ಬೆಂಗಳೂರಿನ ಅಮೃತಾ ಬಿ.ಇ ಎಂಟನೇ ತರಗತಿ ಓದುತ್ತಿರುವ ಹುಡುಗಿ. ಸಮಯವನ್ನು ಸ್ವಲ್ಪವೂ ವ್ಯರ್ಥ ಮಾಡದೇ ಸಾಧನೆಯ ಶಿಖರ ಏರತೊಡಗಿದ್ದಾಳೆ. ಈಕೆ ಟೇಕ್ವಾಂಡೋನಲ್ಲಿ ಬ್ಲ್ಯಾಕ್‌ಬೆಲ್ಟ್ ಪಡೆದುಕೊಂಡಿದ್ದಾಳೆ.
‘ನನ್ನ ಅಣ್ಣ ಟೇಕ್ವಾಂಡೋ ತರಗತಿಗೆ ಹೋಗುತ್ತಿದ್ದ. ನನಗೆ ಆಗ 5–6 ವರ್ಷ. ತಂದೆ–ತಾಯಿ ತರಗತಿಗೆ ನನ್ನನ್ನು ಸೇರಿಸಿದರು. ನಂತರ, ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದೆ. ಈಗ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲೂ ಭಾಗವಹಿಸಿ, ಹಲವಾರು ಬಹುಮಾನಗಳನ್ನು ಗಳಿಸಿದ್ದೇನೆ’ ಎಂದು ಸಂತಸದಿಂದ ಹೇಳುತ್ತಾಳೆ ಅಮೃತಾ.
ಚಿತ್ರಕಲೆಯಲ್ಲಿ ಗಿನ್ನಿಸ್ ದಾಖಲೆಗೆ ಸಿದ್ಧತೆ
ಅಮೃತಾ ಕೇವಲ ಟೇಕ್ವಾಂಡೋದಲ್ಲಿ ಮಾತ್ರವಲ್ಲ ಚಿತ್ರಕಲೆಯಲ್ಲೂ ಆಸಕ್ತಿ ಹೊಂದಿದ್ದಾಳೆ. ಗಿನ್ನಿಸ್ ಪುಸ್ತಕದಲ್ಲಿ ತನ್ನ ಹೆಸರು ಬರೆಯಲು ಸಿದ್ಧತೆ ನಡೆಸಿದ್ದಾಳೆ. ಕನ್ನಡದ ಜ್ಞಾನಪೀಠ ಪುರಸ್ಕೃತರ ಚಿತ್ರಗಳನ್ನು 2X2 ಸೆ.ಮೀ ಅಳತೆಯಲ್ಲಿ ಬಿಡಿಸಿದ್ದಾಳೆ.
‘ತುಂಬಾ ಸಣ್ಣ ಕ್ಯಾನ್ವಾಸ್‌ನಲ್ಲಿ ಬಿಡಿಸಿದ್ದ ಚಿತ್ರಗಳನ್ನು ಅಮ್ಮ, ಮೊಬೈಲ್‌ನಲ್ಲಿ ತೋರಿಸುತ್ತಿದ್ದರು. ನಾನೂ ಕೂಡ ಅದೇ ರೀತಿಯಲ್ಲಿ ಜ್ಞಾನಪೀಠ ಪುರಸ್ಕೃತರ ಚಿತ್ರ ಬಿಡಿಸಿ, ಅಮ್ಮನಿಗೆ ತೋರಿಸಿದೆ’ ಎನ್ನುತ್ತಾಳೆ ಅಮೃತಾ.
ಟೇಕ್ವಾಂಡೋ, ಚಿತ್ರಕಲೆ ಅಲ್ಲದೆ, ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಭರತನಾಟ್ಯವನ್ನೂ ಅಭ್ಯಾಸ ಮಾಡುತ್ತಿದ್ದಾರೆ. ಹಲವಾರು ವೇದಿಕೆಗಳಲ್ಲಿ ಭರತನಾಟ್ಯ ಪ್ರದರ್ಶನವನ್ನೂ ನೀಡಿದ್ದಾರೆ. ‘ನನ್ನ ಎಲ್ಲ ಸಾಧನೆಗೆ ನನ್ನ ತಾಯಿ ಜ್ಯೋತಿ ಎಸ್. ಹಾಗೂ ತಂದೆ ಭಾಸ್ಕರ್ ಇ. ಅವರ ಪ್ರೋತ್ಸಾಹವೇ ಕಾರಣ’ ಎನ್ನುತ್ತಾಳೆ ಆಕೆ.
ಕಲಾವಿದೆ ಆಗುವ ಆಸೆ...
ಮುಂದೆ ಕಲಾವಿದೆ ಆಗಬೇಕೆನ್ನುವ ಹಂಬಲವಿರುವ ಅಮೃತಾ, ಟೇಕ್ವಾಂಡೋ ಹಾಗೂ ಚಿತ್ರಕಲೆಯಲ್ಲಿ ರಾಜ್ಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವು ಬಹುಮಾನಗಳನ್ನು ಗಳಿಸಿಕೊಂಡಿದ್ದಾಳೆ. ಜತೆಗೆ, ಪುಟ್ಟ ಹುಡುಗಿಯ ಸಾಧನೆಯನ್ನು ಗುರುತಿಸಿ ಹಲವಾರು ಪ್ರಶಸ್ತಿಗಳೂ ಈಕೆಯನ್ನರಸಿ ಬಂದಿವೆ.
2018-19ನೇ ಸಾಲಿನಲ್ಲಿ ಮಂಗೋಲಿಯಾದಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ 8ರಿಂದ 10 ವರ್ಷದೊಳಗಿನ ಜೂನಿಯರ್ ಸ್ಪಾರಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದಾಳೆ. ಅದೇ ವರ್ಷ ನೇಪಾಳದ ಕಠ್ಮಂಡುವಿನಲ್ಲಿ ನಡೆದ ಇದೇ ವಿಭಾಗದ ಸ್ಪರ್ಧೆಯಲ್ಲೂ ಚಿನ್ನದ ಪದಕ ಗೆದ್ದಿದ್ದಾಳೆ.
ಪುಣೆಯ ‘ಆರ್ಟೇರಿಯನ್– ದಿ ಅಲ್ಟಿಮೇಟ್ ಆರ್ಟ್ ಹಬ್’ ಸಂಸ್ಥೆ ಆಯೋಜಿಸಿದ್ದ ಅಂತರರಾಷ್ಟ್ರೀಯ ಚಿತ್ರಕಲೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿದ್ದಾಳೆ.
2019ರ ‘ರಾಜೀವ್ ಗಾಂಧಿ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ’ ಕೂಡ ಲಭಿಸಿದೆ. ಜತೆಗೆ, ಬೆಂಗಳೂರಿನ ನವಚೈತನ್ಯ ಉದಯ ಪ್ರತಿಷ್ಠಾನದವರು ಕಳೆದ ವರ್ಷ ‘ಬಾಲಪ್ರತಿಭೋತ್ಸವ ಪುರಸ್ಕಾರ’ವನ್ನು ನೀಡಿ ಗೌರವಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.