ಸೋಮವಾರ, ಜನವರಿ 27, 2020
17 °C

ಅಮಲೂರಿನ ಪುಸ್ತಕ ತುಮುಲ!

ವಸುಧೇಂದ್ರ Updated:

ಅಕ್ಷರ ಗಾತ್ರ : | |

prajavani

ಮೆಕ್ಸಿಕೋ ದೇಶದ ಈ ಊರು ಹೇಳಿಕೇಳಿ ಮಾದಕ ವಸ್ತುಗಳ ತವರೂರು. ಆದರೆ, ಇಲ್ಲಿನ ಜನ ಪುಸ್ತಕಪ್ರಿಯರೂ ಹೌದು. ಗಾಡಲಹರದ ಈ ಸಲದ ಪುಸ್ತಕ ಮೇಳದ ಅತಿಥಿ ಭಾರತ ದೇಶವೇ ಆಗಿತ್ತು. ಇಲ್ಲಿದೆ ಮೇಳದ ಸಾಕ್ಷಾತ್‌ ವರದಿ...

ನನ್ನ ‘ಮೋಹನಸ್ವಾಮಿ’ ಕೃತಿಯನ್ನು ಸ್ಪಾನಿಷ್ ಆವೃತ್ತಿಗೆ ತರ್ಜುಮೆ ಮಾಡಲು ಮೆಕ್ಸಿಕೋದಿಂದ ಅನುಮತಿ ಕೋರಿ ಇಮೇಲ್ ಬಂದಾಗ ನಾನು ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ. ಹೇಗೂ ಆ ಭಾಷೆ ನನಗೆ ಬರುವುದಿಲ್ಲ, ಆ ಭಾಷೆ ಮಾತಾಡುವ ಸ್ನೇಹಿತರೂ ಇಲ್ಲ. ಆದ್ದರಿಂದ ಮಹಾಸುಖ. ಅನುವಾದದ ಗುಣಮಟ್ಟದ ಕುರಿತು ಯಾವ ತಲೆನೋವೂ ಇರುವುದಿಲ್ಲ. ಅನುಮತಿ ಕೇಳಿದವರು ಪ್ರಸಿದ್ಧ ಪ್ರಕಾಶಕರು ಎಂದು ಗಮನಿಸಿ ಸುಮ್ಮನೆ ಒಪ್ಪಿಗೆ ಪತ್ರವನ್ನು ಕಳುಹಿಸಿಕೊಟ್ಟಿದ್ದೆ. ಪುಸ್ತಕದ ಐದು ಪ್ರತಿಗಳನ್ನು ಪ್ರಾಮಾಣಿಕವಾಗಿ ಕಳುಹಿಸಿದ್ದರು. ಅದರ ಅಂದ-ಚಂದ ನೋಡಿ, ಅನಂತರ ಅಟ್ಟಕ್ಕೆ ಹಾಕಿದ್ದೆ.

ಮೊನ್ನೆ ಮೊನ್ನೆ ಮತ್ತೊಂದು ಪತ್ರ ಬಂತು. ಅವರ ಊರಲ್ಲಿ ವಿಶ್ವದ ಎರಡನೇ ಅತಿದೊಡ್ಡ ಪುಸ್ತಕ ಪ್ರದರ್ಶನ ನಡೆಯುತ್ತದೆಯೆಂದೂ, ಅದರಲ್ಲಿ ನಾನು ಭಾಗವಹಿಸಬೇಕೆಂದೂ ಕೇಳಿಕೊಂಡಿದ್ದರು. ‘ಗಾಡಲಹರ’ ಎನ್ನುವ ಅವರೂರಿನ ಹೆಸರನ್ನೂ ನಾನು ಕೇಳಿರಲಿಲ್ಲ. ಅಮೆರಿಕದ ಗೆಳೆಯರಲ್ಲಿ ವಿಚಾರಿಸಿದಾಗ ‘ನಾರ್ಕೋಟಿಕ್ ನಗರ. ಬರೀ ಡ್ರಗ್ ವ್ಯವಹಾರ. ಹುಷಾರಾಗಿರು’ ಎಂದು ಹೆದರಿಸಿಬಿಟ್ಟರು. ಪುಸ್ತಕ ಪ್ರಕಟಿಸಿದ ಪ್ರಕಾಶಕರು ‘ನಾವು ಟಿಕೇಟಿನ ಅರ್ಧಹಣ ಕೊಡುತ್ತೇವೆ. ನೀವು ಅಥವಾ ನಿಮ್ಮ ಸರ್ಕಾರ ಉಳಿದ ಅರ್ಧ ಭರಿಸಲು ಸಾಧ್ಯವೆ?’ ಎಂದು ಕೇಳಿಕೊಂಡಿದ್ದರು. ಅರ್ಧವೆಂದರೂ ಸುಮಾರು ಎಪ್ಪತ್ತು ಸಾವಿರದಷ್ಟು ದುಡ್ಡು! ‘ಸಾಧ್ಯವೇ ಇಲ್ಲ’ ಎಂದು ಖಡಕ್ಕಾಗಿ ಉತ್ತರಿಸಿಬಿಟ್ಟಿದ್ದೆ. ಆದರೆ, ಮತ್ತೇನಾಯಿತೋ ಗೊತ್ತಿಲ್ಲ. ‘ದಯವಿಟ್ಟು ಬನ್ನಿ, ನಾವೇ ಎಲ್ಲ ಖರ್ಚನ್ನೂ ನೋಡಿಕೊಳ್ಳುತ್ತೇವೆ’ ಎಂದರು. ನನಗೆ ಇನ್ನು ಯಾವ ತಕರಾರು? ಮೆಕ್ಸಿಕೋಗೆ ಹೋದೆ. ಅವರ ಪುಸ್ತಕದ ಸಂಭ್ರಮ ನನ್ನ ಕಣ್ಣನ್ನು ತೆರೆಸಿತು. ಇಂಗ್ಲಿಷೇತರರು ಅದ್ಯಾವ ಪರಿಯಲ್ಲಿ ಪುಸ್ತಕದ ಉದ್ಯಮವನ್ನು ಬೆಳೆಸಿಕೊಂಡಿದ್ದಾರೆ ಎನ್ನುವುದು ಕಂಡು ನಿಜಕ್ಕೂ ಬೆರಗಾದೆ. ಅವರ ಆತಿಥ್ಯ ನನ್ನ ಹೃದಯವನ್ನು ಸ್ಪರ್ಶಿಸಿತು. ನಮ್ಮ ರವೀಂದ್ರ ಕಲಾಕ್ಷೇತ್ರದ ಒಟ್ಟಾರೆ ವಿಸ್ತೀರ್ಣದ ಎರಡು ಪಟ್ಟು ದೊಡ್ಡದಾದ ಒಳಾಂಗಣವಿರುವ ಕಟ್ಟಡವೊಂದರಲ್ಲಿ ಈ ಪುಸ್ತಕ ಸಮ್ಮೇಳನ ಏಳು ದಿನಗಳ ಕಾಲ ನಡೆಯಿತು. ಪ್ರತಿನಿತ್ಯ ಲಕ್ಷಗಟ್ಟಲೆ ಜನರು ಈ ಪ್ರದರ್ಶನ ವೀಕ್ಷಿಸಿ, ಪುಸ್ತಕಗಳನ್ನು ಖರೀದಿಸಿದರು. ಪುಸ್ತಕ ಕೊಳ್ಳುವುದೊಂದೇ ಅಲ್ಲ, ಲೇಖಕರು, ಅನುವಾದಕರು, ಪ್ರಕಾಶಕರು, ಮುದ್ರಣಕಾರರು ಮತ್ತು ಪ್ರಚಾರಕರ ನಡುವೆ ಈ ಸಮ್ಮೇಳನ ಸೇತುವೆಯನ್ನು ನಿರ್ಮಿಸಿತು. ಹಲವಾರು ಪುಸ್ತಕ ಪ್ರಕಟಣೆಯ, ಮುದ್ರಣದ, ಪ್ರಚಾರದ ಕರಾರು ಪತ್ರಗಳು ಸಹಿಯಾದವು.

ನನಗೆಂದೇ ದಿನಕ್ಕೆ ಎಂಟರಂತೆ ಸುಮಾರು ಇಪ್ಪತ್ತಕ್ಕೂ ಹೆಚ್ಚು ಸಂದರ್ಶನಗಳನ್ನು ಏರ್ಪಡಿಸಿದ್ದರು. ರೇಡಿಯೊ, ಟಿ.ವಿ, ಬ್ಲಾಗ್, ಪಾಡ್‌ಕಾಸ್ಟ್, ಪೋರ್ಟಲ್, ದಿನಪತ್ರಿಕೆ -ಹೀಗೆ ಹತ್ತಾರು ಕಡೆಯಿಂದ ವರದಿಗಾರರು ನನ್ನನ್ನು ಸಂದರ್ಶಿಸಲು ಬರುತ್ತಿದ್ದರು. ಇದು ಕೇವಲ ನನ್ನೊಬ್ಬನಿಗೆ ಸಂದ ಅದೃಷ್ಟವಲ್ಲ; ಪುಸ್ತಕ ಪ್ರಕಟಿಸಿದ ಪ್ರತಿಯೊಬ್ಬ ಲೇಖಕರಿಗೂ ಈ ಪರಿಯ ಪ್ರಚಾರದ ಏರ್ಪಾಟು ಮಾಡಲಾಗಿತ್ತು. ಬೆಳಿಗ್ಗೆ ಉಪಾಹಾರ ಮಾಡಿದ ತಕ್ಷಣ, ಆ ದಿನ ಆಯೋಜಿಸಿದ ಸಂದರ್ಶನಗಳ ಪಟ್ಟಿ ನನಗೆ ಕೊಡುತ್ತಿದ್ದರು. ಈ ಪರಿಯ ಸಂಭ್ರಮವನ್ನು ನಮ್ಮ ನಾಡಿನಲ್ಲಿಯೇ ನಾನು ಕಂಡಿರಲಿಲ್ಲ ಎಂದು ಅವರಿಗೆ ಸತ್ಯವನ್ನು ಹೇಳಿಬಿಟ್ಟೆ!

ಮಾರ್ಥಾ ಡೆಬ್ಯಾಲೆ ಎನ್ನುವ ರೇಡಿಯೊ ಜಾಕಿ ಒಬ್ಬರು ನನ್ನ ಸಂದರ್ಶನ ಮಾಡಿದರು. ಆಕೆಗೆ ಟ್ವಿಟ್ಟರ್‌ ಹಾಗೂ ಇನ್‌ಸ್ಟಾಗ್ರಾಮ್‌ ನಲ್ಲಿ ಮೂರು ಕೋಟಿಗೂ ಹೆಚ್ಚು ಅಭಿಮಾನಿಗಳಿದ್ದಾರೆ. ನನ್ನ ಪ್ರಕಾಶಕ ಮಿತ್ರನೊಬ್ಬ ‘ಇದೊಂದು ಸಂದರ್ಶನವೇ ಸಾಕು, ನೀನು ದೂರದ ಭಾರತದಿಂದ ಇಲ್ಲಿಗೆ ಬಂದಿದ್ದನ್ನು ಸಾರ್ಥಕ ಮಾಡಲು’ ಎಂದು ಆಕೆಯ ಮಹತ್ವವನ್ನು ತಿಳಿಸಿ ಹೇಳಿದ. ಒಬ್ಬ ರೇಡಿಯೊ ಜಾಕಿ ಇಷ್ಟೊಂದು ಪ್ರಸಿದ್ಧಿಯಾಗಿರಬಹುದೆ ಎಂದು ನನಗೆ ಅಚ್ಚರಿಯಾಯ್ತು. ಅವರು ಹೇಳಿದ್ದರಲ್ಲಿ ಉತ್ಪ್ರೇಕ್ಷೆಯೇನೂ ಇರಲಿಲ್ಲ. ಮರುದಿನ ನಾನು ಟ್ಯಾಕ್ಸಿಗಳಲ್ಲಿ ಊರು ಸಂಚರಿಸುವಾಗ, ಡ್ರೈವರ್‌ಗಳು ನನ್ನ ನೋಡಿದ್ದೇ ‘ನಿನ್ನೆ ಮಾರ್ಥಾ ಜೊತೆಗಿದ್ದದ್ದು ನೀನೇ ಅಲ್ಲವಾ?’ ಎಂದು ನಗೆಯರಳಿಸಿ, ತಮ್ಮ ತಲೆಯನ್ನು ಅಂಗೈಯಿಂದ ಸವರಿ ‘ಅದಕ್ಕೇ ಬೇಗನೆ ಗುರುತು ಹಿಡಿದೆವು’ ಎಂದು ಕಣ್ಣಿನಲ್ಲಿಯೇ ನನ್ನ ಬೋಳು ತಲೆಯನ್ನು ನೋಡಿದರು. ಆಕೆಯ ಟ್ವಿಟ್ಟರ್ ಮತ್ತು ಇನ್‌ಸ್ಟಾಗ್ರಾಮ್‌ ಅನ್ನು ಅವರೆಲ್ಲರೂ ಫಾಲೋ ಮಾಡುತ್ತಾರಂತೆ!

ಇಡೀ ಪುಸ್ತಕ ಪ್ರದರ್ಶನ ಒಂದು ಸೂಕ್ಷ್ಮ ಕಲಾಪ್ರದರ್ಶನದಂತೆ ನನಗೆ ಕಂಡಿತು. ಪ್ರತಿಯೊಂದು ಮಳಿಗೆಯೂ ಅತ್ಯಂತ ಶ್ರದ್ಧೆಯಿಂದ ಅಲಂಕಾರಗೊಂಡಿತ್ತು. ಮಳಿಗೆಗಳನ್ನು ಕಟ್ಟಿದ ಕ್ರಮ, ಬಳಸಿದ ಬಣ್ಣ, ಮೂಡಿಸಿದ ವಿನ್ಯಾಸ, ನೆರಳು-ಬೆಳಕನ್ನು ಬಳಸಿಕೊಂಡ ಕ್ರಮ, ಪುಸ್ತಕ ಜೋಡಿಸಿದ ಬಗೆ, ಪೋಸ್ಟರ್‌ಗಳನ್ನು ಹಾಕಿದ ರೀತಿ, ಅಲ್ಲಲ್ಲಿ ಇಟ್ಟ ಆಕರ್ಷಕ ಮೂರ್ತಿಗಳು - ಎಲ್ಲವೂ ಕಣ್ಣಿಗೆ ಹಬ್ಬವನ್ನುಂಟು ಮಾಡುವಂತಿದ್ದವು.

ಸಭಾಂಗಣದ ಒಂದು ಮೂಲೆಯಲ್ಲಿ ಲೇಖಕರ, ಪ್ರಕಾಶಕರ, ಮುದ್ರಣಕಾರರ ಸಂದರ್ಶನಗಳು ನಿರ್ವಿಘ್ನವಾಗಿ ನಡೆಯುವಂತೆ ಅನುವು ಮಾಡಿಕೊಟ್ಟಿದ್ದರು. ಮತ್ತೊಂದು ಕಡೆ ಹತ್ತಾರು ಪುಟ್ಟ ಸಭಾಂಗಣಗಳಿದ್ದು, ಅಲ್ಲಿ ಪುಸ್ತಕದ ಕುರಿತ ಚರ್ಚೆ, ಪರಿಚಯ, ಲೇಖಕರೊಡನಾಟ ಇತ್ಯಾದಿಗಳನ್ನು ಏರ್ಪಡಿಸಿದ್ದರು. ‘ನಿಮ್ಮ ಊರಲ್ಲಿಯೂ ಇಂತಹ ಪುಸ್ತಕ ಪ್ರದರ್ಶನ ನಡೆಯುತ್ತದೆಯಾ’ ಎಂದು ಒಬ್ಬ ಸ್ಪಾನಿಷ್ ಗೆಳತಿ ನನ್ನ ಕೇಳಿದಳು. ಮೊನ್ನೆ ತಾನೆ ಧಾರವಾಡ ಸಾಹಿತ್ಯ ಸಮ್ಮೇಳನದಲ್ಲಿ ಗಳಗಳನ್ನು ಹೂಡಿ, ಬಿಳಿ ಬಟ್ಟೆ ಕಟ್ಟಿ ಮಳಿಗೆ ಮಾಡಿ, ದೂಳೆಬ್ಬಿಸಿಕೊಂಡು, ನಡೆದಾಡಲೂ ಸ್ಥಳವಿಲ್ಲದಂತೆ ಮಾಡಿದ ಅಧ್ವಾನಗಳು ಜ್ಞಾಪಕಕ್ಕೆ ಬಂದು ಉತ್ತರಿಸಲು ನಾಚಿಕೆಯಾಯಿತು. 

ಇಡೀ ಪುಸ್ತಕ ಪ್ರದರ್ಶನ ಬರೀ ಸ್ಪಾನಿಷ್ ಪುಸ್ತಕಗಳಿಂದ ತುಂಬಿ ತುಳುಕುತ್ತಿತ್ತು. ಸ್ವಲ್ಪಮಟ್ಟಿಗೆ ಲ್ಯಾಟಿನ್ ಅಮೆರಿಕದ ಇತರ ಭಾಷೆಗಳ ಪುಸ್ತಕಗಳೂ ಇದ್ದಿರಬೇಕು, ನನಗೆ ತಿಳಿಯಲಿಲ್ಲ. ಆದರೆ ತಿಳಿದಿದ್ದೇನೆಂದರೆ ಇಂಗ್ಲಿಷ್ ಪುಸ್ತಕ ಬೇಕೆಂದರೆ ಇನ್ನಿಲ್ಲದಂತೆ ಹುಡುಕಾಡಬೇಕಿತ್ತು. ನೆರೆದ ಶೇಕಡ 99ರಷ್ಟು ಜನರಿಗೆ ಇಂಗ್ಲಿಷ್‌ ಬರುತ್ತಿರಲಿಲ್ಲ. ಅದಕ್ಕಾಗಿ ನನಗೆಂದೇ ಒಬ್ಬ ಅನುವಾದಕನನ್ನು ನಿಗದಿ ಮಾಡಿಟ್ಟಿದ್ದರು. ಅಮೆರಿಕಕ್ಕೆ ಇಷ್ಟು ಹತ್ತಿರದಲ್ಲಿರುವ ಈ ಊರಿನಲ್ಲಿ ಇಷ್ಟೊಂದು ಇಂಗ್ಲಿಷ್ ಸಮಸ್ಯೆಯೆ ಎಂದು ನನಗೆ ಅಚ್ಚರಿ. ಸಾವಿರಾರು ಮೈಲುಗಳ ದೂರದಲ್ಲಿರುವ ನಮ್ಮ ಭಾರತದಲ್ಲಿ ಇಂಗ್ಲಿಷನ್ನು ಹಾಸಿ ಹೊದ್ದು ಮಲಗುತ್ತೇವೆ. ಇದು ಯಾಕೆ ಹೀಗೆ ಎಂದು ಅನುವಾದಕನನ್ನು ಕೇಳಿದೆ. ಆತ ಬಹುಬೇಸರದಲ್ಲಿ ಒಂದು ಸಂಗತಿಯನ್ನು ಹೇಳಿದ. ‘ನಮ್ಮ ರಾಜಕೀಯ ನಾಯಕರಿಗೆ ನಾವು ಇಂಗ್ಲಿಷ್ ಕಲಿಯುವುದರಲ್ಲಿ ಆಸಕ್ತಿಯಿಲ್ಲ. ಆದ್ದರಿಂದ ಸರ್ಕಾರಿ ಶಾಲೆಗಳಲ್ಲಿ ಕಡ್ಡಾಯವಾಗಿ ಸ್ಪಾನಿಷ್ ಮಾಧ್ಯಮವಿದೆ; ಇಂಗ್ಲಿಷ್ ಸ್ಪರ್ಶವೂ ಇಲ್ಲ. ಇಂಗ್ಲಿಷ್ ಬೇಕೆಂದರೆ ದುಬಾರಿಯ ಹಣ ಕೊಟ್ಟು ಖಾಸಗಿ ಶಾಲೆಗೆ ಹೋಗಬೇಕು. ಅದು ನಮಗೆ ಸಾಧ್ಯವಿಲ್ಲ. ಇಲ್ಲಿ ಶೇಕಡ 99ರಷ್ಟು ಮಕ್ಕಳು ಸರ್ಕಾರಿ ಶಾಲೆಯಲ್ಲಿಯೇ ಕಲಿಯುವುದು. ಆದ್ದರಿಂದ ನಮ್ಮ ಜನಕ್ಕೆ ಇಂಗ್ಲಿಷ್ ಬರುವುದಿಲ್ಲ’ ಎಂದ. ಇದಕ್ಕೆ ತದ್ವಿರುದ್ಧವಾದ ನನ್ನ ನಾಡಿನ ಪರಿಸ್ಥಿತಿಯನ್ನು ಇವನಿಗೆ ಹೇಗೆ ವಿವರಿಸಲಿ ಎಂದು ಸಂಕಟಪಟ್ಟೆ. ಬೆಂಗಳೂರು ಪುಸ್ತಕೋತ್ಸವಕ್ಕೆ ಹೋದರೆ, ಇಂಗ್ಲಿಷ್ ಪುಸ್ತಕಗಳ ಆರ್ಭಟದಲ್ಲಿ ಕನ್ನಡ ಪುಸ್ತಕಗಳು ಮೂಲೆಗುಂಪಾದ ಮುಜುಗರವನ್ನು ಹೇಗೆ ಹೇಳಲಿ?

ಊರಿನಲ್ಲಿ ಸಂಜೆಯ ಹೊತ್ತು ಏಕಾಂಗಿಯಾಗಿ ಅಡ್ಡಾಡುತ್ತಿದ್ದೆ. ಆಗ ಭಾಷೆಯ ಸಮಸ್ಯೆ ಬರುತ್ತಿತ್ತು. ಆದರೆ ತಂತ್ರಜ್ಞಾನ ಅದಕ್ಕೊಂದು ಸುಲಭೋಪಾಯವನ್ನೂ ಕೊಟ್ಟಿತ್ತು. ಗೂಗಲ್ ಅನುವಾದದ ಆ್ಯಪ್ ಎಲ್ಲರ ಬಳಿಯೂ ಇರುತ್ತಿತ್ತು. ನಾನು ಇಂಗ್ಲಿಷ್‌ನಲ್ಲಿ ಬರೆದು, ಸ್ಪಾನಿಷ್‌ಗೆ ಅನುವಾದಿಸಿ ತೋರಿಸುತ್ತಿದ್ದೆ. ಅವರು ಅದಕ್ಕೆ ಪ್ರತಿಯಾಗಿ ತಮ್ಮ ಮೊಬೈಲಿನಲ್ಲಿ ಸ್ಪಾನಿಷ್‌ನಲ್ಲಿ ಬರೆದು, ಇಂಗ್ಲಿಷಿಗೆ ಅನುವಾದಿಸಿ ತೋರಿಸುತ್ತಿದ್ದರು. ಒಂದು ಕಾರಿನ ಪಯಣದಲ್ಲಂತೂ ನಾನು ಚಾಲಕನೊಡನೆ ಈ ರೀತಿಯಲ್ಲಿಯೇ ಸೊಗಸಾಗಿ ಹರಟೆ ಹೊಡೆದೆ. ಅವನು ಮಾತನ್ನು ಪಠ್ಯವಾಗಿಸುವ ಆ್ಯಪ್‌ ಹಾಕಿಕೊಂಡಿದ್ದ. ಅದರಲ್ಲಿ ಸ್ಪಾನಿಷ್‌ನಲ್ಲಿ ಮಾತಾಡಿ, ಅನಂತರ ನನಗೆ ಇಂಗ್ಲಿಷ್‌ ಅನುವಾದಿತ ಪಠ್ಯ ತೋರಿಸುತ್ತಿದ್ದ. ಮೌನವಾಗಿ ಹರಟೆ ಹೊಡೆಯುವ ಈ ಪರಿ ಅನ್ಯೋನ್ಯವಾಗಿತ್ತು. ಬರೀ ಮುಖ ನೋಡಿ ನಗುವುದು, ಹಾವ-ಭಾವ ತೋರಿಸುವುದು ಮಾತ್ರ ಆ ಹರಟೆಯಲ್ಲಿತ್ತು. ಉಳಿದಂತೆ ಎಲ್ಲವೂ ಮೊಬೈಲ್ ಆ್ಯಪ್!

ಇಡೀ ಪುಸ್ತಕೋತ್ಸವದ ಸಂಭ್ರಮಾಚರಣೆಯ ವಿಷಯವಾಗಿ ಭಾರತ ದೇಶವನ್ನು ಆಯ್ಕೆ ಮಾಡಿಕೊಂಡಿದ್ದರು. ಪ್ರತಿವರ್ಷವೂ ಒಂದು ದೇಶವನ್ನು ಉತ್ಸವದ ನೆಪದಲ್ಲಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಾರಂತೆ. ಇಡೀ ಪುಸ್ತಕ ಪ್ರದರ್ಶನದ ತುಂಬಾ ಭಾರತದ ವಿವಿಧ ಸಂಗತಿಗಳು ಇದ್ದವು. ಭಾರತದ ವಿಭಿನ್ನ ಭಾಷೆಗಳ ಅಕ್ಷರಗಳನ್ನು ದೊಡ್ಡ ದೊಡ್ಡ ಫಲಕಗಳಾಗಿ ಮಾಡಿ ತಾರಸಿಯಿಂದ ನೇತು ಬಿಡಲಾಗಿತ್ತು. ಕನ್ನಡ, ತೆಲುಗು, ದೇವನಾಗರಿ, ತಮಿಳು ಅಕ್ಷರಗಳನ್ನು ಬೃಹತ್ ಗಾತ್ರದಲ್ಲಿ ಕಂಡು ಸಂಭ್ರಮವಾಯ್ತು. ಭಾರತದ ಪುರಾಣ, ಇತಿಹಾಸ ಇತ್ಯಾದಿಗಳನ್ನು ಅಲ್ಲಲ್ಲಿ ಪೋಸ್ಟರ್‌ಗಳ ಮೂಲಕ ಅಭಿವ್ಯಕ್ತಗೊಳಿಸಿದ್ದರು.


ಪುಸ್ತಕ ಮೇಳದಲ್ಲಿ ಭಾರತೀಯ ಸಂಸ್ಕೃತಿಯ ಅನಾವರಣ. ಭಾರತೀಯ ಮಹಾಕಾವ್ಯಗಳಿಗೆ ಸಂಬಂಧಿಸಿದ ಕಲಾಕೃತಿಗಳು ಮೆಕ್ಸಿಕನ್ನರ ಗಮನ ಸೆಳೆದವು.

ಕಾರ್ಯಕರ್ತರೆಲ್ಲರೂ ‘ಇಂಡಿಯಾ’ ಎಂದು ಬರೆದ ಟೀ ಶರ್ಟನ್ನು ಧರಿಸಿದ್ದರು. ಈ ಭಾರತದ ಸಂಭ್ರಮಾಚರಣೆಯು ಕೇವಲ ಪುಸ್ತಕ ಪ್ರದರ್ಶನಕ್ಕೆ ಸೀಮಿತವಾಗಿರಲಿಲ್ಲ. ಊರಲ್ಲಿ ಹೋಟೆಲಿಗೆ ಹೋದರೆ ಭಾರತದ ತಿನಿಸುಗಳ ಮೆನು, ಮ್ಯೂಜಿಯಂಗೆ ಹೋದರೆ ಭಾರತದ ಸಂಗತಿಗಳ ಪ್ರದರ್ಶನ, ಅಂಗಡಿಗಳಿಗೆ ಹೋದರೆ ಭಾರತದ ವಸ್ತುಗಳ ಮಾರಾಟ -ಹೀಗೆ. ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಭಾರತವನ್ನು ಬಿಂಬಿಸಲು ಸರ್ವ ಪ್ರಯತ್ನವನ್ನು ಮಾಡಲಾಗಿತ್ತು. ನಮ್ಮ ಬೆಂಗಳೂರಿನಲ್ಲಿ ಯಾವತ್ತಾದರೂ ಹೀಗೆ ನಾವು ಸಾಂಸ್ಕೃತಿಕ ಉತ್ಸವವನ್ನು ಮೆಕ್ಸಿಕೋ ದೇಶದ ಹೆಸರಲ್ಲಿ ಆಚರಿಸುವುದು ಸಾಧ್ಯವಾ ಎಂದು ಯೋಚಿಸಿ ಸುಸ್ತಾದೆ. ತೆರೆದ ಮನಸ್ಸನ್ನು ಬೆಳೆಸಿಕೊಳ್ಳುವುದು ಅಷ್ಟು ಸುಲಭವಲ್ಲ. ಒಂದು ಮಧ್ಯಾಹ್ನ ಊಟಕ್ಕೆ ಕುಳಿತಾಗ ನನ್ನ ಪ್ರಕಾಶಕ ಮಿತ್ರನನ್ನು ಮೆಕ್ಸಿಕೋದ ಮುಖ್ಯ ಸಮಸ್ಯೆಗಳೇನು ಎಂದು ಕೇಳಿದೆ. ಯಾವುದೇ ಆಲೋಚನೆಯನ್ನೂ ಮಾಡದೆ ‘ಡ್ರಗ್ ಮಾಫಿಯಾ’ ಎಂದು ತಟ್ಟನೆ ಹೇಳಿದ. ನನ್ನ ಅಮೆರಿಕದ ಗೆಳೆಯರೂ ಅದನ್ನು ಹೇಳಿದ್ದು ನೆನಪಾಯಿತು. ‘ಯಾಕೆ ಈ ಸಮಸ್ಯೆ ಮೂಡಿದೆ?’ ಎಂದು ವಿಚಾರಿಸಿದೆ. ‘ಅಮೆರಿಕದವರಿಗೆ ಡ್ರಗ್‌ ಚಟ ಹೆಚ್ಚಿದೆ. ಅವರ ಬದುಕಿನ ಸುರುಸುರು ಬತ್ತಿ ಉರಿಸಲು ನಮ್ಮ ದೇಶ ತಂತಿಯಾಗಿ ಮೈಸುಟ್ಟುಕೊಳ್ಳುತ್ತಿದೆ’ ಎಂದು ವಿಷಾದಪಟ್ಟ. ಅನಂತರ ಸ್ವಲ್ಪ ಸಮಯ ಬಿಟ್ಟು ಮತ್ತೊಂದು ಕಾರಣವನ್ನೂ ತಿಳಿಸಿದ. ‘ಎಲ್ಲದಕ್ಕೂ ಅಮೆರಿಕವನ್ನು ದೂರುವುದು ತಪ್ಪೆನ್ನಿಸುತ್ತದೆ. ನಮ್ಮಲ್ಲಿ ನೈತಿಕತೆ ಇರಬೇಕಲ್ಲವಾ? ಅದೇ ಹೊರಟು ಹೋಗಿದೆ. ನಮ್ಮ ದೇಶವನ್ನು ಸ್ಥಾಪಿಸುವಾಗ ಧರ್ಮವನ್ನು ಸಾಮಾಜಿಕ ಮತ್ತು ರಾಜಕೀಯ ಜೀವನದಿಂದ ಹೊರಗಿಡುವ ನಿರ್ಧಾರ ಮಾಡಿದರು. ನ್ಯಾಯಾಲಯದಲ್ಲೇ ಆಗಲಿ, ಸರ್ಕಾರದಲ್ಲೇ ಆಗಲಿ, ಶಾಲೆ –ಕಾಲೇಜುಗಳಲ್ಲೇ ಆಗಲಿ - ಧರ್ಮದ ಉಸಿರೆತ್ತದಂತೆ ಮಾಡಿಬಿಟ್ಟರು. ಈಗ ಬರೀ ದೇಶದ ಕಾನೂನೇ ನಮ್ಮನ್ನು ಆಳುತ್ತಿದೆ. ಕಾನೂನು ನಮ್ಮಲ್ಲಿ ಭಯ ಮೂಡಿಸಬಹುದೇ ಹೊರತು, ಪಾಪಪ್ರಜ್ಞೆ ಮೂಡಿಸಲು ಸಾಧ್ಯವಿಲ್ಲ. ಆದ್ದರಿಂದ ಜನಕ್ಕೆ ಪಾಪಭೀತಿಯೇ ಹೊರಟು ಹೋಗಿದೆ. ಲಜ್ಜೆಗೇಡಿಗಳಾಗಿ ಡ್ರಗ್ ಮಾಫಿಯಾಕ್ಕೆ ತೆತ್ತುಕೊಂಡಿದ್ದಾರೆ’ ಎಂದು ಹೇಳಿದ. ಅಪ್ಪಟ ಕ್ಯಾಥೋಲಿಕ್ ಧಾರ್ಮಿಕನಾದ ಅವನ ಆಲೋಚನಾ ಕ್ರಮ ನನಗೆ ಅಷ್ಟಾಗಿ ಒಪ್ಪಿಗೆಯಾಗದಿದ್ದರೂ ಎದುರಾಡದೆ ಅವನ ಮಾತನ್ನು ಗೌರವದಿಂದ ಕೇಳಿಸಿಕೊಂಡೆ.

ಆ ಹೊತ್ತಿನಲ್ಲಿ ಮತ್ತೊಂದು ತಮಾಷೆಯ ಪ್ರಸಂಗ ನಡೆಯಿತು. ಹೋಟೆಲಿನೊಳಗೆ ನಡೆದುಬಂದ ಸುಂದರವಾದ ನಡುಪ್ರಾಯದ ಹೆಂಗಸೊಬ್ಬಳು ಈತನನ್ನು ನೋಡಿ ‘ಹಾಯ್’ ಎಂದು ಕೈಬೀಸಿ ಇಷ್ಟಗಲ ನಕ್ಕು ಬಫೆ ತೆಗೆದುಕೊಳ್ಳಲು ಹೋದಳು. ಅವಳು ಯಾರೆಂದು ಈತನಿಗೆ ತಕ್ಷಣ ಗೊತ್ತಾಗಲಿಲ್ಲ. ಆದರೆ ಆಕೆ ಹೋದ ಕಡೆಯೇ ತುಸು ಹೊತ್ತು ದಿಟ್ಟಿಸಿ ನೋಡಿ ‘ಓಹ್ ಮೈ ಗಾಡ್’ ಎಂದು ಉದ್ಗಾರ ಹಾಕಿದ. ‘ನಮ್ಮ ದೇಶದ ಸದ್ಯದ ನಿಜವಾದ ಸಮಸ್ಯೆಯೇನು ಗೊತ್ತಾ? ಪ್ಲಾಸ್ಟಿಕ್ ಸರ್ಜರಿ. ಹೆಂಗಸರು ಈ ರೀತಿ ಗುರುತೇ ಸಿಗದಂತೆ ಮುಖವನ್ನು ಬದಲಾಯಿಸಿಕೊಂಡರೆ ನಾವು ವ್ಯವಹರಿಸುವುದಾದರೂ ಹೇಗೆ ಹೇಳು? ತನ್ನ ಮೂಲರೂಪವನ್ನೇ ಬದಲಾಯಿಸಿಕೊಳ್ಳಲು ಆಕೆಗೆ ಮನಸ್ಸಾದರೂ ಹೇಗೆ ಬಂತು?’ ಎಂದು ಬೆರಗಿನಲ್ಲಿ ಹೇಳಿದ.

ನೂರಾರು ನೆನಪುಗಳನ್ನು ಉಡಿಯಲ್ಲಿಟ್ಟುಕೊಂಡು ಭಾರತಕ್ಕೆ ವಾಪಾಸಾದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು