ಶನಿವಾರ, ಅಕ್ಟೋಬರ್ 16, 2021
29 °C

ರಕ್ತಸಿಕ್ತ ದಸರಾ!

ಎಸ್‌. ಪ್ರಕಾಶ ಬಾಬು Updated:

ಅಕ್ಷರ ಗಾತ್ರ : | |

ಭಾರತೀಯರಲ್ಲಿ ಬೇರು ಬಿಟ್ಟ ಅಸ್ಪೃಶ್ಯ ಮನೋಭಾವವನ್ನು ಬುಡಸಮೇತ ಕೀಳಲು ಮಾಡುತ್ತಿರುವ ಪ್ರಯತ್ನಗಳೆಲ್ಲಾ ವಿಫಲವಾಗಿವೆ. ಇದಕ್ಕೆ 1953ರಲ್ಲಿ ದಸರಾ ಕುಸ್ತಿ ಸಂದರ್ಭದಲ್ಲಿ ಮೈಸೂರು ಮಹಾರಾಜರು ದಲಿತ ಕುಸ್ತಿ ಪಟುಗಳಿಗೆ ಇತರರಂತೆ ಸಮಾನ ಅವಕಾಶ ನೀಡಿದಾಗ ನಡೆದ ದುರ್ಘಟನೆಯೇ ಸಾಕ್ಷಿ.

ಈ ದುರ್ಘಟನೆಗೆ ಕಾರಣವಾಗಿದ್ದಿಷ್ಟೆ: ಸ್ವಾತಂತ್ರ್ಯ ಹೋರಾಟಗಾರರಾದ ತಗಡೂರು ರಾಮಚಂದ್ರರಾವ್ ಅವರು ಮೈಸೂರು ದಸರಾ ಕುಸ್ತಿ ಸ್ಪರ್ಧೆಗಳಲ್ಲಿ ದಲಿತ ಕುಸ್ತಿ ಪಟುಗಳಿಗೆ ಅವಕಾಶಕೊಡಬೇಕು ಅಂತ ಮಹಾರಾಜರನ್ನು ಬಹಳ ವರ್ಷಗಳಿಂದ ಒತ್ತಾಯಿಸುತ್ತಿದ್ದರು. ಆದರೆ ಮಹಾರಾಜರು ಅಂದಿನ ಸಾಮಾಜಿಕ ಕಟ್ಟುಪಾಡುಗಳಿಂದ ಬರುವ ವಿರೋಧಕ್ಕಾಗಿ ದಲಿತ ಕುಸ್ತಿಪಟುಗಳನ್ನು ಸವರ್ಣೀಯ ಕುಸ್ತಿ ಪಟುಗಳೊಂದಿಗೆ ಸೆಣೆಸಲು ಅವಕಾಶ ನೀಡಿರಲಿಲ್ಲ.

ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾದ ಸಾಹುಕಾರ್ ಚೆನ್ನಯ್ಯನವರು 1953ರಲ್ಲಿ ಮೈಸೂರು ಜಿಲ್ಲಾ ಕುಸ್ತಿ ಸಮಿತಿಯ ಅಧ್ಯಕ್ಷರೂ ಆಗಿದ್ದರು. ಅವರು ಪಕ್ಷದ ತತ್ವ-ಸಿದ್ಧಾಂತದಂತೆ ಜಾತ್ಯತೀತ ಮನೋಭಾವ ಎತ್ತಿ ಹಿಡಿಯಲು ದಸರಾ ಕುಸ್ತಿಯಲ್ಲಿ ದಲಿತ ಕುಸ್ತಿ ಪಟುಗಳು ಸವರ್ಣೀಯ ಕುಸ್ತಿ ಪಟುಗಳೊಂದಿಗೆ ಸ್ಪರ್ಧಿಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿದರು. ಇದಕ್ಕೆ ಮಹಾರಾಜರೂ ಒಪ್ಪಿದರು. ಆದರೆ ಪಟ್ಟಭದ್ರ ಸವರ್ಣೀಯ ಕುಸ್ತಿಪಟುಗಳು ಒಪ್ಪಲಿಲ್ಲ.

ಆಗ ದಸರಾ ಕುಸ್ತಿ ಪಂದ್ಯಾವಳಿ ಈಗಿನಂತೆ ದೊಡ್ಡಕೆರೆ ಮೈದಾನದಲ್ಲಿ ನಡೆಯುತ್ತಿರಲಿಲ್ಲ. ಅಂಬಾವಿಲಾಸ ಅರಮನೆಯ ಒಳಾವರಣದಲ್ಲಿ ಮಹಾರಾಜರ ಸಮ್ಮುಖದಲ್ಲಿ ನಡೆಯುತ್ತಿತ್ತು. ಅಧಿಕೃತ ಘೋಷಣೆಯಂತೆ, 1953ರ ಅಕ್ಟೋಬರ್ 8ರ ಗುರುವಾರ, ನವರಾತ್ರಿ ಮೊದಲ ದಿನ, ಮಧ್ಯಾಹ್ಯ ಮೂರು ಗಂಟೆಗೆ 101 ಜೊತೆ ಕುಸ್ತಿ ಪಂದ್ಯಗಳು ನಡೆಯಬೇಕಿದ್ದವು. ದಸರಾ ಕುಸ್ತಿ ಮಧ್ಯಾಹ್ನ ಆರಂಭವಾಗುವುದಕ್ಕಿಂತ ಮೊದಲೇ ಬೆಳಿಗ್ಗೆಯಿಂದಲೇ ಸವರ್ಣೀಯ ಕುಸ್ತಿ ಪಟುಗಳು ಮತ್ತು ಅವರ ಬೆಂಬಲಿಗರು ಅಠಾರ ಕಚೇರಿ (ಈಗಿನ ಜಿಲ್ಲಾಧಿಕಾರಿ ಕಚೇರಿ) ಮುಂದೆ ಗುಂಪುಗೂಡಿ ಪ್ರತಿಭಟನಾ ಮೆರವಣಿಗೆ ಹೊರಟರು.

ಮೈಸೂರು ಮತ್ತು ಪರ ಊರಿನ ಗರಡಿ ಸಂಘದ ಸವರ್ಣೀಯ ಕುಸ್ತಿ ಪಟುಗಳಿದ್ದ ಗುಂಪು ಬೆಳ್ಳಿ ಕಟ್ಟಿಗೆ ಮೀಸಲು ರಸ್ತೆ (ಈಗಿನ ದೇವರಾಜ ಅರಸ್ ರಸ್ತೆ) ಮೂಲಕ ಸಯ್ಯಾಜಿರಾವ್ ರಸ್ತೆಯಲ್ಲಿರುವ ದೇವರಾಜ ಮಾರುಕಟ್ಟೆಯ ಕಾಂಗ್ರೆಸ್ ಕಚೇರಿ ಬಳಿ ಬಂದಾಗ, ಸಾಹುಕಾರ್ ಚೆನ್ನಯ್ಯನವರ ಆಪ್ತರಾದ ಗಾಂಧಿವಾದಿ ಯು.ಎಲ್.ರಾಮಚಂದ್ರ ರಾವ್ ಅವರ ಬಟ್ಟೆ ಅಂಗಡಿಗೆ ನುಗ್ಗಿ, ಅವರು ಧರಿಸಿದ್ದ ಗಾಂಧಿ ಟೋಪಿ ಕಿತ್ತು ಎಸೆದು ಅವಮಾನಿಸಿದರು.

ಗಲಾಟೆ ಸದ್ದು ಕೇಳಿ ಕಾಂಗ್ರೆಸ್ ಕಚೇರಿಯಿಂದ ಹೊರಬಂದ ಸಾಹುಕಾರ್ ಚೆನ್ನಯ್ಯ, ಮೈಸೂರು ಕುಸ್ತಿಸಂಘದ ಕಾರ್ಯದರ್ಶಿ ಎ.ಶಿವಣ್ಣ (ದಿ ಮೈಸೂರು ಕೋಆಪರೇಟಿವ್ ಮಾಜಿ ಅಧ್ಯಕ್ಷ ಎಸ್.ಕೃಷ್ಣ ತಂದೆ) ಸಹ ಕಾರ್ಯದರ್ಶಿ ಎನ್.ಗೋಪಾಲ್‍ರಾವ್, ನಗರಾಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್.ಲಿಂಗಣ್ಣ, ಬಟ್ಟೆ ವರ್ತಕರ ಸಂಘದ ಅಧ್ಯಕ್ಷ ಕೆ.ಎಸ್.ಸತ್ಯನಾರಾಯಣರಾವ್, ಎಂ.ಆರ್.ಸಿ.ಬಸಪ್ಪ ಮತ್ತಿತರ ಗಣ್ಯರ ಮೇಲೂ ಹಲ್ಲೆ ನಡೆಸಲಾಯಿತು. ಇದರಿಂದ ಸಾಹುಕಾರ್ ಚೆನ್ನಯ್ಯನವರ ತಲೆಗೆ ಪೆಟ್ಟಾಗಿ, ಆತಂಕದ ವಾತಾವರಣ ನಿರ್ಮಾಣವಾಯಿತು. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಲಾಠಿ ಪ್ರಹಾರ ಮಾಡಿ ಉದ್ರಿಕ್ತ ಗುಂಪನ್ನು ಚದುರಿಸಿದರು.

ಕಾಂಗ್ರೆಸ್ ನಾಯಕರ ಮೇಲೆ ಹಲ್ಲೆ ನಡೆಸಿದ ಸವರ್ಣೀಯರ ಗುಂಪು ಸಯ್ಯಾಜಿರಾವ್ ರಸ್ತೆಯಿಂದ ಅರಮನೆ ಎದುರಿನ ಪುರಭವನ ಮೈದಾನಕ್ಕೆ ಬಂತು. ಅಲ್ಲಿ ಎ.ಎಸ್. ವೆಂಕಟಸುಬ್ಬಯ್ಯ ಶರ್ಮ ನೇತೃತ್ವದಲ್ಲಿ ಜಯಚಾಮರಾಜೇಂದ್ರ ಒಡೆಯರ್ ಭಾವಚಿತ್ರಕ್ಕೆ ಹಾರಹಾಕಿ ಮಹಾರಾಜರಿಗೆ ಜಯಘೋಷ ಮಾಡಿ, ಕಾಂಗ್ರೆಸ್ ಪಕ್ಷದ ವಿರುದ್ದ ಘೋಷಣೆ ಕೂಗಿತು. ದಲಿತ ಕುಸ್ತಿ ಪಟುಗಳಿಗೆ ಅವಕಾಶ ನೀಡಬಾರದೆಂದು ಒತ್ತಾಯಿಸಿತು. ಗಲಾಟೆ ವಿಷಯ ತಿಳಿದ ಮಹಾರಾಜರು ಅಂದು ಮಧ್ಯಾಹ್ನ ಅರಮನೆಯೊಳಗೆ ನಡೆಯಬೇಕಿದ್ದ ದಸರಾ ಕುಸ್ತಿಯನ್ನು ರದ್ದುಪಡಿಸಿರುವುದಾಗಿ ಪ್ರಕಟಿಸಿದರು. ಇದರಿಂದ ಗಾಂಧಿನಗರ, ಕೈಲಾಸ್‍ಪುರ, ಆದಿಕರ್ನಾಟಕಪುರದ (ಈಗಿನ ಅಶೋಕಪುರಂ) ಕುಸ್ತಿಪಟುಗಳಿಗೆ ನಿರಾಸೆಯಾಯಿತು.

ಜಿಲ್ಲಾಧಿಕಾರಿ ಎಸ್.ಸ್ವಾಮಿನಾಥನ್, ಪುರಸಭಾ ಆಯುಕ್ತ ಎನ್.ಲಕ್ಷ್ಮಣ್‍ರಾವ್, ಪೊಲೀಸ್ ಇನ್‍ಸ್ಪೆಕ್ಟರ್ ಜನರಲ್ ಎನ್.ವಿ.ಬಾಬುರೆಡ್ಡಿ, ಜಿಲ್ಲಾ ಎಸ್‌.ಪಿ ಎಸ್.ಕೃಷ್ಣಮೂರ್ತಿ ಮತ್ತು ನಗರ ಸಿವಿಲ್ ನ್ಯಾಯಾಧೀಶ ಎಂ.ಡಿ.ಶಿವನಂಜಪ್ಪ ಎಲ್ಲಾ ಕುಸ್ತಿ ಪಟುಗಳನ್ನು ಮತ್ತು ಗರಡಿ ಸಂಘದವರನ್ನು ಸಮಾಧಾನಿಸಿ ಕಳುಹಿಸುವಾಗ ಕಿಡಿಗೇಡಿಗಳು ಪರಸ್ಪರ ಕಲ್ಲು ತೂರಾಟ ನಡೆಸಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು.

ತಿಳಿಗೇಡಿಗಳು ಬೀದಿಬದಿ ದೀಪಗಳನ್ನು ಹೊಡೆದು ಹಾಕಿದ್ದಲ್ಲದೆ, ಅರಮನೆ ಮುಂಭಾಗದ ಮರದ ಕೊಂಬೆಗಳನ್ನು ಕಿತ್ತು ಪೊಲೀಸ್ ವ್ಯಾನ್‍ಗಳನ್ನು ಧ್ವಂಸಗೊಳಿಸಿದರು. ತಡೆಯಲು ಬಂದ ಪೊಲೀಸರ ಮೇಲೆಯೇ ಮರದ ರೆಂಬೆಗಳಿಂದ ಹಲ್ಲೆ ನಡೆಸಿದರು. ಪೊಲೀಸರು ಅನಿವಾರ್ಯವಾಗಿ ಅರಮನೆ ದಕ್ಷಿಣ ದ್ವಾರದ (ಜೆಎಸ್‍ಎಸ್ ವೃತ್ತ) ಬಳಿ ಗೋಲಿಬಾರ್ ನಡೆಸಿದಾಗ, ಸ್ಥಳದಲ್ಲೇ ಇಬ್ಬರು ಮೃತರಾದರೆ, ಆಸ್ಪತ್ರೆಗೆ ಸಾಗಿಸುವಾಗ ಒಬ್ಬರು ಮತ್ತು ಅಂದು ರಾತ್ರಿಯೇ ಮತ್ತೊಬ್ಬರು ಆಸ್ಪತ್ರೆಯಲ್ಲಿ ಮೃತರಾದರು. 13 ಮಂದಿ ಗಾಯಗೊಂಡರು.

ಕಿಡಿಗೇಡಿಗಳ ಕಲ್ಲುತೂರಾಟದಿಂದ ಅರಮನೆ ಬಂದೋಬಸ್ತ್‌ನಲ್ಲಿದ್ದ ಜಿಲ್ಲಾಧಿಕಾರಿ ಎಸ್.ಸ್ವಾಮಿನಾಥನ್, ಪುರಸಭಾ ಆಯುಕ್ತ ಎನ್.ಲಕ್ಷ್ಮಣ್‍ರಾವ್, ಜಿಲ್ಲಾ ಎಸ್‍ಪಿ ಎಸ್.ಕೃಷ್ಣಮೂರ್ತಿ ಅವರಿಗೂ ಪೆಟ್ಟಾಯಿತು. ಅತ್ತ ಆದಿಕರ್ನಾಟಕಪುರ (ಈಗಿನ ಅಶೋಕಪುರಂ) ಮತ್ತು ಕೆ.ಜಿ.ಕೊಪ್ಪಲು (ಕನ್ನೇಗೌಡನ ಕೊಪ್ಪಲು) ತೊಣಚಿಕೊಪ್ಪಲು ಮತ್ತಿತರ ಭಾಗಗಳಲ್ಲಿ ಕೋಮು ಗಲಭೆಗಳಾದವು. ಅಂದು ರಾತ್ರಿ ಪೊಲೀಸರು ನಿಷೇಧಾಜ್ಞೆ ಹೇರಿ, ಬಂದೋಬಸ್ತ್ ಮಾಡಿದ್ದರು ಸಹ ತೊಣಚಿಕೊಪ್ಪಲು ಮತ್ತು ನಾಚನಹಳ್ಳಿಪಾಳ್ಯದ (ಈಗಿನ ಜೆ.ಪಿ.ನಗರ) ಹೊಲದಲ್ಲಿದ್ದ ರಾಗಿಮೆದೆಗೆ ಕಿಡಿಗೇಡಿಗಳು ಕೊಳ್ಳಿ ಇಟ್ಟು ಭಸ್ಮ ಮಾಡಿದರು. ಹೀಗೆ ಸವರ್ಣೀಯರು ಮತ್ತು ದಲಿತರ ಘರ್ಷಣೆಯಲ್ಲಿ ಸಾರ್ವಜನಿಕರ ಅಪಾರ ಆಸ್ತಿ ನಷ್ಟ ಉಂಟಾಯಿತು.


–ಸಾಹುಕಾರ್ ಚೆನ್ನಯ್ಯ

ಏಕಮಾತ್ರ ಪುತ್ರ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ (1953, ಫೆಬ್ರುವರಿ 20) ಹುಟ್ಟಿದ ವರ್ಷವಾಗಿದ್ದರಿಂದ ಅದ್ದೂರಿಯಾಗಿ ದಸರಾ ಆಚರಿಸಬೇಕೆಂಬ ಮಹಾರಾಜರ ಆಸೆಗೆ ಈ ದುರ್ಘಟನೆ ಅಡ್ಡಿಯಾಯಿತು. ತೀವ್ರವಾಗಿ ನೊಂದಿದ್ದ ಮಹಾರಾಜರು ಆ ವರ್ಷದ ಜಂಬೂ ಸವಾರಿಯನ್ನೂ ರದ್ದುಪಡಿಸಿದರು. ಒಂದು ಒಳ್ಳೆಯ ಕಾರ್ಯದ ಹಿಂದಿನ ಉದ್ದೇಶ ಅರಿಯದ ತಿಳಿಗೇಡಿಗಳಿಂದ 1953ರ ದಸರಾ ಉತ್ಸವ ‘ಕರಾಳ ದಸರಾ ಉತ್ಸವ’ವಾಗಿ ಇತಿಹಾಸದ ಪುಟ ಸೇರುವಂತಾಯಿತು. ಪೊಲೀಸರ ಗೋಲಿಬಾರ್‌ನಿಂದ ಮೃತಪಟ್ಟ ನಾಲ್ವರಲ್ಲಿ ಕೆ.ಜಿ.ಕೊಪ್ಪಲಿನ ಲಿಂಗಾಚಾರಿ ಮಗ ಮಹದೇವಯ್ಯ (20) ಮಳವಳ್ಳಿಯ ಚಿಕ್ಕಬಸಪ್ಪನ ಮಗ ಮುದ್ದಬಸಪ್ಪ (25) ಮೈಸೂರಿನ ಕೆ.ಆರ್.ಮೊಹಲ್ಲಾದ ನಾಲಾಬೀದಿಯಲ್ಲಿರುವ ಗೋಪಾಲ್‌ ಸ್ವಾಮಣ್ಣನವರ ಗರಡಿಯ ಅರಮನೆ ಕುಸ್ತಿ ತೀರ್ಪುಗಾರರೂ ಆದ ಪೈಲ್ವಾನ್ ಗೋಪಾಲ್‍ರಾಜು ಅಲಿಯಾಸ್ ನರಸಿಂಹರಾಜು ಸೇರಿದ್ದರು. ಮತ್ತೊಬ್ಬ ಮೃತರ ಗುರುತು ಪತ್ತೆಯಾಗಲಿಲ್ಲ. ಮಹಾರಾಜ ಶ್ರೀಜಯಚಾಮರಾಜೇಂದ್ರ ಒಡೆಯರ್ ಘಟನೆ ಬಗ್ಗೆ ಆಘಾತವ್ಯಕ್ತಪಡಿಸಿ, ಮೃತರ ಕುಟುಂಬದವರಿಗೆ ಮತ್ತು ಗಾಯಾಳುಗಳಿಗೆ ಪರಿಹಾರ ಧನ ಹಂಚುವಂತೆ ಒಟ್ಟು 3,000 ರೂಪಾಯಿಯನ್ನು ತಮ್ಮ ರಾಜ ಬೊಕ್ಕಸದಿಂದ ನೀಡಿದರು.

ಮಹಾರಾಜರು ಅಂದಿನಿಂದ ಅರಮನೆ ಆವರಣದಲ್ಲಿ ದಸರಾ ಕುಸ್ತಿ ಸ್ಪರ್ಧೆಯನ್ನು ರದ್ದುಪಡಿಸಿದ್ದಲ್ಲದೆ, ಆ ವರ್ಷದ ದಸರಾ ಜಂಬೂ ಸವಾರಿ ಮೆರವಣಿಗೆಯನ್ನು ಸಹ ರದ್ದುಪಡಿಸಿದರು. ಮುಂದಿನ ದಸರಾ ಉತ್ಸವದ ಸಂದರ್ಭದಲ್ಲಿ ಕೇವಲ ಜಗಜಟ್ಟಿ ಕಾಳಗವಾದ ‘ವಜ್ರ ಮುಷ್ಟಿ’ ಕಾಳಗವನ್ನಷ್ಟೆ ಸಾಂಕೇತಿಕವಾಗಿ ನವರಾತ್ರಿಯ ದುರ್ಗಾಷ್ಟಮಿ ದಿನ ಆಚರಿಸಲು ನಿರ್ಧರಿಸಿದರು. ಆ ಸಂಪ್ರದಾಯ ಈಗಲೂ ಮುಂದುವರೆದುಕೊಂಡು ಬಂದಿದೆ. ಮುಂದೆ ಮೈಸೂರು ಕುಸ್ತಿ ಸಮಿತಿ ಅಧ್ಯಕ್ಷರಾದ ಸಾಹುಕಾರ್ ಚೆನ್ನಯ್ಯನವರು ದೊಡ್ಡಕೆರೆ ಮೈದಾನದಲ್ಲಿ ಶಾಶ್ವತ ಕುಸ್ತಿ ಕ್ರೀಡಾಂಗಣ ನಿರ್ಮಿಸಿ, ಎಲ್ಲಾ ಜಾತಿ ವರ್ಗದವರಿಗೂ ಸಮಾನವಾಗಿ ಸ್ಪರ್ಧಿಸಲು ಅವಕಾಶ ಕಲ್ಪಿಸಿಕೊಟ್ಟರು. ದುಷ್ಟ ಸಂಹಾರದ ವಿಜಯೋತ್ಸವವಾದ ದಸರಾ ಉತ್ಸವ, ದುಷ್ಟ ಪದ್ಧತಿ ನಾಶಕ್ಕೆ ಯತ್ನಿಸಿದಾಗ ರಕ್ತಸಿಕ್ತವಾಗಿದ್ದು ವಿಪರ್ಯಾಸ.

ಮೈಸೂರು ಪುರಸಭೆಯಲ್ಲಿ ಕಾಂಗ್ರೆಸ್ ಹಿನ್ನಡೆ: ಸವರ್ಣೀಯ ಮತ್ತು ದಲಿತ ಕುಸ್ತಿಪಟುಗಳ ಘರ್ಷಣೆ ಮೈಸೂರು ಪುರಸಭಾ ಚುನಾವಣೆ ಮೇಲೂ ಪರಿಣಾಮ ಬೀರಿ, ಕಾಂಗ್ರೆಸ್ ಭಾರಿ ಹಿನ್ನಡೆ ಅನುಭವಿಸಿತು. ರಾಜ್ಯಾಂಗ ರಚನೆಯಾದ ನಂತರ ನಡೆದ ಮೊದಲ ಮೈಸೂರು ಪುರಸಭಾ ಚುನಾವಣೆಯಲ್ಲಿ ಆಡಳಿತರೂಢ ಕಾಂಗ್ರೆಸ್ ಪಕ್ಷ ಒಟ್ಟು 40 ಸ್ಥಾನಗಳಲ್ಲಿ 16 ಸ್ಥಾನ ಗಳಿಸಿ ಹಿನ್ನಡೆ ಅನುಭವಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು