ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಧೀಂದ್ರ ಹಾಲ್ದೊಡ್ಡೇರಿ: ವಿಜ್ಞಾನ ಕನ್ನಡ ಬರವಣಿಗೆಯ ಸ್ಫೂರ್ತಿ ಸೆಲೆ

Last Updated 4 ಜುಲೈ 2021, 9:36 IST
ಅಕ್ಷರ ಗಾತ್ರ

ಖ್ಯಾತ ವಿಜ್ಞಾನ ಬರಹಗಾರ, ಡಿಆರ್‌ಡಿಒ ಮಾಜಿ ವಿಜ್ಞಾನಿ ಸುಧೀಂದ್ರ ಹಾಲ್ದೊಡ್ಡೇರಿ ಶುಕ್ರವಾರ ಇಹಲೋಕ ತ್ಯಜಿಸಿದ್ದಾರೆ. ಅವರ ಮೇರು ವ್ಯಕ್ತಿತ್ವ, ವಿಜ್ಞಾನಿಯಾಗಿ ಅವರ ಕೊಡುಗೆ, ವಿಜ್ಞಾನವನ್ನು ಸರಳವಾಗಿ ಕನ್ನಡ ಲೇಖನಗಳ ಮೂಲಕ ಓದುಗರಿಗೆ ಆಪ್ತವಾಗಿಸಿದ್ದಲ್ಲದೆ, ಕನ್ನಡ ಬರವಣಿಗೆಗೆ ಇತರರಿಗೆ ಪ್ರೇರಣೆಯಾದ ರೀತಿ, ಕನ್ನಡದ ಮೇಲೆ ಅವರಿಗಿದ್ದ ಪ್ರೀತಿ, ಸರಳತೆ, ಹೀಗೆ ಅವರ ಬದುಕಿನ ಹಲವು ಮುಖಗಳನ್ನು ಲೇಖನದ ಮೂಲಕ ತೆರೆದಿಟ್ಟಿದ್ದಾರೆ ಪತ್ರಿಕೋದ್ಯಮ ಉಪನ್ಯಾಸಕಿ ಭಾಗ್ಯಲಕ್ಷ್ಮಿ ಪದಕಿ.

‘ಅಪರಿಮಿತ ಜ್ಞಾನಿಗಳಿಗೆ (ಜೀನಿಯಸ್) ಆಯಸ್ಸು ಕಡಿಮೆ’ ಎಂಬ ಮಾತೊಂದಿದೆ. ಸಮಾಜಕ್ಕೆ ವ್ಯಕ್ತಿಯೊಬ್ಬನ ಸೇವೆ ಇನ್ನೂ ಬೇಕಿರುವಾಗಲೇ ಆತ ಕಣ್ಮುಚ್ಚಿದರೆ, ಅವನು ನೂರು ವರ್ಷ ಬದುಕಿದರೂ ಅಲ್ಪಾಯುಷಿಯೇ ಎಂದು ಸಮಾಜ ಮತ್ತು ಅವನನ್ನು ಇಷ್ಟ ಪಡುವ ಜನ ಭಾವಿಸುತ್ತಾರೆ. ಈ ಮಾತು, ನಮ್ಮನ್ನು ಅಗಲಿದ ಹಾಲ್ದೊಡ್ಡೇರಿ ಸುಧೀಂದ್ರ ಅವರ ಬಗ್ಗೆ ನಿಜವಾಗಿದೆ.

ನನ್ನ ಗಣಿತದ ಗುರು

ವಾವೆಯಲ್ಲಿ ಸುಧೀಂದ್ರ ನನಗೆ ಮಾವನಾದರೂ, ನನ್ನ ಸಹೋದರನಂತೆ ಸಲುಗೆ; ಏಕವಚನದ ಸಂಬೋಧನೆ. ನಾವೆಲ್ಲರೂ ಒಟ್ಟಾಗಿ ಬೆಳೆದ ನಮ್ಮ ಬಾಲ್ಯದ ದಿನಗಳೊಂದು ಸುಂದರ ಕಥೆ; ಅದಕ್ಕೆ ಕಥಾನಾಯಕ ಸುಧೀಂದ್ರನೇ. ನಾನು ಎಸ್ಸೆಸ್ಸೆಲ್ಸಿಯಲ್ಲಿದ್ದಾಗ, ನನ್ನ ಗಣಿತದ ಪಾಂಡಿತ್ಯವನ್ನು ಕಂಡ ನಮ್ಮ ತಂದೆ ಕೆ.ಹೆಚ್.ನರಸಿಂಹ ಮೂರ್ತಿಯವರು, ಸುಧೀಂದ್ರನ ಬಳಿ ಪಾಠಕ್ಕೆ ಹೋಗಲು ಹೇಳಿದರು. ತನ್ನ ನಿಯಮಗಳಿಗೆ ಬದ್ಧಳಾದರೆ ಮಾತ್ರ ಪಾಠ ಹೇಳಿಕೊಡುವುದಾಗಿ ತಾಕೀತು ಮಾಡಿದ ಕಠಿಣಾತಿ ಕಠಿಣ ಗುರು ಅವನು. ಅದಕ್ಕಾಗಿ ನಾನು ಎಷ್ಟೋ ಬಾರಿ ಅತ್ತದ್ದೂ ಇದೆ. ಅವರ ತಂದೆ, ಪತ್ರಿಕೆಯೊಂದರ ಸಂಪಾದಕರಾಗಿದ್ದ ಎಚ್.ಆರ್.‌ ನಾಗೇಶ ರಾವ್‌ (ನನ್ನ ಅಜ್ಜಿಯ ಅಣ್ಣ) ಅವರೂ ಸೇರಿದಂತೆ ಮನೆಯವರೆಲ್ಲ ನನ್ನ ಮೇಲೆ ಕರುಣೆ ತೋರು ಎಂದು ಅವನನ್ನು ಕೇಳಿಕೊಂಡದ್ದೂ ಇದೆ. ಅವನು ಟಾಟಾ ಇನ್‌ಸ್ಟಿಟ್ಯೂಟ್‌ನಿಂದ ಬರುವ ಹೊತ್ತಿಗೆ ನಾನು ಅವರ ಮನೆಗೆ ಹೋಗಿ, ಮಗ್ಗಿ ಮತ್ತು ಫಾರ್ಮುಲಾಗಳನ್ನು ಪ್ರತಿದಿನವೂ ಬರೆದು ತೋರಿಸಲೇ ಬೇಕಾಗಿದ್ದ ಅನಿವಾರ್ಯ ಶಿಕ್ಷೆ! ನನಗೆ ಬೇಕಿದ್ದು ಕೇವಲ 35 ಅಂಕ. ಆದರೆ, ʻವಿಷಯದ ಮೂಲಭೂತ ತತ್ವಗಳನ್ನು ಮನನ ಮಾಡಿಕೊಳ್ಳದೆ ಕಲಿಯಲು ಸಾಧ್ಯವಿಲ್ಲ, ಸಾಧುವೂ ಅಲ್ಲʼ ಎಂಬುದು ಅವನ ಸಿದ್ದಾಂತವಾಗಿತ್ತು. ಗಣಿತದಲ್ಲಿ ಫೇಲಾಗಬೇಕಿದ್ದ ನಾನು ಅವನ ಅತ್ಯದ್ಭುತ ಪಾಠಗಳಿಂದ ಒಳ್ಳೆಯ ಅಂಕ ಗಳಿಸಲು ಸಾಧ್ಯವಾದದ್ದನ್ನು ನಾನೆಂದೂ ಮರೆಯಲಾರೆ. ನಾನು ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣ ಪಡೆಯುವಂತೆ ಸಲಹೆ ನೀಡಿದ್ದೂ ಅವನೇ.

ಬಂಧು-ಬಾಂಧವ

ಸುಧೀಂದ್ರ ಅತ್ಯಂತ ಸರಳ ಮತ್ತು ಸ್ನೇಹ ಜೀವಿ. ವ್ಯಕ್ತಿಯೊಬ್ಬ ಮೇಲೇರುತ್ತಿದ್ದಂತೆ, ಜನಪ್ರಿಯತೆ ಪಡೆಯುತ್ತಿದ್ದಂತೆ ತನ್ನ ಹಳೆಯ ಸಂಬಂಧಿಗಳನ್ನು ಮರೆಯುವ ಸಾಧ್ಯತೆ ಸಾಮಾನ್ಯ. ಆದರೆ, ಅವನ ವಿಷಯದಲ್ಲಿ ಹಾಗಾಗಲಿಲ್ಲ. ನಮ್ಮ ದೊಡ್ಡ ಕುಟುಂಬದಲ್ಲಿ ಯಾರಿಗೇ ಹುಷಾರು ತಪ್ಪಿದರೂ (ಅವನ ತಂದೆ, ನನ್ನ ತಂದೆ‌, ಅವರ ಮಾವ, ತಂಗಿಯ ಪತಿ ಇತ್ಯಾದಿ) ಅವರನ್ನು ಆಸ್ಪತ್ರೆಗೆ ಸೇರಿಸುವ/ಚಿಕಿತ್ಸೆ ಕೊಡಿಸುವ ವಿಷಯದಲ್ಲಿ ಅವನು ಸದಾ ಮುಂದು. ವೈದ್ಯರೊಡನೆ ಮಾತಾಡಿ, ನಮಗೆ ಸರಳ ಮಾತಿನಲ್ಲಿ ವಿವರಿಸುತ್ತಿದ್ದ ಆಪ್ತ ಸಮಾಲೋಚಕನಾಗಿದ್ದ ಸಹಾ. ಅವರುಗಳ ಆರೋಗ್ಯದ ಬಗ್ಗೆ ಸದಾ ಕಾಳಜಿ ವಹಿಸಿ, ಅಪ್‌ಡೇಟ್‌ ಪಡೆದು, ಧೈರ್ಯ ಕೊಡುತ್ತಿದ್ದ. ಅಗತ್ಯವಿದ್ದಾಗ ರಕ್ತದಾನವನ್ನೂ ಮಾಡಿದ್ದ.

ಸಮಯ ನಿರ್ವಾಹಕ

ತಾನು ಎಷ್ಟೇ ಬಿಜಿ಼ಯಾಗಿದ್ದರೂ ಸಮಾರಂಭಗಳಿಗೆ ತಪ್ಪದೇ ಹಾಜರಾಗಿ, ಮನಃ ಸಂತೋಷ ಪಡಿಸುತ್ತಿದ್ದ. ಹಮ್ಮು-ಬಿಮ್ಮುಗಳಿಲ್ಲದೆ ʻಎಲ್ಲರೊಳಗೊಂದಾಗುತ್ತಿದ್ದʼ. ಸ್ನೇಹಿತರ ಸಂಗದಲ್ಲಿ, ಕುಟುಂಬವನ್ನು ಮರೆಯುತ್ತಿರಲಿಲ್ಲ. ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ಗಳ ಮೂಲಕ ಸಂಭ್ರಮವನ್ನು ಹಂಚಿಕೊಳ್ಳುತ್ತಿದ್ದ. ಸಮಯದ ಒತ್ತಡದಲ್ಲಿರುವ ವ್ಯಕ್ತಿಯೊಬ್ಬ ತನ್ನ ಕುಟುಂಬ, ಬಳಗ, ಸ್ನೇಹಿತರು, ನೆರೆ-ಹೊರೆಯವರು, ಸಂಘ-ಸಂಸ್ಥೆಯವರು, ಮಾಧ್ಯಮದವರು, ಸಹೋದ್ಯೋಗಿಗಳು, ಓದುಗರು, ಅಭಿಮಾನಿಗಳಿಗೆ ಸಮಯ ಕೊಡುತ್ತಿದ್ದ ಅವನ ಟೈಮ್ ಮ್ಯಾನೇಜ್‌ಮೆಂಟ್ ಬಗ್ಗೆ ಆಶ್ಚರ್ಯವಾಗುತ್ತಿತ್ತು. ಅವನಿಗಿರುವುದೂ ಇಪ್ಪತ್ನಾಲ್ಕು ಗಂಟೆಯೇ? ಎಂದು ಅನುಮಾನ ಮೂಡುತ್ತಿತ್ತು.

ಮಹಾನ್‌ ಕನ್ನಡ ಪ್ರೇಮಿ

ಐಐಎಸ್‌ಇ, ಎಲ್‌ಆರ್‌ಡಿಇ, ಎಚ್‌ಎಎಲ್‌ನಂಥ ಸಂಸ್ಥೆಗಳಲ್ಲಿ ಕೆಲಸ ಮಾಡುವಾಗ, ಕನ್ನಡಿಗರು ಕರ್ನಾಟಕದಲ್ಲೇ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತಿದ್ದ. ಕನ್ನಡ ಪರ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಬೆಂಬಲ ಸೂಚಿಸುತ್ತಿದ್ದ. ಕನ್ನಡದಷ್ಟೇ ಇಂಗ್ಲೀಷಿನ ಮೇಲೂ ಅಪಾರ ಪ್ರಭುತ್ವ ಹೊಂದಿದ್ದರೂ ಸುಧೀಂದ್ರನ ಆದ್ಯತೆ ಕನ್ನಡ ಪತ್ರಿಕೆಗಳು ಮತ್ತು ವಾಹಿನಿಗಳು. ನಾನು ಅನೇಕ ಬಾರಿ ʻನೀನೇಕೆ ಇಂಗ್ಲೀಷ್‌ ಪತ್ರಿಕೆಗಳಿಗೆ ಬರೆಯುವುದಿಲ್ಲ?ʼ ಎಂದು ಕೇಳಿದ್ದಿದೆ. ಅದಕ್ಕೆ ಅವನ ಸರಳ ಉತ್ತರ ʻನಮ್ಮ ತಂದೆ ಬರೆದದ್ದು, ಮುಂದೆ ಬಂದದ್ದು ಕನ್ನಡ ಪತ್ರಿಕೆಯಿಂದ. ನನ್ನ ಆಯ್ಕೆ/ಆದ್ಯತೆಯೂ ಅದೇʼ. ಹಿಂದೆ, ಚಿತ್ರ ನಟ ವಿಷ್ಣುವರ್ಧನ್‌ ಪರಭಾಷೆಯಲ್ಲಿ ನಟಿಸತೊಡಗಿದಾಗ, ಅವರಿಗೆ ‘ನೀವು ಕನ್ನಡದಲ್ಲೇ ನಟಿಸಿʼ ಎಂದು ಮನವಿ ಮಾಡಿ, ನಂತರ ಅದಕ್ಕವರು ಉತ್ತರ ಕೊಟ್ಟ ಪತ್ರ, ಫೇಸ್‌ಕ್‌ನಲ್ಲಿ ಲಭ್ಯವಿದೆ. ವಿಜ್ಞಾನ ಮತ್ತು ಕನ್ನಡವನ್ನು ತಾದಾತ್ಮ್ಯಗೊಳಿಸಿ, ಹೊಸ ಪದ ಪ್ರಯೋಗಗಳನ್ನು ಮಾಡಿದ. ಕನ್ನಡದಲ್ಲಿ ವೈಜ್ಞಾನಿಕ ಪಾರಿಭಾಷಿಕ ಪದಗಳನ್ನು ಟಂಕಿಸಿದ. ವಿಜ್ಞಾನವನ್ನು ಕನ್ನಡದಲ್ಲಿ ಹೇಗೆ ಆಕರ್ಷಕ ಶೈಲಿಯಲ್ಲಿ ಬರೆಯಬಹುದು/ವಿವರಿಸಬಹುದು ಎನ್ನುವುದಕ್ಕೆ ಮೇಲ್ಪಂಕ್ತಿ ಹಾಕಿದ. ಅವನ ಮಗಳು ಮೇಘನಾ ಸುಧೀಂದ್ರಳೂ ಸೇರಿದಂತೆ ಇಂದಿನ ತಲೆಮಾರಿನವರು ಕನ್ನಡದಲ್ಲಿ ಬರೆಯಲು, ಅವನ ಬರಹಗಳು/ವಾಹಿನಿ ಕಾರ್ಯಕ್ರಮಗಳ ಮೂಲಕ ಸ್ಫೂರ್ತಿಯ ಸೆಲೆಯಾದ.

ಪ್ರಚಾರ-ಲಾಬಿಗಳಿಗೆ ವಿಮುಖ

ವೃತ್ತಿಯಲ್ಲಾಗಲೀ, ಪ್ರವೃತ್ತಿಯಲ್ಲಾಗಲೀ ಸುಧೀಂದ್ರನಿಗೆ ಬರಬೇಕಾಗಿದ್ದ ಬಡ್ತಿ, ಪ್ರಶಸ್ತಿ-ಗೌರವಗಳು, ಸ್ಥಾನ-ಮಾನಗಳು ಬರಲಿಲ್ಲವೆಂದೇ ನನ್ನ ಭಾವನೆ. ಅದಕ್ಕಾಗಿ ಅವನೆಂದೂ ತಲೆ ಕೆಡಿಸಿಕೊಳ್ಳಲಿಲ್ಲ. ವಶೀಲಿ-ಬಾಜಿ ಮಾಡಲಿಲ್ಲ. ತನ್ನ ಪಾಡಿಗೆ ತಾನು ಕನ್ನಡ ಸೇವೆಯನ್ನು ಕೊನೆಯವರೆಗೂ ಕಾಯಾ-ವಾಚಾ-ಮನಸಾ ನಿರ್ವಹಿಸಿದ.

ತನ್ನ 59 ವರ್ಷದ ಜೀವನದಲ್ಲಿ ಒಂದು ನಿಮಿಷವೂ ವ್ಯರ್ಥ ಮಾಡದ ಎಚ್.ಎನ್.‌ಸುಧೀಂದ್ರ ತನ್ನ ಮನೆತನದ ಊರು ʻಹಾಲ್ದೊಡ್ಡೇರಿʼಯನ್ನು ಲೋಕಪ್ರಿಯಗೊಳಿಸಿ, ಅದರೊಂದಿಗೆ ತನ್ನನ್ನು ಗುರ್ತಿಸಿಕೊಂಡ. ಡಾ.ಅಬ್ದುಲ್‌ ಕಲಾಂ, ಡಾ.ರೊದ್ದಂ ನರಸಿಂಹ, ಡಾ.ಯು.ಆರ್.ರಾವ್‌, ಡಾ.ಸಿ.ಎನ್.ಆರ್‌.ರಾವ್‌ರಂತಹ ಮಹಾನ್‌ ವಿಜ್ಞಾನಿಗಳೊಡನೆ ನಮ್ಮ ಸುಧೀಂದ್ರ ಕೆಲಸ ಮಾಡಿದ್ದ. ಇಷ್ಟಾಗಿಯೂ, ನಿರ್ಮಲ ಮನಸ್ಸಿನ, ಸೌಮ್ಯ ಸ್ವಭಾವದ, ಸರಳ ವ್ಯಕ್ತಿಯಾಗಿದ್ದ ಎನ್ನುವುದು ಒಂದು ಹೆಮ್ಮೆಯಾದರೆ, ಅಂಥ ವ್ಯಕ್ತಿಯೊಡನೆ ನಾವು ಬೆಳೆದದ್ದು ಮತ್ತೊಂದು ಹೆಮ್ಮೆ.

-ಭಾಗ್ಯಲಕ್ಷ್ಮಿ ಪದಕಿ

(ಲೇಖಕಿ ಪತ್ರಿಕೋದ್ಯಮ ಉಪನ್ಯಾಸಕಿ/ಹವ್ಯಾಸಿ ಪತ್ರಕರ್ತೆ, ವಿಜಯನಗರ ಎರಡನೇ ಹಂತ, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT