ಭಾನುವಾರ, ಮೇ 29, 2022
20 °C

ಛಾಯಾಗ್ರಹಣದ ಮಹಾರಾಜ: ಅಪೂರ್ವ ಛಾಯಾಚಿತ್ರಗಳ ಮೇಲೊಂದು ಹೊರಳು ನೋಟ

ಕಾರ್ತಿಕ್ ವಿ. ಕಾಳೆ Updated:

ಅಕ್ಷರ ಗಾತ್ರ : | |

Prajavani

ಸಂಡೂರು ಸಂಸ್ಥಾನದ ಯುವರಾಜರಾಗಿದ್ದ ಎಂ.ವೈ. ಘೋರ್ಪಡೆ ಬಹುಮುಖ ವ್ಯಕ್ತಿತ್ವದಿಂದ ಜನರ ಹೃದಯ ಗೆದ್ದ ಮಹಾರಾಜನೂ ಆಗಿದ್ದರು. ಅವರ ಜನ್ಮದಿನದ ನೆಪದಲ್ಲಿ ಅವರೇ ತೆಗೆದಿದ್ದ ಅಪೂರ್ವ ಛಾಯಾಚಿತ್ರಗಳ ಮೇಲೊಂದು ಹೊರಳು ನೋಟ.

*

ಮುರಾರಿರಾವ್‌ ಯಶವಂತರಾವ್‌ (ಎಂ.ವೈ) ಘೋರ್ಪಡೆಯವರು ಬಹುಮುಖ ಪ್ರತಿಭೆಯುಳ್ಳ ಅಸಾಧಾರಾಣ ವ್ಯಕ್ತಿಯಾಗಿದ್ದವರು. ರಾಜಕೀಯ ಮುತ್ಸದ್ಧಿಯಾಗಿ, ಅರ್ಥತಜ್ಞರಾಗಿ, ಶಿಕ್ಷಣ ಪ್ರೇಮಿಯಾಗಿ, ಸಮಾಜ ಸುಧಾರಕರಾಗಿ, ಆಡಳಿತಗಾರರಾಗಿ, ಅಂತರರಾಷ್ಟ್ರೀಯ ಖ್ಯಾತಿಯ ಛಾಯಾಚಿತ್ರಕಾರರಾಗಿ ಹಲಬಗೆಯಿಂದ ನಾಡಿನ ಪ್ರಗತಿಗೆ ಕಾಣಿಕೆ ಕೊಟ್ಟವರು. ಕರ್ನಾಟಕದ ಪುಟ್ಟ ಸಂಸ್ಥಾನವಾಗಿದ್ದ ಸಂಡೂರಿನ ಅರಸರಾಗಿದ್ದ ಯಶವಂತರಾವ್‌ ಹಿಂದೂರಾವ್‌ ಘೋರ್ಪಡೆಯವರ ಹಿರಿಯ ಪುತ್ರರಾದ ಅವರು ಸಂಡೂರು ಸಂಸ್ಥಾನದ ಯುವರಾಜರೂ ಅಗಿದ್ದರು.

ಘೋರ್ಪಡೆಯವರು ತಮ್ಮ ಪ್ರಾರಂಭಿಕ ವಿದ್ಯಾಭ್ಯಾಸವನ್ನು ತಮ್ಮೂರು ಸಂಡೂರಿನ ಜನಸಾಮಾನ್ಯ ಕುಟುಂಬದಿಂದ ಬಂದ ವಿದ್ಯಾರ್ಥಿಗಳೊಂದಿಗೆ ಪಡೆದವರು. ಜನಸಾಮಾನ್ಯರೊಂದಿಗೆ ಬೆರೆಯುವ ಆಪರೂಪದ ಯುವರಾಜರಾಗಿ ಜನರ ಮನದಲ್ಲಿ ನೆಲೆಸಿದ್ದರು.

ಸಂಡೂರು ಮ್ಯಾಂಗನೀಸ್‌ ಅಂಡ್‌ ಆಯರ್ನ್ ಓರ್ಸ್ ಕಂಪನಿಯ ಆಡಳಿತಾಧಿಕಾರಿಯಾಗಿ ಅವರು ಸಲ್ಲಿಸಿದ ಸೇವೆಯೂ ಅನುಪಮವಾದುದು.


ಮರಿಯಾನೆಗಳಿಗೆ ಮಜ್ಜನ

ಸಂಡೂರಿನಲ್ಲಿ ‘ಆದರ್ಶ ಕಲ್ಯಾಣ ಮಂಟಪ ಹಾಗೂ ಸಮುದಾಯ ಕೇಂದ್ರ’ವನ್ನೂ ‘ಆರೋಗ್ಯ ಸಮುದಾಯ ಕೇಂದ್ರ’ವನ್ನೂ ಅವರು ಕಟ್ಟಿದ್ದಾರೆ. ಗ್ರಾಮೀಣ ಮಹಿಳೆಯರ ಶ್ರೇಯೋಭಿವೃದ್ಧಿಗಾಗಿ ಅವರೇ ಹುಟ್ಟುಹಾಕಿದ ‘ಸಂಡೂರು ಕುಶಲ ಕಲಾ ಕೇಂದ್ರ’ವು ವಿಶ್ವ ಮಾನ್ಯತೆಯನ್ನು ಪಡೆದ ಸಂಸ್ಥೆಯಾಗಿದೆ. ಸಂಡೂರು ಪರಿಸರದ ಲಂಬಾಣಿ ತಾಂಡಾಗಳಲ್ಲಿ ವಾಸಿಸುವ ಅನೇಕ ಲಂಬಾಣಿ ಸ್ತ್ರೀಯರು ಈ ಕುಶಲ ಕಲಾ ಕೇಂದ್ರದಲ್ಲಿ ತಮ್ಮ ಕಸೂತಿ ಕಲೆಯನ್ನು ಬೆಳಗಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ವಿಶ್ವವಿಖ್ಯಾತ ವನ್ಯಜೀವಿ ಛಾಯಾಚಿತ್ರಗ್ರಾಹಕರಾಗಿದ್ದ ಅವರು ‘ಆ್ಯಕ್ಷನ್‌’ ಚಿತ್ರಗಳಿಗಾಗಿ ಕಾಡಿನಲ್ಲಿ ಕಳೆದ ದಿನಗಳಿಗೆ ಲೆಕ್ಕವಿಲ್ಲ. ಅನೇಕ ಬಾರಿ ಅವರು ವನ್ಯಜೀವಿಗಳಿಂದ ಅಪಾಯವನ್ನೂ ಎದುರಿಸಿದ್ದುಂಟು. ಘೋರ್ಪಡೆಯವರ ‘ಟಸ್ಕರ್ ಇನ್ ರೈನ್’ ಛಾಯಾಚಿತ್ರ 1971ರಲ್ಲಿ ರಾಯಲ್ ಸೊಸೈಟಿ ಆಫ್ ಗ್ರೇಟ್ ಬ್ರಿಟನ್‌ನ ಪುರಸ್ಕಾರಕ್ಕೆ ಪಾತ್ರವಾಗಿತ್ತು. ಅವರು ವನ್ಯಜೀವಿ ಚಿತ್ರಗಳಿಗಾಗಿ ಬಂಡಿಪುರ, ಗೀರ್, ನಾಗರಹೋಳೆ ಅರಣ್ಯಗಳಲ್ಲದೆ, ಆಫ್ರಿಕನ್‌ ಕಾಡುಗಳಲ್ಲೂ ಓಡಾಡಿದ್ದಾರೆ. ಘೋರ್ಪಡೆಯವರ ಕ್ಯಾಮೆರಾ ಸೆರೆಹಿಡಿದ ಸಿಂಹ, ಹುಲಿ, ಕಾಡುಕೋಣ, ಚಿರತೆ, ಕರಡಿ, ಕಿರುಬ, ಉಡ, ಜಿಂಕೆ, ಖಡ್ಗಮೃಗ, ಆನೆ ಮೊದಲಾದ ಪ್ರಾಣಿಗಳ ಛಾಯಾಚಿತ್ರಗಳು ಸಂಡೂರಿನ ಅವರ ಆರಮನೆಯಲ್ಲಿ ರಾರಾಜಿಸುತ್ತಿವೆ. ಬಳ್ಳಾರಿ ಜಿಲ್ಲೆಯ ದರೋಜಿ ಹತ್ತಿರದ ದರೋಜಿ ಕರಡಿ ಧಾಮವನ್ನು ನಿರ್ಮಿಸುವಲ್ಲಿ ಘೋರ್ಪಡೆಯವರ ಪಾತ್ರ ಪ್ರಮುಖವಾದುದ್ದು.


ಮಳೆ ಬರುತ್ತಾ? ಮೊಟ್ಟೆ ಹಾಳಾಗುತ್ತಾ?

‘ಸನ್‍ಲೈಟ್ ಆ್ಯಂಡ್‌ ಶ್ಯಾಡೋಸ್’, ‘ದ ಗ್ರ್ಯಾಂಡ್ ರೆಸಿಸ್ಟನ್ಸ್’, ‘ಡೌನ್ ಮೆಮರಿ ಲೇನ್’, ‘ಡೆವಲಪ್‍ಮೆಂಟ್ ಇಥೋಸ್ ಆ್ಯಂಡ್‌ ಎಕ್ಸ್‌ಪೀರಿಯನ್ಸ್’, ‘ವಿಂಗ್ಡ್ ಫ್ರೆಂಡ್ಸ್’, ‘ಗ್ರೋಥ್ ಗವ್ಹರ್ನನ್ಸ್ ಆ್ಯಂಡ್ ಹ್ಯೂಮನ್ ವ್ಯಾಲ್ಯೂಸ್’, ‘ಕಂಚಿಯ ಪರಮಾಚಾರ್ಯರು’, ‘ತಂಜಾವೂರ್ ಆ್ಯಂಡ್‌ ದ ಮರಾಠಾಸ್’, ‘ಸಫಾರಿ ಇನ್ ಈಸ್ಟ್ ಆಫ್ರಿಕಾ’ ಕೃತಿಗಳನ್ನು ಅವರು ರಚಿಸಿದ್ದಾರೆ.

ಘೋರ್ಪಡೆಯವರು ಕಲಾ ಪೋಷಕರೂ ಆಗಿದ್ದರು. ಮಹಾನ್ ಸಂಗೀತ ಪ್ರೇಮಿಯೂ ಆಗಿದ್ದರು. ಸಂಡೂರಿನಂಥ ಪುಟ್ಟ ಪಟ್ಟಣಕ್ಕೆ ಭಾರತದ ಸುಪ್ರಸಿದ್ಧ ಸಂಗೀತ ಕಲಾವಿದರಾದ ಪಂ. ಮಲ್ಲಿಕಾರ್ಜುನ ಮನಸೂರ, ಪಂ. ಭೀಮಸೇನ ಜೋಷಿ, ಪಂ. ಬಸವರಾಜ ರಾಜಗುರು, ಶಂಕರ ಶಾಸ್ತ್ರಿ, ಪಂ. ಬಾಲಮುರಳಿಕೃಷ್ಣ, ಪಂ. ಜಸ್‌ರಾಜ್, ಗಂಗೂಬಾಯಿ ಹಾನಗಲ್, ಎಂ.ಎಲ್. ವಸಂತಕುಮಾರಿ, ಉಸ್ತಾದ ಅಮ್ಜದ್ ಅಲೀಖಾನ್ ಮೊದಲಾದವರು ಬಂದು ಕಛೇರಿ ನೀಡಿದ್ದಾರೆ.

ಘೋರ್ಪಡೆಯವರು ಗ್ರಾಮೀಣಾಭಿವೃದ್ಧಿ ಸಚಿವರಾಗಿ ಕೆಲಸ ಮಾಡಿದವರು. ಪಂಚಾಯತಿಗಳ ಮೂಲಕ ತಳಮಟ್ಟದ ಪ್ರಜಾಪ್ರಭುತ್ವವನ್ನು ಬಲಪಡಿಸಬೇಕೆಂಬ ವಿಚಾರವಾಗಿ ಶ್ರಮಿಸಿದವರು. ಅವರು ಸದಾ ಜನಸಾಮಾನ್ಯರ ಹಿತಾಕಾಂಕ್ಷಿ ಆಗಿದ್ದರೆಂಬುದಕ್ಕೆ ಸಂಡೂರು ಭಾಗದಲ್ಲಿ ನಿರ್ಮಾಣಗೊಂಡ ಅನೇಕ ಕೆರೆ-ಕಟ್ಟೆಗಳೂ ತಾರಾನಗರದ ಬಳಿಯಿರುವ ನಾರಿಹಳ್ಳ ಜಲಾಶಯವೂ ನಿದರ್ಶನಗಳಾಗಿವೆ. ಎಪ್ಪತ್ತರ ದಶಕದಲ್ಲಿ ಅವರು ಕರ್ನಾಟಕ ಸರ್ಕಾರದ ಅರ್ಥ ಸಚಿವರಾಗಿದ್ದಾಗ ಕಾಳಿ ನದಿ ಯೋಜನೆಯನ್ನು ಐದನೆಯ ಪಂಚವಾರ್ಷಿಕ ಯೋಜನೆಯಲ್ಲಿ ಸೇರ್ಪಡೆಯಾಗಲು ಕಾರಣರಾಗಿ ಅದನ್ನು ಕಾರ್ಯಗತಗೊಳಿಸಿದ್ದರು.


ದರೋಜಿ ಕರಡಿ ಧಾಮದಲ್ಲಿ ಹೀಗೊಂದು ಕೂಸುಮರಿ

ಸಂಡೂರಿನಲ್ಲಿ ಹಲವು ಶಿಕ್ಷಣ ಸಂಸ್ಥೆಗಳನ್ನೂ ಅವರು ನಿರ್ಮಿಸಿದ್ದಾರೆ. ಸಾಮಾಜಿಕವಾಗಿ, ರಾಜಕೀಯವಾಗಿ, ಸಾಹಿತ್ಯಿಕವಾಗಿಯೂ, ಸಾಂಸ್ಕೃತಿಕವಾಗಿ ದೇಶಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಸಿ ಮೈಸೂರು ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಿ ಗೌರವಿಸಿತ್ತು. ರಾಜಕೀಯ ಕ್ಷೇತ್ರದಿಂದ ದೂರ ಸರಿದ ಮೇಲೆ ಘೋರ್ಪಡೆಯವರು ತಮ್ಮ ಕೊನೆಯ ದಿನಗಳಲ್ಲಿ ಸಂಡೂರಿನ ವಸತಿ ಶಾಲಾ ಮಕ್ಕಳಿಗೆ ಪಾಠ ಮಾಡುತ್ತಿದ್ದರು. ತಮ್ಮೂರಿನ ಜನರ ಏಳ್ಗೆಯ ಕುರಿತು ತಲೆ ಕೆಡಿಸಿಕೊಳ್ಳುತ್ತಲೇ ಜಗತ್ತೂ ತಿರುಗಿ ನೋಡುವಂತಹ ಸಾಧನೆ ಮಾಡಿದ್ದ ಇಂತಹ ನಾಯಕನ ಅನುಪಸ್ಥಿತಿ ಸಂಡೂರನ್ನು ಈಗಲೂ ಕಾಡುತ್ತಿದೆ.


ಮದಗಜಗಳ ಜಲಯುದ್ಧ


ಎಂ.ವೈ.ಘೋರ್ಪಡೆ


ದಿ ಪ್ರೈಡ್‌ ಕ್ಯಾಚ್‌... ಮಚ್ಚೆ ಗೂಬೆ ಮತ್ತು ಹುಲಿ ತಮ್ಮ ಬೇಟೆಯನ್ನು ಹಿಡಿದು ತಂದ ರೋಚಕ ಕ್ಷಣಗಳು

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು