟಿ ಹಾಡುವ ಈ ಸಿದ್ದಿಗಳ ವಿಶೇಷತೆ ಅಚ್ಚರಿ ಮೂಡಿಸುತ್ತದೆ. ನೋವು, ನಲಿವುಗಳ ಕುರಿತು ಹಾಡು ಕಟ್ಟಲು ಅವರಿಗೆ ಯಾವ ಪೂರ್ವ ಸಿದ್ಧತೆಗಳೂ ಬೇಕಾಗಿಲ್ಲ. ಪ್ರಕೃತಿ ಉಳಿಸುವ, ಸಂಬಂಧಿಕರಿಗೆ ಸ್ವಾಗತ ಕೋರುವ, ಇರುವೆ ಸಂಗ್ರಹಿಸುವ, ಕೋವಿಡ್‌ ಜಾಗೃತಿ ಕುರಿತೂ ಅವರು ಹಾಡು ಕಟ್ಟುತ್ತಾರೆ. ಮೊಳಕೆ ಒಡೆಯುವ, ಹೂವು ಅರಳುವ ಸದ್ದು, ಘಮಘಮಿಸುವ ಅದರ ಪರಿಮಳ ಕೂಡ ಅವರ ಹಾಡುಗಳಲ್ಲಿ ದಾಖಲಾಗುತ್ತದೆ. ಅವುಗಳಲ್ಲಿ ಬುಡಕಟ್ಟು ಸಂಸ್ಕೃತಿಯ ಜೀವನಾನುಭವವೇ ಅಡಗಿದೆ.

ಕೆಂಚಿರುವೆ ಹಿಡಿಯಲು ಮೊರ ಹಿಡಿದು ಹೊರಟಿರುವ ಮಹಿಳೆಯರು

ಸಿದ್ದಿ ಜನಾಂಗದ ಸಂಸ್ಕೃತಿಯ ಪ್ರಕಾರಗಳಲ್ಲಿ ಒಂದಾದ ಡಮಾಮಿ ಕುಣಿತಕ್ಕೆ ಡಮಾಮಿಯೇ (ಡೋಲು) ಪ್ರಮುಖ ವಾದ್ಯ. ಈ ನೃತ್ಯಕ್ಕೆ ಬಳಸುವ ಡೋಲು ಬರೋಬ್ಬರಿ 50 ಕೆ.ಜಿ ಇರುತ್ತದೆ. ಸಿದ್ದಿ ಸಮುದಾಯದವರು ಈ ಹಿಂದೆ ಜಿಂಕೆಯನ್ನು ಬೇಟೆಯಾಡಿ ಅದರ ಚರ್ಮವನ್ನು ನೆನೆಸಿ, ನಂತರ ಚೆನ್ನಾಗಿ ಬಡಿದು ಡೋಲಿಗೆ ಬಳಸುತ್ತಿದ್ದರು. ಈಗ ಆಡಿನ ಚರ್ಮವನ್ನು ಬಳಸಲಾಗುತ್ತಿದೆ. ಅದಕ್ಕೆ ಒಣಗಿದ ಆಲದಮರ, ಹೊನಗಲುಮರದ ಪೋಕಳನ್ನು ಬಳಸ ಲಾಗುತ್ತದೆ. ಅದರಿಂದ ಬರುವ ಸದ್ದು ಕುಣಿತಕ್ಕೆ ಮತ್ತಷ್ಟು ಹುಮ್ಮಸ್ಸು ತುಂಬುತ್ತದೆ ಎನ್ನುತ್ತಾರೆ ಜಾಕಿ ಸಿದ್ದಿ.

ನೃತ್ಯಕ್ಕೆ ವೇಷಭೂಷಣ ತೊಡುವಲ್ಲಿ ಒಬ್ಬರಿಗೊಬ್ಬರು ನೆರವಾಗುವ ರೀತಿ ಬಲು ವಿಶಿಷ್ಟವಾದುದು. ಹೊಸಯುಗಕ್ಕೂ ಸ್ಪರ್ಶ ನೀಡುವಂತೆ ತಮ್ಮ ಉಡುಪು ಆಭರಣಗಳಲ್ಲಿಯೂ ಬದಲಾವಣೆ ಮಾಡಿಕೊಂಡಿದ್ದಾರೆ. ಹಿಂದೆ ಸಿಗುತ್ತಿದ್ದ ಅಂಟು ಹೂವು, ಬಳ್ಳಿ ಗಿಡಗಳ ಕೊರತೆಯಿಂದಾಗಿ ಬಣ್ಣ ಬಣ್ಣದ ಉಡುಪು, ಪ್ಲಾಸ್ಟಿಕ್‌ ಎಲೆಗಳನ್ನು ಕಟ್ಟಿಕೊಂಡು ನೃತ್ಯ ಮಾಡುತ್ತಾರೆ. ಅವರದ್ದೇ ವಿಶಿಷ್ಟ ವಸ್ತ್ರ ವಿನ್ಯಾಸ ನಾಡು, ಕಾಡಿನ ಸಂಸ್ಕೃತಿಯ ಸಂಗಮದಂತೆ ಕಾಣುತ್ತದೆ.

ವೇಷಭೂಷಣ ಧರಿಸುವಲ್ಲಿ ನಿರತರಾದ ಸಿದ್ದಿ ಮಹಿಳೆಯರು

ಕಲೆಯ ಬಗ್ಗೆ ಅಗಾಧವಾದ ಪ್ರೀತಿ ಬೆಳೆಸಿಕೊಂಡಿರುವ ಲಿಲ್ಲಿ ಅವರು ಆಶಾ ಕಾರ್ಯಕರ್ತೆಯೂ ಹೌದು. ಆ ಕಾನನದ ಒಳಗೆ ಎಲ್ಲೇ ಏನೇ ಆರೋಗ್ಯ ಸಮಸ್ಯೆಯಾದರೂ ಹಗಲು ರಾತ್ರಿ ಸಹಾಯಕ್ಕೆ ನಿಲ್ಲುತ್ತಾರೆ. ಮಕ್ಕಳು, ಗರ್ಭಿಣಿಯರು, ಬಾಣಂತಿಯರ ಆರೈಕೆಯಲ್ಲೂ ಸಾರ್ಥಕ ಜೀವನ ಕಾಣುತ್ತಿದ್ದಾರೆ. ಸುತ್ತಲಿನ ಶಾಲೆಗಳಿಂದ ಮಕ್ಕಳಿಗೆ ನೃತ್ಯ ಕಲಿಸಲು ಲಿಲ್ಲಿ ಅವರನ್ನೇ ಕರೆಯುತ್ತಾರೆ. ಆ ಮೂಲಕ ಮಕ್ಕಳಲ್ಲೂ ತಮ್ಮ ಕಲೆಯ ಬಗ್ಗೆ ಪ್ರೀತಿ, ಅಭಿಮಾನ ಬೆಳೆಸುತ್ತಿದ್ದಾರೆ.

ಅಂದಹಾಗೆ, ಇರುವೆ ಚಟ್ನಿಯ ರುಚಿಯನ್ನು ಇಲ್ಲಿ ಬಣ್ಣಿಸಲು ಸಾಧ್ಯವಿಲ್ಲ. ಅದರ ಸ್ವಾದವನ್ನು ತಿಂದೇ ಸವಿಯಬೇಕು. ಡಮಾಮಿಯ ಸದ್ದು, ಅಮ್ಚೆ ಮದ್ಲ ಹಾಡಿನ ಮಾಧುರ್ಯ, ಸಿದ್ದಿ ನೃತ್ಯ ವೈಭವವೂ ಅದರ ಜತೆಗೂಡಿದರೆ ಅದಕ್ಕಿಂತ ಮಿಗಿಲಾದ ಸ್ವರ್ಗ ಬೇರೆ ಯಾವುದಿದೆ?

ಡಮಾಮಿ ನೃತ್ಯದ ಒಂದು ಝಲಕ್‌ ನೋಡಿ...

ಕೆಂಜಿರುವೆ ಚಟ್ನಿ, ಅಕ್ಕಿ ರೊಟ್ಟಿ!

ಕೆಂಚಿರುವೆ ಚಟ್ನಿ ಸಿದ್ದಿಗಳ ಸಾಂಪ್ರದಾಯಿಕ ಅಡುಗೆ ತಿನಿಸುಗಳಲ್ಲಿ ವಿಶಿಷ್ಟವಾದ ಖಾದ್ಯ. ಇದು ತಿನ್ನಲು ಹುಣಸೆ ಚಟ್ನಿಯಂತೆ ರುಚಿಯಾಗಿದ್ದು, ಔಷಧವಾಗಿಯೂ ಬಳಕೆಯಾಗುತ್ತದೆ. ಜ್ವರ, ಕಫ, ಕೆಮ್ಮು, ಶೀತ ನಿವಾರಣೆಗೆ ಈ ಚಟ್ನಿಯನ್ನು ಬಳಸುವ ರೂಢಿ ಇದೆ. ಬೇಸಿಗೆಯಲ್ಲಿ ಏಪ್ರಿಲ್, ಮೇ ತಿಂಗಳಲ್ಲಿ ಕೆಂಚಿರುವೆಗಳು ಹೆಚ್ಚಾಗಿ ಸಿಗುವುದರಿಂದ ಆ ಸಂದರ್ಭದಲ್ಲೇ ಮನೆ ಮನೆಗಳಲ್ಲಿ ಈ ಚಟ್ನಿಯ ಸಮಾರಾಧನೆ ಇರುತ್ತದೆ.

ಡೋಲಿನೊಂದಿಗೆ ಕಲಾವಿದ ಜಾಕಿ ಸಿದ್ದಿ

ಕಾಡಿನಿಂದ ಹೆಕ್ಕಿತಂದ ಇರುವೆಗಳನ್ನು ಮೊದಲು ಉಪ್ಪಿನಲ್ಲಿ ಉರುಳಿಸಲಾಗುತ್ತದೆ. ಅವುಗಳು ಸತ್ತ ನಂತರ ಕಡಿಮೆ ಉರಿಯಲ್ಲಿ ಹುರಿಯಲಾಗುತ್ತದೆ. ಹುರಿದ ಇರುವೆ, ಸುಟ್ಟ ಈರುಳ್ಳಿ, ಬೆಳ್ಳುಳ್ಳಿ, ಚೋಟು ಮೆಣಸಿನಕಾಯಿ, ಕರಿಮೆಣಸು, ಸ್ವಲ್ಪ ಶುಂಠಿ, ತೆಂಗಿನಕಾಯಿ, ಕರಿಬೇವಿನ ಎಲೆ ಹಾಗೂ ಉಪ್ಪು ಹಾಕಿ ಕಲ್ಲಿನಲ್ಲಿ ನುಣ್ಣಗೆ ರುಬ್ಬಿಕೊಳ್ಳುತ್ತಾರೆ. ಇದೇ ಕೆಂಚಿರುವೆ ಚಟ್ನಿ. ರೊಟ್ಟಿಯೊಂದಿಗೆ ಇದನ್ನು ಸವಿಯಲಾಗುತ್ತದೆ. ಅಕ್ಕಿ ರೊಟ್ಟಿ–ಕೆಂಚಿರುವೆ ಚಟ್ನಿ ಇದ್ದರೆ ನಮ್ಮ ಜನರಿಗೆ ಬೇರೇನೂ ಬೇಕಿಲ್ಲ ನೋಡಿ ಎಂದು ಲಿಲ್ಲಿ ಹೇಳುತ್ತಾರೆ. ಕೆಂಚಿರುವೆ ಬೇಟೆಗೆ ಮೊರ ಹಿಡಿದುಕೊಂಡು ಹಾಡುತ್ತಾ ಹೋಗುತ್ತಾರೆ. ಮೊರದ ತುಂಬಾ ಇರುವೆಗಳನ್ನುಹಿಡಿದು ತರುತ್ತಾರೆ.

ಚಿತ್ರಗಳು: ಸಬೀನಾಎ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT