ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ತೊಂದರೆ ಕೊಡಬೇಡಿ ಪ್ಲೀಜ್‌...

ಅಡಚಣೆಗಾಗಿ ವಿಷಾದಿಸುತ್ತೇವೆ: ನಾಳೆ ‘ನೋ ಇಂಟರಪ್ಶನ್‌ ಡೇ’
Last Updated 29 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ನಾಳೆ ‘ನೋ ಇಂಟರಪ್ಶನ್‌ ಡೇ’. ಪ್ರತಿವರ್ಷ ಡಿಸೆಂಬರ್‌ 31, ವರ್ಷದ ಕೊನೆಯ ಕಾರ್ಯದಿನವನ್ನು ಇದಕ್ಕಾಗಿ ಮೀಸಲಿಡಲಾಗಿದೆ. ಬಾಹ್ಯ ಮತ್ತು ಆಂತರಿಕ ಅಡೆತಡೆಗಳು, ವ್ಯಕ್ತಿಗಳಿಂದ, ಶಬ್ಧಗಳಿಂದ ಅಥವಾ ವಸ್ತುಗಳಿಂದ ಆಗುವ ಅಡೆತಡೆಗಳು ಉದ್ಯೋಗಿಗಳ ಉತ್ಪಾದಕತೆಯನ್ನು ಕುಸಿಯುವಂತೆ ಮಾಡುವ ಜೊತೆಗೆ ವೈಯಕ್ತಿಕ ಕೆಲಸಕಾರ್ಯಗಳಿಗೂ ಸಹ ತಡೆಯೊಡ್ಡುತ್ತವೆ. ಇದನ್ನು ಸೂಕ್ತ ರೀತಿಯಲ್ಲಿ ನಿಭಾಯಿಸುವುದು ಔದ್ಯೋಗಿಕ, ಮಾನಸಿಕ ಮತ್ತು ಕೌಟುಂಬಿಕ ಸ್ವಾಸ್ಥ್ಯಕ್ಕೆ ಬಹಳ ಮುಖ್ಯ. ಅದಕ್ಕಾಗಿ ಇಲ್ಲಿವೆ ಪಂಚಸೂತ್ರಗಳು...

***

ಯಾವುದೊ ಒಂದು ಮುಖ್ಯ ಕೆಲಸ, ಒಂದು ಮಹತ್ವದ ಆಲೋಚನೆ, ಒಂದು ಪ್ರಮುಖ ಮಾತುಕತೆಯಲ್ಲಿ ತೊಡಗಿದ್ದಾಗ ದಿಢೀರನೇ ಯಾರದೊ ಮಧ್ಯೆಪ್ರವೇಶ, ಎಲ್ಲಿಂದಲೊ ಬಂದು ಕಿವಿಗೆ ಅಪ್ಪಳಿಸುವ ಸದ್ದು, ಗಲಾಟೆ, ಅಥವಾ ಯಾವುದೊ ಮೆಸೇಜ್, ಇ–ಮೇಲ್‌, ಫೇಸ್‌ಬುಕ್‌, ವಾಟ್ಸ್‌ಆ್ಯಪ್‌, ಟ್ವಿಟ್ಟರ್‌ನ ಬೀಪ್‌ ಶಬ್ದಗಳು...

ಅಡೆತಡೆಗಳು ಯಾರಿಂದಲಾದರೂ, ಯಾವ ಮೂಲದಿಂದಲಾದರೂ ಬರಬಹುದು; ಸಹೋದ್ಯೋಗಿಗಳು, ಕುಟುಂಬದವರು, ಸ್ನೇಹಿತರು, ಟೀವಿ, ದಣಿವು, ನಿದ್ರೆ, ಆಯಾಸ… ಯಾವ ಪ್ರಕಾರದಲ್ಲಿಯೇ ಇರಲಿ… ಇಂತಹ ಅಡಚಣೆಗಳಿಂದ ಉಂಟಾಗುವ ಮಾರ್ಗ ಪಲ್ಲಟ, ವಿಷಯಾಂತರ,ನಮ್ಮ ಕೆಲಸದ ಅಥವಾ ಆಲೋಚನೆಯ ದಿಕ್ಕನ್ನೇ ಬದಲಾಯಿಸುತ್ತದೆ. ಅದರಿಂದ ಉಂಟಾಗುವ ಕಿರಿಕಿರಿ, ಬೇಸರ ಅಸಹನೀಯವಾದುದು.

ನಾವು ಹೋದಲ್ಲೆಲ್ಲಾ, ನಿಂತಲ್ಲೆಲ್ಲಾ, ಇದ್ದಲ್ಲೆಲ್ಲಾ ಪ್ರತಿಯೊಂದು ಕೋನದಿಂದ ಅಡಚಣೆಗಳು ಸ್ಫೋಟಗೊಳ್ಳುತ್ತಲೇ ಇರುತ್ತವೆ. ಅದರಲ್ಲೂ ಮೆಟ್ರೊ ನಗರಗಳಲ್ಲಿ ಈ ಅಡಚಣೆ ವ್ಯಕ್ತಿಗಳಿಗಿಂತ ಹೆಚ್ಚಾಗಿ ವಸ್ತುಗಳಿಂದಲೇ ಬರುವುದು. ಮಿನುಗುವ ಪರದೆಗಳು, ಜಾಹಿರಾತು ಬೋರ್ಡ್‌ಗಳು, ಮೊಬೈಲ್‌ನ ಬೀಪ್‌ ಶಬ್ದಗಳು… ಪ್ರತಿಕ್ಷಣ ನಮ್ಮ ಗಮನವನ್ನು ಸೆಳೆಯಲು ಪೈಪೋಟಿಯಲ್ಲಿರುತ್ತವೆ. ಕೆಲವು ನಾವೇ ಮಾಡಿಕೊಂಡಂತಹವು, ಇನ್ನು ಕೆಲವು ತಾವೇ ಹುಟ್ಟಿಕೊಂಡಂತಹವು... ಇವೆಲ್ಲಾ ಮಾಡುವ ಕೆಲಸಗಳಿಗೆ ಮಾತ್ರವಲ್ಲ, ವಿಚಾರ ಲಹರಿಗೂ ತಡೆಯೊಡ್ಡುತ್ತವೆ.

5 ನಿಮಿಷದ ಅಡಚಣೆ ಇಡೀ ದಿನದ ಉತ್ಪಾದಕತೆಯ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ ಮಾನಸಿಕ ಶ್ರಮವನ್ನು ಹೆಚ್ಚು ಬೇಡುವ ಕಾರ್ಯಗಳಿಗೆ ಈ ತೆರನಾದ ಅಡಚಣೆಯಿಂದ ಉಂಟಾಗುವ ನಷ್ಟವನ್ನು ಅಳೆಯುವುದು ಸಹ ಅಸಾಧ್ಯ. ಇದರಿಂದ ಉಂಟಾಗುವ ನಷ್ಟ ಯಾವ ಮಟ್ಟದ್ದು ಎನ್ನುವುದು ಒಂದಿಲ್ಲ ಒಂದು ಸಂದರ್ಭದಲ್ಲಿ ಪ್ರತಿಯೊಬ್ಬರ ಅರಿವಿಗೂ–ಅನುಭವಕ್ಕೂ ಬಂದೇ ಇರುತ್ತದೆ.

ಪ್ರತಿ ಗಂಟೆಗೆ ಸರಾಸರಿ 4 ರಿಂದ 12 ಬಾರಿ ಅಡಚಣೆ ಉಂಟಾಗುತ್ತದೆ ಎನ್ನುತ್ತವೆ ಅಧ್ಯಯನಗಳು. ಅಂದರೆ ಪ್ರತಿ 15 ನಿಮಿಷಕ್ಕೆ ಒಂದು ಬಾರಿ ಅಡಚಣೆಗಳು ಎದುರಾಗುತ್ತಲೇ ಇರುತ್ತವೆ. ಇದು ಅಡಚಣೆಗಳ ಆವರ್ತನ ಮಾತ್ರವಲ್ಲ, ಕೆಲಸಕ್ಕೆ ಒಮ್ಮೆ ಅಡಚಣೆ ಉಂಟಾದರೆ ಮತ್ತೆ ಆ ಕೆಲಸದಲ್ಲಿ ಗಮನ ಕೇಂದ್ರೀಕರಿಸಲು 10 ನಿಮಿಷಗಳು ಅಥವಾ ಅದಕ್ಕಿಂತ ಹೆಚ್ಚಿನ ಸಮಯ ಬೇಕಾಗುತ್ತದೆ.

ಅಂತಹ ಅಡೆತಡೆಗಳನ್ನು, ತೊಂದರೆಗಳನ್ನು ದೂರ ಸರಿಸಿ ನಿರಾಳವಾಗಿ, ನಿಶ್ಚಿಂತೆಯಾಗಿ, ಪೂರ್ಣಪ್ರಮಾಣದ ಚಿತ್ತದೊಂದಿಗೆ ಕೆಲಸದಲ್ಲಿ ಅಥವಾ ಆಲೋಚನೆಯಲ್ಲಿ ಅಥವಾ ಮಾತು–ಚರ್ಚೆ–ಸಂವಾದದಲ್ಲಿ ತೊಡಗುವುದಕ್ಕಾಗಿಯೇ ಇರುವ ದಿನ, ‘ನೋ ಇಂಟರಪ್ಶನ್‌ ಡೇ’. ನಮ್ಮಿಂದ ಇತರರ ಕೆಲಸ ಕಾರ್ಯಗಳಿಗೆ ಅಥವಾ ಇತರರಿಂದ ನಮ್ಮ ಕಾರ್ಯಗಳಿಗೆ ಅಡಚಣೆ ಉಂಟಾಗುವುದನ್ನು ತಡೆಯುವುದು ಮತ್ತು ಪೂರ್ಣ ಪ್ರಮಾಣದಲ್ಲಿ ನಮ್ಮ ಕೆಲಸದಲ್ಲಿ ನಾವು ತೊಡಗುವುದರ ಮಹತ್ವವನ್ನು ಸಾರುವ ದಿನವಿದು. ನಮ್ಮ ದಾರಿ ತಪ್ಪಿಸುತ್ತಿರುವ ಎಲ್ಲದರಿಂದ ಒಂದು ದಿನದ ಮಟ್ಟಿಗಾದರೂ ದೂರಂತರ ಕಾಯ್ದುಕೊಳ್ಳುವುದರ ಅಗತ್ಯವನ್ನು ಸಾರುವ ದಿನ.

ಅಡೆತಡೆಗಳು ಯಾವ ಮೂಲದಲ್ಲಿಯೂ ಇರಬಹುದು:

· ವ್ಯಕ್ತಿಗಳು (ಸ್ನೇಹಿತರು, ಕುಟುಂಬ ಸದಸ್ಯರು, ಸಹೋದ್ಯೋಗಿಗಳು)

· ದೂರವಾಣಿ ಕರೆಗಳು (ವೈಯಕ್ತಿಕ ಅಥವಾ ಔದ್ಯೋಗಿಕ ಕರೆಗಳು)

· ಆಂತರಿಕ ಅಂಶಗಳು (ಆಯಾಸ, ದಣಿವು, ಚಿಂತೆ, ಒತ್ತಡ)

· ಇ-ಮೇಲ್ ಅಧಿಸೂಚನೆಗಳು

· ಸಾಮಾಜಿಕ ಜಾಲತಾಣಗಳು

· ಸಂದೇಶಗಳು

· ಚಾಟ್ ಅಪ್ಲಿಕೇಶನ್‌ಗಳು

· ಆ್ಯಪ್ ಸೂಚನೆಗಳು

· ಸಾಮಾಜಿಕ ಜಾಲತಾಣಗಳು

· ದೈನಂದಿನ ಸುದ್ದಿ ತಾಣಗಳು

ಇಂತಹ ಬಾಹ್ಯ ಮತ್ತು ಆಂತರಿಕ ಕಾರಣಗಳಿಂದ, ವ್ಯಕ್ತಿಗಳಿಂದ, ಶಬ್ಧಗಳಿಂದ, ವಸ್ತುಗಳಿಂದ ಆಗುವ ಈ ಎಲ್ಲಾ ಅಡೆತಡೆಗಳನ್ನು ನಿಭಾಯಿಸುವ ಅತ್ಯುತ್ತಮ ಮಾರ್ಗ ಯಾವುದಾದರೂ ಇದೆಯೇ? ಇದೆ, ಅದಕ್ಕೆ ಇಲ್ಲಿವೆ ಪಂಚಸೂತ್ರಗಳು:

1. ಕೆಲಸದಲ್ಲಿ ನಿಮಗೆ ಎದುರಾಗುವ ಮುಖ್ಯ ಅಡಚಣೆಗಳನ್ನು ಗುರುತು ಹಾಕಿ: ಮೊದಲ ಹೆಜ್ಜೆಯಾಗಿ ಯಾರಿಂದ ಮತ್ತು ಯಾವುದರಿಂದ ನಿಮಗೆ ಅಡಚಣೆ ಉಂಟಾಗುತ್ತಿದೆ ಎನ್ನುವುದನ್ನು ಕಂಡುಕೊಳ್ಳಿ. ಅವುಗಳಲ್ಲಿ ಕೆಲವು ನೀವೇ ನಿರ್ಮಿಸಿಕೊಂಡಂತಹವು ಆಗಿರಬಹುದು, ಕೆಲವು ನಿಮ್ಮ ಕೆಲಸದ ಸ್ವಭಾವದಿಂದ ಆಗುತ್ತಿರುವಂತಹವು ಆಗಿರಬಹುದು.

2. ಅಂತಹ ಅಡೆತಡೆಗಳು ಸಂಭವಿಸದಂತೆ ತಡೆಯುವ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಿ. (ನಿಮ್ಮ ಫೋನ್ ಆಫ್ ಮಾಡಿ ಅಥವಾ ಸೈಲೆಂಟ್‌ಗೆ ಹಾಕಿ.)

3. ಅಡಚಣೆ ಸಂಭವಿಸಿದ ನಂತರ ವೇಗವಾಗಿ ಚೇತರಿಸಿಕೊಳ್ಳುವುದು ಹೇಗೆ ಎಂದು ತಿಳಿಯಿರಿ.

4. ಬೆಳಿಗ್ಗೆ ಹಾಸಿಗೆಯಿಂದ ಎದ್ದ ತಕ್ಷಣ ಅಂದಿನ ಪ್ರಮುಖ ಕೆಲಸಗಳನ್ನು ಮನಸ್ಸಿನಲ್ಲಿ ಅಥವಾ ಮೊಬೈಲ್‌ನಲ್ಲಿ ಅಥವಾ ಡೈರಿಯಲ್ಲಿ ಪಟ್ಟಿ ಮಾಡಿಕೊಳ್ಳಿ ಮತ್ತು ಅವುಗಳಿಗೆ ಮಾತ್ರ ಆದ್ಯತೆ ನೀಡಿ.

5. ಮುಖ್ಯ ಕೆಲಸದ ಮೇಲೆ ಇರುವಾಗ ನಿಮ್ಮ ಚೇಂಬರ್‌ ಬಾಗಿಲಿಗೆ ಅಥವಾ ನಿಮ್ಮ ಟೇಬಲ್‌ ಮೇಲೆ ಅಥವಾ ನಿಮ್ಮ ರೂಮಿನ ಬಾಗಿಲ ಮೇಲೆ ‘do not disturb’ (ದಯವಿಟ್ಟು ತೊಂದರೆ ಮಾಡಬೇಡಿ) ಎನ್ನುವ ಬೋರ್ಡ್‌ ಹಾಕಿ. ದಿನದ ಯಾವ ಸಮಯದಲ್ಲಿ ನಿಮಗೆ ಮುಖ್ಯ ಕೆಲಸಗಳಿರುತ್ತವೆ ಎನ್ನುವುದು ನಿಮ್ಮ ಸ್ನೇಹಿತರಿಗೆ, ಬಂಧುಗಳಿಗೆ, ಸಹೋದ್ಯೋಗಿಗಳಿಗೆ ತಿಳಿದಿರಲಿ. ಕೆಲಸ ಮುಗಿದ ಮೇಲೆ ಬಂದ ಫೋನ್‌ ಕಾಲ್‌ಗಳಿಗೆ, ಸಂದೇಶಗಳಿಗೆ, ಇ–ಮೇಲ್‌ಗಳಿಗೆ ನೀವು ಉತ್ತರಿಸಬಹುದು.

ಎಲ್ಲಾ ಅಡಚಣೆಗಳು ನಮಗೆ ಬೇಡವಾದುವೇ ಎಂದೂ ಹೇಳಲಾಗದು. ಕೆಲವೊಮ್ಮೆ ಕೆಲವು ಅಡೆತಡೆಗಳು ನಮಗೆ ಪ್ರಿಯವಾದವುಗಳಾಗಿರಬಹುದು. ಆದಾಗ್ಯೂ ನಾವು ಅವುಗಳಿಂದ ದೂರ ಉಳಿಯಬೇಕಾಗುತ್ತದೆ ಅಥವಾ ಅಂತಹ ಅಡಚಣೆಗಳಿಗಾಗಿ ನಿರ್ದಿಷ್ಟ ಸಮಯವನ್ನು ಮೀಸಲಿಡಬೇಕಾಗುತ್ತದೆ. ‘ನೋ ಇಂಟರಪ್ಶನ್‌ ಡೇ’ ನೆಪದಲ್ಲಿ ನಿಮ್ಮ ಪ್ರಮುಖ ಕೆಲಸ ಕಾರ್ಯಗಳನ್ನು ಆರ್ಗನೈಸ್‌ ಮಾಡಿಕೊಳ್ಳಿ. ಅನಗತ್ಯ ಅಡೆತಡೆಗಳನ್ನು ನಿರ್ದಯವಾಗಿ ದೂರ ತಳ್ಳಿ. ಏಕೆಂದರೆ ಇಂತಹ ಅಡೆತಡೆಗಳು ಕೆಲಸವನ್ನು ಮಾತ್ರವಲ್ಲ, ಸಂಬಂಧಗಳನ್ನು, ಯೋಜನೆಗಳನ್ನು ತಲೆಕೆಳಗೆ ಮಾಡಬಲ್ಲವು. ಮಾತ್ರವಲ್ಲ ಕೆಲಸವನ್ನು ಸಕಾಲದಲ್ಲಿ ಪೂರ್ಣಗೊಳಿಸಲಾರದ ಅಥವಾ ನಿರೀಕ್ಷಿತ ಗುಣಮಟ್ಟ ಸಾಧಿಸಲಾರದ ಒತ್ತಡ ಮನೋದೈಹಿಕ ಆರೋಗ್ಯದ ಮಾಲೂ ಪರಿಣಾಮ ಉಂಟು ಮಾಡಬಹುದು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT