ಸಂಪ್ರದಾಯ: ನೈವೇದ್ಯ- ದೇವರಿಗಾ ನಮಗಾ?

ಬುಧವಾರ, ಜೂನ್ 26, 2019
28 °C

ಸಂಪ್ರದಾಯ: ನೈವೇದ್ಯ- ದೇವರಿಗಾ ನಮಗಾ?

Published:
Updated:

ನೈವೇದ್ಯ, ಎಂದರೆ, ಭಕ್ಷ್ಯಗಳನ್ನು ದೇವರ ಮುಂದೆ ಇಟ್ಟು ಸಮರ್ಪಣೆ ಮಾಡಿ ಪೂಜೆಯ ನಂತರ ಅದನ್ನು ಪ್ರಸಾದ ಎಂದು ಸ್ವೀಕರಿಸುವ ರೂಢಿ ಸಾಮಾನ್ಯವಾಗಿ ಎಲ್ಲರಿಗೂ ಪರಿಚಿತ. ಈ ನೈವೇದ್ಯ ಎನ್ನುವ ಪೂಜಾಂಗದ ಬಗ್ಗೆ ಒಂದು ಆಕ್ಷೇಪಣೆ ಕೇಳಿ ಬರುವುದುಂಟು. ನಾವು ಸಮರ್ಪಣೆ ಮಾಡುವ ಭಕ್ಷ್ಯವನ್ನು ದೇವರೇನು ಬಂದು ತಿನ್ನುತ್ತಾನಾ? ಅದನ್ನು ತಿನ್ನುವುದು ನಾವೇ ಅಲ್ಲವೇ! ಆದ್ದರಿಂದ ನೈವೇದ್ಯ ಎಂದು ಮಾಡುವುದು ನಮ್ಮ ಆಸೆಯನ್ನು ಪೂರೈಸಿ ಕೊಳ್ಳುವು ದಕ್ಕಾಗಿಯೇ ಹೊರತು ಅದರಲ್ಲಿ ದೇವರಿಗೆ ಸಲ್ಲುವ ಅಂಶವೇನಿಲ್ಲ. ನಮಗಿಷ್ಟವಾದ ತಿಂಡಿಗಳನ್ನು ಮಾಡಿಕೊಂಡು ನಾವು ತಿನ್ನುವುದಕ್ಕೆ ಸುಮ್ಮನೆ ದೇವರ ಹೆಸರನ್ನು ಬಳಸಿಕೊಳ್ಳುತ್ತಿದ್ದೇವೆ ಎಂದು ಹೇಳಿ ನೈವೇದ್ಯ ಹಾಗೂ ಪ್ರಸಾದದ ಬಗ್ಗೆ ಅಸಡ್ಡೆ ಉಂಟಾಗುವ ಚಿಂತನೆ ಒಂದು ಕಡೆ ಬೆಳೆಯುತ್ತಿದೆ. ಆದ್ದರಿಂದ ನೈವೇದ್ಯ ಎನ್ನುವ ಪೂಜಾಂಗದ ಹಿಂದಿರುವ ವಿಜ್ಞಾನ ಏನು? ಅದು ಹೇಗೆ ಭಗವಂತನಿಗೆ ಸಲ್ಲುತ್ತದೆ ಎಂದು ವಿಶ್ಲೇಷಣೆ ಮಾಡಬೇಕಾಗಿದೆ.

ಯಾವುದು ನಿವೇದಿಸಲ್ಪಡುತ್ತದೆಯೋ ಅದು ನೈವೇದ್ಯ. ನೈವೇದ್ಯ ಎನ್ನುವ ಪೂಜಾಂಗದಲ್ಲಿ ಏನು ನಿವೇದನೆ ಅಥವಾ ಅರಿಕೆ ಮಾಡುತ್ತೇವೆ ಎಂದರೆ, ‘ಅಪ್ಪಾ! ಇದು ನೀನು ಒದಗಿಸಿರುವ ಪದಾರ್ಥ. ಇದು ನಿನ್ನದೇ’ ಎಂದು ಅವನಿಗೆ ಒಪ್ಪಿಸುವುದೇ ನಿವೇದನೆ.

ಪ್ರಪಂಚದಲ್ಲಿ ಉತ್ಪತ್ತಿಯಾಗುವ ಆಹಾರವೆಲ್ಲ ಭಗವಂತನ ಕೊಡುಗೆಯೇ. ರೈತ ಬೆಳೆ ಬೆಳೆದರೂ, ಬೆಳೆಸುವ ಸಾಮರ್ಥ್ಯ ಮಣ್ಣಿನಲ್ಲೂ ಹಾಗೂ ಬೆಳೆಯುವ ಧರ್ಮವು ಬೀಜದಲ್ಲೂ ಇರುವುದು ಪ್ರಕೃತಿಗೂ ಒಡೆಯನಾದ ಭಗವಂತನ ಕೃಪೆಯಿಂದಲೇ. ಬೆಳೆಗೆ ಅವಶ್ಯವಾದ ಜಲ ಸಂಪತ್ತು ಸಹಾ ಪ್ರಕೃತಿಯ ಕೊಡುಗೆಯೇ. ಹೀಗೆ ಕೃಷಿ ಭೂಮಿಯಿಂದ ಹಿಡಿದು ಆಹಾರ ಸಿದ್ಧವಾಗುವವರೆವಿಗೂ, ಉದ್ದಕ್ಕೂ ಭಗವಂತನ ಕೃಪೆ ಹಾಗೂ ಪಾತ್ರ ಇದ್ದೇ ಇದೆ. ಆದ್ದರಿಂದ ಭಗವಂತನದೇ ಆದ ಪದಾರ್ಥವನ್ನು ಅವನದ್ದೇ ಎಂದು ಕೃತಜ್ಞತೆಯಿಂದ ಸ್ಮರಿಸಿಕೊಳ್ಳುವುದೇ ನಾವು ಮಾಡುವ ನಿವೇದನೆ.

ಹೀಗೆ ನಿವೇದನೆ ಮಾಡಿದಾಗ, ಭಗವಂತ ಆ ಆಹಾರ ಪದಾರ್ಥದಲ್ಲಿರುವ ಸೂಕ್ಷ್ಮಾಂಶವನ್ನು ಸ್ವೀಕರಿಸುತ್ತಾನೆ ಮತ್ತು ಆಗ ನಿವೇದಿತ ಪದಾರ್ಥವು ಪ್ರಸಾದವಾಗುತ್ತದೆ. ಭಗವಂತನಿಗೆ ಸಮರ್ಪಿಸಿದಾಗ, ಆ ಪದಾರ್ಥದಲ್ಲಿ ಭಗವಂತನ ಒಂದು ಶಕ್ತಿಹರಿದು, ಸೇವಿಸಿದವರಿಗೆ ಒಂದು ಪ್ರಸನ್ನತೆಯುಂಟು ಮಾಡುತ್ತದೆ. ಆದ್ದರಿಂದಲೇ ಆ ಭಕ್ಷ್ಯಕ್ಕೆ ಪ್ರಸಾದ ಎಂದು ಹೆಸರು.‌

ಇನ್ನು ಭಗವಂತ ಬಂದು ತಿನ್ನುತ್ತಾನೆಯೇ ಎನ್ನುವ ಆಕ್ಷೇಪಣೆಗೆ ಉತ್ತರ ಕೊಡುವುದಾದರೆ, ಈ ಪೂಜಾಂಗದ ಉದ್ದೇಶದಲ್ಲಿಯೇ ನಾವು ಈ ಭಕ್ಷ್ಯವನ್ನು ದೇವರಿಗೆ ತಿನ್ನಿಸುತ್ತೇವೆ ಎನ್ನುವ ಅಭಿಪ್ರಾಯವಿಲ್ಲ. ಉದಾಹರಣೆಗೆ, ದೇವರಿಗೆ ಹಾಲಿನ ಅಭಿಷೇಕ ಮಾಡಬೇಕಾದರೆ ಪೂಜೆ ಮಾಡುವವರು "ಕ್ಷೀರೇಣ ಸ್ನಪಯಾಮಿ" (ಹಾಲಿನಿಂದ ಸ್ನಾನ ಮಾಡಿಸುತ್ತೇನೆ) ಎಂದು ಹೇಳಿ ನಂತರ ಮೂರ್ತಿಯಮೇಲೆ ಹಾಲಿನ ಧಾರೆಯನ್ನು ಎರೆಯುತ್ತಾರೆ. ಆದರೆ ಭಕ್ಷ್ಯವನ್ನು ದೇವರ ಮುಂದಿಟ್ಟು "ಭಕ್ಷ್ಯಂ ಖಾದಯಾಮಿ" (ಭಕ್ಷ್ಯವನ್ನು ತಿನ್ನಿಸುತ್ತೇನೆ) ಎಂದು ಹೇಳುವುದಿಲ್ಲ. ಬದಲಾಗಿ "ಭಕ್ಷ್ಯಂ ನಿವೇದಯಾಮಿ" ಅಥವಾ "ಸಮರ್ಪಯಾಮಿ" ಎಂದು ಹೇಳುತ್ತಾರೆ. ಆದುದರಿಂದ ನೈವೇದ್ಯವೆಂಬ ಪೂಜಾಂಗದಲ್ಲಿ ದೇವರು ಬಂದು ಅದೆಲ್ಲವನ್ನೂ ತಿನ್ನುತ್ತಾನೆ ಎನ್ನುವ ನಿರೀಕ್ಷೆಯಿಲ್ಲ. ಎರಡನೆಯದಾಗಿ, ಆಹಾರದ ಸೂಕ್ಷ್ಮಾಂಶವನ್ನು ಭಗವಂತನು ಪರಿಗ್ರಹಿಸುವುದರಿಂದ ಆ ಪದಾರ್ಥವು ಭಗವಂತನಿಗೆ ಸಮರ್ಪಿತವೂ ಸಹಾ ಆಗುತ್ತದೆ. 

ಆದ್ದರಿಂದ ನೈವೇದ್ಯ ಎನ್ನುವ ಪೂಜಾಂಗ ನಿರರ್ಥಕವಲ್ಲ. ಅದು ಬಹಳ ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳಬೇಕಾದಂತಹ ವಿಜ್ಞಾನದಿಂದ ಕೂಡಿದ್ದು ಆರಾಧಕರಿಗೆ ಭೌತಿಕ, ದೈವಿಕ, ಅಧ್ಯಾತ್ಮಿಕ ಪ್ರಯೋಜನಗಳನ್ನು ಕೊಡುವಂತಹ ಸಾರ್ಥಕವಾದ ಆಚರಣೆಯಾಗಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !