ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಕಾಲದಲ್ಲಿ ಬದಲಾದ ಮದುವೆಯ ಪರಿಕಲ್ಪನೆ

Last Updated 4 ಆಗಸ್ಟ್ 2020, 20:00 IST
ಅಕ್ಷರ ಗಾತ್ರ

ಕೊರೊನಾ ಸೋಂಕು ಶುರುವಾದ ಮೇಲೆ ಆಡಂಬರದ ಮದುವೆಗೆ ಬ್ರೇಕ್ ಬಿದ್ದಿದೆ. ತಂದೆ–ತಾಯಿ ಮಕ್ಕಳ ಮದುವೆಗೆಂದು ಕೂಡಿಟ್ಟು ಹಣ ಅವರ ಭವಿಷ್ಯಕ್ಕೆಂದು ತೆಗೆದಿರಿಸುತ್ತಿದ್ದಾರೆ. ಜೊತೆಗೆ ವಿವಾಹ ನೋಂದಣಿ ಮಾಡಿಸಿಕೊಂಡರೂ ಸಾಕು ಎನ್ನುವ ಹಂತಕ್ಕೆ ಬಂದಿದ್ದಾರೆ.

*

ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ ನಿಶಾ ಹಾಗೂ ನರೇಶ್ ಮದುವೆಯಾಗುವ ನಿರ್ಧಾರ ಮಾಡಿದ್ದರು. ಈ ಬಗ್ಗೆ ನಿಶಾ ಮೊದಲು ಮನೆಯಲ್ಲಿ ಮಾತನಾಡಿದ್ದಳು. ಆದರೆ ಹುಡುಗನ ಉದ್ಯೋಗ ಹಾಗೂ ಜಾತಿ–ಅಂತಸ್ತು ತಮಗೆ ಹೊಂದಿಕೆಯಾಗುತ್ತಿಲ್ಲ ಎಂಬ ಕಾರಣಕ್ಕೆ ಮದುವೆ ನಿರಾಕರಿಸಿದ್ದರು ತಂದೆ–ತಾಯಿ. ಅಲ್ಲದೆ ಬೇರೆ ಹುಡುಗನ ಹುಡುಕಾಟದಲ್ಲಿ ತೊಡಗಿದ್ದರು. ಅಷ್ಟರಲ್ಲಿ ಕೋವಿಡ್–19 ಆವರಿಸಿದ್ದ ಕಾರಣ ಜಗತ್ತು ಬದಲಾಗಿತ್ತು. ಕೋವಿಡ್ ತಂದ ಬದಲಾವಣೆ ನಿಶಾ ತಂದೆ–ತಾಯಿಯ ಮನ ಪರಿವರ್ತಿಸಿತ್ತು. ಜಾತಿ–ಅಂತಸ್ತು, ಆಡಂಬರದ ಮದುವೆ ಎನ್ನುತ್ತಿದ್ದ ನಿಶಾ ಪೋಷಕರು ಸರಳ ಮದುವೆಗೆ ಒಪ್ಪಿದ್ದಲ್ಲದೇ ವಿವಾಹ ನೋಂದಣಿ ಮಾಡಿಸಿಕೊಂಡರೂ ಸಾಕು ಎಂಬ ಚಿಂತನೆ ನಡೆಸುತ್ತಿದ್ದಾರೆ.

ಇದು ಕೇವಲ ನಿಶಾ–ನರೇಶ್‌ ಕುಟುಂಬದ ಕಥೆಯಲ್ಲ. ಅನೇಕ ಪೋಷಕರು ತಮ್ಮ ಮಕ್ಕಳ ಮದುವೆ ವಿಷಯದಲ್ಲಿ ಬದಲಾಗಿದ್ದಾರೆ. ಅಲ್ಲದೇ ತಮ್ಮ ಮನೋಭಾವಕ್ಕೆ ಹೊಂದುವಂತಹ ಕುಟುಂಬಗಳ ಜೊತೆ ಸಂಬಂಧ ಬೆಳೆಸುತ್ತಿದ್ದಾರೆ.

ಮಿಲೇನಿಯಲ್ ವರ್ಗದವರು ಈಗ ಸರಳ ಮದುವೆಯತ್ತ ಹೆಚ್ಚು ಒಲವು ತೋರುತ್ತಿದ್ದಾರೆ. ತಮಗೆ ಇಷ್ಟವಾದ ಹುಡುಗ/ಹುಡುಗಿಯೊಂದಿಗೆ ತಂದೆ–ತಾಯಿಯ ಒಪ್ಪಿಗೆ ಪಡೆದು ಸರಳ ವಿವಾಹ ಅಥವಾ ವಿವಾಹ ನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಳ್ಳುವ ಯೋಚನೆ ಅವರದ್ದು.

‘ನಾನು ಹಾಗೂ ಸ್ವಾತಿ ಇಬ್ಬರೂ ಸಾಫ್ಟ್‌ವೇರ್ ಉದ್ಯೋಗಿಗಳು. ತಂದೆ–ತಾಯಿಯೇ ನಮ್ಮಿಬ್ಬರ ಮದುವೆ ಫಿಕ್ಸ್ ಮಾಡಿದ್ದರು. ಮಾರ್ಚ್‌ನಲ್ಲಿ ಮದುವೆ ಎಂದೂ ತೀರ್ಮಾನವಾಗಿತ್ತು. ಕೊರೊನಾ ಕಾರಣದಿಂದ ಮದುವೆ ಮುಂದಕ್ಕೆ ಹಾಕಲಾಗಿದೆ. ಆಡಂಬರದ ಮದುವೆ ಮಾಡಬೇಕು ಎನ್ನುತ್ತಿದ್ದ ನಮ್ಮಿಬ್ಬರ ತಂದೆ–ತಾಯಿ ಈಗ ಕೊರೊನಾ ಮುಗಿದ ಬಳಿಕ ದೇವಸ್ಥಾನದಲ್ಲಿ ಸರಳವಾಗಿ ಮದುವೆಯಾಗಿ ಎನ್ನುತ್ತಿದ್ದಾರೆ. ಮದುವೆಯ ಹಣವನ್ನು ಉಳಿತಾಯ ಖಾತೆಯಲ್ಲಿ ಇರಿಸುತ್ತೇನೆ. ಅದು ಭವಿಷ್ಯಕ್ಕೆ ನೆರವಾಗುತ್ತದೆ ಎಂಬ ನಂಬಿಕೆ ನನ್ನದು’ ಎನ್ನುತ್ತಾರೆ ನಿಶ್ಚಿತ್‌.

ಸೆಮಿ ಅರೆಂಜ್ಡ್‌ ಮದುವೆ ಮೇಲೆ ಯುವಜನರು ಹೆಚ್ಚು ಒಲವು ತೋರುತ್ತಿದ್ದಾರೆ. ಇತ್ತೀಚಿನವರೆಗೂ ತಂದೆ–ತಾಯಿ, ಮಕ್ಕಳ ಮದುವೆ ಬಗ್ಗೆ ತಲೆಕೆಡಿಸಿಕೊಂಡು ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌, ಬ್ರೋಕರ್‌ಗಳ ಮೊರೆ ಹೋಗುತ್ತಿದ್ದರು. ಆದರೆ ಈಗ ಹಾಗಿಲ್ಲ. ಮಕ್ಕಳೇ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳಲ್ಲಿ ತಮ್ಮ ಪ್ರೊಫೈಲ್ ಅಪ್‌ಡೇಟ್‌ ಮಾಡಿ ಯೋಗ್ಯ ಸಂಗಾತಿಗಳನ್ನು ಹುಡುಕುವ ಕೆಲಸ ಮಾಡುತ್ತಿದ್ದಾರೆ. ತಮಗೆ ಒಪ್ಪಿಗೆಯಾದ ಮೇಲೆ ತಂದೆ–ತಾಯಿಯ ಒಪ್ಪಿಗೆ ಪಡೆಯುತ್ತಿದ್ದಾರೆ. ಈಗಾಗಲೇ ಕೆಲವರು ಯೋಗ್ಯ ಸಂಗಾತಿಯನ್ನು ಹುಡುಕಿಕೊಂಡಿದ್ದು ಕೊರೊನಾ ನಿಯಂತ್ರಣಕ್ಕೆ ಬಂದ ಬಳಿಕ ಮದುವೆಯಾಗುವ ಯೋಜನೆ ಹಾಕಿಕೊಂಡಿದ್ದಾರೆ.

ಆಡಂಬರಕ್ಕೆ ಬ್ರೇಕ್‌
ಹಿಂದೆ ಮದುವೆ ಎಂದರೆ ಜಾತಿ–ಸಂಪ್ರದಾಯ, ಆಡಂಬರ–ಆಚರಣೆ ಇತ್ತು.

ಆದರೆ, ಈಗ ಆಡಂಬರಕ್ಕೆ ಬ್ರೇಕ್ ಬಿದ್ದಿದೆ. ತಂದೆ–ತಾಯಿ ಮಕ್ಕಳ ಮದುವೆಗೆಂದು ಕೂಡಿಟ್ಟು ಹಣ ಅವರ ಭವಿಷ್ಯಕ್ಕೆಂದು ತೆಗೆದಿರಿಸುತ್ತಿದ್ದಾರೆ. ಸರಳ ವಿವಾಹದ ಮೂಲಕ ಹಣ ಉಳಿತಾಯದ ಚಿಂತನೆ ನಡೆಸಿದ್ದಾರೆ. ‌‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT