‘ಜ ... ಜ... ಜ... ಗಾಳಿ ವಿದ್ಯ, ಬಯಲು ವಿದ್ಯ, ಲೋಕದ ವಿದ್ಯ. ವಿದ್ಯ ಅಂದ್ರ ಚಮತ್ಕಾರ. ಅದು ಭಾಳ ದೊಡ್ಡದಿರತೈತಿ. ಇಲ್ಲೊಂದ್ ಬೀಜ ಐತ್ರಿ. ಈ ಬೀಜಕ್ಕ ಮೂರ ಮಂತ್ರ-ಮೂರು ತಂತ್ರ. ಹ್ಞೂತ್... ಹರ ಹರ ಹರ ಹರ...’

ಮಂತ್ರದ ರೀತಿಯಲ್ಲಿ ಈ ಸಾಲುಗಳು ಕಿವಿಯ ಮೇಲೆ ಬಿದ್ದವು. ಇದೇನಪ್ಪ ಹೊಸ ಮಂತ್ರ, ಏನಿದರ ಮಜಕೂರು ಎನ್ನುತ್ತಾ ಆ ಧ್ವನಿ ಕೇಳಿಬರುತ್ತಿದ್ದ ಗುಂಪಿನ ಕಡೆಗೆ ಹೆಜ್ಜೆ ಹಾಕಿದೆ. ದಾರಿ ಪಕ್ಕದ ಮರದ ಅಡಿಯಲ್ಲಿ ಏನೋ ಗಡಿಬಿಡಿ ನಡೆದಿತ್ತು. ಮಕ್ಕಳು ಹಾಗೂ ಮಹಿಳೆಯರ ಗುಂಪುಗೂಡಿತ್ತು. ಆ ಗುಂಪಿನೊಳಗಿನಿಂದ ಚಿಂವ್ ಎನ್ನುವ ಸದ್ದು. ಥರಾವರಿ ಮಂತ್ರಗಳ ಉಚ್ಚಾರ. ಮರುಕ್ಷಣವೇ ನಗೆಯ ಅಲೆ. ಏನಿದರ ಮಜಕೂರು ಎಂದು ಕುತೂಹಲ. ಗುಂಪಿನ ಮಧ್ಯೆ ವ್ಯಕ್ತಿಯೊಬ್ಬರು ಒಂದು ಗಂಟಿನ ಚೀಲದೊಂದಿಗೆ ವಿರಾಜಮಾನರಾಗಿದ್ದರು. ಮಂತ್ರ ಪಠಣ ಮಾಡುತ್ತಿದ್ದುದು ಅವರೇ. ‘ಈ ಬೀಜಕ್ಕ ಮೂರ ಮಂತ್ರ-ಮೂರು ತಂತ್ರ. ಹ್ಞೂತ್... ಹರ ಹರ ಹರ ಹರ...’ ಎನ್ನುತ್ತಲೇ ಆ ಬೀಜವನ್ನು ಬಾಯಲ್ಲಿಟ್ಟುಕೊಂಡು ಬಸವಣ್ಣನ ಚಿಕ್ಕ ಮೂರ್ತಿಯನ್ನು ಹೊರತೆಗೆದುಬಿಟ್ಟರು. ನೆರೆದವರೆಲ್ಲ ಅವಾಕ್ಕಾಗಿ ನೋಡುತ್ತಿದ್ದರು.

ಆ ವ್ಯಕ್ತಿ ಮುಖಕ್ಕೆ ಕುಂಕುಮ ಮತ್ತು ವಿಭೂತಿ ಬಳಿದುಕೊಂಡಿದ್ದರು. ಲಿಂಗದಕಾಯಿ, ರುದ್ರಾಕ್ಷಿ ಮಾಲೆ ಕೊರಳು ತುಂಬಿದ್ದವು. ತಲೆಗೆ ಸುತ್ತಿರುವ ರುಮಾಲಿಗೆ ಮುತ್ತಿನ ಮಣಿಗಳ ಹಾರದಿಂದ ಸಿಂಗಾರ, ತುದಿಯಲ್ಲಿ ನವಿಲುಗರಿಗಳ ಅಲಂಕಾರ ಸಹ ಇತ್ತು. ಅಲ್ಲದೆ, ಬಣ್ಣದ ಬಟ್ಟೆಗಳಿಂದ ಮಾಡಿದ ಪೋಷಾಕು ಧರಿಸಿದ್ದ ಅವರು ಆಕರ್ಷಕವಾಗಿ ಕಾಣುತ್ತಿದ್ದರು. ತಮ್ಮದೇ ಆದ ಶೈಲಿಯಲ್ಲಿ ಮಾತನಾಡುತ್ತ, ಚಮತ್ಕಾರಗಳನ್ನು ಮಾಡುತ್ತ ಗುಂಪಿನ ಕೇಂದ್ರಬಿಂದುವಾಗಿದ್ದರು.

ತಮ್ಮ ಕೈಚಳಕದಿಂದ ಒಂದಾದ ಮೇಲೊಂದರಂತೆ ಲಾಡು ಗಾತ್ರದ ಸುಮಾರು 10 ಕಲ್ಲುಗಳನ್ನು ನುಂಗಿ, ನಮ್ಮೊಂದಿಗೆ ಮಾತನಾಡುತ್ತಲೇ ಅದೇ ಕಲ್ಲುಗಳನ್ನು ಒಂದೊಂದಾಗಿ ಗಂಟಲಿನಿಂದ ಹೊರತೆಗೆದು ಎಲ್ಲರನ್ನು ಚಕಿತಗೊಳಿಸಿದರು. ತೆಂಗಿನ ಕಾಯಿ (ಗಿಟಗ) ದಾರದ ಅಂತರದಲ್ಲಿ ಅವರು ಹೇಳಿದಂತೆಯೇ ಸಂಚರಿಸುತ್ತಿತ್ತು. ಜೋಳಿಗೆಯಿಂದ ಆಗಾಗ ವಿಧವಿಧ ಗೊಂಬೆಗಳನ್ನು ಹೊರತೆಗೆದು ಚಿಕ್ಕ ಮಕ್ಕಳನ್ನು ಆಕರ್ಷಿಸುತ್ತಿದ್ದರು. ಹಾವು, ಚೇಳು, ಕಪ್ಪೆಗಳನ್ನು ತೆಗೆದು ಭಯಭೀತಗೊಳಿಸುತ್ತಿದ್ದರು. ಆಗಾಗ ನಗೆ ಚಟಾಕಿ ಸಿಡಿಸಿ ಹೊಟ್ಟೆ ಹುಣ್ಣಾಗುವಂತೆ ಜನರನ್ನು ನಗಿಸುತ್ತಿದ್ದರು. ಅವರ ಮೋಡಿ ಆಟಕ್ಕೆ ಮನಸೋತ ಮಕ್ಕಳು ಚಪ್ಪಾಳೆ ಬಾರಿಸಿ ಸಂಭ್ರಮಿಸುತ್ತಿದ್ದರು.

ಎಷ್ಟು ನೋಡಿದರೂ ಸಾಲದು, ಮತ್ತೆ ಮತ್ತೆ ನೋಡಬೇಕೆನ್ನಿಸುವ ಈ ಚಮತ್ಕಾರವನ್ನು ಪ್ರದರ್ಶಿಸುವವರು ಬೇರಾರೂ ಅಲ್ಲ; ‘ಸುಡುಗಾಡು ಸಿದ್ಧರು’. ಅವರ ಮಾತು, ಚಮತ್ಕಾರ ಕೂಡ ಅವರ ವೇಷಭೂಷಣಗಳಷ್ಟೇ ಆಕರ್ಷಕವಾಗಿರುತ್ತವೆ. 15ರಿಂದ 20 ನಿಮಿಷಗಳ ಕಾಲ ನಡೆಯುವ ಈ ಚಮತ್ಕಾರವನ್ನು ಒಮ್ಮೆ ನೋಡಿದರೆ ಸಾಕು, ಅದು ಜೀವನದುದ್ದಕ್ಕೂ ನೆನಪಿನಲ್ಲಿ ಉಳಿದುಬಿಡುತ್ತದೆ. ಹಿಂದೆ ರಾಜ ಮಹಾರಾಜರೂ ಇವರನ್ನು ಆಸ್ಥಾನಕ್ಕೆ ಕರೆಸಿ, ಇವರ ಚಮತ್ಕಾರಗಳನ್ನು ವೀಕ್ಷಿಸುತ್ತಿದ್ದರು ಎನ್ನುವ ಮಾತಿದೆ.

ಇಂತಹ ಆಕರ್ಷಕ, ಐತಿಹಾಸಿಕ, ಜನಪದ ಸೊಗಡಿನ ‘ಸುಡುಗಾಡು ಸಿದ್ಧರ ಆಟ’ ಇಂದು ಕ್ಷೀಣಿಸುತ್ತಿದೆ. ಇದನ್ನು ಪ್ರದರ್ಶಿಸುವವರ ಸಂಖ್ಯೆ ನಾಡಿನಾದ್ಯಂತ ದಿನದಿಂದ ದಿನಕ್ಕೆ ಗಣನೀಯವಾಗಿ ಇಳಿಯುತ್ತಿದೆ. ಇಂದಿನ ಪೀಳಿಗೆಯ ನಿರಾಸಕ್ತಿಯಿಂದಾಗಿ ಅಪರೂಪದ ಈ ಸಾಂಪ್ರದಾಯಿಕ ಆಟ ಅವನತಿಯತ್ತ ಸಾಗುತ್ತಿದೆ. ಹೀಗೇ ಆದಲ್ಲಿ ಕೆಲ ವರ್ಷಗಳಲ್ಲಿಯೇ ‘ಸುಡುಗಾಡು ಸಿದ್ಧರ ಆಟ’ ಇತಿಹಾಸದ ಪುಟ ಸೇರುವುದರಲ್ಲಿ ಯಾವುದೇ ಅನುಮಾನ ಇಲ್ಲ.

ಪರಿಶಿಷ್ಟ ಜಾತಿಗೆ ಸೇರುವ ಸುಡುಗಾಡು ಸಿದ್ಧರ 53 ಕುಟುಂಬಗಳು ಪ್ರಸ್ತುತ ಕೊಪ್ಪಳದ ಕಲಕೇರಿ ಗ್ರಾಮದಲ್ಲಿವೆ. ತಾಲ್ಲೂಕಿನಲ್ಲಿರುವ ಸುಡುಗಾಡು ಸಿದ್ಧರ ಒಟ್ಟು ಕುಟುಂಬಗಳ ಸಂಖ್ಯೆಯೂ ಇದೇ ಆಗಿದೆ. ಆದರೆ, ಅದರಲ್ಲಿ ಗುರಪ್ಪ ಗಂಟಿ, ಯಲ್ಲಪ್ಪ ಗಂಟಿ, ಚಂದ್ರಪ್ಪ ಒಂಟೆತ್ತಿನವರ, ರಾಮಣ್ಣ ಗಂಟಿ, ಹುಲುಗಪ್ಪ ಗಂಟಿ, ಸಾಬಣ್ಣ ಒಂಟೆತ್ತಿನವರ ಮತ್ತು ಹನುಮಂತ ಗಂಟಿ ಎಂಬುವವರ ಕುಟುಂಬಗಳು ಮಾತ್ರ ಈ ವೃತ್ತಿಯಲ್ಲಿ ತೊಡಗಿವೆ. ಉಳಿದವರು ಬೇರೆ ಬೇರೆ ವೃತ್ತಿಗಳನ್ನು ಆಯ್ದುಕೊಂಡುಬಿಟ್ಟಿದ್ದಾರೆ. ಕೆಲವರು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆಯಲ್ಲಿದ್ದಾರೆ. ಈ ಸಮುದಾಯದ ರುದ್ರೇಶ್ ಎನ್ನುವವರು ಈಗ ಹೆಚ್ಚುವರಿ ಜಿಲ್ಲಾಧಿಕಾರಿ ಹುದ್ದೆಯಲ್ಲಿದ್ದಾರೆ. ಕೊಪ್ಪಳ ಜಿಲ್ಲೆಯ 50 ಜನ ಮಾತ್ರ ಈ ವೃತ್ತಿ ನಡೆಸುತ್ತಿದ್ದಾರೆ.

ಸುಡುಗಾಡು ಕಾಯುವುದು ಈ ಸಮುದಾಯದ ಮೂಲ ವೃತ್ತಿ. ಕೆಟ್ಟ ಗಳಿಗೆಗಳಲ್ಲಿ ಇವರು ಇಡೀ ಊರಿಗೆ ದಿಗ್ಬಂಧನ ಹಾಕಿ ಜನರನ್ನು ರಕ್ಷಿಸುತ್ತಿದ್ದರು ಎಂದೂ ಹೇಳಲಾಗುತ್ತದೆ. ಊರಲ್ಲಿ ಯಾವುದೇ ಸಮುದಾಯದ ವ್ಯಕ್ತಿ ಮರಣ ಹೊಂದಿದರೂ ಇವರಿಗೆ ಕಾಣಿಕೆ ನೀಡಿಯೇ ಮುಂದಿನ ವಿಧಿವಿಧಾನಗಳನ್ನು ನೇರವೇರಿಸುವ ಪದ್ಧತಿ ಈಗಲೂ ಇದೆ. ಹೆಣ ಹೂಳಲು ತೋಡಿದ ಗುಂಡಿಯಲ್ಲಿ ಇವರು ಕುಳಿತು ಹೊರಬಂದ ನಂತರವೇ ಅದರಲ್ಲಿ ಶವ ಇಡುತ್ತಾರೆ. ಈ ಸಮುದಾಯದ ಕೆಲ ಜನ ಕಾವಿ ಬಟ್ಟೆಯನ್ನು ಧರಿಸುತ್ತಾರೆ.

ಅಳಿವಿನ ಅಂಚಿನಲ್ಲಿರುವ ಈ ಸಮುದಾಯದ ಕಲೆಯನ್ನು ಉಳಿಸುವ ಸಲುವಾಗಿ ಕೆಲ ವರ್ಷಗಳ ಹಿಂದೆ ಜಾತ್ರೆ, ಉತ್ಸವಗಳಿಗೆ ಕರೆದು ಪ್ರದರ್ಶನ ಕೊಡಿಸಲಾಗುತ್ತಿತ್ತು. ಕೆಲ ಶಾಲೆಗಳಲ್ಲೂ ಇವರ ಪ್ರದರ್ಶನ ನಡೆಯುತ್ತಿತ್ತು. ಆದರೆ ಪ್ರಸ್ತುತ ಕೋವಿಡ್ ಕಾರಣದಿಂದ ಯಾವ ಜಾತ್ರೆಯೂ ಇಲ್ಲ, ಯಾವ ಉತ್ಸವವೂ ಇಲ್ಲ. ಶಾಲೆಗಳು ಬಾಗಿಲು ಹಾಕಿಯೇ ವರ್ಷ ಕಳೆದಿದೆ. ಇಂತಹ ಸಂದರ್ಭದಲ್ಲಿ ಈ ಸಮುದಾಯ ಹೆಚ್ಚೇ ಪರಿತಪಿಸಿದೆ.

ತಲೆಯಿಂದ ತಲೆಗೆ ಸಾಗಿ ಬಂದಿರುವ ‘ಸುಡುಗಾಡು ಸಿದ್ಧರ ಆಟ’ವನ್ನು ಅವರದೇ ಸಮುದಾಯದ ಇಂದಿನ ಯುವಜನರು ಯಾಕೋ ಕಡೆಗಣಿಸಿದ್ದಾರೆ. ಈ ವಿದ್ಯೆ ಕಲಿಯಲು ಸಾಕಷ್ಟು ಏಕಾಗ್ರತೆ, ಶ್ರಮ ಬೇಕು. ಇದು ಪುಸ್ತಕದಲ್ಲಿ ನೋಡಿ ಕಲಿಯುವ ವಿದ್ಯೆ ಅಲ್ಲ. ಕಲಿಯುವೆನೆಂದು ಮುಂದೆ ಬರುವ ಅಲ್ಲೊಬ್ಬ, ಇಲ್ಲೊಬ್ಬ ಯುವಕರು ಕೆಲ ದಿನಗಳಲ್ಲೇ ಪಲಾಯನ ಮಾಡಿಬಿಡುತ್ತಿದ್ದಾರೆ ಎನ್ನುವುದು ಈ ಕಲೆಯನ್ನು ದಾಟಿಸಲು ಕಾಯುತ್ತಿರುವ ಹಿರಿಯ ಜೀವಗಳ ಅಳಲು. ತಮ್ಮ ಈ ವಿದ್ಯೆಯನ್ನು ಮರೆಯಾಗದಂತೆ ಕಾಪಿಡಲು ಸರ್ಕಾರದಿಂದ ಏನಾದರೂ ನೆರವಿನಹಸ್ತ ಸಿಕ್ಕೀತೇ ಎನ್ನುವ ನಿರೀಕ್ಷೆಯನ್ನೂ ಇಟ್ಟುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.