ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಿನ ಹಾದಿಯಲ್ಲಿ ನೆನಪುಗಳ ಮೆರವಣಿಗೆ...

Last Updated 22 ಆಗಸ್ಟ್ 2020, 11:59 IST
ಅಕ್ಷರ ಗಾತ್ರ
ADVERTISEMENT
""
""

‘ರೀಲಿವಿಂಗ್‌ ದಿ ಮೆಮರೀಸ್‌ ಆಫ್‌ ಆ್ಯನ್‌ ಇಂಡಿಯನ್‌ ಫಾರೆಸ್ಟರ್‌’
ಲೇ: ಎಸ್‌.ಶ್ಯಾಮಸುಂದರ್‌
ಸಂ: ಶಿವಶರಣ್‌ ಸೋಮೇಶ್ವರ
ಪ್ರ: ಮಣಿಪಾಲ್‌ ಯೂನಿವರ್ಸಲ್‌ ಪ್ರೆಸ್‌
ಪುಟಗಳು: 404, ಬೆಲೆ: ₹ 450

ಸ್ವಾತಂತ್ರ್ಯ ಪೂರ್ವದಲ್ಲಿ ಜಿಮ್‌ ಕಾರ್ಬೆಟ್‌ ಹಾಗೂ ಕೆನೆತ್‌ ಆ್ಯಂಡರ್ಸನ್‌ ಅವರು ಕಟ್ಟಿಕೊಟ್ಟ ಕಾಡಿನ ರೋಚಕ ಕಥೆಗಳನ್ನು ಓದುಗರು ಈಗಲೂ ಚಪ್ಪರಿಸಿ ಸವಿಯುವುದುಂಟು. ಹೆಚ್ಚು–ಕಡಿಮೆ ಅದೇ ಕಾಲಘಟ್ಟದಲ್ಲಿ ಮೈಸೂರು ಸಂಸ್ಥಾನದ ಆಡಳಿತ ಸೇವೆಯಲ್ಲಿದ್ದ ನವರತ್ನ ರಾಮರಾವ್‌ ಅವರು ತಮ್ಮ ಆಡಳಿತದ ಅನುಭವಗಳ ಕುರಿತು ಬರೆದ ‘ಕೆಲವು ನೆನಪುಗಳು’ ಕೃತಿ ಕೂಡ ಹಲವು ತಲೆಮಾರುಗಳನ್ನು ಪ್ರಭಾವಿಸಿದ್ದುಂಟು. ಈ ಎರಡೂ ಸ್ವರೂಪದ ಬರಹಗಳ ಹದವಾದ ಮಿಶ್ರಣದಿಂದ ಸಿದ್ಧಗೊಂಡ ಪಾಕದಂತಿದೆ ನಿವೃತ್ತ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) ಎಸ್‌. ಶ್ಯಾಮಸುಂದರ್‌ ಅವರ ‘ರೀಲಿವಿಂಗ್‌ ದಿ ಮೆಮರೀಸ್‌ ಆಫ್‌ ಆ್ಯನ್‌ ಇಂಡಿಯನ್‌ ಫಾರೆಸ್ಟರ್‌’ ಕೃತಿ. ಇಲ್ಲಿ ಕಾಡಿನ ರೋಚಕ ಕಥೆಗಳ ಹಾರವೇ ಇದೆ. ಅದಕ್ಕೆ ಆಡಳಿತದ ಅನುಭವಗಳ ಮುತ್ತುಗಳನ್ನು ಸಹ ಪೋಣಿಸಲಾಗಿದೆ.

ಸ್ವಾತಂತ್ರ್ಯ ಸಿಕ್ಕ ಹೊಸತರಲ್ಲಿ ಶ್ಯಾಮಸುಂದರ್‌ ಅವರು ಕಾಡಿನ ಸೇವೆಗೆ ಧುಮುಕುವ ಹೊತ್ತಿಗೆ ಕಾರ್ಬೆಟ್‌ ಹಾಗೂ ರಾಮರಾವ್‌ ಅವರು ಅದಾಗಲೇ ಬಾಳ ಮುಸ್ಸಂಜೆಯಲ್ಲಿದ್ದರು. ಅವರಿಬ್ಬರೂ ಕಥೆ ಹೇಳುವುದನ್ನು ನಿಲ್ಲಿಸಿದ ಬಿಂದುವಿನಿಂದ ‘ಮೆಮರೀಸ್‌’ನ ಈ ಕಥೆಗಳ ಕಾಲಘಟ್ಟ ಆರಂಭವಾಗುವುದು ಕೇವಲ ಕಾಕತಾಳೀಯವಾದರೂ ಓದುಗರಿಗೆ ಅದರಿಂದ ಭರಪೂರ ಲಾಭವಾಗಿದೆ. ಸ್ವಾತಂತ್ರ್ಯೋತ್ತರ ಸಂದರ್ಭದಲ್ಲಿ ದೇಶದ ಆಡಳಿತದಲ್ಲಿ, ಕಾಡಿನ ನಿರ್ವಹಣೆ ವಿಧಾನದಲ್ಲಿ ಆದ ಕ್ಷಿಪ್ರ ಬದಲಾವಣೆಗಳಿಗೆ ನೇರ ಸಾಕ್ಷಿಯಾದ ಲೇಖಕರು, ಆಗಿನ ಎಲ್ಲ ನೆನಪುಗಳನ್ನು ಸುಂದರ ಕಲಾಕೃತಿಯಾಗಿ ಓದುಗರ ಮುಂದೆ ಬಿಡಿಸಿಟ್ಟಿರುವ ಪರಿ ಅನನ್ಯವಾಗಿದೆ.

ಉನ್ನತ ವ್ಯಾಸಂಗಕ್ಕಾಗಿ ಮದ್ರಾಸ್‌ಗೆ ಹೋಗಿದ್ದಾಗಲೇ ಭಾರತೀಯ ಅರಣ್ಯ ಸೇವೆಗೆ (ಐಎಫ್‌ಎಸ್‌) ಸೇರಿದ ಶ್ಯಾಮಸುಂದರ್‌ ಅವರು, 1952ರಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಸೇವೆಯನ್ನು ಆರಂಭಿಸಿದವರು. ಅವರ ಕ್ರಿಕೆಟ್‌ ಕೌಶಲ ಹೇಗೆ ಐಎಫ್‌ಎಸ್‌ ಆಗಲು ನೆರವಿಗೆ ಬಂತು ಎಂಬುದನ್ನು ಕೃತಿಯಲ್ಲಿ ಓದಿಯೇ ಸವಿಯಬೇಕು. ಆ ದಿನಗಳಲ್ಲಿ ಐಎಫ್‌ಎಸ್‌ ಅಧಿಕಾರಿಗಳು ತಿಂಗಳಿಗೆ ಕನಿಷ್ಠ ಹತ್ತು ದಿನಗಳನ್ನಾದರೂ ಕಾಡಿನಲ್ಲೇ ಕಳೆಯಬೇಕಿತ್ತು (ಈಗಿನ ಬಹುತೇಕ ಅಧಿಕಾರಿಗಳು ಸೇವೆಯ ಬಹುಪಾಲು ಅವಧಿಯನ್ನು ಕಾಡಿನ ಮುಖವನ್ನೇ ನೋಡದೆ ಕಳೆಯುತ್ತಾರೆ!). ಯಾವುದೇ ರೇಂಜರ್‌ನ ವ್ಯಾಪ್ತಿಯ ಕಾಡಿನಲ್ಲಿ ಅಕಸ್ಮಾತ್‌ ಬೆಂಕಿ ಕಾಣಿಸಿಕೊಂಡರೆ ಆ ರೇಂಜರ್‌ಗೆ ಬಡ್ತಿ ಅವಕಾಶಗಳೇ ಇರುತ್ತಿರಲಿಲ್ಲ. ಇಂತಹ ಕಠಿಣ ನಿಯಮಗಳಿದ್ದ ಆ ಕಾಲದಲ್ಲಿ ಅರಣ್ಯ ಸಂರಕ್ಷಣೆಗೆ ಆಗಿನ ಬಹುಪಾಲು ಅಧಿಕಾರಿಗಳು ತೋರುತ್ತಿದ್ದ ಬದ್ಧತೆ ಪ್ರಶ್ನಾತೀತವಾಗಿತ್ತು. ಲೇಖಕರು ಸಹ ಅಂತಹ ಅಧಿಕಾರಿಗಳ ಪರಂಪರೆಯ ಪ್ರತಿನಿಧಿಯಾಗಿದ್ದವರು.

ಡೆಹ್ರಾಡೂನ್‌ನಲ್ಲಿ ಐಎಫ್‌ಎಸ್‌ನ ಪಟ್ಟುಗಳನ್ನು ಕರಗತ ಮಾಡಿಕೊಂಡ ಶ್ಯಾಮಸುಂದರ್‌ ಅವರು, ಅಲ್ಲಿ ಕಂಡುಂಡ ಅನುಭವಗಳನ್ನು ಕಟ್ಟಿಕೊಡುವ ರೀತಿ ಓದುಗರಿಗೆ ಕಚಗುಳಿ ಇಡುತ್ತದೆ. ಹೌದು, ಅವರ ಅಸಾಧಾರಣ ಹಾಸ್ಯಪ್ರಜ್ಞೆ ಕೃತಿಯುದ್ದಕ್ಕೂ ತನ್ನ ಛಾಪನ್ನು ಒತ್ತಿಬಿಟ್ಟಿದೆ. ಭಾಷಾವಾರು ರಾಜ್ಯಗಳ ರಚನೆಯಾದ ಬಳಿಕ ಅಧಿಕಾರಿಗಳಿಗೆ ತಮ್ಮ ಸೇವಾ ರಾಜ್ಯವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು. ಲೇಖಕರು ತಮ್ಮ ತವರಾದ ಮೈಸೂರು ರಾಜ್ಯವನ್ನು ಆಯ್ಕೆ ಮಾಡಿಕೊಂಡು ಬಂದಿದ್ದರು. ಆ ಸಂದರ್ಭದಲ್ಲಿ ರೋಮ್‌ಗೆ ತೆರಳಿದ್ದ ತಮಿಳುನಾಡಿನ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ವಿ.ಎಸ್. ಕೃಷ್ಣಮೂರ್ತಿ ಅವರು ಮದ್ರಾಸ್‌ಗೆ ಮರಳಿ ಬರುತ್ತಲೇ ವಿಷಯ ಗೊತ್ತಾಗಿ, ವರ್ಗಾವಣೆ ಆದೇಶವನ್ನೂ ರದ್ದುಗೊಳಿಸಿ, ಮೈಸೂರು ರಾಜ್ಯದಿಂದ ವಾಪಸ್‌ ಬರುವಂತೆ ಟೆಲಿಗ್ರಾಂ ಸಂದೇಶ ಕಳುಹಿಸಿದ್ದರು. ಅದಕ್ಕೆ ಶ್ಯಾಮಸುಂದರ್‌ ಅವರ ಪ್ರತಿಕ್ರಿಯೆ ನೋಡಿ: ‘ಇಂತಹ ಹಿತೈಷಿ ಇರುವಾಗ ಬೇರೆ ಶತ್ರುಗಳು ಯಾಕೆ ಬೇಕು?’ ಮೈಸೂರಿನ ಸಿಸಿಎಫ್‌ ಆಗಿದ್ದ ಮುದ್ದಯ್ಯ ಅವರು ಆ ಟೆಲಿಗ್ರಾಂ ಅನ್ನು ಹರಿದುಹಾಕಿ, ಅದು ತಮಗೆ ಸಿಕ್ಕಿಲ್ಲ ಎಂಬಂತೆ ನಟಿಸಿ, ಈ ಅಧಿಕಾರಿಯನ್ನು ಇಲ್ಲಿಯೇ ಉಳಿಸಿಕೊಂಡಿದ್ದು ಬೇರೆಯದೇ ಮಾತು!

ಕುಂದಾಪುರ ಅರಣ್ಯ ವಿಭಾಗದ ಅಧಿಕಾರಿಗಳಿಗೆ ಕಾಡಿನ ಗಸ್ತಿಗಾಗಿ ಯುದ್ಧದಲ್ಲಿ ಬಳಕೆಯಾಗಿದ್ದ ಬೃಹತ್‌ ಗಾತ್ರದ ಶಸ್ತ್ರಾಸ್ತ್ರ ಸಾಗಣೆಯ ವಾಹನವೊಂದನ್ನು ನೀಡಲಾಗಿತ್ತಂತೆ. ಅದರ ನಿರ್ವಹಣೆ ಕುರಿತು ಕೃತಿಯಲ್ಲಿ ಸಿಗುವ ವಿವರಣೆ ಹೀಗಿದೆ: ಕಾಡಿನ ಕಡಿದಾದ ದಾರಿಯಲ್ಲಿ ವಾಹನದ ಸಮತೋಲನ ತಪ್ಪದಂತೆ ನೋಡಿಕೊಳ್ಳಲು ಅದರ ಹಿಂಭಾಗದಲ್ಲಿ ಹಲವು ಟನ್‌ಗಳಷ್ಟು ಭಾರದ ಕಲ್ಲುಗಳನ್ನು ಇಡಲಾಗಿತ್ತು. ಆ ದಿನಗಳಲ್ಲಿ ಒಂದು ಗ್ಯಾಲನ್‌ ಪೆಟ್ರೋಲ್‌ಗೆ (ಸುಮಾರು ನಾಲ್ಕು ಲೀಟರ್‌ಗೆ) ಎರಡು ರೂಪಾಯಿ, ಎಂಟು ಆಣೆ ಇತ್ತು. ಈ ಶಸ್ತ್ರಾಸ್ತ್ರ ಸಾಗಣೆಯ ವಾಹನವು ಮೊದಲೇ ಭಾರೀ ಪ್ರಮಾಣದಲ್ಲಿ ಇಂಧನ ಕುಡಿಯುತ್ತಿತ್ತು. ಕಲ್ಲಿನ ಭಾರವನ್ನೂ ಹೊತ್ತೊಯ್ಯಬೇಕಿದ್ದರಿಂದ ಇಂಧನ ಮತ್ತಷ್ಟು ವ್ಯಯವಾಗುತ್ತಿತ್ತು. ಹೀಗಾಗಿ ಗಸ್ತು ಹೊಡೆಯುವುದು ಬಲು ದುಬಾರಿಯಾಗಿ ಪರಿಣಮಿಸಿತ್ತು. ಸಿಸಿಎಫ್‌ ಬಳಿ ಖಾಸಗಿ ಕಾರು ಇದ್ದರೂ ನಿಯಮದ ಪ್ರಕಾರ ಅದನ್ನು ಬಳಸುವಂತಿರಲಿಲ್ಲ.

ಸ್ವಾತಂತ್ರ್ಯ ಸಿಕ್ಕ ಹೊಸತರಲ್ಲೂ ಪತ್ರಕರ್ತರ ರೂಪದ ವಸೂಲಿವೀರರು ಇದ್ದರು. ಲೇಖಕರ ಸಹೋದ್ಯೋಗಿಯಾಗಿದ್ದ ತ್ಯಾಗರಾಜನ್‌ ಅವರು ಅಂತಹ ಪತ್ರಕರ್ತನೊಬ್ಬನನ್ನು ನಿಭಾಯಿಸಿದ ಪರಿ ನಗೆ ಉಕ್ಕಿಸುತ್ತದೆ. ತ್ಯಾಗರಾಜನ್‌ ಅವರು ಕಾರ್ಯನಿರ್ವಹಿಸುತ್ತಿದ್ದ ಕಾಡಿನ ರಕ್ಷಣೆ ಸರಿಯಾಗಿ ಆಗುತ್ತಿಲ್ಲವೆಂದೂ ಪತ್ರಿಕೆಯ ಮುಂದಿನ ಸಂಚಿಕೆಯಲ್ಲಿ ಈ ಕುರಿತು ಲೇಖನ ಬರಲಿದೆಯೆಂದೂ ಪತ್ರಕರ್ತನೆಂದು ಹೇಳಿಕೊಂಡು ಬಂದ ವ್ಯಕ್ತಿಯೊಬ್ಬ ಬ್ಲ್ಯಾಕ್‌ಮೇಲ್‌ ಮಾಡಿದ್ದ. ಅವರಿಂದ ಹಣದ ಆಮಿಷ ಬರಬಹುದೆಂದು ಆತ ನಿರೀಕ್ಷಿಸಿದ್ದ.

‘ಕಾಡನ್ನು ಸ್ವತಃ ವೀಕ್ಷಿಸಿ, ತೀರ್ಮಾನಿಸಿ’ ಎಂದು ಆಹ್ವಾನವಿತ್ತ ತ್ಯಾಗರಾಜನ್‌, ಆ ಪತ್ರಕರ್ತನನ್ನು ದಟ್ಟ ಕಾಡಿಗೆ ಕರೆದೊಯ್ದು, ಅಲ್ಲಿನ ಪರಿಸರದ ಪರಿಚಯ ಮಾಡಿಕೊಡುತ್ತಿದ್ದರು. ಈ ತಂಡದ ಮೇಲೆ ‘ಕಾಡುಗಳ್ಳರು’ ಇದ್ದಕ್ಕಿದ್ದಂತೆ ಮುಗಿಬಿದ್ದರು. ಕೂಡಲೇ ತ್ಯಾಗರಾಜನ್‌ ಮತ್ತು ಅವರ ಸಿಬ್ಬಂದಿ ಬಂದೂಕು ತರಲು ಕಾರಿನತ್ತ ದೌಡಾಯಿಸಿದ್ದರು. ಅಷ್ಟರಲ್ಲಿ ಪತ್ರಕರ್ತನನ್ನು ‘ಕಾಡುಗಳ್ಳರು’ ಹಣ್ಣುಗಾಯಿ, ನೀರುಗಾಯಿ ಆಗುವಂತೆ ಬಾರಿಸಿದ್ದರು. ಆಮೇಲೆ ತ್ಯಾಗರಾಜನ್‌ ತಂಡವೇ ‘ಕಾಡುಗಳ್ಳ’ರನ್ನು ಓಡಿಸಿ, ಪತ್ರಕರ್ತನನ್ನು ಆಸ್ಪತ್ರೆಗೆ ಸಾಗಿಸಿತು. ತನಗೆ ಬಾರಿಸಿದವರು ನಿಜವಾಗಲೂ ‘ಕಾಡುಗಳ್ಳರೇ’ ಎಂಬ ಕುರಿತು ಅನುಮಾನ ಹೊಂದಿದ್ದ ಆತ, ಮುಂದೆ ಯಾವತ್ತೂ ಅರಣ್ಯ ಇಲಾಖೆಯ ಕಚೇರಿ ಹತ್ತಿರಕ್ಕೂ ಸುಳಿಯಲಿಲ್ಲವಂತೆ!

ದೇವರಾಜ ಅರಸು, ರಾಮಕೃಷ್ಣ ಹೆಗಡೆ, ಆರ್‌.ಗುಂಡೂರಾವ್‌ ಅವರು ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯಾಗಿ ಸಂಪುಟದ ಸಭೆಗಳಲ್ಲಿ ಶ್ಯಾಮಸುಂದರ್‌ ಸಹ ಭಾಗವಹಿಸುತ್ತಿದ್ದರು. ಮೂವರೂ ಮುಖ್ಯಮಂತ್ರಿಗಳ ಭಿನ್ನ ಕಾರ್ಯವಿಧಾನವನ್ನು ಅವರು ವಿಶ್ಲೇಷಿಸಿದ್ದಾರೆ. ಸಚಿವರಿಗೆ ಅಭಿಪ್ರಾಯ ಹೇಳಲು ಅವಕಾಶ ನೀಡುತ್ತಿದ್ದ ಅರಸು, ಬಳಿಕ ಚರ್ಚೆಯನ್ನು ಬರ್ಖಾಸ್ತುಗೊಳಿಸಿ ತಮ್ಮ ನಿರ್ಧಾರವನ್ನು ತಿಳಿಸುತ್ತಿದ್ದರು. ಸಚಿವರಿಗೆ ಚರ್ಚೆ ನಡೆಸಲು ಅವಕಾಶ ಕೊಟ್ಟರೂ ಮುಖ್ಯ ಕಾರ್ಯದರ್ಶಿಯವರ ಮಾತುಗಳಿಗೆ ಕಿವಿಗೊಟ್ಟು ಗುಂಡೂರಾವ್‌ ತೀರ್ಮಾನ ಪ್ರಕಟಿಸುತ್ತಿದ್ದರು. ನಿಜವಾಗಿ ಪ್ರಜಾಸತ್ತಾತ್ಮಕ ರೀತಿಯಲ್ಲಿ ಚರ್ಚೆಗಳು ನಡೆಯುತ್ತಿದ್ದುದು ಹೆಗಡೆಯವರ ಅಧ್ಯಕ್ಷತೆಯ ಸಭೆಗಳಲ್ಲಿ. ಆದರೆ, ಹಲವು ಸಭೆಗಳು ಯಾವುದೇ ನಿರ್ಧಾರ ಕೈಗೊಳ್ಳದೆ ಮುಗಿಯುತ್ತಿದ್ದವು ಎಂಬ ಒಳನೋಟವನ್ನು ಅವರು ಬೀರಿದ್ದಾರೆ.

ರಾಜೀವ್‌ ಗಾಂಧಿ ಅವರ ರಾಜಕೀಯ ಪ್ರವೇಶದ ಸಂಭ್ರಮಕ್ಕಾಗಿ ಏರ್ಪಡಿಸಬೇಕಿದ್ದ ಭಾರೀ ಸಮಾವೇಶಕ್ಕಾಗಿ ಹಣ ಸಂಗ್ರಹಿಸಬೇಕಿದ್ದಾಗ ಅರಣ್ಯ ಇಲಾಖೆಗೆ ₹ 20 ಲಕ್ಷದ ಗುರಿ ನಿಗದಿ ಮಾಡಿದ್ದು, ಅರಣ್ಯ ಸಂಬಂಧಿ ಕೈಗಾರಿಕೆಗಳಿಂದ ದೇಣಿಗೆ ಸಂಗ್ರಹಿಸಲು ಪಿಸಿಸಿಎಫ್‌ ನಿರಾಕರಿಸಿದ್ದು, ಮುಖ್ಯಮಂತ್ರಿ ಅವರ ತೀರ್ಮಾನ ತಪ್ಪೆಂದು ಕಂಡುಬಂದಾಗ ದಾಕ್ಷಿಣ್ಯವಿಲ್ಲದೆ ಹೇಳಿದ್ದು... ಅಬ್ಬಬ್ಬಾ, ಆಡಳಿತದ ಅನುಭವಗಳು ಎಷ್ಟೊಂದು ರೋಚಕ!

ಲೇಖಕ ಜೆರೋಮ್‌ ಕೆ. ಜೆರೋಮ್‌ ಅವರ ಅಭಿಮಾನಿಯಾದ ಶ್ಯಾಮಸುಂದರ್‌ ಅವರ ಮೇಲೆ, ಜೆರೋಮ್‌ ಅವರ ‘ತ್ರೀ ಮೆನ್‌ ಇನ್‌ ಎ ಬೋಟ್‌’ ಕೃತಿ ಪ್ರಭಾವ ಬೀರಿದೆ. ಕನ್ನಡ ಸಾರಸ್ವತ ಲೋಕದ ದಿಗ್ಗಜ ಶಿವರಾಮ ಕಾರಂತರ ತಂಗಿಯ ಮಗನಾಗಿರುವ ಲೇಖಕರಿಗೆ, ಸೋದರ ಮಾವನನ್ನೂ ಮೀರಿಸಬಲ್ಲ ಕಥನ ಕೌಶಲ ಸಿದ್ಧಿಸಿದೆ. ಅರ್ಧಾಂಗಿ ಹೀರಾ ಅವರ ಕುರಿತು ಹೇಳುವಾಗ ಲೇಖಕರ ಹೃದಯ ಮತ್ತಷ್ಟು ಅರಳಿ ನಿಲ್ಲುತ್ತದೆ.

ಸ್ವಾತಂತ್ರ್ಯೋತ್ತರ ಭಾರತದ ಸಾಮಾಜಿಕ, ರಾಜಕೀಯ ಸ್ಥಿತ್ಯಂತರಗಳು, ಅರಣ್ಯ ಸಂರಕ್ಷಣಾ ವಿಧಾನಗಳು, ಜೀವವೈವಿಧ್ಯದ ರಕ್ಷಣೆಗೆ ಎದುರಾಗಿರುವ ತೊಡರುಗಳು, ಆಡಳಿತದ ನಿರ್ವಹಣೆಯಲ್ಲಿ ಎದುರಾಗುವ ಸವಾಲುಗಳು... ಹೀಗೆ ಇಲ್ಲಿನ ನೆನಪುಗಳ ಮೆರವಣಿಗೆಯ ವ್ಯಾಪ್ತಿ ತುಂಬಾ ಹಿರಿದಾಗಿದೆ. ಲೆಕ್ಕವಿಲ್ಲದಷ್ಟು ಮಂದಿ, ಇಲಾಖೆಯ ಪೈಸೆ, ಪೈಸೆಯ ಲೆಕ್ಕಾಚಾರ, ನಿಖರ ದಿನಾಂಕ, ಊರು, ಕಾಡಿನ ಸ್ಥಳಗಳ ಉಲ್ಲೇಖ – ಅಬ್ಬಾ! ಇಷ್ಟೆಲ್ಲ ವಿಷಯಗಳು ಲೇಖಕರ ಮನದಂಗಳದಲ್ಲಿ ಹರಳುಗಟ್ಟಿ ನಿಂತಿದ್ದು ಹೇಗೋ?

ಜೀವನಪ್ರೀತಿ ಇಲ್ಲಿನ ಬರಹಗಳ ಜೀವಾಳವಾಗಿದೆ. ಮಾನವೀಯ ಅಂತಃಕರಣದ ಹೊನಲೊಂದು ಅವುಗಳಲ್ಲಿ ಹರಿದಿದೆ. ಶಿವಶರಣ್‌ ಸೋಮೇಶ್ವರ‌ ಅವರು ಇಂತಹ ಅಪರೂಪದ ಕೃತಿಯನ್ನು ಅಚ್ಚುಕಟ್ಟಾಗಿ ಸಂಪಾದಿಸಿದ್ದಾರೆ. ಹತ್ತು ಸಾವಿರ ಸಿಬ್ಬಂದಿಯ ಮುಖ್ಯಸ್ಥರಾಗಿದ್ದ ಲೇಖಕರು, ಅರಣ್ಯ ಸಂರಕ್ಷಣೆಯ ವಿಷಯದಲ್ಲಿ ರಾಜ್ಯವನ್ನು ದೇಶದಲ್ಲೇ ಮುಂಚೂಣಿಗೆ ತರಲು ಶ್ರಮಿಸಿದವರಲ್ಲಿ ಪ್ರಮುಖರು. ಸರ್ಕಾರಿ ಸೇವೆಗೆ ಸೇರುವವರಿಗೆ, ಅದರಲ್ಲೂ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ, ಅವರ ಈ ಅನುಭವಗಳು ಕೈದೀವಿಗೆ ಆಗಬಲ್ಲವು. ಕಾಡಿನ ನೆನಪುಗಳೆಲ್ಲ ಮನದುಂಬಿದಾಗ ಕನ್ನಡದಲ್ಲೂ ಈ ಕೃತಿ ಬಂದಿದ್ದರೆ ಎಷ್ಟೊಂದು ಚೆನ್ನಾಗಿತ್ತು ಎಂಬ ಭಾವ ಕಾಡದೇ ಇರದು.

ಎಸ್‌.ಶ್ಯಾಮಸುಂದರ್‌

ಇಂದಿರಾ ಮತ್ತು ಬೆಣ್ಣೆಹಣ್ಣು!
ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರು ಒಮ್ಮೆ ರಾಜ್ಯ ಸರ್ಕಾರದ ಸಾಧನೆಯ ಪರಾಮರ್ಶೆಯನ್ನು ವಿಧಾನಸೌಧದಲ್ಲಿ ನಡೆಸಿದ್ದರು. ಅರಣ್ಯ ಇಲಾಖೆಯ ಸಾಧನೆಯನ್ನು ವಿವರಿಸಲು ಬಂದಿದ್ದ ಪಿಸಿಸಿಎಫ್‌ ಶ್ಯಾಮಸುಂದರ್‌ ಅವರು ಬುಡಕಟ್ಟು ಜನರು ಕಾಡಿನಲ್ಲೀಗ ಹಲಸಿನ ಬದಲು ಆವಕಾಡೊ (ಬೆಣ್ಣೆಹಣ್ಣು) ಬೆಳೆಯುತ್ತಿದ್ದಾರೆ ಎಂದು ಪ್ರಾಸಂಗಿಕವಾಗಿ ಹೇಳಿದರು.

‘ಆ ಜನರಿಗೆ ಆವಕಾಡೊ ಅಂದರೆ ಅಷ್ಟು ಇಷ್ಟವೇ’ ಎಂದು ಇಂದಿರಾ ಕೇಳಿದರು. ‘ಹಾಗೇನಿಲ್ಲ ಮೇಡಂ, ನನಗಂತೂ ಇಷ್ಟ’ ಎಂಬ ಉತ್ತರ ಇವರಿಂದ ಬಂತು. ಅದಕ್ಕೆ ಇಂದಿರಾ, ‘ಆ ಹಣ್ಣನ್ನು ಹೇಗೆ ತಿನ್ನುತ್ತೀರಿ’ ಎಂದು ಪ್ರಶ್ನಿಸಿದರು. ‘ಆಲಿವ್‌ ಎಣ್ಣೆ ಹಾಗೂ ವಿನೇಗರ್‌ ಜತೆ ತಿನ್ನುವೆ. ಆಲಿವ್‌ ಎಣ್ಣೆ ದುಬಾರಿಯಾಗಿದ್ದರಿಂದ ಸಕ್ಕರೆ ಬಳಸಿ ತಿನ್ನುವುದೇ ಹೆಚ್ಚು ಮೇಡಂ’ ಎಂದು ಪಿಸಿಸಿಎಫ್‌ ಹೇಳಿದ್ದನ್ನು ಇಂದಿರಾ ತುಂಬಾ ಹಸನ್ಮುಖರಾಗಿ ಕೇಳಿಸಿಕೊಂಡಿದ್ದರು. ಕೃತಿಯುದ್ದಕ್ಕೂ ಇಂತಹ ನೂರಾರು ರಸನಿಮಿಷಗಳ ನೆನಪುಗಳು ಹರಡಿಕೊಂಡಿವೆ.

‘ರೀಲಿವಿಂಗ್‌ ದಿ ಮೆಮರೀಸ್‌ ಆಫ್‌ ಆ್ಯನ್‌ ಇಂಡಿಯನ್‌ ಫಾರೆಸ್ಟರ್‌’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT