ತ ಲೆಮಾರುಗಳಷ್ಟು ಹಿಂದಿನ ಕಥೆಯನ್ನು ಮೈಮರೆತು ಓದುವ ಹಾಗೆ ಬರೆಯುವುದುಒಂದು ದಾರಿ. ಆದರೆ ಈ ಮೈಮರೆವನ್ನು ಬ್ರೇಕ್ ಮಾಡುತ್ತ ಸದ್ಯದ ಎಚ್ಚರ ಇಟ್ಟುಕೊಂಡೇಭೂತಕಾಲದ ಕಥೆ ಹೇಳುವುದು ರಿಸ್ಕ್; ಹಲವು ಉಪಯೋಗಗಳೂ ಇರುವ ರಿಸ್ಕ್. ಶ್ರೀಧರ ಬಳಗಾರ ಅವರು ‘ಮೃಗಶಿರ’ ಕಾದಂಬರಿಯಲ್ಲಿ ಇಂಥ ರಿಸ್ಕ್ ತೆಗೆದುಕೊಂಡಿರುವುದಷ್ಟೇ ಅಲ್ಲ, ಅದನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ ಕೂಡ.

‘ಮೃಗಶಿರ’ ಸದ್ಯದಲ್ಲಿ ನಿಂತು ಸ್ವಾತಂತ್ರ್ಯಪೂರ್ವ ಕಥನವನ್ನು ಕಟ್ಟುವ ಪ್ರಯತ್ನ. ಈ ಕಾದಂಬರಿಯ ಒಳಗೊಬ್ಬ ಲೇಖಕ ಇದ್ದಾನೆ. ಅವನು ಸ್ವಾತಂತ್ರ್ಯ ಹೋರಾಟಗಾರ ಗಡಿಮನೆ ಸುಬ್ರಾಯಪ್ಪನ ಜೀವನ ಚರಿತ್ರೆ ಬರೆಯುವ ತಯಾರಿಯಲ್ಲಿದ್ದಾನೆ. ಅದಕ್ಕಾಗಿ ಸುಬ್ರಾಯಪ್ಪನನ್ನೂ, ಅವನ ಬದುಕಿಗೆ ಸಂಬಂಧಿಸಿದವರನ್ನೂ ಮಾತಾಡಿಸುತ್ತ ಹೋಗುತ್ತಾನೆ.

ಕಾದಂಬರಿಯೊಳಗಿನ ಲೇಖಕ, ‘ಇದ್ದಿದ್ದನ್ನು ಇದ್ದ ಹಾಗೆಯೇ ಅಥವಾ ಅವರು ಹೇಳಿದ್ದನ್ನು ಹೇಳಿದ ಹಾಗೆಯೇ ಬರೆಯುವುದಷ್ಟೇ ನನ್ನ ಕೆಲಸ’ ಎಂದು ಕಾದಂಬರಿಯಲ್ಲಿ ಮತ್ತೆ ಮತ್ತೆ ಬೇರೆ ಬೇರೆ ರೀತಿಯಲ್ಲಿ ಹೇಳುತ್ತಿರುತ್ತಾನೆ. ಆದರೆ, ಅವರು ಹೇಳುವುದು ಪೂರ್ಣ ಸತ್ಯವಲ್ಲ ಮತ್ತು ಅದನ್ನು ಕೇಳಿಸಿಕೊಂಡು ನಾನು ಹಾಗೆಯೇ ಬರೆಯುತ್ತೇನೆ ಎನ್ನುವುದೂ ಸತ್ಯವಲ್ಲ ಎಂಬುದು ಅವನಿಗೆ ಗೊತ್ತಿರುವ ಹಾಗಿದೆ. ಈ ಕೋರೆಯನ್ನು ಮುಚ್ಚುವುದಕ್ಕಾಗಿಯೇ ಮತ್ತೆ ಮತ್ತೆ ಸತ್ಯದ ಮಾತು ಆಡುತ್ತಿರುತ್ತಾನೆ. ಕಾದಂಬರಿಯ ನಿರೂಪಣಾ ಕ್ರಮವನ್ನೊಮ್ಮೆ ಗಮನಿಸಿದರೆ ಇದು ಇನ್ನಷ್ಟು ಸ್ಪಷ್ಟವಾಗುತ್ತದೆ.

ಈ ಕಥನದೊಳಗೆ ಬರುವ ಬಹುತೇಕ ಪಾತ್ರಗಳೆಲ್ಲವೂ ತಮ್ಮ ಬದುಕಿನ ಭೂತಕಾಲದ ಕಥೆಯನ್ನು ಲೇಖಕನ ಬಳಿ ಹೇಳಿಕೊಳ್ಳುತ್ತವೆ. ಅವರೆಲ್ಲರಿಗೂ ಈ ಪುಸ್ತಕದಿಂದ ನಮ್ಮ ವಿಮೋಚನೆ ಆಗಬೇಕು ಎಂಬ ಆಸೆ. ಇಲ್ಲೊಂದು ಮೋಜು ಉಂಟು. ಲೇಖಕ ತನ್ನ ಪುಸ್ತಕದ ಪಾತ್ರಗಳಿಗೆ ಎದುರಾದಾಗೆಲ್ಲ ಅವರು ಆತ್ಮೀಯವಾಗಿ, ಪಕ್ಕಾ ಹವ್ಯಕ ಆಡುನುಡಿಯಲ್ಲಿ ಅವನೊಡನೆ ಮಾತಾಡುತ್ತಾರೆ. ಆದರೆ ಪುಸ್ತಕದಲ್ಲಿ ‘ಬರೆಯುವ’ ಕಥೆಯನ್ನು ಹೇಳುವಾಗ –ಚೌಕಿಯಲ್ಲಿ ವೇಷ ಕಟ್ಟಿಕೊಂಡು ಬೀಡಿ ಸೇದುತ್ತ ಪೋಲಿ ಜೋಕು ಹೇಳುತ್ತ ಕೂತಿದ್ದ ಯಕ್ಷಗಾನ ವೇಷಧಾರಿ ವೇದಿಕೆಯ ಮೇಲೆ ಕಾಲಿಡುತ್ತಿದ್ದಂತೆಯೇ ಸಾಕ್ಷಾತ್ ಪಾತ್ರವೇ ಆಗಿಬಿಡುವ ಹಾಗೆ– ಪಕ್ಕಾ ಗ್ರಾಂಥಿಕ ಭಾಷೆಗೆ ಇಳಿದುಬಿಡುತ್ತಾರೆ. ಲೇಖಕನಿಗೆ ಮಾತ್ರ ಹೊಳೆಯಬಲ್ಲ ಕಾವ್ಯಾತ್ಮಕ ಸಾಲುಗಳೆಲ್ಲ ಅವರ ಬಾಯಿಯಲ್ಲಿ ಬರುತ್ತವೆ. ಈ ಸಾಲುಗಳು ನಿಜವಾಗಿಯೂ ಆ ಪಾತ್ರಗಳದ್ದೋ ಅಥವಾ ಅವುಗಳನ್ನು ನಿರೂಪಿಸುತ್ತಿರುವ ಲೇಖಕನದ್ದೋ? ಅವನ ತಾಟಸ್ಥ್ಯ ಎಷ್ಟು ವಸ್ತುನಿಷ್ಠವಾದದ್ದು ಎಂಬ ಪ್ರಶ್ನೆಯನ್ನೂ ನಿರೂಪಣಾ ವಿಧಾನದಲ್ಲಿಯೇ ಕಾದಂಬರಿ ಎತ್ತುತ್ತದೆ. ಈ ಪ್ರಶ್ನೆ ಲೇಖಕನ ಮಟ್ಟಿಗೆ ಸೂಚ್ಯವಾಗಿಯೂ, ಪಾತ್ರಗಳ ಮಟ್ಟಿಗೆ ಗಾಢವಾಗಿಯೂ ಕಾದಂಬರಿಯುದ್ದಕ್ಕೂ ಧ್ವನಿಸುತ್ತಲೇ ಇರುತ್ತದೆ.

ಇತಿಹಾಸವೇ ನಮ್ಮ ಬದುಕನ್ನು, ಆಲೋಚನೆಗಳನ್ನು ನಿಯಂತ್ರಿಸುತ್ತಿರುವ, ಎಂದೋ ಎಲ್ಲೋ ನಡೆದಿದ್ದನ್ನು ತಾವೇ ಕಣ್ಣಾರೆ ಕಂಡ ಹಾಗೆ ‘ಇದ್ದಿದ್ದನ್ನು ಇದ್ದ ಹಾಗೆ ಹೇಳ್ತಿದ್ದೇವೆ’ ಎನ್ನುತ್ತಿರುವವರ ಅರೆಸತ್ಯದ ಅಬ್ಬರವೇ ಕೇಳುತ್ತಿರುವ ಸದ್ಯದ ‘ಪೊಲಿಟಿಕ್ಸ್’ನ ಒಡಲಲ್ಲೇ ಇರುವ ಬಿರುಕನ್ನು ಈ ಕಾದಂಬರಿ ತನ್ನ ನಿರೂಪಣಾ ಕ್ರಮದ ಮೂಲಕವೇ ತಣ್ಣಗೆ ಸೂಚಿಸುತ್ತಿದೆಯೇ?

ಬಳಗಾರರು ಈ ಕಾದಂಬರಿಯಲ್ಲಿ ಮನುಷ್ಯ ಬದುಕಿನ ಪಲ್ಲಟಗಳನ್ನು ಗಾಢವಾಗಿ ಸೂಚಿಸಲು ಪ್ರಕೃತಿಯನ್ನು ಬಳಸಿಕೊಳ್ಳುವ ರೀತಿ ಕುತೂಹಲಕಾರಿ. ಅಂತೆ ಬದುಕನ್ನು ಪುಟ್ಟಣ್ಣ ಪ್ರವೇಶಿಸಲಿದ್ದಾನೆ ಎನ್ನುವುದನ್ನು ಸೂಚಿಸಲು, ಅಂತೆ ಮತ್ತು ಪುಟ್ಟಣ್ಣ ಸೇರಿ ಮನೆಯ ಬಚ್ಚಲ ಸಮೀಪ ತೆಂಗಿನ ಗಿಡವನ್ನು ನೆಡುವುದು... ನಿದ್ರೆಯಲ್ಲಿದ್ದ ಅಂತೆಯನ್ನು ಪುಟ್ಟಣ್ಣ ಭೋಗಿಸುವ ಕ್ಷಣದಲ್ಲಿ ಕೆರೆ ಸಮೀಪ ಗುಂಡು ತಿಂದು ಭುಸುಗುಡುತ್ತ ಸಾಯುತ್ತಿರುವ ಗಮಯನ ವರ್ಣನೆ ಬರುವುದನ್ನು ಗಮನಿಸಬೇಕು.

ಅಷ್ಟೇ ಅಲ್ಲ, ಮನುಷ್ಯರು ತಮ್ಮ ಮನೋಲೋಕದ ದ್ವಂದ್ವಗಳನ್ನು ಗೆದ್ದುಕೊಳ್ಳಲೂ ಹೊರಗಿನ ಪ್ರಕೃತಿ ಪರಿಕರವಾಗಿ ಒದಗಿಬರುತ್ತದೆ. ನಾಟಕದಿಂದ ಮನೆಗೆ ಕಗ್ಗತ್ತಲ ರಾತ್ರಿ ಒಬ್ಬಂಟಿಯಾಗಿ ಸೂಡಿ ಬೀಸುತ್ತ ಬರುವ ಅಂತೆ, ಕತ್ತಲೆಯ ಭಯದೊಟ್ಟಿಗೆ ತನ್ನ ಹೊಟ್ಟೆಯೊಳಗಿನ ಗುಟ್ಟಿನ ಕುರಿತ ಭಯವನ್ನೂ ಮೀರುತ್ತಾಳೆ. ನಾಗರಿಕ ಜಗತ್ತನ್ನು ಎದುರಿಸುವ ಸ್ಥೈರ್ಯವನ್ನು ಅವಳಿಗೆ ನೀಡುವುದು ಕಾಡು!

ಬಳಗಾರರಿಗೆ ಕಥೆಯಷ್ಟೇ ಅದು ನಡೆಯುವ ಪರಿಸರವೂ ಮುಖ್ಯ. ಹಾಗಾಗಿ ಕಥನದ ನಡಿಗೆಯ ಜೊತೆಗೇ ವಿವರಣೆ ಮತ್ತು ವರ್ಣನೆಗಳೂ ಸಮೃದ್ಧವಾಗಿ ಸೇರಿ ಕಟ್ಟುಮಸ್ತಾದ ಕಥನಶರೀರವೊಂದು ಜೀವತಳೆದಿದೆ. ಅವರ ಕಾವ್ಯಗಂಧಿ ಭಾಷೆ ಕೆಲವು ಕಡೆಗಳಲ್ಲಿ ಕಾವ್ಯವೇ ಆಗಿಬಿಡುವುದನ್ನೂ ಗಮನಿಸಬೇಕು. ಅಗ್ರಹಾರದಲ್ಲಿ ದನದ ಹುಣ್ಣಿಮೆಯ ದಿನ ಪೊಲೀಸರು ಸುಬ್ರಾಯಪ್ಪನವರನ್ನು ಬಂಧಿಸುವ ಸನ್ನಿವೇಶದಲ್ಲಿ ಬರುವ ಸಾಲುಗಳನ್ನು ಗಮನಿಸಿ: ‘ಊಟಕ್ಕೆ ಕುಳಿತಾಗ ಗಾಳಿಗೆ ಥಟ್ಟನೆ ದೀಪ ನಂದಿಹೋದಂತೆ ಪೊಲೀಸರು ಅರೆಸ್ಟ್ ಮಾಡಿದರು. ಪೂಜೆ, ಊಟಕ್ಕೆ ಅವಕಾಶ ನೀಡದೆ ನಮ್ಮನ್ನು ಎಳೆದೊಯ್ದರು. ಬೆಳದಿಂಗಳನ್ನು ಬೂಟಿನಿಂದ ತುಳಿಯುತ್ತ ನಡೆದರು’.

ಗಮಯನ ಶಿಕಾರಿ ಮಾಡುವ ರಾತ್ರಿ ಅಂತೆಗೆ ಕಾಣಿಸುವುದು ಹೀಗೆ: ‘ಚಳಿ ಹೆಚ್ಚಿದಂತೆ ಕೋಮಲವಾಗುತ್ತಿರುವ ಬೆಳದಿಂಗಳು ಗಾಯಗೊಂಡು ಚೀರಿದಂತೆ ಹಕ್ಕಿ ಕೂಗಿತು’.

ಸುಬ್ರಾಯಪ್ಪ ಮತ್ತು ಅಂತೆಯ ಬದುಕನ್ನು ಕೇಂದ್ರೀಕರಿಸಿಕೊಂಡಿದ್ದಾಗಿನ ಸಾವಧಾನದ ಹದ, ಪುಟ್ಟಣ್ಣನ ಕೊಲೆಯ ಕುತೂಹಲದ ಎಳೆ ಹಿಡಿದು ನಡೆಯುವಾಗ ಕೊಂಚ ಶ್ರುತಿ ಆಚೀಚೆ ಆದಂತೆ ಭಾಸವಾಗುತ್ತದೆ. ಒಮ್ಮಿಂದೊಮ್ಮೆಲೇ ವಿಲಂಬಗೊಂಡು ಮತ್ತೆ ಅಷ್ಟೇ ಅಸಹಜವಾಗಿ ವೇಗ ವರ್ಧಿಸಿಕೊಂಡು ಜೋಲಿ ತಪ್ಪಿದಂತೆನಿಸುತ್ತದೆ. ನಿರೂಪಣೆಯಲ್ಲಿನ ಕೆಲವು ತಾರ್ಕಿಕ ತೊಡಕುಗಳಿಗೆ ಲೇಖಕರು ಅನಗತ್ಯ ಸಮಜಾಯಿಷಿ ಕೊಡಲು ಹೋಗಿ ಆ ಸಮಸ್ಯೆಯನ್ನೇ ಢಾಳುಗೊಳಿಸಿದ್ದಾರೆ.ಪುಟ ಪುಟದಲ್ಲಿಯೂ ಎದುರಾಗುವ ಸಾಲು ಸಾಲು ಕಾಗುಣಿತ ದೋಷಗಳು ಕಿರಿಕಿರಿ ಹುಟ್ಟಿಸುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.