ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉತ್ತರ ಪ್ರದೇಶದಲ್ಲಿ ಜಿಲ್ಲಾಧಿಕಾರಿ ಕನ್ನಡಿಗ ಸುಹಾಸ್‌; ಬ್ಯಾಡ್ಮಿಂಟನ್‌ನಲ್ಲೂ ಸೈ!

Last Updated 5 ಸೆಪ್ಟೆಂಬರ್ 2021, 5:43 IST
ಅಕ್ಷರ ಗಾತ್ರ

ಪ್ರಯಾಗ್‌ರಾಜ್‌ನಲ್ಲಿ ನಡೆದ ಅರ್ಧ ಕುಂಭಮೇಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಸಿವಿಲ್‌ ಲೇನ್‌ನಲ್ಲಿದ್ದಜಿಲ್ಲಾಧಿಕಾರಿ ನಿವಾಸದಲ್ಲಿ ಕನ್ನಡಿಗಎಲ್.ವೈ.ಸುಹಾಸ್‌ ಮಾತಿಗೆ ಸಿಕ್ಕರು. 2019ರಲ್ಲಿ ಮಾಡಿದ್ದಸಂದರ್ಶನದ ಆಯ್ದ ಭಾಗ ಇಲ್ಲಿದೆ.

‘ಅಲಹಾಬಾದ್‌ನ ಹೆಸರು ಪ್ರಯಾಗ್‌ರಾಜ್‌ ಎಂದು ಬದಲಾಗಿದೆ. ಇಲ್ಲಿ ಬದಲಾಗಿರುವುದು ಹೆಸರಷ್ಟೇ ಅಲ್ಲ, ಈ ನಗರದ ಚಹರೆಯೂ ಕೂಡ...’

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಖಡಕ್‌ ಜಿಲ್ಲಾಧಿಕಾರಿ ಎಲ್.ವೈ.ಸುಹಾಸ್‌ ವಿಶ್ವಾಸದಿಂದ ಮಾತಾಡಿದರು. ಕುಂಭಮೇಳದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿರುವ ಸುಹಾಸ್‌, ಅಲಹಾಬಾದ್‌ ನಗರದಲ್ಲಿ ಒತ್ತುವರಿ ಕಟ್ಟಡಗಳನ್ನು ತೆರವುಗೊಳಿಸುತ್ತಾ ಹೆಸರು ಬದಲಾದಂತೆ, ನಗರವನ್ನೇ ಬದಲಿಸುತ್ತಿದ್ದಾರೆ. 35ರ ಹರೆಯದ ಈ ಐಎಎಸ್‌ ಅಧಿಕಾರಿ, ಕರ್ನಾಟಕದ ಮಂಡ್ಯ ಜಿಲ್ಲೆಯ ಲಾಳಿನಕೆರೆ ಗ್ರಾಮದವರು ಎಂಬುದು ಹೆಮ್ಮೆಯ ವಿಷಯ.

ಇತ್ತೀಚೆಗೆ ಪ್ರಯಾಗ್‌ರಾಜ್‌ನಲ್ಲಿ ನಡೆದ ಅರ್ಧ ಕುಂಭಮೇಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಸಿವಿಲ್‌ ಲೇನ್‌ನಲ್ಲಿರುವ ಜಿಲ್ಲಾಧಿಕಾರಿ ನಿವಾಸದಲ್ಲಿ ಸುಹಾಸ್‌ ಮಾತಿಗೆ ಸಿಕ್ಕರು. ಕುಂಭಮೇಳದ ಬ್ಯುಸಿ ಶೆಡ್ಯೂಲ್‌ ನಲ್ಲೂ, ಒಂದು ವರ್ಷ ಮೂರು ತಿಂಗಳ ಅವಧಿಯಲ್ಲಿ ಪ್ರಯಾಗ್‌ರಾಜ್ ಅಭಿವೃದ್ಧಿಗೆ ತಾವು ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಮಾಹಿತಿ ಹಂಚಿಕೊಂಡರು.

ಪ್ರಯಾಗ್‌ರಾಜ್‌ ಉತ್ತರಪ್ರದೇಶದ ಅತೀ ಹೆಚ್ಚು ಜನಸಂಖ್ಯೆ ಇರುವ ಜಿಲ್ಲೆ. 12 ಶಾಸಕರು ಜಿಲ್ಲೆಯ ವ್ಯಾಪ್ತಿಗೆ ಬರುತ್ತಾರೆ. ಶಿಕ್ಷಣ ಬ್ಲಾಕ್‌ಗಳೂ ಹೆಚ್ಚಿವೆ. ‘ನಾನು ಇಲ್ಲಿಗೆ ಬಂದಾಗ ಎರಡು ಮೇಲ್ಸೇತುವೆಗಳಿದ್ದವು. ಈಗ ಅವು 11 ಆಗಿವೆ. ಅತಿಕ್ರಮಣವನ್ನು ಮುಲಾಜಿಲ್ಲದೇ ತೆರವುಗೊಳಿಸುತ್ತಿದ್ದೇನೆ. ರಸ್ತೆ ಬದಿಯಲ್ಲಿದ್ದ 400ಕ್ಕೂ ಹೆಚ್ಚು ಮಂದಿರ–ಮಸೀದಿಗಳನ್ನು ತೆರವು ಮಾಡಿದ್ದೇನೆ’ ಎನ್ನುತ್ತಾ ನಗರಾಭಿವೃದ್ಧಿಯ ಪ್ರಗತಿಯನ್ನು ವಿವರಿಸಿದರು.

‘ನನಗೆ ಗೊತ್ತಿರುವಂತೆ ಭೋಪಾಲ್‌ನಲ್ಲೂ ಇದೇ ರೀತಿ ದೊಡ್ಡ ಪ್ರಮಾಣದಲ್ಲಿ ಮಸೀದಿ–ಮಂದಿರಗಳ ಅತಿಕ್ರಮಣ ತೆರವು ನಡೆದಿತ್ತು. ಆದರೆ, ಅದಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ಇಲ್ಲಿ ತೆರವು ಕಾರ್ಯಾಚರಣೆ ನಡೆದಿದೆ’ ಎನ್ನುತ್ತಾರೆ.

ಇದಕ್ಕಾಗಿ ಸುಹಾಸ್ ಪ್ರತಿಭಟನೆಗಳನ್ನೂ ಎದುರಿಸಿದ್ದಾರೆ. ಒಮ್ಮೆ 700 ಮಂದಿ ಜಿಲ್ಲಾಧಿಕಾರಿ ನಿವಾಸದ ಮುಂದೆ ಪ್ರತಿಭಟನೆ ಮಾಡಿದ್ದರಂತೆ. ‘ಎಲ್ಲರಿಗೂ ವಸ್ತುಸ್ಥಿತಿ ಮನವರಿಕೆ ಮಾಡಿಕೊಟ್ಟಿದ್ದೇನೆ. ಕೆಲಸ ನ್ಯಾಯಸಮ್ಮತವೆಂದು ಗೊತ್ತಾದ ನಂತರ ಜನರೂ ಒಪ್ಪಿದರು. ನಂತರ ತೆರವು ಕಾರ್ಯ ಮುಂದುವರಿಸಿದ್ದೇನೆ’ ಎಂದು ಕೆಲವು ಘಟನೆಗಳನ್ನು ಅವರು ಉದಾಹರಿಸಿದರು.

ಸುಹಾಸ್, 2007ರ ಉತ್ತರಪ್ರದೇಶ ಕೇಡರ್‌ನ ಐಎಎಸ್ ಅಧಿಕಾರಿ. ಆ ರಾಜ್ಯದ ಆಜಂಗಡ, ಜೋನ್‌ಪುರ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದಾರೆ. ಅಲ್ಲೂ ಇಂಥ ಅತಿಕ್ರಮಣಗಳನ್ನು ತೆರವುಗಳಿಸಿ ಹೆಸರು ಮಾಡಿದ್ದರು ಪ್ರಯಾಗ್‌ರಾಜ್‌ಗೆ ನಿಯೋಜನೆಗೊಂಡ ಮೇಲೂ ಅದೇ ಕೆಲಸ ಮುಂದುವರಿಸಿದ್ದಾರೆ.

‘ನ್ಯಾಯ ಎನ್ನುವುದು ಎಲ್ಲ ಕಡೆಯೂ ಒಂದೇ’ ಎನ್ನುವ ಅವರು, ‘ನಮ್ಮ ಉದ್ದೇಶ ನ್ಯಾಯೋಚಿತವಾಗಿದ್ದರೆ ಎಲ್ಲಿ ಹೋದರೂ ಜನರು ನಮ್ಮನ್ನು ಗೌರವಿಸುತ್ತಾರೆ. ಈಗ ಇಲ್ಲಿನ ಜನ ನನ್ನನ್ನು ಚಿತ್ರನಟನ ರೀತಿ ಆದರಿಸುತ್ತಾರೆ’ ಎಂದು ಖುಷಿಯಿಂದ ಹೇಳುತ್ತಾರೆ.

ಬ್ಯಾಡ್ಮಿಂಟನ್‌ನಲ್ಲೂ ಸೈ!

ಸುಹಾಸ್‌ ಯಶಸ್ವಿ ಬ್ಯಾಡ್ಮಿಂಟನ್‌ ಆಟಗಾರ ಕೂಡ. ಅವರ ಒಂದು ಕಾಲಿನಲ್ಲಿರುವ ಸಣ್ಣ ಸಮಸ್ಯೆಯಿಂದ ಪ್ಯಾರಾಗೇಮ್ಸ್‌ಗಳಲ್ಲಿ ಆಡುತ್ತಾರೆ. ಕಳೆದ ವರ್ಷ ಜಕಾರ್ತಾ ಪ್ಯಾರಾ ಏಷ್ಯನ್‌ ಕ್ರೀಡೆಗಳಲ್ಲಿ ಕಂಚಿನ ‍ಪದಕ ಗೆದ್ದುಕೊಂಡ ನಂತರ ದೇಶಕ್ಕೆ ಮರಳಿದಾಗ ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ.

‘ಕುಂಭಮೇಳದ ಕಾರಣ ಆರು ತಿಂಗಳಿಂದ ನಾನು ಆಡಲು ಬಿಡುವಾಗುತ್ತಿಲ್ಲ. ಕುಂಭಮೇಳ ಮುಗಿದ ನಂತರ ಮತ್ತೆ ಬ್ಯಾಡ್ಮಿಂಟನ್‌ನಲ್ಲಿ ಸಕ್ರಿಯನಾಗುತ್ತೇನೆ. 2016ರಲ್ಲಿ ಬೀಜಿಂಗ್‌ನಲ್ಲಿ ನಡೆದ ಏಷ್ಯಾ ಪ್ಯಾರಾ ಚಾಂಪಿಯನ್‌ಷಿಪ್‌ನಲ್ಲಿ ಸ್ವರ್ಣ ಗೆದ್ದುಕೊಂಡಿದ್ದೆ. ಮುಂದಿನ ಗುರಿ ವಿಶ್ವದ 16 ಅಗ್ರಮಾನ್ಯ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆಯುವುದು. ವಿಶ್ವ ರ‍್ಯಾಂಕಿಂಗ್‌ನಲ್ಲಿ 16ರೊಳಗೆ ಸ್ಥಾನ ಪಡೆದರೆ ವಿಶ್ವ ಚಾಂಪಿಯನ್‌ಷಿಪ್‌ಗೆ ಪ್ರಯತ್ನಿಸಬಹುದು. ಆದರೆ ಈ ಉದ್ದೇಶ ಈಡೇರಬೇಕಾದರೆ ಕೆನಡ, ಟರ್ಕಿ, ದುಬೈ, ಯುಗಾಂಡದಲ್ಲಿ ನಡೆಯುವ ಟೂರ್ನಿಗಳಲ್ಲಿ ಯಶಸ್ಸು ಗಳಿಸಬೇಕು. ನನಗೆ ಆ ವಿಶ್ವಾಸವಿದೆ’ ಎನ್ನುತ್ತಾರೆ ಸುಹಾಸ್‌.

‘ಆಟ ಆಡುವುದು ನಿಮ್ಮ ಕೈಲಿದೆ. ಹೆಸರು, ಹಣದ ಹಿಂದೆ ಹೋಗಬೇಡಿ. ಅದು ಯಾವಾಗ ಬರಬೇಕು ಆಗ ಬಂದೇ ಬರುತ್ತದೆ’ ಎಂದು ಕ್ರಿಕೆಟ್‌ ಆಟಗಾರ ರಾಹುಲ್‌ ದ್ರಾವಿಡ್‌ ಹೇಳಿದ್ದರು. ಅವರ ಮಾತುಗಳು ನನಗೆ ಸ್ಫೂರ್ತಿದಾಯಕ. ನಾನು ಬೆಂಗಳೂರಿನ ಇಂದಿರಾನಗರದಲ್ಲಿದ್ದಾಗ ನನ್ನ ಮತ್ತು ದ್ರಾವಿಡ್‌ ಅವರ ಮನೆಯ ನಡುವೆ ಎರಡು ಕ್ರಾಸ್‌ಗಳ ಅಂತರವಷ್ಟೇ ಇತ್ತು ಎಂದು ಅವರು ನೆನಪಿಸಿಕೊಂಡರು.

ಪ್ಯಾರಾ ಬ್ಯಾಡ್ಮಿಂಟನ್‌ ಆಟದಲ್ಲಿ ಅವರ ಸಾಧನೆ ಗುರುತಿಸಿರುವ ಉತ್ತರ ಪ್ರದೇಶ ಸರ್ಕಾರ, 2016ರ ಡಿಸೆಂಬರ್‌ನಲ್ಲಿ ‘ಯಶ್ ಭಾರತಿ’ ಪ್ರಶಸ್ತಿ ನೀಡಿ ಗೌರವಿಸಿದೆ. ಇದು ಆ ರಾಜ್ಯದ ಅತ್ಯುನ್ನತ ಪ್ರಶಸ್ತಿ.

ಸಾಹಸ ಪಯಣ!

ಸುಹಾಸ್‌ ತಂದೆ ಯತಿರಾಜ್ ಎಲ್.ಕೆ, ನೀರಾವರಿ ಇಲಾಖೆಯಲ್ಲಿ ಎಇಇ ಆಗಿದ್ದರು. ತಾಯಿ ಸಿ.ಎಸ್. ಜಯಶ್ರೀ ಹಾಸನದವರು. ಮಂಡ್ಯ ಸಮೀಪದ ದುದ್ದದಲ್ಲಿ ಪ್ರಾಥಮಿಕ ಶಿಕ್ಷಣ. ಶಿವಮೊಗ್ಗದಲ್ಲಿ ಪ್ರೌಢಶಿಕ್ಷಣ. ಸುರತ್ಕಲ್‌ನ ಎನ್‌ಐಟಿಕೆಯಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದರು.

2005ರಲ್ಲಿ ಜರ್ಮನಿ ಮೂಲದ ಸ್ಯಾಪ್‌ಲ್ಯಾಬ್‌ನಲ್ಲಿ ಉದ್ಯೋಗ ದೊರೆಯಿತು. ಉದ್ಯೋಗ ನಿಮಿತ್ತ ಅವರು ಜರ್ಮನಿಗೆ ಹೋಗಿದ್ದರು. ಅದೇ ವೇಳೆ, ಇಲ್ಲಿ ತಂದೆ ಹೃದಯಾಘಾತದಿಂದ ಮೃತಪಟ್ಟಿದ್ದರು. ಮನೆಯ ಜವಾಬ್ದಾರಿ ಹೆಗಲಿಗೆ ಬಿತ್ತು. ಅಪ್ಪನನ್ನು ತುಂಬಾ ಹಚ್ಚಿಕೊಂಡು ಬೆಳೆದಿದ್ದ ಸುಹಾಸ್ ಅವರಿಗೆ ಈ ಘಟನೆ ತೀವ್ರ ನೋವುಂಟು ಮಾಡಿತು. ಆದರೂ ತಂದೆಯ ಕನಸು ನನಸು ಮಾಡಲು ಉದ್ಯೋಗದಲ್ಲಿದ್ದುಕೊಂಡೇ 2006ರಲ್ಲಿ ಐಎಎಸ್‌ ಪ್ರಿಲಿಮ್ಸ್‌ ಪರೀಕ್ಷೆ ಬರೆದು ಪಾಸು ಮಾಡಿದರು. ಕೆಲಸಕ್ಕೆ ರಜೆ ಹಾಕಿ, ಮುಖ್ಯ ಪರೀಕ್ಷೆಗೂ ತಯಾರಿ ನಡೆಸಿದರು. ಅವರಿಗೆ ಯಶಸ್ಸು ದೊರೆಯಿತು. 2007ರಲ್ಲಿ ಐಎಎಸ್ ಅಧಿಕಾರಿಯಾದರು. 2009ರಲ್ಲಿ ಋತು ಅವರನ್ನು ವಿವಾಹವಾದರು. ಅವರೂ ಈಗ ಪ್ರಯಾಗ್‌ರಾಜ್‌ ಮಹಾನಗರ ಪಾಲಿಕೆಯಲ್ಲಿ ಹೆಚ್ಚುವರಿ ಆಯುಕ್ತೆಯಾಗಿದ್ದಾರೆ.

‘ತಂದೆ ಹಲವು ಸಭೆಗಳಲ್ಲಿ ಜಿಲ್ಲಾಧಿಕಾರಿಗಳನ್ನು ನೋಡಿದ್ದರು. ನನ್ನ ಮಗನೂ ಜಿಲ್ಲಾಧಿಕಾರಿಯಾಗಬೇಕೆಂದು ಬಯಸಿದ್ದರು. ನಾನು ಇವತ್ತು ಈ ಸ್ಥಾನದಲ್ಲಿರಬೇಕಾದರೆ ಅದಕ್ಕೆ ಅವರೇ ಕಾರಣ’ ಎಂದು ನೆನಪಿಸಿಕೊಂಡರು.

**

ಸಮಸ್ಯೆಗಳು ಎಂಥವರನ್ನೂ ನಿರಾಶೆಯ ಕೂಪಕ್ಕೆ ತಳ್ಳುತ್ತವೆ ನಿಜ. ಆದರೆ ಅವೆಲ್ಲವನ್ನೂ ಎದುರಿಸುವಂತಹ ವಿಶ್ವಾಸ ಬೆಳೆಸಿಕೊಳ್ಳಬೇಕು. ನಾವು ಯಾವಾಗಲೂ ಆಶಾವಾದಿಯಾಗಿರಬೇಕು. ನಮ್ಮೊಳಗಿರುವ ಕಿಚ್ಚನ್ನು ಪ್ರಕಾಶವಾಗಿ ಬೆಳಗಿಸಬೇಕು...
-ಸುಹಾಸ್ ಎಲ್ ವೈ, ಜಿಲ್ಲಾಧಿಕಾರಿ, ಪ್ರಯಾಗ್‌ರಾಜ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT