ಶುಕ್ರವಾರ, ಸೆಪ್ಟೆಂಬರ್ 17, 2021
30 °C

ಚೊಕ್ಕಾಡಿ @80: ಶಾಲೆಯ ನೆನಪುಗಳು

ಅರವಿಂದ ಚೊಕ್ಕಾಡಿ Updated:

ಅಕ್ಷರ ಗಾತ್ರ : | |

prajavani

‘ಮುನಿಸು ತರವೇ ಮುಗುದೆ...’ ಎಂಬ ಜನಪ್ರಿಯ ಗೀತೆಯ ಮೂಲಕ ‘ಸ್ಟಾರ್‌ವ್ಯಾಲ್ಯೂ’ ಪಡೆದಿರುವ ಸುಬ್ರಾಯ ಚೊಕ್ಕಾಡಿ ಅವರಿಗೆ ಜೂನ್ 29ಕ್ಕೆ ಎಂಬತ್ತು ವರ್ಷ ತುಂಬುತ್ತದೆ. ಇವತ್ತಿಗೂ ಅವರ ಈ ಹಾಡು ಮೊಬೈಲ್‌ಗಳಲ್ಲಿ ‘ಫ್ರೆಶ್’ ಎಂಬಂತೆ ಓಡುತ್ತಲೇ ಇದೆ. ಚೊಕ್ಕಾಡಿಯವರೂ ಹಾಗೆಯೇ. 80 ಆಗಿದೆ ಎನ್ನುವುದು ಅನ್ನಿಸದಂತೆ ಫ್ರೆಶ್‌ ಆಗಿಯೇ ಇದ್ದಾರೆ.

ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಸೇರಿ, ಮುಖ್ಯೋಪಾಧ್ಯಾಯರಾಗಿ ನಿವೃತ್ತರಾದ ನಂತರ, ಯುವಕರಿಗೆ ಸಿಗಬೇಕಾದ ಉದ್ಯೋಗವನ್ನು ಕಿತ್ತುಕೊಳ್ಳಲಾರೆ ಎಂದು ಯಾವುದೇ ಉದ್ಯೋಗಕ್ಕೆ ಕರೆದರೂ ಹೋಗದವರು ಚೊಕ್ಕಾಡಿ. ‘ಅದ್ಯಾಕೆ’ ಎಂದು ಕೇಳಿದರೆ ಅವರ ಹಾಸ್ಯಪ್ರಜ್ಞೆ ಪುಟಿದೇಳುತ್ತದೆ –‘ನಿವೃತ್ತನಾದಾಗ ಬರುತ್ತಿದ್ದ ಸಂಬಳಕ್ಕಿಂತ ಜಾಸ್ತಿ ನಿವೃತ್ತಿ ವೇತನ ಬರುತ್ತಿದೆ. ಹೀಗಿದ್ದರೆ ನಾನು ಕೆಲಸಕ್ಕೆ ಸೇರದೆ, ಸದಾ ನಿವೃತ್ತನಾಗಿಯೇ ಇರಬಹುದಿತ್ತು ಮಾರಾಯ..!’ ಎಂದು ನಗುತ್ತಾರೆ.

ಕನ್ನಡದ ಪ್ರಮುಖ ಕವಿಗಳಲ್ಲಿ ಒಬ್ಬರಾಗಿರುವ ಚೊಕ್ಕಾಡಿ ಅವರ ಶಾಲಾ ಅನುಭವಗಳು ಕುತೂಹಲಕರ. ಅವರ ಬಾಯಲ್ಲೇ ಅದನ್ನು ಕೇಳುವುದೊಂದು ಸೊಗಸು. ಚೊಕ್ಕಾಡಿಯವರು ಶಾಲೆ ಕಲಿತದ್ದು 1946ರಿಂದ 1957ರವರೆಗೆ. ನಂತರ ಎರಡು ವರ್ಷ ಮಂಗಳೂರಿನ ಕೊಡಿಯಾಲಬೈಲಿನ ಶಿಕ್ಷಕರ ತರಬೇತಿ ಶಾಲೆಯಲ್ಲಿ ‘ಬುನಾದಿ ತರಬೇತಿ’.

ಆಗ ಎರಡು ರೀತಿಯ ಶಾಲಾ ವ್ಯವಸ್ಥೆಗಳಿದ್ದವು. ಮೊದಲನೆಯದು ಪ್ರಾಥಮಿಕ ಮತ್ತು ಮಾಧ್ಯಮಿಕ ತರಗತಿಗಳ (1-8) ವ್ಯವಸ್ಥೆ. ಇದರಲ್ಲಿ 8ನೇ ತರಗತಿಗೆ ಪಬ್ಲಿಕ್ ಪರೀಕ್ಷೆ. ಎರಡನೆಯದು 8- 11ವರೆಗಿನ ಪ್ರೌಢ ಶಾಲಾ ಶಿಕ್ಷಣ. ಇದರಲ್ಲಿ 8ರಲ್ಲಿ ಪಬ್ಲಿಕ್ ಪರೀಕ್ಷೆ ಇಲ್ಲ. 11ರಲ್ಲಿ ಬರೆಯಬೇಕಾದ ಪಬ್ಲಿಕ್ ಪರೀಕ್ಷೆಯೇ ಎಸ್ಸೆಸ್ಸೆಲ್ಸಿ.


ಶಿಕ್ಷಕ ವೃತ್ತಿಯಲ್ಲಿದ್ದಾಗ ಚೊಕ್ಕಾಡಿ  ಚಿತ್ರ: ಮುಕುಂದ್

1 ರಿಂದ 5ನೆಯವರೆಗೆ ಮನೆಯ ಸಮೀಪದ ಅಜ್ಜನಗದ್ದೆ ಶಾಲೆಯಲ್ಲಿ ವ್ಯಾಸಂಗ ಮಾಡಿದ ಸುಬ್ರಾಯ ಚೊಕ್ಕಾಡಿ, 6 ಮತ್ತು 7ನೇ ತರಗತಿಯನ್ನು ಪಂಜದ ಬೋರ್ಡ್ ಶಾಲೆಯಲ್ಲಿ ಓದಿದರು. ಆಗ ಪಂಚಾಯತ್, ತಾಲ್ಲೂಕು ಬೋರ್ಡ್, ಜಿಲ್ಲಾ ಬೋರ್ಡ್‌ಗಳು ನಡೆಸುವ ಶಾಲೆಗಳಿದ್ದವು. ಇವುಗಳ ಸಂಪೂರ್ಣ ಹೊಣೆಗಾರಿಕೆ ಆಯಾ ಬೋರ್ಡ್‌ಗಳದ್ದು. ಎರಡನೆಯದು ಸರ್ಕಾರಿ ಶಾಲೆಗಳು. ಇವುಗಳ ಹೊಣೆ ಸರ್ಕಾರದ್ದು.

‘ಪಬ್ಲಿಕ್ ಪರೀಕ್ಷೆ ಎಂದರೆ ಭಯ ಮಾರಾಯ್ರೆ..! 6 ಮತ್ತು 7ನೆ ಕ್ಲಾಸ್‌ ಓದಿದ ಬಳಿಕ, 8ನೆಯ ತರಗತಿಯ ಪಬ್ಲಿಕ್ ಪರೀಕ್ಷೆ ತಪ್ಪಿಸಿಕೊಳ್ಳಲೆಂದೇ ಪಂಜದ ಪ್ರೌಢಶಾಲೆಗೆ 8ನೇ ತರಗತಿಗೆ ಸೇರಿಕೊಂಡದ್ದು. ಆಗ ಪಬ್ಲಿಕ್‌ ಪರೀಕ್ಷೆಯ ಹೆದರಿಕೆಯಿದ್ದ ಎಲ್ಲರ ಉಪಾಯವೂ ಅದೇ ಆಗಿತ್ತು’ ನಕ್ಕರು ಚೊಕ್ಕಾಡಿ. ಓರೆಕೋರೆಗಳಿಲ್ಲದ ಚೊಕ್ಕ ನಗು! 

ಆಗ ಪ್ರಾಥಮಿಕ ಶಾಲೆಯಲ್ಲಿ ಸರಳವಾದ ‘ಸಿರಿಗನ್ನಡ ಪಾಠಮಾಲೆ’ಯಂತಹ 40-50 ಪುಟಗಳ ಪುಸ್ತಕಗಳಿರುತ್ತಿದ್ದವು. ಕನ್ನಡ, ಇಂಗ್ಲಿಷ್, ಗಣಿತ, ವಿಜ್ಞಾನ, ಸಮಾಜ ಅಧ್ಯಯನಗಳಲ್ಲಿ ಕನ್ನಡ ಪಠ್ಯ ಸ್ವಲ್ಪ ದೊಡ್ಡದು. ಗಣಿತದಲ್ಲಿ ಬುನಾದಿ ಮಟ್ಟದ ಗಣಿತವನ್ನು ಕಲಿಸಲಾಗುತ್ತಿತ್ತು. ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರ. ಜಟಿಲ ಪದ್ಧತಿಗಳಿರಲಿಲ್ಲ. ಹೆಚ್ಚಿನದ್ದು ಬಾಯಿ ಲೆಕ್ಕ. ಐದನೆಯ ತರಗತಿಗೆ ಕಾಗುಣಿತ, ಮಗ್ಗಿ, ಬಾಯಿ ಲೆಕ್ಕಗಳು ಮಕ್ಕಳಿಗೆ ಬಂದಾಗಿರುತ್ತಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಶಿಕ್ಷಕರಿಗೆ ಇತರೇ ಕೆಲಸ ಇಲ್ಲದ್ದರಿಂದ ಶಿಕ್ಷಕರು ಶಾಲೆಯಲ್ಲಿ ಯಾವಾಗಲೂ ಲಭ್ಯರಿರುತ್ತಿದ್ದರು.

ಚೊಕ್ಕಾಡಿಯವರು ಪಡೆದ ಶಿಕ್ಷಕರ ತರಬೇತಿಯಲ್ಲಿ ಗಾಂಧಿ ಶಿಕ್ಷಣವನ್ನು ಅನ್ವಯಗೊಳಿಸಲಾಗಿತ್ತು. ಮನೋವಿಜ್ಞಾನವನ್ನು ಬಿಟ್ಟರೆ ಅಧಿಕೃತ ಪಠ್ಯವಿರಲಿಲ್ಲ. ಸಿಲೆಬಸ್ ಕೊಟ್ಟಿರುತ್ತಿದ್ದರು. ಅದಕ್ಕೆ ತಕ್ಕಂತೆ ಉಪನ್ಯಾಸಕರೇ ಪಠ್ಯವನ್ನು ರೂಪಿಸುತ್ತಿದ್ದರು. ಹೇಗೆಂದರೆ, ಚಟುವಟಿಕೆ ಆಧಾರಿತ ತರಬೇತಿಯಲ್ಲಿ ಮೊದಲಿಗೆ ಒಂದು ತೆಂಗಿನಗಿಡ ನೆಡಲು ಹೊಂಡ ತೆಗೆಯುವುದು. ಇದರಲ್ಲಿ ಎಲ್ಲಾ ವಿದ್ಯಾರ್ಥಿಗಳೂ ಭಾಗವಹಿಸಬೇಕು. ಗಣಿತ ಉಪನ್ಯಾಸಕರು ಹೊಂಡದ ಆಕಾರ, ಗಾತ್ರ, ಚೌಕ, ಆಳದಿಂದ ಹೊರತೆಗೆದ ಮಣ್ಣಿನ ಪ್ರಮಾಣ, ತೂಕ ಇವೆಲ್ಲ ಗಮನದಲ್ಲಿ ಇಟ್ಟುಕೊಂಡು ಸಣ್ಣ ಪಠ್ಯ ಬರೆದು ವಿದ್ಯಾರ್ಥಿಗಳಿಗೆ ಹಂಚಬೇಕಿತ್ತು. ಸಮಾಜಶಾಸ್ತ್ರದ ಉಪನ್ಯಾಸಕರು ತೆಂಗಿನ ಗಿಡದ ಲಕ್ಷಣಗಳು, ತೆಂಗಿನ ಗಿಡದ ವಿಧಗಳು, ತೆಂಗು ಬೆಳೆಯುವ ಇತರೇ ಪ್ರದೇಶಗಳು... ಹೀಗೆ ಇವನ್ನು ಪಠ್ಯ ಬರೆದು ಹಂಚಬೇಕು. ಕನ್ನಡ ಭಾಷಾ ಉಪನ್ಯಾಸಕರಾದರೆ ತೆಂಗಿನ ಮರದ ಕುರಿತ ಒಂದು ಕವಿತೆ, ಒಂದು ಪ್ರಬಂಧದ ಪಠ್ಯ ಬರೆಯಬೇಕು. ಪಠ್ಯಗಳು ಪ್ರಥಮ, ದ್ವಿತೀಯ ವರ್ಷಕ್ಕೆ ಆಯಾ ಮಟ್ಟಕ್ಕೆ ತಕ್ಕಂತೆ ವಿಭಿನ್ನ. ವೃತ್ತಿ ಶಿಕ್ಷಣಕ್ಕೆ ವಿಶೇಷ ಆದ್ಯತೆ. ಕೈಮಗ್ಗದಲ್ಲಿ ನೂಲು ತೆಗೆದು ಬಟ್ಟೆ ಮಾಡಿ ವಿದ್ಯಾರ್ಥಿಗಳು ಸರ್ಕಾರಕ್ಕೆ ಕೊಡಬೇಕಿತ್ತು.

ಚೊಕ್ಕಾಡಿಯವರ ತಂದೆ ಅಜ್ಜನಗದ್ದೆ ಗಣಪಯ್ಯ ಭಾಗವತರು, ತಾಯಿ ಸುಬ್ಬಮ್ಮ. ಬಡತನದ ದಾರುಣತೆಯಿಂದಾಗಿ 5ನೆಯ ನಂತರ ಕಲಿಯುವುದು ಬೇಡವೆಂದೇ ಗಣಪಯ್ಯ ಹೇಳಿದ್ದರು. ಆಗ ಉಚಿತ ಶಿಕ್ಷಣವಿರಲಿಲ್ಲ. ಶುಲ್ಕ ಕಟ್ಟಲೇಬೇಕಿತ್ತು. ತಂದೆಯ ಮಾತನ್ನು ಚೊಕ್ಕಾಡಿಯವರು ಕೇಳಲಿಲ್ಲ. ಪಂಜದ ‘ಮುಕ್ಕುಡ’ದಲ್ಲಿರುವ ಅವರ ದೊಡ್ಡಮ್ಮನ ಮನೆಯಿಂದ ಶಾಲೆಗೆ ಹೋದರು. ಆದರೆ, ಮಧ್ಯಾಹ್ನ ಊಟವಿಲ್ಲ. ಮನೆಗೆ ಯಾರಾದರೂ ಬಂದಾಗ ಎರಡಾಣೆ ಕೊಟ್ಟರೆ ಹೋಟೆಲ್‌ನಲ್ಲಿ ಕಾಫಿ ಕುಡಿಯುತ್ತಿದ್ದರು.

ಎಸ್ಸೆಸ್ಸೆಲ್ಸಿಯಲ್ಲಿ ಒಂದು ಮಧ್ಯಾಹ್ನ ಇವರು ಸುಮ್ಮನೇ ಕುಳಿತಿದ್ದುದನ್ನು ನೋಡಿ ವೈ.ಎನ್. ಪರಮೇಶ್ವರಯ್ಯ ಎಂಬ ಶಿಕ್ಷಕರು, ‘ಊಟಕ್ಕೆ ಹೋಗುವುದಿಲ್ಲವೆ?’ ಎಂದು ಕೇಳಿದರು. ಪಕ್ಕದಲ್ಲಿದ್ದ ಸಹಪಾಠಿ, ‘ಅವನು ಮಧ್ಯಾಹ್ನ ಊಟ ಮಾಡುವುದಿಲ್ಲ ಸಾರ್’ ಎಂದ. ನಂತರ ಪರಮೇಶ್ವರಯ್ಯ ಪಕ್ಕದ ಹಾಸ್ಟೆಲ್‌ನಲ್ಲಿ ಚೊಕ್ಕಾಡಿಯವರಿಗೆ ಊಟದ ವ್ಯವಸ್ಥೆ ಮಾಡಿದರು. ಎಸ್ಸೆಸ್ಸೆಲ್ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಚೊಕ್ಕಾಡಿಯವರೇ ಪ್ರಥಮ ಸ್ಥಾನ ಪಡೆದಿದ್ದರು. ಕೊನೆಯ ದಿನ ಪರಮೇಶ್ವರಯ್ಯನವರ ಬಳಿ ‘ಊಟದ ಹಣ ಎಷ್ಟಾಯಿತು?’ ಎಂದರೆ, ಅವರು ‘ಮುಖ್ಯೋಪಾಧ್ಯಾಯರ ಬಳಿ ಕೇಳು’ ಎಂದರು. ಮುಖ್ಯೋಪಾಧ್ಯಾಯರು, ‘ಪರಮೇಶ್ವರಯ್ಯನವರ ಬಳಿ ಕೇಳು’ ಎಂದರು. ಕೊನೆಗೆ ಮುಖ್ಯೋಪಾಧ್ಯಾಯರು, ‘ನೀನು ಫಸ್ಟ್ ಬಂದಿದ್ದಿಯಲ್ಲ. ಸಾಕು, ಹೋಗು’ ಎಂದರು.

ಶಿಕ್ಷಕರ ತರಬೇತಿಯನ್ನು ಪಡೆಯುವಾಗ ₹ 18 ಸ್ಟೈಫಂಡ್ ಕೊಡುತ್ತಿದ್ದರು. ಹಾಸ್ಟೆಲ್‌ ಬಾಡಿಗೆ 50 ಪೈಸೆ. ಆದರೆ, ಊಟಕ್ಕೆ ₹ 40. ತಂದೆಯ ಬಳಿ ಕೇಳಿದರೆ ಹಣವಿಲ್ಲ. ನಂತರ ಚೊಕ್ಕಾಡಿಯವರ ಅಜ್ಜನ ಮನೆಯವರು ಊಟದ ಹಣವನ್ನು ಕೊಟ್ಟರು. ಸ್ಟೈಫಂಡ್ ಬಂದದ್ದನ್ನೆಲ್ಲ ಅಜ್ಜನ ಮನೆಯವರಿಗೆ ಕೊಟ್ಟರೆ ಅವರು ತೆಗೆದುಕೊಳ್ಳಲು ನಿರಾಕರಿಸಿದರು.

ಆಗ ಸುಲಭದಲ್ಲಿ ಸಿಗುತ್ತಿದ್ದುದು ಶಿಕ್ಷಕರ ಕೆಲಸ. ನಾಲ್ಕನೆಯವರೆಗೆ ಓದಿದ ಶಿಕ್ಷಕರು ಐದನೆಗೆ ಪಾಠ ಮಾಡುತ್ತಿದ್ದುದೂ ಇತ್ತು. ಶಿಕ್ಷಕರ ಕೆಲಸವೂ ಸಿಗದಿದ್ದವನು ನಾಲಾಯಕ್! ಚೊಕ್ಕಾಡಿ ಅರ್ಜಿ ಹಾಕಿದರು. 1959ರ ಆಗಸ್ಟ್‌ನಲ್ಲಿ ದೇವರ್ಕಾನ ಸರ್ಕಾರಿ ಶಾಲೆಗೆ ಶಿಕ್ಷಕರಾಗಿ ಸೇರಿದರು.

ದೇವರ್ಕಾನದ್ದು ಸರ್ಕಾರಿ ಶಾಲೆ; ಬೋರ್ಡ್ ಶಾಲೆಯಲ್ಲ. ಚೊಕ್ಕಾಡಿಯವರೇ ಏಕೋಪಾಧ್ಯಾಯ ಶಾಲೆಯ ಮೊದಲ ಶಿಕ್ಷಕ. ದೇವರ್ಕಾನಕ್ಕೆ ಹೋಗಿ ಕೇಳಿದರೆ, ತಮ್ಮೂರಿನಲ್ಲಿ ಶಾಲೆ ಬಂದದ್ದು ಅಲ್ಲಿನ ಜನರಿಗೇ ಗೊತ್ತಿಲ್ಲ! ಊರಿನ ಪಟೇಲರೊಬ್ಬರಿಗೆ ಶಾಲೆ ಮಂಜೂರಾದದ್ದು ಗೊತ್ತಿತ್ತು. ಆದರೆ ಕಟ್ಟಡವಿಲ್ಲ. ಪಟೇಲರು ತನ್ನ ಮನೆಯ ಜಗಲಿಯಲ್ಲೆ ಶಾಲೆ ಮಾಡಿ ಎಂದರು. ಅದೇ ದಿನ ಚೊಕ್ಕಾಡಿ ಊರ ಮನೆ ಮನೆಗೆ ಹೋದರು. 6, 10, 12 ವರ್ಷದವರನ್ನೆಲ್ಲ ಹುಡುಕಿ 29 ವಿದ್ಯಾರ್ಥಿಗಳನ್ನು ಒಂದನೆಯ ತರಗತಿಗೆ ಸೇರಿಸಿ ಶಾಲೆ ಪ್ರಾರಂಭಿಸಿದರು.

ಈಗ ಶಾಲೆಗಳಲ್ಲಿ ಸುಮಾರು 150- 200 ದಾಖಲೆಗಳಿವೆ. ಆಗ ಇದ್ದದ್ದು ಬರೇ 10. ಕಚೇರಿ ನಿರ್ವಹಣೆಗೆಂದು ಹಣ ಕೊಡುತ್ತಿರಲಿಲ್ಲ. ಚೊಕ್ಕಾಡಿಯವರು ತಾವೇ ನೋಟ್‌ಬುಕ್‌ ತಂದು ದಾಖಲಾತಿ ವಹಿಯನ್ನು ಸಿದ್ಧಪಡಿಸಿದರು. 3 ವರ್ಷಗಳ ನಂತರ ಸರ್ಕಾರವು ಮುಖ್ಯಶಿಕ್ಷಕರಿಗೆ ₹ 2 ಮತ್ತು ಸಹ ಶಿಕ್ಷಕರಿಗೆ ₹ 1 ಕಂಟಿಂಜೆನ್ಸಿ ಕೊಡತೊಡಗಿತು. 

ಚೊಕ್ಕಾಡಿಯವರಿಗೆ ಆಗ ₹ 50 ವೇತನ. ₹ 25 ಭತ್ಯೆ. ಹತ್ತು ತಿಂಗಳವರೆಗೆ ವೇತನವೇ ಬರಲಿಲ್ಲ. ಮನೆ ನಿಭಾಯಿಸಬೇಕು. ಎರಡು ತಿಂಗಳು ಸಾಲ ಕೊಟ್ಟ ಅಂಗಡಿಯವರು ‘ಇನ್ನು ಆಗುವುದಿಲ್ಲ’ ಎಂದರು. ಹತಾಶರಾಗಿ ಕುಳಿತಿದ್ದ ಚೊಕ್ಕಾಡಿಯವರ ಮನೆಗೆ ಅಂಗಡಿಯ ಬ್ಯಾರಿ ಮುಸ್ಲಿಮರೊಬ್ಬರು ಬಂದು ‘ಮಾಷ್ಟ್ರೇ, ನಿಮಗೇನು ಸಾಮಾನು ಬೇಕೋ ಬಂದು ತೆಗೆದುಕೊಂಡು ಹೋಗಿ. ನಿಮ್ಮಲ್ಲಿ ಹಣವಿದ್ದಾಗ ಕೊಡಿ’ ಎಂದರು. 

ಬಡತನದ ದಾರುಣತೆಯನ್ನು ನೀಗಲೆಂದೇ ಕವಿತೆ ಬರೆದವರು ಚೊಕ್ಕಾಡಿ. ಇಂದಿಗೂ ಚೊಕ್ಕಾಡಿ ಎಂಬ ಹಳ್ಳಿಯಲ್ಲೇ ಪತ್ನಿ ಲಕ್ಷ್ಮಿ, ಮಗಳು ಪ್ರಜ್ಞಾ, ಕವಿತಾ, ಅವರ ಪತಿ ರಾಮಚಂದ್ರ ಮತ್ತು ಮೊಮ್ಮಕ್ಕಳೊಂದಿಗೆ ಅವರದ್ದು ತುಂಬು ಸಂಸಾರ. ಮಗ ಆದರ್ಶ, ವಿಠಲ ಪದವಿಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲ. ಇನ್ನೊಬ್ಬ ಮಗಳು ಪ್ರತಿಭಾ ಮಂಗಳೂರಿನಲ್ಲಿದ್ದಾರೆ. ಹಕ್ಕಿ, ಕೆರೆ, ಮಳೆ, ಎಲೆ ಎಂದೆಲ್ಲ ಕವಿತೆಗಳನ್ನು ಬರೆದುಕೊಂಡು ಚೊಕ್ಕಾಡಿಯವರು ಹಾಯಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು