ಸೋಮವಾರ, ಸೆಪ್ಟೆಂಬರ್ 21, 2020
22 °C

ಶ್ರೀ ಅರವಿಂದ ಚೈತನ್ಯದಲ್ಲಿ ಕನ್ನಡ ಕವಿಗಳು

ಎಸ್‌. ಆರ್‌. ವಿಜಯಶಂಕರ Updated:

ಅಕ್ಷರ ಗಾತ್ರ : | |

Prajavani

ಕನ್ನಡ ನವೋದಯ ಸಾಹಿತ್ಯದ ಮೇಲೆ ಪ್ರಭಾವ ಬೀರಿದವರಲ್ಲಿ ಶ್ರೀ ಅರವಿಂದರು ಒಬ್ಬರು. ಇಂದು ಅವರ ಜನ್ಮದಿನ. ಜೀವನ, ಬರಹ ತತ್ವಚಿಂತನೆಗಳು ನೆನಪಾಗುತ್ತವೆ.

ಮಹರ್ಷಿ ಶ್ರೀ ಅರವಿಂದರ ಜನ್ಮದಿನ ಆಗಸ್ಟ್‌ 15 (1872-1950). ತಂದೆ ಡಾ. ಕೃಷ್ಣಧನ ಘೋಷ್ ಮತ್ತು ತಾಯಿ ಸ್ವರ್ಣಲತಾ ದೇವಿ (ದೇಶಭಕ್ತ ಹಾಗೂ ದಾರ್ಶನಿಕ ಋಷಿ ರಾಜನಾರಾಯಣ ಬೋಸ್ ಅವರ ಪುತ್ರಿ). ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಶ್ರೀ ಅರವಿಂದರ ರಾಜಕೀಯ ಜೀವನ ಮಾತ್ರವಲ್ಲದೆ, ಅವರ ಬದುಕು ಬರಹ ತತ್ವಚಿಂತನೆಗಳು ನೆನಪಾಗುವುದು ಸಹಜ.

ಕನ್ನಡ ನವೋದಯ ಸಾಹಿತ್ಯದ ಮೇಲೆ ಪ್ರಭಾವ ಬೀರಿದವರಲ್ಲಿ ಶ್ರೀ ಅರವಿಂದರು ಒಬ್ಬರು. ಉಳಿದ ಮೂವರೆಂದರೆ, ಗುರು ರವೀಂದ್ರನಾಥ ಟ್ಯಾಗೋರ್‌ , ಸ್ವಾಮಿ ವಿವೇಕಾನಂದ ಮತ್ತು ಆನಂದ ಕುಮಾರಸ್ವಾಮಿ. ಕನ್ನಡ ಕವಿಗಳಲ್ಲಿ ಬೇಂದ್ರೆ ಹಾಗೂ ಕುವೆಂಪು ಅವರ ಮೇಲೆ ಶ್ರೀ ಅರವಿಂದರ ಪ್ರಭಾವ ಸಾಕಷ್ಟಾಗಿದೆ. ಮಹರ್ಷಿ ಅರವಿಂದರ ಆತ್ಮವಿಕಾಸ ತತ್ವವನ್ನು ಇಬ್ಬರೂ ಕವಿಗಳು ತಮ್ಮ ಸಾಹಿತ್ಯಗಳಲ್ಲಿ ತಮ್ಮದೇ ಆದ ರೀತಿಯ ಜೀವನದರ್ಶನಗಳಲ್ಲಿ ಪುನರ್ ಸೃಷ್ಟಿಸಿದ್ದಾರೆ.

ದ.ರಾ. ಬೇಂದ್ರೆಯವರ ಚೈತ್ಯಾಲಯ ಕವನ ಸಂಗ್ರಹ ಪೂರ್ತವಾಗಿ ಶ್ರೀ ಅರವಿಂದರ ಕವನಗಳ ಭಾವಾನುವಾದಗಳು. ಇನ್ನೂ ಕೆಲವು ಅನುವಾದಗಳು ಬೇಂದ್ರೆಯವರ ಹೃದಯಸಮುದ್ರ ಸಂಕಲನದಲ್ಲಿದೆ.

ಅರವಿಂದರ ಸುನೀತಗಳನ್ನು ಅನುವಾದಿಸುವಾಗ ಬಂದ ಸಹಜತೆ ಬದಲಾಗಿ ಅರವಿಂದರ ಸಾವಿತ್ರಿ ಮಹಾಕಾವ್ಯದ ಅನುವಾದದಲ್ಲಿ ವಿಫಲತೆ ಅನುಭವಕ್ಕೆ ಬಂತು ಎಂದು ಬೇಂದ್ರೆಯವರು ಹೇಳಿಕೊಂಡದ್ದು ಸಾವಿತ್ರಿ ಚಿಂತನೆ ಎಷ್ಟು ಗಹನವಾದದ್ದು ಎಂಬುದನ್ನು ಸೂಚಿಸುತ್ತದೆ. ಸಾವಿತ್ರಿ ಕೃತಿಯು ಶ್ರೀ ಅರವಿಂದರ ದರ್ಶನದ ಪರಮ ದಿವ್ಯ ಪ್ರಕಟಣೆ ಎಂಬ ಮಾತು ಅದರ ಮಹತ್ವವನ್ನು ಸೂಚಿಸುತ್ತದೆ.

ಕವಿವಾಣಿಯ ಮುಖ್ಯ ಪರಿಣಾಮ ಕಾಣ್ಕೆಯ ಪ್ರೇರಣೆ ಎಂದು ಶ್ರೀ ಅರವಿಂದರು ತಮ್ಮ ‘ಫ್ಯೂಚರ್ ಪೊಯೆಟ್ರಿ‘ ಕೃತಿಯಲ್ಲಿ ಹೇಳುತ್ತಾರೆ. ಕವಿವಾಣಿಯ ಸಾರಭೂತ ಶಕ್ತಿ, ದೃಷ್ಟಿಯನ್ನು (ದರ್ಶನ) ಒದಗಿಸುವುದು. ಆ ದೃಷ್ಟಿಯಲ್ಲಿ ವಿಚಾರ, ಭಾವನೆಗಳು ಅಂತರ್ಗತವಾಗಿರುತ್ತವೆ ಎಂಬುದು ಅವರ ಕಾವ್ಯತತ್ವ ಮೀಮಾಂಸೆ. ವರಕವಿ ಬೇಂದ್ರೆಯವರು ಹೇಳಿರುವಂತೆ ಶ್ರೀ ಅರವಿಂದರ ಕಾವ್ಯಶಕ್ತಿ ಎಂದರೆ, ‘ಅನನುಭೂತವಾದ ಭಾವಗಳನ್ನು ಅನುಭವಕ್ಕೆ ಎಟುಕುವಂತೆ ಶಬ್ದಶಕ್ತಿ ಸಾಮರ್ಥ್ಯದಿಂದ ಜೀವದ ಬೇರೆ ಭೂಮಿಕೆಗೆ ಎತ್ತುವುದು.

‘ಚೈತ್ಯಾಲಯ’ ಕವನ ಸಂಗ್ರಹದಲ್ಲಿ ಬೇಂದ್ರೆಯವರು ಶ್ರೀ ಅರವಿಂದರ ’ಡ್ರೀಮ್‌ ಬೋಟ್‘ ಕವನವನ್ನು ‘ಸ್ವಪ್ನನೌಕೆ’ ಎಂದು ಅನುವಾದಿಸಿದ್ದಾರೆ. ಈ ಕವನದಲ್ಲಿ ಭಕ್ತ ಮತ್ತು ಪರಮಾತ್ಮನ  ಸಂಬಂಧದ ಚಿತ್ರಣವಿದೆ. ಅದು ಸತಿ ಪತಿ ಭಾವದ ಭಕ್ತಿ. ಭಕ್ತ, ಪರಮಾತ್ಮನ ಅನುಗ್ರಹಕ್ಕಾಗಿ ಹಂಬಲಿಸಿದರೆ ಮಾತ್ರ ಸಾಲದು. ಅದನ್ನು ಪಡೆದುಕೊಳ್ಳುವ ಯೋಗ್ಯತೆಯನ್ನೂ ಹೊಂದಬೇಕು. ‘ಅರರೇ, ಗದಗದನೇ ಏನೋ ನಡುಗಿತ್ತೋ - ನಡುಗಿತ್ತೋ /ಎದೆಗೂಡಿನ ಹಿಂದೇ/ ಏನೇನೋ ಅಡಗಿತ್ತೋ - ಅಡಗಿತ್ತೊ’ ಎನ್ನುತ್ತಾರೆ. ಎದೆಗೂಡಿನಲ್ಲಿ ಭಕ್ತನ ಜೀವದ ಪಕ್ಷಿ ಗದಗದನೇ ನಡುಗುತ್ತಿದೆ. ಪರಮಾತ್ಮನ ಆಗಮನದ ವೇಳೆಗೆ ಇರಬೇಕಾದ ಸರ್ವ ಸಮರ್ಪಣೆಗೆ ಅದಿನ್ನೂ ತಯಾರಾಗಿಲ್ಲ. ಆಗ ಚಿರ ತರುಣ ಬಂದಂತೆ ಹಿಂತಿರುಗುತ್ತಾನೆ. ಆಗಿನ ಸ್ಥಿತಿ ‘ಹೋಯಿತೋ ಹಡಗಾ, ಬಂಗಾರದ ಹುಡುಗಾ‘. ಆಗಮನವಾದಾಗ ಸಿದ್ಧವಾಗಿಲ್ಲದೇ ಇದ್ದ ಭಕ್ತನಿಗೆ ಕಳೆದುಕೊಂಡ ದುಃಖ. ಪ್ರಯಾಣಿಸಬಹುದಾಗಿದ್ದ ನೌಕೆ, ಸ್ವಪ್ನನೌಕೆಯಾಗಿ ಬಿಡುತ್ತದೆ; ಹತ್ತಿರ ಬಂದೂ ಕೂಡ ಪಡೆಯಲಾಗಲಿಲ್ಲ. ಕಳೆದುಕೊಂಡ ಭಾವ ಚಿರವಿರಹದ ದುಃಖವಾಗಿ ಮಾರ್ಪಾಡುತ್ತದೆ.

ತಮ್ಮ ‘ಶ್ರೀ ಅರವಿಂದರಿಗೆ’ ಎನ್ನುವ ಕವನದಲ್ಲಿ (ಅಗ್ನಿಹಂಸ ಸಂಕಲನ) ಕುವೆಂಪು ಅವರು ‘ದ ಲೈಫ್ ಡಿವೈನ್’ ಕೃತಿಯು ಪೂರ್ವ-ಪಶ್ಚಿಮ ಎರಡೂ ತತ್ವಗಳ ಮೇರುಪರ್ವತದ ಮಾನಸ ಸರೋವರ ಎನ್ನುತ್ತಾರೆ. ಆ ಔನ್ನತ್ಯದ ದರ್ಶನದಲ್ಲಿ ತನ್ನ ಧೀತೃಷ್ಣೆ ಶಾಂತವಾಯಿತು ಎಂದು ಹೇಳುತ್ತಾರೆ ಅವರು. ‘ಧೀತೃಷ್ಣೆ’ ಎಂಬ ಪದ ಮಾಹಿತಿಗೆ ಸಂಬಂಧಪಟ್ಟದ್ದಲ್ಲ; ಆತ್ಮ–ಪರಮಾತ್ಮಗಳ ಸಂಬಂಧದ ಅರಿವಿಗೆ ಸಂಬಂಧಿಸಿದ್ದು.

‘ವಿಭೂತಿಪೂಜೆ‘ ಸಂಕಲನದ ಲೇಖನದಲ್ಲಿ ಶ್ರೀ ಅರವಿಂದರ ಸರ್ವತೋಮುಖವಾದ ಸಂಪೂರ್ಣವಾದ ಪೂರ್ಣ ವಿಭೂತಿ ಇತಿಹಾಸದಲ್ಲಿ ದೊರೆಯದು. ಬದಲಾಗಿ ಅದಕ್ಕೆ ಸ್ವಲ್ಪವಾದರೂ ಸಾದೃಶ್ಯ ದೊರೆಯಬೇಕಾದರೆ ಪುರಾಣಗಳಿಗೇ ಹೋಗಬೇಕಾಗುತ್ತದೆ ಎನ್ನುತ್ತಾರೆ ಕುವೆಂಪು. ಪುರಾಣಗಳು ಮುಂದೆ ಸಂಭವಿಸಲಿರುವ ಇತಿಹಾಸವನ್ನು ಪ್ರತಿಮಾ ವಿಧಾನದಿಂದ ಪ್ರತಿಬಿಂಬಿಸುತ್ತವೆ. ಅರವಿಂದರು ಜೀವಿತಾವಧಿಯಲ್ಲಿ ಭೂಮಿಯ ಮನಸ್ಸನ್ನು ಹೊಂದಿದ್ದರೂ ಅವರ ಅಭಿಲಾಷೆ ಸದಾ ಆಕಾಶದ ಭವ್ಯ ವಿರಾಟ್ ಪ್ರತಿಮೆಯ ದರ್ಶನಾಕಾಂಕ್ಷಿ. ಅರವಿಂದರು ಹೇಳಿರುವಂತೆ, ದೇವರು ಪೃಥ್ವಿಯನ್ನು ಹುಟ್ಟಿಸಿದ್ದಾನೆ. ಪೃಥ್ವಿಯು ತನ್ನ ಎದೆಯಲ್ಲಿ ಅಡಗಿ ಇದ್ದುದನ್ನು ಪ್ರಕಟಗೊಳಿಸಿ ತನ್ನ ದೇವರನ್ನೂ ಹುಟ್ಟಿಸಿಕೊಳ್ಳಬೇಕಾಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.