ಭಾನುವಾರ, ಮೇ 29, 2022
21 °C

ಪುಸ್ತಕ ವಿಮರ್ಶೆ: ಸರೋದ್‌ ಮಾಂತ್ರಿಕನ ಸ್ವರಯಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸರೋದ್‌ ಸ್ವರಯಾನ
ಸಂ:
ಗಣೇಶ ಅಮೀನಗಡ, ರಘುಪತಿ ತಾಮ್ಹನ್‌ಕರ್‌
ಪ್ರ: ಕವಿತಾ ಪ್ರಕಾಶನ, ಮೈಸೂರು
ಸಂ: 9880105526

**

ವಿಶ್ವಪ್ರಸಿದ್ಧ ಸರೋದ್‌ ವಾದಕರಲ್ಲಿ ಪಂಡಿತ್‌ ರಾಜೀವ ತಾರಾನಾಥರು ಅಗ್ರಗಣ್ಯರು. 90ರ ಹೊಸ್ತಿಲಿನಲ್ಲಿರುವ ಸರೋದ್‌ ಮಾಂತ್ರಿಕನ ಆ ಸ್ವರಯಾನವನ್ನು ದಾಖಲಿಸುವ ಲೇಖನಗಳ ಸಂಕಲನವೇ ‘ಸರೋದ್‌ ಸ್ವರಯಾನ’.

ರಾಜೀವ ತಾರಾನಾಥ ಅವರ ಕುರಿತು ಈಗಾಗಲೇ ಹಲವು ಕೃತಿಗಳು ಪ್ರಕಟವಾಗಿವೆ. ಈ ನುಡಿತೋರಣ ‘ಸರೋದ್‌ ಸ್ವರಯಾನ’ದಲ್ಲಿ ಚಂದ್ರಶೇಖರ ಕಂಬಾರ, ನ.ರತ್ನ, ಸುಮಂಗಲಾ, ರಹಮತ್‌ ತರೀಕೆರೆ ಮುಂತಾದವರು ಬರೆದ ಲೇಖನಗಳನ್ನು ಆಯ್ದು ಪ್ರಕಟಿಸಲಾಗಿದೆ. ಜೊತೆಗೆ ರಾಜೀವ ತಾರಾನಾಥ ಅವರು ನುಡಿಸಿದ ತಮ್ಮ ಜೀವನದ ಚಿತ್ರಣ, ಸಂಗೀತ ಪಯಣವನ್ನು ಕೀರ್ತಿನಾಥ ಕುರ್ತಕೋಟಿ, ಯು.ಆರ್‌.ಅನಂತಮೂರ್ತಿ, ಜಯಂತ ಕಾಯ್ಕಿಣಿ, ಗಿರೀಶ ಕಾಸರವಳ್ಳಿ, ಶ್ರೀದೇವಿ ಕಳಸದ ಅವರು ಮಾತುಕತೆಯ ಸಂದರ್ಶನಗಳ ಮೂಲಕ ಇಲ್ಲಿ ಕಟ್ಟಿಕೊಟ್ಟಿದ್ದಾರೆ. 

ಇಲ್ಲಿನ ಸಂದರ್ಶನಗಳಲ್ಲಿ ಪ್ರಶ್ನೆಗಳ ಪುನರುಕ್ತಿ ಇದ್ದರೂ, ರಾಜೀವ ತಾರಾನಾಥ ಅವರ ಉತ್ತರಗಳಲ್ಲಿ ಮಾಹಿತಿ ವಿಸ್ತರಿಸುತ್ತಾ ಹೋಗುತ್ತದೆ. ಉದಾಹರಣೆಯಾಗಿ, ಒಂದೆಡೆ ಅನಂತಮೂರ್ತಿಯವರು ‘ಸಾಹಿತ್ಯ ಮತ್ತು ಸಂಗೀತದಲ್ಲಿ ನಿಮಗೆ ಹೆಚ್ಚು ಹತ್ತಿರ ಯಾವುದು?’ ಎಂದಾಗ ‘ಸಂಗೀತ’ ಎಂದಷ್ಟೇ ಉತ್ತರಿಸಿ ಮಾತು ಮುಗಿಸಿದ್ದ ತಾರಾನಾಥರು, ಜಯಂತ ಕಾಯ್ಕಿಣಿ ಜೊತೆಗೆ ಮಾತಿಗಿಳಿಯುತ್ತಾ, ‘ಹಾಡುವುದು ಹಾಗೂ ಸರೋದ್‌ ವಾದನ ಅದೊಂದು ತುರಿಸು ರೀ, ಜೀವಕ್ಕಿಂತ ಹೆಚ್ಚಲ್ಲ. ಆ ತುರಿಸಿನಿಂದ ಅದೆಷ್ಟು ಹಿತಪಡ್ತೀರಲ್ಲ. ಅದಿಲ್ಲದೇ ನಿಮಗೆ ಇರೋಕ್ಕೆ ಆಗುತ್ಯೇ? ಸಾಯೋ ತನಕ ಇರುತ್ತೆ. ಹಾಗೇ ಅದು ಆಗಬೇಕು’ ಎಂದು ಸುದೀರ್ಘವಾಗುತ್ತಾರೆ. ಇದೇ ರೀತಿ ಪ್ರತಿ ಮರುನುಡಿಯ ಗಾಢತೆಯೂ ಪುಟ ಉರುಳಿದಂತೆ ಹೆಚ್ಚುತ್ತದೆ. ಲೇಖನಗಳನ್ನು ಆಯ್ಕೆ ಮಾಡುವಲ್ಲಿ ಸಂಪಾದಕರಾದ ಗಣೇಶ ಅಮೀನಗಡ , ರಘುಪತಿ ತಾಮ್ಹನ್‌ಕರ್‌ ವೈವಿಧ್ಯಕ್ಕೆ ಒತ್ತು ನೀಡಿದ್ದಾರೆ. ಇದರಿಂದ ತಾರಾನಾಥರ ವ್ಯಕ್ತಿತ್ವವನ್ನು ಭಿನ್ನನೋಟಗಳಿಂದ ನೋಡಲು ಸಾಧ್ಯವಾಗುತ್ತದೆ. ತಾರಾನಾಥರ ಸಂಗೀತ ಪಯಣದ ದಾಖಲೆಯಾಗಿರುವ ಈ ಕೃತಿ ಸಂಗೀತಗಾರರಿಗೆ, ಸಂಗೀತಾಸಕ್ತರಿಗೆ, ಸಾಹಿತ್ಯಾಸಕ್ತರಿಗೆ ಆಕರದಂತಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು