ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡಾಯ ಎಂದರೆ ಬರೀ ಭಾಷಣ ಅಲ್ಲ: ಕೊನೆಯ ಸಂದರ್ಶನದಲ್ಲಿ ಕವಿ ಸಿದ್ಧಲಿಂಗಯ್ಯ

Last Updated 12 ಜೂನ್ 2021, 19:30 IST
ಅಕ್ಷರ ಗಾತ್ರ

‘ಇಕ್ರಲಾ ವದೀರ್ಲಾ’ ಎಂಬಂತಹ ಸಶಕ್ತ ಕಾವ್ಯದ ಮೂಲಕ ಶೋಷಿತರ ಧ್ವನಿಯಾದ ಸಿದ್ಧಲಿಂಗಯ್ಯನವರದು ಯಾರ ಮನಸ್ಸನ್ನೂ ನೋಯಿಸದ ಮೃದು ಮಾತು. ಕೋವಿಡ್‌ ಪೀಡಿತರಾಗಿ ಆಸ್ಪತ್ರೆ ಸೇರುವ ಮುಂಚೆ ನೀಡಿದ ಈ ಕೊನೆಯ ಸಂದರ್ಶನದಲ್ಲಿ ಬಂಡಾಯದ ಕುರಿತು ಅವರು ಹಂಚಿಕೊಂಡಿರುವ ವಿಚಾರಗಳು ಅವರ ವೈಚಾರಿಕ ಸ್ಪಷ್ಟತೆಗೆ ಕನ್ನಡಿ ಹಿಡಿಯುತ್ತವೆ...

***

* ಬಂಡಾಯದ ಈ ಹೊತ್ತಿನ ಸ್ಥಿತಿ ಏನಾಗಿದೆ? ಬದಲಾದ ರಾಜಕೀಯ ಪ್ರಾಬಲ್ಯದ ಮನಃಸ್ಥಿತಿಯಲ್ಲಿ ಈ ವಿಚಾರವಾದವನ್ನು ಜೀವಂತವಾಗಿರಿಸುವುದು ಹೇಗೆ?

ಅತ್ಯುತ್ತಮ ಕೃತಿಗಳ ರಚನೆಯೇ ಬಂಡಾಯ ಸಾಹಿತ್ಯದ ಯಶಸ್ಸಿನ ಮೊದಲ ಮಾನದಂಡ. ಸಂಘಟನೆ ಮಾಡುವುದು, ಸಭೆ, ಸಮ್ಮೇಳನ ನಡೆಸುವುದು, ಹೇಳಿಕೆ ಕೊಡುವುದು, ಕೆಲ ವಿಷಯಗಳನ್ನು ಖಂಡಿಸುವುದು, ಬೆಂಬಲಿಸುವುದು ಆಗಬೇಕು. ಸಂಘಟನೆಯ ಸದಸ್ಯ ಆಗುವುದು, ಪದಾಧಿಕಾರಿ, ಮಾರ್ಗದರ್ಶಿ ಆಗಿ ಮುನ್ನಡೆಸುವುದೂ ಆಗಬೇಕು. ಇದು ಎರಡನೇ ಮಾನದಂಡ. ಆದರೆ, ಚಂದಾ ಎತ್ತುವುದು, ಭರ್ಜರಿ ಭಾಷಣ ಬಿಗಿಯುವುದೇ ಮುಖ್ಯವಾಗಬಾರದು.

ಅತ್ಯುತ್ತಮ ಮನಸುಗಳು ಮಾತ್ರ ಅಂಥಾ ಉತ್ತಮ ಕೃತಿಗಳ ರಚನೆ ಮಾಡುತ್ತವೆ. ನಮ್ಮ ಬಂಡಾಯ ಸಾಹಿತ್ಯವು ಕನ್ನಡ ಸಾಹಿತ್ಯ ಪರಂಪರೆಯ ಒಂದು ಭಾಗವೇ ಆಗಿದೆ. ಪಂಪನಿಂದ ಕುವೆಂಪುರವರವರೆಗೆ ಅಧ್ಯಯನ ಮಾಡಬೇಕು. ಪಂಪನಿಂದ ಪ್ರಾರಂಭ; ವಚನಕಾರರಲ್ಲಿ ಹೆಮ್ಮರವಾಯಿತು. ದಾಸರಲ್ಲಿ ದನಿಯಾಯಿತು. ಕುವೆಂಪು, ಬೇಂದ್ರೆ ಕಾವ್ಯಗಳಲ್ಲಿ ಪ್ರಜ್ವಲಿಸಿತು. ಈ ಬಂಡಾಯ ಧೋರಣೆಯನ್ನು ಅನಂತಮೂರ್ತಿ, ಲಂಕೇಶ್, ತೇಜಸ್ವಿ, ಡಿಆರ್‌ಎನ್, ನಾಗವಾರ, ಶೂದ್ರ, ಬೆಸಗರಹಳ್ಳಿ, ಆಲನಹಳ್ಳಿ ಮೊದಲಾದವರೂ ನೀರೆರೆದು ಪೋಷಿಸಿದ್ದಾರೆ. ಆದ್ದರಿಂದ, ಬಂಡಾಯ ಏಕವ್ಯಕ್ತಿ ಕೇಂದ್ರಿತವಲ್ಲ. ಇದನ್ನರಿತು ಯುವಕರು ಅಧ್ಯಯನ ಮಾಡಬೇಕು. ವಚನಕಾರರು ಅಂದು ಏನು ಬಂಡಾಯದ ದನಿ ಎತ್ತಿದರೋ ಅದರ ಮುಂದುವರಿಕೆಯೇ ಇಂದಿನ ಬಂಡಾಯ ಸಾಹಿತ್ಯ. ದೇಶ ವಿದೇಶಗಳಲ್ಲಿ ನಡೆದ ಕ್ರಾಂತಿ, ಹೋರಾಟದ ಬಗ್ಗೆ ಅರಿಯಬೇಕು. ನೆರೂಡ ಮೊದಲಾದ ಮಹಾನ್ ಕವಿಗಳನ್ನೂ ಓದಬೇಕು. ಅವರಿಂದ ನಮ್ಮ ಯುವಜನತೆಗೆ ಒಳ್ಳೆಯ ಬೆಳಕು, ದಾರಿ ಸಿಕ್ಕಂತಾಗುತ್ತದೆ.

ಬಂಡಾಯ ಎಂದರೆ ಬರೀ ಭಾಷಣ ಅಲ್ಲ. ಈಗ ಭಾಷಣಗಳಲ್ಲಿ ಜಯ ಸಿಕ್ಕಿದೆ; ಬರವಣಿಗೆಯಲ್ಲಿ ಸೋತಿದೆ.

* ‘ಇಕ್ರಲಾ, ವದೀರ್ಲಾ..’ ಆಕ್ರೋಶದ ಕವಿಯ ಮನದಲ್ಲಿ ನಿರ್ದಿಷ್ಟ ಸಮುದಾಯ ಇತ್ತೇ?

ನಿರ್ದಿಷ್ಟವಾದ ಜಾತಿ, ಸಮುದಾಯ ಕುರಿತು ನಾನು ಹೇಳಿಲ್ಲ. ದೌರ್ಜನ್ಯ ಮಾಡುವ ಸಾಮಾಜಿಕ ವ್ಯವಸ್ಥೆ ಕುರಿತು ಹೇಳಿದ್ದು. ಅದು ಆಕ್ರೋಶ ಅಲ್ಲ; ದುಃಖದಿಂದ ಹೊಮ್ಮಿದ ಮಾತು. ‘ದೊಡ್ಡಗೌಡರ ಬಾಗಿಲಿಗೆ..’ ಎಂದರೆ, ಜಮೀನ್ದಾರಿ ಪದ್ಧತಿ, ವ್ಯವಸ್ಥೆ ಬಗ್ಗೆ. ಗೌಡ, ರೈತ, ಪೂಜಾರಿ ಸೇರಿ ಎಲ್ಲಾ ಸಮುದಾಯದ ಬಡವರನ್ನು ಶೋಷಣೆ ಮಾಡುವವರನ್ನು ಕುರಿತು ಹೇಳಿದ್ದು. ಊಳಿಗಮಾನ್ಯ ವ್ಯವಸ್ಥೆಯ ಬಗೆಗಿನದು. ನನಗೆ ಒಕ್ಕಲಿಗರೇ ಹೆಚ್ಚಿನ ಸ್ನೇಹಿತರು, ಬೆಂಬಲ ಕೊಟ್ಟವರು.

* ಪ್ರತಿಭಟನಕಾರನೇ ಅಧಿಕಾರಸ್ಥನಾಗುವುದು, ಮರಳಿ ಶೋಷಕನಾಗುವುದು..ಇದು ವ್ಯವಸ್ಥೆಯಲ್ಲಿನ ನಿರಂತರ ಚಕ್ರವಿದ್ದಂತೆ. ಆಗ ‘ಇಕ್ರಲಾ..’ ಮಾತಿಗೆ ಬೆಲೆ ಎಲ್ಲಿ..?

‘ಇಕ್ರಲಾ..’ –ತೀವ್ರವಾದ ಸಂಕಟದ ಸಂದರ್ಭದಲ್ಲಿ – ಒಂದು ಹಂತದಲ್ಲಿ ಸರಿಯಾದೀತು. ಸದಾ ಹೇಳುವುದಲ್ಲ. ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಹೋಗುವಾಗ ನಿತ್ಯ ಪಠನ ಸಲ್ಲ.

ಕೆಲವರು ನನ್ನ ಆ ಪದ್ಯ ಇಟ್ಟುಕೊಂಡು ನನ್ನ ಇತರ ಪದ್ಯಗಳನ್ನು ಓದುವುದನ್ನೇ ಬಿಟ್ಟಿದ್ದಾರೆ.

* ‘ಬಂಡಾಯಗಾರರೂ ವ್ಯವಸ್ಥೆಯ ಅಧಿಕಾರ ಸ್ಥಾನ ಹಿಡಿದರೆ ಶೋಷಿತರ ಹಿತರಕ್ಷಣೆಗೆ ವ್ಯಾಪಕ ಅವಕಾಶ ಸಿಕ್ಕಂತಾಗುತ್ತದೆ’ ಎಂಬ ಸಮರ್ಥನೆ ಕೊಟ್ಟುಕೊಳ್ಳಲಾಗಿತ್ತು. ಆ ಆಶಯ ಈಡೇರಿದೆಯೇ? ಕೆಲವು ತೀವ್ರಗಾಮಿ ಹೋರಾಟಗಾರರು ಆಡಳಿತದ ಫಲಾನುಭವಕ್ಕಷ್ಟೇ ಸೀಮಿತರಾದರೆಂಬ ಅಭಿಪ್ರಾಯವಿದೆಯಲ್ಲಾ..?

ನಾನೂ 12 ವರ್ಷ ಶಾಸಕ, 7 ವರ್ಷ ಪ್ರಾಧಿಕಾರಗಳ ಅಧ್ಯಕ್ಷ ಆಗಿದ್ದಾಗ ಆವರೆಗೆ ಏನು ಭಾಷಣ, ಪ್ರತಿಭಟನೆಗಳಲ್ಲಿ ಹೇಳುತ್ತಿದ್ದೆ, ಅದನ್ನೇ ಆ ಅಧಿಕಾರದಲ್ಲಿ ಇದ್ದಾಗಲೂ ಗಟ್ಟಿಯಾಗಿ ಹೇಳಿದೆ. ಸಾಂಪ್ರದಾಯಿಕ ‘ಅಜಲು’ (ಮೇಲು ವರ್ಗದವರ ಎಂಜಲು ಆಹಾರಾದಿಗಳು) ತಿನ್ನುವ ಕೆಲವು ದಲಿತ ಜಾತಿಗಳನ್ನೂ ಸೇರಿ ಬಡ ವೈದಿಕ ಅರ್ಚಕರ ಹಿತಾಸಕ್ತಿಗೂ ನಾನು ದನಿ ಎತ್ತಿದ್ದೇನೆ. ಅವರ ವೇತನ ಕೊರತೆಯನ್ನು ನಿವಾರಿಸುವಂತೆ ಸದನದಲ್ಲಿ ಮಾತಾಡಿದ್ದೇನೆ. ನಾನು ಯಾವೆಲ್ಲಾ ವಿಷಯಗಳ ಕುರಿತು ಸದನದ ಗಮನ ಸೆಳೆದೆನೋ ಅದೆಲ್ಲವನ್ನೂ ಎರಡು ಸಂಪುಟಗಳಾಗಿ ಪ್ರಕಟಿಸಿದೆ. ಇಂಥಾ ವಿಷಯಗಳನ್ನೆಲ್ಲಾ ಸದನದಲ್ಲಿ ಚರ್ಚಿಸಬಹುದೇ, ಹೋರಾಟ ಮಾಡಬಹುದೇ ಎಂದು ಕೆಲವರು ಅಚ್ಚರಿ ಪಟ್ಟದ್ದುಂಟು. ನನಗೆ ಶಾಂತವೇರಿ ಗೋಪಾಲಗೌಡರೇ ಮಾರ್ಗದರ್ಶಕರು. ಸಿದ್ಧಾರ್ಥ ಅರಕೇರಿಯವರ ಮೂಲಕ ಶಾಂತವೇರಿಯವರು ನನ್ನ ಬಗ್ಗೆ ವಿಚಾರಿಸಿಕೊಳ್ಳೋರಂತೆ. ಇದಕ್ಕೆಲ್ಲಾ ಬೆಂಬಲ ಕೊಟ್ಟವರು ವಿ.ಆರ್. ಸುದರ್ಶನ್, ಎಂ.ಸಿ. ನಾಣಯ್ಯ, ಡಾ. ತಂಗಾ, ಶಂಕರಮೂರ್ತಿ, ಕೆ.ಎನ್. ನಾಗೇಗೌಡ, ಬೈರೇಗೌಡ, ರಾಮಕೃಷ್ಣ ಹೆಗಡೆ, ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ, ಯಡಿಯೂರಪ್ಪ.. ಇವರೆಲ್ಲಾ ನನಗೆ ಅವಕಾಶ, ಬೆಂಬಲ ಕೊಟ್ಟಿದ್ದಾರೆ.

ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಮೊದಲ ಆರು ವರ್ಷ ಶಾಸಕನಾಗಿದ್ದಾಗ ಬಿಎಂಟಿಸಿ ಬಸ್‌ನಲ್ಲೇ ಓಡಾಡಿದೆ; ಎರಡನೇ ಅವಧಿಯಲ್ಲಿ ಸೆಕೆಂಡ್ ಹ್ಯಾಂಡ್ ಮಾರುತಿ ವ್ಯಾನ್ ಕೊಂಡು ಓಡಾಡಿದೆ. ಕನ್ನಡಕ್ಕೆ ಅವಮಾನವಾದಾಗ ಅದರ ವಿರುದ್ಧ ಹೋರಾಡಿದ್ದೇನೆ. ಕನ್ನಡದಲ್ಲಿ ಸದನ ವ್ಯವಹಾರ ನಡೆಸುವಂತೆ ಒತ್ತಾಯಿಸಿದ್ದೇನೆ. ನನ್ನ ಗುರುವಾಗಿದ್ದ ಬಸವಲಿಂಗಪ್ಪನವರೂ ಇಂಗ್ಲಿಷ್‌ಗೆ ಬದಲು ಕನ್ನಡ ಬಳಸಿದ್ದರು.

* ದಲಿತರೂ ಗಾಂಧೀಜಿಯ ವಿರೋಧಿಗಳಂತೆ ಬದಲಾದದ್ದು ಯಾಕಾಗಿ? ನಿಜಕ್ಕೂ ಗಾಂಧೀಜಿ ‘ದಲಿತ ದ್ರೋಹಿ’ಯೇ? ಬಾಬಾ ಅವರನ್ನು ಆರಾಧಿಸುವ ಭರದಲ್ಲಿ ಬಾಪೂ ಅವರನ್ನು ‘ತುಳಿ’ಯಬೇಕಿತ್ತೇ?

ಕೆಲವರು ತಿಳಿವಳಿಕೆ ಇರದೆ ಗಾಂಧೀಜಿಯನ್ನು ವಿರೋಧ ಮಾಡುತ್ತಾರೆ. ತಮಗಿದ್ದ ಇತಿಮಿತಿಯಲ್ಲಿ ಗಾಂಧೀಜಿ ದಲಿತರ ಪರ ಅತ್ಯುತ್ತಮ ಕೆಲಸವನ್ನೇ ಮಾಡಿದ್ದಾರೆ. ಅವರು ಅಸ್ಪೃಶ್ಯತೆ, ಸ್ವರಾಜ್ಯ ಎರಡನ್ನೂ ಹೆಗಲ ಮೇಲೆ ಹಾಕಿಕೊಂಡಿದ್ದವರು. ಗಾಂಧೀಜಿಯವರು, ಅಂಬೇಡ್ಕರ್ ಅವರನ್ನು ಪ್ರಶಂಸೆ ಮಾಡಿದ ಅನೇಕ ಪ್ರಸಂಗಗಳಿವೆ. ಇವತ್ತಿನ ಕೆಲ ದಲಿತರು ಗಾಂಧಿ, ಅಂಬೇಡ್ಕರ್ ಇಬ್ಬರನ್ನೂ ಸರಿಯಾಗಿ ಓದಿಕೊಳ್ಳದೆ, ಗಾಂಧೀಜಿ ಕಾಲದ ಪರಿಸ್ಥಿತಿಯನ್ನೂ ಗ್ರಹಿಸದೆ ವೃಥಾ ಟೀಕೆ ಮಾಡುವುದು ನ್ಯಾಯವಲ್ಲ. ಗಾಂಧೀಜಿಯವರ ಎಷ್ಟೋ ಚಿಂತನೆಗಳು ಕಾಲ ಬದಲಾದಂತೆ ಬದಲಾಗುತ್ತಾ ಹೋದದ್ದನ್ನೂ ನಾವು ಗಮನಿಸಬೇಕು. ಪ್ರಾರಂಭದಲ್ಲಿ ಗಾಂಧೀಜಿ ಅಂತರ್ಜಾತಿ ವಿವಾಹಗಳನ್ನು ವಿರೋಧಿಸಿದ್ದರು. ಆದರೆ ಕ್ರಮೇಣ ಅವರು ಅಂತರ್ಜಾತಿ ವಿವಾಹವಾದರೆ ಮಾತ್ರ ನಾನು ಬರುತ್ತೇನೆ; ಅದೂ ವಧೂ-ವರರಲ್ಲಿ ಒಬ್ಬರಾದರೂ ಅಸ್ಪೃಶ್ಯರಾಗಿರಲೇಬೇಕು ಎಂಬ ನಿಲುವಿಗೆ ಕಟ್ಟುಬಿದ್ದದ್ದನ್ನು ಗಮನಿಸಬೇಕು. ಪ್ರಾರಂಭದ ಅವರ ಕೆಲವು ಮಾತುಗಳನ್ನು ಇಟ್ಟುಕೊಂಡು ಈಗಲೂ ಗಾಂಧೀಜಿ ಅವರನ್ನು ವಿರೋಧಿಸೋದು ದುರದೃಷ್ಟಕರ. ಗಾಂಧೀಜಿಯ ಕೆಲವು ಚಿಂತನೆಗಳು ಅಂಬೇಡ್ಕರರ ಚಿಂತನೆಗಳಿಗೆ ಪೂರಕವಾಗಿದ್ದವು ಎಂಬುದನ್ನೂ ತಿಳಿಯುವುದು ತೀರಾ ಆವಶ್ಯಕ.

* ‘ದಲಿತ ಕವಿ’ ಅನ್ನಿಸಿಕೊಳ್ಳುವುದು ನನಗೆ ಹೆಮ್ಮೆ’-ಎಂದೊಬ್ಬರು ಹೇಳಿದರೆ, ನೀವು, ‘ನನ್ನನ್ನು ದಲಿತ ಕವಿ’ ಎಂದು ಗುರುತಿಸಬೇಡಿ ಎಂದಿದ್ದೀರಲ್ಲಾ..?

ನಾನೇಕೆ ಹೇಳಿದೆ ಎಂದರೆ, ನಾನು ಮೂಲತಃ ಕನ್ನಡ ಕವಿ. ಆದರೆ, ಪ್ರೀತಿಯಿಂದ ದಲಿತ ಕವಿ ಎಂದರೆ ಸಂತೋಷದಿಂದ ಸ್ವೀಕರಿಸುತ್ತೇನೆ; ದುರುದ್ದೇಶದಿಂದ ಕರೆದರೆ ಒಪ್ಪಲಾಗದು. ಶೇ 18 ಮೀಸಲಾತಿ ಕೋಟಾ ಅಡಿಯಲ್ಲಿ ‘ದಕಸಿ’ ಎಂದರೆ ನಾನು ಒಪ್ಪುವುದಿಲ್ಲ.

* ನಿಮ್ಮ ಬಂಡಾಯ ಗೀತೆಗಳ ರಚನೆಗೆ ಪ್ರೇರಣೆ, ಪ್ರೋತ್ಸಾಹ ಯಾರಿಂದ ?

ನಾನು 8-9ನೇ ತರಗತಿಯಲ್ಲಿದ್ದಾಗಲೇ ಪದ್ಯ ಬರೆಯುತ್ತಿದ್ದೆ. ಡಾ.ಎನ್.ಸಿ. ಬಿಳಿಗಿರಿರಂಗಯ್ಯ ಆ ಕಾಲದಲ್ಲೇ ಲಾ ಡಾಕ್ಟರೇಟ್ ಪಡೆದಿದ್ದರು. ಅಂಬೇಡ್ಕರ್‌ಗೆ ತೀರಾ ಪರಿಚಿತರು. ಅವರನ್ನು ಎರಡನೇ ಅಂಬೇಡ್ಕರ್ ಅನ್ನುತ್ತಿದ್ದರು. ನನ್ನ ಸಾಮಾನ್ಯ ಪದ್ಯಗಳನ್ನೂ ಮೆಚ್ಚಿ, ಪ್ರತೀ ದಿನ ಬರೆದು ತೋರಿಸಿದರೆ ಒಂದೊಂದು ರೂಪಾಯಿ ಕೊಡುತ್ತೇನೆ ಎಂದು ಹುರಿದುಂಬಿಸುತ್ತಿದ್ದರು. ಕುವೆಂಪು ಪದ್ಯ ಅವರ ನಾಲಿಗೆ ತುದಿಯಲ್ಲೇ ಇರೋವು. ಅವರ ವಿಚಾರಗಳನ್ನು ಹೇಳಿ ಪ್ರೋತ್ಸಾಹಿಸುತ್ತಿದ್ದರು. ಸಿದ್ಧಾರ್ಥ ಅರಕೇರಿಯವರೂ ಅಂಬೇಡ್ಕರ್‌ರ ಆಪ್ತ ಶಿಷ್ಯರು. ದಲಿತ ಸಮ್ಮೇಳನಗಳಿಗೆ ಕರೆದೊಯ್ದು ಭಾಷಣ ಮಾಡಲು ಪ್ರೋತ್ಸಾಹಿಸುತ್ತಿದ್ದರು. ಹೀಗೆ ಹೋರಾಟಕ್ಕೆ ಸೇರಿದ್ದರಿಂದ ಪದ್ಯಗಳನ್ನು ಬಹು ಬಿರುಸಾಗಿಯೇ ಬರೆಯುತ್ತಿದ್ದೆ. ಬೂಸಾ ಚಳವಳಿಯಲ್ಲಿ ಕಲ್ಲೂರು ಮೇಘರಾಜ್, ಬೀಚನಹಳ್ಳಿ, ಅಗ್ರಹಾರ ಮತ್ತಿತರ ನನ್ನ ಮಿತ್ರರು ನನಗೆ ಬೆಂಬಲ, ರಕ್ಷಣೆ ನೀಡಿದ್ದಾರೆ. ಆ ಹುಮ್ಮಸ್ಸೇ ‘ಇಕ್ರಲಾ, ವದೀರ್ಲಾ..’ದಂತಹ ಪದ್ಯಗಳನ್ನು ಬರೆಸಿತು.

* ಅದಾಗಲೇ ದೊಡ್ಡ ಹೆಸರು ಮಾಡಿದ್ದ ಜಿ.ಎಸ್.ಶಿವರುದ್ರಪ್ಪನವರು, ಕಿ.ರಂ.ನಾಗರಾಜ, ಡಿ.ಆರ್.ನಾಗರಾಜ ಮೊದಲಾದವರು ‘ಹೊಲೆ ಮಾದಿಗರ ಹಾಡು’ ಕೃತಿ ಬೆಂಬಲಿಸಿ ಬರೆದಿದ್ದ ಆ ಹೊಸ ದನಿಯ ಕೃತಿ ಸುಲಭವಾಗಿ ಜನಮನ್ನಣೆ ಪಡೆಯಲು ಸಾಧ್ಯವಾಯಿತಲ್ಲವೇ?

ಜಿಎಸ್‌ಎಸ್, ಕಿರಂ, ಕೆಎಂಎಸ್, ಡಿಆರ್‌ಎನ್, ನಾಗವಾರ, ಬೆಸಗರಹಳ್ಳಿ, ಪ್ರಸನ್ನ, ಅಗ್ರಹಾರ.. ಹೀಗೆ ಕೆಲವು ಒಕ್ಕಲಿಗ, ಲಿಂಗಾಯತ, ಬ್ರಾಹ್ಮಣ ವರ್ಗದವರ ಬೆಂಬಲದಿಂದಲೇ ಆ ಕೃತಿ ಪ್ರಕಟವಾಗಿ, ಪ್ರಚಾರವನ್ನೂ ಪಡೆಯಿತು. ಆ ದೊಡ್ಡವರೆಲ್ಲಾ ಸೇರಿ ‘ಬೂಸ್ಟ್’ ಮಾಡಿದ್ದರಿಂದ ಮಿಕ್ಕ ಕನ್ನಡಿಗರೂ ಒಪ್ಪಿಕೊಂಡರು. ವಿರೋಧಕ್ಕೆ ಬದಲು ಸ್ವಾಗತ ಪಡೆಯಿತು.

* ‘ನಾವಲ್ಲವೇ, ನಮ್ಮ ಜನರಲ್ಲವೇ..’ ಗೀತೆಯ ರಚನೆಗೆ ನಿಮಗಿದ್ದ ಪ್ರೇರಣೆ ಯಾವುದು?

ಜನಗಳ ಕಷ್ಟ ನೋಡಿ ಬರೆದ ಪದ್ಯ ಅದು.

ಆದರೆ, ಅದರ ‘ಪೂರ್ವೋತ್ತರದ ರೂಪ’ಗಳು ಕೆಲವನ್ನು ನಾನು ಬೇರೆ ಬೇರೆಯವರಲ್ಲಿ ಸಂಗ್ರಹಿಸಿದ್ದೇನೆ. ನನ್ನ ಊರನ್ನು ಕುರಿತ ಪಿಎಚ್.ಡಿ ಅಧ್ಯಯನದ ಸಂದರ್ಭದಲ್ಲಿ ನಮ್ಮೂರಿನ ಹಿರಿಯರಾದ ಮುನಿಅಕ್ಕಯ್ಯಮ್ಮ ಅವರ ಬಾಯಲ್ಲಿ ಆ ಹಾಡಿನ ಕೆಲ ನುಡಿಗಳನ್ನು ಕೇಳಿ ಚಕಿತನಾಗಿ ವಿಚಾರಿಸಿದಾಗ, ಅದು ಆಕೆಯ ಚಿಕ್ಕಂದಿನಲ್ಲಿ ತಮ್ಮ ಹಟ್ಟಿಯವರಿಗಾಗಿ ಬಾವಿ ತೋಡಲು ಬಂದಿದ್ದ ಬೋವಿಗಳ ಬಾಯಲ್ಲಿ ಕೇಳಿದ ಸಾಲುಗಳೆಂದು ಹೇಳಿದರು. ಅಂದರೆ, 1930ರ ಸುಮಾರಿನಲ್ಲೇ ಅದು ಜನರ ಬಾಯಲ್ಲಿತ್ತೆಂದಾಗುತ್ತದೆ. ಮೂಲದಲ್ಲಿ ಅದು ಸ್ವಾತಂತ್ರ್ಯ ಹೋರಾಟದ ಸ್ವದೇಶಿ ಚಳುವಳಿಯ ಗೀತೆಯಾಗಿ ಹುಟ್ಟಿದ್ದಂತೆ ಕಾಣುತ್ತದೆ.

ಇರಬಹುದು. ನಾನು ಶೋಷಣೆ ಕುರಿತು ಬರೆದದ್ದು. ನನಗೂ ಯಾರೋ ಈ ರೀತಿ ಲಾವಣಿ ಇದೆ ಎಂದು ಹೇಳಿದ್ದರು. ಅದನ್ನು ಕೇಳಿದ್ದರೆ ನಾನು ಬೇರೆ ರೀತಿ ಬರೆಯುತ್ತಿದ್ದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT