ಸೋಮವಾರ, ಜನವರಿ 24, 2022
28 °C

ಪುಸ್ತಕ ವಿಮರ್ಶೆ: ಸಾಹಿತ್ಯದ ಫ್ರೇಮಿನ ಶರ್ಮರ ವ್ಯಕ್ತಿಚಿತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಿ.ಸಿ. ರಾಮಚಂದ್ರ ಶರ್ಮ

ಲೇ: ಶೂದ್ರ ಶ್ರೀನಿವಾಸ್‌

ಪು: 132 ಬೆ: ₹ 50

ಪ್ರಕಾಶನ: ಸಾಹಿತ್ಯ ಅಕಾಡೆಮಿ

ಸಂಪರ್ಕ: www.sahitya-akademi.gov.in

ನವ್ಯ ಸಾಹಿತ್ಯ ಸಂದರ್ಭದಲ್ಲಿ ಗೋಪಾಲಕೃಷ್ಣ ಅಡಿಗರ ಪ್ರಖರ ಪ್ರಭಾವಳಿಯ ಎದುರಿನಲ್ಲಿಯೂ ಭಿನ್ನ ಧ್ವನಿಯನ್ನು ಉಳಿಸಿಕೊಂಡು ಕನ್ನಡ ಕಾವ್ಯಪರಂಪರೆಯಲ್ಲಿ ತಮ್ಮದೇ ಛಾಪು ಮೂಡಿಸಿದ ಕವಿ, ಬಿ.ಸಿ. ರಾಮಚಂದ್ರ ಶರ್ಮ. ಇಪ್ಪತ್ಮೂರು ವರ್ಷಗಳ ಕಾಲ ವಿದೇಶಗಳಲ್ಲಿದ್ದರೂ ಅವರು ಕನ್ನಡ ಸಾಹಿತ್ಯಲೋಕದ ಜೊತೆಗೆ ನಿರಂತರವಾದ ಒಡನಾಟ ಉಳಿಸಿಕೊಂಡವರು. ಕವಿಯಾಗಿ ಸಾಕಷ್ಟು ಪ್ರಸಿದ್ಧರಾಗಿರುವ ಶರ್ಮರು ಹಲವು ಮಹತ್ವದ ಕಥೆಗಳನ್ನೂ, ನಾಟಕಗಳನ್ನೂ ಬರೆದಿದ್ದಾರೆ. ಕನ್ನಡ ಸಾಹಿತ್ಯದ ಅಂತಃಸತ್ವವನ್ನು ಬೆಳೆಸಿದ, ಜಾಗೃತಗೊಳಿಸಿದ ಹಲವು ವಾಗ್ವಾದಗಳಲ್ಲಿ, ಚರ್ಚೆಗಳಲ್ಲಿ ಸಕ್ರಿಯರಾಗಿ ಪಾಲ್ಗೊಂಡಿದ್ದಾರೆ. ಇಂಥ ಮುಖ್ಯ ಸಾಹಿತಿಯ ಬದುಕನ್ನೂ ಬರಹವನ್ನೂ ಒಟ್ಟೊಟ್ಟಿಗೇ ಕಟ್ಟಿಕೊಡುವ ಪ್ರಯತ್ನವನ್ನು ಶೂದ್ರ ಶ್ರೀನಿವಾಸ್‌ ಮಾಡಿದ್ದಾರೆ. ಸಾಹಿತ್ಯ ಅಕಾಡೆಮಿಯ ‘ಭಾರತೀಯ ಸಾಹಿತ್ಯ ನಿರ್ಮಾಪಕರು’ ಸರಣಿಯಲ್ಲಿ ಪ್ರಕಟವಾಗಿರುವ ‘ಬಿ.ಸಿ. ರಾಮಚಂದ್ರ ಶರ್ಮ’ ಎಂಬ ಈ ಕೃತಿ ಆಪ್ತ ಒಡನಾಡಿಯೊಬ್ಬನ ಕಣ್ಣಿನಿಂದ ಶರ್ಮರ ವ್ಯಕ್ತಿತ್ವವನ್ನೂ, ಗಾಢ ಓದುಗನೊಬ್ಬನ ಕಣ್ಣಿನಿಂದ ಅವರ ಸಾಹಿತ್ಯವನ್ನೂ ಪರಿಚಯಿಸಿಕೊಡುತ್ತದೆ. 

ಆರು ಅಧ್ಯಾಯಗಳಲ್ಲಿ ಹಂಚಿಕೊಂಡಿರುವ ಈ ಕೃತಿಯ ಮೊದಲ ಅಧ್ಯಾಯ ಶರ್ಮರ ಹುಟ್ಟು, ಬಾಲ್ಯ ಮತ್ತು ಬೆಳವಣಿಗೆಯ ಕುರಿತಾಗಿದೆ. ಇದು ಬರೀ ಮಾಹಿತಿಯಾಗಿರದೇ ಅವರು ಹುಟ್ಟಿ ಬೆಳೆದ ಪರಿಸರ ಅವರಲ್ಲಿ ಸಾಹಿತ್ಯ, ಮನಃಶಾಸ್ತ್ರಗಳ ಕುರಿತು ಆಸಕ್ತಿ ಬೆಳೆಸಿಕೊಳ್ಳಲು ಹೇಗೆ ಕಾರಣವಾಯಿತು ಎಂಬುದನ್ನೂ ಲೇಖಕರು ವಿಶ್ಲೇಷಿಸುತ್ತಾ ಹೋಗುತ್ತಾರೆ. ಹಾಗಾಗಿ ವಿವರಗಳ ಜೊತೆಗೇ ಒಂದು ವ್ಯಕ್ತಿಚಿತ್ರವನ್ನೂ ಗಟ್ಟಿಯಾಗಿ ಕಟ್ಟಿಕೊಡುತ್ತ ಹೋಗುತ್ತದೆ. ನಂತರ ಅವರ ಕಾವ್ಯ ರಚನೆಯ ಕುರಿತು, ಸಾನೆಟ್‌ ರಚನೆಗಳ ಕುರಿತು, ಕವಿಯಾಗಿ ಪ್ರಸಿದ್ಧರಾದ ಶರ್ಮರ ಕಥಾಲೋಕದ ಕುರಿತು, ನಾಟಕಗಳ ಕುರಿತು, ಅನುವಾದದ ಕುರಿತು ಅವರ ಒಲವಿನ ಕುರಿತು ಅನುಸಂಧಾನ ನಡೆಸುವ ಅಧ್ಯಾಯಗಳಿವೆ. ಮೇಲ್ನೋಟಕ್ಕೆ ಇದು ಒಂದು ಕಾಲದ ಒಂದು ಕವಿಯ ಬದುಕಿನ ಕುರಿತ ಚಿತ್ರಕೃತಿಯಾಗಿ ಕಂಡರೂ ಇದಕ್ಕೆ ಆ ಮಿತಿಯನ್ನೂ ಮೀರಿದ ಮಹತ್ವವಿದೆ. ಆ ಕಾಲದ ಶರ್ಮರ ಒಡನಾಡಿಗಳಾದ ಲಂಕೇಶ್, ಅನಂತಮೂರ್ತಿ, ಡಿ.ಆರ್‌. ನಾಗರಾಜ್‌ ಹೀಗೆ ಹಲವರ ಕುರಿತಾದ ವಿವರಗಳೂ ಇಲ್ಲಿ ಪೂರಕವಾಗಿ ಬರುತ್ತವೆ. ಹಾಗಾಗಿ ಇದು ಒಂದು ಕಾಲದ ಸಾಹಿತ್ಯ ಜಗತ್ತಿನ ಚಹರೆಗಳನ್ನು ಹಿಡಿದಿಡುವ ಕೃತಿಯೂ ಆಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು