ಮಂಗಳವಾರ, ಜನವರಿ 26, 2021
20 °C

ನೈಟ್‌ಲೈಫ್‌ಗೆ ಪೊಲೀಸರು ಸನ್ನದ್ಧರೇ?

ಎಸ್‌.ಟಿ. ರಮೇಶ್‌ Updated:

ಅಕ್ಷರ ಗಾತ್ರ : | |

Prajavani

ಪಬ್‌, ಕ್ಲಬ್‌ ಮತ್ತು ಮದ್ಯದ ಅಂಗಡಿಗಳನ್ನು ಹೊರತುಪಡಿಸಿ, ಅಂಗಡಿ ಮುಂಗಟ್ಟು, ಹೋಟೆಲ್‌, ಚಿತ್ರಮಂದಿರ, ಮಲ್ಟಿಪ್ಲೆಕ್ಸ್‌, ಮಳಿಗೆ, ದಿನಸಿ ಅಂಗಡಿ ಮುಂತಾದವು ಮುಂದಿನ ಮೂರು ವರ್ಷಗಳ ಅವಧಿಗೆ ವಾರದ ಏಳೂ ದಿನ, ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲು ಸರ್ಕಾರ ಅನುಮತಿ ನೀಡಿದೆ. ಇದು ಕೋವಿಡ್‌ ನಂತರದ ಇನ್ನೊಂದು ಅಭೂತಪೂರ್ವ ಬೆಳವಣಿಗೆ. ಸರ್ಕಾರದ ಈ ತೀರ್ಮಾನಕ್ಕೆ ನಾಗರಿಕರು ಮತ್ತು ಅಂಗಡಿ–ಹೋಟೆಲ್‌ ಮಾಲೀಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅವರ ಆತಂಕಗಳು ಮುಂದಿನ ದಿನಗಳಲ್ಲಿ ಪರೀಕ್ಷೆಗೆ ಒಳಪಡಲಿವೆ.

ಪ್ರಶ್ನೆಗಳು ಹಲವು: ಕೋವಿಡ್‌ ನಂತರದ ಈ ಕಾಲಘಟ್ಟದಲ್ಲಿ ಸಾಮಾನ್ಯ ದಿನಗಳಲ್ಲಿಯೇ ಮಾಲ್‌ ಹಾಗೂ ಇತರ ವ್ಯಾಪಾರಿ ಕೇಂದ್ರಗಳಿಗೆ ಬರುವ ಗ್ರಾಹಕರ ಸಂಖ್ಯೆಯು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಹೀಗಿರುವಾಗ ರಾತ್ರಿ ವೇಳೆಯಲ್ಲಿ ಜನರು ಬರುವರೇ ಎಂಬ ಪ್ರಶ್ನೆ ಎಲ್ಲರ ಮನಸ್ಸಿನಲ್ಲಿ ಮೂಡಿದೆ. ರಾತ್ರಿ ಅವಧಿಯಲ್ಲಿ ಮಹಿಳೆಯರ ರಕ್ಷಣೆ ಹೇಗೆ (ಅವರು ಗ್ರಾಹಕರಾಗಿರಬಹುದು ಇಲ್ಲವೆ ಕೆಲಸ ಮಾಡುವ ಸಿಬ್ಬಂದಿ ಆಗಿರಬಹುದು) ಎಂಬ ಪ್ರಶ್ನೆಯೂ ಕಾಡುತ್ತದೆ.

ರಾತ್ರಿ ಇಡೀ ಅಂಗಡಿಗಳನ್ನು ತೆರೆಯಲು ಮಾಲೀಕರು ಹೆಚ್ಚಿನ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕಾಗುತ್ತದೆ,‌ ಅವರಿಗೆ ಹೆಚ್ಚಿನ ವಿದ್ಯುತ್‌ ಬಿಲ್‌ ಬರುತ್ತದೆ. ಹೀಗೆ ಖರ್ಚು ವೆಚ್ಚಗಳಲ್ಲಾಗುವ ಏರಿಕೆಗೆ ಅನುಗುಣವಾಗಿ, ಆದಾಯವೂ ಏರಿಕೆ ಆದೀತೇ? 1961ರ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆಯಲ್ಲಿ ಮಾಡಿರುವ ಈ ಬದಲಾವಣೆಗೆ ಮೆಟ್ರೊ, ಬಿಎಂಟಿಸಿಗಳಂತಹ ಸಾರ್ವಜನಿಕ ಸಾರಿಗೆ ಸಂಸ್ಥೆಗಳು ಸಹ ತಮ್ಮ ಕೆಲಸದ ಅವಧಿಯನ್ನು ಹೆಚ್ಚಿಸುವ ಮೂಲಕ ಬೆಂಬಲ ನೀಡುತ್ತವೆಯೇ? ಎಲ್ಲಕ್ಕಿಂತ ಮಿಗಿಲಾಗಿ, ಕೋವಿಡ್‌ ಪಿಡುಗಿನಿಂದಾಗಿ ಆರ್ಥಿಕ ಹಿಂಜರಿತ ಅನುಭವಿಸಿರುವ ಈ ಸಂದರ್ಭದಲ್ಲಿ, ವಿಸ್ತರಿತ ಅವಧಿಯಲ್ಲಿ ವೆಚ್ಚ ಮಾಡಲು ಬೇಕಾದಷ್ಟು ಹಣ ಜನರ ಬಳಿ ಇದೆಯೇ? ಪ್ರಶ್ನೆಗಳು ಹಲವು ಇವೆ.

ಬದಲಾದ ನಿಯಮದಲ್ಲಿ ಪೊಲೀಸ್‌ ವ್ಯವಸ್ಥೆ: ಬೆಂಗಳೂರು ಹಾಗೂ ಇತರ ಪ್ರಮುಖ ನಗರಗಳಲ್ಲಿ ಮೂರು ಹಂತದ ಗಸ್ತು ವ್ಯವಸ್ಥೆ ಜಾರಿಯಲ್ಲಿದೆ. ಹಗಲಿಡೀ ಒತ್ತಡದ ಅವಧಿಯ ನಂತರ, ರಾತ್ರಿ ವೇಳೆಯಲ್ಲಿ ದ್ವಿಚಕ್ರ ವಾಹನ ಹಾಗೂ ಕಾರುಗಳ ಓಡಾಟದ ಪ್ರಮಾಣ ನಗರದಲ್ಲಿ ಕಡಿಮೆಯಾಗುತ್ತದೆ. ಆದರೆ, ಹೊಸ ನಿಯಮ ಜಾರಿಯಾದ ನಂತರ ರಾತ್ರಿಯಲ್ಲೂ ಜನರ ಓಡಾಟ ಹೆಚ್ಚಾಗಬಹುದು. ಇದರಿಂದ ಗಸ್ತು ವ್ಯವಸ್ಥೆಗೆ ಹೆಚ್ಚಿನ ಸಿಬ್ಬಂದಿ ಹಾಗೂ ಇತರ ಸಂಪನ್ಮೂಲಗಳ ಅಗತ್ಯ ಬೀಳುತ್ತದೆ. ಆದ್ದರಿಂದ ರಾತ್ರಿ 10ರಿಂದ 1 ಗಂಟೆಯವರೆಗಿನ, ಕಡಿಮೆ ಒತ್ತಡದ ಕೆಲಸದ ಅವಧಿ ಸಹ ಇನ್ನುಮುಂದೆ ಪೊಲೀಸರಿಗೆ ಇಲ್ಲವಾಗಲಿದೆ.

ರಾತ್ರಿ ಸಂಭವಿಸಬಹುದಾದ ಗಂಭೀರವಾದ ಅಪರಾಧಗಳ ತಡೆಗಾಗಿ ಅವರು ಹೆಚ್ಚಿನ ಸಿದ್ಧತೆಗಳನ್ನು ಮಾಡಬೇಕೊಳ್ಳಬೇಕಾಗುತ್ತದೆ. ಆದ್ದರಿಂದ, ಪೂರ್ಣಪ್ರಮಾಣದ ಮೂರು ಶಿಫ್ಟ್‌ಗಳಲ್ಲಿ ಪೊಲೀಸರು ಕೆಲಸ ಮಾಡಬೇಕಾಗುತ್ತದೆ. ಆದರೆ, ಪೊಲೀಸ್ ಇಲಾಖೆಯಲ್ಲಿ ಸದ್ಯ ಇರುವ ಸಂಪನ್ಮೂಲಗಳು ಪೂರ್ಣಪ್ರಮಾಣದಲ್ಲಿ ಒಂದು ಶಿಫ್ಟ್‌ ನಿರ್ವಹಿಸುವಷ್ಟೂ ಇಲ್ಲ ಎನ್ನುವುದು ವಾಸ್ತವ.

ಹೆಚ್ಚು ಓಡಾಟ– ಹೆಚ್ಚು ಅಪರಾಧ: ರಾತ್ರಿ ವೇಳೆಯಲ್ಲಿ ಜನರ ಓಡಾಟ ಹೆಚ್ಚುವುದರಿಂದ ವೃತ್ತಿಪರ ಅಪರಾಧಿಗಳ ‘ಕೆಲಸದ ಅವಧಿ’ಯೂ ಹೆಚ್ಚಲಿದೆ! ಜೇಬುಗಳ್ಳತನ, ಸರಗಳ್ಳತನ, ನಕಲಿ ವಸ್ತುಗಳ ಮಾರಾಟ, ನಂಬಿಸಿ ಮೋಸಮಾಡುವುದು ಅಷ್ಟೇ ಅಲ್ಲ ಕಳ್ಳತನದ ಪ್ರಮಾಣವೂ ಹೆಚ್ಚಾಗಲಿದೆ. ಮಹಿಳೆಯರ ಮೇಲೆ ನಡೆಯುವ ಅಪರಾಧಗಳ ಕಡೆಗೂ ಗಮನಹರಿಸಿ, ಅವುಗಳನ್ನು ತಡೆಯಲು ಪೊಲೀಸರು ಪರಿಣಾಮಕಾರಿ ಯೋಜನೆಯನ್ನು ರೂಪಿಸಬೇಕಾಗುತ್ತದೆ.

ಸಮುದಾಯ ಪೊಲೀಸ್‌– ಕಳಕೊಂಡ ಅವಕಾಶ: ವಿಸ್ತರಿತ ವಹಿವಾಟಿನ ಅವಧಿಯಲ್ಲಿ ಯಾವುದೇ ಎಡವಟ್ಟುಗಳು ಆಗದಂತೆ ಪೊಲೀಸ್‌ ನಾಯಕತ್ವ ಮುನ್ನೆಚ್ಚರಿಕೆ ವಹಿಸಬೇಕು. ಹಠಾತ್ತನೆ ಲಾಕ್‌ಡೌನ್‌ ಅನ್ನು ಜಾರಿ ಮಾಡಿದಾಗ, ಏನು ಮಾಡಬೇಕೆಂದು ತಿಳಿಯದೆ, ಮಾಡಿಕೊಂಡ ಎಡವಟ್ಟುಗಳು ಪಾಠವಾಗಬೇಕು. ಹೊಸ ಪರಿಕಲ್ಪನೆಗಳನ್ನು ಹೊಂದಿದ, ಸಾಧ್ಯಾಸಾಧ್ಯತೆಗಳನ್ನು ಊಹಿಸಬಲ್ಲ ನಾಯಕತ್ವದಿಂದ ಈ ಸನ್ನಿವೇಶವನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯ.

ಸಮರ್ಪಕವಾಗಿ ರೂಪಿಸಿದ ‘ಸಮುದಾಯ ಪೊಲೀಸ್‌’ ವ್ಯವಸ್ಥೆಯು ಕನಿಷ್ಠ ನಗರ ಪ್ರದೇಶಗಳಲ್ಲಾದರೂ ಇಂತಹ ಪರಿಸ್ಥಿತಿಯನ್ನು ನಿಭಾಯಿಸಲು ಪೊಲೀಸ್‌ ಇಲಾಖೆಗೆ ಸಹಕಾರಿಯಾಗುತ್ತಿತ್ತು. ಆದರೆ, ‘ಸಮುದಾಯ ಪೊಲೀಸ್‌’ ವ್ಯವಸ್ಥೆ ಕುರಿತು ಅವಗಣನೆ ಮಾಡುತ್ತಾ ಬಂದಿದ್ದರಿಂದ ಈಗ ಪ್ರತಿಯೊಂದನ್ನೂ ಮೊದಲಿನಿಂದಲೇ ಆರಂಭಿಸುವಂತಹ ಸ್ಥಿತಿ ಎದುರಾಗಿದೆ. ನಾಗರಿಕ ಸ್ವಯಂಸೇವಕರನ್ನು ಪಟ್ಟಿಮಾಡುವ ಕೆಲಸವನ್ನು ಬಹುತೇಕ ಶೂನ್ಯದಿಂದ ಆರಂಭಿಸಬೇಕಾಗಿದೆ. ಅಪರಾಧ ಕೃತ್ಯಗಳು ನಡೆಯಬಹುದಾದ ‘ಕ್ರೈಮ್‌ ಹಾಟ್‌ ಸ್ಪಾಟ್‌’ಗಳನ್ನು ಮುಂಚಿತವಾಗಿಯೇ ಗುರುತಿಸಿ ಮ್ಯಾಪಿಂಗ್‌ ಮಾಡುವುದೂ ಮುಖ್ಯವಾಗಿದೆ.

ಒಂದು ಪ್ರಯೋಗ: ಶಾಂತಿ ಕದಡಲು ಮದ್ಯಪಾನವೇ ಪ್ರಮುಖ ಕಾರಣ ಎಂಬ ನಂಬಿಕೆ ಇದೆ. ಈ ದೃಷ್ಟಿಯಿಂದ ನೋಡಿದರೆ, ರಾತ್ರಿ ವೇಳೆಯಲ್ಲಿ ಮದ್ಯದಂಗಡಿ, ಪಬ್‌ಗಳನ್ನು ತೆರೆಯಲು ಅವಕಾಶ ಇರುವುದಿಲ್ಲ ಎಂಬುದು ಸಮಾಧಾನದ ವಿಚಾರವಾಗಿದೆ. ಗ್ರಾಹಕರನ್ನು ಸೆಳೆಯಲು ಯಾವ್ಯಾವ ನವೀನ ತಂತ್ರಗಳನ್ನು ಅನುಸರಿಸುತ್ತಾರೆ ಎನ್ನುವುದರ ಮೇಲೆ, 24 ಗಂಟೆಯೂ ವ್ಯಾಪಾರಕ್ಕೆ ಅವಕಾಶ ನೀಡುವ ಸರ್ಕಾರದ ಯೋಜನೆಯ ಯಶಸ್ಸು ಅವಲಂಬಿಸಿರುತ್ತದೆ.

ಅದರಂತೆ, ಅಪರಾಧಮುಕ್ತವಾಗಿ ಮತ್ತು ಶಾಂತಿ ಕದಡದ ರೀತಿಯಲ್ಲಿ ರಾತ್ರಿ ಇಡೀ ವ್ಯಾಪಾರ ವಹಿವಾಟಿಗೆ ಅವಕಾಶ ಮಾಡಿಕೊಡುವಲ್ಲಿ ಪೊಲೀಸರು ಎಷ್ಟು ಯಶಸ್ವಿಯಾಗುತ್ತಾರೆ ಎಂಬುದು, ಪೊಲೀಸ್‌ ನಾಯಕತ್ವವು ಎಷ್ಟು ಸೃಜನಶೀಲವಾಗಿದೆ ಎಂಬುದನ್ನು ಅವಲಂಬಿಸಿದೆ. ಸರ್ಕಾರದ ಈ ನಿರ್ಧಾರವು ಒಂದು ಪ್ರಯೋಗ. ಅದರ ಯಶಸ್ಸು ಸಂಪೂರ್ಣವಾಗಿ ಪೊಲೀಸ್‌ ನಾಯಕತ್ವ ಮತ್ತು ಕಾರ್ಯವೈಖರಿಯನ್ನು ಅವಲಂಬಿಸಿರುತ್ತದೆ.

ಹೆಚ್ಚು ಕೆಲಸ: ಸಂಪನ್ಮೂಲಗಳು ಅಷ್ಟೇ!: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊಸಹೊಸ ಕಾನೂನುಗಳನ್ನು ರೂಪಿಸುತ್ತಲೇ ಇವೆ. ಆದರೆ, ಅವುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಅಗತ್ಯವಾದ ಪೊಲೀಸ್‌ ಇಲಾಖೆಯ ಬಲವರ್ಧನೆಯತ್ತ ಗಮನ ಹರಿಸುತ್ತಿಲ್ಲ. ರಾತ್ರಿಯಿಡೀ ವ್ಯಾಪಾರ ವಹಿವಾಟಿಗೆ ಅವಕಾಶ ನೀಡುವ ಯೋಜನೆಯು ಪೊಲೀಸರ ಮೇಲೆ ಇನ್ನೊಂದು ಹೊರೆಯಾಗಿದೆ. ಇರುವ ಸಂಪನ್ಮೂಲದಲ್ಲೇ ಈ ಹೆಚ್ಚುವರಿ ಹೊಣೆಯನ್ನು ನಿರ್ವಹಿಸಲು ಪೊಲೀಸರು ಹೆಣಗಾಡಬೇಕಾಗುತ್ತದೆ.

ಲೇಖಕ: ಕರ್ನಾಟಕದ ನಿವೃತ್ತ ಪೊಲೀಸ್‌ ಮಹಾ ನಿರ್ದೇಶಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು