ಗುರುವಾರ , ಮೇ 26, 2022
25 °C

ರಾಜೇಶ್ವರಿ ತೇಜಸ್ವಿ ಮಾತು: ಮೂಡಿಗೆರೆ ತಾಲ್ಲೂಕಿನ ಮೊದಲ ಕಾರು ಚಾಲಕಿ ನಾನೇ!

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

ರಾಜೇಶ್ವರಿ ತೇಜಸ್ವಿ

ರಾಜೇಶ್ವರಿ ತೇಜಸ್ವಿ ಅವರ ಮೊದಲ ಬರಹದ ಬೆಚ್ಚನೆಯ ನೆನಪಿನ ಕುರಿತಾದ ಲೇಖನ ಇಲ್ಲಿದೆ. ಇದು ಪ್ರಜಾವಾಣಿಯಲ್ಲಿ 2018ರ ಜುಲೈನಲ್ಲಿ ಪ್ರಕಟವಾಗಿದ್ದ ಬರಹ.

ನಾನು ಸಾಹಿತಿ ಅಲ್ಲ. ನನ್ನನ್ನು ಯಾರಾದರೂ ಸಾಹಿತಿ ಎಂದರೆ ನನಗೆ ತುಂಬಾ ಮುಜುಗರ. ನಾನು ಗೃಹಿಣಿ, ಸಾಹಿತ್ಯವನ್ನು ತಲೆಗೆ ಹಚ್ಚಿಕೊಂಡಿರಲಿಲ್ಲ. ತೇಜಸ್ವಿ ಜೊತೆಗಿನ ಸುಂದರ ಬದುಕಿನ ಕಾರಣದಿಂದಾಗಿ ನನಗೆ ಬರೆಯಲು ಸಾಧ್ಯವಾಯಿತು. ಅವರಿಲ್ಲದಿದ್ದರೆ ನಾನು ಬರೆಯುತ್ತಿದ್ದೆನೋ ಇಲ್ಲವೋ ಗೊತ್ತಿಲ್ಲ. ನನ್ನ ಬರವಣಿಗೆಗೆ ಅವರೇ ಮುಖ್ಯ ಕಾರಣ ಮತ್ತು ಪ್ರೇರಣೆ.

ನನಗೆ ಬರೆಯಬೇಕೆಂದು ಪ್ರೇರಣೆ ಕೊಟ್ಟ ಮೂವರಿಗೆ ತುಂಬಾ ಆಭಾರಿಯಾಗಿದ್ದೇನೆ. ಮೊದಲು ಅಬ್ದುಲ್‌ ರಷೀದ್‌ ಅವರನ್ನು ನೆನಪು ಮಾಡಿಕೊಳ್ಳುತ್ತೇನೆ. ‘ಕೆಂಡಸಂಪಿಗೆ’ ಅಂತರ್ಜಾಲ ಪತ್ರಿಕೆಯಲ್ಲಿ ‘ಮೂಡಿಗೆರೆ ಹ್ಯಾಂಡ್‌ಪೋಸ್ಟ್‌’ ಶೀರ್ಷಿಕೆಯಡಿ ಲೇಖನ ಬರೆಯಲು ಅವಕಾಶ ನೀಡಿದರು. 15 ದಿನಗಳಿಗೆ ಒಮ್ಮೆ ಲೇಖನ ಬರೆಯುತ್ತಿದ್ದೆ. ನಾನು ನೆತ್ತಿ ಮೇಲಿನ ಮನೆ ಮಾಡು ಮತ್ತು ಆಕಾಶ ನೋಡಿಕೊಂಡು ಬೆಳೆದವಳು, ನನಗೆ ಹೇಗೆ ಬರೆಯಲು ಆಗುತ್ತದೆ ಎಂದು ಅಳುಕು ತೋರಿದ್ದೆ. ಆದರೆ, ಅವರು ನನ್ನನ್ನು ಹುರಿದುಂಬಿಸಿ, ನಿಮ್ಮಿಂದ ಬರೆಯಲು ಸಾಧ್ಯವಿದೆ ಎಂದು ಹೇಳಿ ಬರೆಯುವಂತೆ ಮಾಡಿದರು. ನಮ್ಮ ಬದುಕು, ಹ್ಯಾಂಡ್‌ಪೋಸ್ಟ್‌, ಕಾಫಿ ತೋಟ ಹೀಗೆ ಹಲವಾರು ವಿಷಯಗಳನ್ನು ಇಟ್ಟುಕೊಂಡು ಒಂದು ವರ್ಷ ಅವರ ವೆಬ್‌ಸೈಟ್‌ಗೆ ಬರೆದೆ. ಇದಕ್ಕೆ ಬಹಳಷ್ಟು ಪ್ರತಿಕ್ರಿಯೆ ಬಂತು.

ಮೂಡಿಗೆರೆ ತಾಲ್ಲೂಕಿನ ಮೊದಲ ಕಾರು ಚಾಲಕಿ ನಾನೇ! 1978ರಿಂದಲೇ ಕಾರು ಚಾಲನೆ ಮಾಡುತ್ತಿದ್ದೆ. ಅದಕ್ಕೂ ತೇಜಸ್ವಿ ಅವರೇ ಪ್ರೇರಣೆ. ನಾನು ಕಾರು ಚಾಲನೆ ಮಾಡಲು ಕಲಿತ ಪ್ರಸಂಗ ನೆನಪಿಸಿಕೊಂಡು ನಗುತ್ತಿರುತ್ತೇನೆ. 1960ರಲ್ಲಿ ಎಂ.ಎ ಓದುತ್ತಿದ್ದಾಗ ಕಷ್ಟಪಟ್ಟು ಸೈಕಲ್‌ ಕಲಿತು ಮಹಾರಾಣಿ ಹಾಸ್ಟೆಲ್‌ನಿಂದ ಮಾನಸ ಗಂಗೋತ್ರಿಗೆ ಬರುತ್ತಿದ್ದೆ. ಆದರೆ, ಸ್ಕೂಟರ್‌ ಓಡಿಸುವುದನ್ನು ಕಲಿತಿರಲಿಲ್ಲ. ತೇಜಸ್ವಿ ಅವರನ್ನು ಮದುವೆಯಾದ ನಂತರ, ಮೈಸೂರಿನಲ್ಲಿದ್ದಾಗ ‘ನಿನಗೆ ಹೇಗೂ ಸೈಕಲ್‌ ಓಡಿಸಲು ಬರುತ್ತದೆಯಲ್ಲ? ಸ್ಕೂಟರ್‌ ಕಲಿತುಕೊ’ ಎಂದು ತೇಜಸ್ವಿ ಮೊಪೆಡ್‌ ಮೇಲೆ ಕೂರಿಸಿ ತಳ್ಳಿ ಕೈಬಿಟ್ಟರು. ಸ್ವಲ್ಪ ದೂರ ಹೋಗಿ ದೊಪ್ಪೆಂದು ಬಿದ್ದುಬಿಟ್ಟೆ. ‘ನೀನು ಸ್ಕೂಟರ್‌ ಕಲಿಯುವುದಿಲ್ಲ, ಕಾರು ಓಡಿಸುವುದನ್ನಾದರೂ ಕಲಿ’ ಎಂದು ಅವರೇ ಡ್ರೈವಿಂಗ್‌ ಸ್ಕೂಲ್‌ಗೆ ನನ್ನನ್ನು ಮತ್ತು ನಾದಿನಿ ತಾರಿಣಿಯನ್ನು ಕಳುಹಿಸಿದರು. ಕಾರು ಚಾಲನೆ ಕಲಿತ ಮೇಲೆ ಮೈಸೂರಿನಿಂದ ಮೂಡಿಗೆರೆವರೆಗೂ ನಾನೇ ಚಾಲನೆ ಮಾಡಿಕೊಂಡು ಬರುತ್ತಿದ್ದೆ. ಮಕ್ಕಳನ್ನು ಶಾಲೆಗೆ ಬಿಡಲು, ಗೊಬ್ಬರ, ತರಕಾರಿ ತರಲು… ಹೀಗೆ ದೈನಂದಿನ ಕೆಲಸಕ್ಕೆಂದು ಮೂಡಿಗೆರೆಯಲ್ಲಿ ಪ್ರೀಮಿಯರ್‌ ಪದ್ಮಿನಿ ಕಾರಿನಲ್ಲಿ ಓಡಾಡುತ್ತಿದ್ದೆ.

ತೇಜಸ್ವಿ ಹುಡುಕಿಕೊಂಡು ಹ್ಯಾಂಡ್‌ಪೋಸ್ಟ್‌ಗೆ ಯಾರಾದರೂ ಬಂದು ವಿಳಾಸ ಕೇಳಿದರೆ, ‘ಅದೇ ಬಿಳಿ ಕಾರು ಓಡಿಸುತ್ತದೆಯೆಲ್ಲ? ಹೆಂಗಸು? ಅವರ ಗಂಡನಾ?’ ಎಂದು ಸ್ಥಳೀಯರು ವಿಳಾಸ ಹೇಳುತ್ತಿದ್ದರು.

ಇದನ್ನೂ ಓದಿ:

ಸುಮಾರು 20 ವರ್ಷಗಳ ಹಿಂದೆ ‘ಪ್ರಜಾವಾಣಿ’ಯವರು ನಮ್ಮ ಮನೆಯ ಹೂದೋಟ ಗಮನಿಸಿ, ‘ಹೂದೋಟದ ಬಗ್ಗೆ ಲೇಖನ ಬರೆಸಬೇಕು ಅಂದುಕೊಂಡಿದ್ದೇವೆ. ನಿಮ್ಮ ಲೇಖನದಿಂದಲೇ ಶುರು ಮಾಡುತ್ತೇವೆ’ ಎಂದಿದ್ದರು. ಆಗ ತೇಜಸ್ವಿ ಅವರ ಬಳಿ ಹೇಳಿದೆ, ‘ನೀನು ಬರೆದೆ, ಅದು ಆಯ್ತು. ನಿನ್ನಿಂದ ಬರೆಯಲು ಆಗವುದಿಲ್ಲ ಬಿಡು’ ಎಂದು ನಕ್ಕಿದ್ದರು. ಕೊನೆಗೆ ಅವರಿಂದಲೇ ನಮ್ಮ ಹೂದೋಟದ ಚಿತ್ರ ತೆಗೆಸಿ ಲೇಖನ ಬರೆದು ಕಳುಹಿಸಿದ್ದೆ. ಅದಕ್ಕೆ ₹ 500 ಗೌರವಧನ ಕಳುಹಿಸಿದ್ದರು. ಅದೇ ನನಗೆ ಸಿಕ್ಕ ಮೊದಲ ಗೌರವ ಧನ!

ನನ್ನ ಮನೆಯವರು ತೀರಿಕೊಂಡಾಗ ನನ್ನನ್ನು ಮಾತನಾಡಿಸಿಕೊಂಡು ಹೋಗಲು ಕವಯತ್ರಿ ಸವಿತಾ ನಾಗಭೂಷಣ್‌ ಬಂದಿದ್ದರು. ಊಟದ ಮನೆಗೆ ಬಂದು ‘ನೀವು ಬರೆಯಲೇಬೇಕು. ನಿಮ್ಮ ಬದುಕಿನ ಪುಟ, ತೇಜಸ್ವಿಯರ ಬದುಕಿನ ಪುಟ ಗೊತ್ತಾಗಬೇಕೆಂದರೆ ನಿಮ್ಮ ಬರಹ ಬೇಕು’ ಎಂದು ಒತ್ತಾಯಿಸಿದ್ದರು. ಕೆಲವು ದಿನಗಳ ನಂತರ ನಮ್ಮ ಮನೆಗೆ ಬಂದಿದ್ದ ಪತ್ರಕರ್ತೆ ಗೌರಿ ಲಂಕೇಶ್‌ ಕೂಡ ಬರೆಯಬೇಕೆಂದು ಒತ್ತಾಯ ಮಾಡಿದರು. ‘ಬರೆಯಲು ಆಗದಿದ್ದರೆ ಯಾರಿಂದಲಾದರೂ ನಿರೂಪಣೆಗೆ ವ್ಯವಸ್ಥೆ ಮಾಡಿಸುತ್ತೇನೆ, ನೀವು ಬರೆಯಿರಿ’ ಎಂದರು. ನಾನೇ ಬರೆಯುತ್ತೇನೆ, ಪ್ರಯತ್ನಪಡುತ್ತೇನೆ, ನಾನು ಬರೆದರೆ ಸರಿ ಹೋಗುತ್ತದೆ ಎಂದು ಬರೆಯಲು ಶುರು ಮಾಡಿದೆ.

‘ನನ್ನ ತೇಜಸ್ವಿ’ ಬರೆಯಲು ಶುರು ಮಾಡಿದಾಗ ಸ್ವಲ್ಪ ಭಯ ಆಯಿತು. ಹೇಗಪ್ಪಾ ಬರೆಯುವುದು ಎಂದು ಅಳುಕುತ್ತಿದ್ದೆ. ಆಗ ಶಿವಾರೆಡ್ಡಿ ಎಂಬುವವರು ನಾಲ್ಕಾರು ಸಾಲು ಬರೆದು ತೋರಿಸಿ ಬರೆಯುವಂತೆ ಮಾಡಿದರು. ‘ನನ್ನ ತೇಜಸ್ವಿ’ ನಾನು ಬರೆದ ಮೊದಲ ಪುಸ್ತಕ. ಮಹಾರಾಜ ಕಾಲೇಜಿನಲ್ಲಿ ತೇಜಸ್ವಿ ಪರಿಚಯವಾದಗಿನಿಂದ ಅವರ ಜೊತೆಗಿನ ಕೊನೆ ದಿನದವರೆಗಿನ ಕ್ಷಣಗಳನ್ನು ಈ ಕೃತಿಯಲ್ಲಿ ತೆರೆದಿಟ್ಟಿದ್ದೇನೆ.

ಈ ಪುಸ್ತಕ ಓದಿ ತುಮಕೂರಿನ ನ್ಯಾಯಾಧೀಶರೊಬ್ಬರು ಪ್ರಶಂಸೆಯ ಪತ್ರ ಬರೆದಿದ್ದಾರೆ. ಇನ್ನೊಬ್ಬ ನ್ಯಾಯಾಧೀಶರು ಮನೆಗೆ ಬಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮದುವೆ ನಿಶ್ಚಯ ಮಾಡಿಕೊಂಡ ಅನೇಕ ಹುಡುಗ–ಹುಡುಗಿಯರು ಜತೆಯಾಗಿ ಬಂದು ಪುಸ್ತಕದ ಬಗ್ಗೆ ಚರ್ಚೆ ಮಾಡುತ್ತಾರೆ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಒಂದು ಸಮಾರಂಭಕ್ಕೆ ಹೋಗಿದ್ದಾಗ ಅಲ್ಲಿನ ಹುಡುಗ–ಹುಡುಗಿಯರು ನನ್ನನ್ನು ಮುತ್ತಿಕೊಂಡು ‘ನನ್ನ ತೇಜಸ್ವಿ ಮತ್ತೆ ಮತ್ತೆ ಓದಬೇಕು ಅನಿಸುತ್ತದೆ. ಇನ್ನಷ್ಟು ಬರೆಯಿರಿ’ ಎಂದು ಒತ್ತಾಯಿಸಿದ್ದು ಬರವಣಿಗೆಗೆ ಸಿಕ್ಕ ಅತ್ಯುತ್ತಮ ಮೆಚ್ಚುಗೆ ಎಂದುಕೊಂಡಿದ್ದೇನೆ.

ನನ್ನ ಎರಡನೇ ಪುಸ್ತಕ ‘ನಮ್ಮ ಮನೆಗೂ ಗಾಂಧಿ ಬಂದರು’ ಕೃತಿಗೆ ಲಭಿಸಿದ ‘ಅಮ್ಮ’ ಪ್ರಶಸ್ತಿ ನನಗೆ ಸಿಕ್ಕ ಮೊದಲ ಪ್ರಶಸ್ತಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು