ಎನ್‌ಎಸ್‌ಎಸ್‌ನ ಮಧುರ ನೆನಪು

ಬುಧವಾರ, ಜೂಲೈ 17, 2019
26 °C

ಎನ್‌ಎಸ್‌ಎಸ್‌ನ ಮಧುರ ನೆನಪು

Published:
Updated:
Prajavani

ಕಾಲೇಜು ಜೀವನದ ಪುಟಗಳನ್ನು ತಿರುಗಿಸಿ ನೋಡಿದಾಗ ಅವು ಮತ್ತೊಮ್ಮೆ ಮರು ಕಳಿಸಬಾರದೆ ಎಂಬ ಆಸೆ ಮೊಳೆಯುತ್ತದೆ. ಜೀವಿಸಿದ ಆ ಪ್ರತಿ ಕ್ಷಣಗಳೂ ದಿನಚರಿ ಪುಸ್ತಕದಲ್ಲಿ ಬೆಚ್ಚಗೆ ಕುಳಿತಿವೆ. ಆಗಾಗ ಅವುಗಳನ್ನು ತಿರುವಿ ಹಾಕಿ ಕಳೆದು ಹೋದ ಕ್ಷಣಗಳನ್ನು ಮೆಲುಕು ಹಾಕುತ್ತಿರುತ್ತೇನೆ.

ನೆನಪಿನ ಬುತ್ತಿಯನ್ನು ಬಿಚ್ಚಿದಾಗ ಮೊದಲು ಕಾಣಿಸಿಕೊಳ್ಳುವುದೇ ನನ್ನ ಮೆಚ್ಚಿನ ರಾಷ್ಟ್ರೀಯ ಸೇವಾ ಯೋಜನೆ(ಎನ್ಎಸ್ಎಸ್). ಈ ಕಾರ್ಯಕ್ರಮದ ಮುಖೇನ ನಾನು ಅನುಭವಿಸಿದ, ಆನಂದಿಸಿದ ಕ್ಷಣ ಕ್ಷಣವೂ ರಸವತ್ತಾದುದು. ಹಿರಿಯ ಕಿರಿಯ ವಿದ್ಯಾರ್ಥಿಗಳನ್ನೆಲ್ಲ ಒಗ್ಗೂಡಿಸುವ ಈ ಯೋಜನೆ ನನ್ನಲ್ಲಿ ಹಲವಾರು ಬದಲಾವಣೆಗಳನ್ನು ತಂದಿದೆ. ಶಿಸ್ತು, ಶ್ರಮ, ಸೇವಾಮನೋಭಾವಗಳನ್ನು ಅಳವಡಿಸಿಕೊಳ್ಳುವಲ್ಲಿ, ಕಲೆಯನ್ನು ಮೈಗೂಡಿಸಿಕೊಳ್ಳುವಲ್ಲಿಯೂ ಎನ್ಎಸ್ಎಸ್ ಸಹಕಾರಿಯಾಗಿದೆ.

ಶ್ರಮದಾನಕ್ಕೆಂದೇ ಮೀಸಲಾಗಿರುತ್ತಿದ್ದ ಭಾನುವಾರವನ್ನು ನಾನು ಕುತೂಹಲದಿಂದ ಕಾಯುತ್ತಿದ್ದೆ. ವರ್ಷದಲ್ಲಿ ಒಂದು ಸಾರಿ ತೆರಳುತ್ತಿದ್ದ ಪ್ರವಾಸಗಳು, ಅಲ್ಲಿ ನಡೆಯುತ್ತಿದ್ದ ಹಾಡು ಹರಟೆ, ಆಟ-ಪಾಠಗಳು, ನೆನಪಿನಿಂದ ಎಂದೂ ಮಾಸಲಾರವು. ಕಾಡಿನ ಮಡಿಲಲ್ಲಿದ್ದ ಜಲಪಾತ ವೀಕ್ಷಣೆಗೆಂದು ಎನ್ಎಸ್ಎಸ್ ಅಧಿಕಾರಿಗಳು ನಮ್ಮನ್ನೆಲ್ಲ ಕರೆದೊಯ್ದಿದ್ದು. ನಾವು ನಾಲ್ಕಾರು ಜನ ಗುಂಪಿನಿಂದ ಬೇರ್ಪಟ್ಟು ಟ್ರೆಕ್ಕಿಂಗ್‌ಗೆಂದು ಕಾಡಿನ ಒಳ ಹೊಕ್ಕು ತಡವಾಗಿ ಬಂದು ಅಧಿಕಾರಿಗಳಿಂದ ಬೈಯ್ಯಿಸಿಕೊಂಡಿದ್ದು ಈಗಲೂ ಹಸಿ ಹಸಿ ನೆನಪುಗಳಂತಿವೆ.

ಕಲೆ ಇಲ್ಲದ ಮನುಷ್ಯ ಬಾಲ, ಕೋಡುಗಳಿಲ್ಲದ ಪ್ರಾಣಿ ಎಂಬ ಮಾತಿನಂತೆ ಕಲೆ ಇಲ್ಲದ ಜೀವನ ನೀರಸ. ತನ್ನ ಮಡಿಲಿಗೆ ಬಿದ್ದವರನ್ನೆಲ್ಲ ಎನ್ಎಸ್ಎಸ್ ಕಲಾರಾಧಕರನ್ನಾಗಿ ರೂಪಿಸುತ್ತದೆ. ಸಾಹಿತ್ಯ, ಕ್ರೀಡೆಗಳನ್ನು ಅಪ್ಪಿಕೊಳ್ಳುವಂತೆ ಮಾಡುತ್ತದೆ. ನಮ್ಮಲ್ಲಡಗಿದ ಸುಪ್ತ ಕಲೆಯನ್ನು ಬಡಿದೆಬ್ಬಿಸುತ್ತದೆ.

ರಾಷ್ಟ್ರೀಯ ಸೇವಾ ಯೋಜನೆ ಮಾಡಿಹರು ಸೇವೆಯ ಮಾಡೋಣ ಬನ್ನಿ ಎಂಬ ಎನ್ಎಸ್ಎಸ್ ಗೀತೆ ಹಳೆಯ ನೆನಪುಗಳನ್ನು ಮತ್ತೆ ಬಗೆದು ಕೊಡುತ್ತದೆ. ವರ್ಷಕ್ಕೆ ಒಮ್ಮೆಯಾದರೂ ನಾನು ಓದಿದ ಕಾಲೇಜನ್ನು (ಕರ್ನಾಟಕ ಆರ್ಟ್‌ ಕಾಲೇಜು ಧಾರವಾಡ) ಒಂದೆರಡು ಸುತ್ತು ಹಾಕಿ ಕಳೆದು ಹೋದ ಮಧುರ ಕ್ಷಣಗಳನ್ನು ನೆನೆದು ಅಲ್ಲಿಯೇ ಕಳೆದು ಹೋಗುತ್ತೇನೆ.

ಗೌರಿ ಚಂದ್ರಕೇಸರಿ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !