ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಕಣ್ಮುಂದೆ ಬರುವ ಅಕ್ಕೋರು; ಕನ್ನಡ ಶಾಲೆಯ ಉಪ್ಪಿಟ್ಟು

Last Updated 19 ಸೆಪ್ಟೆಂಬರ್ 2020, 1:30 IST
ಅಕ್ಷರ ಗಾತ್ರ

ಮೂಡುಗಾಳಿಯ ಹೊಡೆತಕ್ಕೆ ನುಗ್ಗಾಗುವ ಮೈಕೈ ಬಗ್ಗೆ ಈಗ ನಮಗ್ಯಾರಿಗೂ ಖಬರಿಲ್ಲ. ಬಂದ ನೋವು ಕೊರೊನಾದಿಂದಲೇ ಇರಬಹುದಾ ಎಂಬ ಅನುಮಾನ ಶುರುವಾಗಿಬಿಟ್ಟಿದೆ. ತಲೆ ಚಿಟಿಚಿಟಿ ಹಿಡಿದು, ಹನಿಯುವ ಮೂಗಿನ ಈ ಜಡ್ಡು ಎಂದಿನ ಚಳಿಗಾಲದ್ದಾದರೂ ಹಾಗೆಂದುಕೊಂಡು ಕೂರುವಂತಿಲ್ಲಈಗ. ಸುಮ್ಮನೇ ಕೂರಲೂ ಆಗದ, ಬೀಸಾಗಿ ಓಡಾಡಲೂ ಆಗದ ಈ ಹೊತ್ತಿನಲ್ಲಿ ಮುದುಡಿ ಮುದ್ದೆಯಾಗಿಯೇ ಅರ್ಧ ಜೀವ ಹೈರಾಣಾಗಿದೆ.

ಫೋನು, ಟ್ಯಾಬು, ಲ್ಯಾಪ್‌ಟಾಪ್‌ಗಳಲ್ಲಿ ಮುಳುಗಿಹೋಗಿರುವ ಮಕ್ಕಳಿಗೆ ಏನು ಓದುವುದು, ಏನು ಬರೆಯುವುದು ಎಂಬುದು ಇನ್ನೂ ನಿಚ್ಚಳವಾಗಿಲ್ಲ. ಆಟಕ್ಕೆ ಹೊರ ಹೋಗಲಾಗದ ಮಕ್ಕಳು, ಶಾಲೆಯ ವಾಟ್ಸ್‌ ಆ್ಯಪ್‌ ಗ್ರೂಪ್‌ನಲ್ಲಿ ಒಮ್ಮೆಲೇ ಬಂದು ಬೀಳುವ ನೋಟ್ಸ್‌ಗಳಿಗೆ ಹೆದರಿಯೇ ಅರ್ಧ ಹೈರಾಣು. ಏನಾದರೂ ಸಣ್ಣಪುಟ್ಟ ಕೆಲಸ ಹೇಳಿದರೂ ‘ಬರೆಯುವುದಿದೆ’ ಎಂಬ ವರಾತ. ಕೆಲಸ ಮಾಡದ ಕೈ ಸೋಮಾರಿಯಾಗಿ, ಮಾತು ಕೇಳುತ್ತಿಲ್ಲ. ಎರಡು ಪುಟ ಬರೆಯುವ ಹೊತ್ತಿಗೆ ಗೋಣು ನೋವು, ಬೆನ್ನು ನೋವು, ಕೈ ನೋವು!

ನಿತ್ಯ ಒಂದು ಪುಟ ‌‘ಶುದ್ಧ ಬರಹ’ ಬರೆಯುವಂತೆ ತಂದೆ– ತಾಯಿ ಹೇಳಿದ ಮಾತು, ಮಕ್ಕಳಿಗೆ ಬೆನ್ನ ಹಿಂದಿನ ಗಾಳಿಗೆ ಸಮ! ಅದೇ ಮಾತನ್ನು ಟೀಚರ್‌ ಹೇಳಿದರೆ, ಅವರಿಗೆ ಬೈದುಕೊಂಡಾದರೂ ಬರೆದಾರು. ಈಗೀಗ ಶಾಲೆಗಳಲ್ಲಿ ಶುದ್ಧಬರಹದ ಸುದ್ದಿಯೇ ಇಲ್ಲ. (ಸದ್ಯಕ್ಕೆ ಶಾಲೆ ಆರಂಭವಾಗುವ ಲಕ್ಷಣಗಳೂ ಇಲ್ಲ) ಉಕ್ತ ಲೇಖನ ಎಂದರೇನೆಂದು ಡಿಕ್ಷನರಿ ಹಿಡಿದು ಹುಡುಕುವಂತಾಗಿದೆ. ಕಾಪಿ ಪುಸ್ತಕ ಬರಹ, ಶುದ್ಧ ಬರಹ ಹಾಗೂ ಉಕ್ತ ಲೇಖನದಂಥ ಚಟುವಟಿಕೆಗಳು ಮಕ್ಕಳ ಏಕಾಗ್ರತೆಗೆ ನೆರವಾಗುತ್ತಿದ್ದವು. ಬರೆದು ಬರೆದು ರೂಢಿಯಾದ ಕೈಗಳಲ್ಲಿ ಅಕ್ಷರಗಳು ಮುತ್ತಾಗಿ ಹೊಳೆಯುತ್ತಿದ್ದವು. ‘ಹ’ಕಾರಕ್ಕೆ ’ಅ’ಕಾರ ಬಳಕೆಯ ಹಾವಳಿ ಇರಲಿಲ್ಲವೆಂದರೂ ನಡೆದೀತು. ತರಗತಿಯಲ್ಲಿ ಕಥೆ ಹೇಳುವ, ಪದ್ಯ ಓದುವ, ಆಯ್ದ ಗದ್ಯಭಾಗವನ್ನು ಓದಿ ತೋರಿಸುವ ಅವರ ಉಮೇದು ಭಾಷಾ ತರಗತಿಗಳ ಸೊಗಸನ್ನು ಹೆಚ್ಚಿಸುತ್ತಿತ್ತು. ಆ ಸಡಗರವೇ ಸಾಕಿತ್ತು ಶಾಲೆಯೆಡೆಗೆ ಮಕ್ಕಳನ್ನು ಕರೆತರಲು!

‘ಸಿಎಂ ಬದಲಾದರೆ ಬಿಜೆಪಿ ಹೊಡೆದು ಹೋಳು’ ಎಂದು ಟಿವಿ ಪರದೆಯಲ್ಲಿ ದೊಡ್ಡಕ್ಷರದಲ್ಲಿ ಬರುತ್ತಿರುವಾಗ ಉಕ್ತ ಲೇಖನ, ಶುದ್ಧಬರಹ, ಅದನ್ನು ಹೇಳಿಕೊಟ್ಟ ಟೀಚರ್‌, ಶಾಲೆಯ ಕಟ್ಟೆ–ಕಂಬಗಳೆಲ್ಲ ನೆನಪಾದವು. ಎರಡೇ ಹೋಳಾದ ಗೋಧಿ ನುಚ್ಚಿನ ಬಿಸಿ ಉಪ್ಪಿಟ್ಟಿಗಾಗಿ ಸಾಲುಗಟ್ಟಿದ ನೆನಪಾಯಿತು. ಮಕ್ಕಳು, ಕನ್ನಡದಂತೆ ಇಂಗ್ಲಿಷ್‌– ಹಿಂದಿಯನ್ನೂ ಚೆನ್ನಾಗಿ ಕಲಿಯಲಿ ಎಂದು ಶಾಲೆ ಮುಗಿದಾದ ಮೇಲೆ ಒಂದು ತಾಸು ಹೆಚ್ಚುವರಿ ಪಾಠ ಹೇಳಿಕೊಟ್ಟ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಭರವಸೆ ತುಂಬಿದ ದೇಶಪಾಂಡೆ ಅಕ್ಕೋರು ಕಣ್ಮುಂದೆ ಬಂದರು. ಶಾಲೆ ಕೊಠಡಿಗೆ ಬೀಗ ಹಾಕಿದರೂ, ಕಟ್ಟೆ ಮೇಲೆಯೇ ಕುಳಿತು ‘ನಿತ್ಯದ ಪಂಚಾಂಗ’ ಬರೆಯುವ ಬೋರ್ಡಿನ ಮೇಲೆ ಅವರು ಬರೆಯುತ್ತಿದ್ದ ಹಿಂದಿ, ಇಂಗ್ಲಿಷ್‌ ಅಕ್ಷರಗಳು ಅವರಷ್ಟೇ ಇಷ್ಟವಾದದ್ದು ನೆನಪಾಯಿತು. ಈ ತರಗತಿಗೆ ಒಂದನೇ ನಂಬರ್‌ ಶಾಲೆ, ಎರಡನೇ ನಂಬರ್‌ ಶಾಲೆಯ ಹುಡುಗರು ಎಂಬ ಹಂಗಿರಲಿಲ್ಲ. ಹುಡುಗಿಯರ/ಹುಡುಗರ ಶಾಲೆ ಎಂಬ ಭೇದವೂ ಇರಲಿಲ್ಲ. ಅದನ್ನು, ಈಗಿನ ಕೋವಿಡ್‌ ಕಾಲದ ‘ವಿದ್ಯಾಗಮ’ ಎನ್ನಬಹುದೇನೋ! ಆದರೆ, ಆಗ ಅದು ಯಾವುದೂ ಸುದ್ದಿಯಾಗಲೇ ಇಲ್ಲ. ಶೇರ್‌, ಕಮೆಂಟ್‌, ಲೈಕ್‌ಗಳ ಪ್ರವಾಹವೂ ಇರಲಿಲ್ಲ. ಸಾಮಾನ್ಯ ಎನಿಸಿದ ಆ ಪಾಠಗಳು ಅಸಾಮಾನ್ಯವಾಗಿದ್ದವು, ಕ್ರಿಯೇಟಿವ್‌ ಆಗಿದ್ದವು ಎಂದೆಲ್ಲ ಅನಿಸತೊಡಗಿದ್ದು ಈಗ!

ದಸರಾ ಕ್ರೀಡಾಕೂಟದ ತಾಲೀಮಿನ ನೆಪದಲ್ಲಿ ಕ್ಲಾಸಿಗೆ ಬರದಿದ್ದವರಿಗೆ, ಖೋಖೋ ಆಟದಲ್ಲಿ ಮೊಣಕಾಲು ಕೆತ್ತಿಸಿಕೊಂಡು ಶಾಲೆಗೆ ಬರಲಾಗದವರಿಗೆ, ವಾಲಿಬಾಲ್‌, ಟೆನಿಕ್ವಾಯ್ಟ್‌ ಅಭ್ಯಾಸದಲ್ಲಿ ಕೈಉಳುಕಿಸಿಕೊಂಡವರಿಗೆಲ್ಲ ವಿಶೇಷ ತರಗತಿಗಳು ನಡೆಯುತ್ತಿದ್ದವು! ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿದವರೆಲ್ಲ ಇಡೀ ಶಾಲೆಗೆ ಹೀರೋಗಳು. ಅವರು ಮೈದಾನಕ್ಕೆ ಕಾಲಿಡುತ್ತಿದ್ದಂತೆಯೇ ಚಪ್ಪಾಳೆಯ ಸ್ವಾಗತ, ಸಿಳ್ಳೆಗಳ ಪ್ರೋತ್ಸಾಹ, ಮೆಚ್ಚಿನ ಆಟಗಾರನಿಗೆ ನೀರು, ನಿಂಬೆಹುಳಿ ಪೆಪ್ಪರ್‌ಮೆಂಟ್‌ ಕೊಡುವ ಉಮೇದು... ಒಂದೇ ಎರಡೇ?

ದಸರಾ ಹೊಸ್ತಿಲಿಗೆ ಬಂದಿದೆ. ಶಾಲೆಯ ಆಟದ ಮೈದಾನಗಳು ಭಣಗುಡುತ್ತಿವೆ. ಅಷ್ಟಕ್ಕೂ ಮಿಗಿಲಾಗಿ, ಕ್ರೀಡಾಕೂಟದ ಅಭ್ಯಾಸಕ್ಕೆಂದು ನಸುಕಿನಲ್ಲಿಯೇ ಮಕ್ಕಳನ್ನುಕಳುಹಿಸಲು ನಾವಾದರೂ ಎಲ್ಲಿ ತಯಾರಿದ್ದೇವೆ? ಎಲ್ಲ ಶಿಕ್ಷಕರು ‘ವಿದ್ಯಾಗಮ’ದಲ್ಲಿ ಮಗ್ನರಾಗಿದ್ದರೆ, ಇತ್ತ ವಿಶಲ್‌ಗಾರ್ಡ್‌ ಹಿಡಿದುಕೊಂಡ ಪಿಇ ಟೀಚರ್‌, ‘ವಿಶ್ರಾಮ್‌’ ಸ್ಥಿತಿಯಲ್ಲಿಯೇ ನಿಲ್ಲುವಂತಾಗಿದೆ. ದೈನೇ ಮೂಡ್‌, ಬಾಯೇಮೂಡ್‌.... ಎತ್ತ ಹೊರಳಬೇಕೆಂದು ಗೊತ್ತಾಗದೇ. ‘ಸಾವಧಾನ್‌’ ಎಂದು ಹೇಳಿ, ‘ಆಗೇ ಚಲೇಗಾ ಆಗೇ ಮೂಡ್‌...‌’ ಎಂದು ಅವರು ನೀಡುವ ಕಮಾಂಡ್‌ ನಿರೀಕ್ಷೆಯಲ್ಲಿ ಮಕ್ಕಳಿದ್ದಾರೆ. ನಾವೂ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT