ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರಂಪರಿಕ ರೈಲು ವಸ್ತು ಸಂಗ್ರಹಾಲಯ: ಕಣ್ಣಳತೆಯಲ್ಲಿ ರೈಲು ಜಗತ್ತು...

Last Updated 13 ಜುಲೈ 2020, 19:30 IST
ಅಕ್ಷರ ಗಾತ್ರ

ಬಗೆಬಗೆಯ ವಿನ್ಯಾಸಗಳ ರೈಲು ಬೋಗಿಗಳಲ್ಲಿ ಕುಳಿತು ಸಿನಿಮಾ ನೋಡುತ್ತ, ರುಚಿ, ರುಚಿಯಾದ ತಿಂಡಿ ಸವಿಯುತ್ತಾ, ರೈಲ್ವೆ ಇತಿಹಾಸವನ್ನು ಕಣ್ತುಂಬಿಕೊಳ್ಳುತ್ತಿದ್ದರೆ; ನಾವೆಲ್ಲಿದ್ದೇವೆ? ಎನ್ನುವುದೇ ಮರೆತು ಹೋಗುವಷ್ಟರ ಮಟ್ಟಿಗೆ ಮನಸ್ಸಿಗೆ ಖುಷಿ ನೀಡುತ್ತದೆ ಆ ಜಾಗ.

ಒಮ್ಮೆ ಹೋದರೆ ಮತ್ತೆ ಹೋಗಬೇಕು ಎನಿಸುವಷ್ಟು ಆಕರ್ಷಕವಾದ ಜಾಗವದು. ಹುಬ್ಬಳ್ಳಿ–ಗದಗ ರಸ್ತೆಯಲ್ಲಿರುವ ಆ ಜಾಗದಲ್ಲಿ ಎಲ್ಲಿ ನೋಡಿದರೂ ರೈಲಿನದ್ದೇ ಸುದ್ದಿ. ಅಲ್ಲಿ ಸುತ್ತಾಡುತ್ತಿದ್ದರೆ 167 ವರ್ಷಗಳ ಇತಿಹಾಸ ಹೊಂದಿರುವ ಭಾರತೀಯ ರೈಲ್ವೆಯಲ್ಲಿ ಎಷ್ಟೊಂದು ಬದಲಾವಣೆಗಳಾಗಿವೆ ಎಂಬ ಅಚ್ಚರಿಯೂ ಕಾಡುತ್ತದೆ.

ಇಷ್ಟೆಲ್ಲ ವಿಶೇಷಗಳನ್ನು ಹೊಂದಿರುವ ಆ ತಾಣವೇ ನೈರುತ್ಯ ರೈಲ್ವೆಯವರು ಹುಬ್ಬಳ್ಳಿಯಲ್ಲಿ ನಿರ್ಮಿಸಿರುವ ಪಾರಂಪರಿಕ ರೈಲು ವಸ್ತು ಸಂಗ್ರಹಾಲಯ. ಇಲ್ಲಿ‘ರೈಲು ಜಗತ್ತು’ ಅನಾವರಣಗೊಂಡಿದೆ. ಭಾರತದಲ್ಲಿ ಒಟ್ಟು 11 ಈ ರೀತಿಯ ವಸ್ತು ಸಂಗ್ರಹಾಲಯಗಳಿದ್ದು, ಕರ್ನಾಟಕದಲ್ಲಿ ನಿರ್ಮಾಣವಾದ ಎರಡನೇ ವಸ್ತುಸಂಗ್ರಹಾಲಯ ಇದು. ಮೊದಲನೆಯದ್ದು ಮೈಸೂರಿನಲ್ಲಿದೆ.

ಹಳೆಯ ಕಟ್ಟಡಗಳೇ ಸಂಗ್ರಹಾಲಯ

ನ್ಯಾರೊ ಗೇಜ್‌, ಮೀಟರ್‌ ಗೇಜ್‌ಗಳ ಕಾಲದಲ್ಲಿ ರೈಲುಗಳು ಹೇಗೆ ಕಾರ್ಯಾಚರಣೆ ನಡೆಸುತ್ತಿದ್ದವು, ರೈಲು ಸಂಚಾರ ಆರಂಭವಾಗಿ ಇಷ್ಟು ವರ್ಷ ಕಾಲಕ್ರಮೇಣ ಮಾಡಿಕೊಂಡ ಬದಲಾವಣೆಗಳೇನು ಎನ್ನುವುದರ ಸಮಗ್ರ ಮಾಹಿತಿ ಹುಬ್ಬಳ್ಳಿಯ ವಸ್ತು ಸಂಗ್ರಹಾಲಯದಲ್ಲಿದೆ.

ನೈರುತ್ಯ ರೈಲ್ವೆಯು ತನ್ನಲ್ಲಿರುವ ಸಂಪನ್ಮೂಲಗಳನ್ನು ಬಳಸಿಕೊಂಡೇ ಇದನ್ನು ನಿರ್ಮಿಸಿರುವುದು ವಿಶೇಷ. ಇಲಾಖೆಯ ಎರಡು ಹಳೆಯ ಕಟ್ಟಡಗಳನ್ನು ವಸ್ತು ಸಂಗ್ರಹಾಲಯವಾಗಿ ಪರಿವರ್ತಿಸಲಾಗಿದೆ. ಈ ಕಟ್ಟಡಗಳ ಮುಂದಿರುವ ವಿಶಾಲವಾದ ಜಾಗದಲ್ಲಿ ಬೋಗಿಗಳಲ್ಲಿಯೇ ರೆಸ್ಟೊರೆಂಟ್‌, ಮಿನಿ ಚಿತ್ರಮಂದಿರ ನಿರ್ಮಿಸಲಾಗಿದೆ. ಇಲ್ಲಿ 10ರಿಂದ 15 ನಿಮಿಷಗಳ ಅವಧಿಯ ರೈಲ್ವೆಗೆ ಸಂಬಂಧಿಸಿದ ಕಿರುಚಿತ್ರಗಳನ್ನು ತೋರಿಸಲಾಗುತ್ತದೆ. ಹೀಗಾಗಿ ವಸ್ತು ಸಂಗ್ರಹಾಲಯಕ್ಕೆ ಬರುವ ಜನ ತಮಗಿಷ್ಟದ ತಿಂಡಿ ಸವಿಯುತ್ತಲೇ ಸಿನಿಮಾ ನೋಡುತ್ತ, ರೈಲಿನ ಜಗತ್ತನ್ನು ಕಣ್ತುಂಬಿಕೊಳ್ಳಬಹುದು.

ಹೊಗೆ ಉಗುಳುವ ಉಗಿಬಂಡಿಯಿಂದ ಹಿಡಿದು ಎಲೆಕ್ಟ್ರಾನಿಕ್‌ ಚಾಲಿತ ಎಂಜಿನ್‌ಗಳವರೆಗೆ ಸಮಗ್ರ ಇತಿಹಾಸವನ್ನು ಇಲ್ಲಿ ಕಟ್ಟಿಕೊಡಲಾಗಿದೆ. ರೈಲ್ವೆಯಲ್ಲಿ ಆದ ತಾಂತ್ರಿಕ ಹಾಗೂ ತಾಂತ್ರಿಕೇತರ ಬದಲಾವಣೆಗಳು, ಸ್ಟೇಷನ್‌ ಮಾಸ್ಟರ್‌ಗಳು ಕಾರ್ಯನಿರ್ವಹಿಸುತ್ತಿದ್ದ ರೀತಿ, ಸಿಗ್ನಲ್‌ ತೋರಿಸುವ ಹಳೆಯ ವಿಧಾನಗಳು, ಲೋಕೊ ಪೈಲಟ್‌ಗಳು ಕೆಲಸ ಮಾಡುತ್ತಿದ್ದ ರೀತಿ, ಹಂತಹಂತವಾಗಿ ಬದಲಾದ ಸಿಬ್ಬಂದಿಯ ಸಮವಸ್ತ್ರ ಹೀಗೆ ಇವೆಲ್ಲವುದರ ಚಿತ್ರಣ ಸಿಗುತ್ತದೆ.

ಎಂಜಿನಿಯರಿಂಗ್‌ ಲೋಕ

ರೈಲ್ವೆಯ ಎಂಜಿನಿಯರಿಂಗ್‌, ಮೆಕಾನಿಕಲ್‌, ಸಿಗ್ನಲ್‌, ಟೆಲಿಕಾಂ ಹೀಗೆ ವಿವಿಧ ವಿಭಾಗಗಳ ತಜ್ಞರು ಸೇರಿ ಯೋಜನೆ ರೂಪಿಸಿ ವಸ್ತು ಸಂಗ್ರಹಾಲಯ ನಿರ್ಮಿಸಿದ್ದಾರೆ. ರೈಲಿಗಾಗಿ ಉಪಯೋಗಿಸುತ್ತಿದ್ದ ಹಳೆಯ ವಸ್ತುಗಳನ್ನು ಬಳಸಿಕೊಳ್ಳಲಾಗಿದೆ. ರೈಲು ಒಂದು ನಿಲ್ದಾಣದಿಂದ ಇನ್ನೊಂದು ನಿಲ್ದಾಣಕ್ಕೆ ಹೋಗುವಾಗ ಅಲ್ಲಿನ ಸಿಬ್ಬಂದಿಗೆ ಸಂಕೇತಗಳನ್ನು ರವಾನಿಸುತ್ತಿದ್ದ ಹಳೆಯ ಕಾಲದ ಫೋನ್‌ಗಳ ಚಿತ್ರಗಳೂ ಇವೆ. ವಸ್ತು ಸಂಗ್ರಹಾಲಯದ ಕಟ್ಟಡದ ಒಳಗೆ ರೈಲ್ವೆಗೆ ಸಂಬಂಧಿಸಿದ ಪುಸ್ತಕಗಳು, ಛಾಯಾಚಿತ್ರಗಳು, ಉಪಕರಣಗಳಿವೆ. ರೈಲ್ವೆಯ ಪ್ರಮುಖ ಅಧಿಕಾರಿಗಳು, ಸಾಧಕರ ಬಗ್ಗೆಯೂ ಮಾಹಿತಿ ಸಿಗುತ್ತದೆ.

ವಸ್ತು ಸಂಗ್ರಹಾಲಯದ ಕೊಠಡಿಯ ಹೊರಭಾಗದಲ್ಲಿ ವಿಶ್ರಾಂತಿ ಪಡೆಯಲು ಪ್ರತ್ಯೇಕ ಸ್ಥಳಗಳನ್ನು ನಿರ್ಮಿಸಲಾಗಿದೆ. ಅಂದವಾದ ಬಣ್ಣಗಳ ಮೂಲಕ ಸಂಗ್ರಹಾಲಯದ ಸೌಂದರ್ಯ ಹೆಚ್ಚಿಸಲಾಗಿದೆ. ಇವುಗಳ ಜೊತೆಗೆ ಉತ್ತರ ಕರ್ನಾಟಕದ ಉಡುಪಿನ ಪರಂಪರೆಯನ್ನೂ ಅನಾವರಣಗೊಳಿಸಲಾಗಿದೆ. ಮಹಿಳೆ ಸೀರೆಯುಟ್ಟು, ಬೋರಮಾಳ ಸರ ಧರಿಸಿ ಪ್ರಯಾಣಿಸುತ್ತಿರುವ ಚಿತ್ರ ಈ ಭಾಗದ ಸಂಸ್ಕೃತಿಯನ್ನು ಪ್ರತಿನಿಧಿಸುವಂತಿದೆ. ಪುರುಷ ಪ್ರಯಾಣಿಕ ದೋತ್ರ ಹಾಗೂ ಪೇಟ ಧರಿಸಿದ್ದ ಕಲಾಕೃತಿಗಳು ಕಂಗೊಳಿಸುತ್ತವೆ.

ಸೋಂಕು ಕಡಿಮೆಯಾದ ಬಳಿಕ ಉದ್ಘಾಟನೆ

ಕೊರೊನಾ ಸೋಂಕಿನ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕಾರಣ ವಸ್ತು ಸಂಗ್ರಹಾಲಯದ ಉದ್ಘಾಟನೆ ದಿನಾಂಕ ನಿಗದಿಪಡಿಸಲಾಗಿಲ್ಲ. ಈ ವರ್ಷದ ಜನವರಿ ಅಂತ್ಯದ ವೇಳೆಗೆ ಪೂರ್ಣಗೊಳ್ಳಬೇಕಿದ್ದ ಕಾಮಗಾರಿ ಕೊರೊನಾ ಹಾಗೂ ಲಾಕ್‌ಡೌನ್‌ನಿಂದ ವಿಳಂಬವಾಯಿತು ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಈ. ವಿಜಯಾ ತಿಳಿಸಿದರು.

‘ಇಲಾಖೆಯ ಹಳೆಯ ಸಾಮಗ್ರಿಗಳನ್ನು ‌ಬಳಸಿಕೊಂಡು‌ ಸಂಗ್ರಹಾಲಯ ‌ನಿರ್ಮಿಸಲಾಗಿದೆ‌. ನಮ್ಮ ಸಿಬ್ಬಂದಿಯೇ ಕೆಲಸ ಮಾಡಿದ್ದಾರೆ. ಆದ್ದರಿಂದ ಇದಕ್ಕಾಗಿ ಪ್ರತ್ಯೇಕ ಅನುದಾನ ಮೀಸಲಿಟ್ಟಿಲ್ಲ. ಉದ್ಘಾಟನೆಯ ಬಳಿಕ ಪ್ರವೇಶ ಶುಲ್ಕ, ವಸ್ತು ಸಂಗ್ರಹಾಲಯದ ವೀಕ್ಷಣೆಯ ಸಮಯವನ್ನು ನಿರ್ಧರಿಸಲಾಗುವುದು’ ಎಂದರು.

ಎಲ್ಲಿದೆ ವಸ್ತು ಸಂಗ್ರಹಾಲಯ

ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ ಒಂದು ಕಿ.ಮೀ. ದೂರದಲ್ಲಿ ಈ ವಸ್ತು ಸಂಗ್ರಹಾಲಯವಿದೆ. ಹುಬ್ಬಳ್ಳಿಯಿಂದ–ಗದುಗಿಗೆ ಹೋಗುವ ದಾರಿಯಲ್ಲಿರುವ ರೈಲ್ವೆ ಆಸ್ಪತ್ರೆ ಎದುರು ರೈಲ್ವೆ ಜಗತ್ತು ಕಾಣಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT