ಸೋಮವಾರ, ಜೂನ್ 21, 2021
27 °C
ಲಾಕ್‌ಡೌನ್‌ ಅವಧಿಯಲ್ಲಿ ಮರ್ಸಿ ಮಿಷನ್‌ ಸೇವೆ

‘ಕರುಣೆ’ ಕೈ ಹಿಡಿದಿದೆ...

ಎಂ.ಎ. ಸಿರಾಜ್ Updated:

ಅಕ್ಷರ ಗಾತ್ರ : | |

Prajavani

ಲಾಕ್‌ಡೌನ್‌ ಸಂಕಟದ ಸಮಯ ಮಾನವೀಯ ಹಸ್ತಗಳನ್ನು ಒಂದುಗೂಡಿಸಿದ ನೂರಾರು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಇಲ್ಲೂ ಒಂದು ತಂಡ ಒಂದು ಹೆಜ್ಜೆ ಮುಂದೆ ಹೋಗಿದೆ. ಸಂಕಟದ ಸ್ವರೂಪ ಯಾವುದೇ ಇರಲಿ. ತನ್ನದೇ ಆದ ಕಾರ್ಯಜಾಲದ ಮೂಲಕ ಸ್ಪಂದಿಸಿ ನೆರವಾಗಿದೆ. ಈ ಅಭಿಯಾನದ ಹೆಸರು ‘ಕರುಣೆಯ ಅಭಿಯಾನ’ (ಮರ್ಸಿ ಮಿಷನ್‌– mercy mission)

ಲಾಕ್‌ಡೌನ್‌ ಸಂಕಟದಲ್ಲಿ ಹಸಿದ ಜೀವಗಳು, ನೋವು ಅನುಭವಿಸುತ್ತಿರುವ ರೋಗಿಗಳು, ಅಶಕ್ತ ಜನರು ಅಲ್ಲಲ್ಲಿ ಒದ್ದಾಡುತ್ತಿರುವುದನ್ನು ಗಮನಿಸಿದ ಈ ತಂಡ ಇಂಥವರ ಸೇವೆಗೆ ದೊಡ್ಡದಾದ ಪಡೆ ರಚಿಸಿತು. ಇಂಥವರ ಸೇವೆಗೆ ನಿಂತಿರುವ ಹಲವು ಸ್ವಯಂ ಸೇವಾ ಸಂಘಟನೆಗಳನ್ನು ಒಂದೇ ಸೂರಿನಡಿ ತರುವ ಪ್ರಯತ್ನವಾಯಿತು. ಇದೇ ‘ಮರ್ಸಿ ಮಿಷನ್’. ಈ ತಂಡ ಮಾಹಿತಿಯ ‌ಬೃಹತ್‌ ಭಂಡಾರವನ್ನೇ ಹೊಂದಿತ್ತು. ಮಾರ್ಚ್‌ 25ರಿಂದ ಈ ಅಭಿಯಾನ ಆರಂಭವಾಯಿತು.

ಅಭಿಯಾನದ ಅಂಗವಾಗಿ ಸಹಾಯವಾಣಿ ಆರಂಭಿಸಲಾಯಿತು. ಈ ದೂರವಾಣಿಗೆ ಬಿಡುವ ನೀಡದಷ್ಟು ಕರೆಗಳು ಬಂದವು. ಅಭಿಯಾನಕ್ಕೆ ಪ್ರಮುಖವಾಗಿ ವಲಸೆ ಕಾರ್ಮಿಕರ ಹಸಿವು ತಣಿಸುವ ಉದ್ದೇಶವಿತ್ತು. ಆದರೆ, ಹೆಚ್ಚು ಕರೆಗಳು ಬಂದದ್ದು ಹಿರಿಯ ನಾಗರಿಕರಿಂದ ಹಾಗೂ ರೋಗಿಗಳಿಂದ. ಹೀಗಾಗಿ ವೈದ್ಯಕೀಯ ನೆರವಿನ ಸೇವೆಯನ್ನೂ ತನ್ನ ಕಾರ್ಯದಲ್ಲಿ ಸೇರಿಸಿತು ಈ ಅಭಿಯಾನ. 

ತಲುಪಿದ್ದು ಹೀಗೆ... 

ಈ ಅಭಿಯಾನದಲ್ಲಿ ಸ್ಕೂಟರ್‌ ಹೊಂದಿರುವ 20 ಜನರ ತಂಡವಿತ್ತು. ಕರೆ ಬಂದಾಗ ಯಾವ ರೀತಿಯ ನೆರವು ನೀಡಬೇಕು ಎಂಬ ಆಧಾರದಲ್ಲಿ ಈ ತಂಡದ ಸದಸ್ಯರು ಸ್ಥಳಕ್ಕೆ ಧಾವಿಸುತ್ತಿದ್ದರು ಅಥವಾ ಸಂಬಂಧಿಸಿದ ವ್ಯವಸ್ಥೆಗೆ ಸಂಪರ್ಕ ಕಲ್ಪಿಸುತ್ತಿದ್ದರು. ಅಭಿಯಾನದಲ್ಲಿ ಜನರಿಗೆ ಪಡಿತರ ಕಿಟ್ ಒದಗಿಸುತ್ತಿದ್ದ ಅಮೀನ್‌ ಮುದಾರ್ಸಿ ಪ್ರಕಾರ, ‘65 ದಿನಗಳ ಲಾಕ್‌ಡೌನ್‌ ಅವಧಿಯಲ್ಲಿ ಸಹಾಯವಾಣಿಗೆ 15,666 ಕರೆಗಳು ಬಂದಿವೆ. ಶೇ 79ಕ್ಕೂ ಹೆಚ್ಚು ಕರೆಗಳಿಗೆ ನಮ್ಮ ಅಭಿಯಾನ ಸ್ಪಂದಿಸಿದೆ. ಹೀಗೆ ‘ಮರ್ಸಿ ಮಿಷನ್’ ಸಂಕಷ್ಟದಲ್ಲಿರುವ ಒಂದು ಲಕ್ಷಕ್ಕೂ ಅಧಿಕ ಜನರನ್ನು ತಲುಪಿದೆ. ನಗರದ 300 ಪ್ರದೇಶಗಳಲ್ಲಿ ಸುಮಾರು ₹ 7.5 ಕೋಟಿ ಮೌಲ್ಯದ ಆಹಾರ ಪರಿಕರಗಳು, ಅಗತ್ಯ ವಸ್ತುಗಳನ್ನು ಒದಗಿಸಲಾಗಿದೆ. ಮಾತ್ರವಲ್ಲ 250 ಸಣ್ಣ ಪಟ್ಟಣ ಪ್ರದೇಶಗಳಿಗೂ ನೆರವಿನ ಹಸ್ತ ಚಾಚಿದ್ದೇವೆ‘ ಎಂದು ಅವರು ಮಾಹಿತಿ ಹಂಚಿಕೊಂಡರು. 

ಸಿದ್ಧವಾಯಿತು ಅಡುಗೆಮನೆ

‘ಹಸಿದ ಹೊಟ್ಟೆ’ ತಣಿಸಲು ನಗರದ ವಿವಿಧ ಭಾಗಗಳಲ್ಲಿ 13 ಅಡುಗೆ ಮನೆಗಳನ್ನು ಸ್ಥಾಪಿಸಲಾಯಿತು. ಸ್ಥಾಪಿಸಿದ್ದು ಎನ್ನುವುದಕ್ಕಿಂತಲೂ ಏಟ್ರಿಯಾ ಹೋಟೆಲ್‌, ನಂದನ ಸಮೂಹಗಳು, ಐಪ್ಯಾಕ್‌, ಐಆರ್‌ಎಸ್‌ ಅಧಿಕಾರಿಗಳ ಸಂಘ, ಪ್ರೆಸ್ಟೀಜ್‌ ಸಮೂಹ, ಡಿಐಪಿಆರ್‌ ನೆಟ್‌ವರ್ಕ್‌ ಸಂಸ್ಥೆಗಳು ತಮ್ಮ ಅಡುಗೆ ಮನೆಗಳಲ್ಲೇ ಆಹಾರ ತಯಾರಿಸಿ ಪೂರೈಸಲು ನೆರವಾದವು. ಈ ಅಡುಗೆ ಕೇಂದ್ರಗಳಲ್ಲಿ ಸಿದ್ಧವಾದ 12.3 ಲಕ್ಷದಷ್ಟು ಆಹಾರ ಪ್ಯಾಕೆಟ್‌ಗಳು ಹಸಿದ ಹೊಟ್ಟೆಗಳನ್ನು ತಣಿಸಿವೆ.

ಹತಾಶ ಮುಖಗಳ ಕತೆ 

ಅಯಾಜ್‌ ಎಂಬ ಕಾರ್ಮಿಕನ ಊರು ಆಂಧ್ರ ಪ್ರದೇಶದ ಚಿತ್ತೂರಿನ ಪಳನೇರಿ. ಆ ಊರಿಗೆ ತಲುಪಲು ಕಾಲ್ನಡಿಗೆಯಲ್ಲೇ ಹೊರಟಿದ್ದ. ಆತ ಮೂರು ದಿನ ಏನನ್ನೂ ತಿಂದಿರಲಿಲ್ಲ. ನಗರದ ಮ್ಯೂಸಿಯಂ ರಸ್ತೆಯಲ್ಲಿ ಜಲ್ಲಿ ಕಲ್ಲಿನ ರಾಶಿಯ ಮೇಲೆ ಕುಸಿದು ಬಿದ್ದಿದ್ದ. ಈ ಅಭಿಯಾನದ ಸ್ವಯಂ ಸೇವಕ ಮೆಹರಾಜ್‌ ಇದನ್ನು ಗಮನಿಸಿ ಅವನಿಗೆ ನೀರು ಕೊಟ್ಟರು. ನೀರು ಕುಡಿದ ಆಯಾಜ್‌ ಸ್ವಲ್ಪ ಚೇತರಿಸಿಕೊಂಡ. ಪಕ್ಕದ ಹೋಟೆಲ್‌ನಿಂದ ಅವನಿಗೆ ಆಹಾರ ಒದಗಿಸಲಾಯಿತು. ನಡೆದು ಹೋಗುವ ಬದಲು ನಗರದಲ್ಲೇ ಉಳಿಯುವಂತೆ ವ್ಯವಸ್ಥೆ ಕಲ್ಪಿಸಿತು ಮರ್ಸಿ ಮಿಷನ್‌.

ಫೋಟೊ ಕೊಟ್ಟ ಸಂದೇಶ 

ಮರಿಯಮ್ಮ ಎಂಬುವವರ ಮನೆಯ ಮುಂದೆ ‘ಮರ್ಸಿ ಮಿಷನ್’ ತಂಡದ ಸ್ವಯಂ ಸೇವಕರು ಆಹಾರ ಕಿಟ್‌ ಸಹಿತ  ಪ್ರತ್ಯಕ್ಷರಾದರು. ಅದನ್ನು ಕಂಡು ಮರಿಯಮ್ಮನಿಗೇ ಆಶ್ಚರ್ಯ. ‘ನನ್ನ ಸಮಸ್ಯೆ ಇವರಿಗೆ ಹೇಗೆ ತಿಳಿಯಿತು’ ಎಂದು ಅಚ್ಚರಿಯಿಂದ ನೋಡಿದರು. ವಿಷಯ ಏನೆಂದರೆ, ಮರಿಯಮ್ಮ ಕಿರಾಣಿ ಅಂಗಡಿ ಮುಂದೆ ಬಿದ್ದಿದ್ದ ಕಾಳುಗಳನ್ನು ಆಯ್ದುಕೊಳ್ಳುತ್ತಿದ್ದರು. ಈ ಚಿತ್ರ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಆ ಚಿತ್ರವನ್ನು ಟ್ವಿಟರ್‌ ಖಾತೆಯಲ್ಲಿ ಪ್ರಕಟಿಸಿದ ಅಭಿಯಾನದ ತಂಡ, ಆ ಚಿತ್ರ ತೆಗೆದ ಛಾಯಾಗ್ರಾಹಕ ನನ್ನು ಸಂಪರ್ಕಿಸಿ ಮರಿಯಮ್ಮ ಅವರ ವಿವರ ಪಡೆಯಿತು. ಅವರಿಗೆ ನೆರವಾಯಿತು.

ಇದೇ ರೀತಿ ಮಾರತ್‌ಹಳ್ಳಿಯ ಮುನೆಕೊಳಲು ಪ್ರದೇಶದಲ್ಲಿ ನಿವೇಶನವೊಂದರಲ್ಲಿ ಕೆಲಸಮಾಡುತ್ತಿದ್ದ ಒಂದು ಸಾವಿರ ಕಟ್ಟಡ ಕಾರ್ಮಿಕರಿಗೆ, ಆಹಾರ ಪೂರೈಸಿದ ತಂಡ  ಅವರು ಎದುರಿಸುತ್ತಿದ್ದ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದಿತು. ಅಂತಿಮವಾಗಿ ಕಾರ್ಮಿಕರಿಗೆ ಸೂಕ್ತ ಆಹಾರ, ಮೂಲಸೌಲಭ್ಯ ಒದಗಿಸುವಂತೆ ಗುತ್ತಿಗೆದಾರ ಕಂಪೆನಿಗೆ ಅಧಿಕಾರಿಗಳು ತಾಕೀತು ಮಾಡಿದರು.

ಮರ್ಸಿ ಮಿಷನ್‌ ಅಭಿಯಾನಕ್ಕೆ, ಎಚ್‌ಬಿಎಸ್‌ ಆಸ್ಪತ್ರೆ, ಹ್ಯೂಮನ್‌ ಟಚ್‌, ಪ್ರಾಜೆಕ್ಟ್ ಸ್ಮೈಲ್‌, ಜೆಐಎಚ್‌, ಎಮ್ಮರ್‌ ಟ್ರಸ್ಟ್‌, ಸ್ವರಾಜ್‌ ಅಭಿಯಾನ್‌, ಆಸ್ರಾ, ಸ್ಮಾಲ್‌ ಅಪೀಲ್‌ ಸಂಸ್ಥೆಗಳು ಕೈಜೋಡಿಸಿವೆ. 

2.85 ಲಕ್ಷ ಕಾರ್ಮಿಕರಿಗೆ ಆಹಾರ ಕಿಟ್‌

ಮರ್ಸಿ ಮಿಷನ್‌ನ ಕಾರ್ಯ ಗಮನಿಸಿದ ರಾಜ್ಯ ಸರ್ಕಾರ, ಈ ಸಂಘಟನೆಯ ಮೂಲಕ 2.85 ಲಕ್ಷ ಆಹಾರ ಕಿಟ್‌ ಹಾಗೂ ಸ್ವಚ್ಛತಾ ಸಾಮಗ್ರಿಗಳನ್ನು (ಸಾಬೂನು, ಟವೆಲ್‌, ಟೂತ್‌ ಪೇಸ್ಟ್‌) ಒದಗಿಸಲು ಮುಂದಾಯಿತು. ವಲಸೆ ಕಾರ್ಮಿಕರನ್ನು ‘ಶ್ರಮಿಕ್ ರೈಲಿನ‘ಲ್ಲಿ ಅವರ ರಾಜ್ಯಕ್ಕೆ ವಾಪಸ್‌ ಕಳುಹಿಸುವ ವೇಳೆ ಈ ಕಿಟ್‌ಗಳನ್ನು ಕಾರ್ಮಿಕರಿಗೆ ಒದಗಿಸಿದರು. 107 ಶ್ರಮಿಕ್‌ ಎಕ್ಸ್‌ಪ್ರೆಸ್‌ ರೈಲುಗಳಲ್ಲಿ ಬೇರೆ ಬೇರೆ ಸ್ಥಳಗಳಿಗೆ ತೆರಳಿದ 1.75 ಲಕ್ಷ ವಲಸೆ ಕಾರ್ಮಿಕರಿಗೆ ಈ ಕಿಟ್‌ಗಳು ಪೂರೈಕೆಯಾದವು. ಆಹಾರ ಪೂರೈಸುವ ಜತೆಗೆ, ಸುಮಾರು 780 ರೋಗಿಗಳಿಗೆ ವೈದ್ಯಕೀಯ ನೆರವಿಗೆ ಮುಂದಾಯಿತು ಮರ್ಸಿ ತಂಡ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು