ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಕ್ರಿಯೆ: ಬಹುಸಂಖ್ಯಾತ ಸಮುದಾಯ ಸರಿ ಇದ್ದಾಗಲೂ ಎಂದರೇನು?

Last Updated 25 ಸೆಪ್ಟೆಂಬರ್ 2022, 0:00 IST
ಅಕ್ಷರ ಗಾತ್ರ

ಡಾ.ಆರ್. ಲಕ್ಷ್ಮೀನಾರಾಯಣ ಅವರು ಪುರುಷೋತ್ತಮ ಬಿಳಿಮಲೆ ಅವರ ಲೇಖನಕ್ಕೆ ಪ್ರತಿಕ್ರಿಯಿಸುತ್ತಾ (ಸೆ.18, 2022) ‘ಬಹುಸಂಖ್ಯಾತ ಸಮುದಾಯ ಸರಿಯಿದ್ದಾಗಲೂ’ ಬುದ್ಧಿಜೀವಿಗಳು ಎನಿಸಿಕೊಂಡವರು ಅದನ್ನು ಬಹಿರಂಗವಾಗಿ ಹೇಳಲು ಹಿಂಜರಿಯುತ್ತಾರೆಂತಲೂ, ಯಾವುದೋ ಪಕ್ಷದ ತುತ್ತೂರಿಯಂತೆ ಋಣ ಸಂದಾಯ ಮಾಡಲು ತುದಿಗಾಲಲ್ಲಿ ನಿಂತಿರುತ್ತಾರೆಂದೂ, ಬುದ್ಧಿಜೀವಿಗಳು ಧೀಮಂತರಾಗಲು ಬಯಸುತ್ತಿಲ್ಲವೆಂದೂ ಟೀಕೆಯ ಮಳೆಯನ್ನೇ ಸುರಿಸಿದ್ದಾರೆ. ಆದರೆ ಅವರ ಗ್ರಹಿಕೆಯೇ ಅಸಂಬದ್ಧವಾಗಿರುವುದು ಮೇಲ್ನೋಟಕ್ಕೇ ಗೋಚರಿಸುವಂತಿದೆ. ಅವರು ಹೇಳುವಂತೆ ಯಾವ ಬುದ್ಧಿಜೀವಿ, ಸಾಹಿತಿಯೂ ಸುಖಾಸುಮ್ಮನೆ ಯಾವುದೋ ರಾಜಕೀಯ ಪಕ್ಷದ ಬಾಂಗೋಚಿಯಂತೆ ವರ್ತಿಸುವುದು ಅಸಂಭವ. ಹಿಂದೆ ತುರ್ತು ಪರಿಸ್ಥಿತಿ ಕಾಲದಲ್ಲಿ ಪ್ರಭುತ್ವವನ್ನು ರಾಜಾರೋಷವಾಗಿ ವಿರೋಧಿಸಿ ಅನೇಕ ಕಷ್ಟಗಳಿಗೆ ಸಾಹಿತಿಗಳು ಒಳಗಾದ ದೃಷ್ಟಾಂತ ನಮ್ಮ ನೆನಪಿನಿಂದ ಇನ್ನೂ ಮಾಸಿ ಹೋಗಿಲ್ಲ. ಚಂಪಾ, ಲಂಕೇಶ್, ತೇಜಸ್ವಿ, ಅನಂತಮೂರ್ತಿ ಮುಂತಾದ ಧೀಮಂತರು ಆಗಿನ ‘ಜನತಾ ಪಕ್ಷ’ವನ್ನು ಬೆಂಬಲಿಸಿ ಕಾಂಗ್ರೆಸ್ ಪಕ್ಷ ಸೋಲುಣ್ಣುವಂತೆ ಮಾಡಿದ್ದೂ ನಮ್ಮ ಕಣ್ಣ ಮುಂದಿದೆ. ಹಾಗೆಯೇ ‘ಜನತಾ ಪಕ್ಷ’ ಅಡ್ಡ ಹಾದಿ ಹಿಡಿದಾಗ ಅದರ ಕಿವಿ ಹಿಂಡಿದ್ದೂ ಅಂತಹ ಬುದ್ಧಿಜೀವಿಗಳೇ ಅಲ್ಲವೆ?

ನವೋದಯ, ಪ್ರಗತಿಶೀಲ ಸಾಹಿತಿಗಳು ಯಾವುದೇ ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಳ್ಳಲಿಲ್ಲ ಎಂಬುದು ನಿಜವಾದರೂ ಅವರೆಲ್ಲರೂ ರಾಜಕೀಯ ಪ್ರಜ್ಞೆಯಿಂದ ದೂರವೇನೂ ಇರಲಿಲ್ಲ. ಮಹಾಕವಿ ಕುವೆಂಪು, ಕಾರಂತ, ಅನಕೃ ಮುಂತಾದವರು ಕ್ರಿಯಾಶೀಲರಾಗಿಯೇ ರಾಜಕಾರಣವನ್ನು ಮೆಚ್ಚುವ, ಟೀಕಿಸುವ ಪರಿಪಾಠ ಇಟ್ಟುಕೊಂಡಿದ್ದರಲ್ಲವೇ? ಸ್ವಯಂ ಅಡಿಗರು ಆಗಿನ ‘ಜನಸಂಘ’ದ ಜೊತೆ ಗುರುತಿಸಿಕೊಂಡಿದ್ದರಲ್ಲದೆ ಅದೇ ಪಕ್ಷದಿಂದ ಚುನಾವಣೆಗೂ ಸ್ಪರ್ಧಿಸಿದ್ದರಲ್ಲವೇ? ಹಾಗಾದರೆ ಅವರೇ ಹೇಳಿದರೆನ್ನಲಾದ ‘ಬುದ್ಧಿಜೀವಿ’ ಪದದ ಬದಲಿಗೆ ಧೀಮಂತ’ ಪದ ಬಳಕೆ ಮಾಡಬೇಕು ಎನ್ನುವುದಕ್ಕೆ ಅವರೇ ಹೊರತಾದರೇ?

ಬುದ್ಧಿಜೀವಿ, ಸಾಹಿತಿಗಳು ಯಾವುದೇ ಪಕ್ಷದ ಜೊತೆ ಗುರುತಿಸಿಕೊಳ್ಳಬಾರದೆನ್ನವುದು ಸಾಪೇಕ್ಷವೇ ವಿನಾ ನಿರ್ಣಾಯಕವಲ್ಲ. ಯಾವುದೇ ಪಕ್ಷದ ಸರ್ಕಾರ ಜನವಿರೋಧಿ, ಒಪ್ಪಿತ ಸಂವಿಧಾನದ ವಿರೋಧಿ ನೀತಿಗಳನ್ನು ಹೇರಲು ಹವಣಿಸಿದಾಗ ಯಾವ ಪ್ರಜ್ಞಾವಂತನೂ ಮೌನ ವಹಿಸಲಾರ. ಅದರಂತೆ ರಾಜಕೀಯ ಪರ್ಯಾಯ ಮಾರ್ಗಕ್ಕಾಗಿ, ಜನ ಹಿತಕ್ಕಾಗಿ, ಸರ್ವೋದಯಕ್ಕಾಗಿ ಬುದ್ಧಿ, ಹೃದಯ ಇರುವವರೆಲ್ಲರೂ ಕೊಂಚ ಅಳುಕಿನಿಂದಲೇ ಮತ್ತೊಂದು ಪಕ್ಷದ ರಾಜನೀತಿಯನ್ನು ಬೆಂಬಲಿಸುವುದು ಸುಮಾರ್ಗವಲ್ಲದೆ ಮತ್ತೇನೂ ಅಲ್ಲ. ಅಪ್ಪೀ ತಪ್ಪೀ ಆ ಪಕ್ಷವೂ ಎಡವುವಂತಾದರೆ ಅದರ ವಿರುದ್ಧವೂ ಬಂಡೇಳುವುದು ವಿವೇಕಿಗಳ ನಡೆ.

ಹಾಗೆ ನೋಡಿದರೆ ಈಗಿನ ಆಡಳಿತ ಪಕ್ಷದ ನೀತಿ ನಿರ್ಧಾರಗಳನ್ನು ಅನೇಕ ಸಾಹಿತಿಗಳು ಈಗಲೂ ಬೆಂಬಲಿಸುತ್ತಿರುವರಲ್ಲಾ? ಅವರೆಲ್ಲರೂ ಆ ಸರ್ಕಾರದ ಕೃಪಾಕಟಾಕ್ಷಕ್ಕಾಗಿ ಕಾದು ಕುಳಿತಿದ್ದಾರೆಯೇ? ಜನ ವಿರೋಧಿ, ಸಂವಿಧಾನ ವಿರೋಧಿ ನಡೆ ಕಂಡಾಗಲೂ ಇವರೆಲ್ಲಾ ಬಾಯಿಮುಚ್ಚಿ ಸಹಿಸುತ್ತಿರುವುದು ಯಾವ ಪುರುಷಾರ್ಥಕ್ಕಾಗಿ? ಸ್ವತಃ ಲಕ್ಷ್ಮೀನಾರಾಯಣ ಅವರ ಈ ವಕಾಲತ್ತಿನ ಹಿಂದಿರುವ ಧ್ವನಿಯಲ್ಲೂ ಇಂಥದೇ ಸಂಶಯದ ಎಳೆಗಳು ಇಣುಕುತ್ತಿವೆಯಲ್ಲಾ? ಇದಕ್ಕೇನೆನ್ನುವುದು?

ಇದೆಲ್ಲವ ಮೀರಿ ‘ಬಹುಸಂಖ್ಯಾತ ಸಮುದಾಯ ಸರಿಯಿದ್ದಾಗಲೂ’ ಎಂಬ ಪ್ರಮಾಣ ಪತ್ರವನ್ನು ಲಕ್ಷ್ಮೀನಾರಾಯಣ ಅವರು ಯಾವ ಮಾನದಂಡವನ್ನಿಟ್ಟುಕೊಂಡು ನೀಡಿದ್ದಾರೋ ಇದನ್ನು ನೆನೆದರೇ ದಿಗಿಲಾಗುತ್ತದೆ.

–ಚಂದ್ರಶೇಖರ ತಾಳ್ಯ, ಹೊಳಲ್ಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT