ಬುಧವಾರ, ಜನವರಿ 29, 2020
30 °C

ಆತ್ಮರಕ್ಷಣೆಗೆ ನೂರೆಂಟು ದಾರಿ..

ಎಸ್ಸೆಚ್‌ Updated:

ಅಕ್ಷರ ಗಾತ್ರ : | |

ಆ ಭೀಕರ ಘಟನೆ ನಡೆದು ಏಳು ವರ್ಷಗಳೇ ಕಳೆದಿವೆ. ಆದರೆ ಆ ಭಯದ ನೆರಳು ಮತ್ತೆ ಮತ್ತೆ ಚಿತ್ತವನ್ನು ಕಾಡುವಂತೆ ಅದೇ ತರಹದ ಘಟನೆಗಳು ಭಾರತದ ವಿವಿಧ ಕಡೆ ಮರುಕಳಿಸುತ್ತಲೇ ಇವೆ. ಹೌದು, ದೆಹಲಿಯಲ್ಲಿ 2012ರ ಡಿಸೆಂಬರ್‌ನಲ್ಲಿ ನಡೆದ ವಿದ್ಯಾರ್ಥಿನಿ ‘ನಿರ್ಭಯ’ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಮಹಿಳೆಯರಲ್ಲಿ ಮಾತ್ರವಲ್ಲ, ಪ್ರತಿಯೊಬ್ಬರಲ್ಲೂ ಭೀತಿಯ ಅಲೆಗಳನ್ನು ಸೃಷ್ಟಿಸಿತ್ತು. ಮಾನವ ದಾನವನಾಗಿ ಬದಲಾಗಿ ಎಸಗುವ ದುಷ್ಕೃತ್ಯ ತಲ್ಲಣದ ಜೊತೆಗೆ ಸಾರ್ವಜನಿಕರಲ್ಲಿ ಆಕ್ರೋಶವನ್ನು, ಸಂಘಟಿತರಾಗಿ ಪ್ರತಿಭಟಿಸುವ ಗುಣವನ್ನು ಹುಟ್ಟುಹಾಕಿತ್ತು.

ಸಾರ್ವಜನಿಕರ ಒತ್ತಡ ಹೆಚ್ಚಾದ ಕಾರಣ ಭಾರತದಲ್ಲಿ ಮಹಿಳೆಯರ ಸುರಕ್ಷತೆ ಹಾಗೂ ಭದ್ರತೆ ಕುರಿತಂತೆ ಸಾಕಷ್ಟು ಕ್ರಮಗಳನ್ನೇನೋ ಕೈಗೊಳ್ಳಲಾಯಿತು, ನಿಜ. ಆದರೆ ಅಂತಹ ಕಾನೂನು ನಮ್ಮ ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಕಡಿಮೆ ಮಾಡುವಲ್ಲಿ ಎಷ್ಟರ ಮಟ್ಟಿಗೆ ಸಫಲವಾದವು ಎಂದು ಪಕ್ಷಿನೋಟ ಬೀರಿದರೆ ಸಿಗುವುದು ಎದೆ ನಡುಗಿಸುವಂತಹ ದೃಶ್ಯವೇ. ದೆಹಲಿಯ ದುರ್ಘಟನೆಯಿಂದ ಇತ್ತೀಚೆಗೆ ತೆಲಂಗಾಣದಲ್ಲಿ ನಡೆದ ಅತ್ಯಾಚಾರ ಪ್ರಕರಣದ ನಡುವೆ (ಉನ್ನಾವ್‌ ಅತ್ಯಾಚಾರ ಸಂತ್ರಸ್ತೆಗೆ ಬೆಂಕಿ ಹಚ್ಚಲಾಗಿದೆ) ಅದೆಷ್ಟೋ ಮುಗ್ಧ ಹೆಣ್ಣುಮಕ್ಕಳ ಮೇಲೆ ನಡೆದ ಲೈಂಗಿಕ ದೌರ್ಜನ್ಯಗಳು ಕಾನೂನು ಹೆಣ್ಣಿನ ಮೇಲಿನ ದೌರ್ಜನ್ಯ ತಡೆಯಲು ಎಡವಿದೆಯೇ ಅಥವಾ ಸಾಮಾಜಿಕ ಬದಲಾವಣೆ, ಪುರುಷರ ನಡವಳಿಕೆಯಲ್ಲಿನ ಬದಲಾವಣೆ ಹೆಣ್ಣಿನ ಬದುಕನ್ನು ಇನ್ನಷ್ಟು ಬರ್ಬರಗೊಳಿಸಿದೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿವೆ.

ಮುನ್ನೆಚ್ಚರಿಕೆ

ಕಾನೂನು ರಕ್ಷಣೆ ಒಂದು ಕಡೆಯಾದರೆ, ನಮಗೆ ನಾವೇ ಕೆಲವು ಮುನ್ನೆಚ್ಚರಿಕೆ ತೆಗೆದುಕೊಂಡರೆ ಇಂತಹ ದೌರ್ಜನ್ಯದಿಂದ ಕೆಲವು ಮಟ್ಟಿಗೆ ರಕ್ಷಣೆ ಪಡೆಯಬಹುದು ಎಂಬುದು ತಜ್ಞರ ಅಭಿಪ್ರಾಯ.

ಮಹಿಳೆಯಾಗಿ ಕೆಲವು ಹಕ್ಕುಗಳನ್ನು ತಿಳಿದುಕೊಂಡರೆ ಉದ್ಯೋಗದ ಸ್ಥಳದಲ್ಲಾಗಲಿ, ಮನೆಯಲ್ಲಾಗಲಿ ಅಥವಾ ಶಾಲಾ– ಕಾಲೇಜು, ಸಾರ್ವಜನಿಕ ಸ್ಥಳದಲ್ಲಾಗಲಿ ಪುರುಷರ ಮಾನಸಿಕ ಹಾಗೂ ದೈಹಿಕ ದೌರ್ಜನ್ಯದಿಂದ ಕೆಲವು ಮಟ್ಟಿಗೆ ಪಾರಾಗಬಹುದು; ದೂರು ನೀಡಬಹುದು; ಕಾನೂನಿನ ಮೊರೆ ಹೋಗಬಹುದು. ದೈಹಿಕ ಅಥವಾ ಮಾನಸಿಕ ಹಿಂಸೆ ಹಣೆಬರಹ ಎಂದು ತಿಳಿದುಕೊಂಡು ಒಳಗೊಳಗೇ ಸಹಿಸುವ ಕಾಲ ಇದಲ್ಲ.

ಆದರೆ ಕೆಲವು ಸಂದರ್ಭಗಳಲ್ಲಿ, ರಾತ್ರಿ ವೇಳೆ, ನಿರ್ಜನ ಪ್ರದೇಶಗಳಲ್ಲಿ ಓಡಾಟ ಮಾಡುವ ಸಂದರ್ಭ ಬಂದಾಗ ನಮಗೆ ನಾವೇ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಅಪಾಯದ ಸಂದರ್ಭ ಊಹಿಸುವ ಮಾನಸಿಕ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದು ಅಗತ್ಯ. ರಾತ್ರಿ ವಿದ್ಯುತ್ ದೀಪವಿಲ್ಲದ ಪ್ರದೇಶದಲ್ಲಿ, ಹವಾಮಾನ ವೈಪರೀತ್ಯವಿದ್ದಾಗ, ಒಂಟಿಯಾಗಿ ಓಡಾಟದ ಸಂದರ್ಭವಿದ್ದಾಗ, ಪಾರ್ಕಿಂಗ್‌ ಪ್ರದೇಶ, ಹೆಚ್ಚು ಜನರ ಓಡಾಟವಿಲ್ಲದ ಕಟ್ಟಡಗಳು, ಮೆಟ್ಟಿಲುಗಳು ಅಥವಾ ಲಿಫ್ಟ್‌ನಲ್ಲಿ ಒಂಟಿಯಾಗಿ ಹೋಗುವ ಸಂದರ್ಭ ಬಂದರೆ ಕೆಲವು ಎಚ್ಚರಿಕೆ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಭಾರತದಲ್ಲಿ ಮಾತ್ರವಲ್ಲ, ಬೇರೆ ಕೆಲವು ದೇಶಗಳಲ್ಲೂ ಇದೆ.

ಸಾಧ್ಯವಾದರೆ ಆತ್ಮರಕ್ಷಣೆ ಮಾಡಿಕೊಳ್ಳಲು ಲಭ್ಯವಿರುವ ಕೋರ್ಸ್‌ ಮಾಡಿಕೊಳ್ಳಬಹುದು. ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಿಲ್ಲದಿದ್ದರೆ ಅದರಿಂದ ಪಾರಾಗುವಂತಹ ಉಪಾಯಗಳನ್ನು ತಿಳಿದುಕೊಳ್ಳಿ ಎನ್ನುತ್ತಾರೆ ತಜ್ಞರು.

ಹೌದು, ಅಪರಾಧ ಎಸಗುವವರನ್ನು ಶಿಕ್ಷಿಸಲು ಕಾನೂನು ಕಠಿಣವಾಗಿರಬೇಕು; ಅಪರಾಧ ತಡೆಯಲು ಭದ್ರತಾ ವ್ಯವಸ್ಥೆ ಸರಿಯಾಗಿರಬೇಕು. ಆದರೆ ಎಲ್ಲೋ ಒಂದು ಕಡೆ ಎಲ್ಲವೂ ಲೋಪವಾಗಿ ಅಪಾಯದ ಪರಿಸ್ಥಿತಿ ಎದುರಾದರೆ, ಅಂತಹ ಸನ್ನಿವೇಶವನ್ನು ಎದುರಿಸಲು ನಾವೇ ಸನ್ನದ್ಧರಾಗಿರಬೇಕಾಗುತ್ತದೆ.

ಹೀಗೆ ಮಾಡಿ..

ನಗರ ಅಥವಾ ಪಟ್ಟಣದಲ್ಲಿ ವಾಸಿಸುವ, ಓಡಾಡುವ ಸ್ಥಳಗಳಲ್ಲಿ ಎಷ್ಟು ಕಡೆ ಭದ್ರತಾ ವ್ಯವಸ್ಥೆಯಿದೆ ಎಂಬುದನ್ನು ಅರಿತುಕೊಳ್ಳಿ. ಅನುಮಾನಾಸ್ಪದ ವ್ಯಕ್ತಿಗಳ ಮೇಲೊಂದು ಕಣ್ಣಿಡಿ, ಅವರು ಪುರುಷರಿರಲಿ ಅಥವಾ ಮಹಿಳೆಯರಿರಲಿ. ಅಪರಿಚಿತರು ಲಿಫ್ಟ್‌ ಕೊಟ್ಟರೆ ನಿರಾಕರಿಸಿ. ತೀರಾ ಅಪಾಯಕಾರಿ ವ್ಯಕ್ತಿ ಅಥವಾ ಸನ್ನಿವೇಶ ಎದುರಾದರೆ ಭದ್ರತಾ ಸಿಬ್ಬಂದಿ, ಪೊಲೀಸ್‌ಗೆ ಕರೆ ಮಾಡಿ.

ನಿಮ್ಮ ಫೋನ್‌ನಲ್ಲಿ ತುರ್ತು ಸಹಾಯದ ನಂಬರ್‌ ಇಟ್ಟುಕೊಂಡು ಇವು ಕಾರ್ಯನಿರ್ವಹಿಸುತ್ತವೆಯೇ ಎಂದು ಆಗಾಗ ಪರೀಕ್ಷಿಸಿ. ರಾತ್ರಿ ಓಡಾಟವಿದ್ದರೆ ಆ ಜಾಗದ ಬಗ್ಗೆ ನಿಮ್ಮ ಕುಟುಂಬದವರಿಗೆ, ಸ್ನೇಹಿತರಿಗೆ ಮಾಹಿತಿ ತಿಳಿಸಿ. ನಿಗದಿತ ಸಮಯದೊಳಗೆ ನಿಮ್ಮ ಕರೆ ಅವರಿಗೆ ಹೋಗದಿದ್ದರೆ, ವಾಪಸ್‌ ಕರೆ ಮಾಡುವಂತೆ ಹೇಳಿ.

ನೀವು ಬಳಸುವಂತಹ ಸ್ಕೂಟರ್‌ ಅಥವಾ ಕಾರ್‌ ಅನ್ನು ಆಗಾಗ ಸರ್ವೀಸ್‌ ಮಾಡಿಸಿ. ತೊಂದರೆಯಾಗುವ ಅನುಮಾನ ಬಂದರೆ ಬೇರೆ ಸಾರಿಗೆ ವ್ಯವಸ್ಥೆ ಬಳಸಿ.

ದೂರದ ಪ್ರಯಾಣ ಮಾಡುವಾಗ ರೈಲ್ವೆಯಲ್ಲಿ ಆದಷ್ಟು ಮಹಿಳೆಯರಿಗೆ ಮೀಸಲಿಡುವ ಬೋಗಿ ಬಳಸಿ.

ಪೆಪ್ಪರ್‌ ಸ್ಪ್ರೇ, ಫ್ಲಾಷ್‌ ಲೈಟ್‌ ಇಟ್ಟುಕೊಳ್ಳಿ.

ರಾತ್ರಿ ಒಂಟಿಯಾಗಿ ಅಪರಿಚಿತ ಜಾಗಕ್ಕೆ, ನಿರ್ಜನ ಪ್ರದೇಶಕ್ಕೆ ಹೋಗುವುದನ್ನು ಆದಷ್ಟು ಕಡಿಮೆ ಮಾಡಿ.

ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ತೆರಳುವಾಗ ಒಂಟಿ ಎಂದು ಗೊತ್ತಾದ ತಕ್ಷಣ ಸುರಕ್ಷಿತ ಜಾಗದಲ್ಲಿ ಇಳಿಯುವುದು ಒಳಿತು.

ಜನಜಂಗುಳಿಯಿದ್ದಾಗ, ಭದ್ರತಾ ಸಿಬ್ಬಂದಿ ಕಡಿಮೆ ಸಂಖ್ಯೆಯಲ್ಲಿದ್ದಾಗ ಆದಷ್ಟು ದೂರ ಇರಿ. ಇಂತಹ ಜಾಗದಲ್ಲಿ ಲೈಂಗಿಕ ದೌರ್ಜನ್ಯ ನಡೆಯುವುದು ಜಾಸ್ತಿ.

ಇವಿಷ್ಟೇ ಅಲ್ಲ, ಆತ್ಮವಿಶ್ವಾಸ ಹೆಚ್ಚು ಮುಖ್ಯ. ಭಯಪಟ್ಟರೆ ಹೆದರಿಸುವವರು ಜಾಸ್ತಿ. ಅನುಮಾನವಿದ್ದರೆ ಪೊಲೀಸ್‌ಗೆ ದೂರು ನೀಡಲು ಮರೆಯಬೇಡಿ.

(ಪೂರಕ ಮಾಹಿತಿ: ಪ್ರೊ.ಸುನೀಲ್‌ಕುಮಾರ್‌ ಜಾರ್ಜ್‌, ಸಾಮಾಜಿಕ– ರಾಜಕೀಯ ವಿಶ್ಲೇಷಕ)

ಪ್ರತಿಕ್ರಿಯಿಸಿ (+)