ಶನಿವಾರ, ನವೆಂಬರ್ 28, 2020
22 °C

PV Web Exclusive: ಮುದ್ದುಶ್ರೀ ದಿಬ್ಬ ಎಂಬ ಸಾಂಸ್ಕೃತಿಕ ಕೇಂದ್ರ

ಸುಶೀಲಾ ಡೋಣೂರ Updated:

ಅಕ್ಷರ ಗಾತ್ರ : | |

Prajavani

ಸಾಹಿತ್ಯ, ಕಲೆ, ರಂಗಭೂಮಿ, ಬಡಮಕ್ಕಳ ಶಿಕ್ಷಣ, ಪ್ರಕೃತಿಯ ಸಾಂಗತ್ಯದ ಸೆಳೆತ ಸರ್ಕಾರಿ ನೌಕರಿಯನ್ನೂ ತೊರೆದು ಕಾಡು ಸೇರುವಂತೆ ಮಾಡಿತ್ತು. ನಗರಜೀವನದ ಥಳಕು–ಬಳಕನ್ನೂ, ಆರಾಮದಾಯಕ ಬದುಕನ್ನೂ ಬದಿಗೆ ಸರಿಸಿ, ಸುಮಾರು ಎರಡು ದಶಕಗಳ ಕಾಲ ದುಡಿದು ಕೂಡಿಟ್ಟ ಹಣವನ್ನೆಲ್ಲಾ ಹೊತ್ತು ತಂದು ‘ದಿಬ್ಬ’ ಕಟ್ಟಿದ ಎಂ. ಭೈರೇಗೌಡರ ಕತೆಯೇ ‘ಮುದ್ದುಶ್ರೀ ದಿಬ್ಬ’ ಎನ್ನುವ ಅನನ್ಯ ಸಾಂಸ್ಕೃತಿಕ ಕೇಂದ್ರದ ಕತೆಯೂ ಆಗಿದೆ.

ಬೆಂಗಳೂರಿನಿಂದ ಸುಮಾರು 60 ಕೀಮೀ. ಅಂತರದಲ್ಲಿರುವ ಮುದ್ದುಶ್ರೀ ದಿಬ್ಬಕ್ಕೆ ಒಂದು ಘನತೆಯನ್ನು ತುಂಬಿದವರು ಎಂ. ಭೈರೇಗೌಡರು. ಈ ದಿಬ್ಬವನ್ನು ಸಾಂಸ್ಕೃತಿಕ ನೆಲೆಯನ್ನಾಗಿ ರೂಪಿಸಲು ತಪಸ್ಸಿನ ರೀತಿಯಲ್ಲಿ ಕೆಲಸ ಮಾಡುತ್ತ ಬಂದಿದ್ದಾರೆ. ಪ್ರಕೃತಿಯ ಸ್ವಾಭಾವಿಕ ಸಿರಿಯನ್ನು, ಹಳ್ಳಿಯ ನೈಸರ್ಗಿಕ ಚೆಲುವನ್ನು ಒಳಗೊಂಡಿರುವ ದಿಬ್ಬದಲ್ಲಿ ಕಲಾ ಕಾರ್ಯಕ್ರಮಗಳು, ಸಾಂಸ್ಕೃತಿಕ ಚಟುವಟಿಕೆಗಳು, ಶೈಕ್ಷಣಿಕ ಶಿಬಿರ–ಸಮಾವೇಶಗಳು ನಿರಂತರವಾಗಿ ನಡೆಯುತ್ತಿರುತ್ತವೆ.

ಹಸಿರು ಕಾನನದ ನಟ್ಟ ನಡುವೆ ಪ್ರಕೃತಿಯೊಂದಿಗೆ ಸಹಬಾಳ್ವೆ ನಡೆಸುತ್ತ; ನಗರವನ್ನು–ಹಳ್ಳಿಗಳನ್ನು, ಬೆಟ್ಟ–ಗುಡ್ಡಗಳೊಂದಿಗೆ ಹೆಣೆಯುವ ಈ ದಿಬ್ಬ ಭೈರೇಗೌಡ ಅವರ ಕನಸಿನ ಕೂಸು. ರಾಮನಗರದಿಂದ ಕನಕಪುರ ರಸ್ತೆಯಲ್ಲಿ ಬರುವ ರೇವಣಸಿದ್ದೇಶ್ವರ ಬೆಟ್ಟದ ಕಡೆಗೆ ಎಲ್ಲರೂ ತಿರುಗಿ ನೋಡುವಂತೆ ಮಾಡುವಲ್ಲಿ, ಈ ದಿಬ್ಬವನ್ನು ಜಗದ್ವಿಖ್ಯಾತ ಸಾಂಸ್ಕೃತಿಕ ಕೇಂದ್ರವಾಗಿ ಮಾಡುವಲ್ಲಿ ಅವರು ಸಾಕಷ್ಟು ಶ್ರಮವಹಿಸಿದ್ದಾರೆ.


ರಂಗಮಂದಿರ

ಹಣಕ್ಕಾಗಿ ದಣಿಯುತ್ತ, ಹಣದ ಹಿಂದೆ ನಿರರ್ಥಕ ಹೆಜ್ಜೆಗಳನ್ನು ಹಾಕುವ ಬದಲು, ತಂದೆ ಕೆ.ಎಸ್‌. ಮುದ್ದಪ್ಪ ಅವರ ಆಸೆಯಂತೆ ಸಮಾಜಕ್ಕಾಗಿ, ಕಲೆ–ಸಂಸ್ಕೃತಿಗಾಗಿ ಹೈರಾಣಾಗುವ ಮನಸ್ಸು ಮಾಡಿದವರು ಭೈರೇಗೌಡರು. ಈ ದಣಿವಿನಲ್ಲಿ ಎಂಥ ಸುಖವಿದೆ ಎನ್ನುವುದನ್ನು ಕಂಡುಂಡು ತಣಿದವರು. ದುಡಿಮೆಯನ್ನೊಂದೇ ಬಲ್ಲ ಸುತ್ತಮುತ್ತಲಿನ ಹಳ್ಳಿಗರಲ್ಲೂ ಜನಪದ ಕಲೆ, ಸಾಹಿತ್ಯ, ಸಂಗೀತ, ರಂಗಭೂಮಿಯ ಸಿಹಿಯುಣಿಸಿದವರು.

18 ವರ್ಷಗಳ ಕಾಲ ಸರ್ಕಾರಿ ನೌಕರಿಯ ಮುಲಾಜಿಗೆ ಬಿದ್ದು ಮಹಾನಗರದಲ್ಲಿ ಬಾಳ ರಥ ಎಳೆಯುವಾಗೆಲ್ಲಾ ‘ಈ ಬದುಕಿಗೆ ಏನರ್ಥ?’ ಎನ್ನುವ ಪ್ರಶ್ನೆ ಅವರನ್ನು ಕಾಡುತ್ತಲೇ ಇತ್ತು. ಬೆಂಗಳೂರಿನಿಂದ ತಮ್ಮ ಹುಟ್ಟೂರು ಕೃಷ್ಣಾಪುರದೊಡ್ಡಿಗೆ ಪಯಣಿಸುವಾಗೆಲ್ಲಾ ಮನಸಿಗೆ ಏನೊ ಉಲ್ಲಾಸ, ಎಂಥದ್ದೊ ನಿರಾಳ. ಅಲ್ಲೇ ತಳವೂರಬೇಕೆಂಬ ಹಂಬಲ. ಎಲ್ಲಾ ಧೈರ್ಯವನ್ನು ಒಟ್ಟುಗೂಡಿಸಿಕೊಂಡು, ನೌಕರಿಗೆ ವಿದಾಯ ಹೇಳಿ, ಅಷ್ಟೂ ಹಣವನ್ನು ತಂದು ತಮ್ಮೂರಿಂದ 6–7ಕೀ.ಮೀ ಅಂತರದಲ್ಲಿ ಮೂರು ಎಕರೆ ಬಂಜರು ಭೂಮಿಯನ್ನು ಕೊಂಡಾಗ ಆದ ಸಂತಸಕ್ಕೆ ಪಾರವೇ ಇರಲಿಲ್ಲ. ‘ಬಂಜರು ಭೂಮಿಯ ಮೇಲೆ ಹಣ ಸುರಿದು ತಪ್ಪು ಮಾಡಿದೆ’ ಎಂದವರು ಜೊತೆಗಿರುವಾಗಲೇ ಆ ಭೂಮಿಯನ್ನು ದೇಶ–ವಿದೇಶಗಳಿಂದ ಜನ ಹುಡುಕಿಕೊಂಡು ಬರುವಂಥ ಅಪರೂಪದ ಸಾಂಸ್ಕೃತಿಕ ಕೇಂದ್ರವನ್ನಾಗಿ ಕಟ್ಟಿದ ಹಿರಿಮೆ ಭೈರೇಗೌಡ ಅವರದು.

ದಿಬ್ಬ ಕಣ್ಬಿಟ್ಟು 7–8 ವರ್ಷಗಳಲ್ಲಿ ಭೈರೇಗೌಡರು ಹಮ್ಮಿಕೊಂಡ ಕಾರ್ಯಕ್ರಮಗಳಿಗೆ ಲೆಕ್ಕವೇ ಇಲ್ಲ. ಓದು–ಬರಹ, ಪುಟ್ತಕ ಪ್ರಕಟಣೆಯಂತಹ ಸಾಹಿತ್ಯಕ್ಕೆ ಸಂಬಂಧಿಸಿದ ಚಟುವಟಿಕೆಗಳ ಜೊತೆಗೆ ಸಾಹಿತ್ಯ ಕಮ್ಮಟ, ಯಕ್ಷಗಾನ ತರಬೇತಿ ಶಿಬಿರ, ಗೀತ ಗಾಯನ, ಸಮ್ಮೇಳನಗಳು, ಸಮಾವೇಶಗಳು, ಭಾವಗೀತ ಗಾಯನ, ಮಕ್ಕಳ ಶಿಬಿರ, ಜನಪದ ಕಲೆಗಳ ಪ್ರಾತ್ಯಕ್ಷಿಕೆಗಳು ಸೇರಿದಂತೆ ಹಲವಾರು ಕಾರ್ಯಕ್ರಮಗಳಿಗೆ ದಿಬ್ಬ ವೇದಿಕೆಯಾಗಿದೆ.


ಭೈರೇಗೌಡ

ನಾಗಾಭರಣ ಅವರ ಜೋಕುಮಾರಸ್ವಾಮಿ  ನಾಟಕ, ಸಿ. ಅಶ್ವತ್ಥ್ ಅವರ ಗೀತ ಗಾಯನ, ಶಿವಮೊಗ್ಗ ಸುಬ್ಬಣ್ಣ ಅವರಿಂದ ಸುಗಮ ಸಂಗೀತ, ಸವಿತ ನುಗಡೋಣಿ ಅವರ ವಚನ ಗಾಯನ, ಡೊಳ್ಳಿನ ಗುಡುಗು-ಸೋಬಾನೆ ಬೆಡಗು, ಕರಪಾಲ ಮೇಳ, ಲಂಬಾಣಿ ನೃತ್ಯ, ಕೂಚುಪುಡಿ ನೃತ್ಯ, ಭರತನಾಟ್ಯ ಹೀಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ದಿಬ್ಬದಲ್ಲಿ ನಡೆದಿವೆ.

ರಂಗಭೂಮಿಯ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಅವರು, ಬಯಲು ನಾಟಕ, ರಂಗಭೂಮಿ ಶಿಬಿರ, ರಂಗಚಟುವಟಿಕೆಗಳನ್ನು ನಡೆಸುತ್ತ ಬಂದಿದ್ದಾರೆ. ನಗರ ಕೇಂದ್ರೀಕೃತ–ವ್ಯಾಪಾರ ಮನೋಭಾವದ ರಂಗಭೂಮಿಗಿಂತ ವಿಭಿನ್ನವಾಗಿ, ವಿಶಿಷ್ಟವಾಗಿ ರಂಗ ಚಟುವಟಿಕೆಗಳನ್ನು ನಡೆಸಬೇಕೆನ್ನುವ ತುಡಿತ ಅವರದು. ಇಲ್ಲಿ ಸಿದ್ಧಗೊಂಡ ಸುಮಾರು 40 ನಾಟಕಗಳು ದೇಶ–ವಿದೇಶಗಳಲ್ಲಿ ಪ್ರದರ್ಶನ ಕಂಡಿವೆ.

ಬಡ ಮಕ್ಕಳಿಗೆ ಶೈಕ್ಷಣಿಕ ಅನುಕೂಲತೆಗಳು ಸಿಗುವಂತಾಗಬೇಕು ಎನ್ನುವುದು ತಂದೆ ಮುದ್ದಪ್ಪನವರ ಬಯಕೆಯಾಗಿತ್ತು. ತನ್ನೂರಿನ ಪ್ರತಿಭಾವಂತ ಬಡ ವಿದ್ಯಾರ್ಥಿನಿಯೊಬ್ಬಳ ಓದಿಗೆ ಸಣ್ಣ ಸಹಾಯ ಮಾಡುವ ಮೂಲಕ ತಂದೆಯ ಕನಸಿನತ್ತ ಮೊದಲಹೆಜ್ಜೆಯನ್ನಿಟ್ಟರು. ರಾಮನಗರ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಪ್ರೌಢಶಾಲೆಗಳಲ್ಲಿ ಕನ್ನಡದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸುವ ಉಪನ್ಯಾಸ ಮಾಲಿಕೆ ನಡೆಸಿದ್ದಾರೆ. ರಾಮನಗರ,  ಮಾಗಡಿ, ಕನಕಪುರ ಸೇರಿದಂತೆ ಅನೇಕ ಸರ್ಕಾರಿ, ಅರೆಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಉಚಿತ ಪುಸ್ತಕಗಳನ್ನು ವಿತರಿಸಿದ್ದಾರೆ. ಈ ಮಕ್ಕಳಿಗಾಗಿ ರಂಗತರಬೇತಿ ಶಿಬಿರಗಳನ್ನು ಆಯೋಜಿಸಿದ್ದಾರೆ. ಬುಡಕಟ್ಟು ಹಾಡಿ, ಗ್ರಾಮೀಣ ಪ್ರದೇಶ ಹಾಗೂ ನಗರ ಪ್ರದೇಶದ ಮಕ್ಕಳಲ್ಲಿ ರಂಗಭೂಮಿ ಆಸಕ್ತಿಯನ್ನು ಹುಟ್ಟುಹಾಕಿದ್ದಾರೆ.

ಮುಂದಿನ ದಿನಗಳಲ್ಲಿ ಇದನ್ನೊಂದು ಸುಸಜ್ಜಿತ ಅಧ್ಯಯನ ಕೇಂದ್ರವನ್ನಾಗಿ ರೂಪಿಸಬೇಕು ಎನ್ನುವುದು ಅವರ ಕನಸು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು