ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಪುರುಷನ ಬೆನ್ನ ಹಿಂದಿನ ಬೆಳಕು

Last Updated 6 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಅಂಬೇಡ್ಕರ್‌ ಅವರ ಪತ್ನಿ ರಮಾಬಾಯಿ ಸಾಮಾನ್ಯ ಹೆಣ್ಣು ಮಗಳಾಗಿರಲಿಲ್ಲ. ತನ್ನೆಲ್ಲ ಸುಖ, ನೆಮ್ಮದಿ ಬದಿಗೊತ್ತಿ ಗಂಡನ ಹೋರಾಟದ ದಾರಿಗೆ ಹೆಗಲಿಗೆ ಹೆಗಲು ನೀಡಿ ನಿಂತ ಮಹಾಸಾಧ್ವಿಮಣಿ. ಜೀವನದ ಕೊನೆಯುಸಿರಿನವರೆಗೂ ಬದುಕಿನಲ್ಲಿ ಎದುರಾದ ಕಷ್ಟಗಳನ್ನು ನುಂಗಿ ಪತಿಗೆ ಪ್ರೋತ್ಸಾಹ ನೀಡುತ್ತ, ಹೋರಾಟವೆಂಬ ಮಹಾಸಾಗರದಂತಿದ್ದ ಅವರ ಚಿಂತನೆಗೆ ಶಕ್ತಿಯಾಗಿ ನಿಂತ ಅಸಾಮಾನ್ಯ ಮಹಿಳೆ.

‘ಹೃದಯ ಸೌಜನ್ಯ, ಪರಿಶುದ್ಧ ಶೀಲ ಮತ್ತು ನಮಗೆ ಯಾವುದೇ ಹಿತಚಿಂತಕರು ಇಲ್ಲದಿದ್ದ ಆ ದಿನಗಳಲ್ಲಿ ನಮ್ಮ ಪಾಲಿಗೆ ಬಂದಿದ್ದ ಬಡತನ ಮತ್ತು ಸಂಕಷ್ಟಗಳಲ್ಲಿ ಶಾಂತಚಿತ್ತದಿಂದ ಮನಃಪೂರ್ವಕವಾಗಿ ನನ್ನನ್ನು ಸಂತೈಸುತ್ತ ಸಹಕರಿಸಿದ ರಮಾಗೆ ಈ ಕೃತಿ ಅರ್ಪಿತ’-

ಡಾ. ಬಿ.ಆರ್.ಅಂಬೇಡ್ಕರ್ ತಮ್ಮ ‘Thoughts on Pakistan’ ಪುಸ್ತಕವನ್ನು ಮಡದಿ ರಮಾಬಾಯಿ ಅವರಿಗೆ ಅರ್ಪಿಸಿ ಬರೆದ ಮಾತುಗಳಿವು. ನನಗೆ ತಿಳಿದಮಟ್ಟಿಗೆ, ಮಹಾನ್ ವ್ಯಕ್ತಿಯೊಬ್ಬ ಧರ್ಮಪತ್ನಿಗೆ ತನ್ನ ಕೃತಿಯನ್ನು ಅರ್ಪಿಸಿದ್ದು ಈ ದೇಶದ ಚರಿತ್ರೆಯಲ್ಲಿ ಅದೇ ಮೊದಲಿನದು. ಇದು ಅಂಬೇಡ್ಕರ್ ಬದುಕಿನಲ್ಲಿ ರಮಾಬಾಯಿಯವರ ಮಹತ್ವ ಮತ್ತು ಆ ಹೆಣ್ಣುಮಗಳು ಮಾಡಿದ ತ್ಯಾಗದ ಅನನ್ಯತೆ ಏನೆಂಬುದನ್ನು ಸ್ಪಷ್ಟಪಡಿಸುತ್ತದೆ.

ಜೀವನದ ಕೊನೆಯುಸಿರಿನವರೆಗೂ ಬದುಕಿನಲ್ಲಿ ಎದುರಾದ ಕಷ್ಟಗಳನ್ನು ನುಂಗಿ ಪತಿಗೆ ಪ್ರೋತ್ಸಾಹ ನೀಡಿದ ರಮಾಬಾಯಿ ಮಹಾನ್ ಮಾತೆ. ಬದುಕಿನಲ್ಲಿ ಕಷ್ಟವೆನ್ನುವುದು ಆಕೆಗೆ ಹೊಸತೇನಲ್ಲ. ಬಾಲ್ಯದಿಂದಲೇ ಕಷ್ಟಗಳು ಆಕೆಯ ಸುತ್ತಲೂ ಸುತ್ತಿಕೊಂಡಿದ್ದವು. ಅವುಗಳ ಮಧ್ಯದಲ್ಲಿದ್ದುಕೊಂಡೇ ಬದುಕು ಸವೆಸಿದ ರಮಾಬಾಯಿ, ಅಂಬೇಡ್ಕರ್‌ ಅವರಿಗೆ ಮಡದಿಯಷ್ಟೇ ಅಲ್ಲ ಮಾತೆಯೂ ಆಗಿದ್ದಳೆಂದರೆ ತಪ್ಪಾಗಲಾರದು. ಏಕೆಂದರೆ, ಪ್ರಪಂಚದಲ್ಲಿನ ಯಾವುದೇ ಮಹಾನ್ ನಾಯಕನನ್ನು ವರಿಸಿದ ಮಡದಿ ಅನುಭವಿಸದ ಯಾತನೆ
ಯನ್ನು ಆ ಹೆಣ್ಣು ಜೀವ ಅನುಭವಿಸಿತು. ಅದಕ್ಕಾಗಿಯೋ ಏನೋ ಅಂಬೇಡ್ಕರ್‌ ಅವರು ಒಂದೆಡೆ ‘ಹೆಂಡತಿ ಎಂದರೆ
ಬಾಳಸಂಗಾತಿಯಲ್ಲ, ಆಕೆ ತಾಯಿ ಕೂಡ. ಆಕೆ ಬದುಕಿನ ಬಹುದೊಡ್ಡ ಗೆಳತಿ’ ಎಂದು ಹೇಳಿದ್ದಾರೆ. ಪತಿಯ ಬೆನ್ನೆಲುಬಾಗಿ, ಸ್ವಂತ ಮಕ್ಕಳಿಗಷ್ಟೇ ಅಲ್ಲದೆ ಅದೆಷ್ಟೋ ಶೋಷಿತ, ಅನಾಥ ಮಕ್ಕಳಿಗೆ ಮಾತೆಯಾಗಿದ್ದವರು ಮಮಕಾರದ ಕರುಣಾಮಯಿ ರಮಾಬಾಯಿ. ಇಂತಹ ರಮಾಬಾಯಿ ಹುಟ್ಟಿದ್ದು 1898ರ ಫೆಬ್ರುವರಿ 7ರಂದು.

ಮಹಾರಾಷ್ಟ್ರದ ದಾಭೋಳ ಬಳಿಯ ಒಂದು ಸಣ್ಣ ಹಳ್ಳಿ ವಣಂದಗಾಂವ. ಊರಿನ ಬದಿಗೆ ಹರಿಯುವ ನದಿಯ ದಡದ ಆ ಕೇರಿಯಲ್ಲಿ ಸುಮಾರು ಐವತ್ತರಷ್ಟು ಕುಟುಂಬಗಳಿದ್ದವು. ಕಾಂಬಳೆ, ಜಾಧವ್, ವಾನಖಡೆ, ಸೋನುಲೆ, ಢಾಲೆ, ಕದಮ್‌, ಗವಳಿ, ನಿಕ್ಕಂ ಒವ್ಹಾಳ ಮೊದಲಾದ ಅಡ್ಡಹೆಸರಿನಿಂದ ಗುರುತಿಸುತ್ತಿದ್ದ ಕುಟುಂಬಗಳು ಅಲ್ಲಿದ್ದವು. ಆ ಕೇರಿಯವರು ಹೊಟ್ಟೆ ಹೊರೆದುಕೊಳ್ಳಲು ಇಂತಹುದೇ ಕೆಲಸ ಅಂತೇನಲ್ಲ. ದೊರೆತ ಯಾವುದೇ ಕೂಲಿ, ಚಾಕರಿ ಮಾಡುತ್ತಿದ್ದರು.

ಇಂಥ ಕೇರಿಯಲ್ಲಿ ಠಾಕು ಠೀಕಾದ ಮನೆಯೊಂದಿತ್ತು. ಆ ಮನೆಯ ಮಾಲೀಕ ಧುತ್ರೆ ಭೀಕೂ. ಭೀಕೂನ ಹೆಂಡತಿ ರುಕ್ಮಿಣಿ. ಈ ದಂಪತಿಗೆ ನಾಲ್ವರು ಮಕ್ಕಳಿದ್ದರು. ಮೂವರು ಹೆಣ್ಣು, ಒಂದು ಗಂಡು. ಹಿರಿಯ ಮಗಳು ಮದುವೆಯಾಗಿ ಗಂಡನ ಮನೆಯಲ್ಲಿದ್ದಳು. ಉಳಿದವರಲ್ಲಿ ರಮಾ ದೊಡ್ಡವಳು, ಗೌರಾ ಕಿರಿಯಾಕೆ, ಕೊನೆಯವನು ಶಂಕರ. ರಮಾ ತುಂಬ ಚುರುಕಾದ ಹುಡುಗಿ, ಕುಟುಂಬದ ಸಣ್ಣಪುಟ್ಟ ಕೆಲಸಗಳಿಗೆ ತಾಯಿಗೆ ನೆರವಾಗುತ್ತಿದ್ದಳು.

ರಮಾಳ ತಾಯಿ ರುಕ್ಮಿಣಿ ಏಕಾಏಕಿ ತೀರಿಕೊಂಡಳು. ಈ ಆಘಾತದಿಂದ ಭೀಕೂ ಸಹ ಬಹಳ ದಿನಗಳ ಕಾಲ ಬದುಕಿ ಉಳಿಯಲಿಲ್ಲ. ಬಳಿಕ ಕುಟುಂಬದ ಜವಾಬ್ದಾರಿ ರಮಾಳ ಮೇಲೆ ಬಿತ್ತು. ಅವ್ವ-ಅಪ್ಪನ ಸಾವು ಆಕೆಯ ಬಾಲ್ಯವನ್ನೇ ಕಿತ್ತುಕೊಂಡಿತು. ಆಕೆಯನ್ನು ಹೊಸದಾದ ದಿಕ್ಕಿನತ್ತ ಮುಖ ಮಾಡುವಂತೆ ಮಾಡಿತು. ತೀರ ಎಳೆತನದಲ್ಲೇ ಆಕೆ ಪ್ರೌಢ ಮನಸ್ಸಿನವಳಾಗಿ ಗಂಭೀರಳಾಗತೊಡಗಿದ್ದಳು.

ಭೀಕೂನ ಅಣ್ಣ ಧುತ್ರೆ ಕಾಕಾ ಮತ್ತು ರುಕ್ಮಿಣಿಯ ಅಣ್ಣ ಗೋವಿಂದಪುರಕರ ಇಬ್ಬರೂ ಆ ಕುಟುಂಬಕ್ಕೆ ಆಸರೆಯಾಗಿ ಬಂದರು. ಮೂವರು ಮಕ್ಕಳನ್ನೂ ಮುಂಬೈಗೆ ಕರೆದುಕೊಂಡು ಹೋದರು. ರಮಾಳಿಗೆ ಒಂಬತ್ತು ವರ್ಷ ತುಂಬಿತ್ತು. ಅಂದಿನ ಕಾಲದಲ್ಲಿ ಆಕೆಯದು ಮದುವೆಯ ವಯಸ್ಸು. ಧುತ್ರೆ ಕಾಕಾ, ಗೋವಿಂದಪುರಕರ್ ಇಬ್ಬರೂ ರಮಾಳ ಮದುವೆ ಮಾಡಲು ಮುಂದಾದರು.

ಇತ್ತ ಮುಂಬೈನಲ್ಲಿ ಸುಬೇದಾರ ರಾಮಜೀ ಸಕ್ಪಾಲ್‌ ಅವರ ಮಗ ಭೀಮರಾವ್ ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದ. ಬಡತನದಲ್ಲಿಯೂ ಭೀಮರಾವ್ ಚೆನ್ನಾಗಿ ಅಭ್ಯಾಸ ಮಾಡುತ್ತಿದ್ದ. ತಾಯಿ ಇಲ್ಲದ ಭೀಮರಾವ್, ತಂದೆ– ತಾಯಿಯನ್ನು ಕಳೆದುಕೊಂಡ ರಮಾ ಇಬ್ಬರ ಮದುವೆ ನೆರವೇರಿತು. ಭೀಮರಾವ್ ಮೆಟ್ರಿಕ್ ಪಾಸಾಗಿದ್ದರಿಂದ ರಮಾಳ ಹೃದಯ ಮೊರದಗಲವಾಯಿತು.

ರಮಾ ಒಬ್ಬ ಪರಾಕ್ರಮಿ ಗಂಡನ ಹೆಂಡತಿಯಾಗಿದ್ದಳು. ‘ಬರೆದ ಪತ್ರಗಳನ್ನಾದರೂ ಓದುವುದು ಕಲಿಯಲಿ’ ಎಂದು ಭೀಮರಾವ್ ಹೆಂಡತಿಗೆ ಅಕ್ಷರವನ್ನು ಹೇಳಿಕೊಟ್ಟಿದ್ದರು. ಕ್ರಾಂತಿಕಾರಿಗಳಾಗಿದ್ದ ಜ್ಯೋತಿಬಾ–ಸಾವಿತ್ರಿ ಫುಲೆ ದಂಪತಿಯ ಹೋರಾಟದ ಪರಿಚಯ ಮಾಡಿಕೊಡುತ್ತಲೇ ಅವರು ರಮಾಳಲ್ಲಿ ಅಕ್ಷರದ ಅರಿವನ್ನು ಬಿತ್ತಿದ್ದರು.

ದಿನಗಳು ಉರುಳಿದವು. ರಮಾ ತಾಯಿಯಾದಳು. 1913ರಲ್ಲಿ ಸುಬೇದಾರ ರಾಮಜೀ ತೀರಿಕೊಂಡರು. ರಮಾ ಯಾರನ್ನು ಬಾಯಿ ತುಂಬ ‘ಬಾಬಾ’ ಎಂದು ಕೂಗುತ್ತಿದ್ದಳೋ ಆ ವ್ಯಕ್ತಿ ಇನ್ನಿಲ್ಲವಾಗಿದ್ದರು. ಅಲ್ಲಿಂದ ಅವಳ ಬದುಕಿನಲ್ಲಿ ಆತ್ಮೀಯರಾದವರೆಲ್ಲ ಒಬ್ಬರಾದ ಮೇಲೊಬ್ಬರಂತೆ ಸಾವಿಗೆ ಶರಣಾದರು.

ಈ ನೋವು, ನರಳಾಟಗಳ ನಡುವೆಯೂ ಅಂಬೇಡ್ಕರ್ ಅವರಿಗೆ ಬೆನ್ನೆಲುಬಾಗಿ ನಿಂತವರು ರಮಾಬಾಯಿ. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಅಂಬೇಡ್ಕರ್‌ ಅವರಿಗೆ ಅಮೆರಿಕಕ್ಕೆ ಹೋಗುವ ಅವಕಾಶ ದೊರೆತಾಗ, ತುಂಬು ಗರ್ಭಿಣಿಯಾಗಿದ್ದ ರಮಾ ಅಳುತ್ತಲೇ ಬೀಳ್ಕೊಟ್ಟಳು. ಆದರೆ ಅತ್ತ ಪತಿ ತೆರಳಿದ ನಂತರ ಜನಿಸಿದ ಮಗು ಮರಣವನ್ನಪ್ಪಿತು. ಈ ಸುದ್ದಿ ತಿಳಿದು ಗಂಡ ಮರಳಿ ಬಂದರೆ, ಓದುವುದು ನಿಂತೀತು ಎಂದು ವಿಷಯವನ್ನೇ ಹೇಳದೆ ರಮಾ ಎಲ್ಲವನ್ನೂ ಸಹಿಸಿಕೊಂಡಳು. ಬಹಳ ದಿನಗಳಾದ ಮೇಲೆ ಗಂಡನಿಗೆ ವಿಷಯ ತಿಳಿಸಿದಳು. ಅಂಬೇಡ್ಕರ್ ಕಳವಳಗೊಂಡು ಹೆಂಡತಿಗೆ ಪತ್ರ ಬರೆದು ಧೈರ್ಯ ತುಂಬಿದರು. ರಮಾಬಾಯಿ ತನ್ನ ಐವರು ಮಕ್ಕಳಲ್ಲಿ ಅಪೌಷ್ಟಿಕತೆ ಕಾರಣದಿಂದ ನಾಲ್ವರು ಮಕ್ಕಳನ್ನು ಕಳೆದುಕೊಂಡಳು. ಮಗ ಯಶವಂತ ಮಾತ್ರ ಬದುಕಿ ಉಳಿದ.

ರಮಾಬಾಯಿ ಸಾಮಾನ್ಯ ಹೆಣ್ಣು ಮಗಳಾಗಿರಲಿಲ್ಲ. ತನ್ನೆಲ್ಲ ಸುಖ, ನೆಮ್ಮದಿ ಬದಿಗೊತ್ತಿ ಗಂಡನ ಹೋರಾಟದ ದಾರಿಗೆ ಹೆಗಲಿಗೆ ಹೆಗಲು ನೀಡಿ ನಿಂತ ಮಹಾಸಾಧ್ವಿಮಣಿ. ಆ ಕಾರಣಕ್ಕಾಗಿಯೇ ಬಾಬಾಸಾಹೇಬರು ವಿದೇಶದಲ್ಲಿ ಓದಲು ಸಾಧ್ಯವಾಯಿತು. ದೇಶದ ಶೋಷಿತರ, ಮಹಿಳೆಯರ ಆಶಾಕಿರಣವಾಗಿ ಮೂಡಿಬರಲೂ ಸಾಧ್ಯವಾಯಿತು. ಗಂಡನ ಅಗಾಧವಾದ ಜ್ಞಾನಪ್ರಾಪ್ತಿಗೆ, ಆ ಮೂಲಕ ಪಡೆದ ಪದವಿಗಳಿಗೆ, ಗಂಡನ ಗೈರುಹಾಜರಿಯಲ್ಲಿ ಕುಟುಂಬದ ಜವಾಬ್ದಾರಿಯನ್ನು ಹೊತ್ತು ನಿಭಾಯಿಸಿದ ರಮಾಬಾಯಿ ತ್ಯಾಗವೂ ಅವಿಸ್ಮರಣೀಯವಾದುದು.

ಜಗತ್ತನ್ನೇ ಸೆಳೆದ ಅಂಬೇಡ್ಕರ್ ಅವರ ಪತ್ನಿಯಾಗಿ ರಮಾಬಾಯಿ ಕೋಟ್ಯಂತರ ಜನರ ತಾಯಿಯಾದಳು. 1925ರ ಸುಮಾರಿನಲ್ಲಿ ರಮಾಬಾಯಿ ಆರೋಗ್ಯ ತೀರ ಹದಗೆಟ್ಟಿತ್ತು. ಬಾಬಾಸಾಹೇಬರು ಮಹಡ್ ಕೆರೆ ಪ್ರವೇಶದ ಹೋರಾಟದಲ್ಲಿ ನಿರತರಾದಾಗ ರಮಾಬಾಯಿ ತಾವೂ ಬರುವುದಾಗಿ ಕೇಳಿದರು. ಆರೋಗ್ಯ ಸರಿ ಇಲ್ಲದ ಕಾರಣ ಬೇಡವೆಂದು ಅಂಬೇಡ್ಕರ್‌ ನಿರಾಕರಿಸಿದ್ದರು. ಪೂನಾ ಒಪ್ಪಂದದ ಸಂದರ್ಭದಲ್ಲಿ ಬಾಬಾಸಾಹೇಬರಿಗೆ ಬೆದರಿಕೆಯ ಪತ್ರಗಳು ಬರುತ್ತಿದ್ದವು, ಅದರಿಂದ ರಮಾ ವಿಚಲಿತಳಾಗುತ್ತಿದ್ದಳು. ಬಾಬಾಸಾಹೇಬರು ದುಂಡು ಮೇಜಿನ ಸಭೆಗೆ ಇಂಗ್ಲೆಂಡಿಗೆ ಹೋದಾಗ ರಮಾಬಾಯಿ ವರಾಳೆಯವರೊಂದಿಗೆ ಧಾರವಾಡದಲ್ಲಿ ಸುಮಾರು ಎರಡು ತಿಂಗಳುಗಳ ಕಾಲ ಉಳಿದುಕೊಂಡಿದ್ದಳು. ಒಂದು ದಿನ ವಸತಿ ನಿಲಯದಲ್ಲಿದ್ದ ಮಕ್ಕಳಿಗೆ ಅಡುಗೆ ಮಾಡಿ ಹಾಕಲು ಆಹಾರ ಧಾನ್ಯ ಇರಲಿಲ್ಲವೆನ್ನುವುದನ್ನು ಅರಿತ ರಮಾಬಾಯಿ, ತನ್ನ ಕೈಯಲ್ಲಿದ್ದ ಬಂಗಾರದ ಬಳೆಗಳನ್ನು ಒತ್ತೆ ಇಡಲು ಹೇಳಿ, ಅದರಿಂದ ಬಂದ ಹಣದಿಂದ ಆಹಾರ ಧಾನ್ಯವನ್ನು ತರಿಸಿ ಸ್ವತಃ ಅಡುಗೆ ಮಾಡಿ ಬಡಿಸಿ ಮಕ್ಕಳ ಹಸಿವನ್ನು ನೀಗಿಸಿದ ಮಹಾತಾಯಿ.

ರಮಾಬಾಯಿ ಒಂದು ಸಾರಿ ಪಂಢರಪುರಕ್ಕೆ ಹೋಗಿ ವಿಠಲನ ದರ್ಶನ ಮಾಡಿ ಬರಬೇಕೆಂದು ಹಟ ಹಿಡಿದಾಗ, ಬಾಬಾಸಾಹೇಬರು ಅದನ್ನು ವಿರೋಧಿಸಿದ್ದರು. ಆಗ ‘ನೀವು ದೇವರಿಲ್ಲ ಅಂತ ಹೇಳುತ್ತೀರಲ್ಲ, ಕಾಳಾರಾಮ ಗುಡಿ ಪ್ರವೇಶ ಹೋರಾಟ ಯಾಕೆ ಮಾಡಿದ್ರಿ’ ಎಂದು ರಮಾಬಾಯಿ ಪ್ರಶ್ನೆ ಮಾಡಿದ್ದರು. ಆಗ ಸಾಹೇಬರು ‘ರಮಾ, ಪಂಢರಪುರದಲ್ಲಿ ನಿಮ್ನ ವರ್ಗದವರಿಗೆ ಪಾಂಡುರಂಗ ದರ್ಶನ ನೀಡುವುದಿಲ್ಲ. ನಾನು ಕಾಳಾರಾಮ ಗುಡಿ ಪ್ರವೇಶ ಮಾಡುವ ಹೋರಾಟ ಮಾಡಿದ್ದು ದೇವರಿದ್ದಾನೆಂದು ಅಲ್ಲ, ದೇವರ ದರ್ಶನಕ್ಕಾಗಿಯೂ ಅಲ್ಲ. ಅದು ಸಮಾನತೆಯ ಹಕ್ಕನ್ನು ಪಡೆಯಲು ಮಾಡಿದ ಹೋರಾಟ’ ಎಂದು ತಿಳಿ ಹೇಳಿದರು.

‘ರಮಾ! ಅಜ್ಞಾನವೆಂಬ ಕತ್ತಲೆಯನ್ನೋಡಿಸುವ, ತಳಸಮುದಾಯದಲ್ಲಿ ಬೇರೂರಿರುವ ಕಂದಾಚಾರ, ಅಂಧಶ್ರದ್ಧೆಗಳನ್ನು ದೂರ ತಳ್ಳುವಂತಹ ವೈಚಾರಿಕ ಪಂಢರಪುರವನ್ನು ನಾವು ನಿರ್ಮಾಣ ಮಾಡಬೇಕು. ಅದು ವಿವೇಕದ ಮಾರ್ಗ’ ಎಂದು ಹೇಳಿ ರಮಾಬಾಯಿಯನ್ನು ಸಮಾಧಾನಪಡಿಸಿದ್ದರು. ಆಗ ರಮಾಬಾಯಿ ಪಂಢರಪುರಕ್ಕೆ ಹೋಗಬೇಕೆನ್ನುವ ವಿಚಾರ ಕೈಬಿಟ್ಟು ಸಾಹೇಬರ ಹೋರಾಟಕ್ಕೆ ಹೆಗಲು ಕೊಟ್ಟರು.

ರಮಾಬಾಯಿ ಆರೋಗ್ಯದಲ್ಲಿ ಸುಧಾರಣೆ ಕಾಣಲಿಲ್ಲ. 1935ರ ಮೇ 27ರಂದು ಕರುಣಾಮಯಿ ರಮಾತಾಯಿ ಇನ್ನಿಲ್ಲವಾದರು. ಸಾಮಾನ್ಯ ಕುಟುಂಬದಿಂದ ಬಂದ ರಮಾಬಾಯಿ ಅಸಾಮಾನ್ಯ ಪುರುಷನೊಬ್ಬನ ಬೆನ್ನಹಿಂದಿನ ಬೆಳಕಾಗಿ ಶ್ರಮಿಸಿದ ರೀತಿ ಅನನ್ಯವಾದುದು. ರಮಾಬಾಯಿ ನೇರವಾಗಿ ಸಾಮಾಜಿಕ ಸೇವೆಗೆ ಧುಮುಕಲಿಲ್ಲ. ಆದರೆ ಹೋರಾಟವೆಂಬ ಮಹಾಸಾಗರದಂತಿದ್ದ ಅಂಬೇಡ್ಕರ್ ಅವರ ಚಿಂತನೆಗೆ ಶಕ್ತಿಯಾಗಿ ನಿಂತ ಅಸಾಮಾನ್ಯ ಮಹಿಳೆ.

ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಇದು ಅಂಬೇಡ್ಕರ್ ಯುಗದ ಸ್ಥಿತಿ. ಆದರೂ ಅನಾದಿಕಾಲದಿಂದ ಅನೂಚಾನವಾಗಿ ಉಳಿದುಕೊಂಡು ಬಂದ ಜಾತಿಪದ್ಧತಿ, ಅಸ್ಪೃಶ್ಯತೆ ಭಾರತದ ಬಹುದೊಡ್ಡ ಮಿತಿಗಳು. ಜಾತಿಪದ್ಧತಿ ಹಿಡಿತದಿಂದ ಪಾರಾದವರು ಯಾರಿದ್ದಾರೆ ಎಂದು ಅಂದುಕೊಳ್ಳುವಾಗಲೇ ಇದನ್ನು ಹೋಗಲಾಡಿಸಲು ಶ್ರಮಿಸಿದವರು ಅನೇಕರಿದ್ದಾರೆ ಎನ್ನುವುದು ಅಷ್ಟೇ ಸತ್ಯ.

ಜಗತ್ತಿನಾದ್ಯಂತ ಬಿಳಿಯರಿಂದ ಕರಿಯರಿಗೆ, ಸ್ಪೃಶ್ಯರು ಎಂದುಕೊಳ್ಳುವವರಿಂದ ಅಸ್ಪೃಶ್ಯರು ಎನ್ನಿಸಿಕೊಳ್ಳುವವರಿಗೆ ಆದ ಅಪಮಾನ, ಯಾತನೆ ವರ್ಣಿಸಲು ಸಾಧ್ಯವಿಲ್ಲ. ಅದು ಮರಣಸಂಕಟವನ್ನು ಮೀರಿದ್ದು. ಆ ನೆಲೆಯಿಂದ ಬಂದ ಅಂಬೇಡ್ಕರ್ ಅಪಮಾನಿತ ವರ್ಗದ ಬಿಡುಗಡೆಗೆ ಕಾರಣರಾಗಿದ್ದಾರೆ. ಅಂತಹ ಶ್ರೇಷ್ಠ ಸಾಧಕ ಅಂಬೇಡ್ಕರ್ ಎಂಬ ಮಹಾ ಸಲಗದ ಬೆನ್ನಹಿಂದಿನ ಬೆಳಕಾಗಿದ್ದವರು ರಮಾಯಿ ಉರ್ಫ್‌ ರಮಾಬಾಯಿ ಅಂಬೇಡ್ಕರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT