ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ | ಅವರಿವರೊಂದಿಗೆ ಬಾಬಾಸಾಹೇಬರು

Last Updated 21 ಜನವರಿ 2023, 22:00 IST
ಅಕ್ಷರ ಗಾತ್ರ

ಡಾ.ಬಿ.ಆರ್‌. ಅಂಬೇಡ್ಕರ್‌ ಅವರನ್ನು ಬೇರೆ ಬೇರೆ ಮಹನೀಯರೊಂದಿಗೆ ‌ಹೋಲಿಕೆ ಮಾಡುತ್ತಾ, ಭಿನ್ನಾಭಿಪ್ರಾಯಗಳನ್ನೂ ಚರ್ಚಿಸಿದ ಕೃತಿ ‘ಅಂಬೇಡ್ಕರ್‌ ಮತ್ತು...’ ಭಾರತ ಕಂಡ ದಾರ್ಶನಿಕರ ನಡೆ–ನುಡಿಗೂ ಅಂಬೇಡ್ಕರ್‌ ಅವರ ನಡೆ–ನುಡಿಗೂ ಹೇಗೆ ಸಾಮ್ಯತೆಗಳಿದ್ದವು, ಇಂತಹ ಮಾನವತಾವಾದಿಗಳು ಸಮಾಜದ ಒಳಿತಿಗಾಗಿ ಹೇಗೆಲ್ಲ ಕೆಲಸ ಮಾಡಿದರು ಎಂಬುದನ್ನು ತುಲನಾತ್ಮಕವಾಗಿ ನೋಡಿದ ಕೃತಿಯೂ ಇದಾಗಿದೆ.

ಶಾಂತಿಗಾಗಿ ಬುದ್ಧ ಕಾಡಿಗೆ ಹೋದ. ಹೆಚ್ಚಿನ ವಿದ್ಯಾಭ್ಯಾಸ ಪಡೆದು ಶೋಷಿತರ ಬದುಕು ಬೆಳಗಿಸಲು ಅಂಬೇಡ್ಕರ್‌ ವಿದೇಶಕ್ಕೆ ಹೋದರು. ಸನಾತನ ಧರ್ಮ ಪೋಷಿಸಿದ ಸಾಮಾಜಿಕ ತಾರತಮ್ಯಕ್ಕೆ ಮಂಗಳ ಹಾಡಲು ಅಗತ್ಯವಾದ ರೀತಿಯಲ್ಲಿ ಅಂಬೇಡ್ಕರ್‌ ಅವರು ಸಂವಿಧಾನವನ್ನು ರೂಪುಗೊಳಿಸಿದರು. ಹನ್ನೆರಡನೇ ಶತಮಾನದಲ್ಲಿ ವಿನೂತನ ಧರ್ಮ ಹಾಗೂ ಸಂವಿಧಾನದ ಮೂಲಪುರುಷರೇ ಬಸವಣ್ಣ ಆದರು. ಇಂದಿನ ಸಂವಿಧಾನಕ್ಕೆ ಬಸವಣ್ಣನವರೇ ಪ್ರೇರಕ ಶಕ್ತಿಯೂ ಆಗಿದ್ದರು. ಶರಣರ ಗೌರವಕ್ಕೆ ಕುತ್ತು ಬಂದಾಗ ಬಸವಣ್ಣ, ಬಿಜ್ಜಳನ ಆಸ್ಥಾನ ತೊರೆದರು. ಹಿಂದೂ ಕೋಡ್‌ ಮಸೂದೆ ಪಾಸಾಗದಿದ್ದಾಗ ಮಹಿಳೆಯರ ಹಿತ ಕಾಪಾಡಲು ವಿಫಲನಾದೆ ಎಂಬ ವಿಷಾದದಿಂದ ಅಂಬೇಡ್ಕರ್ ಅವರು ಕಾನೂನು ಸಚಿವರ ಸ್ಥಾನಕ್ಕೆ ರಾಜೀನಾಮೆ ನೀಡಿದರು.

16ನೇ ಶತಮಾನದ ಪೂರ್ವಾರ್ಧದಲ್ಲಿ ಕನಕದಾಸರು ಕರ್ಮಠ ವ್ಯವಸ್ಥೆಯ ವಿರುದ್ಧ ಹೋರಾಡಿ ಭಕ್ತಿ ಚಳವಳಿಗೆ ಹೊಸ ಸ್ವರೂಪ ಕೊಟ್ಟರು. ಇಪ್ಪತ್ತನೇ ಶತಮಾನದ ಪೂರ್ವಾರ್ಧದಲ್ಲಿ ಅಂಬೇಡ್ಕರ್‌ ಅವರೂ ಸಾಮಾಜಿಕ ಸಮಾನತೆಯ ಕನಸು ಹೊತ್ತು ಜಾತಿಯ ವ್ಯವಸ್ಥೆಯಿಂದ ಶೋಷಿತರನ್ನು ಮುಕ್ತಗೊಳಿಸಲು ತಮ್ಮ ಅನುಯಾಯಿಗಳೊಂದಿಗೆ ಬೌದ್ಧಧರ್ಮಕ್ಕೆ ಮತಾಂತರಗೊಂಡರು.

ಮಹಾತ್ಮ ಗಾಂಧಿ ಅವರು ಸ್ವಾತಂತ್ರ್ಯ ಚಳವಳಿಯ ನೇತಾರರಾಗಿ ಗೌರವಾರ್ಹರು. ಆದರೆ ಅಸ್ಪಶ್ಯರ ವಿಚಾರದ ಹೋರಾಟದಲ್ಲಿ ಅಂಬೇಡ್ಕರ್‌ ಅವರದೇ ಮುಂದಾಳತ್ವ. ಇಬ್ಬರೂ ಇಲ್ಲದ ಭಾರತವನ್ನು ಕಲ್ಪಿಸಿಕೊಳ್ಳಲು ಅಸಾಧ್ಯ. ಒಬ್ಬರು ಬಂದೂಕಿನ ಎದುರು ಬಟ್ಟೆ ಬಿಚ್ಚಿ ನಿಂತರು. ಇನ್ನೊಬ್ಬರು ಪ್ರಧಾನ ಶೋಷಕರ ಎದುರಿಗೆ ಕೋಟು ತೊಟ್ಟು ನಿಂತರು.

ಹೀಗೆ ಅಂಬೇಡ್ಕರ್‌ ಅವರನ್ನು ಬೇರೆ ಬೇರೆ ಮಹನೀಯರೊಂದಿಗೆ ಹೋಲಿಕೆ ಮಾಡುತ್ತಾ, ಭಿನ್ನಾಭಿಪ್ರಾಯಗಳನ್ನೂ ಚರ್ಚಿಸುತ್ತಾ ಅಂಬೇಡ್ಕರ್‌ ಅವರ ಉದಾತ್ತ ವ್ಯಕ್ತಿತ್ವವನ್ನು ಕೃತಿ ಕಟ್ಟಿಕೊಟ್ಟಿದೆ. ಅಂಬೇಡ್ಕರ್‌ ಮತ್ತು ಸ್ತ್ರೀವಾದಿ ದೃಷ್ಟಿ, ಅಂಬೇಡ್ಕರ್‌ ಮತ್ತು ದಲಿತ ಲೋಕ ಅಧ್ಯಾಯಗಳು ಬಾಬಾಸಾಹೇಬರ ವ್ಯಕ್ತಿ– ವೃತ್ತಿ, ಸೈದ್ಧಾಂತಿಕ ಬದುಕು ಮತ್ತು ಮಜಲುಗಳನ್ನು ತೆರೆದಿಟ್ಟಿವೆ. ಹಲವು ಅಧ್ಯಾಯಗಳು ಕಥನ ರೂಪದಲ್ಲಿವೆ. ಅಂಬೇಡ್ಕರ್‌ ಮತ್ತು ಅವರ ಜೊತೆಗಿನ ವಿವಿಧ ಕಾಲಘಟ್ಟದ ಸಮಕಾಲೀನರ ಬಗೆಗಿನ ಒಳನೋಟ ನೀಡುವ ಕೃತಿ ಇದಾಗಿದೆ.

ಕೃತಿ: ಅಂಬೇಡ್ಕರ್‌ ಮತ್ತು...

ಲೇ: ಪ್ರೊ.ಎಚ್‌.ಟಿ. ಪೋತೆ

ಪ್ರ: ಸಪ್ನ ಬುಕ್‌ ಹೌಸ್‌ ಬೆಂಗಳೂರು

ಸಂ: 080 40114455

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT