ಶುಕ್ರವಾರ, ಜುಲೈ 1, 2022
25 °C

ಹುಷಾರು, ಸುತ್ತಲೂ ಬೆಂಕಿ ಇದೆ!

ಎಚ್‌.ಎಲ್‌.ಪುಷ್ಪ Updated:

ಅಕ್ಷರ ಗಾತ್ರ : | |

ಭಾರತೀಯರು ಎಂದು ಬೀಗುವ ನಾವು ಜಾಗತಿಕ ಮಟ್ಟದಲ್ಲಿ ಹೆಣ್ಣಿನ ಮೇಲೆ ನಿರಂತರ ಆಕ್ರಮಣ ನಡೆಸುವ ದೇಶದವರು ಎಂದು ಇನ್ನು ಮುಂದೆ ತಲೆತಗ್ಗಿಸಬೇಕಾಗಿದೆ. ಇಲ್ಲಿನ ಗತ ಪುರಾಣಗಳ ಬಗ್ಗೆ, ಸ್ಮಾರಕಗಳ ಬಗ್ಗೆ, ಗತ ಚರಿತ್ರೆಯ ಬಗ್ಗೆ ಹಾಡಿ ಹೊಗಳಿಕೊಳ್ಳುತ್ತಿರುವ ನಮ್ಮನ್ನು ಇಂತಹ ಸಂಗತಿಗಳು ತಲೆ ಎತ್ತದಂತೆ ಮಾಡುತ್ತವೆ.

***

ಒಂದೆಡೆ ಭಾರತದಲ್ಲಿ ಮಹಿಳೆಯರ ಮೇಲೆ ಇನ್ನೂ ನಿಲ್ಲದ ಆಕ್ರಮಣ, ಅತ್ಯಾಚಾರಗಳು ಜಾಗತಿಕ ಮಟ್ಟದಲ್ಲಿ ಸುದ್ದಿ ಮಾಡುತ್ತಿವೆ. ಇನ್ನೊಂದೆಡೆ ಜಾಗತಿಕವಾಗಿ ನೊಬೆಲ್ ಪ್ರಶಸ್ತಿ ಪಡೆದ ಮಹಿಳೆಯರ ಬಗ್ಗೆ ಮೆಚ್ಚುಗೆಯಿಂದ ಮಾತನಾಡಲಾಗುತ್ತಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಜೀನ್‌ಗಳ ನಡುವೆ ತೇಪೆ ಹಾಕುವ ‘ಜೀನ್ ಎಡಿಟಿಂಗ್’ ಎಂಬ ವಿಷಯದ ಬಗ್ಗೆ ಪ್ರೊ. ಎಮ್ಯಾನ್ಯುಯಲ್ ಶೆಪೆಂತೆರ್ ಹಾಗೂ ಪ್ರೊ. ಜೆನ್ನಿಫರ್ ಡೌಡ್ನ ಜೊತೆಯಾಗಿ ಸಂಶೋಧನೆ ನಡೆಸಿ ನೊಬೆಲ್ ಪುರಸ್ಕಾರವನ್ನು ಪಡೆದಿದ್ದಾರೆ. ಆಮೆರಿಕದ ಕವಯಿತ್ರಿ ಲೂಯಿಸ್ ಗ್ಲಕ್ ನೊಬೆಲ್‌ ಸಾಹಿತ್ಯ ಕಿರೀಟ ತೊಟ್ಟಿರುವುದನ್ನು ನಾವು ಖುಷಿಯಿಂದ ಓದಿದ್ದೇವೆ. ಇವೆಲ್ಲವೂ ಸರಿಯಿದೆ ಎಂದು ನಾವು ನಮ್ಮ ಮನೆಯ ಹೊಸ್ತಿಲು ಮೆಟ್ಟಿದರೆ ಅಲ್ಲಿ ನಮಗೆ ಕಾಣ ಸಿಗುವುದೇನು?

ಭಾರತೀಯರು ಎಂದು ಬೀಗುವ ನಾವು ಜಾಗತಿಕ ಮಟ್ಟದಲ್ಲಿ ಹೆಣ್ಣಿನ ಮೇಲೆ ನಿರಂತರ ಆಕ್ರಮಣ ನಡೆಸುವ ದೇಶದವರು ಎಂದು ಇನ್ನು ಮುಂದೆ ತಲೆತಗ್ಗಿಸಬೇಕಾಗಿದೆ. ಇಲ್ಲಿನ ಗತ ಪುರಾಣಗಳ ಬಗ್ಗೆ, ಸ್ಮಾರಕಗಳ ಬಗ್ಗೆ, ಗತ ಚರಿತ್ರೆಯ ಬಗ್ಗೆ ಹಾಡಿ ಹೊಗಳಿಕೊಳ್ಳುತ್ತಿರುವ ನಮ್ಮನ್ನು ಇಂತಹ ಸಂಗತಿಗಳು ತಲೆ ಎತ್ತದಂತೆ ಮಾಡುತ್ತವೆ. ಎಚ್. ಎಲ್. ನಾಗೇಗೌಡರು ಸಂಪುಟಗಳಲ್ಲಿ ತಂದಿರುವ ‘ಪ್ರವಾಸಿ ಕಂಡ' ಭಾರತಕ್ಕೆ ವ್ಯಾಪಾರ, ಉದ್ದಿಮೆ, ರಾಜಕೀಯ ಕಾರಣಗಳಿಗೆ ಭೇಟಿ ಕೊಟ್ಟ ಪ್ರವಾಸಿಗರು ಪ್ರಾಚೀನ ಭಾರತದಲ್ಲಿ ಮಹಿಳೆಯರನ್ನು ಹೀನಾಯವಾಗಿ ನಡೆಸಿಕೊಳ್ಳುವ ಹಿಂದೂ ಧರ್ಮದ ಹಲವು ಬರ್ಭರವಾದ ಸಂಪ್ರದಾಯಗಳ ಬಗ್ಗೆ ಚಿತ್ರಿಸಿದ್ದಾರೆ. ಬಾಲ್ಯವಿವಾಹ, ಸತಿ ಸಹಗಮನ, ವೈದವ್ಯ ಮೊದಲಾದ ಅನಿಷ್ಟಗಳ ಮೂಲಕ ಹೆಣ್ಣನ್ನು ನಡೆಸಿಕೊಳ್ಳುವ ಸಮಾಜದ ಬಗ್ಗೆ ಅಲ್ಲಲ್ಲಿ ಪ್ರಸ್ತಾಪಿಸಿದ್ದಾರೆ. ಇವುಗಳನ್ನು ನಾವು ನಂಬಲೇ ಬೇಕೆಂದಿಲ್ಲ. ಆದರೆ, ಭಾರತೀಯ ಸಮಾಜದಲ್ಲಿನ ಹೆಣ್ಣಿನ ಚಿತ್ರಣಗಳನ್ನು ಇಂತಹ ತುಣುಕುಗಳ ಮೂಲಕ ಕಟ್ಟಿಕೊಡಲು ಸಾಧ್ಯ. ಭಾರತಕ್ಕೆ ಏನಾಗುತ್ತಿದೆ, ಯಾಕೆ ಅಳಿವಿನ ಕಡೆಗೆ ಅದು ಸಾಗುತ್ತಿದೆ ಎಂಬ ಪ್ರಶ್ನೆ ಇಂದು ಕಾಡುತ್ತಿದೆ.

ಇದೆಲ್ಲದರ ಮೂಲ ಹೆಣ್ಣನ್ನು ಅನುಭವಿಸಿ ಬೀಸಾಡುವ ಒಂದು ಸರಕನ್ನಾಗಿ ನೋಡುತ್ತಿರುವುದು. ಹಾಸುಂಡು ಬೀಸಿ ಒಗೆದಾಂಗ ಎನ್ನುವಂತೆಯೇ ಅವಳನ್ನು ಭುಂಜಿಸುವ ಒಂದು ವ್ಯಂಜನ ಪದಾರ್ಥವಾಗಿ ಕಾಣುತ್ತಿರುವುದು. ಹೆಣ್ಣನ್ನು, ಅವಳು ಯಾವುದೇ ವರ್ಗಕ್ಕೆ ಸೇರಿರಲಿ, ಅವಳನ್ನು ದಲಿತಳಂತೆಯೇ ಮೊದಲಿನಿಂದಲೂ ನೋಡುತ್ತಾ ಬರಲಾಗಿದೆ. ಮುಟ್ಟು, ಹೆರಿಗೆ ಎಂಬ ಇನ್ನೊಂದು ಜೀವ ತಳೆಯುವುದಕ್ಕೆ ಅನುವು ಮಾಡಿಕೊಡುವ ಕ್ರಿಯೆಗಳನ್ನು ಮೈಲಿಗೆಯಾಗಿ ಕಂಡು ಎಲ್ಲ ಶಾಸ್ತ್ರ ಸಂಬಂಧಿತ ಆಚರಣೆಗಳಿಂದ ದೂರವಿಡಲಾಯಿತು. ವೇದ, ಶಾಸ್ತ್ರಗಳನ್ನು ಕಲಿಯಬಾರದು ಎಂದು ಎಲ್ಲ ಜ್ಞಾನ ಮೂಲಗಳಿಂದ ಹೊರಗಿಡಲಾಯಿತು. ಆರಂಭದಲ್ಲಿ ಎಲ್ಲಾ ದೇಶ, ಭಾಷೆಗಳಲ್ಲೂ ಸೂಕ್ಷ್ಮವಾಗಿ ಗಮನಿಸಿದರೆ ಇದೇ ಸಂಗತಿಗಳು ಗೋಚರವಾಗುತ್ತವೆ.

ಭಾರತದಲ್ಲಿ ಹೆಣ್ಣು ಕುರಿತಾದ ಅಸಮಾನತೆಗಳನ್ನು ವೇದ ಶಾಸ್ತ್ರಗಳ ಒಂದು ಭಾಗವೆನ್ನುವಂತೆಯೇ ಕಾಣಲಾಯಿತು ಹಾಗೂ ನಂಬಿಸಲಾಯಿತು ರಾಮಾಯಣ, ಮಹಾಭಾರತಗಳಂಥ ಕೃತಿಗಳು ಕೂಡ ಮಹಿಳೆಯರನ್ನು ಪುರುಷಾಹಂಕಾರವನ್ನು ತಣಿಸುವಿಕೆಯ ಒಂದು ಸಾಧನವನ್ನಾಗಿಯೇ ಕಂಡವು. ದ್ರೌಪದಿ ಐದು ಜನ ವೀರಾಧಿವೀರರಾದ ಗಂಡಂದಿರು ಇದ್ದೂ ಮತ್ತೆ, ಮತ್ತೆ ಅವಮಾನಕ್ಕೆ ಈಡಾಗುತ್ತಾಳೆ. ಆದರ್ಶ ರಾಜ್ಯದ ಕಲ್ಪನೆಗೆ ಉದಾಹರಣೆಯಾಗಿ ನಿಂತಿರುವ ರಾಮ ಮರ್ಯಾದಾ ಪುರುಷೋತ್ತಮ ಎನಿಸಿಕೊಳ್ಳಲು ಸೀತೆ ಮತ್ತೆ ಮತ್ತೆ ಅವಮಾನ ಎದುರಿಸಬೇಕಾಯಿತು. ಇದು ಭಾರತೀಯ ಸಂಸ್ಕೃತಿ ಹೆಣ್ಣನ್ನು ನಡೆಸಿಕೊಂಡ ಕ್ರಮ. ಹೆಣ್ಣಿನ ನಿಜವಾದ ಉಲ್ಲಾಸ, ಜೀವನೋತ್ಸಾಹಗಳನ್ನು ಸಂಕಟದ ಬದುಕಿನೊಂದಿಗೆ ಜನಪದ ಕಾವ್ಯ ಹಾಗೂ ಕಥನಗಳು ನೈಜವಾಗಿ ಚಿತ್ರಿಸಿವೆ. ಅವು ಹೆಣ್ಣ ನೋಟದಿಂದ ಕಟ್ಟಿದ ನಿಜವಾದ ಚರಿತ್ರೆ. ಮುಖ್ಯವಾದ ಮಾರ್ಗಕೃತಿಗಳೆಲ್ಲವನ್ನೂ ಪುರುಷರೇ ಬರೆದಿರುವುದರಿಂದ ಗಂಡು ನೋಡಲಿಚ್ಛಿಸುವ ಹೆಣ್ಣಚಿತ್ರಗಳು ಮಾತ್ರ ನಮಗೆ ಕಾಣಸಿಗುತ್ತವೆ.

ವರ್ತಮಾನದ ಭಾರತದ ಹೆಣ್ಣು ತನ್ನನ್ನು ಆಧುನಿಕ ನಾಗರಿಕ ಭಾರತದ ಒಂದು ಭಾಗ ಎಂದು ಹಲವಾರು ಕ್ಷೇತ್ರಗಳಲ್ಲಿ ಕಂಡಿಕೊಂಡಿದ್ದಾಳೆ. ಅಷ್ಟೇ ಅಲ್ಲ ನಂಬಿಸಿಕೊಂಡಿದ್ದಾಳೆ. ಪ್ರಸ್ತುತ ಪರಿಸ್ಥಿತಿ ಹಾಗೆ ಇದೆಯೇ. ಖಂಡಿತಾ ಇಲ್ಲ. ಹೆಣ್ಣು ಅಬಲೆ ಎನ್ನುವುದರ ಜೊತೆ ಅವಳ ಜಾತಿಯೂ ಅವಳನ್ನು ಬೇಟೆಯಾಡುತ್ತದೆ. ಇತ್ತೀಚೆಗೆ ದಲಿತ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ನೋಡಿದರೆ ಸ್ವತಃ ಮನುವಾದಿ ಪುರುಷರೇ ಹೇಸಿಗೆ ಪಟ್ಟುಕೊಳ್ಳಬೇಕು. ಅಷ್ಟರ ಮಟ್ಟಿಗೆ ಮಾನವೀಯತೆ ಕುಸಿಯುತ್ತಿದೆ.

ನಿರ್ಭಯ ಪ್ರಕರಣ ನಡೆದಾಗ ಭಾರತದ ಎಲ್ಲ ಸಜ್ಜನ ನಾಗರಿಕರು ಬೆಚ್ಚಿಬಿದ್ದರು. ಅಲ್ಲಿ ಜಾತಿಯ ಪ್ರಶ್ನೆ ಇರಲಿಲ್ಲ. ಇದ್ದದ್ದು ಎಲ್ಲರ ಮನೆಯಲ್ಲಿ ಇರಬಹುದಾದ ಹೆಣ್ಣೊಬ್ಬಳ ಮೇಲೆ ನಡೆಯಬಲ್ಲ ಅತ್ಯಾಚಾರದ ಭಯಾನಕತೆಯ ನೋವು. ಈ ಭಯಾನಕ ಕೇಸಿನಲ್ಲಿ ಹದಿಹರೆಯದ ಅಪರಾಧಿಯನ್ನು ಒಳಗೊಂಡಂತೆ ಬೇರೆ, ಬೇರೆ ವರ್ಗಕ್ಕೆ ಸೇರಿದ ವಿಕೃತರಿದ್ದರು. ನಿಧಾನವಾಗಿಯಾದರೂ ಈ ಪ್ರಕರಣವನ್ನು ಬಗೆಹರಿಸಿದಾಗ ಅಪರಾಧಿಯೊಬ್ಬ ಸತ್ತು ಹೋಗಿದ್ದ. ಬಾಲಾಪರಾಧಿಯನ್ನು ಕುರಿತಾಗಿ ಜಿಜ್ಞಾಸೆ ನಡೆದು ಕಾನೂನು ತಿದ್ದುಪಡಿಯೂ ಜಾರಿಗೆ ಬಂತು. ಅಂತೂ, ಇಂತೂ ಭಾರತದ ನ್ಯಾಯಾಂಗ ವ್ಯವಸ್ಥೆ ಜಾಗತಿಕ ಮಟ್ಟದಲ್ಲಿ ತನ್ನ ಘನತೆಯನ್ನು ಎತ್ತಿ ಹಿಡಿಯಿತು. ಆದರೆ ಮೊನ್ನೆ ನಡೆದಿರುವ ಹಾಥರಸ್ ಪ್ರಕರಣ ಮತ್ತೊಮ್ಮೆ ಜಗತ್ತನ್ನು ತನ್ನ ಕಡೆಗೆ ತಿರುಗುವಂತೆ ಮಾಡಿದೆ. ಬಲಿಷ್ಠ ವರ್ಗಕ್ಕೆ ಸೇರಿದ ಪುಂಡು ಪೋಕರಿ ಹುಡುಗರುಗಳಿಗೆ ತಮಗಿಂತಲೂ ಚೆನ್ನಾಗಿ ಓದುವ, ಬದುಕುವ ಬೇರೆ ವರ್ಗಗಳ ಹುಡುಗ, ಹುಡುಗಿಯರನ್ನು ಕಂಡರೆ ಮತ್ಸರವಿರುತ್ತದೆ. ಈ ಮತ್ಸರ ಹೊರಹೊಮ್ಮುವುದು ಆಕ್ರಮಣ, ಅತ್ಯಾಚಾರಗಳ ಮೂಲಕ. ಪ್ರಭುತ್ವಕ್ಕೆ ಪುರಾತನ ಗುಡಿ, ಗೋಪುರಗಳ ಕೆಳಗಿರುವ ಅಸ್ಥಿಪಂಜರಗಳನ್ನು ಕೆದಕುವಲ್ಲಿ ಇರುವ ಆಸಕ್ತಿ ಜೀವಂತ ವ್ಯಕ್ತಿಗಳ ಜೀವದ ಬಗ್ಗೆ ಇಲ್ಲ. ಧರ್ಮ ಮತ್ತು ರಾಜಕಾರಣಗಳು ಎಲ್ಲಿಯವರೆಗೆ ಮನುಷ್ಯರ ಜೀವದ ಘನತೆಯ ಬಗ್ಗೆ ಚಿಂತಿಸುವುದಿಲ್ಲವೋ ಅಲ್ಲಿಯವರೆಗೆ ಅವು ಜೀವವಿರೋಧಿಗಳಾಗಿಯೇ ಉಳಿಯುತ್ತವೆ.

ನಿರ್ಭಯ ಪ್ರಕರಣ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ನಂಬಿಕೆ ಹುಟ್ಟಿಸುವ ನಿಟ್ಟಿನಲ್ಲಿ ಕೆಲಸ ಮಾಡಿದರೆ ಹಾಥರಸ್ ಪ್ರಕರಣದಲ್ಲಿ ಆರಂಭದಲ್ಲಿಯೇ ಕಾನೂನು ಹಾಗೂ ರಾಜಕಾರಣ ವ್ಯವಸ್ಥೆ ಎಡವುತ್ತಿದೆ. ವಿದ್ಯಾಸಂಸ್ಥೆ, ದೇವರು, ಧರ್ಮ ಇವುಗಳಲ್ಲಿ ರಾಜಕಾರಣ ಪ್ರವೇಶ ಮಾಡಬಾರದು. ರಾಜಕಾರಣಿ ರಾಜಕೀಯ ಮಾಡಬೇಕು ಹಾಗೂ ಧರ್ಮಗುರುವಿನ ಸ್ಥಾನದಲ್ಲಿರುವವನು ಪ್ರವಚನಗಳಲ್ಲಿರಬೇಕು ಎಂಬುದು ಸಾಮಾನ್ಯ ನಿರೀಕ್ಷೆ. ಜೆಎನ್‌ಯುನಲ್ಲಿ ನಡೆದ ವಿದ್ಯಾರ್ಥಿಗಳ ಮೇಲಿನ ಹಲ್ಲೆಗಳು ಯುವಸಮುದಾಯವನ್ನು ಹಿಂದೆಂದೂ ಇಲ್ಲದ ಹಾಗೆ ಜಾಗೃತಗೊಳಿಸಿವೆ. ದಲಿತರ ಮೇಲೆ ನಡೆಯುತ್ತಿರುವ ಹಲ್ಲೆಗಳು, ಈಗ ಸ್ಪಷ್ಟವಾಗಿ ನಡೆಯುತ್ತಿರುವ ದಲಿತ ಹೆಣ್ಣುಮಕ್ಕಳ ಮೇಲಿನ ಹಲ್ಲೆಗಳು ಪ್ರಭುತ್ವದ ಮಲತಾಯಿ ದೋರಣೆಗಳನ್ನು ನಿಧಾನವಾಗಿ ಬೆಳಕಿಗೆ ತರುತ್ತಿವೆ. ಹರ ಕೊಲ್ಲಲ್ ಪರ ಕಾಯ್ವನೇ ಎಂದು ಸೊಮೇಶ್ವರ ತನ್ನ ಒಂದು ಶತಕದಲ್ಲಿ ಪ್ರಶ್ನಿಸಿದ್ದನ್ನು ಈಗ ನೆನಪಿಸಿಕೊಳ್ಳಬೇಕು.

ಭಾರತದಂಥ ದೇವತೆಗಳು ನಡೆದಾಡುವ ರಾಷ್ಟ್ರದಲ್ಲಿ ಯಾಕೆ ರಾಕ್ಷಸರು ಮತ್ತೆ, ಮತ್ತೆ ತಲೆಯೆತ್ತುತ್ತಿದ್ದಾರೆ. ಈ ರಾಕ್ಷಸರನ್ನು ಪೊರೆಯಲು ಧರ್ಮ, ರಾಜಕಾರಣ , ಕಾನೂನು ವ್ಯವಸ್ಥೆ ತಾನೇ ಮುನ್ನುಗ್ಗುತ್ತಿದೆ. ಹೆಣ್ಣು ಜೀವ ಯಾವ ವರ್ಗ, ಜಾತಿಗೇ ಸೇರಿರಲಿ ಅದಕ್ಕೆ ಬೆಲೆಯೆಂಬುದು ಇಲ್ಲವೇ, ಇವೆಲ್ಲಾ ನಮ್ಮೊಳಗೆ ನಾವೇ ಕೇಳಿಕೊಳ್ಳಬಹುದಾದ ಪ್ರಶ್ನೆಗಳು. ಸಾಮಾನ್ಯ ಪ್ರಾಣಿಗಳನ್ನು ಆತ್ಮ, ದೇಹಗಳೆಂಬ ನಂಬಿಕೆಯಲ್ಲಿ ಅಂತ್ಯಸಂಸ್ಕಾರ ಮಾಡುವ ನಮ್ಮ ಪರಂಪರೆ ಹೆಣ್ಣುಮಗುವೊಂದನ್ನು ಹೆತ್ತವರ ಎದುರೇ ಪೆಟ್ರೋಲ್ ಹಾಕಿ ದಹಿಸುವ ಸಂದರ್ಭಗಳು ಯಾಕೆ ಉಂಟಾಗುತ್ತಿವೆ? ಪ್ರಭುತ್ವವೇ ಸಾಕ್ಷಿ ನಾಶಕ್ಕೆ ಮುಂದಾದರೆ ಪ್ರಜೆಗಳನ್ನು ಯಾರು ಕಾಪಾಡುತ್ತಾರೆ? ಇನ್ನುಮುಂದೆ ಹೆಣ್ಣುಮಕ್ಕಳನ್ನು ಹೆರಬಾರದು ಅನ್ನುವ ಮಾತಿಗೆ ಯಾಕೆ ಶಕ್ತಿ ತುಂಬಲಾಗುತ್ತಿದೆ?

ಹೆಣ್ಣು ಎಂದರೆ ಸೃಷ್ಟಿಸುವವಳು. ಗಂಡುಜಾತಿಯನ್ನು ತನ್ನ ತೊಡೆ ತೊಟ್ಟಲಲ್ಲಿ ಇಟ್ಟು ಪೊರೆದವಳು. ಗರ್ಭದಲ್ಲಿ ಇಟ್ಟುಕೊಂಡು ಜನ್ಮ ತಳೆದ ನಂತರ ಮೊಲೆಯೂಡಿಸಿ ಬೆಳೆಸಿದವಳು. ಈ ಮೊಲೆ, ಯೋನಿಯ ಬಗೆಗಿನ ವಿಪರೀತ ಕುತೂಹಲಗಳು ಹರೆಯದವರನ್ನು ದಿಕ್ಕುಗೆಡಿಸುತ್ತಿವೆ.

ಹೆಣ್ಣಿಗೆ ತನ್ನ ದೇಹವೇ ಮಿತಿಯಾಗುವ ದುರಂತ ಕಣ್ಣೆದುರಿಗಿದೆ. ತನ್ನ ನಡೆನುಡಿಗಳನ್ನು ರೂಪಿಸುವ, ಹೆಣ್ಣೆಂದು ಅಡಿಗಡಿಗೆ ನಡಿಗೆಯನ್ನು ತಡೆಯುವ, ಎಲ್ಲಿ ಹೋಗಬೇಕು ಎಲ್ಲಿಗೆ ಹೋಗಬಾರದು ಎಂದು ನಿರ್ದೇಶಿಸುವ ನಿರ್ದೇಶಕರು ಎಲ್ಲೆಂದರಲ್ಲಿ ತಲೆಯೆತ್ತುತ್ತಿರುವುದೇ ಈ ಎಲ್ಲಾ ದುರಂತಗಳಿಗೆ ಕಾರಣ.

ಪರಿಶಿಷ್ಟ ಜಾತಿಗಳ ಮೇಲೆ ಮತ್ತೆ ಮತ್ತೆ ನಡೆಯುತ್ತಿರುವ ಆಕ್ರಮಣಗಳು ಅವರು ವರ್ತಮಾನದಲ್ಲಿ ಎದುರಿಸುತ್ತಿರುವ ಸಂಕಟಗಳನ್ನು ತೆರೆದಿಡುತ್ತವೆ. ಕೋಲಾರದ ಕಂಬಾಲಪಲ್ಲಿಯಲ್ಲಿ ಜೀವಂತವಾಗಿ ದಲಿತರನ್ನು ಸುಟ್ಟ ಅಪರಾಧಿಗಳು ಸರಿಯಾದ ಸಾಕ್ಷ್ಯಾಧಾರಗಳಿಲ್ಲವೆಂದು ಬಿಡುಗಡೆಗೊಂಡಿದ್ದಾರೆ. ಬಿಹಾರದ ಖೈರ್ಲಾಂಚಿಯಲ್ಲಿ ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿ ಶಿಕ್ಷಣ, ನೌಕರಿಗಳೊಂದಿಗೆ ಸ್ವಾಭಿಮಾನದಿಂದ ಬದುಕುತ್ತಿದ್ದಾರೆ ಎಂಬ ಕಾರಣಕ್ಕೆ ತಮ್ಮ ಕುಟುಂಬದವರ ಎದುರೇ ಅತ್ಯಾಚಾರಕ್ಕೆ ಒಳಗಾದ ತಾಯಿ, ಮಕ್ಕಳ ಪ್ರಕರಣ ಬಲಿಷ್ಠ ಜನಾಂಗದವರ ಅಸಹನೆಗಳನ್ನು ಎತ್ತಿ ತೋರಿದ್ದವು. ಮತ್ತೆಮತ್ತೆ ನಡೆಯುತ್ತಿರುವ ಮರ್ಯಾದೆಗೇಡು ಹತ್ಯೆಗಳು ಬದಲಾವಣೆಗೆ ತೆರೆದುಕೊಳ್ಳದ ಸನಾತನ ಧರ್ಮದ ಕೊಳೆತ ಮುಖಗಳನ್ನು ಅನಾವರಣಗೊಳಿಸುತ್ತಿವೆ.

ಅವನ ಚರಿತ್ರೆಯನ್ನೇ ತನ್ನ ಚರಿತ್ರೆಯೆಂದು ಓದುತ್ತಾ ಬಂದ ಅವಳಿಗೆ, ಅವಳ ಚರಿತ್ರೆಯನ್ನು ಬರೆಯಲು ಹೊರಟ ಸಂದರ್ಭದಲ್ಲಿ ಎದುರಾಗುವ ಸವಾಲುಗಳು ಹಲವು. ಹುಟ್ಟಿದ ಕುಟುಂಬ, ಹೊರಗೆ ಕಾಲಿಡುವ ಸಮಾಜ, ಮೆಟ್ಟಿದ ಮನೆ, ಉದ್ಯೋಗ, ತಾಯ್ತನ, ವೈಯಕ್ತಿಕ ಸಾಧನೆಯ ಹಾದಿಯಲ್ಲಿ ಎದುರಾಗುವ ತೊಡಕುಗಳು ಇವೆಲ್ಲವನ್ನು ಎದುರಿಸುತ್ತಲೇ ಅವಳು ಸಾಧಕಿಯಾಗಿ ಎತ್ತರೆತ್ತರಕ್ಕೆ ಬೆಳೆಯುತ್ತಿರುವುದು ಸಂತಸ ತರುವ ಸಂಗತಿ. ಬೆಂಕಿಯಲ್ಲಿಯೂ ಅರಳುವ ಅವಳ ಚೈತನ್ಯ ಎಲ್ಲಾ ಕಾಲಕ್ಕೂ ಮೆಚ್ಚುವಂತದ್ದಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು