ಸೋಮವಾರ, ಆಗಸ್ಟ್ 3, 2020
26 °C

ಅಯ್ಯೋ ಯಯಾತಿ ಯಾಕಿಷ್ಟು ಕಾಡುತ್ತಿ?

ಡಾ.ಟಿ.ಎನ್‌. ವಾಸುದೇವಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ‘ಯಯಾತಿ’ ಕಾದಂಬರಿ ಓದುತ್ತಿರುವುದು ಇತ್ತೀಚೆಗೆ ದೊಡ್ಡ ಸುದ್ದಿಯಾಯಿತು. ಲೋಭ, ಲೋಲುಪತೆಗಳನ್ನು ಬೆಳೆಸಿಕೊಂಡು ಮುಂದಿನ ತಲೆಮಾರಿನ ಬದುಕು-ಭವಿಷ್ಯಗಳನ್ನು ಆತಂಕಕ್ಕೊಡ್ಡುತ್ತಿರುವ ಆಧುನಿಕ ಮನುಷ್ಯನನ್ನು ಪ್ರತಿನಿಧಿಸುವ ಯಯಾತಿ, ಕೊನೆಗೆ ಆ ಬಗೆಯ ಆತ್ಮವಂಚನೆಯಿಂದಲೂ ಹೊರಬಂದ. ಇಂದಿನ ‘ಯಯಾತಿ’ಗಳಿಗೆ ಆತನ ನಡೆ ಪಾಠವಾಗಲಾರದೇ?

***

ಪ್ರಾಯದ ಪೆಂಪೆ ಪೆಂಪೆಮಗೆ –ವಿಕ್ರಮಾರ್ಜುನ ವಿಜಯ  

‘ಯಯಾತಿಯ ಕಥಾವಸ್ತುವನ್ನು ‘ಹೊಸ ತಲೆಮಾರು ತನ್ನ ಬದುಕನ್ನು ಸಹನೀಯವಾಗಿಸೆಂದು ಹಳೆಯ ತಲೆಮಾರಿನೆದುರು ಮಂಡಿಯೂರಿ ಮಾಡಿಕೊಳ್ಳುವ ಒಂದು ಬಿನ್ನಹ’ ಎಂದು ಸಂಕ್ಷಿಪ್ತವಾಗಿ ವ್ಯಾಖ್ಯಾನಿಸಬಹುದು. ಪರಿಸರ ಸಂರಕ್ಷಣೆಯನ್ನು ಒಂದು ಜಾಗತಿಕ ಅಭಿಯಾನವನ್ನಾಗಿ ರೂಪಿಸುತ್ತಿರುವ 17ರ ಹರೆಯದ ಸ್ವೀಡಿಶ್ ಬಾಲಕಿ ಗ್ರೇಟಾ ಥನ್ಬರ್ಗ್ ಕಳೆದ ವರ್ಷ ನಡೆದ ವಿಶ್ವಸಂಸ್ಥೆಯ ಶೃಂಗಸಭೆಯಲ್ಲಿ ‘ನೀವೆಲ್ಲ ಪ್ರೈವೇಟ್ ಜೆಟ್‌ಗಳಲ್ಲಿ ಬಂದು, ಹವಾಮಾನ ಬದಲಾವಣೆಯ ಬಗ್ಗೆ ಇಲ್ಲಿ ಭಾಷಣ ಬಿಗಿಯುತ್ತಿರುವುದು ಹಾಸ್ಯಾಸ್ಪದ’ ಎಂದು ಜಾಗತಿಕ ಮುಖಂಡರನ್ನು ತರಾಟೆಗೆ ತೆಗೆದುಕೊಂಡಿದ್ದಳು.

ಅಭಿವೃದ್ಧಿಯ ಕುರುಡು ಮಂತ್ರ ಜಪಿಸುತ್ತ ಪರಿಸರವನ್ನು ಶೋಷಿಸುತ್ತಿರುವ ಜಗತ್ತಿನ ಎಲ್ಲ ದೇಶಗಳೂ ಭವಿಷ್ಯದ ತಲೆಮಾರುಗಳ ಬದುಕನ್ನು ಅಸಹನೀಯವಾಗಿಸುತ್ತಿವೆ. ಗ್ರೇಟಾ ಅಂಥವರು ವಿಶ್ವಸಂಸ್ಥೆಯಲ್ಲಿ ನೆರೆದಿದ್ದ ರಾಜಕಾರಣಿಗಳ ಮೇಲೆ ತೋರಿಸಿರುವ ಸಾತ್ವಿಕ ಸಿಟ್ಟು ನಿಷ್ಕ್ರಿಯ ಜಿಗುಪ್ಸೆಯಾಗಿ ಹಳಸುವ ಮುನ್ನ ರಾಜಕಾರಣಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ. ಇಲ್ಲವಾದಲ್ಲಿ ಎರಡು ತಲೆಮಾರುಗಳ ನಡುವೆ ಸಂವಾದವೇ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಗಿರೀಶ ಕಾರ್ನಾಡ ಅವರು ತಮ್ಮ ‘ಯಯಾತಿ ನಾಟಕದಲ್ಲಿ ಪುರು-ಯಯಾತಿಯ ನಡುವೆ ಇಂತಹ ಸಂವಹನ ಶೂನ್ಯ ಸನ್ನಿವೇಶವನ್ನು ಸೃಷ್ಟಿಸಿದ್ದಾರೆ. ಆ ನಾಟಕದಲ್ಲಿನ ಪುರು ತನ್ನ ಯೌವನದ ಮೇಲೆ ಸವಾರಿ ಮಾಡುತ್ತಿದ್ದ ತಂದೆ ಯಯಾತಿಯ ಅಧಿಕಾರ ಮದ, ಸುಖಲೋಲುಪತೆಯ ಮೇಲೆ ಇಂಥದೇ ಜಿಗುಪ್ಸೆ ಮೂಡಿಸಿಕೊಂಡಿದ್ದ. 

ಮನುಷ್ಯ ಇತಿಹಾಸವೆಂದರೆ ಮನುಷ್ಯನ ಅಧಿಕಾರದಾಹ ಮತ್ತು ಸುಖಲೋಲುಪತೆಯ ಇತಿಹಾಸವಲ್ಲದೇ ಬೇರೆಯಲ್ಲ. ಈ ಅಧಿಕಾರದ ದಾಹವನ್ನು ಪೂರ್ವ, ಪಶ್ಚಿಮಗಳೆನ್ನದೆ, ಎಲ್ಲೆಡೆಯೂ ಎಲ್ಲ ಕಾಲದಲ್ಲೂ ಎಲ್ಲರಲ್ಲೂ ಕಾಣಬಹುದು. ದೇವ-ರಾಕ್ಷಸರ ನಡುವಿನ ಯುದ್ಧದಿಂದ ಹಿಡಿದು ಬ್ರಿಟಿಷರ ಆಕ್ರಮಣದವರೆಗೆ ಅಧಿಕಾರ ದಾಹಕ್ಕೆ ಒಂದು ಸುದೀರ್ಘ ರಕ್ತಚರಿತ್ರೆ ಇದೆ. ಅಂತಿಮವಾಗಿ ಅಧಿಕಾರವೆಂಬುದು ಒಂದು ಹುಸಿ ಪ್ರತಿಷ್ಠೆಯಾಗಿದೆ.  

ಎಷ್ಟೋ ಸಲ ಹುಸಿಯಾದ ಸಾಂತ್ವನಗಳೂ ದಿಟವಾದ ಪರಿಣಾಮ ಉಂಟು ಮಾಡಬಲ್ಲವು. ಉದಾಹರಣೆಗೆ, ಜೀವನಾಸಕ್ತಿಯನ್ನೇ ಕಳೆದುಕೊಂಡಿದ್ದ ಬಹುಶ್ರುತರಾಗಿದ್ದ ನಾಯಕರೊಬ್ಬರನ್ನು ಅವರ ಪಕ್ಷದವರು ಪ್ರಧಾನಿಯ ಅಭ್ಯರ್ಥಿಯೆಂದು ಘೋಷಿಸಿದ ಮರುಗಳಿಗೆಯೇ ಅವರು ಮರುಜೇವಣೆಯ ಹಣ್ಣ ಮೆದ್ದಂತೆ ಜೀವನೋತ್ಸಾಹದಿಂದ ಪುಟಿದೆದ್ದರಂತೆ. ಅಧಿಕಾರದ ಮೋಡಿಯೇ ಅಂತಹುದು. ಅದು ತನಗೆ ತೃಪ್ತಿ ನೀಡಿದರೆ ಸಾಲದು; ಅದನ್ನು ತನ್ನ ಕುಟುಂಬದ ಸದಸ್ಯರು, ಕುಟುಂಬದ ಮುಂದಿನ ಪೀಳಿಗೆಗಳು ಶಾಶ್ವತವಾಗಿ ಅದನ್ನು ಅನುಭವಿಸುತ್ತಲೇ ಇರಬೇಕೆಂಬ ಪ್ರಲೋಭನೆಯನ್ನದು ಸೃಷ್ಟಿಸುತ್ತದೆ.

ಜಾತೀಯತೆ, ಕಂದಾಚಾರ, ಪ್ರತಿಗಾಮಿತನ ಇವೇ ಮುಂತಾದ ನಾನಾ ರೋಗಗಳಿಂದ ನರಳುತ್ತಿದ್ದ ಭಾರತವು ಬ್ರಿಟಿಷರ ಆಗಮನದಿಂದ ಸುಖಲೋಲುಪತೆ ಮತ್ತು ಅಧಿಕಾರಮೋಹ ಎಂಬ ಮತ್ತೆರಡು ಹೊಸ ರೋಗಗಳನ್ನು ಹತ್ತಿಸಿಕೊಂಡಿತು. ಮಹಾತ್ಮ ಗಾಂಧಿ ತಮ್ಮ ‘ಹಿಂದ್‌ ಸ್ವರಾಜ್‌’ನಲ್ಲಿ ಮೊದಲನೆಯ ರೋಗವಾದ ಸುಖಲೋಲುಪತೆಯನ್ನು ಖಂಡಿಸಿ ಅದಕ್ಕೆ ತಕ್ಕ ಮದ್ದನ್ನು ಉತ್ಸಾಹದಿಂದಲೇ ಸೂಚಿಸಿದರು. ಆದರೆ, ಸ್ವಾತಂತ್ರ್ಯಾನಂತರ ಅವರೆದುರು ಅನಿರೀಕ್ಷಿತವಾಗಿ ಅನಾವರಣವಾದ ಎರಡನೆಯ ರೋಗದ ಚಿಕಿತ್ಸೆಗೆ ಅವರು ಅಷ್ಟು ಉತ್ಸಾಹ ತೋರಿಸಿದಂತೆ ಕಾಣುವುದಿಲ್ಲ. ಅಧಿಕಾರಮೋಹವೆಂಬ ಈ ಎರಡನೆಯ ರೋಗವು ತಮ್ಮ ಜೊತೆಗೇ ಇದ್ದ ತಮ್ಮ ಅನುಯಾಯಿಗಳಿಗೇ ಸೋಂಕಿದ್ದ ಸಂಗತಿ ಗಾಂಧಿಯವರನ್ನು ತೀವ್ರ ನಿರಾಶೆಗೆ ದೂಡಿತು. ಗಾಂಧೀಜಿ ಅಧಿಕಾರದ ಮೇಲೆ ವಿರಕ್ತಿ ತಳೆವ ಮೂಲಕ ಮಹಾತ್ಮನೆನಿಸಿದರೆ, ಅವರ ಅನುಯಾಯಿಗಳು ಅಧಿಕಾರ ಸ್ಥಾನಮಾನಗಳಿಸಿದಾಗಲಷ್ಟೇ ದೊಡ್ಡವರೆನಿಸಿಕೊಳ್ಳಬಹುದು ಎಂದು ಯೋಚಿಸಿದ್ದು, ಈಗಲೂ ಯೋಚಿಸುತ್ತಿರುವುದು, ಇತಿಹಾಸದ ವ್ಯಂಗ್ಯವೇ ಸರಿ.  

ಖ್ಯಾತ ಮರಾಠಿ ಲೇಖಕರೂ, ಹಿರಿಯ ಗಾಂಧೀವಾದಿಯೂ ಆದ ವಿ.ಎಸ್.‌ ಖಾಂಡೇಕರ್ 1959ರಲ್ಲಿ ರಚಿಸಿದ ‘ಯಯಾತಿ ಕಾದಂಬರಿಯು ಸ್ವಾತಂತ್ರ್ಯೋತ್ತರ ಭಾರತದ ಈ ದುರಂತಕ್ಕೆ ಸ್ಪಂದಿಸಿ ರಚನೆಗೊಂಡ ಕಾದಂಬರಿ. ಪುರಾಣ ಕಾಲದ ಕಥೆಯನ್ನು ಆಯ್ಕೆ ಮಾಡಿಕೊಂಡರೂ ಭಾರತಕ್ಕೆ ಮೆತ್ತಿಕೊಂಡಿದ್ದ ಆ ಎರಡು ಹೊಸರೋಗಗಳ ಸ್ವರೂಪವನ್ನು ಅದರ ಮೂಲಕ ಅವರು ಓದುಗನಿಗೆ ಕಾಣಿಸುತ್ತಾರೆ (ಈ ಅಭಿಪ್ರಾಯ ಲೇಖಕರ ಮುನ್ನುಡಿಯಲ್ಲೂ ವ್ಯಕ್ತವಾಗಿದೆ).

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಹೋಂ ಕ್ವಾರಂಟೈನ್‌ ಅವಧಿಯಲ್ಲಿ ಖಾಂಡೇಕರರ ‘ಯಯಾತಿ ಕಾದಂಬರಿಯನ್ನು (ಅನುವಾದ: ವಿ.ಎಂ. ಇನಾಂದಾರ್‌) ಓದುತ್ತಿದ್ದುದು ವರದಿಯಾಗಿತ್ತು. ಮೊದಲಿನಿಂದಲೂ ಕರ್ನಾಟಕದ ರಾಜಕಾರಣಿಗಳಿಗೆ ಪುಸ್ತಕಪ್ರೇಮಿಗಳೆಂಬ ಹೆಗ್ಗಳಿಕೆ ಇದೆ (ಹಾಗೆಯೇ, ಪುಸ್ತಕ ರಚನೆಕಾರರೆಂಬ ಹೆಗ್ಗಳಿಕೆ ಕೂಡ ಇದೆ). ಇದಕ್ಕೆ ಶಾಂತವೇರಿ ಗೋಪಾಲಗೌಡ, ದೇವರಾಜ ಅರಸು, ಎಸ್.‌ ನಿಜಲಿಂಗಪ್ಪನವರಿಂದ ಹಿಡಿದು ವೀರಪ್ಪ ಮೊಯಿಲಿ, ಎಚ್.‌ ವಿಶ್ವನಾಥ್‌, ಸುರೇಶ್‌ ಕುಮಾರ್‌ವರೆಗಿನ ಇಂದಿನ ಹಲವಾರು ರಾಜಕಾರಣಿಗಳನ್ನು ಉದಾಹರಿಸಬಹುದು. ಯಯಾತಿಯನ್ನು ಕೈಗೆತ್ತಿಕೊಂಡು ರಾಜ್ಯದ ರಾಜಕಾರಣಿಗಳ ಈ ಕೀರ್ತಿಯನ್ನು ಮತ್ತೊಮ್ಮೆ ಎತ್ತಿಹಿಡಿದ ಮುಖ್ಯಮಂತ್ರಿಯವರ ಪುಸ್ತಕ ಪ್ರೀತಿ ನಿಜಕ್ಕೂ ಅಭಿನಂದನಾರ್ಹ; ಅವರ ಓದಿನ ಹವ್ಯಾಸ ನಾಡಿನ ಜನತೆಗೂ ಅನುಕರಣೀಯ.

ಆದರೆ, ನಮ್ಮ ಪುಸ್ತಕದ ಓದು ನಮ್ಮ ಬದುಕಿನಲ್ಲಿ, ಬದುಕನ್ನು ನೋಡುವ ದೃಷ್ಟಿಯಲ್ಲಿ ಪರಿವರ್ತನೆ ತರಬೇಕಾಗುತ್ತದೆ. ಅದರಲ್ಲೂ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿರುವವರಲ್ಲಿ ಪುಸ್ತಕದಿಂದ ಪ್ರಾಪ್ತಿಯಾಗುವ ತಿಳಿವಳಿಕೆ ಸುತ್ತಲಿನ ಬದುಕನ್ನು ಮಾನವೀಯವಾಗಿಸಬೇಕೆಂಬ ಸಂಕಲ್ಪಕ್ಕೆ ಜನ್ಮ ನೀಡಬೇಕಾಗುತ್ತದೆ. ಇಲ್ಲವಾದಲ್ಲಿ ಪುಸ್ತಕದ ಓದು ಬರೀ ತೋರಿಕೆಯಾಗುತ್ತದೆ, ಮನರಂಜನೆಯಾಗುತ್ತದೆ, ವ್ಯರ್ಥ ಕಾಲಕ್ಷೇಪವಾಗುತ್ತದೆ.    

‘ಯಯಾತಿ ಕಾದಂಬರಿ ಮನುಷ್ಯನ ಅಧಿಕಾರದ ವ್ಯಸನ, ಸುಖಲೋಲುಪತೆಗಳನ್ನು, ಅದರ ಎಲ್ಲ ವಿಕೃತಿಗಳೊಂದಿಗೆ, ಅತ್ಯಂತ ಭಾವಪೂರ್ಣವಾಗಿ ಚಿತ್ರಿಸಿದೆ. ಭವಭೂತಿ ಮತ್ತು ಕಾಳಿದಾಸರಿಂದ ಪ್ರಭಾವಿತರಾದ ಖಾಂಡೇಕರ್‌, ಆ ಪುರಾತನರ ಹಾದಿಯಲ್ಲೇ ನಡೆದು ಕಾದಂಬರಿಯನ್ನು ರಚಿಸಿದ್ದಾರೆ. ಕಾದಂಬರಿಯನ್ನು ಕಲಾಪೂರ್ಣವಾಗಿಸಲು ಮೂಲಕಥೆಯಲ್ಲಿ ಔಚಿತ್ಯಪೂರ್ಣವಾದ ಹಲವಾರು ಮಾರ್ಪಾಟುಗಳನ್ನು ಮಾಡಿದ್ದಾರೆ. ಅಧಿಕಾರದಾಹ, ಸುಖಲೋಲುಪತೆಗಳು ಮನುಷ್ಯ ಸಹಜ ಪ್ರವೃತ್ತಿಗಳಲ್ಲ, ಬದಲಾಗಿ ಈ ದಾಹ, ಲೋಲುಪತೆಗಳು ಯಾವುದೋ ಮನೋರೋಗದ ಲಕ್ಷಣಗಳಾಗಿವೆ ಎಂಬುದು ಲೇಖಕರ ನಿಲುವು. ಅವರು ಯಯಾತಿಯ ಈ ಮನೋರೋಗದ ಮೂಲವನ್ನು ತಮ್ಮ ಕಾದಂಬರಿಯಲ್ಲಿ ಪರಿಚಯಿಸಿಕೊಡುತ್ತಾರೆ.

ತನ್ನ ನಂತರ ತನ್ನ ಸಂತಾನ ನಿರಾತಂಕವಾಗಿ ಬಾಳ್ವೆ ಮಾಡಬೇಕೆಂಬ ಜೀವೇಷಣಾ ಪ್ರವೃತ್ತಿಯನ್ನು ಪ್ರಕೃತಿ ಸಕಲ ಜೀವರಾಶಿಗೂ ನೀಡಿರುತ್ತದೆ. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ತನ್ನ ಸಂತಾನದ ಬಾಳ್ವೆಯನ್ನು ತಾನೇ ಕಬಳಿಸಬೇಕೆಂಬ ಯಯಾತಿಯ ಲೋಭಬುದ್ಧಿಯನ್ನು ಮನೋರೋಗವೆನ್ನದೇ ಮತ್ತೇನೆಂದು ಕರೆಯಬೇಕು? ಕಾದಂಬರಿಯಲ್ಲಿ ಬಿಂಬಿತವಾಗಿರುವ ಯಯಾತಿಯ ಮನೋರೋಗ ಅವನ ವೈಯಕ್ತಿಕ ಸಮಸ್ಯೆ ಮಾತ್ರವಲ್ಲ. ಲೋಭ, ಲೋಲುಪತೆಗಳನ್ನು ಬೆಳೆಸಿಕೊಂಡು ಮುಂದಿನ ತಲೆಮಾರಿನ ಬದುಕು-ಭವಿಷ್ಯಗಳನ್ನು ಆತಂಕಕ್ಕೊಡ್ಡುತ್ತಿರುವ ಆಧುನಿಕ ಮನುಷ್ಯನನ್ನು ಯಯಾತಿ ಪ್ರತಿನಿಧಿಸುತ್ತಾನೆ.

ಯಯಾತಿಯ ಈ ಮನೋರೋಗಕ್ಕೆ ಕಾರಣವಿದೆ: ಅವನು ಹುಟ್ಟುತ್ತಲೇ ಮಾತೃಪ್ರೇಮದಿಂದ ವಂಚಿತನಾಗಿರುತ್ತಾನೆ. ಮಗುವಿನ ಆರೈಕೆ ಹಾಗಿರಲಿ, ತನ್ನ ಶರೀರದ ಲಾವಣ್ಯ ಇನ್ನೆಲ್ಲಿ ಕೆಡುತ್ತದೋ ಎಂದು ಹೆದರಿ ಅವಳು ಮಗುವಿಗೆ ಎದೆಹಾಲನ್ನೂಡಿಸಲೂ ನಿರಾಕರಿಸಿರುತ್ತಾಳೆ. ಯೌವನದಲ್ಲಿ ಮುಕುಲಿಕಾಳಂತಹ ಪರಿಚಾರಿಕೆಯರೊಂದಿಗೆ (ಮಧ್ಯವಯಸ್ಸಿನಲ್ಲಿ ಮಾಧವಿ ತಾರಕಾ ಮುಂತಾದ ಪರಿಚಾರಿಕೆಯರೊಂದಿಗೆ) ವಿಷಯಲೋಲುಪತೆಯಲ್ಲಿ ಮುಳುಗುವ ಮೂಲಕ ಮಾತೃವಾತ್ಸಲ್ಯ ಉಂಟು ಮಾಡಿದ ಕೊರತೆಯನ್ನು ನೀಗಿಸಿಕೊಳ್ಳಲು ಯಯಾತಿ ವ್ಯರ್ಥಪ್ರಯತ್ನ ಮಾಡುತ್ತಾನೆ. ಹಿರಿಯ ಅಣ್ಣ ಯತಿಯ ವಿವೇಕ, ವೈರಾಗ್ಯಗಳು ಯಯಾತಿಯ ಮುಂದೆ ನೈತಿಕ ಸವಾಲನ್ನೊಡ್ಡುತ್ತವೆ. ತಂದೆ ನಹುಷನ ದುರಂತ, ಅಲಕಾ, ಕಚ ಮುಂತಾದವರ ಸಂಪರ್ಕದಿಂದಾಗಿ ಹುಟ್ಟಿದ ಆಧ್ಯಾತ್ಮಿಕ ಹಸಿವು, ಇವೆಲ್ಲವೂ ಅವನ ಮನೋರೋಗಕ್ಕೆ ಭೂಮಿಕೆಯಾಗಿ ಒದಗಿ ಬಂದಿವೆ.

ತನ್ನ ಪ್ರೇಮಿ ಕಚನನ್ನು ಒಲಿಸಿಕೊಳ್ಳಲು ವಿಫಲಳಾದ ದೇವಯಾನಿಯ ಸ್ವಾಭಿಮಾನ ಮತ್ತು ಮಹತ್ವಾಕಾಂಕ್ಷೆ, ತನ್ನ ಜನಗಳನ್ನು ಕಾಪಾಡುವ ಸಲುವಾಗಿ ಜೀವಿತವನ್ನೇ ಸಮರ್ಪಿಸಿಕೊಂಡ ಶರ್ಮಿಷ್ಠೆಯ ಉದಾರತೆ -ಇವೆರಡೂ ಕಾದಂಬರಿಯ ಜೀವಾಳವಾಗಿವೆ. ಈ ಎರಡು ಪಾತ್ರಗಳ ಜೊತೆಗೆ ಇಹಲೋಕದ ಸುಖದ ಬೆನ್ನೇರಿದ ಯಯಾತಿ ಮತ್ತು ಪರಲೋಕದ ಸುಖವನ್ನು ಬಯಸುವ ಕಚ. ಕಾದಂಬರಿಯು ಪ್ರಧಾನವಾಗಿ ಈ ನಾಲ್ಕು ಆದರ್ಶಗಳ ನಡುವೆ ಏರ್ಪಡುವ ಒಂದು ಘರ್ಷಣೆಯಾಗಿದೆ, ಈ ಘರ್ಷಣೆಯಲ್ಲಿ ಕೊನೆಗೆ ಯಾವ ಆದರ್ಶ ಗೆಲ್ಲುತ್ತದೆ ಎಂಬ ಪ್ರಶ್ನೆಗಿಂತ ಘರ್ಷಣೆಯ ಫಲವಾಗಿ ನಾಲ್ಕೂ ಪಾತ್ರಗಳ ಮೂಲಕ ಅನಾವರಣವಾಗುವ ವಿವಿಧ ಮಾನವೀಯ ಸ್ವಭಾವಗಳ ಪರಿಚಯ ಅನನ್ಯವಾದುದು.

ಪಶ್ಚಿಮ ಬುದ್ಧಿಯಿಂದ ಪ್ರೇರಿತವಾದ ನಮ್ಮ ಹಲವಾರು ಆಧುನಿಕ ಗ್ರಹಿಕೆಗಳನ್ನು ಯಯಾತಿ ಮರುಪರಿಶೀಲನೆಗೆ ಒಡ್ಡುತ್ತದೆ. ಉದಾಹರಣೆಗೆ ಸಿಗ್ಮಂಡ್‌ ಫ್ರಾಯ್ಡ್‌ ಪ್ರತಿಪಾದಿಸಿದ ‘ಲಿಬಿಡೋ ‘ಈಡಿಪಸ್‌ ಕಾಂಪ್ಲೆಕ್ಸ್‌’ ಮುಂತಾದ ಪರಿಕಲ್ಪನೆಯನ್ನು ಈಗಲೂ ನಮ್ಮ ವಿಶ್ವವಿದ್ಯಾಲಯಗಳಲ್ಲಿ ಯಥಾವತ್ತಾಗಿ ಕಲಿಸಲಾಗುತ್ತಿದೆ. ನಮ್ಮಲ್ಲಿ ಮಗ ತಂದೆಯನ್ನು ಕೊಲ್ಲುವ ಕಲ್ಪನೆಯಿಲ್ಲ. ಬದಲಾಗಿ ಇದಕ್ಕಿಂತಲೂ ಪರಿಷ್ಕೃತವಾದ ‘ಋಣಮುಕ್ತಿಯ ಕಲ್ಪನೆ ಇದೆ. ಭಾರತದಲ್ಲಿ ‘ಪಿತೃಋಣ’, ‘ದೇವಋಣ’, ‘ಋಷಿಋಣ’ಗಳಿಂದ ವಿಮೋಚನೆ ಯಾಗಬೇಕೆಂಬ ಇನ್ನೂ ಸುಧಾರಿತವಾದ ವಿವೇಕವಿತ್ತು’ ಎಂದು ಯು.ಆರ್.‌ ಅನಂತಮೂರ್ತಿ ಸಹ ಗುರುತಿಸುತ್ತಾರೆ.

ಮಗನೇ ತಂದೆಗಾಗಿ ಸರ್ವಸ್ವವನ್ನು ತ್ಯಾಗ ಮಾಡುವ ಸಾಕಷ್ಟು ನಿದರ್ಶನಗಳು ನಮ್ಮಲ್ಲಿ ಸಿಗುತ್ತವೆ. ಇದಕ್ಕೆ ಪುರು-ಯಯಾತಿಯ ಸಂಬಂಧವಷ್ಟೇ ಅಲ್ಲ, ತಂದೆಗಾಗಿ ಆಜನ್ಮ ಬ್ರಹ್ಮಚರ್ಯವ್ರತ ತೆಗೆದುಕೊಂಡ ಭೀಷ್ಮ, ವನವಾಸವ್ರತ ಕೈಗೊಂಡ ಶ್ರೀರಾಮ, ಯಮನ ಮನೆಗೆ ಹೋಗಿ ಬಂದ ನಚಿಕೇತ ಮುಂತಾದ ಹಲವಾರು ನಿದರ್ಶನಗಳನ್ನು ಕಾಣಬಹುದು.

ಕೊನೆಗೆ ಯಯಾತಿ ಮತ್ತು ಪುರು ಪರಸ್ಪರರ ಋಣಗಳಿಂದ ಮುಕ್ತರಾಗುತ್ತಾರೆ. ಯಯಾತಿ ಕಾದಂಬರಿಯಲ್ಲಿ ಶರ್ಮಿಷ್ಠೆ-ದೇವಯಾನಿಯರೂ ಯಯಾತಿಯಷ್ಟೇ ಪ್ರಧಾನ ಪಾತ್ರಗಳಾಗಿದ್ದು ಮೂವರೂ ತಮ್ಮದೇ ನೆಲೆಯಲ್ಲಿ ನಿಂತು ತಮ್ಮ ತಮ್ಮ ಕತೆಯನ್ನು ಪ್ರಥಮ ಪುರುಷದಲ್ಲಿ ನಿರೂಪಿಸುವ ತಂತ್ರವನ್ನು ಲೇಖಕರು ಅಳವಡಿಸಿಕೊಂಡಿದ್ದಾರೆ. (ಅಂದಹಾಗೆ, ಸ್ವನಿರೂಪಣೆ ಫ್ರಾಯ್ಡ್‌ನ ಮನೋಚಿಕಿತ್ಸಾ ತಂತ್ರವೂ ಹೌದು). ಯಯಾತಿ-ದೇವಯಾನಿ-ಶರ್ಮಿಷ್ಠೆಯರ ತ್ರಿವಳಿ ಸಂಬಂಧವು ಪುರುಷನಾದವನ ಸರ್ವನಾಶ ಹೆಣ್ಣಿನ ಪ್ರೇಮಪಾಶದಿಂದಾಗುತ್ತದೋ ಅಥವಾ ಅವಳ ದ್ವೇಷಭಾವದಿಂದಾಗುತ್ತದೋ ಎಂಬ ಪ್ರಶ್ನೆಯನ್ನು ಕಾದಂಬರಿ ಓದುಗನ ಮುಂದಿಡುತ್ತದೆ.

ಈ ಪ್ರಶ್ನೆಯ ತಾರ್ಕಿಕ ಅಂತ್ಯವೇನು ಎಂಬ ಕುತೂಹಲಕಾರೀ ಜಿಜ್ಞಾಸೆ ಪ್ರಾರಂಭವಾಗುವಷ್ಟರಲ್ಲಿ ಯಯಾತಿಯ ಮೇಲೆ ವೃದ್ಧಾಪ್ಯ ಬಂದೆರಗುತ್ತದೆ. ‘ವೃದ್ಧʼ ಎಂಬುದು ಮುದಿತನ ಮತ್ತು ಪಕ್ವತೆ ಎರಡನ್ನೂ ಸೂಚಿಸುವ ಪದವಾಗಿದೆ. ವೃದ್ಧಾಪ್ಯವು ಇಲ್ಲಿಂದಾಚೆ ಬದುಕನ್ನು ಪಕ್ವತೆಯತ್ತ ನಡೆಸಬೇಕೋ ಇಲ್ಲವೇ ಸಾವಿನತ್ತ ಸಾಗಿಸಬೇಕೋ ಎಂಬುದನ್ನು ನಿರ್ಧರಿಸುವ ಸಂಕ್ರಮಣದ ಘಟ್ಟವಾಗಿದೆ. ಶರ್ಮಿಷ್ಠೆಯ ನಿಷ್ಕಲ್ಮಶ ಪ್ರೀತಿ ಮತ್ತು ದೇವಯಾನಿಯ ಹೃದಯ ಪರಿವರ್ತನೆಯ ಪರಿಣಾಮವಾಗಿ ಯಯಾತಿ ಇಂಥದೊಂದು ಸಂಕ್ರಮಣದ ಸ್ಥಿತಿಯಲ್ಲಿ ಮರಣದತ್ತ ನಡೆಯದೇ ಪಕ್ವತೆಯನ್ನು ಹುಡುಕಿಕೊಂಡು ಹೊರಡುತ್ತಾನೆ.

ಅಸಲಿಗೆ ಯಯಾತಿಯ ಹುಡುಕಾಟ ಜೀವನದ ಅನುಭವವನ್ನು ಪರಾಕಾಷ್ಠೆಗೆ ತಲುಪಿಸಬಲ್ಲ ಯೌವನದ ಹುಡುಕಾಟವಾಗಿದೆ. ಆದರೆ, ಆದ್ಯಂತ ರಹಿತವಾದ ಬದುಕಿಗೆ ಎಲ್ಲಾದರೂ ಬಾಲ್ಯ ಯೌವನ ವೃದ್ಧಾಪ್ಯವೆಂಬ ನಶ್ವರ ಅವಸ್ಥೆಗಳಿರಲು ಸಾಧ್ಯವೇ? ವ್ಯಕ್ತಿ ತಾನು ಇಂತಹ ಬದುಕಿನ ಅವಿಭಾಜ್ಯ ಅಂಶವೆಂಬುದನ್ನು ಮರೆತು ಶರೀರವೇ ತಾನೆಂಬ ಭ್ರಮೆಗೊಳಗಾದಾಗ ಸಾವಿಗೆ ಹೆದರುತ್ತಾನೆ, ವೃದ್ಧಾಪ್ಯಕ್ಕೆ ವಿಹ್ವಲಗೊಳ್ಳುತ್ತಾನೆ, ಅಧಿಕಾರದ ಮೋಹಕ್ಕೆ ಬಿಡದೇ ಅಂಟಿಕೊಳ್ಳುತ್ತಾನೆ. ಯಯಾತಿ ತಪೋನಿರತನಾಗುವುದು ಈ ಶರೀರಭಾವವನ್ನು ಮೀರುವ ಸಲುವಾಗಿ. ಕೊನೆಗೆ ಯಯಾತಿಗೆ ತಪಃಸ್ಸಿದ್ಧಿಯಾಯಿತೇ ಇಲ್ಲವೇ ಎಂಬ ಪ್ರಶ್ನೆಗೆ ಕಾದಂಬರಿಯಲ್ಲಿ ಉತ್ತರವಿಲ್ಲ. ಆದರೆ ‘ತಪಃಶ್ಚರಣ ನಿಶ್ಚಯ ಮನನಾದʼ ಮರುಕ್ಷಣವೇ ಅಧಿಕಾರದಾಹವೆಂಬ ಮನೋರೋಗದಿಂದ ಗುಣಮುಖನಾದ ಎಂಬ ಸೂಚನೆಯಂತೂ ಸಿಗುತ್ತದೆ. ವ್ಯಕ್ತಿ ಗುಣಮುಖನಾದರೆ ಅಷ್ಟು ಸಾಲದೇ? ಸಿದ್ಧಿಯೆಂಬ ಮರೀಚಿಕೆಯನ್ನು ಪಡೆದೇ ತೀರಬೇಕೆಂಬ ತವಕವೇಕೆ? 

ಅಧಿಕಾರವೆನ್ನುವುದು ಎರಡಲಗಿನ ಗರಗಸದ ಸಹವಾಸದಂತೆ. ವ್ಯಕ್ತಿ ಅಧಿಕಾರವನ್ನೇರಿದಾಗಲೂ ಭ್ರಷ್ಟನಾಗುತ್ತಾನೆ, ಅಧಿಕಾರದಿಂದಿಳಿದಾಗಲೂ ಭ್ರಷ್ಟನಾಗುತ್ತಾನೆ. ಮೊದಲನೆಯ ಭ್ರಷ್ಟತನಕ್ಕೆ ಯಯಾತಿಯ ತಂದೆ ನಹುಷ ಉದಾಹರಣೆಯಾದರೆ, ಎರಡನೆಯದಕ್ಕೆ ಶಾಪಗ್ರಸ್ತ ಯಯಾತಿಯೇ ಉದಾಹರಣೆಯಾಗಿದ್ದಾನೆ (ಲಂಕೇಶರು ‘ನಿವೃತ್ತರುʼ ಕತೆಯಲ್ಲಿ ಈ ಶಾಪಗ್ರಸ್ತರ ಅವಸ್ಥೆಯನ್ನೇ ಚಿತ್ರಿಸುವುದು).

ರಾಜಕಾರಣಿಗಳು ‘ನಮಗೆ ಅಧಿಕಾರ ಮುಖ್ಯವಲ್ಲ, ಅಧಿಕಾರ ಎಂದಿಗೂ ಶಾಶ್ವತವಲ್ಲ’ ಎಂಬ ಆತ್ಮವಂಚನೆಯ ಮಾತನಾಡುತ್ತಿರುವವರೆಗೂ ಅಧಿಕಾರದ ಈ ಅಪಾಯ ಅವರಿಗೆ ಅರ್ಥವಾಗುವುದಿಲ್ಲ. ಯಯಾತಿ ಈ ಬಗೆಯ ಆತ್ಮವಂಚನೆಯಿಂದ ಹೊರಬಂದುದರಲ್ಲಿ ಅವನ ಹಿರಿಮೆ ಇದೆ. ಫ್ರೆಡರಿಕ್‌ ನೀಷೆ ‘ಗ್ರೀಕ್‌ ದೊರೆ ಓದಿಸ್ಯೂಸನು ತನ್ನ ಕನಸಿನ ಕನ್ಯೆ ನೌಸಿಕಾಗೆ ವಿದಾಯ ಹೇಳಿದಂತೆ ಬದುಕನ್ನು ಪ್ರೀತಿಸುವುದನ್ನು ಬಿಟ್ಟು ಬದುಕಿಗೆ ಹರಸುತ್ತ ವಿದಾಯ ಹೇಳತಕ್ಕದ್ದು’ ಎಂದು ಬರೆದಿದ್ದಾನೆ. ಅಧಿಕಾರ ಲಾಲಸೆಯುಳ್ಳ ಸಮಕಾಲೀನ ಯಯಾತಿಗಳನ್ನು ಉದ್ದೇಶಿಸಿಯೇ ಅವನು ಈ ಮಾತುಗಳನ್ನು ಆಡಿರಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು