ಶುಕ್ರವಾರ, ಡಿಸೆಂಬರ್ 3, 2021
24 °C

ಅಮೃತ ಮಥನ: ನೆಲಮೂಲದ ಕವಿಗೆ 75!

ಕೆ.ವೈ. ನಾರಾಯಣಸ್ವಾಮಿ Updated:

ಅಕ್ಷರ ಗಾತ್ರ : | |

‘ಎಲ್ಲಿ ಮುಟ್ಟಿದರಲ್ಲಿ ನೆಲದ ಹೊಕ್ಕುಳ ಬಳ್ಳಿ’ ಎಂದು ಮಣ್ಣ ಸಂಹಿತೆಯನ್ನು ಹಾಡುತ್ತ ಬಂದ ಕವಿ ಸಿಂಗಾಪುರ ಗುರುಭಕ್ತಯ್ಯ ಸಿದ್ಧರಾಮಯ್ಯ (ಎಸ್‍ಜಿಎಸ್). ‘ಗಾಲ್ಫ್ ಉಬ್ಬಿನ ಮೇಲೆ’ ಎನ್ನುವ ಮೊದಲ ಕವಿತಾ ಸಂಕಲನದ ಮೂಲಕ ಕನ್ನಡ ಕಾವ್ಯ ಪ್ರಪಂಚವನ್ನು ಪ್ರವೇಶ ಮಾಡಿದವರು ಎಸ್‍ಜಿಎಸ್. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸಿಂಗಾಪುರ ಎಂಬ ಪುಟ್ಟಹಳ್ಳಿಯ ಕೃಷಿ ಕುಟುಂಬದಲ್ಲಿ ಹುಟ್ಟಿ ಬೆಳೆದವರು ಅವರು. ಹಳ್ಳಿಗಾಡಿನ ಮೊದಲ ತಲೆಮಾರಿನ ಅಕ್ಷರಸ್ಥರಂತೆ ಆಕಸ್ಮಿಕವಾಗಿ ಓದು ಬರಹ ಕಲಿತವರು.

1970ರ ದಶಕದ ಆರಂಭದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರವು ರೂಪಿಸಿದ ಅನೇಕ ಪ್ರತಿಭಾವಂತ ಕನ್ನಡ ಬರಹಗಾರರಲ್ಲಿ ಸಿದ್ಧರಾಮಯ್ಯನವರೂ ಒಬ್ಬರು. ನವ್ಯ ಕಾವ್ಯದ ಆರಾಧನಾ ಕಾಲದಲ್ಲಿ ಕವಿತೆಯ ಮೂಲಕ ಲೋಕಸಂವಾದವನ್ನು ಆರಂಭಿಸಿದ ಎಸ್‍ಜಿಎಸ್ ಅವರು ವಿದ್ಯಾರ್ಥಿಯಾಗಿರುವಾಗಲೇ ಕುವೆಂಪು ಅವರ ಸಾಹಿತ್ಯ ಹಾಗೂ ಚಿಂತನೆಗಳ ದಟ್ಟ ಪ್ರಭಾವಕ್ಕೆ ಒಳಗಾದವರು. ಜಿ.ಎಸ್.ಶಿವರುದ್ರಪ್ಪನವರಂತಹ ಗುರುವಿನಿಂದ ಕಾವ್ಯಕಟ್ಟೋಣದ ಕುಸುರಿಯನ್ನು ಕಲಿತವರು. ನವ್ಯರಿಂದ ಪ್ರಯೋಗಶೀಲತೆಯನ್ನು ಕಲಿತರೂ ತಮ್ಮ ಕವಿತೆಗಳಲ್ಲಿ ಗ್ರಾಮೀಣ ಸಂಸ್ಕೃತಿಯ ಸಮುದಾಯದ ನೆನಪುಗಳನ್ನು, ದೇಸಿ ಹಾಡುಗಬ್ಬಗಳ ನಾದವನ್ನು ಮೊಗೆದು ಕೊಟ್ಟವರು.

ಕಳೆದ ಶತಮಾನದ ಎಪ್ಪತ್ತರ ದಶಕ ಕನ್ನಡನಾಡಿನ ಸಾಂಸ್ಕೃತಿಕ ಚರಿತ್ರೆಯಲ್ಲಿ ಮಹತ್ವದ ಕಾಲಘಟ್ಟ. ಅದು ಪರ್ಯಾಯ ಜ್ಞಾನದ ಆಸ್ಫೋಟದ ಕಾಲ. ತಳ ಮತ್ತು ಕೆಳ ಸಮುದಾಯಗಳ ಹುಡುಗರೆದೆಗೆ ಅಕ್ಷರದ ಬೀಜ ಬಿದ್ದ ಕಾಲ. ಅದೇ ಸಂದರ್ಭದಲ್ಲಿ ನಡೆದ ಬೂಸ ಚಳವಳಿಯು ಆವರೆಗಿನ ಕಾವ್ಯ ಪರಂಪರೆಗಳನ್ನು ಸಾಮಾಜಿಕ ನ್ಯಾಯದ ವಿಮರ್ಶೆಗೆ ಒಡ್ಡಿದ ಕಾಲ. ಕಲೆಗಾಗಿ ಕಲೆ ಎಂಬ ಅಭಿವ್ಯಕ್ತಿಯ ಮಾರ್ಗ ಬದುಕಿಗಾಗಿ ಕಲೆ ಎಂದು ಹೊರಳುದಾರಿಗೆ ತಿರುಗಿಕೊಂಡ ಪರ್ವಕಾಲ. ಇಂತಹ ಸಾಮಾಜಿಕ ರಾಜಕೀಯ ಸನ್ನಿವೇಶದಲ್ಲಿ ಸಾರ್ವಜನಿಕ ಜೀವನಕ್ಕೆ ಕನ್ನಡ ಸಾಹಿತ್ಯದ ಅಧ್ಯಾಪಕರಾಗಿ ಸಿದ್ಧರಾಮಯ್ಯನವರು ಪ್ರವೇಶ ಮಾಡಿದರು. ಮುಂದೆ ಸುಮಾರು ಮೂರು ದಶಕಗಳ ಕಾಲ ಕರ್ನಾಟಕದ ಹಲವು ಸರ್ಕಾರಿ ಕಾಲೇಜುಗಳಲ್ಲಿ ಶಿಷ್ಯಾನುರಾಗಿ ಅಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಆರೋಗ್ಯವಂತ ಯುವ ಸಮುದಾಯಗಳನ್ನು ಕಟ್ಟುವ ಕೆಲಸವನ್ನು ಮಾಡಿದರು.

ಕವಿತೆ ರಚನೆಯ ಜೊತೆಗೆ ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್, ಲೋಹಿಯಾ ಮತ್ತು ಮಾರ್ಕ್ಸ್‌ ಅವರ ಚಿಂತನೆಗಳನ್ನು ಗಂಭೀರವಾಗಿ ಅಧ್ಯಯನ ಮಾಡುವ ಮೂಲಕ ಭಾರತೀಯ ಸಮಾಜದ ಸಾಮಾಜಿಕ ಸ್ತರಗಳನ್ನು ಅರಿತರು. ಕನ್ನಡದ ಪ್ರಾಚೀನ ಸಾಹಿತ್ಯದಿಂದ ಹಿಡಿದು ಜನಪದ ಮತ್ತು ಆಧುನಿಕ ಕನ್ನಡ ಸಾಹಿತ್ಯದ ಕೃತಿಗಳ ನಿರಂತರ ವಿದ್ಯಾರ್ಥಿಯಾದರು. ಮುಖ್ಯವಾಗಿ 12ನೆಯ ಶತಮಾನದ ಜಾಗತಿಕ ವಿದ್ಯಮಾನವಾದ ವಚನ ಸಾಹಿತ್ಯದ ಅರಿವು ಎಸ್‍ಜಿಎಸ್ ಅವರ ನಡೆ ನುಡಿಗಳನ್ನು ಸರಿದೂಗಿಸುವ ಪ್ರಮಾಣವಾಗಿ ಅವರ ಬದುಕನ್ನು ಮುನ್ನಡೆಸಿದವು.

ಹೀಗೆ ಸಾಹಿತ್ಯದ ನಿರಂತರ ಓದು ಮತ್ತು ಯುವ ಮನಸ್ಸುಗಳ ಜೊತೆಗಿನ ಒಡನಾಟ ಎಸ್‍ಜಿಎಸ್ ಅವರನ್ನು ಅಂತಃಕರುಣಿಯಾದ ನಾಡೋಜ ಗುರುವಾಗಿ ರೂಪಿಸಿತು.

ಸಹಜ ಕಾವ್ಯ ಪ್ರತಿಭೆಯ ಕವಿಯಾಗಿರುವ ಎಸ್‍ಜಿಎಸ್ ಕನ್ನಡದ ಪ್ರಮುಖ ಕವಿಯಾಗಿರುವುದು ಅವರು ಪ್ರಕಟಿಸಿರುವ ಹದಿನೈದು ಕವಿತಾ ಸಂಕಲನಗಳಿಂದ ಮಾತ್ರವಲ್ಲ; ಅವರು ನಡೆಸಿದ ಕಾವ್ಯದ ಪ್ರಯೋಗಗಳಿಂದ. ಅವರೊಬ್ಬ ನೆಲಮೂಲದ ಕವಿಯಾಗಿ ಗುರುತಿಸಲ್ಪಟ್ಟಿದ್ದಾರೆ. ವರ್ತಮಾನ ನಿರುಪಯುಕ್ತವೆಂದು ಅಂಚಿಗೆ ಸರಿಸಿದ್ದ ದೇಸಿ ನುಡಿಗಟ್ಟುಗಳು ಮತ್ತು ಅನುಭವಗಳನ್ನು ಅವರು ಆಯ್ದು ಪೋಣಿಸುತ್ತಿರುವ ಚಂದದಲ್ಲಿ ಕನ್ನಡ ಮನಸ್ಸು ಮರೆತ ಮಣ್ಣಿನ ಗಮಲಿದೆ. ತೀರಾ ಪ್ರಾದೇಶಿಕ ಎನ್ನಿಸುವ ಪದ-ಪ್ರಯೋಗದಲ್ಲಿ ಸಂಸ್ಕೃತಿ ಹೊಕ್ಕಳೊಳಗೆ ಕೊಳೆಯುತ್ತಿರುವ ವಿನಾಶವನ್ನು, ಅನುಭಾವದಂತಹ ಸಂಕೀರ್ಣ ಅನುಭೂತಿಯನ್ನು, ಗೋಳೀಕರಣದಿಂದ ಹಿಡಿದು ಇಬ್ಬನಿಯ ಸೋಂಕಿನವರೆಗೆ ಜೀವಜಾಲದ ಸಂಕಟ, ಸಂಭ್ರಮಗಳನ್ನು ಅಭಿವ್ಯಕ್ತಿಸುವ ಹದವನ್ನು ಅವರು ಕಂಡುಕೊಂಡಿದ್ದಾರೆ.

ಕನ್ನಡ ಕಾವ್ಯಲೋಕದಲ್ಲಿ ತಮ್ಮದೇ ವಿಶಿಷ್ಟ ಕಾವ್ಯಮಾರ್ಗವೊಂದನ್ನು ಎಸ್‍ಜಿಎಸ್ ನಿರ್ಮಾಣ ಮಾಡಿದ್ದಾರೆ. ‘ಅವಳೆದೆಯ ಜಂಗಮ’, ‘ಮರುಜೇವಣಿಗೆ’ ಹಾಗೂ ‘ಕಾಯಮಾಯದ ಹಾಡು’ ಮೊದಲಾದ ಮಹತ್ವದ ಕವಿತಾ ಸಂಕಲನಗಳನ್ನು ಅವರು ತೊಂಬತ್ತರ ದಶಕದಲ್ಲಿಯೇ ಪ್ರಕಟಿಸಿದ್ದಾರೆ. ‘ಕಾಲಕಣ್ಣಿಯ ಹಂಗು’ ಎಂಬ ಹೆಸರಿನ ಸಮಗ್ರ ಕವಿತಾ ಸಂಕಲನವನ್ನು ಪ್ರಕಟಿಸಿದ್ದಾರೆ. ಇವರ ಕವಿತಾ ಸಂಕಲನಗಳಿಗೆ ಎರಡು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ದೊರಕಿರುವುದು ಅವರ ಕಾವ್ಯ ಪರಿಣತಿಗೆ ಸಿಕ್ಕಿರುವ ಮನ್ನಣೆಯಾಗಿದೆ.

ಜನ ಬದುಕಲೆಂದು ಬರೆದು ಬದುಕುತ್ತಿದ್ದ ಹಲವು ಸಾಂಸ್ಕೃತಿಕ ವ್ಯಕ್ತಿತ್ವಗಳು ಇಪ್ಪತ್ತೊಂದನೆಯ ಶತಮಾನದ ಮೊದಲ ದಶಕದಲ್ಲಿ ಅಕಾಲಿಕವಾಗಿ ನಿರ್ಗಮಿಸಿದವು. ಕನ್ನಡ ನುಡಿ, ಶಿಕ್ಷಣ, ಆರೋಗ್ಯ, ಕೃಷಿ ಹೀಗೆ ಕರ್ನಾಟಕದ ಬಡವರಿಗೆ ಆಗುತ್ತಿದ್ದ ಅನ್ಯಾಯಗಳನ್ನು ನಿರಂಕುಶವಾಗಿ ಪ್ರಶ್ನಿಸುತ್ತಿದ್ದ ಲಂಕೇಶರಂತಹ ಬರಹಗಾರರ ಗೈರು ಹಾಜರಿಯನ್ನು ತುಂಬುವ ವ್ಯಕ್ತಿತ್ವಗಳನ್ನು ಕನ್ನಡ ಸಂಸ್ಕೃತಿ ಹುಡುಕುತ್ತಿತ್ತು. ಯು.ಆರ್‌. ಅನಂತಮೂರ್ತಿ, ಗಿರೀಶ ಕಾರ್ನಾಡ ಅವರಂಥವರು ವ್ಯವಸ್ಥೆಯನ್ನು ಪ್ರಶ್ನಿಸುವ ಧೈರ್ಯತೋರಿದರೂ ಅವರು ಕನ್ನಡ ಜಗತ್ತಿನ ಅಂಚಿನ ಜನಗಳಿಗೆ, ಸಾಮಾನ್ಯ ಜನರಿಗೆ, ತಮ್ಮ ಎಲೈಟ್ ಜೀವನ ಶೈಲಿಯಿಂದಾಗಿ ನಿಲುಕುವವರಾಗಿರಲಿಲ್ಲ.

ಅದೇ ಸುಮಾರಿಗೆ ವೈದಿಕ ಚಿಂತನಕ್ರಮಗಳು ಸಾರ್ವಜನಿಕ ನಾಚಿಕೆಯ ಸ್ವಭಾವವನ್ನು ತೊರೆದು ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವ ಸಾಹಿತ್ಯನಿರ್ಮಿತಿಗಳ ಮೇಲೆ ಪ್ರಹಾರ ಮಾಡತೊಡಗಿದವು. ಇಂತಹ ಸನ್ನಿವೇಶದಲ್ಲಿ ಸಾರ್ವಜನಿಕವಾಗಿ ದಮನಿತ ಜನರ ಬದುಕಿನ ಅನ್ಯಾಯ-ಆತಂಕಗಳ ಕುರಿತು ಖಚಿತ ಧ್ವನಿಯಲ್ಲಿ ನಿರ್ಭಯವಾಗಿ ಮಾತನಾಡುವವರ ಅಗತ್ಯವಿತ್ತು. ಅದೇ ಕಾಲಕ್ಕೆ ಎಸ್‍ಜಿಎಸ್ (2004ರಲ್ಲಿ) ಸರ್ಕಾರಿ ವೃತ್ತಿಯಿಂದ ನಿವೃತ್ತಿಯಾಗಿ ಜನಪರವಾಗಿ ನಡೆಯುವ ಹೋರಾಟಗಳಲ್ಲಿ ನೇರವಾಗಿಯೇ ಭಾಗವಹಿಸತೊಡಗಿದ್ದು ಕನ್ನಡದ ಸಾಂಸ್ಕೃತಿಕ ಪ್ರತಿರೋಧಕ್ಕೆ ಬಲಬಂದಂತಾಯಿತು.

ಈ ಮಧ್ಯೆ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಅವರು ನೇಮಕಗೊಂಡರು. ಅವರ ಮೂರು ವರ್ಷಗಳ ಅಧಿಕಾರದ ಅವಧಿಯಲ್ಲಿ (2005-2008) ಕನ್ನಡ ಪುಸ್ತಕ ಪ್ರಾಧಿಕಾರವು ಸಾಂಸ್ಕೃತಿಕವಾಗಿ ಅತ್ಯಂತ ಮಹತ್ವದ ಅಧ್ಯಯನ ಯೋಜನೆಗಳನ್ನು ಕೈಗೊಂಡು 12 ದೇಸಿ ಕೃಷಿ ಸಂಪುಟಗಳನ್ನು, 12 ಮಕ್ಕಳ ಸಂಪುಟಗಳನ್ನು ಪ್ರಕಟಿಸಿತು. ಬಹಳ ಮುಖ್ಯವಾಗಿ ಅಲೆಮಾರಿಗಳ ಸಂಸ್ಕೃತಿಯನ್ನು ಕುರಿತ 22 ಅಧ್ಯಯನ ಗ್ರಂಥಗಳನ್ನು ಪ್ರಕಟಿಸಿತು. ಸ್ವಾತಂತ್ರ್ಯದ ಹಲವು ದಶಕಗಳ ನಂತರವೂ ಗುರುತಿಲ್ಲದೆ ಅವಕಾಶವಂಚಿತರಾಗಿದ್ದ ಸರ್ಕಾರದ ಯಾವುದೇ ಯೋಜನೆಗಳ ಪಾಲು ಪಡೆಯದೆ ಇದ್ದ ಜನಸಮುದಾಯಗಳನ್ನು ಕುರಿತ ಮಾಹಿತಿಪೂರ್ಣವಾದ ಹೊತ್ತಿಗೆಗಳು ಇವಾಗಿವೆ.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ತಮ್ಮ ಅವಧಿಯ ಕೊನೆಯಲ್ಲಿ ಹಣಕಾಸಿನ ಲೆಕ್ಕಪತ್ರವನ್ನು ಸಾರ್ವಜನಿಕವಾಗಿ ಪ್ರಕಟಿಸುವ ಮೂಲಕ ಪಾರದರ್ಶಕ ಆಡಳಿತಕ್ಕೆ ಮಾದರಿ ಹಾಕಿಕೊಟ್ಟಿದ್ದರು. 2016-2018ರವರೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕನ್ನಡದಲ್ಲಿ ಆಡಳಿತದ ಪ್ರಕ್ರಿಯೆ ನಡೆಯುವಂತೆ ನೋಡಿಕೊಳ್ಳಲು ಪರಿಣಾಮಕಾರಿಯಾಗಿ ಪ್ರಯತ್ನಿಸಿದರು. ತಾಂತ್ರಿಕ ಮತ್ತು ವೈದ್ಯಕೀಯ ಶಿಕ್ಷಣದಲ್ಲಿ ಕನ್ನಡ ಕಲಿಕೆಯನ್ನು ಕಲಿಸುವ ಪಠ್ಯಗಳನ್ನು ನಿರ್ಮಾಣ ಮಾಡಿಕೊಡುವ ಕಾರ್ಯಮಾಡಿದರು. ಗಡಿನಾಡಿನಲ್ಲಿ ಕನ್ನಡ ಶಾಲೆಗಳನ್ನು ಪುನರ್‌ಚೈತನ್ಯಗೊಳಿಸುವ ಮಹತ್ವದ ಯೋಜನೆಯನ್ನು ಕಾರ್ಯಗತಗೊಳಿಸಿದ್ದು ಸಿದ್ಧರಾಮಯ್ಯನವರ ಪ್ರಮುಖ ಸಾಧನೆ. ವೀರಶೈವ-ಲಿಂಗಾಯತ ಧರ್ಮದ ಕುರಿತ ವಿವಾದದಲ್ಲಿ ಬಸವಣ್ಣನವರ ಆಶಯಗಳನ್ನು ಆಧರಿಸಿ ಎಸ್‍ಜಿಎಸ್ ಅವರು ಲಿಂಗಾಯತ ಎಂಬುದು ವೀರಶೈವಕ್ಕಿಂತ ಭಿನ್ನವಾದ ಜೀವನಕ್ರಮವೆಂದು ಸಾಧಿಸಿ ತೋರಿಸಿದರು.

ಈಗ ಎಸ್‍ಜಿಎಸ್ ಅವರಿಗೆ 75ರ ಹರೆಯ. ಎಲ್ಲರಿಗೂ ಪ್ರೀತಿ ಹಂಚುವ ಅವರ ಬಾವಣಿಕೆ ವರ್ತನೆ ಜನಜನಿತ. ನಿರಂತರವಾಗಿ ಕರ್ನಾಟಕದ ನಾಳೆಗಳ ಬಗೆಗೆ ಚಿಂತನ ಮಂಥನದಲ್ಲಿರುವ ಎಸ್‍ಜಿಎಸ್ ಯುವ ಮನಸ್ಸುಗಳಿಗೆ ಮುಕ್ತ ವಿಶ್ವವಿದ್ಯಾಲಯವಾಗಿದ್ದಾರೆ. ಮನಸಿಗೆ ವಯಸ್ಸಿನ ಆಯಾಸವಾಗದಂತೆ ಕಾವ್ಯದ ಹೊಸಪ್ರಯೋಗಗಳಲ್ಲಿ ನಿರತರಾಗುವ ಮೂಲಕ ವೈಯಕ್ತಿಕ ಹಾಗೂ ನಾಡಿನ ಆರೋಗ್ಯವನ್ನು ಕಾಪಿಡುವ ಕಾಯಕವನ್ನು ಅವರು ಮುಂದುವರೆಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು