ಬುಧವಾರ, ಜೂನ್ 23, 2021
29 °C
ಪ್ರತಿಕ್ರಿಯೆ

ಗುಡ್ಡ ಕುಸಿತಕ್ಕೆ ನೀರಿನ ಭಾರವೇ ಕಾರಣ

ಡಾ.ಎಚ್‌.ಎಸ್‌.ಎಂ. ಪ್ರಕಾಶ್‌ Updated:

ಅಕ್ಷರ ಗಾತ್ರ : | |

Land Slides

ಭಾನುವಾರದ ಪುರವಣಿಯಲ್ಲಿ ಪ್ರಕಟವಾಗಿರುವ ಸಹನಾ ಕಾಂತಬೈಲು ಅವರ ‘ಕುಡಿಯರ ಕೂಸು ಮತ್ತು ಗುಡ್ಡ ಕುಸಿತ’ ಲೇಖನ ಸಾಂದರ್ಭಿಕ ಹಾಗೂ ಸಮಂಜಸವಾಗಿದೆ. ಗುಡ್ಡ ಕುಸಿತದ ಕುರಿತು ಶಿವರಾಮ ಕಾರಂತರ ವರ್ಣನೆ ಅಚ್ಚರಿ ಮೂಡಿಸುವಂತಿದೆ. 1951ರಲ್ಲಿಯೇ ಜರುಗಿರಬಹುದಾದ ಜೋಡುಪಾಲ ಸುತ್ತಮುತ್ತಲಿನ ಗುಡ್ಡಕುಸಿತದ ಪ್ರತ್ಯಕ್ಷ ದರ್ಶನ ಕಾರಂತರಿಗೆ ಆಗಿರಬಹುದು. ಜೋಡುಪಾಲದಿಂದ ಪುತ್ತೂರು ಮೂವತ್ತೈದು ಕಿಲೊಮೀಟರ್ ‌ದೂರವಷ್ಟೇ ಇರುವುದರಿಂದ ಅಲ್ಲಿನ ಘಟನೆಗಳಿಗೆ ಸಾಕ್ಷಿಯಾಗಿರಬಹುದು. 

ಲೇಖನ ಓದಿದ ನಂತರ ಸಹನಾ ಅವರನ್ನು ಸಂಪರ್ಕಿಸಿದೆ. ಸಮೀಪದ ಸೊಕ್ಕಾಡಿ ಬಳಿಯ ಗುಡ್ಡಕುಸಿತದ ಬಗ್ಗೆ ಈಗಲೂ ಹಿರಿಯರು (ಸುಬ್ರಾಯರು ಸೇರಿದಂತೆ) ಜ್ಞಾಪಿಸಿಕೊಳ್ಳುತ್ತಿರುವುದಾಗಿ ಹೇಳಿದರು. ನಾನು 2018ರ ಆಗಸ್ಟ್‌ 22ರಂದು ಮಹಾಪ್ರವಾಹದ ನಂತರ ಸಂಪಾಜೆ ಪ್ರದೇಶಕ್ಕೆ ಅಂದರೆ ಜೋಡುಪಾಲದ ಸುತ್ತಮುತ್ತಲಿನ ಭೂಕುಸಿತದ ಜಾಗಗಳಿಗೆ ರಾಜ್ಯ ಸರ್ಕಾರದ ಕಡೆಯಿಂದ ಅಧ್ಯಯನಕ್ಕಾಗಿ ಭೇಟಿ ಕೊಟ್ಟಿದ್ದನ್ನು ಜ್ಞಾ‍ಪಿಸಿಕೊಂಡೆ. ಎಲ್ಲೆಲ್ಲೂ ಕೆಸರುಮಯವಾಗಿತ್ತು. ಸಣ್ಣ ಮಳೆ ಇನ್ನೂ ಬೀಳುತ್ತಿತ್ತು. ಪಯಸ್ವಿನಿ ಜೋರಾದ ಶಬ್ದ ಮಾಡುತ್ತ ನರಳಾಡುತ್ತಿದ್ದಳು. ಏಕೆಂದರೆ ಅವಳ ಮೇಲೆ ನೂರಾರು ಹೆಬ್ಬಂಡೆಗಳು ಉರುಳಿಬಿದ್ದಿದ್ದವು. ಸಾವಿರಾರು ಮರಗಳು ಬುಡಮೇಲಾಗಿ ಜಾರಿ ಬಂದು ನದಿಗೆ ಬಿದ್ದಿದ್ದವು. ಬೆಟ್ಟಗಳ ಇಳಿಜಾರಿನಲ್ಲಿದ್ದ ಲಕ್ಷಾಂತರ ಟನ್‌ ಕೆಂಪು ಮಣ್ಣು ನೀರಿನೊಂದಿಗೆ ಬೆರೆತು ರಾಡಿಯಾಗಿತ್ತು.

ಜೋಡುಪಾಲ ಒಂದು ವಿಶೇಷ ಸ್ಥಳ. ಪಯಸ್ವಿನಿ ನದಿ ಇಲ್ಲಿ ತಿರುವು ಪಡೆದು ಮೊದಲು ‘u’ ಆಕಾರದಲ್ಲಿ, ನಂತರ ‘v’ ಆಕಾರದಲ್ಲಿ ತಿರುಗಿ, ಕೊನೆಗೆ ಹೇರ್‌ಪಿನ್‌ ಬೆಂಡ್‌ನಂತೆ ಬಹಳ ಹತ್ತಿರದಲ್ಲಿ ಎರಡು ಜೋಡುಗಳಾಗಿ ಹರಿಯುತ್ತದೆ. ಒಂದು ಕಡೆ ಜೋಡುಗಳು ಒಂದಾಗಿವೆ. ಇದರ ಮೇಲ್ಭಾಗದಲ್ಲಿ ಅತ್ಯಂತ ಕಡಿದಾದ, ಇಳಿಜಾರನ್ನು ಹೊಂದಿದ ಬೆಟ್ಟಗಳ ಸಾಲು ಇದೆ. ಅಧಿಕ ಮಳೆಯಿಂದ ನೀರು ಮೇಲಿನಿಂದಲೇ ಆಳವಾಗಿ ರೂಪುಗೊಂಡ ಮಣ್ಣಿನ ಪದರಗಳೊಳಗೆ ಇಂಗುವುದರಿಂದ ಮಣ್ಣಿನಲ್ಲಿ pore pressure ಹೆಚ್ಚಾಗಿ ಮಣ್ಣಿನೊಂದಿಗೆ ನೀರಿನ ತೂಕವೂ ಸೇರಿ ಸರಕ್ಕನೇ ಕ್ಷಣಾರ್ಧದಲ್ಲಿ ಕುಸಿದು ಬೀಳುತ್ತದೆ. ಜೋಡುಪಾಲದಲ್ಲಿ ಯಾವ ರೆಸಾರ್ಟ್‌ ಆಗಲಿ, ನೆತ್ತಿಯ ಮೇಲೆ ಕೃಷಿ ಹೊಂಡವಾಗಲಿ ಇಲ್ಲ. ಆದರೂ ಅಗಾಧ ಭೂಕುಸಿತವಾಗಿದೆ.

ಕಾಲಘಟ್ಟದ ಹಿಂದಕ್ಕೆ ಸಾವಿರಾರು ವರ್ಷಗಳ ಹಿಂದೆಯೂ ಭೂಕುಸಿತಗಳಾಗಿವೆ. ಅವುಗಳ ಗಾಯದ ಗುರುತುಗಳ ಆಧಾರದ ಮೇಲೆ ನನ್ನ ಸಹೋದ್ಯೋಗಿಗಳು ದೇಶದಾದ್ಯಂತ ಇರುವ ದುರ್ಗಮ ಪರ್ವತಗಳ ಪ್ರದೇಶಗಳಲ್ಲಿ ಭೂಕುಸಿತದ ಅಧ್ಯಯನ ಮಾಡಿ, ಅವುಗಳನ್ನು ಸಾಧಾರಣ, ಅಪಾಯಕಾರಿ ಹಾಗೂ ಅತಿ ಅಪಾಯಕಾರಿ ಎಂದು ವರ್ಗೀಕರಿಸಿ, ಸೂಕ್ತ ಪರಿಹಾರಗಳನ್ನು ಸೂಚಿಸಿ ಸರ್ಕಾರಗಳಿಗೆ ವರದಿಗಳನ್ನು ನೀಡುವುದು ರೂಢಿ. ಪ್ರಸಕ್ತದಲ್ಲಿ ಕೊಡಗಿನ ಬಗೆಗಿನ ಭೂಕುಸಿತಗಳ ಅಧ್ಯಯನ ನಡೆಸಿ ವರದಿಗಳನ್ನು ನೀಡಲಾಗಿದೆ. 105 ಜಾಗಗಳನ್ನು ವಿಶೇಷವಾಗಿ ಗುರುತಿಸಲಾಗಿದೆ. ಅವುಗಳ ಪೈಕಿ 13 ಜಾಗಗಳು ಅತಿ ಅಪಾಯಕಾರಿ ಎಂದು ತಿಳಿಸಲಾಗಿದ್ದು, ಬ್ರಹ್ಮಗಿರಿಯೂ ಒಂದಾಗಿದೆ. 

ಸಾಹಿತ್ಯವು ಅಂದಿನ ಸಂದರ್ಭವನ್ನು ಹಿಡಿದಿರುವುದರಿಂದ ಮುಂದಿನ ತಲೆಮಾರಿಗೆ ಅತ್ಯಂತ ಉಪಕಾರಿ ದಾಖಲೆಯಾಗುತ್ತದೆ. ಇಂತಹುದೇ ಅಮೂಲ್ಯ ದಾಖಲೆಯೊಂದಿದೆ. ಅದುವೇ ಲಾರ್ಡ್‌ ಬೈರನ್‌ ಕವಿಯ ‘ಡಾರ್ಕ್‌ನೆಸ್‌’ ಎನ್ನುವ ಪ್ರಸಿದ್ಧ ಕವಿತೆ. ಇದು 82 ಸಾಲುಗಳಲ್ಲಿ 1816ರಲ್ಲಿದ್ದ ವಿಷಮ ಕಗ್ಗತ್ತಲಿನ ಸನ್ನಿವೇಶವನ್ನು ಹಿಡಿದಿಟ್ಟಿದೆ. ಅವರ ಮನೆಯ ಪಕ್ಕದಲ್ಲಿಯೇ ಇದ್ದು ಅದೇ ಸಂದರ್ಭದಲ್ಲಿಯೇ ಬರೆದ ಮೇರಿ ಷೆಲ್ಲಿಯ ‘ಫ್ರಾಂಕೆ‌ನ್‌ಸ್ಟೀನ್‌’ ಕಾದಂಬರಿಯೂ ಅಂದಿನ ಭೀಕರತೆಯ ಚಿತ್ರಣವನ್ನು ಹಿಡಿದಿಟ್ಟಿದೆ. ಇದು ನವೀನ ಅಂತರ್‌ಶಿಸ್ತೀಯ ಅಧ್ಯಯನ ಕ್ಷೇತ್ರವಾಗಿದೆ. ಇದರಲ್ಲಿ ಪ್ಲೇಟ್‌ ಟೆಕ್ಟಾನಿಕ್ಸ್, ಮೆರೀನ್‌ ಜಿಯಾಲಜಿ, ಜ್ವಾಲಾಮುಖಿ ಶಾಸ್ತ್ರ ಮತ್ತು ಹವಾಮಾನ ಶಾಸ್ತ್ರಗಳ ಮಿಳಿತವಿದೆ. ಇದರ ಬಳಕೆಯನ್ನು 2021ರಲ್ಲಿ ಮತ್ತು ನಂತರದಲ್ಲಿ ವ್ಯಾಪಕವಾಗಿ ಬಳಸಬಹುದಾಗಿದೆ. ಇದಕ್ಕೆ ಆಧಾರವಾಗಿ ಮತ್ತು ಪೂರಕವಾಗಿ ನೂರಾರು ಪ್ರಕರಣಗಳ ಉದಾಹರಣೆಗಳಿವೆ. ಅದರಲ್ಲಿ ‘ಕುಡಿಯರ ಕೂಸು’ ಒಂದಾಗಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು