ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Pv Web Exclusive: ಗ್ರೀಟಿಂಗ್ ಕಾರ್ಡು, ಪೋಸ್ಟು... ಒಂದಿಷ್ಟು ನೆನಪು

Last Updated 12 ಸೆಪ್ಟೆಂಬರ್ 2020, 7:37 IST
ಅಕ್ಷರ ಗಾತ್ರ

ಕೈಯಲ್ಲಿ ಪೆನ್‌–ಪೇಪರ್ ಹಿಡಿದು ಸರಿ–ತಪ್ಪು ಲೆಕ್ಕಾಚಾರ ಹಾಕಿದರೂ, ಕ್ಯಾಲ್ಕುಲೇಟರ್‌ನಲ್ಲಿ ಗುಣಾಕಾರ–ಭಾಗಾಕಾರ ಮಾಡಿದರೂ ಸಿಕ್ಕಿದ್ದು ಒಂದೇ ಉತ್ತರ: 15 ವರ್ಷ. ಮನೆಗೆ ಚೆಂದನೆಯ ಗ್ರೀಟಿಂಗ್ ಕಾರ್ಡು ಬಂದು ಮತ್ತು ಅದರ ಜೊತೆಗಿನ ಸಂಭ್ರಮದ ಕ್ಷಣಗಳನ್ನು ಸವಿದು ಅಷ್ಟು ವರ್ಷಗಳು ಗತಿಸಿದವು. ಚೆಂದದ ಅಕ್ಷರ, ಖುಷಿ ಕೊಡುವ ಚಿತ್ರ, ಶುಭಾಶಯ ಕೋರುವ ವೈಖರಿ ಎಲ್ಲವೂ ಸಡಗರವೇ. ಆ ದಿನಗಳು ಇದ್ದುದ್ದೇ ಹಾಗೆ.

ಮನೆಯ ಕೋಣೆಯ ಎತ್ತರದ ಮೂಲೆಯಲ್ಲಿದ್ದ ಪ್ಲಾಸ್ಟಿಕ್ ಚೀಲದೊಳಗಿನಿಂದ ರಾಶಿಟ್ಟಲೇ ಗ್ರೀಟಿಂಗ್ ಕಾರ್ಡುಗಳು ಮೊನ್ನೆ ದೊಪ್ಪದೊಪ್ಪನೇ ಬಿದ್ದವು. ಜೊತೆಗೆ ಬಹಳಷ್ಟು ಪತ್ರಗಳು ಇದ್ದವು. ಅಲ್ಲಲ್ಲಿ ಮುದುಡಿದ್ದ ಕಾಗದಗಳನ್ನು ಸರಿಪಡಿಸಿದೆ. ಗ್ರೀಟಿಂಗ್ ಕಾರ್ಡ್ ಮೇಲಿದ್ದ ದೂಳು ಒರೆಸಿದೆ. ಅವುಗಳನ್ನು ಪುನಃ ಒಟ್ಟೊಟ್ಟಾಗಿ ಜೋಡಿಸತೊಡಗಿದೆ. ಮನದಲ್ಲಿ ನೆನಪುಗಳ ಮೆರವಣಿಗೆಯೇ ಶುರುವಾಯಿತು. ಶಾಲಾ–ಕಾಲೇಜು ದಿನಗಳು, ಪತ್ರ–ಕಾರ್ಡಿಗಾಗಿ ಎದುರು ನೋಡುವುದು...ಒಂದಾ, ಎರಡಾ.

ನಿತ್ಯದ ಬದುಕಿನ ಏರು–ಪೇರು, ಅನಿರೀಕ್ಷಿತ ಬೆಳವಣಿಗೆ, ಒತ್ತಡ–ನಿರಾಳಭಾವದ ಮಧ್ಯೆ ಗ್ರೀಟಿಂಗ್ ಕಾರ್ಡುಗಳ ಬಳಕೆಯೇ ಮರೆತು ಹೋಗಿತ್ತು. ಒಂದೂವರೆ ದಶಕದಲ್ಲಿ ಒಬ್ಬರಿಗೂ ಒಂದೂ ಕಾರ್ಡು ಪೋಸ್ಟ್ ಮಾಡಲಿಲ್ಲವೇ ಎಂಬ ಪ್ರಶ್ನೆ ನನ್ನಲ್ಲಿ ಅಚ್ಚರಿ ಮೂಡಿಸಿತು. ವರ್ಷಕ್ಕೆ ಕನಿಷ್ಠ 30ಕ್ಕೂ ಹೆಚ್ಚು ಕಾರ್ಡುಗಳನ್ನು ಸ್ನೇಹಿತರಿಗೆ, ಆಪ್ತರಿಗೆ ಪೋಸ್ಟ್ ಮಾಡುತ್ತಿದ್ದೆ. ಅವರಿಂದಲೂ ಅಷ್ಟೇ ಪ್ರಮಾಣದಲ್ಲಿ ಕಾರ್ಡುಗಳು ಬರುತ್ತಿದ್ದವು.

ಈಗಲೂ ಚೆನ್ನಾಗಿ ನೆನಪಿದೆ. 1997–98ರ ಸಮಯವದು. ಕೊರಿಯರ್ ಹೆಚ್ಚು ಬಳಕೆಯಲ್ಲಿ ಇರಲಿಲ್ಲ. ಪತ್ರ–ಗ್ರೀಟಿಂಗ್ ಕಾರ್ಡು–ಮನಿ ಆರ್ಡರ್, ಪಾರ್ಸಲ್ ಕಳುಹಿಸಲು ಅಂಚೆ ಕಚೇರಿಯೇ ಆಧಾರ.‌ ₹ 5ರ ಸ್ಟಾಂಪ್‌ನ್ನು ಪೋಸ್ಟ್‌ ಕವರ್‌ಗೆ ಅಂಟಿಸಿ ಇಲ್ಲವೇ ₹ 5ರ ಮುಖಬೆಲೆಯ ಕವರ್‌ ಖರೀದಿಸಿ, ಅದರೊಳಗೆ ಕಾಗದವನ್ನು ಇಟ್ಟು ಅದನ್ನು ಅಂಚೆ ಡಬ್ಬಿಯೊಳಗೆ ಹಾಕುವುದೇ ಕಾಯಕ ಆಗಿತ್ತು. ಅದಕ್ಕೂ ಮುನ್ನ ‘ಅವರಿಗೆ’ ಬೇಗನೇ ತಲುಪಲಿ ಎಂದು ಮನದಲ್ಲೇ ಪುಟ್ಟ ಪ್ರಾರ್ಥನೆ.

ಹೊಸ ವರ್ಷ, ಜನ್ಮದಿನ, ಕ್ರಿಸ್‌ಮಸ್, ದೀಪಾವಳಿ, ದಸರಾ, ಯುಗಾದಿ ಹೀಗೆ ಆಯಾ ಹಬ್ಬ ಅಥವಾ ವಿಶೇಷ ದಿನಗಳ ಸಂದರ್ಭದಲ್ಲಿ ಸಂಬಂಧಿಕರಿಗೆ ತಪ್ಪದೇ ಗ್ರೀಟಿಂಗ್ ಕಾರ್ಡುಗಳನ್ನು ರವಾನಿಸುತ್ತಿದ್ದೆ. ಅದಕ್ಕಾಗಿ ಮನೆಯಲ್ಲಿ ಪ್ರತಿ ತಿಂಗಳು ಸಿಗುತ್ತಿದ್ದ ‘ಪಾಕೆಟ್‌ಮನಿ’ ಯಲ್ಲಿ ಉಳಿತಾಯ ಮಾಡುತ್ತಿದ್ದೆ. ಕೆಲವೊಮ್ಮೆ ಆರ್ಥಿಕ ಹೊರೆ ಆಗುತಿತ್ತು. ‘ಆರ್ಥಿಕ ಸಮಸ್ಯೆಗಿಂತ ಸ್ನೇಹ–ಸಂಬಂಧ ಮುಖ್ಯ’ ಎಂಬ ನನ್ನ ವಾದಕ್ಕೆ ಮನೆಯಲ್ಲಿ ಬೆಂಬಲದ ಜೊತೆಗೆ ಅಗತ್ಯವಿದ್ದಷ್ಟು‌ ಹಣ ಸಿಗುತಿತ್ತು!

ಇದೆಲ್ಲದರ ಮಧ್ಯೆ ಇಂಗ್ಲಿಷ್ ಪತ್ರಿಕೆಯ ಪತ್ರಮಿತ್ರರ ವಿಭಾಗದಲ್ಲಿ ಒಮ್ಮೆ ನನ್ನ ಹೆಸರು ಮತ್ತು ವಿಳಾಸ ಪ್ರಕಟವಾಯಿತು. ಇದರಿಂದ ರಾಜ್ಯದವರು–ಹೊರರಾಜ್ಯದ ಕೆಲವರು ಸ್ನೇಹಿತರಾದರು. ಪತ್ರ ವಿನಿಮಯಕ್ಕೆ ಮಾತ್ರವೇ ಸೀಮಿತವಾಗಿದ್ದ ನಮ್ಮ ನಡುವಿನ ಸಂವಹನ ಕ್ರಮೇಣ ಗ್ರೀಟಿಂಗ್ ಕಾರ್ಡು ಕಳಹಿಸುವ-ಸ್ವೀಕರಿಸುವ ಮಟ್ಟಕ್ಕೆ ವೃದ್ಧಿಸಿತು. ಕ್ರಿಯೇಟಿವ್ ಬರಹಕ್ಕೂ ಕಾರಣವಾಯಿತು. ಹೊಸ ಆಲೋಚನೆಗಳಿಗೆ ಎಡೆ ಮಾಡಿಕೊಟ್ಟಿತು.

ಕೊಂಚ ತೂಕದ, ದೊಡ್ಡದಾದ ಗ್ರೀಟಿಂಗ್ ಕಾರ್ಡುಗಳು ₹ 5ರ ದರದಲ್ಲಿ ಖಂಡಿತ ಪೋಸ್ಟ್ ಮಾಡಲು ಆಗುತ್ತಿರಲಿಲ್ಲ. ಅದಕ್ಕೆ ₹ 10 ರಿಂದ ₹ 30ರವರೆಗೆ ಅಥವಾ ಅದಕ್ಕೂ ಹೆಚ್ಚಿನ ದರದ ಸ್ಟಾಂಪ್‌ ಹಚ್ಚಲೇಬೇಕಿತ್ತು. ಒಂದು ವೇಳೆ ಬರೀ ₹ 5ರ ಸ್ಟಾಂಪ್ ಅಂಟಿಸಿ ಕಳುಹಿಸಿಬಿಟ್ಟರೆ, ಅದನ್ನು ಸ್ವೀಕರಿಸುವವರಿಗೆ ಇಕ್ಕಟ್ಟಿನ ಪರಿಸ್ಥಿತಿ. ದಂಡದ ರೂಪದಲ್ಲಿ ಅವರು ₹ 40 ಕಟ್ಟಬೇಕಿತ್ತು. ಇಲ್ಲದಿದ್ದರೆ, ಕಾರ್ಡ್‌ ಅವರಿಗೇ ತಲುಪೇ ಇಲ್ಲ ಎಂಬಂತೆ ಪುನಃ ನನಗೆ ವಾಪಸ್ ಬರುತಿತ್ತು.

ಅಂಗಡಿಯಲ್ಲಿ ಸಿಗುತ್ತಿದ್ದ ‘ಗ್ಲಾಸಿ’ ಕಾಗದದ ಕಾರ್ಡುಗಳ ಸ್ವರೂಪ ನಿಧಾನಕ್ಕೆ ಬದಲಾಯಿತು. ಮೃದು, ಬಟ್ಟೆ ಮಾದರಿಯಲ್ಲಿ ತಯಾರಾದ ಕಾರ್ಡು ಸಿಗತೊಡಗಿದವು. ಅವುಗಳಲ್ಲಿ ಇಂಗ್ಲಿಷ್ ಬದಲು ಕನ್ನಡ ಅಕ್ಷರಗಳು ಕಾಣಿಸಿದವು. ನಂತರ ದುಬಾರಿ ದರದ ಕಾರ್ಡುಗಳ ಸರಣಿ ಆರಂಭವಾಯಿತು. ಕಾರ್ಡುಗಳನ್ನು ಕೊಂಚ ತೆರೆದರೆ ಸಾಕು, ಮನಸ್ಸಿಗೆ ಖುಷಿ ಕೊಡುವ ಸಂಗೀತ ಹೊರಹೊಮ್ಮುತಿತ್ತು.

ವಿಶೇಷವೆಂದರೆ, 2000ರ ನಂತರದ ಕೆಲ ವರ್ಷಗಳವರೆಗೆ ಗ್ರೀಟಿಂಗ್ ಕಾರ್ಡುಗಳ ಸುಗ್ಗಿ ಜೋರಾಗಿತ್ತು. ಗ್ರೀಟಿಂಗ್‌ ಕಾರ್ಡುಗಳ ಪ್ರದರ್ಶನ ಮತ್ತು ಮಾರಾಟಕ್ಕೆಂದೇ ಅಂಗಡಿಗಳು ಅಸ್ತಿತ್ವಕ್ಕೆ ಬಂದವು. ಕಾಲೇಜು ವಿದ್ಯಾರ್ಥಿಗಳು ಅದರಲ್ಲೂ ತಮ್ಮ ಆಪ್ತರಿಗೆ ‘ಇಂಪ್ರೆಸ್‌’ ಮಾಡಲು ಇಚ್ಛಿಸುವವರು ತಪ್ಪದೇ ಆ ಅಂಗಡಿಗಳಿಂದ ಚೆಂದನೆಯ ಕಾರ್ಡುಗಳನ್ನು ತರುತ್ತಿದ್ದರು. ಮುದ್ದಾದ ಅಕ್ಷರಗಳಲ್ಲಿ ಬರೆದ ಚೀಟಿಯನ್ನು ಅದರಲ್ಲಿಟ್ಟು ಕೊಡುಗೆಯಾಗಿ ನೀಡುತ್ತಿದ್ದರು.

ಮದರ್ಸ್‌ ಡೇ, ಫಾದರ್ಸ್ ಡೇ, ಬ್ರದರ್ಸ್, ಸಿಸ್ಟರ್ಸ್, ವ್ಯಾಲೆಂಟೈನ್ಸ್‌ ಡೇ ಹೀಗೆ ಆಯಾ ದಿನಗಳ ಸಂದರ್ಭದಲ್ಲಿ ಶುಭಾಶಯ ಸಲ್ಲಿಸಲು ಅಷ್ಟೇ ಅಲ್ಲ, ಥ್ಯಾಂಕ್ಯು, ಸಾರಿ, ಆಲ್ ದಿ ಬೆಸ್ಟ್ ಎಂದೆಲ್ಲ ಹೇಳಲು ಸಹ ಕಾರ್ಡುಗಳು ದೊರೆಯತೊಡಗಿದವು. ಅಂಚೆ ಸ್ಟಾಂಪ್‌ಗಳನ್ನು ಸಂಗ್ರಹಿಸುವ ಮಾದರಿಯಲ್ಲೇ ಕೆಲವರು ಗ್ರೀಟಿಂಗ್ ಕಾರ್ಡುಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿಕೊಂಡರು. ಅಮೂಲ್ಯ ಆಸ್ತಿ ಎಂಬಂತೆ ಕಾಪಾಡಿಕೊಂಡರು.

ಗ್ರೀಟಿಂಗ್ ಕಾರ್ಡಿಗೆ ಸಂಬಂಧಿಸಿದಂತೆ ಕಾಲೇಜಿನಲ್ಲಿ ನಡೆದ ಎರಡು ಘಟನೆಗಳು ತುಂಬಾ ಚರ್ಚೆಯಾಗಿದ್ದು, ನನಗೆ ಈಗಲೂ ನೆನಪಿದೆ. ಗರ್ಲ್‌ ಫ್ರೆಂಡ್‌ಗೆ ಒಲಿಸಿಕೊಳ್ಳಲು ಪೈಪೋಟಿಗೆ ಬಿದ್ದ ಇಬ್ಬರು ಸ್ನೇಹಿತರು, ಆಕೆಯ ಮನೆಯ ವಿಳಾಸ ಪತ್ತೆ ಮಾಡಿ ಪ್ರತ್ಯೇಕ ಗ್ರೀಟಿಂಗ್‌ ಕಾರ್ಡುಗಳನ್ನು ಪೋಸ್ಟ್ ಮಾಡಿದ್ದರು. ತಮ್ಮ ಹೆಸರು, ವಿಳಾಸ ಗೊತ್ತಾಗದಿರಲಿಯೆಂದು, ‘From someone special to someone special' ಎಂದು ಒಗಟಾಗಿ ಇಂಗ್ಲಿಷನಲ್ಲಿ ಬರೆದಿದ್ದರು. ಆದರೆ, ಮಾರನೇ ದಿನ ಅದರ ಬಗ್ಗೆ ಗೊತ್ತೇ ಇಲ್ಲ ಎಂಬಂತೆ ಗರ್ಲ್‌ಫ್ರೆಂಡ್‌ ನಿರ್ಲಿಪ್ತವಾಗಿ ಕಾಲೇಜಿಗೆ ಬಂದಾಗ, ಅವರಿಬ್ಬರಿಗೂ ನಿರಾಸೆಯಾಯಿತು.

ಇನ್ನೊಂದು ಘಟನೆಯಲ್ಲಿ ಗೆಳೆಯನೊಬ್ಬ ತನ್ನ ಮೆಚ್ಚಿನ ಹುಡುಗಿಗೆ ಪ್ರೇಮವನ್ನು ನಿವೇದಿಸಲು ದಿನ ನಿಗದಿಪಡಿಸಿಕೊಂಡ. ಕಾಲೇಜಿನ ಅಂತಿಮ ವರ್ಷದ ಕೊನೆಯ ಪರೀಕ್ಷೆ ಮುಗಿದ ಬಳಿಕ ಧೈರ್ಯ ಮಾಡಿ, ಕೆಂಪು ಗುಲಾಬಿಯ ಚಿತ್ರವುಳ್ಳ ಕಾರ್ಡನ್ನು ಆಕೆಗೆ ಕೊಡುಗೆಯಾಗಿ ನೀಡಿದ. ಬಹುಶಃ ಇಂಥ ಸಂದರ್ಭ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದ ಆಕೆ, 'ಮೊದಲು ಪರೀಕ್ಷೆಯಲ್ಲಿ ಪಾಸ್ ಆಗೋಣ, ಕೆಲಸ ಹಿಡಿಯೋಣ. ಆಮೇಲೆ ನೋಡೋಣ' ಎಂದು ಚುಟುಕಾಗಿ ಉತ್ತರಿಸಿ ಮುನ್ನಡೆದಳು. ಪುನಃ ಅವರಿಬ್ಬರೂ ಭೇಟಿಯಾದರಾ ಅಥವಾ ಇಲ್ವಾ ಎಂಬುದು ಇನ್ನೂ ರಹಸ್ಯವಾಗಿ ಉಳಿದಿದೆ.

ಮೊಬೈಲ್ ಬಳಕೆ ಹೆಚ್ಚಾದ ಬಳಿಕವಂತೂ ಗ್ರೀಟಿಂಗ್ ಕಾರ್ಡುಗಳ ಬಳಕೆಯೇ ನಿಂತು ಹೋಯಿತು. ಎಸ್ಎಂಎಸ್‌ಗಳು ರವಾನೆಯಾದವು. ಇಂಟರ್ನೆಟ್ ನಲ್ಲಿ ಇ-ಕಾರ್ಡು ಸಿಕ್ಕ ಬಳಿಕ ಅದರಲ್ಲಿಯೇ ಕಾರ್ಡುವೊಂದನ್ನು ಡೌನಲೋಡ್ ಮಾಡಿ, ಸ್ನೇಹಿತರಿಗೆ ಕಳುಹಿಸಿತೊಡಗಿದೆ. ಇಂಟರ್ನೆಟ್ ಸಂಪರ್ಕ ಸಮೇತ ಆಂಡ್ರಾಯ್ಡ್ ಮೊಬೈಲ್ ಫೋನ್‌ ಬಂದ ಬಳಿಕ ವಾಟ್ಸಪ್, ಫೇಸ್‌ಬುಕ್‌, ಟ್ವಿಟರ್, ಇನ್ಸಾಗ್ರಾಮಗಳಲ್ಲಿ ಶುಭಾಶಯ ಸಲ್ಲಿಸುವುದು ಮುಂದುವರೆಯಿತು.

ಹಳೆಯ ಗ್ರೀಟಿಂಗ್ ಕಾರ್ಡುಗಳನ್ನು ಈಗ ನೋಡಿದರೆ, ಅವುಗಳಲ್ಲಿನ ಆಪ್ತ ಬರಹ, ಮುದ್ದಾದ ಅಕ್ಷರಗಳು, ವ್ಯಕ್ತವಾಗುವ ಕಾಳಜಿ ಅದಮ್ಯ ಖುಷಿಗೆ ಕಾರಣವಾಗುತ್ತವೆ. ಎಷ್ಟೆಲ್ಲ ಕಾಲಘಟ್ಟಗಳನ್ನು ನಾವು ದಾಟಿಕೊಂಡು ಬಂದಿದ್ದು, ಹುಡುಗಾಟಿಕೆ ಮಾಡಿದ್ದು, ಯಾವ್ಯಾವುದಕ್ಕೆಲ್ಲ ಸವಾಲು–ಧೈರ್ಯ ತೋರಿದ್ದು ಎಂಬುದನ್ನು ನೆನಪಿಸಿಕೊಂಡರೆ ರೋಮಾಂಚನವಾಗುತ್ತದೆ. ಆ ನೆನಪುಗಳನ್ನು ಹಿಡಿದಿಟ್ಟುಕೊಳ್ಳಬೇಕು ಮತ್ತು ವರ್ಷಗಳು ಕಳೆದಂತೆ ದೂರವಾದವರನ್ನು ಪುನಃ ಸಂಪರ್ಕಿಸಲು ಮನಸ್ಸು ಹಾತೊರೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT