ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಚಿತ್ರ ಒಂಟಿ ಪ್ರತಿಭೆ ‘ಕೃಷ್ಣ ಮೆನನ್’

Last Updated 17 ಅಕ್ಟೋಬರ್ 2020, 19:31 IST
ಅಕ್ಷರ ಗಾತ್ರ

ಈ ತನಕ ಬಂದ ಲೇಖನ, ಪುಸ್ತಕಗಳಲ್ಲಿ ಚಿತ್ರಿತವಾದ ಕೃಷ್ಣ ಮೆನನ್‍ ಅವರ ವಾಸ್ತವಿಕ ಚಹರೆ ಭಿನ್ನ ಮತ್ತು ಸಂಕೀರ್ಣ. ‘ಕೃಷ್ಣ ಮೆನನ್ ಯಾರು? ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವರು ನಿರ್ವಹಿಸಿದ ಪಾತ್ರ ಏನು? ಅವರಿಗೂ ಪಂಡಿತ್ ನೆಹರೂ ಅವರಿಗೂ ಇದ್ದ ವಿಶಿಷ್ಟ ಸಂಬಂಧ ಏನು ಎಂಬುದನ್ನು ಅರಿಯುವುದೇ ಒಂದು ರೋಚಕ ಸಂಗತಿ. ಆಗಿನ ಸಂಘರ್ಷಮಯ ದಶಕಗಳಲ್ಲಿ ಮೆನನ್, ಬರೇ ಭಾರತದಲ್ಲಿ ಅಲ್ಲ, ಜಾಗತಿಕವಾಗಿಯೂ ಪ್ರಮುಖರಾಗಿ ಕಾಣುತ್ತಾರೆ’ ಎನ್ನುತ್ತಾರೆ ‘A Chequered Brilliance: The Many Lives of V.K. Krishna Menon’ ಎನ್ನುವ ಬೃಹತ್ ಕಥಾನಕವನ್ನು ಬರೆದ ಜೈರಾಮ್ ರಮೇಶ್.

ವೆಂಗಪಲ್ಲಿ ಕೃಷ್ಣನ್ ಕೃಷ್ಣ ಮೆನನ್ 1896ರ ಮೇ 3ರಂದು ಶ್ರೀಮಂತ ನಾಯರ್ ಜಮೀನ್ದಾರಿ ಕುಟುಂಬದಲ್ಲಿ ಹುಟ್ಟಿದವರು. 1974ನೇ ಅಕ್ಟೋಬರ್ 6ರಂದು ಹೃದಯಾಘಾತದಿಂದ ಅಸುನೀಗಿದರು. ಅವರ ಜೀವನದಲ್ಲಿ ಚಹಾವೇ ಮುಖ್ಯ ಆಹಾರ ಆಗಿತ್ತು.

ಬದುಕಿದ್ದಾಗಲೂ ಆ ಬಳಿಕವೂ ಅನೇಕರ ತೀವ್ರ ಟೀಕೆಗಳಿಗೆ ಒಳಗಾದ ಮೆನನ್ ಅಪ್ಪಟ ದೇಶಭಕ್ತ. ಬಹುಶಃ ನೆಹರೂ ಅವರ ಜತೆಗೆ ಅವರಿಗೆ ಇದ್ದ ನಿಕಟ ಸಂಬಂಧದಿಂದಾಗಿ ಅನೇಕರು, ಅದರಲ್ಲೂ ಕಾಂಗ್ರೆಸ್ಸಿಗರು, ಅವರನ್ನು ಟೀಕಿಸುವುದರಲ್ಲಿ ಮುಂದಿದ್ದವರೇ. ‘ಕಮ್ಯುನಿಸ್ಟ್, ರ‍್ಯಾಡಿಕಲ್’ ಅನ್ನಿಸಿಕೊಳ್ಳುತ್ತಿದ್ದ, ನೆಹರೂ ಅವರನ್ನು ದಾರಿ ತಪ್ಪಿಸಿದವರು ಎನಿಸಿಕೊಂಡ ಮೆನನ್, ಇ.ಎಂ.ಎಸ್. ನಂಬೂದರೀಪಾಡರ ಕಮ್ಯುನಿಸ್ಟ್‌ ನೇತೃತ್ವದ ಸರ್ಕಾರ ಪತನಗೊಳ್ಳುವುದರಲ್ಲಿ ನೆಹರೂ ವಿರೋಧದ ಹೊರತಾಗಿಯೂ ಇಂದಿರಾ ಗಾಂಧಿಯವರ ಜತೆ ಕೈಗೂಡಿಸಿದ್ದಕ್ಕೆ, ನಂಬೂದರೀಪಾಡ್ ತಂದ ಭೂಸುಧಾರಣೆಯೂ ಕಾರಣ. ಯಾಕೆಂದರೆ ಸ್ವತಃ ಮೆನನ್‍ರ ಕುಟುಂಬದ ಆಸ್ತಿ ಬಹಳ ದೊಡ್ಡದಿತ್ತು.

ಜನಸಂಘೀಯರಾದ ಡಾ.ಘಟಾಟೆ, ಮೆನನ್‍ರ ಜೂನಿಯರ್‌ ಆಗಿ ವಕಾಲತ್ತು ಆರಂಭಿಸಿದ್ದರು. ಅವರ ಮೂಲಕ ಅಟಲ್ ಬಿಹಾರಿ ವಾಜಪೇಯಿಯವರಿಗೂ ಮೆನನ್ನರಿಗೂ ಗೆಳೆತನ ಬೆಳೆದಿತ್ತು. ಆದರೆ ಪಾರ್ಲಿಮೆಂಟಿನಲ್ಲಿ ಅಟಲ್‍ಜೀ, ಮೆನನ್ನರ ತೀವ್ರ ಟೀಕಾಕಾರರಲ್ಲಿ ಒಬ್ಬರಾಗಿದ್ದರು. ಮೆನನ್ ತೀರಿಕೊಂಡ ಬಳಿಕ ಇಂಗ್ಲೆಂಡಿನಲ್ಲಿ ಅವರ ಇಂಗ್ಲಿಷ್ ಸ್ನೇಹಿತರು 1977ನೇ ಜೂನ್ 17ರಂದು ಲಂಡನ್ನಿನ ಫಿಟ್ಸ್‌ರಾಯ್‌ ವೃತ್ತದಲ್ಲಿ ಅವರ ಪ್ರತಿಮೆ ಸ್ಥಾಪಿಸಿ, ಅದರಲ್ಲಿ ‘V.K.Krishna Menon – 1896-1974, Campaigner for Indian Independence’ ಎಂದು ಕೆತ್ತಿಸಿದಾಗ ವಿದೇಶಮಂತ್ರಿಗಳಾಗಿದ್ದ ವಾಜಪೇಯಿಯವರು, 1957 ಮತ್ತು 1962ರ ಮಧ್ಯೆ ಅವರನ್ನು ತೀವ್ರವಾಗಿ ಟೀಕಿಸಿದವರೇ ಹೀಗಂದರು;

‘ಕೊನೆಯವರೆಗೆ ಮೆನನ್ ವಿವಾದಾತ್ಮಕ ವ್ಯಕ್ತಿಯೇ ಆಗಿ ಉಳಿದವರು. ಯಾಕೆಂದರೆ ಅವರ ಚಿಂತನೆಗಳು ಸ್ಥಿತ ವ್ಯವಸ್ಥೆಯನ್ನು ಒಪ್ಪದೆ, ಸಾಧಿಸಲು ಅಸಾಧ್ಯವಾದ ಸಾಮಾಜಿಕ ವ್ಯವಸ್ಥೆಯ ದಿಗಂತವನ್ನು ಮುಟ್ಟಲು ಪ್ರಯತ್ನಿಸುತ್ತಿದ್ದವು. ಅಂತರರಾಷ್ಟ್ರೀಯ ನೀತಿಯನ್ನು ಅವರಷ್ಟು ಅರ್ಥ ಮಾಡಿಕೊಂಡವರು ವಿರಳ. ತಮ್ಮ ಬದುಕಿನ ಬಹುಪಾಲು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ಅವರು. ಲಂಡನ್ನಿನ ಬಡಾವಣೆಯಲ್ಲಿ, ಅವರ ಪ್ರತಿಮೆಯನ್ನು ಸ್ಥಾಪಿಸುವುದು ಅವರನ್ನು ಟೀಕಿಸಿಯೂ ಇಷ್ಟಪಡುತ್ತಿದ್ದ ಅವರ ಸ್ನೇಹಿತರ ಹಿರಿಮೆಯನ್ನು ತೋರಿಸುತ್ತದೆ’. ಬಹುಶಃ ವಾಜಪೇಯಿ ಅವರಂತಹ ಗುಣಗ್ರಾಹಿ ಮಾತ್ರ ಹೀಗೆ ಹೇಳಬಲ್ಲರು – ಚರಿತ್ರೆಯ ಅರಿವಿಲ್ಲದ ಈಗಿನ ಚರಿತ್ರಾ ಪುನರ್ವಿಮರ್ಶಕರಿಗೆ ಇದು ಒಗ್ಗದು. ಮೆನನ್‍ರವರು ತೀರಿಕೊಂಡ ಬಳಿಕ, ಘಟಾಟೆಯವರು ಜನಸಂಘದ ಮುಖಪತ್ರಿಕೆ ಆರ್ಗನೈಸರ್‌ನಲ್ಲೇ, ಭಾರತೀಯ ನೆಲೆಯಲ್ಲೇ ರಕ್ಷಣಾ ಉದ್ಯಮ ಬೆಳೆಯಲು ಮೆನನ್ ಮಾಡಿದ ಪ್ರಯತ್ನದ ಬಗ್ಗೆ ಎರಡು ದೀರ್ಘ ಲೇಖನಗಳನ್ನು ಬರೆದರು; ಘಟಾಟೆಯವರ ಪಿಎಚ್.ಡಿ ಪ್ರಬಂಧದ ಮೂಲವೇ ಮೆನನ್ನರ ಭಾಷಣಗಳಿಂದ ಪ್ರೇರಿತವಾಗಿತ್ತು.

ಏಳು ಜನ ಮಕ್ಕಳಲ್ಲಿ ಮೆನನ್‍ರ ಮೇಲೆ ಅಗಾಧ ಪ್ರಭಾವ ಬೀರಿದವರು ಇಬ್ಬರು ಅಕ್ಕಂದಿರು. ವಿ.ಕೆ. ಚಿನ್ನಮಾಳು ಅಮ್ಮ, ಬಹುಭಾಷಾ ಪಂಡಿತರು - ಸ್ತ್ರೀವಾದಿ. ಮನೆ, ಮಠ, ಆಸ್ತಿ ಎಲ್ಲವನ್ನೂ ತೊರೆದು ಅಧ್ಯಾಪಕಿಯಾಗಿ ಬದುಕಿದವರು. ಮೆನನ್‍ಗಿಂತ ಒಂದು ವರ್ಷ ಹಿರಿಯರಾದ ವಿ.ಕೆ.ಜಾನಕಿ ಅಮ್ಮನಿಗೆ ಮಾತ್ರ ಮೆನನ್‍ರ ಜತೆ ನಿಕಟ ಮಾನಸಿಕ ಸಂಬಂಧವಿದ್ದದ್ದು. ಅನ್ನಿ ಬೆಸೆಂಟ್‌ ಹಾಗೂ ಜಿಡ್ಡು ಕೃಷ್ಣಮೂರ್ತಿಯವರು ಮೆನನ್‍ರನ್ನು ಬಹುವಾಗಿ ಪ್ರಭಾವಿಸಿದ್ದರು.

1928ನೇ ಜೂನ್ 19ರಂದು ಬ್ರಿಸ್ಟಲ್‍ನಲ್ಲಿ ಮೆನನ್ ಮಾಡಿದ್ದು ಮೊದಲ ಭಾಷಣ. ‘ಹಿಂದೂ ಧರ್ಮ ಜಗತ್ತಿನಲ್ಲೇ ಹಳೆಯದಾದ ಧರ್ಮ. ಕಾರ್ಯಕಾರಣ ಸಿದ್ಧಾಂತಗಳ ಮೇಲೆ, ಕರ್ಮ ಸಿದ್ಧಾಂತದ ಮೇಲೆ ನಿಂತಿರುವ ಹಿಂದೂ ಧರ್ಮ, ಓರ್ವ ವ್ಯಕ್ತಿಯ ವಿಧಿಗೆ ಅವನೇ ಕಾರಣ ಎಂದು ಸಾರುತ್ತದೆ’ ಎಂದು ಹೇಳಿದ್ದರು. ಆದರೆ 1929ರ ಬಳಿಕ ಅವರ ಗಮನವೆಲ್ಲಾ ‘ಧರ್ಮ’ದಿಂದ ಭಾರತೀಯ ಸ್ವಾತಂತ್ರ್ಯದ ಕಡೆಗೆ ತಿರುಗಿತು. ಆತನಕ ಬರೇ ಚರ್ಚಾಕೂಟವಾಗಿದ್ದ ಇಂಡಿಯಾ ಕ್ಲಬ್ಬನ್ನು ಸಕ್ರಿಯಗೊಳಿಸಿದವರು ಮೆನನ್. ಕೊನೆಗೆ ಅದೇ ಅವರ ಮನೆಯಾಯಿತು. 1935ರಲ್ಲಿ ನೆಹರೂ–ಮೆನನ್‌ ಅವರ ಸ್ನೇಹ ಆರಂಭವಾದ ಕಾಲಘಟ್ಟ. ಕಮ್ಯುನಿಸ್ಟರಲ್ಲದಿದ್ದರೂ, ಅನೇಕ ಕಮ್ಯುನಿಸ್ಟ್ ಅನುಷ್ಠಾನ ಕ್ರಮಗಳನ್ನು ವಿರೋಧಿಸುತ್ತಿದ್ದರೂ ಇಬ್ಬರೂ ಎಡಪಂಥೀಯ ಅರ್ಥವ್ಯವಸ್ಥೆಯತ್ತ ಆಕರ್ಷಿತರಾಗಿದ್ದರು. ಮೆನನ್ನರನ್ನೂ ನೆಹರೂ ಅವರನ್ನೂ ಬೆಸೆದದ್ದು ಅವರಿಬ್ಬರಿಗೂ ಇದ್ದ ಓದಿನ ಹಸಿವು. ಆ ಕಾಲದ ಮಹಾನ್ ಚಿಂತಕರುಗಳಾದ ಬರ್ಟ್ರಂಡ್‌ ರಸೆಲ್‌, ಎಲೆನ್ ವಿಸ್ಕಿನ್ಸನ್ ಅವರು ಮೆನನ್ನರ ಜತೆ ಬಹುಕಾಲ ಭಾವನಾತ್ಮಕ ಸಂಬಂಧ ಬೆಳೆಸಿಕೊಂಡಿದ್ದರು. ಸ್ಟಾಫರ್ಡ್ ಕ್ರಿಪ್ಸ್, ಹೆರಾಲ್ಡ್‌ ಲಾಸ್ಕಿ, ಕ್ಲೆಮೆಂಟ್ ಅಟ್ಲಿ, ನೇ ಬೀವನ್, ರಿಚರ್ಡ್ ಕ್ರಿಸ್‍ಮಸ್, ಮೌಂಟ್ ಬೇಟನ್ ಅವರಂತಹ ಘಟಾನುಘಟಿಗಳನ್ನು ಇಂಡಿಯಾ ಕ್ಲಬ್‍ಗೆ ಆಮಂತ್ರಿಸಿ, ಭಾರತೀಯ ಸ್ವಾತಂತ್ರ್ಯದ ಬಗ್ಗೆ ಭಾಷಣಗಳನ್ನು ಏರ್ಪಡಿಸುತ್ತಿದ್ದರು. ಲಂಡನ್ನಿನಲ್ಲಿ ‘ನೆಹರೂ ಅವರ ಮನುಷ್ಯ’ ಎಂದೇ ಗುರುತಿಸಿಕೊಂಡ ಮೆನನ್‍ಗೆ ಬ್ರಿಟನ್ನಿನ ಲೇಬರ್ ಪಕ್ಷದ ಅನೇಕ ಸಂಸದರ ಸ್ನೇಹವಿತ್ತು. ಅವರ ಮೂಲಕ ಬ್ರಿಟಿಷ್ ಪಾರ್ಲಿಮೆಂಟಿನಲ್ಲಿ ಭಾರತದ ಬಗ್ಗೆ ಆಗಾಗ ಪ್ರಶ್ನೆಗಳನ್ನು ಎತ್ತಿಸುತ್ತಿದ್ದರು. ಬ್ರಿಟನ್ ಸರ್ಕಾರ ಅವರ ಮೇಲೆ ಗೂಢಚರ್ಯೆಯ ನಿಗಾವಹಿಸಿ, ಬಹುಶಃ ಬಂಧಿಸಲೂ ಸಿದ್ಧವಾಗಿತ್ತು. ಬರ್ಟ್ರಂಡ್‌ ಸೆಲ್ಲರ್‌ ಮಧ್ಯಸ್ಥಿಕೆಯಿಂದ ಅದು ತಪ್ಪಿಹೋಗಿತ್ತು.

ಮೆನನ್‍ಗೆ ಇಂಗ್ಲೆಂಡಿನ ಮಾತ್ರವಲ್ಲ ಜಗತ್ತಿನ ಅನೇಕ ಎಡಪಂಥೀಯ ನಾಯಕರು ಮತ್ತು ಲೇಖಕರ ಜತೆ ಸಂಪರ್ಕವಿತ್ತಾದರೂ ಅವರು ಕಮ್ಯುನಿಸ್ಟ್ ಪಕ್ಷದ ಸದಸ್ಯರಾಗಿರಲಿಲ್ಲ. ಅವರು ಒಂದು ರೀತಿಯಲ್ಲಿ ನಿರಂಕುಶ ವಿಚಾರವಾದಿ ಎಡಪಂಥೀಯ. ‘ಪಂಥಬದ್ಧ’ರಾಗಿ ನಾಲಗೆಯನ್ನು ಮಾರಿಕೊಂಡವರಲ್ಲ.

ಅನೇಕ ಬಾರಿ ಬದುಕಲು ಕಷ್ಟವಾದಾಗ ಅವರಿಗೆ ನೆಹರೂ ಆರ್ಥಿಕ ಸಹಾಯ ನೀಡುತ್ತಿದ್ದರು. ಯಾವುದೇ ಐಷಾರಾಮದ ಜೀವನವನ್ನು ಮಾಡದ, ಇಂಡಿಯಾ ಕ್ಲಬ್‍ನಲ್ಲೇ ಬದುಕಿದ ಮೆನನ್ನರಿಗೆ ಒಂದು ಸಲ ಹೆರಾಲ್ಡ್ ಲಾಸ್ಕಿ ತಮ್ಮ ಓವರ್ ಕೋಟನ್ನು ಕೊಟ್ಟಿದ್ದರಂತೆ! ಆದರೆ, ಜಗತ್ತಿನ ಗಣ್ಯಾತಿಗಣ್ಯರ ಜತೆ ಅವರ ಸಂಪರ್ಕ ಇತ್ತು. ಈಜಿಪ್ಟಿನ ನಾಸೇರ್, ಹೋ ಚಿ ಮಿನ್, ಡಾಗ್ ಹ್ಯಾಮರ್‍ಶೀಲ್ಡ್, ಫಿಡೆಲ್ ಕಾಸ್ಟ್ರೋ, ಕೆನಡಿ ಅವರ ಜತೆ ಒಟನಾಟವಿತ್ತು. ಭಾರತಕ್ಕೆ ಆಹಾರದ ಅಭಾವ ಉಂಟಾದಾಗ ರಷ್ಯಾದ ನಾಯಕರ ಜತೆ ಇದ್ದ ತಮ್ಮ ಸಂಬಂಧ ಉಪಯೋಗಿಸಿ, ಸಮಸ್ಯೆ ಪರಿಹರಿಸಿದವರೂ ಮೆನನ್ನರೇ. ಇಂಡಿಯಾ ಕ್ಲಬ್‍ನಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಕಮಲಾ ಜಸ್ವಾಲರ ಜತೆ ಅವರ ಸಂಬಂಧ ‘ಅತಿನಿಕಟ’ವಾದ ಕಾರಣ ಇಂಡಿಯಾ ಕ್ಲಬ್‍ನಲ್ಲಿ ಒಡಕು ಉಂಟಾದದ್ದೂ ನಿಜ.

ಮೆನನ್ ಬದುಕಿದ್ದಾಗ ಬಹುಶಃ ಅವರನ್ನು ಪ್ರೀತಿಸಿದವರು ಕಡಿಮೆ. ಬದುಕಿನಲ್ಲೇ ಅವರು ಪ್ರೀತಿ ವಂಚಿತರು. ಅವರ ವ್ಯತಿರಿಕ್ತ ಸಂಕೀರ್ಣ ವ್ಯಕ್ತಿತ್ವಕ್ಕೆ ಅದೂ ಒಂದು ಕಾರಣವೇ ಆಗಿರಬಹುದು. ನೆಹರೂ ಅವರ ಜತೆ ಅವರದ್ದು ಆತ್ಮ ಸಾಂಗತ್ಯ. ವಿಶೇಷ ಸಂಬಂಧ. ಮೆನನ್‍ರಂತಹ ಹಟವಾದಿ ವಿಚಿತ್ರ ಮನುಷ್ಯನನ್ನು ನಿಭಾಯಿಸಲು ನೆಹರೂ ಆಗಾಗ ಪ್ರಯತ್ನಿಸಿದ್ದುಂಟು. ಬರೇ ಚಹಾ, ಸಿಗರೇಟುಗಳಲ್ಲೇ ಬದುಕಿದ್ದ ಅವರ ಆರೋಗ್ಯವೂ ಸ್ಥಿರವಾಗಿರಲಿಲ್ಲ. ‘ತಾನೇ ಸರಿ’ ಎನ್ನುವ ಅವರ ಹಟಮಾರಿತನದಿಂದಾಗಿ, ಅವರನ್ನು ಹೊಗಳುವವರಿದ್ದರೂ ಅವರಿಗೆ ಮಿತ್ರರಿರಲಿಲ್ಲ.

ಚೀನಾ ಯುದ್ಧದಲ್ಲಿ ಭಾರತದ ಸೋಲಿಗೆ ಇವರೇ ಕಾರಣ ಎನ್ನುವ ನಂಬಿಕೆ ಸಕಾರಣವೂ ಇರಬಹುದು. ಸತತ 24 ಗಂಟೆಗಳ ಕಾಲ ವಿಶ್ವಸಂಸ್ಥೆಯಲ್ಲಿ ಕಾಶ್ಮೀರದ ಪರ ಭಾಷಣ ಮಾಡಿದ ದಾಖಲೆ ಅವರದು. ‘ಜನಾಭಿಪ್ರಾಯ, ಜನಾಭಿಪ್ರಾಯ, ಜನಾಭಿಪ್ರಾಯ’ ಎಂದು ಪಾಕಿಸ್ತಾನಿ ಪ್ರತಿನಿಧಿ ಹೇಳುತ್ತಿದ್ದಾಗ, ‘ನಿಮ್ಮ ದೇಶದಲ್ಲಿ ಜನರೂ ಇಲ್ಲ – ಅಭಿಪ್ರಾಯವೂ ಇಲ್ಲ’ ಎಂದು ತರಾಟೆಗೆ ತೆಗೆದುಕೊಂಡ ಈ ‘ಕಾಶ್ಮೀರಿ ಹೀರೊ’ ಚೀನಾ ಯುದ್ಧದಲ್ಲಿ ‘ಸೋಲಿಗೆ ಕಾರಣರು’ ಎಂದು ಅವಮಾನ, ತೆಗಳಿಕೆಗೆ ಒಳಗಾದರು.

ಚೀನಾದ ಚೌ-ಎನ್-ಲಾಯ್ ಮತ್ತು ಮೆನನ್ ಸ್ನೇಹಿತರು. ಚೌ-ಎನ್-ಲಾಯ್‍ ಅವರನ್ನು ಮೆನನ್ ಮತ್ತು ನೆಹರೂ ಕೂಡಾ ನಂಬಿ ಭಾಯಿ-ಭಾಯಿ ಎಂದಿದ್ದರು. ಭಾರತ-ಚೀನಾ ಸಂಬಂಧ ಇಂದಿಗೂ ಹಾಗೇ ತಾನೇ? ಚೀನಾ ವಿಶ್ವಾಸದ್ರೋಹಿ ರಾಷ್ಟ್ರ ಎನ್ನುವುದು ಅಂದೂ ಬಹುಶಃ ಇಂದೂ ನಮಗೆ ಗೊತ್ತಿಲ್ಲ. ಆದರೆ, 1962ರ ಹಿಮಾಲಯನ್ ಬ್ಲಂಡರ್‌ಗೆ ಎರಡು ಕಾರಣಗಳಿವೆ. ಒಂದು: ಚೀನಾದಲ್ಲಿ ಮಾವೊ ತ್ಸೆ ತುಂಗರ ಹೆಂಡತಿಯ ಪ್ರಭಾವ ಜಾಸ್ತಿಯಾಗಿ ಅಲ್ಲಿ ಒಳಗಿಂದೊಳಗೆ ಬೇಗುದಿ ಇತ್ತು. ಚೌ-ಎನ್-ಲಾಯ್ ಜನಪ್ರಿಯರಾಗಿದ್ದರು. ಆದಕಾರಣವೇ ಮಾವೊ ಭಾರತದ ಮೇಲೆ ಯುದ್ಧ ಸಾರಿದರು ಎಂದು ಒಂದು ಬಲವಾದ ನಂಬಿಕೆ. ಇನ್ನೊಂದು: ಗಾಂಧೀಜಿಯವರ ಅಹಿಂಸಾ ತತ್ವನಿಷ್ಠರಾದ ಮೊರಾರ್ಜಿ ದೇಸಾಯಿಯವರು ಅರ್ಥಮಂತ್ರಿಯಾಗಿದ್ದರು. ರಕ್ಷಣಾ ಇಲಾಖೆ ಮುಂದಿಟ್ಟ ಅನೇಕ ಬೇಡಿಕೆಗಳನ್ನು ಅವರು ತಿರಸ್ಕರಿಸುತ್ತಿದ್ದರು. ಆಗಿನ ಮಂತ್ರಿಮಂಡಲ ವ್ಯವಸ್ಥೆಯಲ್ಲಿ ನೆಹರೂ ಪ್ರಧಾನಿಯಾಗಿದ್ದರೂ ಸಚಿವಾಲಯಗಳನ್ನು ಅಧೀನ ಇಲಾಖೆಗಳಾಗಿ ಕುಬ್ಜಗೊಳಿಸುವ ಕ್ರಮ ಇರುತ್ತಿರಲಿಲ್ಲ! ಆದಕಾರಣ 1962ರ ಚೀನಾ ಯುದ್ಧ ಒಂದು ರೀತಿಯಲ್ಲಿ ಮಾವೋ ಯುದ್ಧ. ಅದಾದ ಬಳಿಕ ಅಲ್ಲಿ ನಡೆದ ಸಾಂಸ್ಕೃತಿಕ ಕ್ರಾಂತಿಯ ಹೆಸರಿನಲ್ಲಿ ನಡೆದ ದಮನ ಇದನ್ನು ಸಾಬೀತು ಮಾಡುತ್ತದೆ.

ನೆಹರೂ ತೀರಿಹೋದಾಗ ಮೆನನ್ ಮೂರ್ಛೆ ಹೋಗಿದ್ದರಂತೆ! ಆದರೆ ನಂತರ ಎಲ್ಲವೂ ಬದಲಾಯಿತು. ಫಿರೋಜ್ ಗಾಂಧಿ ಮತ್ತು ಇಂದಿರಾ ವಿವಾಹಕ್ಕೆ ಸ್ಫೂರ್ತಿ ಇತ್ತವರೂ ಮೆನನ್. ‘ಇಂದು’ ಎಂದೇ ಇಂದಿರಾ ಅವರನ್ನು ಕರೆಯುತ್ತಿದ್ದವರು ಮೆನನ್. ಮೆನನ್ ವಿಚಿತ್ರ ಹಟವಾದಿ. ಇಂದಿರಾ ಬಲಿಷ್ಠರು. ಮೆನನ್‍ಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗಲಿಲ್ಲ. ಮುಂಬೈನಲ್ಲಿ ಕಮ್ಯುನಿಸ್ಟ್ ಪಕ್ಷದ ಬೆಂಬಲದಿಂದ ಚುನಾವಣೆಗೆ ನಿಂತರು. ಸೋತರು. ಬಳಿಕ ಮದ್ರಾಸಿನಿಂದ ಡಿಎಂಕೆಯ ಬೆಂಬಲದಿಂದ ನಿಂತು ಗೆದ್ದರು. ಅನೇಕ ಏಳು, ಬೀಳುಗಳಲ್ಲಿ ಸಿಕ್ಕಿದ, ಪ್ರೀತಿ ವಂಚಿತ ಬದುಕು ಮೆನನ್ ಅವರದ್ದು.

ಭಾರತ ರಕ್ಷಣಾ ಕ್ಷೇತ್ರದಲ್ಲಿ ಸಶಕ್ತವಾಗಬೇಕು ಎಂದು ಶ್ರಮಿಸಿದವರಲ್ಲಿ ಅವರು ಮುಖ್ಯರು. ಡಿಆರ್‌ಡಿಒ ಸಂಸ್ಥೆಯ ಸೃಷ್ಟಿಗೆ ಅವರೇ ಕಾರಣರು ಎಂದು ಅಬ್ದುಲ್ ಕಲಾಂ ಅವರು ದಾಖಲಿಸಿದ್ದಿದೆ. ‘ವರ್ಣರಂಜಿತವಾದ, ಜಗಳಗಂಟ, ಮೆನನ್ ಒಂಟಿ ಹೋರಾಟಗಾರ. ಸಮುದಾಯ ಜೀವಿಯಲ್ಲ. ಬಹುಶಃ ‘ಸ್ವನಾಶ’ ಹೇಗೆ ಮಾಡಿಕೊಳ್ಳಬೇಕು ಎನ್ನುವ ಅಧ್ಯಯನ ವಿಷಯವಿದ್ದರೆ ಅದರಲ್ಲಿ ಅವರು ಬಹಳ ಒಳ್ಳೆಯ ಪ್ರೊಫೆಸರ್ ಆಗುತ್ತಿದ್ದರು. ಮೆನನ್, ವಿಸ್ಮಯ, ಹತಾಶೆ, ಪ್ರೇರಣೆ, ಆಕ್ರೋಶ, ಒತ್ತಡ, ವಿರೋಧಾಭಾಸ, ಮೆಚ್ಚುಗೆ, ಗೊಂದಲ, ಹೊಗಳಿಕೆ ಮತ್ತು ತೆಗಳಿಕೆ ಎಲ್ಲವೂಗಳನ್ನು ಒಟ್ಟಿಗೆ ಮೈಗೂಡಿಸಿಕೊಂಡವರು. ಅವರಿದ್ದದ್ದೂ ಹಾಗೆ - ಬದುಕಿದ್ದೂ ಹಾಗೆ - ಸತ್ತದ್ದೂ ಹಾಗೆ. ಅವರ ಬದುಕಿನ ಕಥಾನಕ ಸರಳ ಅಲ್ಲ. ಆದರೆ ಆಸಕ್ತಿದಾಯಕ’ ಎನ್ನುತ್ತಾರೆ ಜೈರಾಮ್ ರಮೇಶ್.

ಉದ್ದ ಮೂಗಿನ, ಗುಂಗುರು ಕೂದಲಿನ, ಎಲ್ಲದರಲ್ಲೂ ಮೂಗು ತೂರಿಸುತ್ತಿದ್ದ, ಅನೇಕ ಕಾಂಗ್ರೆಸ್ಸಿಗರ ಜತೆ ಒಗ್ಗಿಕೊಳ್ಳದ, ಈ ವಿಚಿತ್ರ ಒಂಟಿ ಪ್ರತಿಭೆ ಮೆನನ್ ಅವರ ಪ್ರತಿಭೆಯನ್ನು ಯಾರೂ ನಿರಾಕರಿಸುತ್ತಿರಲಿಲ್ಲ. ತಾನು ಮಗಳೆಂದು ಪ್ರೀತಿಸಿದ ‘ಇಂದು’ ಅವರಿಂದಲೂ ಅವರನ್ನು ಅವರ ನಾಲಗೆ ದೂರ ಮಾಡಿತು. ಆದರೆ ಅವರು ಸತ್ತಾಗ ಎಲ್ಲರೂ ಅವರ ವಿರೋಧಿಗಳೂ ಕಣ್ಣೀರು ಮಿಡಿದವರೇ. ಲಂಡನ್ನಿನಲ್ಲೇ ತನ್ನ ಜೀವನದ ಬಹುಭಾಗ ಕಳೆದ ಕಾರಣ ಈ ಮಲೆಯಾಳಿ, ಸಂಸ್ಕೃತ, ಇಂಗ್ಲಿಷ್ ಭಾಷೆಗಳನ್ನು ಬಲ್ಲ ವಿಚಾರವಾದಿ ವಿದ್ವಾಂಸ ನಮ್ಮ ದೇಶದಲ್ಲಿ ಅನೇಕರಿಗೆ ನೆಹರೂ ಕೃಪಾಪೋಷಿತ ಅಪರಿಚಿತರಾಗಿಯೇ ಉಳಿದುಬಿಟ್ಟರು.

ಭಾರತಕ್ಕಾಗಿ ತಮ್ಮ ಬಹುಪಾಲು ಹೋರಾಟವನ್ನು ಲಂಡನ್ನಿನಲ್ಲೇ ಮಾಡಿದ್ದರಿಂದ, ಇತರ ಸ್ವಾತಂತ್ರ್ಯ ಹೋರಾಟಗಾರರಂತೆ ಅವರ ಗಾಥೆ ದಾಖಲಾಗದೇ ಇರುವುದು ಒಂದು ದುರಂತ. ಅವರನ್ನು ಚರಿತ್ರೆ ಮರೆತರೆ, ಅದು ಚರಿತ್ರೆಗಾಗುವ ನಷ್ಟ ಅಲ್ಲ. ಭಾರತೀಯತೆಗೆ ಆಗುವ ಒಂದು ನ್ಯೂನತೆ.

ಲೇಖನಾಧಾರ: ಜೈರಾಮ್ ರಮೇಶ್‍ರ ಗ್ರಂಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT